ನಿನ್ನ ಅರ್ಥಮಾಡಿಕೊಳ್ಳುವ ದಿನ ಬರಬಾರದು

-ಶ್ರೀವಿಭಾವನ

1

ಮೊನ್ನೆ, ನಿನ್ನೆ, ಇವತ್ತು
ನಿನ್ನ ಮುದ್ದಾಡುವಾಗಲೆಲ್ಲ
ನಾನು ಹುಡುಕಾಡುವುದು
ನಿನ್ನೆಲ್ಲಾ ಮುಗ್ದತೆಯನ್ನು
ಕೂಡಿಡಬಲ್ಲ ಜಾಗೆಗಾಗಿ

2

ನಿನ್ನೆಗಿಂತ ಇಂದು
ನಿನ್ನ ಜಗದ ಚೆಲುವು
ಹೆಚ್ಚಿದೆ. ಆದರೆ ನಾಳೆ
ಇದೆಲ್ಲಾ ನಿನ್ನೊಡನಿರುವುದೋ
ಎಂಬ ಆತಂಕ…

3
ತುಂಟಾಟ, ಪೋಕರಿತನಗಳಿಗೆ
ಒಂದಿಷ್ಟು ಸೇಳೆಯ ಒಗ್ಗೆರಣೆ
ಇರುಳು ಎಷ್ಟುರುಳಿದರೂ
ಮುಗಿಯದ ಕುತೂಹಲಗಳು
ನಿದ್ದೆಯಲ್ಲೂ ಎಬ್ಬಿಸಿ ಮುತ್ತಿಡುವ ಸಂಗತಿ

 

4
ನಿನ್ನ ಅರ್ಥಮಾಡಿಕೊಳ್ಳುವ
ದಿನ ಬರಬಾರದು…ಉತ್ತರಿಸಲಾಗದ
ಪ್ರಶ್ನೆಗಳನ್ನು ನೀನು ನನಗೆ ಕೇಳುತ್ತಿರಲೇಬೇಕು
ಅಚ್ಚಚ್ಚಪಚ್ಚಚ್ಚ ಮಾತುಗಳು ಮತ್ತೆ ಮತ್ತೆ
ನನ್ನಲ್ಲಿ ಅನುರಣಿಸುತ್ತಿರಬೇಕು.

5
ಪ್ರತಿ ಇರುಳು ನಿದ್ರೆಯ ಮಡಿಲಿಗೆ
ನೀನು ಜಾರುವಾಗಲೆಲ್ಲಾ ನನಗೆ ಆತಂಕ…
ನಾಳೆ ನೀನೊಂದು ದಿನ
ದೊಡ್ಡವಳಾಗಿರುತ್ತಿ ಎಂದು
ನಿನ್ನ ನಾಳೆಗಳು ಹೇಗಿರಬಹುದೆಂದು

 

6
ನಿನ್ನ ಕಾರಣಕ್ಕಾಗಿ
ನಾಳೆಗಳ ಬಗ್ಗೆ ನನಗೀಗ ಹಚ್ಚು ಭಯ
ಸೂರ್ಯ ಮುಳುಗದ ದಿನಗಳನ್ನು ಆಗ್ಗಾಗ್ಗೆ ನೆನೆಯುತ್ತೇನೆ
ನಿನ್ನ ಜತೆಗಿನ ಮುದ್ದಾಟ-ತುಂಟಾಟಗಳಲ್ಲಿ
ಸಮಯದ ಪರಿವೆಯನ್ನು ಮರೆಯಲು
ಪ್ರಜ್ಞಾಪೂರ್ವಕವಾಗಿ ಯತ್ನಿಸಿ, ಸೋಲುತ್ತೇನೆ

 

7

ಬೆರಗುಗಣ್ಣಿನಿಂದ ಹುಡುಕುತ್ತಿದ್ದೇನೆ
ನಿನಗೆ ಮೋಡಿಯ ಶಕ್ತಿ ನೀಡಿದ
ಮಾಯಾವಿಗಾಗಿ…

 

 

 

 

Author: Avadhi GK

1 thought on “ನಿನ್ನ ಅರ್ಥಮಾಡಿಕೊಳ್ಳುವ ದಿನ ಬರಬಾರದು

  1. Really nice…yes baby grows to a kid, it speaks, asks, tells, answers, demands and it may order one day who knows. Only today is beautiful. But thanks to God for giving that giving magical power to children…

Leave a Reply