fbpx

ಹೊಸ ಲಾಂಛನ ಎಲ್ಲ ಶೇಡ್ ಗಳನ್ನು ಪ್ರತಿನಿಧಿಸಿದೆಯೇ?

ಕರ್ನಾಟಕ ನಾಟಕ ಅಕಾಡೆಮಿಯ  ಹೊಸ ಸ್ಮರಣಿಕೆಯ ಚರ್ಚೆ ಮುಂದುವರಿದಿದೆ..

ಪ್ರಶಸ್ತಿ ಫಲಕ ಹಾಗೂ ಲೋಗೋ ವಿನ್ಯಾಸ ಬದಲಾವಣೆಯ ವಿಷಯದ ಕುರಿತು ಶಶಿಕಾಂತ ಯಡಹಳ್ಳಿ 

ಬರೆದ ಲೇಖನಕ್ಕೆ ಈಗ ಇನ್ನಿಬ್ಬರು  ನೀಡಿದ ಪ್ರತಿಕ್ರಿಯೆ ಇಲ್ಲಿದೆ..

 

 

 

ಪ್ರಸಾದ್ ರಕ್ಷಿದಿ 

 

 

 

ನಾಟಕ ಅಕಾಡಮಿ  ಪ್ರಶಸ್ತಿ ಪ್ರದಾನ  ಮಾಡುವಾಗ ಒಂದಷ್ಟು  ಹಣ, ಹಾರ ತುರಾಯಿ, ಶಾಲು, ಒಂದು ಪ್ರಶಸ್ತಿ ಪತ್ರ,  ಒಂದು ಪ್ರಶಸ್ತಿ  ಫಲಕ ಮತ್ತು  ಒಂದು ಶಿಲ್ಪ (ನಟರಾಜನ ಶಿಲ್ಪ ಸಾಮಾನ್ಯವಾಗಿ ಕಂಚಿನದ್ದು) ಕೊಡುವುದು ಪದ್ಧತಿಯಾಗಿತ್ತು.

ಕರ್ನಾಟಕದಲ್ಲಿ ನಾಟಕ ಅಕಾಡೆಮಿಯಾದ ನಂತರ ನಿಧಾನವಾಗಿ ಯಕ್ಷಗಾನ, ಜಾನಪದ ಅಕಾಡೆಮಿಗಳೂ ಆದವು.

ನಾಟಕ ಅಕಾಡಮಿಯಲ್ಲಿ ಆಧುನಿಕ, ಸಾಂಪ್ರದಾಯಿಕ ಅಂದರೆ   ಕಂಪೆನಿ ಶೈಲಿಯ ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ಹಾಗೇಯೇ  ಆಧುನಿಕದಲ್ಲಿ ರೆಪರ್ಟರಿಗಳು, ಹವ್ಯಾಸಿಗಳು, ಮತ್ತು ಗ್ರಾಮೀಣ ಸಮುದಾಯ ರಂಗಭೂಮಿ ಎಲ್ಲವೂ ಸೇರಿದೆ.

ಈ ಎಲ್ಲರಲ್ಲೂ  ನೂರಾರು ಜನರು ನಾಟಕ ಅಕಾಡಮಿಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಪ್ರಶಸ್ತಿ ಶಿಲ್ಪದಲ್ಲಿರುವ  (ಅದು  ಫಲಕವಲ್ಲ) ನಟರಾಜ ಅದರ ಬಗ್ಗೆ ಕೆಲವು ಸ್ಪಷ್ಟನೆಗಳು. ಅದು  ದೇವರ ವಿಗ್ರಹ ಅಲ್ಲ.

ಅದು ಪೂಜಾ ವಿಗ್ರಹವೂ ಅಲ್ಲ, ಅದು   ನಾಟ್ಯಕ್ಕೆ ಅಂದರೆ ನೃತ್ಯ ಮತ್ತು ಅಭಿನಯ (ನಾಟಕ)ಕ್ಕೆ ಸಂಬಂಧಿಸಿದ್ದು.

ಇನ್ನು ಆಂಗಿಕಂ… ಶ್ಲೋಕದಬಗ್ಗೆ

“ತನ್ನಮ ಸಾತ್ವಿಕಂ ಶಿವಂ” ಎನ್ನುವಲ್ಲಿ, ನಮಃ ಎಂದರೆ ನಮಸ್ಕಾರ ಅದು ಯೋಗಕ್ಕೆ ಸಂಬಂಧಿಸಿದ್ದು ಎರಡನ್ನು

ಸೇರಿಸುವುದು ಒಳಗೊಳ್ಳುವುದು ಎಂದು ಅರ್ಥ,  “ಧರ್ಮ” ದಲ್ಲಿ ನಮಸ್ಕಾರ ಇಲ್ಲ. ಕಾಲಿಗೆರಗುವುದು ಮಾತ್ರ,

ಶಿವಂ ಎಂದರೆ ಜಗತ್ತು (ಶೂನ್ಯ)  ಬ್ರಹ್ಮಾಂಡ. ಹಾಗಾಗಿ ನಟರಾಜ ಶಿಲ್ಪ ಮತ್ತು ಆಂಗಿಕಂ ಶ್ಲೋಕ ಧಾರ್ಮಿಕ(ಮತಸಂಬಂಧಿ) ಅಲ್ಲ ಆದ್ದರಿಂದ  ಯಾವುದೇ “ಶೇಡ್” ಗಳನ್ನು ನಟರಾಜ ವಿರೋಧಿಸುವುದೂ ಇಲ್ಲ ಬದಲಿಗೆ ಪ್ರತಿನಿಧಿಸುತ್ತಾನೆ.

ಈಗ ನಿರ್ಮಿಸಿರುವ ಶಿಲ್ಪ ಎಲ್ಲ ಶೇಡ್ ಗಳನ್ನು ಹೋಗಲಿ ರಂಗಭೂಮಿ ಎಲ್ಲ ಶೇಡ್ ಗಳನ್ನು ಪ್ರತಿನಿಧಿಸಿದೆಯೇ?

ಇನ್ನು ನಾಟಕ ಅಕಾಡಮಿ ಸ್ವಾಯತ್ತ ಸಂಸ್ಥೆ ಹೌದು.

ಆದರೆ ಪ್ರಜಾಸತ್ತಾತ್ಮಕವಲ್ಲ  ಅಂದರೆ ಸರ್ಕಾರ ಅಧ್ಯಕ್ಷರೂ ಸೇರಿದಂತೆ  ಎಲ್ಲ ಸದಸ್ಯರೂ ಸರ್ಕಾರದಿಂದ ನೇಮಕಗೊಂಡವರು. ಸರ್ಕಾರದಿಂದ ನೇಮಕಗೊಂಡವರ “ಸ್ವಾಯತ್ತತೆ” ನಮಗೆ ತಿಳಿಯದ್ದಲ್ಲ.

ಬದಲಾವಣೆ ಜಗದ ನಿಯಮ ಎಂಬ ವಾಕ್ಯ ಸುಂದರವಾಗಿದೆ. ಆದರೆ ಬದಲಾವಣೆಯ ಗುರಿ ಮತ್ತು ಉದ್ದೇಶವೂ ಸುಂದರವಾಗಿದ್ದರೆ ಒಳ್ಳೆಯದು. (ಸತ್ಯಂ ಶಿವಂ, ಸುಂದರಂ) . ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ನೇಮಿಸಿದ ಸಂಸ್ಥೆಗಳೆಲ್ಲ ಪ್ರಜಾಸತ್ತಾತ್ಮಕವೇ ಎಂಬ ತಾಂತ್ರಿಕ ನಿಲುವಿಗೆ ನನ್ನದೇನೂ ಆಕ್ಷೇಪ ಇಲ್ಲ.

ಇನ್ನು ಈಗ ಅಕಾಡಮಿ  ಪ್ರಶಸ್ತಿಗಾಗಿ ನಿರ್ಮಿಸಿರುವ ಶಿಲ್ಪ ಮತ್ತು ಕಲಾವಿದರ ಬಗ್ಗೆ ನನಗೆ ತಕಾರರೇನೂ ಇಲ್ಲ ನಾನು ತುಂಬ ಗೌರವಿಸುವ ಒಳ್ಳೆಯ ಕಲಾವಿದರವರು, ಆ ಶಿಲ್ಪವನ್ನು ಯಾವುದೇ ಕೊಡುಗೆ, ನೆನಪಿನ ಕಾಣಿಯಾಗಿ ನನಗೇ ಕೊಟ್ಟರೂ ಸಂತೋಷದಿಂದ, ಗೌರವದಿಂದ  ಸ್ವೀಕರಿಸುವೆ !!. ಆದರೆ ಪ್ರಶಸ್ತಿಗೆ (ನನಗೆ ನಟರಾಜ ಸಿಕ್ಕಿದ್ದಾನೆ) ನನ್ನ ಆಯ್ಕೆ, ಆದ್ಯತೆ, ಭಾವನಾತ್ಮಕ ಸಂಬಂಧ ನಟರಾಜನೊಂದಿಗೆ.

ನನ್ನಂತೆಯೇ ನೂರಾರು ರಂಗಕರ್ಮಿಗಳ ಮಾನಸ ಗುರು ನಾಟ್ಯಾಚಾರ್ಯ ಶಿವ- ನಟರಾಜ.

ಅದಕ್ಕೂ  ಕೆಲವು ತಕರಾರುಗಳಿವೆ, ಅದು ಶಿವ ತಾಂಡವದ ಶಿಲ್ಪ. ಯಾರನ್ನೋ ತುಳಿಯುತ್ತಿರುವ ಶಿಲ್ಪ ಎಂದು.

ಯಾರನ್ನೂ ತುಳಿಯದಿರುವ ನಟರಾಜನ, ಚಾಲುಕ್ಯ ಶಿಲ್ಪವೊಂದುಇದೆ.

(ಬದಲಾವಣೆಯೇ ಬೇಕೆನ್ನುವವರಿಗೆ) ಇನ್ನು  ಹಿಂದೆ ಮಾಡಿಲ್ಲವೇ  ಎಂದು ಪ್ರಶ್ನೆ ಮಾಡಲಾಗಿದೆ. ಹಿಂದೆ ಬದಲಾವಣೆ ಮಾಡಿದಾಗಲೂ ವಿರೋಧ , ಭಿನ್ನಾಭಿಪ್ರಾಯಗಳು ಬಂದಿವೆ.

ಅಲ್ಲದೆ ಹಿಂದೆ ಹಾಗೆ ಮಾಡಿದ್ದಾರೆ ನಾವುಮಾಡಿದರೇನು ಎನ್ನುವುದು ಸಮರ್ಥನೆಯಲ್ಲ.

ಬದಲಿಗೆ  ಇಂದಿನ ರಾಜಕಾರಣಿಯ ಮಾತಾಗುತ್ತದೆ.

ನಮ್ಮಂತವರ ತಕರಾರು ಪ್ರಶಸ್ತಿ ಶಿಲ್ಪದ ಬಗ್ಗೆ ಮಾತ್ರ ಜೊತೆಯಲ್ಲಿ ಕೊಡುವ ಫಲಕದಲ್ಲಿ

ಯಾವುದೇ ಬದಲಾವಣೆ  ಪ್ರಯೋಗ ಮಾಡಬಹುದಿತ್ತು.

ಸಮಾರಂಭದ ನಡೆಯುವಜಿಲ್ಲೆಯ ಊರಿನ  ವೈಶಿಷ್ಟ್ಯ ತಿಳಿಸುವ ರೀತಿಯಲ್ಲೂ ಮಾಡಬಹುದು.

ಹಿಂದೆ ನಾಟಕ ಅಕಾಡಮಿ  ಹಾಸನ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೀಡಿದ

ಸ್ಮರಣಿಕೆಯಲ್ಲಿ ನಾಟ್ಯರಾಣಿ ಶಾಂತಲೆಯ ಚಿತ್ರವಿತ್ತು.

ಜೊತೆಗೆ ದೇವೇಗೌಡರು ಮತ್ತು ಚೆನ್ನಮ್ಮನವರ ಚಿತ್ರವೂ….!!

ತುರ್ತು ಪರಿಸ್ಥಿತಿಯಲ್ಲಿ ನಾವೆಲ್ಲ ಕಷ್ಟ ಪಟ್ಟವರೇ.

ಆದರೆ ಈಗ ಆ ಎಲ್ಲರೂ ಬೇರೆ ಬೇರೆ ಪಕ್ಷಗಳಲ್ಲಿ ಹರಡಿಹೋಗಿದ್ದಾರೆ.

ಅಂದು ಜೈಲು ವಾಸ ಕಂಡವರು ಅನೇಕರು ಇಂದುಕಾಂಗ್ರೆಸ್ ಪಕ್ಷದಲ್ಲೂ ಇದ್ದಾರೆ,

ಅದರಲ್ಲಿ ಯಾವ ತಪ್ಪೂ ಇಲ್ಲ. ಇಂದಿನ ಅಧ್ಯಕ್ಷರ ಬಗ್ಗೆ ಅವರು ಒಳ್ಳೆಯ ವ್ಯಕ್ತಿ, ಒಳ್ಳೆಯ ಕೆಲಸಗಾರ

ಕನಸುಗಾರ ಎನ್ನುವ ವಿಚಾರ ಎಲ್ಲರಿಗೂ,ನನಗೆ ವೈಯಕ್ತಿಕವಾಗಿಯೂ  ಅವರ ಬಗ್ಗೆ ಅಪಾರ ಗೌರವ ಇದೆ.

ಅಧಿಕಾರಶಾಹಿ ಮತ್ತು ಪಟ್ಟಭದ್ರರ ನಡುವೆ ಕೆಲಸ ಮಾಡುವ ಅವರ ಕಷ್ಟದ ಅರಿವು ನಮಗೂ ಇದೆ.

ಆದರೆ ಭಿನ್ನಾಭಿಪ್ರಾಯದ ವಿರುದ್ಧ ಅವರ  ಹೊಗಳಿಕೆಯನ್ನು ಗುರಾಣಿಯಾಗಿಬಳಸಬಾರದು.

ಅದರ ಅಗತ್ಯ  ಅವರಿಗೂ ಇಲ್ಲ.

ಅಕಾಡೆಮಿಯ  ಸಾಮರಸ್ಯವನ್ನು ಎಲ್ಲರಲ್ಲೂ ಇರುವ.. ನಟರಾಜ ಕಾಪಾಡಬಲ್ಲ.

ಆರಂಕುಶಮಿಟ್ಟೊಡಂ.. ನೆನೆವುದೆನ್ನ ಮನಂ  ನಟರಾಜ ಶಿಲ್ಪಮಂ….!!!

 

ಹೊಸ ಲಾಂಛನ ನನಗೆ ಮೆಚ್ಚುಗೆಯಾಯಿತು

 

 

 

 

ಕೋಟಿಗಾನಹಳ್ಳಿ ರಾಮಯ್ಯ

 

 

 

ನಾಟಕ ಆಕಾಡೆಮಿ ಸ್ಮರಣಿಕೆಯ ಲಾಂಛನವಾಗಿ ಮೂರ್ತ, ಸಾಂಪ್ರದಾಯಿಕ ‘ನಟರಾಜ’ನ ಬದಲಿಗೆ ಅಮೂರ್ತ ‘ನಟರಾಜ’ನನ್ನು ಕಲಾವಿದ ಸುದೇಶ ಮಹಾನ್ ರೂಪಿಸಿರುವ ಮಾದರಿ ನೋಡಿದೆ.

ನಿಜಕ್ಕೂ ‘ಸ್ಥಗಿತ’ಕ್ಕೆ ಬದಲು ಪೂಜೆ, ಆರಾಧನೆಗಷ್ಟೇ ಮಿತಿಗೊಂಡಿದ್ದ ‘ಲಾಂಛನ’ವನ್ನು ನವೀಕರಿಸಿರುವುದು ನನಗೆ ಮೆಚ್ಚುಗೆಯಾಯಿತು.

ಏಕರೂಪ ನಟರಾಜ ಈಗ ಬಯಲು-ಬಹುರೂಪಿಯಾಗಿ ನನ್ನಲ್ಲಿ ಹಲವು ರೂಪುಗಳನ್ನು ಕಲ್ಪಿಸಿಕೊಳ್ಳುವಂತೆ ಮಾಡಿತು. ‘ಸ್ಥಗಿತ’-‘ಚಲನೆ’… ಸಮಕಾಲೀನತೆಯ ಬೀಜಮಂತ್ರ ಇದಕ್ಕೆ ನನ್ನ ಸಹಮತವಿದೆ.

ನಾನೂ ಒಬ್ಬ ನಾಟಕಕಾರ ರಂಗಕರ್ಮಿ.

 

Leave a Reply