fbpx

ಹರಿವು film making: ಬಸ್ಸಿನ ಲಗೇಜಿನಿಂದ ಅಪ್ಪನ ಮಡಿಲಿಗೆ..

ಸಿನಿಮಾ ಹುಚ್ಚಿನ ಹುಡುಗನೊಬ್ಬ ಕನಸುಗಳ ಮೂಟೆ ಹೊತ್ತು ಬೆಂಗಳೂರಿಗೆ ಬಂದವನು, ಚಿತ್ರಕಲೆ ಕಲಿತು ಅಷ್ಟಕ್ಕೇ ನಿಲ್ಲದೆ ಚಿತ್ರ ನಿರ್ಮಿಸುವ ಕನಸನ್ನು ನನಸು ಮಾಡಿದ ಕತೆಯೇ ಒಂದು ರೋಚಕ ಸಿನಿ ಪಯಣ.

ಹರಿವು ಚಿತ್ರ ಹರಿದು ಬಂದ ಕತೆಯ ಎರಡನೇ ಭಾಗ ಇಲ್ಲಿದೆ..

ಮಂಜುನಾಥ ಸೋಮಕೇಶವ ರೆಡ್ಡಿ..ಅರ್ಥಾತ್..ಮಂಸೋರೆ..!!

ಬಸ್ಸಿನ ಲಗೇಜಿನ ಒಳಗೆ ಬಾಕ್ಸಿನಲ್ಲಿ ಪಯಣಿಸಿದ್ದ ಮಗ ಅಪ್ಪನ ಮಡಿಲಿಗೆ ಬಂದ..

ಈ ಘಟನೆಯನ್ನು ನಾನು ಓದಿದ್ದು 2011ರ ಏಪ್ರಿಲ್ ತಿಂಗಳಲ್ಲಿ. ಈ ಘಟನೆ ಓದಿದ ಕೆಲವೇ ದಿನಗಳಿಗೆ ನಾನು ಸ್ನೇಹಿತರೊಬ್ಬರ ಕಿರುಚಿತ್ರಕ್ಕೆ ಕೆಲಸ ಮಾಡಲು ಕುಂದಗೋಳಕ್ಕೆ ಹೋಗಿದ್ದೆ. ಆ ಸಿನೆಮಾಗಾಗಿ ಕೆಲಸ ಮಾಡುತ್ತಿರುವ ಸಂಧರ್ಭದಲ್ಲಿ ಈ ಘಟನೆಯನ್ನು ಕಿರುಚಿತ್ರ ಮಾಡುವ ಕನಸು ಮೊಳಕೆಯೊಡೆಯಿತು.

ಜೊತೆಗೆ ಅಪ್ಪನಿಗೆ ಕೊಟ್ಟ ಮಾತಿನಂತೆ ನಾನು ಮಾಡುವ ಸಿನೆಮಾ ಇದೇ ಆಗಬೇಕೆಂದು ನಿರ್ಧರಿಸಿದೆ. ಅದು ಪೂರ್ಣಪ್ರಮಾಣದಲ್ಲಿ ಸಾಧ್ಯವಾಗದಿದ್ದರೂ ಕಿರುಚಿತ್ರವನ್ನೇ ಮಾಡುವ ಎಂದು ನಿರ್ಧಾರಕ್ಕೆ ಬಂದೆ. ಮುಂದೆ ಈ ಕತೆಯ ಬಗ್ಗೆ ಹಲವು ಮಿತ್ರರಲ್ಲಿ ಚರ್ಚಿಸುವಾಗ ಒಬ್ಬರು ಇದನ್ನು ಕಿರುಚಿತ್ರ ಮಾಡುವ ಬದಲು ಪೂರ್ಣಪ್ರಮಾಣದ ಸಿನೆಮಾನೇ ಮಾಡು ನಾವು ಸಹಾಯ ಮಾಡುತ್ತೇವೆ ಎಂದು ಧೈರ್ಯ ತುಂಬಿಸಿದರು. ಅಂಕಣದಲ್ಲಿ ಪೂರ್ಣ ಸಿನೆಮಾಗೆ ಆಗುವಷ್ಟು ವಿಷಯ ಇಲ್ಲದ ಕಾರಣ, ಇತ್ತ ಕಿರುಚಿತ್ರವೂ ಮಾಡದೇ ಸುಮ್ಮನಾದೆ.

ಆದರೆ ನಾನು ಸುಮ್ಮನಾದರೂ ಆ ಘಟನೆ ನನ್ನ ಬೆಂಬಿಡದೇ ಕಾಡುತ್ತಲೇ ಇತ್ತು. ಇತ್ತ ಅಪ್ಪನ ನೆನಪೂ ನನ್ನೊಂದಿಗೆ ಸಾಗುತ್ತಿದ್ದರಿಂದ ಈ ಘಟನೆಯನ್ನು ಮರೆಯುವುದು ಅಷ್ಟು ಸುಲಭವಾಗಿರಲಿಲ್ಲ. ಕಾಲ ಕಳೆದಂತೆಲ್ಲಾ ಇದು ಘಟನೆ ಹಲವು ಆಯಾಮಗಳ ಮೂಲಕ ಬೆಳೆಯುತ್ತಾ ಹೋಯಿತು. ಮನಸೊಳಗೆ ಇದರ ಹಲವು ವರ್ಷನ್ ಕತೆ ಸಿದ್ದವಾಗುತ್ತಾ ಹೋಯಿತು. ಆ ಕತೆಗೆ ಪೂರಕವಾಗಿ ಮತ್ತೊಂದು ಆಯಾಮದಲ್ಲಿ ಈ ಕತೆಯನ್ನು ಹೇಳುವ ಪ್ರಯತ್ನ ಹೇಗಿರುತ್ತದೆ ಎಂಬ ಯೋಚನೆಯೇ ಈ ಕತೆಯ ಶರಣಪ್ಪ, ಗವಿಸಿದ್ದನ ಜೊತೆಗೆ ಸುರೇಶನ ಪಾತ್ರ ಸೃಷ್ಠಿಯಾಯಿತು.

ಬಸ್ಸಿನ ಲಗೇಜಿನ ಒಳಗೆ ಬಾಕ್ಸಿನಲ್ಲಿ ಪಯಣಿಸಿದ್ದ ಮಗ ಅಪ್ಪನ ಮಡಿಲಿಗೆ ಬಂದ. ಆರ್ಥಿಕ ಸಮಸ್ಯೆಯ ಜೊತೆಗೆ ಚಿತ್ರೀಕರಣ ಸ್ನೇಹಿಯಾಗಿ, ಹಾಗೂ ನನಗೆ ಇದ್ದ ಅಪ್ಪನ ನೆನಪೂ ಜೊತೆಯಾಗಿ, ಬಸ್ಸಿನಲ್ಲಿ ಸಾಗಬೇಕಿದ್ದ ಅಪ್ಪ ಮಗನ ಪಯಣ ಓಮ್ನಿ ಕಾರಿಗೆ ಬಂತು. ಆ ಕಾರಿನ ಮೂಲಕ ಅಪ್ಪ ಮಗನನ್ನು ಊರಿಗೆ ತಲುಪಿಸುವ ಜವಾಬ್ದಾರಿ ಸುರೇಶನ ಪಾತ್ರದ ಮೇಲೆ ಬಿತ್ತು. ಹೀಗೆ ಕತೆಗೆ ಬೇಕಿರುವಷ್ಟು ವಿಷಯ ತಲೆಯೊಳಗೆ ತುಂಬಿಕೊಳ್ಳಲು ತೆಗೆದುಕೊಂಡ ಸಮಯ ಒಂದು ವರ್ಷ ಅಂದರೆ 2011 ಏಪ್ರಿಲ್‍ನಲ್ಲಿ ಓದಿದ್ದ ಘಟನೆ ವಿಷಯ ವಿಸ್ತಾರದ ಮೂಲಕ ಒಂದು ಸಿನೆಮಾಗೆ ಬೇಕಾಗುವಶ್ಟು ವಿಷಯ ತುಂಬಿಕೊಂಡಿದ್ದು 2012ರ ಏಪ್ರಿಲ್ ಹೊತ್ತಿಗೆ.

ಅಲ್ಲಿಯವರೆಗೂ ತಲೆಯೊಳಗೆ ಓಡುತ್ತಿದ್ದ ಕತೆ ಏಪ್ರಿಲ್ ತಿಂಗಳ ಮಧ್ಯದ ಹೊತ್ತಿಗೆ ಭಾರವಾಗಿ ಇನ್ನು ಹೊರಹಾಕ್ಲೇ ಬೇಕು, ತಲೆಯೊಳಗಿರುವ ಅಷ್ಟೂ ಕತೆಯನ್ನು ಚಿತ್ರಕತೆಯ ರೂಪದಲ್ಲಿ ಬರೆಯಲೇ ಬೇಕೆಂಬ ಮನಸಿನ ಒತ್ತಡ ಹೆಚ್ಚಾಗಿ, ಅದೊಂದು ದಿನ ಸಂಜೆ ನನ್ನ ಓಮ್ನಿ ಕಾರಲ್ಲಿ ಸೀದಾ ಹೊರಟೇ ಬಿಟ್ಟೆ. ಮನೆಯಲ್ಲಿದ್ದರೆ ಬರೆಯಲು ಸಾಧ್ಯವಾಗುವುದಿಲ್ಲ ಎಂದು ಅನಿಸಿ.. ಸೀದಾ ಕಾರಲ್ಲಿ ಊಟಿಯ ಕಡೆ ಹೋದೆ. ಅಲ್ಲೊಂದು ಸಣ್ಣ ಗೆಸ್ಟ್ ಹೌಸಿನಲ್ಲಿ ಉಳಿದುಕೊಂಡು ಅಲ್ಲಿ ತಲೆಯಲ್ಲಿದ್ದ ಅಷ್ಟೂ ಕತೆಯನ್ನು ಅಕ್ಷರ ರೂಪಕ್ಕೆ ಇಳಿಸಿದ ಮೇಲೆ ವಾಪಸ್ಸು ಬೆಂಗಳೂರಿಗೆ ಬಂದೆ.

 

ಬಂದವನೇ ಬರೆದಿರುವ ಸ್ಕ್ರಿಪ್ಟ್ ಹಿಡಿದುಕೊಂಡು ಹೋಗಿ ನಿಂತದ್ದು ಸಿನೆಮಾ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿದ ಗುರುಗಳಾದ ಅನಿಲ್‍ಕುಮಾರ್ ರವರ ಬಳಿ. ಅವರ ಬಳಿ ಹೋಗಿ ನಾನು ಬರೆದಿದ್ದ ಸ್ಕ್ರಿಪ್ಟ್ ಅನ್ನು ಅವರ ಕೈಗೆ ನೀಡಿ.. ಅದನ್ನು ಓದಿ ತಿದ್ದಿಕೊಡಬೇಕೆಂದು ಕೇಳಿದೆ. ಮೊದಲಿಗೆ ಅದರಲ್ಲಿ ತಮಗೆ ಅಷ್ಟು ಪರಿಣಿತಿ ಇಲ್ಲಾ ಎಂದು ನಿರಾಕರಿಸುತ್ತಲೇ, ನನ್ನ ಒತ್ತಾಯಕ್ಕೆ ಕಟ್ಟುಬಿದ್ದು.. ಅದರಲ್ಲಿ ತೊಡಗಿಸಿಕೊಂಡು.. ಪ್ರತೀ ಹಂತದಲ್ಲೂ ಅದನ್ನು ತಿದ್ದುತ್ತಾ ಸಂಪೂರ್ಣವಾಗಿ ಚಿತ್ರಕತೆಯ ರೂಪಕೊಟ್ಟು ಜೊತೆಗೆ ಸಂಭಾಷಣೆಯನ್ನೂ ಬರೆದರು.

ಈ ಕತೆಯಲ್ಲಿ ಮೂಲಕತೆ ಶರಣಪ್ಪ ಹಾಗೂ ಗವಿಸಿದ್ದನಾದರೆ, ಇದರ ಜೊತೆಜೊತೆಗೆ ಸಾಗುವ ಮತ್ತೊಂದು ಕತೆ ಸುರೇಶನದು. ಶರಣಪ್ಪನ ಕತೆಯನ್ನು ಘಟಿಸಿರುವ ಘಟನೆಯನ್ನು ಹಾಗೇ ಚಿತ್ರೀಕರಿಸಿದರೆ ಅದು ಸಾಕ್ಷ್ಯಚಿತ್ರವಾಗುವ ಅಪಾಯವಿತ್ತು. ಹಾಗಾಗಿ ನೇರವಾಗಿ ಶರಣಪ್ಪನ ಕತೆಯನ್ನು ಹೇಳದೇ ಸುರೇಶನ ಕತೆಯ ಮೂಲಕ ಶರಣಪ್ಪನ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾ ಇಡೀ ಚಿತ್ರಕತೆಯನ್ನು ನಿರೂಪಿಸುವುದೆಂದು ಅನಿಲ್ ಸರ್ ಹಾಗೂ ನಾನು ನಿರ್ಧರಿಸಿದೆವು. ಇಲ್ಲಿ ಬಾಲ್ಯದಲ್ಲಿರುವ ಮಗನ ಬಗ್ಗೆ ತಂದೆಯ ಕಾಳಜಿಯನ್ನು ನಿರೂಪಿಸುತ್ತಲೇ ಅತ್ತ ಬೆಳೆದ ಮಗ, ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ಪರಿಂiÀiನ್ನು ಪ್ರಸ್ತುತ ನಗರೀಕರಣದ ಹಿನ್ನೆಲೆಯಲ್ಲಿ ಕಟ್ಟಿಕೊಡುವುದು ನಮ್ಮ ಉದ್ದೇಶವಾಗಿತ್ತು.

ಇಂದಿನ ನಗರೀಕರಣದ ಒತ್ತಡದಲ್ಲಿ ತಮ್ಮ ಕೆಲಸಗಳ ನಡುವೆ ಮನೆ ಹಾಗೂ ಹೆತ್ತವರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಸುರೇಶನ ಪಾತ್ರದ ಮೂಲಕ ಕಟ್ಟಲಾಯಿತು. ಅದೊಂದು ಸರ್ಕಾರಿ ಆಸ್ಪತ್ರೆ. ಅಲ್ಲಿ ತಂದೆ ಮಗನ ಚಿಕಿತ್ಸೆಗಾಗಿ ಪರಿತಪಿಸುತ್ತಿದ್ದರೆ. ಅದೇ ಆಸ್ಪತ್ರೆಯ ಮತ್ತೊಂದು ವಾರ್ಡ್ ಅಲ್ಲಿ ಮಗ ತನ್ನ ಕೆಲಸಗಳ ನಡುವೆ ತಂದೆಗೆ ಚಿಕಿತ್ಸೆ ಕೊಡುತ್ತಿದ್ದಾನೆ. ಹೀಗೆ ಅನಾಮಿಕರಾದ ಒಂದು ಮಗುವಿನ ಅಪ್ಪ, ಮತ್ತೊಬ್ಬ ತಂದೆಯ ಮಗ ತಾವು ಸಾಗಬೇಕಿರುವ ಹಾದಿಯಲ್ಲಿ ಒಂದೆಡೆ ಸೇರುತ್ತಾರೆ. ಇಬ್ಬರ ಗುರಿಗಳೂ ಬೇರೆ. ಆದರೆ ಪಯಣ ಒಂದೇ. ಆ ಪಯಣದ ಮೂಲಕ ಶರಣಪ್ಪನ ಜೀವನದ ನೆನಪುಗಳು ಹಿಂದೆ ಸಾಗುತ್ತಾ ಕತೆ ಅನಾವರಣಗೊಳ್ಳುತ್ತದೆ. ಈ ಸಿನೆಮಾದ ಶರಣಪ್ಪ ಮತ್ತು ಆತನ ಕುಟುಂಬ ಉತ್ತರ ಕರ್ನಾಟಕದವರಾದ್ದರಿಂದ ಅವರ ಸಂಭಾಷಣೆಯನ್ನು ಉತ್ತರ ಕರ್ನಾಟಕದ ಸೊಗಡಿಗೆ ಅನುವಾದಿಸಿದವರು ಹಿರಿಯ ಪತ್ರಕರ್ತರಾದ ಚಾಮರಾಜ ಸವಡಿಯವರು.

ಚಿತ್ರಕತೆ ಏನೋ ಸಿದ್ದವಾಯಿತು ಆದರೆ ಶರಣಪ್ಪನ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ಪ್ರಶ್ನೆ ಎದುರಾಯಿತು. ಆಗ ಹಲವರು ಹಿರಿಯ ನಟರಾದ ಅಚ್ಯುತ್‍ಕುಮಾರ್ ರಂಗಾಯಣ ರಘುರವರ ಹೆಸರನ್ನು ಸೂಚಿಸಿದರು. ಆದರೆ ಅವರಂತ ಹಿರಿಯರಿಗೆ ಸಂಭಾವನೆ ನೀಡುವಷ್ಟು ಹಣ ನನ್ನ ಬಳಿ ಇರಲಿಲ್ಲ. ಒಂದಿಬ್ಬರು ನನ್ನ ರಂಗ ಗೆಳೆಯರನ್ನು ಸಂಪರ್ಕಿಸಿದೆ. ಕಾರಣಾಂತರಗಳಿಂದ ಅವರಿಗೆ ಸಾಧ್ಯವಾಗಲಿಲ್ಲ. ಆಗ ಅದೇ ಸಮಯದಲ್ಲಿ ನಾನು ಸ್ನೇಹಿತರ ಸಿನೆಮಾ ಒಂದಕ್ಕೆ ನಿರ್ದೇಶನ ವಿಭಾಗದಲ್ಲಿ ಸಹಾಯ ಮಾಡುತ್ತಿದ್ದೆ. ಅವರ ಸಿನೆಮಾಗೆ ಬೇಕಾದ ನಟ ನಟಿಯರನ್ನು ಆಯ್ಕೆ ಮಾಡುವ ಕೆಲಸ ನನ್ನದಾಗಿತ್ತು. ಹಾಗೇ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದ ಸಂಧರ್ಭದಲ್ಲೇ ನನ್ನ ಕಣ್ಣಿಗೆ ಬಿದ್ದವರು ಸಂಚಾರಿ ವಿಜಯ್. ಅವರಿಗೆ ಆ ಸಿನೆಮಾದ ಒಂದು ಸಂಭಾಷಣೆ ನೀಡಿ ನಟಿಸಲು ಹೇಳಿದೆವು. ಅವರು ಕೇವಲ ಒಂದೇ ನಿಮಿಷದಲ್ಲಿ ಪಾತ್ರದ ಒಳಹೊಕ್ಕು ಸಂಭಾಷಣೆ ಹೇಳಿದ ಪರಿಗೆ ನಾನು ದಂಗಾಗಿ ಹೋದೆ.

ಮುಂದೆ ನನ್ನ ಸ್ನೇಹಿತನ ಸಿನೆಮಾದ ಚಿತ್ರೀಕರಣ ತಾತ್ಕಾಲಿಕವಾಗಿ ಮುಂದೂಡಬೇಕಾಯಿತು. ಆಗ ಮುಂದೇನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ನಾನು ನನ್ನ ಈ ಹರಿವು ಸಿನೆಮಾ ಚಿತ್ರೀಕರಣ ಮಾಡೋಣ ಎಂದು ನಿರ್ಧರಿಸಿದೆ. ಅದಕ್ಕೆ ನನ್ನ ನಿರ್ದೇಶಕ ಸ್ನೇಹಿತ ಸರಿ ಶುರು ಮಾಡೋಣ. ಅದಕ್ಕೆ ಬೇಕಾದ ಹಣಕಾಸು ನಾನು ಹೊಂದಿಸುತ್ತೇನೆ ಎಂದು ಧೈರ್ಯ ತುಂಬಿದ. ಈ ಹಿಂದೆ ಕಿರುಚಿತ್ರ ಮಾಡಬೇಕೆಂದಿದ್ದಾಗ ಅದನ್ನು ಪೂರ್ಣಪ್ರಮಾಣದ ಸಿನೆಮಾ ಮಾಡು ಎಂದು ಪ್ರೇರೇಪಿಸಿದ್ದ ಅವಿನಾಶ್ ಶೆಟ್ಟಿ ಕ್ಯಾಮೆರಾ ನೀಡುವುದಾಗಿ ಹೇಳಿದ. ಕೂಡಲೇ ನನಗೆ ಪರಿಚಿತರಾದ ಹಲವು ಕಲಾವಿದ ಗೆಳೆಯರನ್ನು ವಿವಿದ ಪಾತ್ರಕ್ಕೆ ಆಯ್ಕೆ ಮಾಡಿ ಚಿತ್ರೀಕರಣ ಪ್ರಾರಂಭಿಸಿಯೇ ಬಿಟ್ಟೆವು. ಸ್ನೇಹಿತ ಹಣವನ್ನು ಒದಗಿಸುವ ಭರವಸೆ ನೀಡಿದ್ದರಿಂದ ನಾನು ಅಕ್ಕನ ಮದುವೆಗೆಂದು ಇರಿಸಿದ್ದ ಅಪ್ಪನ ಪೆನ್‍ಷನ್ ಹಣವನ್ನು ಚಿತ್ರೀಕರಣದ ಆರಂಭದ ದಿನದ ಖರ್ಚುಗಳಿಗೆ ವಿನಿಯೋಗಿಸಿದೆ.

ಮೊದಲಿಗೆ ಕಾರಿನಲ್ಲಿ ಪ್ರಯಾಣ ಮಾಡುವ ಭಾಗಗಳನ್ನು ಚಿತ್ರೀಕರಿಸುವುದು ಎಂದು ನಿರ್ಧರಿಸಿದೆವು.. ಮೊದಲ ಮೂರು ದಿನ ಕಾರಿನಲ್ಲಿ ಪ್ರಯಾಣ ಮಾಡುವ ಭಾಗ ಚಿತ್ರೀಕರಿಸುವುದು. ಹಾಗೇ ಪ್ರಯಾಣವನ್ನು ಮುಂದುವರೆಸುತ್ತಾ ಗಂಗಾವತಿ ತಲುಪಿ, ಅಲ್ಲಿ ಪಕ್ಕದಲ್ಲೇ ಇದ್ದ ಕಂಪ್ಲಿಯ ರೆಡ್ಡಿ ಕ್ಯಾಂಪಿನ ಹಳ್ಳಿಯೊಂದರ ಗುಡಿಸಲು ಮನೆಯಲ್ಲಿ ಮನೆಯ ಭಾಗವನ್ನು ಚಿತ್ರೀಕರಿಸಿಕೊಂಡು ನಂತರ ಬೆಂಗಳೂರಿಗೆ ಹಿಂದಿರುಗುವುದು. ಬೆಂಗಳೂರಿಗೆ ಬಂದ ನಂತರ ಉಳಿದ ಭಾಗವನ್ನು ಚಿತ್ರೀಕರಿಸುವುದು ಎಂದು ನಮ್ಮ ಯೋಜನೆಯಾಗಿತ್ತು.

ಆದರೆ ಸರಿಯಾದ ಪೂರ್ವ ತಯಾರಿ ಇಲ್ಲದೆ ಚಿತ್ರೀಕರಣ ಪ್ರಾರಂಭಿಸಿದರ ಫಲ ಮೊದಲನೇ ದಿನವೇ ಅನುಭವಿಸಿದೆವು. ಇಡೀ ದಿನ ಚಿತ್ರೀಕರಣ ಮಾಡಿದರೂ ಒಂದೇ ಒಂದು ದೃಶ್ಯವನ್ನು ಪೂರ್ಣಗೊಳಿಸಲಾಗಲಿಲ್ಲ. ನನಗೆ ನಿರ್ದೇಶನ ಮೊದಲ ಅನುಭವ. ನಾನು ಮಾನಸಿಕವಾಗಿ ನಿರ್ದೆಶನಕ್ಕಿಂತ ಹೆಚ್ಚಾಗಿ ಕಲಾ ನಿರ್ದೇಶಕನಾಗೇ ಇದ್ದೆ. ಅಲ್ಲಿ ಇಡೀ ತಂಡದ ಮೇಲೆ ನನಗೆ ಹಿಡಿತ ಇರಲಿಲ್ಲ. ಒಬ್ಬೊಬ್ಬರದು ಒಂದೊಂದು ಹಾದಿ. ಛಾಯಾಗ್ರಾಹಕ ಆನಂದ್ ಸುಂದರೇಶ ಕಾಲೇಜಿನ ದಿನಗಳಿಂದಲೂ ಗೆಳೆಯ. ಆದರೆ ಅಲ್ಲಿ ಗೆಳೆತನ ನಮ್ಮ ಸಿನೆಮಾ ಚಿತ್ರೀಕರಿಸಲು ಉಪಯೋಗಕ್ಕೆ ಬರುವುದಿಲ್ಲ. ಅದು ಎಲ್ಲವೂ ಪೂರ್ವ ಯೋಜಿತವಾಗಿರಬೇಕು ಆಗ ಮಾತ್ರ ನಾವಂದುಕೊಂಡಂತೆ ಚಿತ್ರೀಕರಣ ಮಾಡಲು ಸಾಧ್ಯ. ಇಲ್ಲಿ ಯಾವ ಯೋಜನೆಯೂ ಇರಲಿಲ್ಲ. ವಿಜಯ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲಾ.. ತಮಗೆ ತೋಚಿದಂತೆ ವರ್ತಿಸುತ್ತಿದ್ದರು.

ಇದೆಲ್ಲದರ ಪರಿಣಾಮ ಮೂರು ದಿನದಲ್ಲಿ ಮುಗಿಯಬೇಕಿದ್ದ ಪ್ರಯಾಣದ ಭಾಗದ ಚಿತ್ರೀಕರಣಕ್ಕೆ ಐದು ದಿನಗಳು ಕಳೆದುಹೋಗಿತ್ತು. ಆದರೆ ನಾನು ಕಲ್ಪಿಸಿದಂತೆ ಯಾವ ದೃಶ್ಯಗಳೂ ಚಿತ್ರೀಕರಣವಾಗೇ ಇರಲಿಲ್ಲ. ಚಿತ್ರೀಕರಿಸಿಬೇಕಾಗಿದ್ದ ದೃಶ್ಯಗಳು ಇನ್ನೂ ಉಳಿದಿದ್ದವು. ಆಗ ಮತ್ತೊಂದು ಸಮಸ್ಯೆ ಎದುರಾಯಿತು ಸುರೇಶನ ಪಾತ್ರ ಮಾಡಲು ಬಂದಿದ್ದ ಗೆಳೆಯ ಅದಾಗಲೇ ಸಿನೆಮಾರಂಗದಲ್ಲಿ ಗುರುತಿಸಿಕೊಂಡಿದ್ದ, ಅವನ ಬಳಿ ನಾವು ಕೇಳಿದ್ದಿದು ಬರೀ ಆರು ದಿನಗಳು ಮಾತ್ರ. ಅದರಲ್ಲಿ ಐದು ದಿನಗಳು ಇಲ್ಲೇ ಕಳೆದು ಹೋಗಿತ್ತು. ಸರಿ ಉಳಿದದ್ದನ್ನು ಚಿತ್ರೀಕರಿಸುವುದರ ಬಗ್ಗೆ ಮತ್ತೆ ಯೋಚಿಸಿದರಾಯ್ತು ಅಂತ ನಿರ್ಧರಿಸಿ ಅಲ್ಲಿಂದ ಗಂಗಾವತಿಯತ್ತ ಹೊರಟೆವು. ಆದರೆ ಸುರೇಶನ ಪಾತ್ರ ಮಾಡಲು ಬಂದಿದ್ದ ಗೆಳೆಯನಿಗೆ ಇನ್ನು ಒಂದು ದಿನದಲ್ಲಿ ಬಾಕಿ ಉಳಿದಿರುವ ಅಷ್ಟೂ ದೃಶ್ಯಗಳನ್ನು ನಾವು ಮುಗಿಸುತ್ತೇವೆ ಎಂಬ ಯಾವ ನಂಬಿಕೆಯೂ ಇರಲಿಲ್ಲ. ಹಾಗಾಗಿ ತಾನು ವಾಪಸ್ಸು ಬೆಂಗಳೂರಿಗೆ ಹೋಗುವುದಾಗಿ ತಿಳಿಸಿ.. ಹೊಸಪೇಟೆಯಿಂದ ವಾಪಸ್ಸು ಹೋಗಿಬಿಟ್ಟ.

ಆತ ಮುಖ್ಯ ಪಾತ್ರದಾರಿ. ಆತನೇ ಹೋದ ಮೇಲೆ ಚಿತ್ರೀಕರಣ ಅಂದುಕೊಂಡಂತೆ ಪೂರ್ಣಗೊಳ್ಳುವುದಿಲ್ಲ ಎಂಬುದು ಅರ್ಥವಾಗಿತ್ತು. ಹಾಗಂತ ನಾವು ವಾಪಸ್ಸು ಹೋಗುವುದು ಸಾಧ್ಯವಿರಲಿಲ್ಲ. ಸರಿ ಶರಣಪ್ಪನ ಭಾಗದ ದೃಶ್ಯಗಳನ್ನಾದರೂ ಮುಗಿಸೋಣವೆಂದು ನಿರ್ಧರಿಸಿದೆವು. ನಾವು ಆಯ್ಕೆ ಮಾಡಿಕೊಂಡಿದ್ದ ಕಂಪ್ಲಿ ಬಳಿಯ ಮನೆಯಲ್ಲಿ ಮೊದಲೆರೆಡು ದಿನ ಹೇಗೋ ಸಣ್ಣ ಪುಟ್ಟ ಸಮಸ್ಯೆಗಳ ನಡುವೆ 7-8 ದೃಶ್ಯಗಳನ್ನು ಚಿತ್ರೀಕರಿಸಿಕೊಂಡೆವು. ಅಲ್ಲಿ ಎರಡನೆಯ ದಿನ ಎರಡು ದೊಡ್ಡ ಸಮಸ್ಯೆಗಳು ದುತ್ತೆಂದು ಎದುರಾಯಿತು. ಒಂದು ಕ್ಯಾಮೆರಾದಲ್ಲಿ ಸೆನ್ಸರ್ ಸಮಸ್ಯೆಯಾಗಿ ಡಾಟ್ಸ್ ಕಾಣಿಸತೊಡಗಿತು. ಗಾಬರಿಯಾಗಿ ಅಲ್ಲಿಯವರೆಗೂ ಚಿತ್ರೀಕರಿಸಿದ್ದ ಅಷ್ಟೂ ದೃಶ್ಯಗಳನ್ನು ಪರಿಶೀಲಿಸಿದರೆ ಆ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ ಅಷ್ಟೂ ಶಾಟ್ಸ್ ಅಲ್ಲಿ ಆ ಡಾಟ್ಸ್ ಇತ್ತು.

ಅಲ್ಲೇ ಇದ್ದ ಸ್ನೇಹಿತ ಅದನ್ನು ಎಡಿಟಿಂಗ್ ಅಲ್ಲಿ ಸರಿ ಮಾಡಿಕೊಳ್ಳಬಹುದು ಎಂದು ಆ ಸಮಯಕ್ಕೆ ಸಮಾಧಾನ ಮಾಡಿದ. ನನಗೆ ಎದುರಾಗಿದ್ದ ಇನ್ನೊಂದು ಸಮಸ್ಯೆ ನನ್ನ ಬಳಿ ಇದ್ದ ಹಣ ಖಾಲಿ. ಅಷ್ಟರ ಒಳಗೆ ಹಣ ಒದಗಿಸುತ್ತೇನೆ ಎಂದು ಹೇಳಿದ್ದ ಸ್ನೇಹಿತ ಸದ್ಯಕ್ಕೆ ಆಗುವುದಿಲ್ಲ. ಇನ್ನೂ ನನಗೆ ಕಾಲಾವಕಾಶ ಬೇಕು ಎಂದು ಕೈಚೆಲ್ಲಿದ. ಏನು ಮಾಡುವುದೋ ತಿಳಿಯದೇ ಚಿಂತೆಯಲ್ಲಿದ್ದಾಗ, ದಿಡೀರನೆ ಇನ್ನೊಂದು ಸಮಸ್ಯೆ ಎದುರಾಯಿತು. ನಾವು ಚಿತ್ರೀಕರಿಸುತ್ತಿದ್ದ ಮನೆಯ ಮಾಲೀಕ ತನಗೆ ಪ್ರತಿದಿನಕ್ಕೆ ಹತ್ತು ಸಾವಿರ ನೀಡಿದರೆ ಮಾತ್ರ ಚಿತ್ರೀಕರಣ ಮುಂದುವರೆಸಲು ಬಿಡುತ್ತೇನೆ ಇಲ್ಲವಾದರೆ ಯಾವುದೇ ಕಾರಣಕ್ಕೂ ಅಲ್ಲಿ ಚಿತ್ರೀಕರಣ ಮಾಡಲು ಬಿಡುವುದಿಲ್ಲ ಎಂದು ಜಗಳ ಮಾಡತೊಡಗಿದ.

ಏನು ಮಾಡುವುದೋ ತಿಳಿಯದಂತಾಗಿತ್ತು. ಹಣದ ಸಮಸ್ಯೆ ಆದಿನ ಎಷ್ಟಿತ್ತೆಂದರೆ ಆದಿನ ಲಾಡ್ಜಿಗೆ ಬಿಲ್ ಕಟ್ಟಿದರೆ ಊಟಕ್ಕೆ ಇಲ್ಲ. ಊಟಕ್ಕೆ ನೀಡಿದರೆ ಮಲಗಲು ಜಾಗ ಇಲ್ಲ. ಸಾಕಷ್ಟು ಹೊತ್ತು ಯೋಚನೆ ಮಾಡಿ ಅಮ್ಮನಿಗೆ ಕಾಲ್ ಮಾಡಿ ಸ್ವಲ್ಪ ಹಣವನ್ನು ಅಕೌಂಟಿಗೆ ಹಾಕುವುದಕ್ಕೆ ಹೇಳಿ.. ಸೀದಾ ಗಂಗಾವತಿಗೆ ಬಂದು ಸಣ್ಣದಾದ ಲಾಡ್ಜೊಂದರಲ್ಲಿ ರೂಮ್ ಮಾಡಿ, ಹಣವನ್ನು ಬೆಳಗ್ಗೆ ನೀಡುವುದಾಗಿ ಒಪ್ಪಿಸಿ. ಇರುವ ಹಣದಲ್ಲಿ ಊಟ ಮಾಡಿದೆವು. ಆ ರಾತ್ರಿ ಪೂರ ಏನು ಮಾಡುವುದೋ ಎಂದು ಯೋಚಿಸುತ್ತಾ ಕಳೆದವನು ಬೆಳಗ್ಗೆ ಶೂಟಿಂಗ್ ಸಧ್ಯಕ್ಕೆ ನಿಲ್ಲಿಸೋಣ. ವಾಪಸ್ಸು ಬೆಂಗಳೂರಿಗೆ ಹೋಗಿ ಹಣವನ್ನು ಹೊಂದಿಸಿಕೊಂಡು .. ಇನ್ನೂ ನೀಟಾಗಿ ಪ್ಲಾನ್ ಮಾಡ್ಕೊಂಡ್ ಬರೋಣ ಎಂದು ಇಡೀ ತಂಡದವರನ್ನು ಒಪ್ಪಿಸಿದೆ. ಹನ್ನೊಂದು ಗಂಟೆಗೆ ಹಣ ಅಕುಂಟಿಗೆ ಬಂತು. ಆನಂತರ ಎಲ್ಲರು ಹೊರಟು ಬೆಂಗಳೂರನ್ನು ಸೇರಿಕೊಂಡೆವು.

(ನಾಳೆಗೆ ಮುಂದುವರಿಯುವುದು..)

Leave a Reply