fbpx

ರೇಣುಕಾ ರಮಾನಂದ್ ಕವಿತೆಗಳನ್ನು ಓದಿದರೆ ಕಡಲು ನಿಮ್ಮನ್ನು ಆವರಿಸಿಕೊಂಡೀತು..

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಈಗ ಪ್ರಕಟವಾಗಿರುವ ರೇಣುಕಾ ರಮಾನಂದ ಅವರ ಕವಿತೆಗಳ ಬಗ್ಗೆ ಟಿಪ್ಪಣಿ ಬರೆಯಲಿರುವವರು ಎಲ್.ಸಿ.ಸುಮಿತ್ರಾ. 

ರೇಣುಕಾ ರಮಾನಂದ

ಉತ್ತರಕನ್ನಡ ಜಿಲ್ಲೆಯ ಅಂಕೋಲದ ಶೆಟಗೇರಿಯವರು.ಕನ್ನಡ ಎಂ.ಎ.ಪಧವೀಧರೆ. ಕಾವ್ಯದ ಓದು ಬರಹ ಆಪ್ತ.

‘ಮೀನು ಪೇಟೆಯ ತಿರುವು’ ಸಧ್ಯದಲ್ಲೇ ಬೆಳಕು ಕಾಣಲಿರುವ ಮೊದಲ ಕವಿತಾ ಸಂಕಲನ.

ಈ ಸಂಕಲನಕ್ಕೆ ೨೦೧೬ ರ ಜಗಜ್ಯೋತಿ ಕಲಾವೃಂದ ಮುಂಬೈನ ಶ್ರೀಮತಿ ಸುಶೀಲಾ ಶೆಟ್ಟಿ ಅಖಿಲ ಭಾರತೀಯ ಮಟ್ಟದ ಕಾವ್ಯ ಹಸ್ತಪ್ರತಿ ಪ್ರಶಸ್ತಿ ದೊರೆತಿದೆ.

ಇಲ್ಲಿನ ಕವಿತೆಗಳು ಮುಂಬೈನ ಮೈಸೂರು ಅಸೋಸಿಯೇಷನ್, ಚಿಕ್ಕಬಳ್ಳಾಪುರದ ಜೀವನ್‌ ಪ್ರಕಾಶನ, ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘ, ಸಂಕ್ರಮಣ ಕಾವ್ಯ ಗೌರವಕ್ಕೆ ಪಾತ್ರವಾಗಿವೆ.

ಕೆಲವು ಕವಿತೆಗಳು ತೆಲುಗು, ಮರಾಠಿ, ಕೊಂಕಣಿ, ಇಂಗ್ಲಿಷ್‍ ಗೂ ವಲಸೆ ಹೋಗಿವೆ.

 

ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ….?

ಯಾರಿಗೆ ಗೊತ್ತು

ನಾವಿಬ್ಬರು ಇಂದು

ಭೇಟಿಯಾದರೂ ಆಗಬಹುದು

ಈ ಹಾಳು ಮಧ್ಯಾಹ್ನಗಳೆಲ್ಲ ಕರಗಿ

ಹತ್ತಿಯಷ್ಟು ಹಗುರಾಗಿ

ಬೂರುಗದ ಹೂಗಳಂತೆ

ನಮ್ಮಿಬ್ಬರ ಮಧ್ಯೆ ಹಾರಾಡಬಹುದು

 

ಇಪ್ಪತ್ತು ವರ್ಷ-

ನಾ ನಿನ್ನ ನೋಡದೇ..

ಗಂವ್ ಎನ್ನುವ ಕೆಲವು ಕಡುಕಪ್ಪು ರಾತ್ರಿಗಳಲ್ಲಿ

ಕನಸಿಗೆ ಬಂದದ್ದು ಬಿಟ್ಟರೆ

ಈ ಕೆಲಸದ ಮಧ್ಯೆ ನೀನು

ಮಸುಕು ಮಸುಕು

 

ಹುರಿಗೊಳಿಸಿದ ಬಿಲ್ಲಿನಂತಿದ್ದ ನಿನ್ನ ಬೆನ್ನೀಗ

ಕೊಂಚವಾದರೂ ಬಾಗಿರಬಹುದು

ತಲೆ ಸ್ವಲ್ಪ ಬೋಳಾಗಿರಬಹುದು

ಚಾಳೀಸು ಬಂದ ಕಣ್ಣ ಕೆಳಗಿನ ಕುಡಿಮೀಸೆ

ಕಪ್ಪು ಬಿಳುಪಿನ ಚಿತ್ರವಾಗಿರಬಹುದು

 

ತೀವೃ ನಿಗಾ ಘಟಕದಲ್ಲಿ ಮಲಗಿ ಬಂದಾಗಿನಿಂದ

ನನಗೂ ಕೊಂಚ ಮಂಡಿನೋವು

‘ತೂಕ ಕಡಿಮೆ ಮಾಡಿಕೊಳ್ಳಿ’

ಎಂದಾಗಲೆಲ್ಲ ವೈದ್ಯರು ನಿನ್ನ ನೆನಪಾಗಿ

ಎರಡು ದಿನ ಸೌತೆಕಾಯಿ ತಿಂದು

ಊಟ ಬಿಡುತ್ತೇನೆ

ಮತ್ತೆ ಯಥಾವತ್ತು ಹಿಂದಿನಂತೆ

ಚಿಕನ್ ತಂದೂರಿ,ಬಂಗುಡೆ ಫ್ರೈ

 

ಅಂದಾದರೂ ನಾ ನಿನ್ನ ದೂರದಿಂದ

ಕದ್ದುನೋಡಿದ್ದಷ್ಟೇ….ನೀನೂ ತೇಪೆಹಾಕಿದ

ಬೈಸಿಕಲ್ಲಿನ ಹವಾ ನೋಡುವ ನೆಪಮಾಡಿ

ಮುರ್ಕಿಯಲ್ಲಿ ದೃಷ್ಟಿ ಕೂಡಿಸಿದ್ದಷ್ಟೇ…

ಇವಕ್ಕೂ ಮೀರಿ ಹೇಳಿಕೊಳ್ಳುವಂಥದ್ದು

ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ…?

 

ಅಲ್ಲೆಲ್ಲೋ ಮಹಾನಗರಗಳಲ್ಲಿ

ಇಲ್ಲಿಂದ ಹೋದವರೇ

ಲಿವ್ ಇನ್ ರಿಲೇಶನ್ ಶಿಪ್ಪಿನಲ್ಲಿರುತ್ತಾರಂತೆ

ಬರೇ ಇಪ್ಪತ್ತರ ಆಸುಪಾಸಿನವರು

ನಾಲ್ಕಾರು ವರ್ಷ ಜೊತೆಯಲ್ಲಿದ್ದು

ಸಾಕಾದರೆ ಟಪ್ಪನೆ ಬೇರ್ಪಟ್ಟು

ಹಿಂದಿನ ಕುರುಹೇ ಇಲ್ಲದೇ

ಇನ್ಯಾರದೋ ಕಸುವಿಗೆ

ಬೀಜ ಭೂಮಿಯಾಗುತ್ತಾರಂತೆ

 

ಬದಲಾಗುತ್ತಿರುವುದು ಕಾಲವೋ..ಮನುಷ್ಯನೋ..

ಎಂದು ಚಿಂತಿಸುತ್ತಲೇ

ಪುಳಕ ರೋಮಾಂಚನಗಳೆಲ್ಲ ಸತ್ತು

ಮುಟ್ಟು ನಿಲ್ಲುವ ವಯಸ್ಸಿನಲ್ಲಿ

ಮತ್ತೆ ಮತ್ತೆ ಅಂದುಕೊಳ್ಳುತ್ತಿದ್ದೇನೆ

ಅಪ್ಪಿ ತಪ್ಪಿ ನಾವಿಬ್ಬರೂ ಇಂದು

ಭೇಟಿಯಾದರೂ ಆಗಬಹುದು

ಇಪ್ಪತ್ತು ವರ್ಷಗಳ ನಂತರ ಕೆನ್ನೆಗಳಲ್ಲಿ

ಇನ್ನೊಮ್ಮೆ ಓಕುಳಿ ನೀರು

ಚಲ್ಲಾಡಬಹುದು

ಎಲ್ಲಿದ್ದೆವು ಇಷ್ಟು ದಿನ

 ಪಾರಿಜಾತದ ಮೊಗ್ಗು

ಪಕಳೆ ಬಿಡಿಸುವ ಹೊತ್ತು

ನನಗೆ ನೀನೂ…

ನಿನಗೆ ನಾನೂ…

‘ಎಲ್ಲಿದ್ದೆವು ಇಷ್ಟು ದಿನ’-ಕೇಳಿಕೊಂಡು

ಮತ್ತೂ ಮತ್ತೂ ಅದನ್ನೇ ಹೇಳಿಕೊಂಡು

ಕಣ್ಣೀರು ಉಕ್ಕಿ

ನಕ್ಕೂ ನಕ್ಕೂ ಸುಸ್ತಾಗುವಾಗ

ಅದೇ ರಾತ್ರಿಯ ಬಿಕೋ ಬೀದಿಯಂಚಿನ

ನೆಮ್ಮದಿಯ ಕಾಡಿನಲ್ಲಿ

ಒಂಟಿ ಮರವೊಂದು ಗೆಲ್ಲು ಮುರಿಸಿಕೊಂಡು

ಅತ್ತ

ಸದ್ದಾಯಿತು

 

ಹಾಡೇ ಹಗಲಿಗೂ ಮೊದಲಿನ

ತಾಜಾ ನಸುಕಾಗಲು

ಇನ್ನೆಷ್ಟು ಹೊತ್ತು ಬಾಕಿ ಇದೆ

ತಿಳಿಯುವುದಿಲ್ಲ ನನಗೆ

ಈ ಅಮವಾಸ್ಯೆಯ ಗಾಡಾಂಧಕಾರದಲ್ಲಿ..

ತಿಳಿಯುವುದಿಷ್ಟೇ

ಓ ಅಲ್ಲೆಲ್ಲೋ ದೂರದಲ್ಲಿರುವ ನೀನು

ಮತ್ತಿಲ್ಲಿ ಸುಕ್ಕಾಗದ ಹಾಸಿಗೆಯ ಮೇಲೆ

ಮಂಡಿಯೂರಿ

ಬುದ್ಧಪೂರ್ಣಿಮೆಯ ಕುರಿತು

ಧ್ಯಾನಿಸುತ್ತಿರುವ

ನಾನು

ಹೇಳುವುದು ಬೇಡ

ಇತ್ತೀಚೆಗ್ಯಾಕೋ

ಪಾರಿಜಾತದ ಕಂಪಿಗೆ ಮಾರುಹೋಗುವವರು

ವಲಸೆ ಹೋಗುತ್ತಿದ್ದಾರೆ

ಸೋನೆಮಳೆಗೆ ಅರಳರಳುತ್ತಲೇ ಉದುರುವ

ಮೃದು ಮೊಲೆತೊಟ್ಟಿನಂತಹ ಹೂಗಳ

ಮೇಲವರು

ಮಹಾ ಗಡಿಬಿಡಿಯಲ್ಲಿದ್ದವರಂತೆ

ಓಡಿಯಾಡುತ್ತಿದ್ದಾರೆ

ಗೆಲ್ಲುಗಳಿಗೆ ಆತುಕೊಂಡ ಕೆಲವೇ

ಕೆಲವನ್ನು ಹೆಕ್ಕಿ

ಪೂಜೆಗೆಂದು ಒಯ್ಯುತ್ತಿದ್ದಾರೆ…

 

ಹೇಳಿದೆನಲ್ಲ

ಹೇಳುವುದು ಬೇಡ

ನಿನ್ನೂರಿನ ಶಂಖದ ಹುಳ

ಇದನ್ನೆಲ್ಲ ನಂಬಲಿಕ್ಕಿಲ್ಲ…

 

ಏತನ್ಮಧ್ಯೆ

ಎಂದೊ ಒಮ್ಮೆ ನಿನ್ನೆದೆಯ ಮೇಲೆ

ಪಾರಿಜಾತದ ಹಚ್ಚೆ ನೋಡಿದಾಗಿನಿಂದ

ಮೊನಚಾಗುತ್ತಲೇ ಇದೆ

ವಿರಹ

ಅಚ್ಚ ಬಿಳಿಯ ಎಸಳೂ

ಹವಳ ಕೆಂಪಿನ ತೊಟ್ಟೂ

ಸೇರಿದ ಜಾಗದಲ್ಲಿ

ಭೇಟಿಯಾಗಬೇಕಿದೆ ನಾವಿಂದು

ಇದೇ ಮುಂಜಾನೆ ಇದೇ ಸಂಜೆ

ಅಥವಾ ಇದೇ ರಾತ್ರಿಯ

ಪಕಳೆ ಬಿಡಿಸುವ ಅದೇ ಹೊತ್ತಿಗೆ

ಬರುತ್ತೀಯಲ್ಲ….

ಮೀನು ಪೇಟೆಯ ತಿರುವು

ಈಗ

ಸ್ವಲ್ಪ ವಾಸಿಯೇನು..?

ಮೀನುಪೇಟೆಯ ತಿರುವಿನಲ್ಲಿ

ಹಿಡಿದು ನಿಲ್ಲಿಸಿದ್ದಾರೆ ಇಬ್ಬರು

ಕಣ್ಣಲ್ಲಿಯ ಕರುಣೆಯಿಂದ

ಎಲ್ಲೋ ಸಾಂತ್ವನಗೊಂಡಿದ್ದೇನಲ್ಲ

 

ಛೆ..!

ಬೇಗನೆ ನೆನಪಾಗುತ್ತಿಲ್ಲ

 

ಮೊನ್ನೆ ತಾನೇ ಆಸ್ಪತ್ರೆಯಲ್ಲಿ

ಅಸಡ್ಡಾಳ ಮಲಗಿದವಳಿಗೆ

ಇವರೇ ಅಲ್ಲವೇ

ಬಿಸಿನೀರಿನಲ್ಲಿ ಬಟ್ಟೆ ಹಿಂಡಿ

ಹಾಯೆನ್ನಿಸುವಂತೆ ಮೈ ಒರೆಸಿದ್ದು

ಬಾತ್‌ರೂಮಿಗೂ.. ಬೆಡ್ಡಿಗೂ..

ಡ್ರಿಪ್ ಬಾಟಲ್ಲು ಎತ್ತರಿಸಿ

ರಕ್ತ ಮೇಲೇರದಂತೆ

ಜಾಗ್ರತೆ ವಹಿಸಿದ್ದು

 

ನನ್ನ ಮರೆವಿಗೊಂದಿಷ್ಟು ಬೆಂಕಿ

ಹಾಕಿದರೆ ಮಾತ್ರ ಜ್ವಲಿಸಿ

ನೆನಪ ಕಾರಿಕೊಳ್ಳುತ್ತದೆ

 

ಇರುವಷ್ಟು ದಿನ ತಮ್ಮ

ಬೆಳ್ಳನೆ ಸಮವಸ್ತ್ರದಲಿ

ಕೋರೈಸುತ್ತಿದ್ದರು ಅವರು

ರಕ್ತ ಕಂಡರೆ ಸಾಕು ಬಿದ್ದೇಬಿಡುವ

ನನ್ನಂತವರನ್ನು ನೋಡಿಯೇ

ತಯಾರಾಗಿತ್ತು ಅವರ ಬಿಳಿಹತ್ತಿ

ಬಿಳಿ ಸಿಂಕು

ದಿಂಬು, ಬೆಡ್‌ಶೀಟು

ಬೆಳ್ಳನೆ ಕಮೋಡು..

 

ಒಂದೇ ಹೊರತೆಂದರೆ

ಅಲ್ಲಿನ ಬಾತ್‌ರೂಮಿನ ಬಿಳಿ

ಗೋಡೆಗಳು ಅಂಟಿಸಿಕೊಂಡಿವೆ

ತರಹೇವಾರಿ ಹಣೆಯ

ಕೆಂಪು ಬೊಟ್ಟುಗಳನ್ನು

ಅವು ಅವರದ್ದಲ್ಲ;ನನ್ನಂತೆ

ಬಂದು ಹೋದವರು

ಬಿಟ್ಟು ಹೋದವುಗಳು

ಮುಖ ತೊಳೆದಾದ ಮೇಲೆ ಮತ್ತೆ

ಅಂಟಿಸಿಕೊಳ್ಳಬೇಕೆಂಬ ಇರಾದೆಗೆ

ಧಿಕ್ಕಾರ ಕೂಗಿ ಹೇಲುಚ್ಚೆಯ ಕೋಣೆಯೊಳಗೆ

ತೊರೆದು ಹೋದವುಗಳು

 

ಉದ್ದ ಗಿಡ್ಡ ಗೋಲ ಚೌಕ ದಪ್ಪ

ನನ್ನದೋ…!

ಅವುಗಳ ಮಧ್ಯೆ

ಚಾಳೀಸಿಗೂ ನಿಲುಕದಷ್ಟು ಸಣ್ಣ

 

ಮತ್ತೀಗ…..

ರಂಗು ಬಳಿದವರನ್ನಷ್ಟೇ ಒಳ

ಬಿಟ್ಟುಕೊಳ್ಳುತ್ತಿದೆ ಮೀನುಪೇಟೆ

ಅವರು ತೇರ್ಗಡೆಹೊಂದಿದ್ದಾರೆ ನನ್ನಂತೆ

ಬಣ್ಣದ ಇನ್ನೊಂದು ಮಜಲಿಗೆ

ಹಾಗಾಗಿ ಥಟ್ಟನೆ ಗುರ್ತಿಸಲಾಗುತ್ತಿಲ್ಲ

ಕರುಣೆ ಪ್ರೀತಿ ಸಾಂತ್ವನದ

ಬಿಳಿಚೆಹರೆಗಳನ್ನು

ಇಲ್ಲೀಗ

ಸತ್ತ ಮೀನುಗಳದ್ದೇ ರಾಜ್ಯಭಾರ

ಬಹಳಷ್ಟು ಸಲ ಹೀಗಾಗುತ್ತದೆ

ಎದೆಯ ರೋಮಾಂಚನ ಬಣ್ಣಿಸುವ

ಶಬ್ಧಗಳು ಬಜಾರುಗಳಲ್ಲಿ ಮಾರಾಟಕ್ಕಿಲ್ಲ

ತಮ್ಮ ಪಾಡಿಗೆ ಅವು ಅವನೊಳಗೆ ಇದ್ದು

ನನ್ನ ಸತಾಯಿಸುತ್ತವೆ

ಕಾಡ ಕಾಲುಹಾದಿಯ ಮುಂದೆಲ್ಲೋ

ಜುಳುಜುಳು ಎದುರಾಗುವ ಕಿರುತೊರೆಯ

ಬೆಳ್ಳಿ ಮೀನುಗಳಂತೆ ಹೊರಳಿ ಜಾರುತ್ತವೆ

ಹಿಡಿವ ಬಯಕೆಯ ಕುಪ್ಪಳಿಸಿ ಕರೆದು

ಒದ್ದೆ ಮೈಯ ಇಣುಕಿಣುಕಿ ನೋಡುತ್ತವೆ

ಹೊಕ್ಕುಳ ಕುಳಿಯಲ್ಲಿ ಹೊಕ್ಕು ಹೊರಬಿದ್ದು

ಕಚಗುಳಿ ಇಡುತ್ತವೆ

ಮತ್ತೆ

‘ನಿನ್ನ ಇಷ್ಟು ಹಚ್ಚಿಕೊಂಡಿದ್ದೇನೆ ನೋಡು’ಎಂದೆಲ್ಲ ಹೇಳಿ

ಎದೆಬಿಚ್ಚಿ ತೋರಿಸಿ ಪೇಚಿಗೆ ಸಿಲುಕಿಸುತ್ತವೆ

 

ಎಲ್ಲೋ ಇದೆ ಗಮ್ಯ

ತುಸು ತಡವಾಗಿದೆ ಹೊರಟಿದ್ದು

ಇನ್ಯಾರೂ ಬರಬಾರದ ಕಾಡಹಾದಿಯನ್ನೇ

ಆಯ್ಕೆಯಾಗಿಸಿ

ಮುದುಕನಾಗಲು ಬರೇ ಐದಾರು ದಿನ ಬಾಕಿ

ಇರುವ ಆತ ದಟ್ಟ ಮರಗಳ ಮರೆಯಿಂದ

“ಮುದ್ದು”ಎಂದು ಕರೆವ ಅಮಲಿಗೆ

ಕಿವಿಯಾಗಿಸಿಕೊಂಡು

ಕಣ್ಣಿಗೆ ಕಾಣದ ಅವನು ಯಕ್ಷಪ್ರಶ್ನೆಯಲ್ಲ ಎಂದೂ

 

ಬಹಳಷ್ಟು ಸಲ ಹೀಗಾಗುತ್ತದೆ

ಎದೆಯೊಳಗಿದ್ದವರು ಎದುರಾಗದಿದ್ದರೂ

ನೆತ್ತಿಗೆ ಖಾಯಂ ಒತ್ತಿ ನಿಂತಿರುತ್ತಾರೆ

ಸಣ್ಣಗೆ ಜ್ವರ ತರಿಸುತ್ತಾರೆ

ಇಂಥ ಬಿರುಬೇಸಿಗೆಯಲ್ಲೂ ಹೊದ್ದು

ಮಲಗುವ ಛಳಿ ಹೊಕ್ಕುಳಿಗೆ

ತಂದೊಡ್ಡುತ್ತಾರೆ

 

“ನಿನ್ನ ಕಣ್ಣಿಗೆ ನಿಲುಕದ ನಿನ್ನದೇ ಬೆನ್ನು

ನನ್ನ ಎದೆಗಂಟಿ

ಆವರಿಸಿ ಬೇರುಬಿಟ್ಟಿದೆ ನೋಡು”-

ನೆಟ್ವರ್ಕ ಸಿಗದ ಊರಲ್ಲಿ

ಗುಡ್ಡವೇರಿದರೆ ಮಾತ್ರ ಬರುವ

‘ಟಿವ್’ ಎನ್ನುವ ಒಂದೇ ಒಂದು ನೋಟಿಫಿಕೇಷನ್-

ತುಸು ಹೆಚ್ಚೇ ನಾಚಿಕೊಳ್ಳುತ್ತೇನೆ ನಾನು

ಪ್ರೇಮಿಸುವವರಾದರೆ ಕಲ್ಪಿಸಿಕೊಳ್ಳಿ

ಎಂಥ ಸುಖವಿದೆ ಇದರಲ್ಲಿ

ಪ್ರಾಕ್ಟಿಕಲ್ ಅಲ್ಲದ ಮೈ ಜುಂ ಎನ್ನಿಸುವ

ತಾಜಾ ಹಸೀ ಸುಳ್ಳಿನಂತಹುದರಲ್ಲಿ

 

ವಿಪರೀತ ವಿರಾಮವಿರುವ ಇಲ್ಲಿಗೂ

ಚೂರೂ ಪುರುಸೊತ್ತಿಲ್ಲದ ಅಲ್ಲಿಗೂ

ಹೊಂದಾಣಿಕೆ ಹೇಗೆ..!?

ಬಿಸಿಬಿಸಿ ಚರ್ಚೆ ಊರ ಅಶ್ವತ್ಥ ಕಟ್ಟೆಯಲ್ಲಿ

ಸೆರಗು ಗಾಳಿಗೆ ಬಿಟ್ಟುಕೊಂಡು ನಾನು

ಹಾಯ್ದು ಹೋಗುವಾಗಲಷ್ಟೇ ಸುಮ್ಮನಿರುತ್ತಾರೆ ಅವರು

ತರುವಾಯ ಮುಂದುವರಿಸುತ್ತಾರೆ

ಬುರುಗು ಬುರುಗು

ಕಂಪಿಸುವ ಕ್ರಿಯೆಯನ್ನು

 

ಹೇಳುತ್ತೇನೆ ಕೇಳೀಗ

ನಿನ್ನ ನೆನಪಿನೂರಲ್ಲಿ ಈಗ

‘ಹೊಕ್ಕುಳಲ್ಲಿ ಹೂವಿಲ್ಲ ‘

ರಾತ್ರಿ ಮೂರನೇ ಜಾವಕ್ಕೆ ಮುದ್ದಿಟ್ಟು ಹೋದ

ದುಂಬಿಯ ಹೇಳಿ ಮಾಡಿಸಿದ ಹೆಜ್ಜೆಗುರುತಿದೆ

ಮತ್ತದರ ಮೇಲೆಲ್ಲ ನನ್ನ ಸಂಭಾಳಿಸುವ

ನಿನ್ನದೇ ಹಸಿಹಸಿಯ

ಹೆಸರಿದೆ

ಬಿಸಿ ಉಸಿರಿದೆ

ಆರಂಭಕ್ಕೊಂದು ಮುಕ್ತಾಯ

ಸದಾ

ಒಣಗಿಕೊಂಡೇ ಇರುವ ಬೇಲಿಯಂಚಿನ ಕ್ಯಾಕ್ಟಸ್

ಹೆಕ್ಕಿ ತೆಗೆವ ಹುಕಿ ಬಂದಾಗಲೊಮ್ಮೆ

ಅಪರೂಪಕ್ಕೆ ಚಿಗುರಿ

ಪಲ್ಲವಿಸುವ ಕನಸು ಕಾಣುತ್ತದೆ

ತೊಂಡು ದನಗಳು ಮೇದು ಅಂಡಲೆವ

ಬಯಲ ಬಾಂದಿನಂಚಿಗೆ ಕೂತು ಒದ್ದಾಡುತ್ತ

ಶಾಪ ವಿಮೋಚನೆಗೆ ಕಾಯುತ್ತ

ತುಸು ಜರುಗುತ್ತದೆ

ಸರಣಿ ಬದಲಿಸ ಹೋಗಿ

ನಿಜಕೆ ಡಿಕ್ಕಿಯ ಹೊಡೆದು

ಬೆಚ್ಚಿ ಎಚ್ಚೆತ್ತುಕೊಳ್ಳುತ್ತದೆ

ನೋವಾದ ಬೇರುಗಳ ತಟ್ಟಿ ಸುಮ್ಮನಿರಿಸುತ್ತದೆ

 

ದಿನದ ಕೊನೆಯ ಒಲೆಉರಿಗಾಗಿ

ಬಿಂಬ ಮೂಡದ ಕೆಂಪುದೀಪದ ಕೆಳಗೆ

ಬಿಕರಿಯಾಗುವ ಕ್ಷಣವ ಕಾದು ನಿಲ್ಲುತ್ತದೆ

ಹೊಡೆ ಬತ್ತಿದ ಎದೆಯ ಮೇಲಿನ ಮುತ್ತ

ಕಿತ್ತಿಡಲಾಗದೇ ಕಂಡೋರ ಕೆನೆವ ಕುದುರೆಗಳಿಗೆ

ಬೇರು ಕೊಡುವ ಭೂಮಿಯಾಗಿ

ಮತ್ತೆ ಮತ್ತೆ ಕತ್ತಲಿನ ಗುಚ್ಛವಾಗುತ್ತದೆ

ರೆಕ್ಕೆಬಿಡಿಸಲು ಹೋಗಿ

ಚಕ್ರವ್ಯೂಹಕೆ ಸಿಲುಕಿ

ಮೊನೆ ಮುರಿದು ಮೊಂಡಾದ ಮುಳ್ಳುಗಳ

ನೇವರಿಸಿ ಮತ್ತೆ ಸಿದ್ಧಗೊಳಿಸುತ್ತದೆ

ಮೊಟ್ಟೆಗಾಗಿ ಬಸಿರ ಹದಮಾಡತೊಡಗುತ್ತದೆ

 

ಮತ್ತೆ ಮರಳದ ಹಾದಿಯ ಬದುವಿನಲ್ಲಡಗಿದ

ತಂಪ ಕಾಸಿ ಕೆನೆಗಡೆದು ಕಲಗಚ್ಚಿನ ತಿಳಿಯಲ್ಲಿ

ತೇಲಿಬಿಡುತ್ತದೆ

ನಿಂತ ನೆಲದ ಬಿರುಕನ್ನು ಕಾಲ ಸಂದೀಲಿ ಅಮುಕಿ

ಬಿತ್ತವನರಿಯದ ಬಗಲಲ್ಲಿನ

ಎಳೆಗೂಸಿಗೆ ಮೊಲೆಯೂಡುತ್ತಲೇ

ಬಿಸುಸುಯ್ವ ಕನಸುಗಳ ಅಟ್ಟಕ್ಕೇರಿಸಿ

ಹೊಸಹೊಸ ಮಟ್ಟುಗಳೊಂದಿಗೆ

ಸಿದ್ಧವಾಗುತ್ತದೆ

 

ಮತ್ತೆ ಅಲ್ಲೇ ಸಿಕ್ಕಿ

ಒಣಗತೊಡಗುತ್ತದೆ

 

 

21 Responses

 1. Lalitha siddabasavayya says:

  ರೇಣುಕಾ ಹೊಸಬರಲ್ಲಿ ಬಹು ಭರವಸೆಯ ಕನ್ನಡದ ಕವಿ. ಈ ಎಲ್ಲಾ ಪದ್ಯಗಳನ್ನು ನಾನು ಹಿಂದೆಯೆ ಓದಿದ್ದೆ. ಕಾವ್ಯ ಆಗಲಾರದ ಸಂಗತಿಯೂ ರೇಣುಕಾ ಅವರ ಕೈಯಲ್ಲಿ ಕಾವ್ಯ ಆಗುತ್ತದೆ.

  • ರೇಣುಕಾ ರಮಾನಂದ says:

   ಅಕ್ಕಾ ನಿಮ್ಮ ಒಂದು ಹಾರೈಕೆಗಾಗಿ ನಾನು ಸದಾ ಹಂಬಲಿಸುತ್ತಿರುತ್ತೇನೆ..ನಿಮ್ಮ ಕವಿತೆಗಳ ಓದೇ ನನ್ನ ಸಕಲ ಶಕ್ತಿ.

 2. ಚಂದ ಚಂದ!
  ನನಗಿವರ ಕವಿತೆ ಓದುವ ಹುಚ್ಚು.

 3. LakshmiPoems says:

  “ಬದಲಾಗುತ್ತಿರುವುದು ಕಾಲವೋ..ಮನುಷ್ಯನೋ.. ”
  So true !! This question is always a question ! We just go around it !!
  Thank you Avadhimug and Renuka Ramanand for wonderful poems 🙂

  • ರೇಣುಕಾ ರಮಾನಂದ says:

   ಮೇಡಂ ನಿಮ್ಮ ಪ್ರತಿಕ್ರಿಯೆಗೆ ತುಂಬ ಖುಷಿಯಾಯ್ತು

 4. Shridhar Nayak says:

  ಅವಧಿಯ ಹೊಸ ಪ್ರಯತ್ನಕ್ಕೆ ರೇಣುಕಾ ಮೊದಲ ಆಯ್ಕೆ . ಖುಷಿಯಾಯಿತು.

 5. K. Nallathambi says:

  ಇನ್ನೇನಿತ್ತು ನಮ್ಮಿಬ್ಬರ ನಡುವೆ, ಕೆಲವು ಸಲ ಹೀಗಾಗುತ್ತದೆ ಬಹಳ ಹಿಡಿಸಿತು, ‘ಮೀನು ಪೇಟೆಯ ತಿರುವು’ ಬಂದಾಗ ತಿಳಿಸಿ…..

  • ರೇಣುಕಾ ರಮಾನಂದ says:

   ಖಂಡಿತ ತಿಳಿಸುವೆ.ಮತ್ತು ಕಳಿಸುವೆ ಸರ್

 6. Kumar Joshi says:

  ರೇಣುಕಾ ನಿಮ್ಮ ಕವಿತೆಗಳಲ್ಲಿ ತಾಜಾತನ ಇದೆ, ಹೊಸತನ ಇದೆ, ಸೃಜನಶೀಲತೆ ಇದೆ. ಶುಭಾಶಯಗಳು !

  • ರೇಣುಕಾ ರಮಾನಂದ says:

   ಸರ್..ನಿಮ್ಮ ಅಭಿಪ್ರಾಯ ಖುಷಿ ತಂತು

 7. ಗೀತಾ ಡಿ.ಸಿ. says:

  ರೇಣುಕಾ ನಿಮ್ಮ ಕವಿತೆಗಳು ಇಷ್ಟವಾದವು

 8. shreedevi keremane says:

  ಆಹಾ …….ನಮ್ಮೂರ ಹುಡುಗಿಯ ಕವಿತೆಗಳನ್ನು ಒಂದಾಗಿಸಿ ಓದುವುದೆಂದರೆ ಅಂಕೋಲೆಯ ಮೀನು ಪೇಟೆಯ ಘಮಕ್ಕೆ ಮೂಗರಳಿಸಿದಂತೆ

  • ರೇಣುಕಾ ರಮಾನಂದ says:

   ಶ್ರೀ…ಮೀನು ನಮ್ಮಿಬ್ಬರ ಚೈತನ್ಯದ ಗುಟ್ಟು.

 9. SUDHA SHIVARAMA HEGDE says:

  ನಾನು ರೇಣು ಅವರ ಕವನಕ್ಕೆ ಬಿದ್ದು ವರ್ಷಗಳೇ ಕಳೆದವು. ಸಿಕ್ಕಿದಾಗೊಮ್ಮೆ ಮುಟ್ಟಿಬಿಡಬೇಕು ಅವರನ್ನು. ನಿಜಕ್ಕೂ ಆರ್ದೃ ಮನದ ಕವಿ. ಬರೆಯುತ್ತಲೇ ಇರಿ ದಾರಿಯುದ್ದಕ್ಕೂ

  • ರೇಣುಕಾ ರಮಾನಂದ says:

   ಸುಧಾ..ಇದಕ್ಕಿಂತ ಹೆಚ್ಚೇನೂ ಬೇಡ ನನಗೆ..ಕಣ್ಣುಹನಿಗೂಡಿದವು

 10. chandru says:

  after jogi your writings are good and it gives a pleasure in reading keep it up

 11. ಸುರೇಶ್ says:

  ಓದಬೇಕಾದ ಕವಿತೆಗಳು. ಅಭಿನಂದನೆಗಳು. ಸುರೇಶ್ ನಾಗಲ ಮಡಿಕೆ

Leave a Reply

%d bloggers like this: