fbpx

#iamdakshinakannadiga ಎಂದು ಹೇಳಲು ಮುಜುಗರವಾಗುತ್ತದೆ, ಧೈರ್ಯವೂ ಬರುವುದಿಲ್ಲ..

ದಿನೇಶ್ ಅಮೀನ್ ಮಟ್ಟು

‘ದಕ್ಷಿಣ ಕನ್ನಡದ ಮೇಲೆ ವಿಶೇಷವಾಗಿ ಕಣ್ಣಿಡಿ’ ಎಂದು ಹಿರಿಯ ಹೋರಾಟಗಾರರಾದ ಎಚ್.ಎಸ್,ದೊರೆಸ್ವಾಮಿ ಹೇಳಿರುವುದು ‘ ಗೌರಿ ಕೊಲೆಗಾರರನ್ನು ದಕ್ಷಿಣ ಕನ್ನಡದಲ್ಲಿ ಹುಡುಕಿ’ ಎಂದು ಹೇಳಿದಂತೆ ಗೆಳೆಯ ಜೋಗಿ ಅವರಿಗೆ ಕೇಳಿದ್ದು ಹೇಗೆ ಎನ್ನುವ ಕುತೂಹಲ ನನಗೆ.

ಇದರಿಂದ ಜೋಗಿ ಅವರ ಮನಸ್ಸಿಗೆ ನೋವಾಗಿದೆಯಂತೆ. ಆಡಿದ ಮಾತು ಕೇಳುವ ಕಿವಿ ಸೇರುವಾಗ ಅದರ ಶಬ್ದ, ಅರ್ಥ ಬದಲಾಗುತ್ತಿದೆಯಲ್ಲಾ, ಇದೇ ಇಂದಿನ ದಕ್ಷಿಣ ಕನ್ನಡದ ಸಮಸ್ಯೆ ಇದನ್ನು ಗಮನಿಸಿಯೇ ಆ ಹಿರಿಯ ಜೀವ ‘ಕಣ್ಣಿಡಿ’ ಎಂದು ಹೇಳಿರಬೇಕೇನೋ?

ಕಣ್ಣಿಡಲು ಹೇಳಿದ ದೊರೆಸ್ವಾಮಿ ಮಾತಿನಿಂದ ವೇದಿಕೆಯಲ್ಲಿ ಜತೆಯಲ್ಲಿಯೇ ಇದ್ದ ನನಗೂ ನೋವಾಗಿತ್ತು, ಒಂದು ಕ್ಷಣ ಮುಖಮುಚ್ಚಿಕೊಳ್ಳಬೇಕೆನಿಸಿದ್ದೂ ನಿಜ, ಆದರೆ ನೋವಿನ ಕಾರಣ ಬೇರೆ. ದಕ್ಷಿಣ ಕನ್ನಡದ ಮೇಲೆ ಸದಾ ಹೊರಗಿನವರು ಕಣ್ಣಿಡುತ್ತಿದ್ದರು, ಇದಕ್ಕೂ ಕಾರಣ ಬೇರೆ. ಅಂಡರ್ ವರ್ಲ್ಡ್ ನಿಂದ ಮಿಸ್ ವರ್ಲ್ಡ್ ನ ವರೆಗಿನ ಖ್ಯಾತಿ -ಕುಖ್ಯಾತಿಗಳೇನು ಕಡಿಮೆಯೇ?

ನಾನು ಒಂದಷ್ಟು ವರ್ಷ ಕರ್ನಾಟಕದಿಂದ ಹೊರಗಿದ್ದೆ. ಪ್ರಾರಂಭದಲ್ಲಿ ಬೇರೆ ರಾಜ್ಯದ ಜನ ಸಿಕ್ಕಿ ನನ್ನೂರು ತಿಳಿದೊಡನೆ ‘ದ.ಕ.ಮಂದಿ ಬುದ್ದಿವಂತರು, ಉದ್ಯಮಶೀಲರು, ಸಾಹಸಿಗಳು..ಎಂದೆಲ್ಲಾ ಬಣ್ಣಿಸುತ್ತಿದ್ದಾಗ ನಾನು ಬೀಗುತ್ತಿದ್ದೆ. ಎಲ್ಲರಿಗೂ ನಮ್ಮ ಮೇಲೆ ಕಣ್ಣು ಎನ್ನುವುದೇ ಖುಷಿ, ಹಾಗಿತ್ತು ಕಣ್ಣು ಕುಕ್ಕುವಂತಹ ಸಂಸ್ಕೃತಿ. ಇದಕ್ಕೆ ಯಾರ ದೃಷ್ಟಿ ಬಿತ್ತೋ ಏನೋ?
ಆದರೆ ಇತ್ತೀಚಿನ ವರ್ಷಗಳಲ್ಲಿ ಬೇರೆ ರಾಜ್ಯದ ಜನರಿಗೆ ನನ್ನೂರು ಮಂಗಳೂರು ಎಂದು ತಿಳಿದೊಡನೆ ಅವರು ಹೇಳುವುದು, ಕೇಳುವುದೇ ಬೇರೆ

‘ನಿಮ್ಮಲ್ಲಿ ನೂರಕ್ಕೆ ನೂರು ವಿದ್ಯಾವಂತರಂತೆ, ಹೀಗಿದ್ದರೂ ಬೇರೆಬೇರೆ ಧರ್ಮದ ಹುಡುಗ-ಹುಡುಗಿಯರು ಪರಸ್ಪರ ಮಾತನಾಡಬಾರದಂತೆ, ಹುಡುಗಿಯರು ಪಬ್-ಹೊಟೇಲ್ ಗೆ ಹೋದರೆ ಹೊರಗೆಳೆದು ತಂದು ಹೊಡೆಯುತ್ತಾರಂತೆ, ಇಂಟರ್ ರಿಲೀಜನ್ ಮ್ಯಾರೇಜ್ ನಡೆದರೆ ಗಲಾಟೆ ಅಂತೆ,. ಕ್ಷುಲಕ ಕಾರಣಕ್ಕೆ ಧರ್ಮದ ಹೆಸರು ಹೇಳಿಕೊಂಡು ಹೊಡೆದು ಸಾಯಿಸ್ತಾರಂತೆ. ಯಾವ ಉಡುಪು ತೊಡಬೇಕು, ಏನು ತಿನ್ನಬೇಕು ಎಂದು ಫರ್ಮಾನು ಹೊರಡಿಸ್ತಾರಂತೆ.. ಸಿಕ್ಕಾಪಟ್ಟೆ ಡ್ರಗ್ಸ್ ಅಂತೆ… ಎಂದು ಕೊನೆಯಿಲ್ಲದ ಪ್ರಶ್ನೆಗಳ ಸರಮಾಲೆಯನ್ನು ನನ್ನ ಕುತ್ತಿಗೆಗೆ ನೇತುಹಾಕುತ್ತಾರೆ.

ಈ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅವಮಾನದಿಂದ ನಾನು ತಲೆತಗ್ಗಿಸಿ ಅವರಿಂದ ತಪ್ಪಿಸಿಕೊಂಡು ಹೊರಟುಹೋಗುತ್ತೇನೆ.

ಜೋಗಿಯವರಂತೆ #iamdakshinakannadiga ಎಂದು ಹೇಳಲು ಮುಜುಗರವಾಗುತ್ತದೆ, ಧೈರ್ಯವೂ ಬರುವುದಿಲ್ಲ.
ದೀಪಕ್ ರಾವ್, ಬಶೀರ್ ಅವರ ಕೊಲೆಗಡುಕರ, ನಡುರಸ್ತೆಯಲ್ಲಿ ಹೆಣ್ಣುಮಕ್ಕಳ ಮೈ ಮೇಲೆ ಕೈ ಹಾಕುವ ಪುಂಡರ, ಹಿಂದು-ಮುಸ್ಲಿಮರ ನಡುವೆ ದ್ವೇಷದ ಕಿಚ್ಚು ಹಚ್ಚುತ್ತಲೇ ಇರುವ ಕಲ್ಲಡ್ಕ ಮನಸ್ಸುಗಳ ಜತೆ‌ನಿಂತು ನಾನುದಕ್ಷಿಣ ಕನ್ನಡಿಗ ಎಂದು ಹೆಮ್ಮೆಯಿಂದ ಹೇಗೆ ಹೇಳಲು ಸಾಧ್ಯ? ಇದು ನಾನು ಬೆಳೆದ, ಕಂಡ ಊರಲ್ಲ.

ಹೆಮ್ಮೆ ಪಡುವ ಕಾಲವೊಂದಿತ್ತು. ನಾವು ಜಾತಿ,ಧರ್ಮ, ಲಿಂಗದ ಭೇದವಿಲ್ಲದೆ ಎಲ್ಲರೂ ಒಟ್ಟಿಗೆ ಹೋಗಿ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಗಡ್ ಬಡ್ ತಿನ್ನುತ್ತಿದ್ದೆವು, ಮುಸ್ಲಿಮ್ ವಿದ್ಯಾರ್ಥಿನಿಯರ ತಲೆಮೇಲೆ ಬುರ್ಕಾನು ಇರಲಿಲ್ಲ, ಹಿಂದು ವಿದ್ಯಾರ್ಥಿಗಳ ಹಣೆ ಮೇಲೆ ಕೇಸರಿ ನಾಮವೂ ಇರಲಿಲ್ಲ.

ಶಿರ್ವ-ಶಂಕರಪುರದ ಕ್ರಿಶ್ಚಿಯನರು ಬೆಳೆದ ಮಲ್ಲಿಗೆಯನ್ನು ಬ್ಯಾರಿಗಳಿಗೆ ಮಾರಾಟ ಮಾಡುತ್ತಿದ್ದರು, ಹಿಂದು ಹೆಣ್ಣುಮಕ್ಕಳು ಬ್ಯಾರಿಗಳಿಂದ ಖರೀದಿಸಿ ಮುಡಿಯುತ್ತಿದ್ದರು. ಬಪ್ಪ ಬ್ಯಾರಿ ದುರ್ಗಪರಮೇಶ್ವರಿ ದೇವಿಗೆ ದೇವಸ್ಥಾನ ಕಟ್ಟಿದ್ದ, ಅಲಿ ಎಂಬ ಮುಸ್ಲಿಮ್ ಭೂತವನ್ನು ಹಿಂದುಗಳು ಆರಾಧಿಸುತ್ತಿದ್ದರು.

ಕ್ರಿಶ್ಚಿಯನರ ‘ಸಾಂತ್ ಮಾರಿ’ಗೆ ಹಿಂದು-ಮುಸ್ಲಿಮರು ಕಿಕ್ಕಿರಿದು ತುಂಬುತ್ತಿದ್ದರು. ಕಂಕನಾಡಿಯ ಕೋಸ್ತರ ಹೊಟೇಲ್ ನ ಬೀಪ್ ಸ್ಟಿಕ್, ಹಂಪನಕಟ್ಟೆಯ ಪಿರೇರಾ ಹೊಟೇಲ್ ನ ಪೋರ್ಕ್ ಎಲ್ಲವೂ ಜಾತಿ-ಧರ್ಮದ ಭೇದ ಇಲ್ಲದೆ ಎಲ್ಲರ ಹೊಟ್ಟೆ ಸೇರುತ್ತಿತ್ತು. ಇಂತಹದ್ದೊಂದು ಬಹುಸಂಸ್ಕೃತಿಯ ಮೇಲೆ ಎಲ್ಲರ ಅಸೂಯೆಯ ಕಣ್ಣಿದ್ದದ್ದಉ ನಿಜ.

ನಾನು ಮತ್ತು ಜೋಗಿ ನಮ್ಮ ಪ್ರಾರಂಭದ ಕಷ್ಟದ ದಿನಗಳಲ್ಲಿ ಒಂದೇ ರೂಮಿನಲ್ಲಿದ್ದವರು. ಬ್ರಾಹ್ಮಣರಾದ ಜೋಗಿ ಮನಸ್ಸಿಗೆ ನೋವುಂಟುಮಾಡಬಾರದೆಂದು ನಾನು ಊಟಕ್ಕೆ ಟೊಮೇಟೋ ಸಾರು ಮಾಡಿದರೆ, ನನ್ನ ರುಚಿ ಕೆಡಿಸಬಾರದೆಂದು ಜೋಗಿ ಅದೇ ಸಾರಿಗೆ ಒಂದು ಮೊಟ್ಟೆ ಒಡೆದು ಹಾಕುತ್ತಿದ್ದರು. ಇಂತಹದ್ದೊಂದು ಅನುಪಮ ಸ್ನೇಹದ ಸೆಲೆಯನ್ನು ನನ್ನೆದೆಯಲ್ಲಿ ಉಕ್ಕಿಸಿದ್ದ ಅಂದಿನ ದಕ್ಷಿಣಕನ್ನಡದ ನೆಲದ ಬಗ್ಗೆ ನನಗೆ ಹೆಮ್ಮೆಯಿದೆ.

ಕ್ಷಮಿಸು ಗೆಳೆಯ, ಜೀವಜೀವಗಳ ನಡುವೆ ದ್ವೇಷಾಸೂಯೆಯ ಕಿಚ್ಚು ಹಚ್ಚುವ ಇಂದಿನ ದಕ್ಷಿಣಕನ್ನಡದ ನೆಲದ ಬಗ್ಗೆ ನಿನ್ನಂತೆ ಹೆಮ್ಮೆ ಪಡಲಾರೆ. ಕಣ್ಣಿಡಲು ಹೇಳಿದವರನ್ನು ದ್ವೇಷಿಸಲಾರೆ. ಆ ಮಾತನ್ನು ನನ್ನೆದೆಯೊಳಗಿನ ಪ್ರಶ್ನೆಯಾಗಿಸಿ ಉತ್ತರ ಹುಡುಕಲು ಪ್ರಯತ್ನಿಸುವೆ.

ಒಮ್ಮೆ ನಿಮ್ಮ ಮನೆಗೆ ಬಂದು ಮೊಟ್ಟೆ ಹಾಕಿದ ಟೊಮೆಟೋ ಸಾರಿನಲ್ಲಿ ಊಟ ಮಾಡುವ ಆಸೆ ನನಗೆ.

3 Responses

 1. nasrin says:

  ನಿಮ್ಮ ಮಾತು ಅಕ್ಷರಶಃ ನಿಜ ಸರ್. ನಾನು ಒಬ್ಬ ದಕ್ಷಿಣ ಕನ್ನಡಿಗಳಾಗಿ ನನ್ನೂರಿನ ಹೆಸರನ್ನು ಬೇರೆಯವರ ಮುಂದೆ ಹೇಳುವುದಕ್ಕೆ ನಾಚಿಕೊಳ್ಳುತ್ತೇನೆ. ಕಾರಣ ಬಹುಸಂಸ್ಕೃತಿಯ ನೆಲೆವೀಡನಿಂದು ಕುಸಂಸ್ಕೃತಿ ಆವರಿಸಿಕೊಂಡಿದೆ……

 2. Ashalatha, Mangaluru says:

  ದಕ್ಷಿಣ ಕನ್ನಡದ ಪ್ರಸ್ತುತ ಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ. ತಮಗೆ ಧನ್ಯವಾದಗಳು. ನಮ್ಮ ಜಿಲ್ಲೆಯ ಅಂದಿನ ದಿನಗಳು ಮರಳಿ ಬರಲೆಂದು ಆಶಿಸುತ್ತಿರುವವರಲ್ಲಿ ನಾನು ಒಬ್ಬಳಾಗಿರುವೆ.

 3. prasad raxidi says:

  ಈಗ ಬುಟ್ಟಿಯಲ್ಲಿ ಕೆಲವು ಕೊಳೆತ ಮೊಟ್ಟೆಗಳಿವೆ
  ಇಡೀ ಬುಟ್ಟಿ ವಾಸನೆ ಬರುತ್ತಿದೆ.
  ನಾವೇ ತೆಗೆದೆಸೆಯಬೇಕು

Leave a Reply

%d bloggers like this: