ನಾಟಕ ಅಕಾಡೆಮಿ ಫಲಕ ಬದಲಿಸಿದ್ರೆ ಏನು ಪ್ರಾಬ್ಲಮ್ಮು..??

ಕರ್ನಾಟಕ ನಾಟಕ ಅಕಾಡೆಮಿ ಸುದ್ದಿಯಲ್ಲಿದೆ. ವಿನಾ ಕಾರಣಕ್ಕಾಗಿ.

ಪ್ರಶಸ್ತಿ ಫಲಕ ಹಾಗೂ ಲೋಗೋ ವಿನ್ಯಾಸ ಬದಲಾವಣೆಯ ವಿಷಯ ನಾಟಕ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿತವಾಗಿದೆ. 

ಸಭೆ ಲೋಗೋ ಬದಲಾವಣೆಗೆ ಒಪ್ಪಿಗೆ ನೀಡದೆ ಪ್ರಶಸ್ತಿ ಫಲಕಕ್ಕೆ ಒಪ್ಪಿಗೆ ನೀಡಿದೆ. ಅದರಂತೆ ಖ್ಯಾತ ಕಲಾವಿದ ಸುದೇಶ್ ಮಹಾನ್ ಶೇಕ್ಸ್ ಪಿಯರ್ ನ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕವನ್ನು ಇಟ್ಟುಕೊಂಡು ಹೊಸ ಫಲಕ ರಚಿಸಿದ್ದಾರೆ. 

ಈಗ ಈ ಬದಲಾವಣೆಯನ್ನೇ ದೊಡ್ಡದು ಮಾಡಿ ನಾಟಕ ಅಕಾಡೆಮಿಯ ಅಧ್ಯಕ್ಷರ ಮೇಲೆ ಧಾಳಿ ನಡೆಸುವ ಕೆಲಸ ಮಾಧ್ಯಮದಲ್ಲಿ ನಡೆಯುತ್ತಿದೆ.

ನಿಜವಾಗಿಯೂ ಆಗಿದ್ದೇನು? ಎನ್ನುವುದನ್ನು ನಾಟಕ ಅಕಾಡೆಮಿಯ ಸದಸ್ಯರೇ ಆದ ಶಶಿಕಾಂತ ಯಡಹಳ್ಳಿ ಇಲ್ಲಿ ಮಾತನಾಡಿದ್ದಾರೆ.  

– ಶಶಿಕಾಂತ ಯಡಹಳ್ಳಿ

“ನಾಟಕ ಅಕಾಡೆಮಿಗೆ ಕೆಂಪಂಗಿ ತೊಡಿಸುವ ಯತ್ನ…. ನಾಟಕ ಅಕಾಡೆಮಿಯಲ್ಲಿ ಎಡ- ಬಲ ಸಂಘರ್ಷ…” ಎನ್ನುವ ಶೀರ್ಷಿಕೆಗಳಲ್ಲಿ ವಿಶ್ವವಾಣಿ ಹಾಗೂ ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಜನವರಿ 29 ಹಾಗೂ 30 ರಂದು ಸುದ್ದಿಗಳು ಪ್ರಕಟವಾದವು. ಪ್ರಕಟವಾದವು ಎನ್ನುವುದಕ್ಕಿಂತಾ ಪ್ರಕಟವಾಗುವಂತೆ ಅಕಾಡೆಮಿಯೊಳಗಿನ ಅತೃಪ್ತಾತ್ಮವೊಂದು ನೋಡಿಕೊಂಡಿತು.

ಅಸಲಿ ವಿಷಯದ ಹಿಂದೆ ಮುಂದೆ ಆಳ ಅಗಲ ಗೊತ್ತಿಲ್ಲದವರು ಈ ಸುದ್ದಿ ಓದಿ ದಂಗಾದರು. ಆದರೆ ಈ ವಿಶ್ವವಾಣಿಯ ಕಪೋಲ ಕಲ್ಪಿತ ಸುಳ್ಳು ಸುದ್ದಿಯ ಹಿಂದೆ ಇರುವ ಕೋಮುವ್ಯಾಧಿ ಮನಸ್ಥಿತಿಯ ಬಗ್ಗೆ ಮರುಕಪಡಬಹುದಷ್ಟೇ. ಅದನ್ನೇ ಆಧರಿಸಿ ವಿಜಯ ಕರ್ನಾಟಕವೂ ಸಹ ಅಕಾಡೆಮಿಯಲ್ಲಿ ಇಲ್ಲದ ಎಡ- ಬಲ ಗಳನ್ನು ಸೃಷ್ಟಿಸಿ ಮುಖಪುಟದಲ್ಲಿ ಸುದ್ದಿ ಮಾಡಿತು. ಪತ್ರಿಕೆಯಲ್ಲಿ ಬಂದದ್ದನ್ನು ನಂಬುವ ಕೆಲವರು ಈಗಲೂ ಇರುವುದರಿಂದ ಈ ಸುಳ್ಳು ಸುದ್ದಿಯ ಹಿಂದಿರುವ ಅಸಲಿಯತ್ತನ್ನು ಬರೆದು ತಿಳಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

 

ನನಗೆ ಗೊತ್ತಿರುವ ಹಾಗೆ ಪ್ರಸ್ತುತ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಜೆ. ಲೋಕೇಶ್ ಅವರು ಉಗ್ರ ಎಡಪಂಥೀಯರೂ ಅಲ್ಲಾ ಬಲ ಪಂಥೀಯರೂ ಅಲ್ಲಾ. ತಮಗನ್ನಿಸಿದ್ದನ್ನು ನೇರವಾಗಿ ಹೇಳುವಂತಾ ನಿಷ್ಟೂರ ಪಂಥೀಯರು‌.

ನಾಟಕ ಅಕಾಡೆಮಿಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ 24/7 ಕೆಲಸ ಮಾಡುವ ಅಧ್ಯಕ್ಷರಾಗಿದ್ದಾರೆ. ಸರಕಾರಿ ರಜೆಗಳನ್ನು ಹೊರತುಪಡಿಸಿ ಎಲ್ಲಾ ದಿನಗಳೂ ಬೆಳಿಗ್ಗೆಯಿಂದ ಸಂಜೆವರೆಗೂ ನಾಟಕ ಅಕಾಡೆಮಿಯ ಕಛೇರಿಯಲ್ಲಿಯೇ ಇದ್ದು ಅಕಾಡೆಮಿಯ ಯೋಜನೆಗಳ ಅನುಷ್ಟಾನಕ್ಕಾಗಿ ಕಾಯಕನಿರತರಾಗಿರುತ್ತಾರೆ.

ಅಧ್ಯಕ್ಷರಾಗಿ ಬಂದು ನಾಲ್ಕು ತಿಂಗಳಲ್ಲಿ ಅಕಾಡೆಮಿಗಳ ಸ್ವಾಯತ್ತತೆಗಾಗಿ ಸ್ಥಾಪಿತ ಅಧಿಕಾರಶಾಹಿಗಳೊಂದಿಗೆ ತಾತ್ವಿಕ ಸಂಘರ್ಷಕ್ಕಿಳಿದಿದ್ದಾರೆ. ರಂಗ ಶಾಲೆಗಳಲ್ಲಿ ತರಬೇತಾದವರಿಗೆ ಸರಕಾರಿ ವಸತಿ ಶಾಲೆಗಳಲ್ಲಿ ರಂಗಶಿಕ್ಷಕರನ್ನಾಗಿ ನೇಮಿಸಿಕೊಳ್ಳಬೇಕೆಂದು ಸರಕಾರದ ಮೇಲೆ (ಮುಖ್ಯಮಂತ್ರಿಯವರವರೆಗೂ) ಒತ್ತಡ ತರುವಲ್ಲಿ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ.

ನಾಮಕಾವಸ್ತೆ ನಡೆಯುತ್ತಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ರಂಗಶಿಬಿರಗಳ ಮೇಲುಸ್ತುವಾರಿ ಕೆಲಸವನ್ನು ಖುದ್ದಾಗಿ ವಹಿಸಿಕೊಂಡು ಯಶಸ್ವಿಗೊಳಿಸುತ್ತಿದ್ದಾರೆ. ಅಕಾಡೆಮಿಯ ಕಛೇರಿಯ ಚಹರೆಯನ್ನೇ ಬದಲಿಸಿದ್ದಾರೆ. ಹೀಗೆ… ಜಿಡ್ಡುಗಟ್ಟಿ ಯಥಾಸ್ಥಿತಿಯಲ್ಲಿದ್ದ ನಾಟಕ ಅಕಾಡೆಮಿಯಲ್ಲಿ ಕೆಲವು ಬದಲಾವಣೆಗಳನ್ನು ತರಲು ಪ್ರತಿ ದಿನ… ಪ್ರತಿ ಕ್ಷಣ ಶ್ರಮಿಸುತ್ತಿದ್ದಾರೆ.

ನಲವತ್ತು ವರ್ಷಗಳಿಂದ ಒಂದೇ ರೀತಿಯಲ್ಲಿ ನಾಟಕ ಅಕಾಡೆಮಿಯ ಲೊಗೋ ಹಾಗೂ ಪ್ರಶಸ್ತಿ ಫಲಕ ಇರುವುದರಿಂದ ಅದರಲ್ಲಿ ಬದಲಾವಣೆ ತಂದು ಅಕಾಡೆಮಿಗೆ ಹೊಸ ರೂಪ ಕೊಡುವ ಪ್ರಯತ್ನವು ಲೋಕೇಶರವರದ್ದಾಗಿತ್ತು. ಅದಕ್ಕೊಂದು ರೂಪರೇಷೆ ಸಿದ್ದಪಡಿಸಿ… ವಿಶ್ವಮಾನ್ಯ ಕಲಾವಿದ ಸುದೇಶ ಮಹಾನ್ ರವರಿಂದ ಹೊಸ ಲೋಗೋ ಹಾಗೂ ಫಲಕದ ಪ್ರತಿ ರೂಪಿಸಿ ಡಿಸೆಂಬರ್ 7 ರಂದು ನಡೆದ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಪ್ರಸ್ತಾಪಿಸಿದರು.

ಸದಸ್ಯರಲ್ಲಿ ಕೆಲವು ಜನ ಬದಲಾವಣೆ ಯಾಕೆ ಎಂದು ಪ್ರಶ್ನಿಸಿದರೆ ಇನ್ನು ಕೆಲವರು ಬದಲಾವಣೆ ಯಾಕೆ ಬೇಡಾ? ಎಂದು ಅಧ್ಯಕ್ಷರ ಯೋಚನೆಯನ್ನು ಅನುಮೋದಿಸಿದರು.

ಇದೆಲ್ಲಾ ಚರ್ಚೆಯ ಭಾಗವಾಗಿಯೇ ನಡೆದವು. ‘ಲೋಗೋ ಬದಲಾವಣೆ ಈಗ ಬೇಕಾಗಿಲ್ಲಾ ಫಲಕ ಬದಲಾವಣೆಗೆ ಅಡ್ಡಿಯಿಲ್ಲ’ ಎಂದು ಸರ್ವಸದಸ್ಯರ ಸಭೆಯ ಬಹುಸಂಖ್ಯಾತರು ನಿರ್ಣಯಕ್ಕೆ ಬಂದರು. ಅಕಾಡೆಮಿಯ ಸದಸ್ಯರಾದ ನಟ ವೆಂಕಟರಾಜು ಒಬ್ಬರನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸದಸ್ಯರೂ ಪ್ರಶಸ್ತಿ ಫಲಕದ ಬದಲಾವಣೆಗೆ ಒಪ್ಪಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಸಂಖ್ಯಾತರ ನಿರ್ಣಯಕ್ಕೆ ಬದ್ದರಾಗಲೇ ಬೇಕು. ಆದರೆ ವೆಂಕಟರಾಜು ಹಾಗೆ ಮಾಡದೆ ತಮ್ಮ ಒಂಟಿ ವಿರೋಧವನ್ನು ಪತ್ರಿಕೆಯಲ್ಲಿ ಬೈಟ್ ಕೊಡುವವರೆಗೂ ಬಂದು ನಿಲ್ಲಿಸಿದ್ದು ಅಕ್ಷಮ್ಯ. ಹೋಗಲಿ ಅದು ಅವರ ವ್ಯಕ್ಯಿ ಸ್ವಾಂತಂತ್ರ್ಯ ಎಂದುಕೊಳ್ಳೋಣ. ಆದರೆ ಈ ಪತ್ರಿಕೆಯವರಿಗಾದರೂ ಪೂರ್ವಾಪರ ವಿಚಾರಿಸಿ ಬರೆಯಬೇಕಾದ ಜವಾಬ್ದಾರಿ ಇರಬೇಕಿತ್ತು.. ಆದರೆ ಪೀತ ಪತ್ರಿಕೆಗಳಿಂದ ಅದನ್ನು ಅಪೇಕ್ಷಿಸುವುದೂ ಅಪರಾಧವಾಗಿದೆ.

ಇಷ್ಟಕ್ಕೂ… ನಾಟಕ ಅಕಾಡೆಮಿಯಲ್ಲಿ ಬದಲಾವಣೆ ತರುವುದು ಅಪರಾಧವಾ.? ಸರ್ವ ಸದಸ್ಯರ ಸಭೆ ಅನುಮೋದಿಸಿ ತೀರ್ಮಾನಿಸಿದ ನಿರ್ಣಯ ಅದು ಹೇಗೆ ಏಕಪಕ್ಷೀಯ ನಿರ್ಣಯವಾಗಲು ಸಾಧ್ಯ? ಅಕಾಡೆಮಿಗೆ… ಅದರ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಅಕಾಡೆಮಿಯಲ್ಲಿ ಬದಲಾವಣೆ ತರುವಷ್ಟೂ ಸ್ವಾತಂತ್ರ್ಯ ಇಲ್ವಾ? ಅಕಾಡೆಮಿಗಳನ್ನು ಸ್ವಾಯತ್ತ ಸಂಸ್ಥೆ ಎಂದು ಕರೆಯಲಾಗುತ್ತದೆ. ಆದರೆ ಅಕಾಡೆಮಿಗೆ ಚಿಕ್ಕ ಪುಟ್ಟ ಬದಲಾವಣೆ ಮಾಡಿಕೊಳ್ಳುವ ಸ್ವಾಯತ್ತತೆಯೂ ಇಲ್ಲವೆ? ಸರಕಾರವೇ ರೂಪಿಸಿದ ಅಕಾಡೆಮಿಗಳ ಬೈಲಾದಲ್ಲಿ ಲಾಂಚನ ಫಲಕಗಳ ಬದಲಾವಣೆ ಮಾಡಬಾರದು ಎಂದೇನೂ ಇಲ್ಲವಲ್ಲಾ?

ಇವೆಲ್ಲಾ ಮೂಲಭೂತ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡಲಾಗದವರು ವಿಷಯವನ್ನು ಭಾವನಾತ್ಮಕ ಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. “ಇಲ್ಲಿವರೆಗೂ ನಟರಾಜ ವಿಗ್ರಹವನ್ನು ಪ್ರಶಸ್ತಿ ಪುರಸ್ಕೃತರಿಗೆ ಕೊಡಮಾಡಲಾಗುತ್ತಿತ್ತು… ಈಗ ಅದನ್ನು ಬದಲಾಯಿಸಿ ರಕ್ತ ಕ್ರಾಂತಿಯನ್ನು ಬಿಂಬಿಸುವ ಫಲಕವನ್ನು ರೂಪಿಸಿದ್ದಾರೆ. ದೈವತ್ವದ ಸಂಕೇತವಾದ ನಟರಾಜನನ್ನು ಬದಲಾಯಿಸಿರುವುದು ಸಾಂಸ್ಕೃತಿಕ ವಿರೋಧಿ ನೀತಿ… ಭಾರತೀಯ ರಂಗ ನಂಬಿಕೆಗಳ ಮೇಲೆ ಸಿದ್ದಾಂತದ ಪರದೆ ಎಳೆಯುವ ಪ್ರಯತ್ನ….” ಎಂದು ಪತ್ರಿಕೆ ಮೂಲಕ ಆರೋಪಿಸುವ ಹುನ್ನಾರವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.

ಯಾವುದೇ ದುರುದ್ದೇಶವಿಲ್ಲದೇ ಒಂಚೂರು ಬದಲಾವಣೆ ಇರಲಿ ಎಂದು ಅಕಾಡೆಮಿಯ ಸರ್ವ ಸದಸ್ಯರ ಸಭೆಯ ನಿರ್ಣಯಕ್ಕೆ ಕೋಮುವಾದದ ಬಣ್ಣ ಬಳಿಯುವ ಹಾಗೂ ಎಡಬಲ ಸಿದ್ದಾಂತಗಳ ವಿಕ್ಷಿಪ್ತ ಆರೋಪ ಮಾಡುವ ವಿಕೃತ ಮನಸುಗಳು ಅಕಾಡೆಮಿಯನ್ನು ಬಲಪಡಿಸುವ ಬದಲು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ಅಕಾಡೆಮಿಯ ಸ್ವಾಯತ್ತತೆ ಹಾಗೂ ಸರ್ವ ಸದಸ್ಯರ ಸಭೆಯ ನಿರ್ಣಯವನ್ನೇ ಪ್ರಶ್ನಿಸುತ್ತಿವೆ…

ರಂಗಭೂಮಿ ಎನ್ನುವುದೇ ಪ್ರಯೋಗಶೀಲತೆಯ ಮಾಧ್ಯಮ. ಇಲ್ಲಿ ಎಲ್ಲವೂ ನಿರಂತರ ಬದಲಾವಣೆಗೊಳಪಡುತ್ತಲೇ ಇರುತ್ತದೆ ಹಾಗೂ ಇರಬೇಕು. ಬದಲಾವಣೆ ಇಲ್ಲವಾದರೆ ಚಲನಶೀಲತೆ ನಿಂತು ಸೃಜನಶೀಲತೆಗೆ ಹಿನ್ನಡೆಯಾಗುತ್ತದೆ. ಸಾಂಪ್ರದಾಯಿಕ ರೂಪಕ.. ಪ್ರತಿಮೆಗಳನ್ನು ಒಡೆದು ಸಮಕಾಲೀನತೆಗೆ ಒಗ್ಗಿಸಿ ಮರುಕಟ್ಟುವಿಕೆಯೆ ರಂಗಭೂಮಿಯ ಜೀವಂತಿಕೆಯ ಲಕ್ಷಣ.

‘ರಾಮಾಯಣ ಮಹಾಭಾರತಗಳನ್ನು ಇದ್ದಂತೆಯೇ ತೋರಿಸಬೇಕು… ಯಾವ ಬದಲಾವಣೆ ಮಾಡಿದರೂ ಭಾವನೆಗಳಿಗೆ ಧಕ್ಕೆಯಾಗುತ್ತದೆ’ ಎಂಬ ಪ್ಯಾಸಿಸ್ಟ್ ಮನೋಭಾವ ರಂಗಭೂಮಿಯ ಬಹುತೇಕ ಪ್ರಜ್ಞಾವಂತರಲ್ಲಿ ಇಲ್ಲ. ಆದರೆ ಕೆಲವು ಯಥಾಸ್ಥಿತಿವಾದಿಗಳು ಭಾವನೆಯ ಹೆಸರಲ್ಲಿ ಬದಲಾವಣೆಯನ್ನೇ ವಿರೋಧಿಸುತ್ತಿರುವುದು ರಂಗವಿರೋಧಿ ಕೃತ್ಯವಾಗಿದೆ. ಪ್ರಯೋಗಶೀಲತೆ ಎನ್ನುವುದು ರಂಗಭೂಮಿಯ ಎಲ್ಲಾ ಸ್ಥರಗಳಲ್ಲೂ ಇರಬೇಕಾದ ಮೂಲ ದ್ರವ್ಯವಾಗಿದೆ.

ಇದಕ್ಕೆ ಅಕಾಡೆಮಿ ಲಾಂಛನ ಅಥವಾ ಈ ಫಲಕವೂ ಹೊರತಲ್ಲ… ಬದಲಾವಣೆ ಜಗದ ನಿಯಮ… ಯಥಾಸ್ಥಿತಿವಾದಿಗಳು ಅದೆಷ್ಟೇ ಷಡ್ಯಂತ್ರಗಳನ್ನು ಮಾಡಿದರೂ ಬದಲಾವಣೆಯನ್ನು ಅಮೂಲಾಗ್ರವಾಗಿ ತಡೆಯುವುದು ಸಾಧ್ಯವೇ ಇಲ್ಲ…

ಇತ್ತೀಚೆಗೆ ಎಲ್ಲದರಲ್ಲೂ ಎಡ ಬಲ ಸಿದ್ದಾಂತವನ್ನು ಹುಡುಕುವ ವಿಚಿತ್ರ ಮನೋಭಾವ ಹೆಚ್ಚುತ್ತಿದೆ. ಯಾವುದಾದರೂ ಒಂದು ಬಣದಲ್ಲಿ ವ್ಯಕ್ತಿ ಗುರುತಿಸಿಕೊಳ್ಳಲೇಬೇಕೆಂಬ ಅಗೋಚರ ಒತ್ತಡವನ್ನು ಹೇರಲಾಗುತ್ತಿದೆ. ಬೇರೆ ಕ್ಷೇತ್ರಗಳಲ್ಲಿ ಇದು ಸಾಧ್ಯವಾಗಬಹುದು. ಆದರೆ ರಂಗಭೂಮಿಯಲ್ಲಿ ಈ ಇಸಂಗಳು ಲೆಕ್ಕಕ್ಕಿಲ್ಲ. ಪಕ್ಕಾ ಬಲಪಂಥೀಯ ಎಂದೆನಿಸಿಕೊಳ್ಳುವಾತ ಇಲ್ಲಿ ಸೂರ್ಯಶಿಕಾರಿಯಂತಹ ನಾಟಕದ ನಿರ್ಮಿತಿಯಲ್ಲಿ ಭಾಗಿಯಾಗುತ್ತಾನೆ.. ಪಕ್ಕಾ ಎಡಪಂಥೀಯ ಧೋರಣೆಯವರು ಅಲ್ಲಮನ ಬಯಲಾಟದ ಪವಾಡಗಳ ದೃಶ್ಯಗಳ ನಿರ್ಮಾಣದ ಭಾಗವಾಗುತ್ತಾರೆ. ಇಲ್ಲಿ ಎಲ್ಲರಿಗೂ ನಾಟಕ ಮುಖ್ಯವೇ ಹೊರತು ಎಡ ಬಲ ಸಿದ್ದಾಂತಗಳಲ್ಲ.

ಕೇಸರಿ ಕೆಂಪು ಬಣ್ಣಗಳೆಲ್ಲಾ ಇಲ್ಲಿ ವ್ಯಕ್ತಿಗತವಾಗಿರಬಹುದೇ ಹೊರತು ನಾಟಕದ ನಿರ್ಮಿತಿಯಲ್ಲಿ ಅಲ್ಲಾ. ಇಷ್ಟಕ್ಕೂ ಆಧುನಿಕ ರಂಗಭೂಮಿ ಯಾವಾಗಲೂ ಪ್ರಗತಿಪರವಾಗಿ… ಬದಲಾವಣೆಗೆ ಪೂರಕವಾಗಿ ಹಾಗೂ ಹಿಂಸೆ ಕ್ರೌರ್ಯಗಳಿಗೆ ವಿರೋಧವಾಗಿಯೇ ಇರುವಂತಹುದು. ಪ್ರತಿಭಟನೆಯ ಮಾಧ್ಯಮವಾಗಿಯೇ ರಂಗಭೂಮಿ ಬೆಳೆದು ಉಳಿದು ಬಂದಿದೆ. ಇದಕ್ಕೆ ಎಡವಾದರೂ ಅನ್ನಲಿ.. ಕೆಂಪು ಬಣ್ಣವನ್ನಾದರೂ ಆರೋಪಿಸಲಿ… ಆದರೆ ರಂಗಭೂಮಿಯ ಪ್ರತಿಭಟನಾ ಸ್ವರೂಪವನ್ನು ಹಾಗೂ ಬದಲಾವಣೆಗೆ ತುಡಿಯುವ ಗತಿಯನ್ನು ತಡೆಹಿಡಿಯಲು ಸಾಧ್ಯವೇ ಇಲ್ಲ.

ಇಷ್ಟಕ್ಕೂ ಅಕಾಡೆಮಿಯ ಪ್ರಶಸ್ತಿ ಫಲಕದ ಬದಲಾವಣೆ ಇದೇ ಮೊದಲ ಸಲ ಆಗಿದ್ದಲ್ಲ. ಸಿಜಿಕೆಯವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಪಾರಂಪರಿಕ ನಟರಾಜ ವಿಗ್ರಹವನ್ನು ಬದಲಾಯಿಸಿ ಹಂಪಿಯ ರಥದ ಪ್ರತಿಕೃತಿಯ ವಿಗ್ರಹವನ್ನು ಪ್ರಶಸ್ತಿ ಪುರಸ್ಕೃತರಿಗೆ ಕೊಡಮಾಡಿದ್ದರು.

ಆಗ ಇಲ್ಲದ ವಿರೋಧ ಈಗ ಯಾಕೆ ಬಂದಿದೆ?. ಸಿಜಿಕೆ ಸಹ ಎಡಪಂಥೀಯ ಧೋರಣೆಯವರಾಗಿದ್ದರು. ಕಮ್ಯೂನಿಸ್ಟ್ ಪಕ್ಷದ ಸಾಂಸ್ಕೃತಿಕ ಸಂಘಟನೆಯಾದ ಸಮುದಾಯದ ಪ್ರಮುಖ ರೂವಾರಿಗಳಲ್ಲೊಬ್ಬರಾಗಿದ್ದರು.

ಆದರೂ ಯಾರೂ ಆಗ ಫಲಕದ ರೂಪವಿನ್ಯಾಸದ ಬದಲಾವಣೆಗೆ ಚಕಾರ ಎತ್ತಲಿಲ್ಲ. ಯಾಕೆಂದರೆ ಆಗ ಈಗಿನಂತೆ ಕೋಮುವಾದಿ ಶಕ್ತಿಗಳು ಪ್ರಭಲವಾಗಿರಲಿಲ್ಲ. ಪತ್ರಿಕೆಗಳೂ ಸಹ ಹೀಗೆ ‘ ರಕ್ತ ಕ್ರಾಂತಿಯತ್ತ ರಂಗಭೂಮಿ ಸಂದೇಶದ ಫಲಕ’ ಎಂದು ಪ್ರಶಸ್ತಿ ಫಲಕವನ್ನು ನೋಡದೇ ಊಹಾಪೋಹ ಮಾಡಿಕೊಂಡು ವಿವೇಚನೆ ಇಲ್ಲದೇ ಬರೆಯುತ್ತಿರಲಿಲ್ಲ. ಹಾಗೂ ಸಿಜಿಕೆಯವರ ಅಧ್ಯಕ್ಷತೆಯ ಅವಧಿಯಲ್ಲಿದ್ದ ಅಕಾಡೆಮಿಯ ಸದಸ್ಯರಲ್ಲಿ ಮೀರಸಾಧಿಕ್ ನಂತಹ ವಿದ್ರೋಹಿ ಮನಸ್ಥಿತಿಯವರೂ ಇರಲಿಲ್ಲ.

ಪ್ರಸ್ತುತ ನಾಟಕ ಅಕಾಡೆಮಿ ತುಂಬಾ ಕ್ರಿಯಾಶೀಲವಾಗಿ ರಂಗಕಾಯಕ ಮಾಡುತ್ತಿದೆ. ಅದರ ಸಾಧಕಗಳ ಕುರಿತು ಪತ್ರಿಕೆಗಳು ಚರ್ಚಿಸಬೇಕಾಗಿದೆ. ಯಾವುದೋ ಒಂದು ಅತೃಪ್ತ ಆತ್ಮದ ಆಂತರಿಕ ಸ್ವಾರ್ಥದ ವಿಕ್ಷಿಪ್ತತೆಗೆ ಪತ್ರಿಕೆಗಳು ಏಕಪಕ್ಷೀಯವಾಗಿ ಸ್ಪಂದಿಸಿದರೆ ಅದು ಪತ್ರಿಕಾ ಧರ್ಮದ ವಿವೇಚನೆಗೆ ಹಾಗೂ ಪತ್ರಕರ್ತನ ವೃತ್ತಿಪರತೆಗೆ ಅಪಚಾರವೆಸಗಿದಂತಾಗುತ್ತದೆ‌. ಫಲಕದ ನೆಪದಲ್ಲಿ ಕೋಮುವಾದೀಕರಣ ಮಾಡುತ್ತಿರುವ ಎಲ್ಲರೂ ಆತ್ಮಸಾಕ್ಷಿ ಎನ್ನುವುದು ಇದ್ದಲ್ಲಿ ಪುನರ್ ಪರಿಶೀಲನೆಗೆ ಒಡ್ಡಿಕೊಳ್ಳಬೇಕಿದೆ.

ಒಂದು ಸಣ್ಣ ತೂತು ದೊಡ್ಡ ಹಡಗನ್ನೇ ಮುಳುಗಿಸಬಲ್ಲುದು.. ಒಬ್ಬ ಮೀರ್ ಸಾದಿಕ್ ಟಿಪ್ಪು ಸಾಮ್ರಾಜ್ಯವನ್ನೇ ನಾಶ ಮಾಡಬಲ್ಲ. ಒಂದು ಕೊಳೆತ ಹಣ್ಣು ಇಡೀ ಹಣ್ಣಿನ ಬುಟ್ಟಿಯನ್ನೇ ಕೆಡಿಸಬಲ್ಲುದು. ಒಂದು HIV ವೈರಸ್ ಇಡೀ ದೇಹದ ಶಕ್ತಿಯನ್ನೇ ಉಡುಗಿಸಬಲ್ಲುದು… ಹಾಗೆಯೇ ಒಂದು ಮಲಿನ ಮನಸು ಅಕಾಡೆಮಿಗೇ ಕೆಟ್ಟ ಹೆಸರು ತರಬಲ್ಲುದು… ಸಂಬಂದಪಟ್ಟವರಿಗಿದು ಅರ್ಥವಾದರೆ ಸಾಕು… ಇಲ್ಲವಾದರೆ‌…. ಅಕಾಡೆಮಿಯ ಸಾಮರಸ್ಯವನ್ನು ಆ ನಟರಾಜನೇ ಕಾಪಾಡಬೇಕು…!!

Author: Avadhi GK

Leave a Reply