fbpx

ಹರಿವು Film Making- ಕೊನೆಗೂ ಅಲ್ಲೊಂದು ಪವಾಡ ನಡೆದೇ ಹೋಯಿತು..!!

ಭಾಗ – 4

“ಸಿನಿಮಾ ಹುಚ್ಚಿನ ಹುಡುಗನೊಬ್ಬ ಕನಸುಗಳ ಮೂಟೆ ಹೊತ್ತು ಬೆಂಗಳೂರಿಗೆ ಬಂದವನು, ಚಿತ್ರಕಲೆ ಕಲಿತು ಅಷ್ಟಕ್ಕೇ ನಿಲ್ಲದೆ ಚಿತ್ರ ನಿರ್ಮಿಸುವ ಕನಸನ್ನು ನನಸು ಮಾಡಿದ ಕತೆಯೇ ಒಂದು ರೋಚಕ ಸಿನಿ ಪಯಣ.

ಹರಿವು ಚಿತ್ರ ಹರಿದು ಬಂದ ಕತೆಯ ಕೊನೇ ಭಾಗ ಇಲ್ಲಿದೆ..

ಕಥೆ ಹೇಳ್ತಾರೆ ನಿರ್ದೇಶಕ ಮಂಜುನಾಥ ಸೋಮಕೇಶವ ರೆಡ್ಡಿ..ಅರ್ಥಾತ್..ಮಂಸೋರೆ..!!

ಕೊನೆಗೂ ಅಲ್ಲೊಂದು ಪವಾಡ ನಡೆದೇ ಹೋಯಿತು..!!

ಚಿತ್ರೀಕರಣ ಪೂರ್ಣಗೊಳಿಸುವ ಮೂಲಕ ಮೊದಲ ಹಂತವನ್ನು ಹೇಗೋ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೆ. ಮುಂದಿನ ಹಂತವೇ ನನಗೆ ಚಾಲೆಂಜಿಂಗ್ ಆಗಿದ್ದಿದ್ದು.

ಕಾರಣ ನಾನು ಯಾರ ಬಳಿಯೂ ನಿರ್ದೇಶನ ಕಲಿಯದಿದ್ದರೂ ಕಲಾ ನಿರ್ದೇಶನ ಮಾಡಿದ ಅನುಭವ ಮೊದಲ ಹಂತ ದಾಟಲು ಸಹಾಯ ಮಾಡಿತ್ತು. ಆನಂತರದ ಕೆಲಸದ ಬಗ್ಗೆ ಎಳ್ಳಷ್ಟೂ ಅರಿವಿರಲಿಲ್ಲ. ಕಾರಣ ನಾನು ಯಾವ ಪ್ರಾಜೆಕ್ಟಿನಲ್ಲೂ ಪೋಸ್ಟ್ ಪ್ರೊಡಕ್ಷನ್ ಅಲ್ಲಿ ಕೂತಿರಲಿಲ್ಲ.

ಸಂಕಲನದಿಂದ ಶುರುವಾಗಿ ಸಂಪೂರ್ಣವಾಗಿ ಸಿನೆಮಾವನ್ನು ರೂಪಿಸುವ ಪ್ರತೀ ಹಂತವೂ ನನಗೆ ಹೊಸದು. ಆಗ ನಾನು ಮೊರೆ ಹೋದದ್ದು ಅಂತರ್ಜಾಲವನ್ನು. ಅಲ್ಲಿ ಪ್ರತೀ ಹಂತವನ್ನು ಅಭ್ಯಸಿಸುತ್ತಾ ಕೆಲಸಗಳನ್ನು ಪೂರ್ಣಗೊಳಿಸತೊಡಗಿದೆ. ನಾನು ಬರೆದುಕೊಂಡ ಚಿತ್ರಕತೆಯ ಚಿತ್ರೀಕರಣವನ್ನು ಮುಂದಿರಿಸಿಕೊಂಡು, ಆ ಕತೆ ಬರೆಯುವಾಗ ನನ್ನೊಳಗೆ ಮೂಡಿದ್ದ ಭಾವೋತ್ಕರ್ಷವನ್ನು ಸಂಕಲನಕಾರನ ಸಹಾಯದಿಂದ ದೃಶ್ಯಗಳಲ್ಲಿ ಜೋಡಿಸುತ್ತಾ ಹೋದೆ.

ಮೊದಲಿಗೆ ಕೆಲಸ ಮಾಡುತ್ತಿದ್ದ ಸಂಕಲನಕಾರ ನಾನು ನನ್ನ ಕತೆಯಲ್ಲಿ ಹುಡುಕುತ್ತಿದ್ದ ದೃಶ್ಯ ಚೌಕಟ್ಟುಗಳನ್ನು ಜೋಡಿಸಲು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದೇ ಕೈಚೆಲ್ಲಿದಾಗ ಮತ್ತೊಬ್ಬ ಸಂಕಲನಕಾರರಾದ ಹಾಗೂ ಈ ಹಿಂದೆ ಹರಿವು ಮಾಡುವಾಗ ಕ್ಯಾಮೆರಾ ಒದಗಿಸಿದ್ದ ಅವಿನಾಶ್ ಶೆಟ್ಟಿಯವರ ನೆರವು ಬಯಸಿದೆ. ಅವರು ಸಂಕಲನದ ಕೆಲಸದ ಜೊತೆಗೆ ಬಾಕಿ ತಾಂತ್ರಿಕ ಕೆಲಸಗಳನ್ನು ಪೂರ್ಣಗೊಳಿಸಿಕೊಟ್ಟರು. ಜೊತೆಗೆ ಹಿರಿಯ ಛಾಯಾಗ್ರಾಹಕರಾದ ಜಿ. ಎಸ್. ಭಾಸ್ಕರ್ ಸರ್ ಸಿನೆಮಾದ ವರ್ಣ ವಿನ್ಯಾಸವನ್ನು (ಡಿ ಐ= ಡಿಜಿಟಲ್ ಇಮೇಜಿಂಗ್ ಹಾಗೂ ಕಲರ್ ಗ್ರೇಡಿಂಗ್) ಮಾಡಿಕೊಟ್ಟರು.

ಇನ್ನುಳಿದಂತೆ ಶಬ್ದವಿನ್ಯಾಸವನ್ನು ಮಹಾವೀರ ತುಂಬಾ ಸೂಕ್ಷ್ಮವಾಗಿ ದೃಶ್ಯಗಳು ನೈಜವಾಗಿ ಮೂಡುವಂತೆ ವಿನ್ಯಾಸ ಮಾಡಿದರು. ಹಾಗೇ ಅವಿನಾಶ್ ಇಡೀ ಸಿನೆಮಾದ ಆಶಯವನ್ನು ಹಾಡಿನ ರೂಪದಲ್ಲಿ ಬರೆದುಕೊಟ್ಟರೆ, ಅದಕ್ಕೆ ತಕ್ಕ ಭಾವತೀವ್ರತೆಯನ್ನು ಸಂಗೀತ ವಿನ್ಯಾಸದ ಜೊತೆಗೆ ತಾವೇ ಸ್ವತಃ ಹಾಡುವ ಮೂಲಕ ಚರಣ್ ಇಡೀ ಸಿನೆಮಾಗೆ ಒಂದು ಮಾಂತ್ರಿಕ ಸ್ಪರ್ಷ ನೀಡಿ, ಸಿನೆಮಾ ನೋಡುಗನಲ್ಲಿ ಆಳವಾಗಿ ಉಳಿಯುವಂತೆ ಮಾಡಿದರು.

ಈ ಹಂತದಲ್ಲಿ ನಾನು ಸಿನೆಮಾ ಪೂರ್ಣಗೊಳಿಸುವ ಜೊತೆಜೊತೆಗೆ ಸಿನೆಮಾ ಮಾಡುವ ವಿಧಾನವನ್ನು ಕಲಿಯುವ ವಿದ್ಯಾರ್ಥಿಯೂ ಆಗಿದ್ದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಸಿನೆಮಾ ಮಾಡುವ ವಿಧಾನವನ್ನು ಕಲಿಯಲು ಪ್ರಾರಂಭಿಸಿದ್ದೇ ಹರಿವು ಪೂರ್ಣಗೊಂಡ ನಂತರ. ಈಗ ನನ್ನ ನಿಜವಾದ ಕಲಿಕೆ ಆರಂಭವಾಗಿದೆ.

ಅಂತೂ ಹಣದ ಸಮಸ್ಯೆಯ ತೀವ್ರತೆಯ ನಡುವೆಯೂ ಹರಿವು ಪೂರ್ಣಗೊಂಡು ಸಿನೆಮಾ ಸೆನ್ಸಾರ್ ಹಂತವನ್ನು ತಲುಪಿತ್ತು. ಆದರೆ ಸೆನ್ಸಾರ್ ಮಾಡಿಸಲು ಮತ್ತೊಂದು ಸಮಸ್ಯೆ ಎದುರಾಯಿತು. ಅದು ಬ್ಯಾನರ್ ರಿಜಿಸ್ಟ್ರೇಷನ್ ಹಾಗೂ ನಿರ್ಮಾಪಕರ ನೋಂದಣಿ. ತುಂಬಾ ಆಸ್ಥೆಯಿಂದ ಗಿರೀಶ್ ಈ ಸಿನೆಮಾವನ್ನು ತಮ್ಮ ಆರ್ಥಿಕ ಸಮಸ್ಯೆಗಳ ನಡುವೆಯೂ ಎಲ್ಲಿಯೂ ನಿಲ್ಲದಂತೆ ಪೂರ್ಣಗೊಳಿಸಿದ್ದರು ಈ ಹಂತದಲ್ಲಿ ಅವರಿಗೆ ಹಣ ಹೊಂದಿಸುವುದು ತುಂಬಾ ಸಮಸ್ಯೆಯಾಯಿತು.

ಕೊನೆಗೆ ಯಾವುದೇ ಕಾರಣಕ್ಕು ಸೆನ್ಸಾರ್ ಗೆ ತೊಂದರೆಯಾಗಬಾರದು, ಅಂದುಕೊಂಡ ಸಮಯದಲ್ಲಿ ಸಿನೆಮಾ ಮುಗಿಸಬೇಕು ಎಂದು ನಿರ್ಧರಿಸಿ ಸಿನೆಮಾದಲ್ಲಿ ನಿರ್ಮಾಪಕ ಎಂಬ ಹೆಸರನ್ನು ನನಗೂ ಅವರಿಗೂ ಆತ್ಮೀಯರಾಗಿದ್ದ ಅವಿನಾಶ್ ಶೆಟ್ಟಿಯವರಿಗೆ ನೀಡಿದರು. ಅವಿನಾಶ್ ರವರ ಓಂಸ್ಟುಡಿಯೋ ಅದಾಗಲೇ ಬ್ಯಾನರ್ ರಿಜಿಸ್ಟರ್ ಆಗಿತ್ತು. ಬರೀ ನಿರ್ಮಾಪಕರ ನೋಂದಣಿ ಮಾಡಿಸಬೇಕಿತ್ತು. ಅವರು ತಮ್ಮ ಹೆಸರನ್ನು ನಿರ್ಮಾಪಕರಾಗಿ ನೊಂದಾಯಿಸಿಕೊಂಡ ಮೇಲೆ ಅವರ ಹೆಸರಿನಲ್ಲಿ ಸೆನ್ಸಾರ್ ಗೆ ಅರ್ಜಿ ಸಲ್ಲಿಸಲಾಯಿತು.

ಅದು ಬಹುದೊಡ್ಡ ದಿನ ನನಗೆ. ನನಗೆ ಹಾಗೂ ಮೊದಲನೇ ಸಿನೆಮಾ ಮಾಡುವ ಪ್ರತೀ ನಿರ್ದೇಶಕನಿಗೂ ಅದು ದೊಡ್ಡ ದಿನವೇ. ಸಿನೆಮಾ ಮುಗಿದು ಸೆನ್ಸಾರ್ ಆಗುವ ದಿನ.

29 ಆಗಸ್ಟ್ 2014ರಂದು ಸಿನೆಮಾ ಸೆನ್ಸಾರ್ ಆಯಿತು.

ಹೊರಗೆ ಆತಂಕದಿಂದ ಕಾಯುತ್ತಾ ನಾನು ನಮ್ಮ ನಿರ್ಮಾಪಕರು ಕಾಯುತ್ತಾ ಕೂತಿದ್ದೆವು. ಸಿನೆಮಾ ಮುಗಿದ ನಂತರ ಸೆನ್ಸಾರ್ ಅಧಿಕಾರಿ ಹಾಗೂ ಸದಸ್ಯರು ನಮ್ಮನ್ನು ಒಳಗೆ ಕರೆದರು. ಒಳಗೆ ಹೋದರೆ ಪ್ರತಿಯೊಬ್ಬರ ಕಣ್ಣಲ್ಲೂ ನೀರು ತುಂಬಿತ್ತು. ಸದಸ್ಯರಲ್ಲೊಬ್ಬರು ಮುಂದೆ ಬಂದು ನಿರ್ದೇಶಕರು ಯಾರು ಎಂದು ಕೇಳಿದರು. ನಾನು ಮುಂದೆ ಹೋದೆ.

ಅವರು ಹತ್ತಿರ ಬಂದು ಕೈಯ್ಯಲ್ಲಿ 100ರ ನೋಟೊಂದನ್ನು ಇಟ್ಟು ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು.. ಇಂತಹ ಸಿನೆಮಾನ ನಾನು ಉಚಿತವಾಗಿ ನೋಡಲು ಬಯಸುವುದಿಲ್ಲ. ಅಂತಹ ಅದ್ಬುತ ಸಿನೆಮಾ ಇದು ಶುಭವಾಗಲಿ ಎಂದು ಹಾರೈಸಿದರು.

ಅದು ನಾನು ನನ್ನ ಸಿನೆಮಾದ ಮೂಲಕ ಗಳಿಸಿದ ಮೊದಲ ಹಣ. ಅದನ್ನು ಹಾಗೇ ನಿರ್ಮಾಪಕರಾದ ಗಿರೀಶ್ ರವರ ಕೈಗೆ ನೀಡಿದೆ. ಸೆನ್ಸಾರ್ ಅಧಿಕಾರಿ ಸಿನೆಮಾ ಬಗ್ಗೆ ಮೆಚ್ಚಿ ಯಾವುದೇ ಕತ್ತರಿಯಿಲ್ಲದೇ ಯು ಪ್ರಮಾಣ ನೀಡುವುದಾಗಿ ಹೇಳಿದಾಗ ಕಣ್ಣು ತುಂಬಿತ್ತು ನನಗೆ. ಕೂಡಲೇ ಹೊರಬಂದವನೇ ಈ ವಿಷಯವನ್ನು ನಮ್ಮ ತಂಡದ ಪ್ರತಿಯೊಬ್ಬ ಸದಸ್ಯನಿಗೂ ಹೇಳಿ ಸಂಭ್ರಮ ಪಟ್ಟೆ.

ಸಿನೆಮಾ ಸೆನ್ಸಾರ್ ಆದ ಸಂಭ್ರಮ ಬಹಳ ದಿನಗಳೇನೂ ಉಳಿಯಲಿಲ್ಲ. ಕಾರಣ ಅಷ್ಟು ಒತ್ತಡದಲ್ಲಿ ಸೆನ್ಸಾರ್ ಮಾಡಿಸಿದ್ದು ಪನೋರಮಾಗೆ ಸಿನೆಮಾ ಕಳಿಸಲು. ಮನಸಿನ ಮೂಲೆಯಲ್ಲೊಂದು ಆಸೆ ಪನೋರಮಾಗೆ ಆಯ್ಕೆಯಾದರೆ ಸಿನೆಮಾಗೆ ಹಾಕಿದ ಬಂಡವಾಳ ವಾಪಸ್ಸು ಬರುತ್ತದೆ. ನಿರ್ಮಾಪಕರು ಸೇಫ್ ಆಗ್ತಾರೆ. ಒಬ್ಬ ನಿರ್ದೇಶಕನಾಗಿ ನಾನು ಸೇಫ್ ಆಗ್ತೀನಿ ಅಂತ.

ಆದರೆ ಸಿನೆಮಾ ಆಯ್ಕೆ ಆಗಲಿಲ್ಲ.

ಮುಂದೇನು ಮಾಡುವುದೋ ತಿಳಿಯಲಿಲ್ಲ. ಕಾರಣ ಹಣ ಹೂಡಿರುವ ನಿರ್ಮಾಪಕರಿಗೆ ಹಣ ಮರಳುವ ದಾರಿ ಹೇಗೆ ಎಂಬ ಚಿಂತೆ. ಕಾರಣ ಇಂತಹ ಸಾಮಾಜಿಕ ಸಿನೆಮಾಗಳಿಗೆ ಹೂಡಿರುವ ಹಣ ವಾಪಸ್ಸು ಗಳಿಸುವ ಮಾರ್ಗದ ಬಗ್ಗೆ ಯಾವ ಮಾಹಿತಿಯೂ ನನ್ನಲ್ಲಿ ಇರಲಿಲ್ಲ. ನಿರ್ಮಾಪಕರಾದ ಗಿರೀಶ್ ಗೌಡರು ಹಣ ಹಿಂಪಡೆಯುವ ವಿಷಯದಲ್ಲಿ ನನ್ನ ಮೇಲೆ ಯಾವ ಒತ್ತಡವನ್ನು ಹಾಕದಿದ್ದರೂ.. ಒಬ್ಬ ನಿರ್ದೇಶಕನಾಗಿ ಆ ಒತ್ತಡವನ್ನು ಸ್ವತಃ ನನ್ನ ಮೈಮೇಲೆ ಹಾಕಿಕೊಳ್ಳುವುದು ನನ್ನ ಜವಾಬ್ದಾರಿಯಾಗಿತ್ತು.

ಸಿನೆಮಾ ಪ್ರೀಮಿಯರ್ ಶೋ ಮಾಡಿದೆ. ಅಧ್ಬುತವಾದ ಪ್ರತಿಕ್ರಿಯೆ ಬಂತೇ ವಿನಹ ಸಿನೆಮಾ ಥಿಯೇಟರ್‍ನಲ್ಲಿ ಬಿಡುಗಡೆ ಮಾಡಲು ಯಾರೂ ಮುಂದೆ ಬರಲಿಲ್ಲ. ಒಂದಿಬ್ಬರು ವಿತರಕರ ಬಳಿ ಕೇಳಿದಾಗ 15 ಲಕ್ಷ ನೀಡಿದರೆ ಮಾತ್ರ ಬಿಡುಗಡೆ ಮಾಡ್ತೀವಿ ಅಂತ ಹೇಳಿದರು. 15 ಇರಲಿ ಒಂದು ಲಕ್ಷ ಹಣವನ್ನು ಹೊಂದಿಸುವುದೂ ಸಾಧ್ಯವಿರದ ಪರಿಸ್ಥಿತಿ. ಸಿನೆಮಾ ದೆಹಲಿ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಬೆಂಗಳೂರು ಚಲನಚಿತ್ರೋತ್ಸವದಲ್ಲೂ ಪ್ರದರ್ಶನಗೊಂಡು ಪ್ರೇಕ್ಷಕರಿಂದ ಅಪಾರವಾದ ಮೆಚ್ಚುಗೆಯೇನೂ ಸಿಕ್ಕಿತು. ಆಗ ತಕ್ಕಮಟ್ಟಿಗೆ ಸಮಾಧಾನ ತಂದಿದ್ದು ಸರಕಾರ ನೀಡುವ ಸಹಾಯಧನ ಖಂಡಿತವಾಗಿಯೂ ಸಿಗುತ್ತದೆ. ಅದರಿಂದ ತಕ್ಕಮಟ್ಟಿಗೆ ಹಣ ಹಿಂದಿರುಗುತ್ತದೆ ಎಂದು.

ಉಳಿದ ಹಣ ಗಳಿಸುವ ಮಾರ್ಗ ಏನು ಎಂದು ಯೋಚಿಸುತ್ತಿರುವಾಗಲೇ ಖಾಸಗಿ ಚಾನೆಲ್‍ನವರಿಗೆ ಒಂದು ಸಣ್ಣ ಮೊತ್ತಕ್ಕೆ ನಮ್ಮ ನಿರ್ಮಾಪಕರು ಸಿನೆಮಾವನ್ನು ಮಾರಿದರು. ಸರಕಾರದ ಸಹಾಯಧನವೂ ಸೇರಿದರೆ, ಅಲ್ಲಿಗೆ ಸಿನೆಮಾಗೆ ಹೂಡಿದ ಹಣದಲ್ಲಿ ಬಹುತೇಕ ಹಣ ಹಿಂದಿರುಗಿದಂತಾಯಿತು ಎಂಬ ನಿರಾಳ ಭಾವ. ಮುಂದೆ ಖಾಸಗಿ ಪ್ರದರ್ಶನಗಳನ್ನು ಆಯೋಜಿಸಿ ಉಳಿದ ಹಣವನ್ನು ಗಳಿಸುವ ಯೋಜನೆ ಮಾಡಿದೆ.

ಅದಕ್ಕೂ ಮುನ್ನ ರಾಷ್ಟ್ರ ಪ್ರಶಸ್ತಿಯ ಫಲಿತಾಂಶದ ನಿರೀಕ್ಷೆಯಲ್ಲಿದ್ದೆ. ಅದಾಗಲೇ ಪನೋರಮಾ ಹಾಗೂ ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಕೈ ತಪ್ಪಿದ್ದರಿಂದ ರಾಷ್ಟ್ರ ಪ್ರಶಸ್ತಿಯ ಬಗ್ಗೆ ನಿರೀಕ್ಷೆಯೇನೂ ಇರಲಿಲ್ಲ.

ಯಾವುದಕ್ಕೂ ಇರಲಿ ಎಂದು ಪ್ರಶಸ್ತಿಗೆ ಕಳಿಸಿದ್ದೆ. ಆದರೆ ಅಲ್ಲಿ ಪವಾಡ ನಡೆದೇ ಹೋಯಿತು. ನಮ್ಮ ಸಿನೆಮಾಗೆ ಪ್ರಾದೇಶಿಕ ಸಿನೆಮಾ ವಿಭಾಗದಲ್ಲಿ ಕನ್ನಡದ ಅತ್ತ್ಯುತ್ತಮ ಸಿನೆಮಾ ಪ್ರಶಸ್ತಿ ಘೋಷಣೆಯಾಯ್ತು. ಅದು ಕನಸೋ ನಿಜವೋ ಎಂದು ಅರಗಿಸ್ಕೊಳ್ಳುವುದಕ್ಕೆ ಸಾಕಷ್ಟು ಸಮಯ ಬೇಕಾಯಿತು.

ಸಿನೆಮಾ ಆರಂಭದಿಂದ ಪ್ರಶಸ್ತಿ ಘೋಷಣೆಯಾಗುವವರೆಗೂ ನನ್ನೊಂದಿಗೆ ನನಗೆ ಬೆಂಬಲವಾಗಿದ್ದ ಏಕೈಕ್ ವ್ಯಕ್ತಿ ಸಂಚಾರಿ ವಿಜಯ್. ನಮ್ಮ ಸಿನೆಮಾದ ಜೊತೆಗೆ ಅವರಿಗೆ ಅವನಲ್ಲ ಅವಳು ಸಿನೆಮಾದ ನಟನೆಗೆ ಅತ್ತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬಂದಿರುವುದು. ನನ್ನ ಸಂತಸವನ್ನು ಇಮ್ಮಡಿಗೊಳಿಸಿತ್ತು. ನಾವು ಗೆದ್ದಿರುವುದಕ್ಕೆ ಸಾಕ್ಷಿ ವಿಜಯ್ ರವರ ಕಣ್ಣಲ್ಲಿ ಪ್ರತಿಫಲಿಸಿತ್ತು.

ಮುಂದೆ ಹಣ ಹಿಂಪಡೆಯುವ ಆತಂಕವೆಲ್ಲಾ ಆ ಒಂದು ಪ್ರಶಸ್ತಿ ದೂರ ಮಾಡಿತು. ಪ್ರಶಸ್ತಿ ಪಡೆದ ಕಾರಣಕ್ಕೆ ಸರಕಾರ ನೀಡಿದ ಪ್ರೋತ್ಸಾಹದ ಸಹಾಯಧನ ಹಾಗೂ ಇನ್ನಿತರ ಮೂಲಗಳಿಂದ ನಿರ್ಮಾಪಕರು ಹೂಡಿದ್ದ ಹಣ ಲಾಭದ ಜೊತೆಗೆ ಅವರ ಕೈ ಸೇರಿತು.

ಸಿನೆಮಾ ಪೋಸ್ಟ್ ಪ್ರೊಡಕ್ಷನ್‍ಗೆ ಸಂಬಂಧಪಟ್ಟ ಬಾಕಿ ಹಣವನ್ನೆಲ್ಲಾ ಹಿಂದುರಿಗಿಸಲಾಯಿತು. ಎಲ್ಲವೂ ಹಿಂದಿನ ಸಿನೆಮಾಗಳಲ್ಲಿ ಕೊನೆಯ ದೃಶ್ಯದಲ್ಲಿ ಬರುವ ಟೈಟಲ್‍ನಂತೆ ಶುಭಂ ಶುಭಂ.. ಆದರೆ. ಒಬ್ಬ ನಿರ್ದೇಶಕನಾಗಿ ನನ್ನ ಮನಸ್ಸಿನೊಳಗಿನ ಕೊರಗೊಂದು ಹಾಗೇ ಉಳಿದುಕೊಂಡೇ ಇದೆ. ಅದು ಥಿಯೇಟರ್‍ನಲ್ಲಿ ಬಿಡುಗಡೆ. ಸಿನೆಮಾ ನಿರ್ಮಾಣದ ಹಂತದಲ್ಲಿ ಧೈರ್ಯವಾಗಿ ಹಣ ಹೂಡಿದ ನಿರ್ಮಾಪಕರು ಹೂಡಿಕೆ ಮಾಡಿದ ಹಣದ ಲಾಭದ ಜೊತೆ ಕೈಸೇರಿದ ಮೇಲೆ ಬಿಡುಗಡೆ ಮಾಡಲು ಧೈರ್ಯ ಮಾಡಲಿಲ್ಲ. ಅದಕ್ಕೆ ಬೇಕಾದ ಹಣ ಹೂಡಲು ಮುಂದಾಗಲಿಲ್ಲ. ಅದಕ್ಕೆ ಅವರಿಗಿದ್ದ ಸಮಸ್ಯೆಗಳೇನು ಎಂಬುದೂ ಕೂಡ ತಿಳಿಯಲಿಲ್ಲ.

ಯಾವುದೇ ಸಿನೆಮಾ ಪರಿಪೂರ್ಣತೆಗಳಿಸುವುದು ಥಿಯೇಟರ್‍ನಲ್ಲಿ ಬಿಡುಗಡೆ ಆದಾಗ ಮಾತ್ರ. ಸಿನೆಮಾ ಮಾಡುವುದೇ ಪ್ರೇಕ್ಷಕರನ್ನು ತಲುಪಲು. ಥಿಯೇಟರ್‍ನಲ್ಲಿ ಬಿಡುಗಡೆಯಾದ ಸಿನೆಮಾ ನಾಲ್ಕು ಜನರಿಗೆ ಇಷ್ಟವಾಗಿ, ಅವರಿಂದಾಗಿ ಮತ್ತಷ್ಟು ಜನ ತಾವಾಗೇ ಸಿನೆಮಾ ನೋಡಲು ಬಂದಾಗ ಮಾತ್ರ ಸಿನೆಮಾ ಯಶಸ್ವಿಯಾಗುವುದು. ನಿರ್ದೇಶಕನಿಗೂ ತಾನು ಮಾಡಿರುವ ಕೃತಿಯ ಬಗ್ಗೆ ಸಂತೃಪ್ತ ಭಾವ ಏರ್ಪಡುವುದು.

ಇದು ನನ್ನ ವಿಷಯದಲ್ಲಿ ನಡೆಯಲೇ ಇಲ್ಲ. ಈ ಕೊರಗನ್ನು ನಿವಾರಿಸಿಕೊಳ್ಳಲು ಕರ್ನಾಟಕದಾದ್ಯಂತ 50ಕ್ಕೂ ಹೆಚ್ಚು ಖಾಸಗಿ ಪ್ರದರ್ಶನಗಳ ಮೂಲಕ ಪ್ರೇಕ್ಷಕರನ್ನು ತಲುಪಲು ಪ್ರಯತ್ನಿಸಿ, ನೂರಾರು ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗಿ ಸಂವಾದ ನಡೆಸಿದರೂ ಕೂಡ. ಆ ಕೊರಗೊಂದು ಹಾಗೇ ಉಳಿದುಕೊಂಡಿದೆ.

ಈ ಸಿನೆಮಾದಿಂದ ಲಾಭ ಬಂದು ಎಲ್ಲ ತಮ್ಮ ಪಾಡಿಗೆ ತಾವು ಉಳಿದುಕೊಂಡ ನಂತರವೂ ಇಂತಹ ಸಿನೆಮಾಗಳಿಂದ ಹಣ ಮರಳಿ ಪಡೆಯುವ ಕುರಿತಂತೆ ಸಾಕಷ್ಟು ಅಧ್ಯಯನ ಮಾಡಿದ ನಂತರ ತಿಳಿದು ಬಂದ ಸತ್ಯವೆಂದರೆ, ಒಂದು ಒಳ್ಳೆಯ ಸಿನೆಮಾ ಮಾಡಿದರೆ ಹೂಡಿದ ಹಣವನ್ನು ಹಿಂಪಡೆಯಲು ಜಗತ್ತಿನಲ್ಲಿ ಸಾಕಷ್ಟು ಮಾರ್ಗಗಳಿವೆ. ಆದರೆ ಅದರ ಬಗ್ಗೆ ಅರಿವು ಕೆಲವರಲ್ಲಿ ಮಾತ್ರ ಇದೆ. ಅದನ್ನು ಅವರು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.

ನನ್ನಂತೆ ಯಾರ ಬೆಂಬಲವೂ ಇಲ್ಲದೇ ನಿರ್ದೇಶಕನಾದವನಿಗೆ ಇಂತಹ ವಿಷಯಗಳ ಮಾಹಿತಿ ಸಿಗುವುದು ಬಹಳ ದುಸ್ತರ. ಅದಾಗಿಯೂ ಹಲವು ವರ್ಷಗಳ ಚಿತ್ರರಂಗದಲ್ಲಿದ್ದ ಅನುಭವ ಹಾಗೂ ಹಲವು ಶುದ್ದ ಮನಸ್ಸಿನ ಹಿರಿಯರ ನೆರವಿನಿಂದ ಇವುಗಳ ಬಗ್ಗೆ ತಡವಾಗಿಯಾದರೂ ಮಾಹಿತಿ ಪಡೆಯಲು ಸಾದ್ಯವಾಯಿತು. ನನ್ನ ಮೊದಲ ಪ್ರಯತ್ನದಲ್ಲೇ ಜನರು ಮೆಚ್ಚಿರುವ, ಅವರ ಮನಸ್ಸಲ್ಲಿ ಸದಾ ನೆನಪಿರುವಂತಹ ಸಿನೆಮಾ ಮಾಡಿರುವ ತೃಪ್ತಿಯೇನೂ ಇದೆ. ಆದರೆ ಅದನ್ನು ಥಿಯೇಟರಿಗೆ ತರಲಾಗದ ಅಸಹಾಯಕತೆಯ ಕೊರಗೂ ಇದೆ.

2 Responses

 1. Chandrashekar s.s Hospet says:

  ‘ಹರಿವು’ ಚಿತ್ರದ ಮೇಕಿಂಗ್ ಕಥೆನೇ ಒಂದು ಸಿನಿಮಾ ಮಾಡಬಹುದೆನ್ನುವುದು ನನ್ನ ಅನಿಸಿಕೆ.
  ಓದುತ್ತಾ ಹೋದರೆ ಮೈಯಲ್ಲಾ ಜುಂ ಎನಿಸುವಷ್ಟು ತಾಕತ್ತಿದೆ ಆ ಬರವಣಿಗೆಗೆ. ಕನ್ನಡ ಚಿತ್ರರಂಗಕ್ಕೆ ಒಬ್ಬ ಸದಭಿರುಚಿಯ ನಿರ್ದೇಶಕ ದೊರಕಿದ್ದಾರೆ.
  ಶುಭವಾಗಲಿ ಮಂಸೂರೆ ಅವರಿಗೆ.

  ಪ್ರೀತಿಯಿಂದ
  ಚಂದ್ರು
  ಹೊಸಪೇಟೆ.

 2. Suma KB says:

  I am really surprised to know that you could not collect enough money to release such a great film in theaters. Have you tried crowd funding?When Pawan Kumar of “Lucia” (another wonderful film) could succeed in that, why cannot you?

Leave a Reply

%d bloggers like this: