fbpx

ಮತ್ತೆ ನಾಟಕ ಅಕಾಡೆಮಿ ‘ನಟರಾಜ’..

ಸ್ಮರಣಿಕೆಗೂ ಬಡಿಯಿತು ಕೋಮು ವಾಸನೆ..

ಗಿರಿಧರ ಕಾರ್ಕಳ

ಕರ್ನಾಟಕ ನಾಟಕ ಅಕಾಡೆಮಿಯಂತಹ ಸ್ವಾಯತ್ತ ಸಂಸ್ಥೆಯಲ್ಲಿ ಲೋಗೋ, ಸ್ಮರಣಿಕೆಗಳ ವಿನ್ಯಾಸ ಬದಲಾಯಿಸುವುದು ಹೊಸದೇನಲ್ಲ.ಹಿಂದೆ ಸಿಜಿಕೆ ಅಧ್ಯಕ್ಷರಾಗಿದ್ದಾಗ ಹಂಪಿಯ ಕಲ್ಲಿನ ರಥದ ಪ್ರತಿಕೃತಿಯನ್ನು ಪ್ರಶಸ್ತಿ ಸ್ಮರಣಿಕೆಯಾಗಿಸಿದ್ದರು. ನಂತರದವರು ಮತ್ತೆ ನಟರಾಜನ ಮೊರೆ ಹೋದರು.

ಈಗಿನ ಅಧ್ಯಕ್ಷರು ಜಾಗತಿಕ ರಂಗಭೂಮಿಯ ಪರಿಕಲ್ಪನೆಯನ್ನಿಟ್ಟುಕೊಂಡು ಶೇಕ್ಸ್ ಪಿಯರನ ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ ನಾಟಕದ ಆಧಾರದಲ್ಲಿ ಖ್ಯಾತ ಕಲಾವಿದ ಸುದೇಶ್ ಮಹಾನ್ ರಚಿಸಿದ ಕಲಾಕೃತಿಯನ್ನು ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ.

ಆದರೆ ಕೋಮು ವ್ಯಾಧಿಗ್ರಸ್ತರಿಗೆ ನಟರಾಜನೆಂಬ ದೈವತ್ವದ ಸಂಕೇತ ಬದಲಾಯಿಸುವುದೇ ಸಾಂಸ್ಕೃತಿಕ ವಿರೋಧಿ ನೀತಿಯಾಗಿ ಕಂಡಿದೆ..!!

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ- ನಾಟಕ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆಯ ನಂತರ ಸ್ಮರಣಿಕೆಯ ವಿನ್ಯಾಸ ಬದಲಿಸಲು ಕೇವಲ ಒಬ್ಬ ಸದಸ್ಯರ ಹೊರತಾಗಿ ಉಳಿದೆಲ್ಲರೂ ಒಪ್ಪಿದ್ದಾರೆ. ಅಲ್ಲಿಗೆ ಅತ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲೇ ವಿನ್ಯಾಸವನ್ನು ಸ್ವೀಕರಿಸಲಾಗಿದೆ.

ಆದರೆ ಆ ” ಒಬ್ಬರು” ಮಾತ್ರ ಇದಕ್ಕೆ ಕೋಮು ಬಣ್ಣ ಬಳಿದು ತಾವೇ ಮಾಧ್ಯಮದ ಮಂದಿಯನ್ನು ಸಂಪರ್ಕಿಸಿ ರಾದ್ಧಾಂತ ಎಬ್ಬಿಸಿದ್ದಾರೆ. ಅದಕ್ಕೆ ಶತಾವಧಾನಿ ಪಂಡಿತರೊಬ್ಬರು “ಶಾಸ್ತ್ರ ಸಮ್ಮತ” ಪಕ್ಕವಾದ್ಯ ನುಡಿಸಿದ್ದಾರೆ. ತಲೆಕೆಟ್ಟ ಮಾಧ್ಯಮಗಳಿಗೆ ಇನ್ನೇನು ಬೇಕು?

ನಾಟಕ ರಂಗಕ್ಕೆ ನಟರಾಜ ಪರಿಕಲ್ಪನೆ ಎಷ್ಟು ಮುಖ್ಯವೋ ಶೇಕ್ಸ್ ಪಿಯರನಂತಹ ಕಾಲಾತೀತ ಸರ್ವಮಾನ್ಯ ನಾಟಕಕಾರನೂ ಅಷ್ಟೇ ಮುಖ್ಯ. ಮತ್ತೆ, ಶೇಕ್ಸ್ ಪಿಯರನೇನೂ ಎಡಪಕ್ಷದವನೂ ಅಲ್ಲ..!! ಅಂದ ಮೇಲೆ ಸರ್ವ ಸದಸ್ಯರ ಬಹುಮತದಿಂದ ಸ್ಮರಣಿಕೆ ವಿನ್ಯಾಸ ಆಯ್ಕೆ ಮಾಡಿದ್ದು ಹೇಗೆ ತಪ್ರು?

ಇದೆಲ್ಲಕ್ಕಿಂತಲೂ ಕಳವಳ ಹುಟ್ಟಿಸುವುದೆಂದರೆ- ಈ ದುಷ್ಟ ಕೋಮು ಶಕ್ತಿಗಳು “ಬಹುಮತದ ಆಯ್ಕೆ” ಎಂಬ ಪ್ರಜಾಸತ್ತಾತ್ಮಕ ಮೌಲ್ಯಗಳನ್ನೇ ಧಿಕ್ಕರಿಸುವ ಹಂತ ತಲುಪಿರುವುದು..!!

ಮನಸೊಂದೇ ಮಡಿ ಉಳಿದದ್ದೆಲ್ಲ ಕಾಲ್ಮಡಿ.

ಮಹಾದೇವ ಹಡಪದ / ಧಾರವಾಡ

ನಟರಾಜ ನಾಟ್ಯಕಲೆಗಳ ಶಿವ ಹೌದು.

ಆದರೆ ಶೇಕ್ಷಪೀಯರ್ ಕೂಡ ನಾಟಕ ರಂಗಕ್ಕೆ ದೊರೆಯೇ ಹೌದು.

ಕುರುಡು ಆಧ್ಯಾತ್ಮ ಅರಿವು ಇವೆರಡರ ನಡುವಿನ ವ್ಯತ್ಯಾಸ ಗೊತ್ತಿದ್ದೂ ನಟರಾಜನ ಲೋಗೋ ಬೇಕೆಂದು ವಾದಿಸುತ್ತಾರಲ್ಲ…! ಗ್ಲೋಬ್ ಪರಿಕಲ್ಪನೆಗೂ ನಟರಾಜ ಶಿಲ್ಪಕ್ಕೂ ವ್ಯತ್ಯಾಸವೇನೂ ಇಲ್ಲ.

ಒಂದು ಸಣ್ಣ ಗುಂಡುಕಲ್ಲಿನಲ್ಲೂ ಜನಪದರು‌ ಶಿವನನ್ನು ಹುಡುಕಿಕೊಳ್ಳುತ್ತಾರೆ. ನನಗೆ ಈ ಅಕಾಡೆಮಿಯ ಹೊಸ ಲೋಗೋ ನೋಡಿದಾಗಲೂ ಶಿವನಂತೆಯೇ ಕಾಣಿಸಿತು. ಲೋಗೋ ವಿಷಯದಲ್ಲಿ ಶುರುವಾಗಿರುವ ಮಾತುಕತೆ ನೋಡಿದಾಗ ನನಗೆ ನವಲಗುಂದ ನಾಗಲಿಂಗಜ್ಜಾರ ಮಾತು ನೆನಪಿಗೆ ಬಂತು. ಮನಸೊಂದೇ ಮಡಿ ಉಳಿದದ್ದೆಲ್ಲ ಕಾಲ್ಮಡಿ.

ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರು ಕ್ರಿಯಾಶೀಲವಾಗಿದ್ದೀರಿ ಹಾಗಾಗಿ ಕೆಲವರು ಸಲ್ಲದ ತಕರಾರುಗಳನ್ನು ಸೃಷ್ಟಿಸಿ ಸಾಂಸ್ಕೃತಿಕ ರಾಜಕಾರಣಕ್ಕೆ ಮುಂದಾಗಿದ್ದಾರೆ. ನನಗಂತೂ ಈ ಲೋಗೋ ಬಹಳ ಹಿಡಿಸಿತು. ಅಕಾಡೆಮಿಯ ಈ ನಡೆ ಸಾಂದರ್ಭಿಕವಾಗಿ ಸರಿಯಾಗಿದೆ. ನೀವು ಮುಂದುವರೆಯಿರಿ ನನ್ನ ಸಂಪೂರ್ಣ ಬೆಂಬಲವಿದೆ.

2 Responses

  1. Lalitha siddabasavayya says:

    ನಟರಾಜನ ಲೋಗೋ ಬಹಳ ಚೆನ್ನಾಗಿತ್ತು. ಎಷ್ಟೆಷ್ಟು ಆಲೋಚಿಸಿದರೂ ನನಗೇನೋ “ನಟರಾಜ” ನಾಟಕಕ್ಕೆ ಸಮರ್ಪಕವಾಗಿ ಹೊಂದುತ್ತಾನೆ ಅನಿಸುತ್ತದೆ. ಈ ಹೊಸ ಲೋಗೋ ಪರವಾಗಿಲ್ಲ, ಆದರೆ ನಟರಾಜನಷ್ಟು ಆಕರ್ಷಕವಾಗೇನೂ ಕಾಣುತ್ತಿಲ್ಲಪ್ಪ. ಲೋಕೋ ಭಿನ್ನರುಚಿಃ ಅಂದುಕೊಂಡು ಸುಮ್ಮನಾಗಬೇಕಷ್ಟೆ

  2. anamika says:

    Kambararu kuda Komu vyadige olagadareno Nimma prakaara

Leave a Reply

%d bloggers like this: