fbpx

ತಾರೆಗಳ ತೋಟದಿಂದ ಚಂದಿರ ಹೀಗೆ ಬಂದ ಮ್ಯೂಸಿಯಂಗೆ…..

 

 

 

ಮ.ಶ್ರೀ. ಮುರಳಿ ಕೃಷ್ಣ

 

 

 

 

“ತಾರೆಗಳ ತೋಟದಿಂದ ಚಂದಿರ ಬಂದ, ನೈದಿಲೆಯ ಅಂದ ನೋಡಿ ಆಡಲು ಬಂದ…”

ಇದು ‘ನಮ್ಮ ಮಕ್ಕಳು’ ಎಂಬ ಜಮಾನದ ಜನಪ್ರಿಯ ಕನ್ನಡ ಚಲನಚಿತ್ರದ ಚಿತ್ತಾಕರ್ಷಕ ಹಾಡು. ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ನನ್ನ ಮೇಲೆ ಮೋಡಿ ಮಾಡಿದ್ದು “ ಚಂದಿರನೇತಕೆ ಓಡುವನಮ್ಮ…..” ಎಂಬ ಶಿಶುಪದ್ಯ. ಇವೆರಡೂ, ನಾನು ಜನವರಿ 31ರಂದು ಪೂರ್ಣ ಚಂದ್ರಗ್ರಹಣವನ್ನು ವೀಕ್ಷಿಸುವಾಗ ನನ್ನ ಮನಃಪಟಲದಲ್ಲಿ ಸುಳಿದವು. 152 ವರ್ಷಗಳ ತರುವಾಯ ಸೂಪರ್, ರೆಡ್ ಮತ್ತು ಬ್ಲೂ ಮೂನ್‍ಗಳ ಆಗಸದ ಕೌತುಕವನ್ನು ಲಕ್ಷ ಲಕ್ಷ ಮಂದಿ ಸವಿದರು.

ಆಗಸದಲ್ಲಿ ತಾರಾಶೋಭಿತ ಚಂದಿರ ಸೊಬಗನ್ನು ಸೂಸುವಾಗ, ವಸುಂಧರೆ ಹಾಲ್ಬೆಳದಿಂಗಳಲ್ಲಿ ಮಿಂದಾಗ, ಇಂತಹ ವಾತಾವರಣದಲ್ಲಿ ನಲ್ಲ-ನಲ್ಲೆಯರ ಭಾವಗಳು ಬೆಸೆಯುವಾಗ…ಓಹ್…ನಾಕಕ್ಕೆ ಮೂರೇ ಗೇಣು. ಅಬ್ಬಾ…ಅದೆಷ್ಟು ಕಲಾವಿದರು, ಕವಿಗಳು, ವಿಜ್ಞಾನಿಗಳು, ತತ್ವಶಾಸ್ತ್ರಜ್ಞರು, ಸೌಂದರ್ಯೋಪಾಸಕರು, ಸಾಮಾನ್ಯರು ಶತಶತಮಾನಗಳಿಂದ ಚಂದಿರನ ಮೋಹಕತೆಗೆ ಒಳಗಾಗುತ್ತ ಬಂದಿದ್ದಾರೆ! ಕೆಲವು ದಶಕಗಳ ಹಿಂದೆ, ಬೆಳದಿಂಗಳ ಊಟದ ಕಾರ್ಯಕ್ರಮಗಳು ಎಷ್ಟೊಂದು ಜರುಗುತ್ತಿದ್ದವು! ಇತ್ತೀಚಿನ ವರ್ಷಗಳಲ್ಲಿ, ಅವು ಅಷ್ಟಾಗಿ ಸುದ್ದಿಯಲ್ಲಿಲ್ಲ.  ನಗರ ಪ್ರದೇಶಗಳ ಜಗಮಗಿಸುವ ದೀಪಗಳ ಭರಾಟೆಯಲ್ಲಿ ಚಂದಿರ-ಚುಕ್ಕೆಗಳ ಬೆಳಕನ್ನು ಆಸ್ವಾದಿಸುವ ಮಂದಿಯೆಷ್ಟು?

ಬೆಂಗಳೂರಿನ ಪ್ಯಾಲೆಸ್ ರಸ್ತೆಯಲ್ಲಿರುವ, ಮೈಸೂರು ಮಹಾರಾಜರ ಕಾಲದ ಮಾಣಿಕ್ಯವೇಲು ಮ್ಯಾನ್ಷನ್‍ನಲ್ಲಿದೆ ನ್ಯಾಷನಲ್ ಗ್ಯಾಲರಿ ಆಫ್ ಮಾಡ್ರ್ರನ್ ಆಟ್ರ್ಸ್.  ಇದು ನನ್ನ ಮನಸೂರೆಗೊಳ್ಳುವ ತಾಣಗಳಲ್ಲಿ ಒಂದು.  ಇಲ್ಲಿ ಜನವರಿ 31 ಹಾಗೂ ಫೆಬ್ರುವರಿ 1 ರಂದು ‘ದಿ ಮ್ಯೂಸಿಯಂ ಆಫ್ ದಿ ಮೂನ್’ ಕಾರ್ಯಕ್ರಮ ಜರುಗಿತು.  ಇದರ ರೂವಾರಿ ಇಂಗ್ಲೆಂಡಿನ ಅಂತರರಾಷ್ಟ್ರೀಯ ಮಟ್ಟದ ಕಲಾವಿದ ಲ್ಯೂಕ್ ಜೆರ್ರಂ. ಈತ ಪ್ರಪಂಚದಾದ್ಯಂತ ಈ ಪ್ರದರ್ಶನವನ್ನು ಕೊಂಡೊಯ್ಯುತ್ತಿದ್ದಾರೆ.  ಜನರಲ್ಲಿ ಚಂದಿರನ ನಿಬ್ಬೆರಗಾಗಿಸುವ ವಿವಿಧ ಆಯಾಮಗಳ ಬಗೆಗೆ ವೈಜ್ಞಾನಿಕ ಅರಿವು ಮತ್ತು ಕಲಾಪ್ರಜ್ಞೆಯನ್ನು ಮೂಡಿಸುವುದು ಈ ಯೋಜನೆಯ ಉದ್ದೇಶ.

ಅಂದು ಗ್ಯಾಲರಿಯಲ್ಲಿರುವ ಪುಟ್ಟ ಕೊಳದ ಮಧ್ಯೆ ದೊಡ್ಡ ಗಾತ್ರದ ಚಂದಿರನನ್ನು ಉಡಾಯಿಸಲಾಗಿತ್ತು. ಲ್ಯೂಕ್ ಜೆರ್ರಂನ ಈ ಕಲಾಸೃಷ್ಠಿ, ವಾದ್ಯಸಂಗೀತದ ಹಿಮ್ಮೆಳದಲ್ಲಿ, ರಂಗಿನೋಕುಳಿಯಲ್ಲಿ ಮಜ್ಜನ ಮಾಡುತ್ತಿದ್ದ ಭವ್ಯ ಬಂಗಲೆಗಳ ಸಾನಿಧ್ಯದಲ್ಲಿ, ಅಲ್ಲಿ ನೆರೆದಿದ್ದ ಆಸಕ್ತರಿಗೆ ಸಂಮೋಹನವನ್ನು ಬೀರಿತ್ತು. ಚಂದಿರ ಕೈಗೆಟಕುವ ದೂರದಲ್ಲಿ ವಿರಾಜಮಾನನಾಗಿದ್ದ!

 

2 Responses

  1. K.S.Ravichandran says:

    Super Murali Krishna. We do remember when we were going kids my mother used to serve dinner under noon light with entire family set togethers had kai Thuthu. Still we can not forget the good old days. Thanks for reminding us through this article.

  2. Its awesome. Similarly I would like to recall my memory of Dr GSS. Who coined Yaaru kottaro baanige Bangaarada Medalu. The golden color of rising moon in sky.

Leave a Reply

%d bloggers like this: