fbpx

ಮೈಸೂರಿನಲ್ಲಿ ಸರೋದ್ ವಾದನ

ಕೊಲ್ಕತ್ತಾದ ಪ್ರತಿಭಾನ್ವಿತ ಯುವ ಕಲಾವಿದ ಪಂ. ಸೌಗತ್‍ರಾಯ್ ಚೌಧುರಿ ಅವರು ಮೊದಲ ಬಾರಿಗೆ ಮೈಸೂರು ನಗರದಲ್ಲಿ ತಮ್ಮ ಸರೋದ್ ವಾದನದ ವೈಭವವನ್ನು ರಸಿಕರ ಮುಂದೆ ತೋರಿಸಲಿದ್ದಾರೆ..

ಗುಣಾತ್ಮಕ ಕಾರ್ಯಕ್ರಮ ನೀಡುವಲ್ಲಿ ಹೆಸರಾಗಿರುವ ಪಂ.ತಾರಾನಾಥ್ ಫೌಂಡೇಷನ್, ವೀಣೆ ಶೇಷಣ್ಣ ಭವನದಲ್ಲಿ (ಗಾನಭಾರತಿ) ಫೆ.10 ಶನಿವಾರ ಬೆಳಗ್ಗೆ 10.15ಕ್ಕೆ ಏರ್ಪಡಿಸಿರುವ ಸಂಗೀತ ಕಚೇರಿಯಲ್ಲಿ ಸೌಗತ್‍ರಾಯ್ ಸರೋದ್ ನುಡಿಸಲಿದ್ದಾರೆ. ಇವರಿಗೆ ತಬಲಾ ಸಾಥ್ ನೀಡುವವರು ಭೀಮಾಶಂಕರ ಬಿದನೂರ.

ಪಂ.ಸೌಗತ್‍ರಾಯ್ ಚೌಧುರಿ  ಯುವ ಪ್ರತಿಭಾವಂತ ಸಂಗೀತಗಾರರಲ್ಲಿ ಅತ್ಯಂತ ಗಮನಾರ್ಹ ಕಲಾವಿದರಾದ ಪಂ.ಸೌಗತ್ ರಾಯ್ ಚೌಧುರಿ ಅವರು ಬಂಗಾಲಿ ಕುಟುಂಬದಲ್ಲಿ ಹುಟ್ಟಿದವರು; ಜಗದ್ವಿಖ್ಯಾತ ಶಾಂತಿನಿಕೇತನದಲ್ಲಿ ಬೆಳೆದವರು. ಅವರ ತಂದೆ ಪ್ರಸಿದ್ಧ ಶಿಲ್ಪಿ ಪ್ರೊ. ಸರಬಾರಿ ರಾಯ್ ಚೌಧುರಿ; ತಾಯಿ ಆಗ್ರಾ ಘರಾಣೆಯ ಹಾಡುಗಾರ್ತಿ ಅಜಂತ ರಾಯ್ ಚೌಧುರಿ.

ಮೈಹರ್ ಘರಾಣೆಯ ಅತ್ಯುನ್ನತ ಶಿಖರವಾದ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಪುತ್ರ ಉಸ್ತಾದ್ ಧ್ಯಾನೇಶ್‍ಖಾನ್ ಅವರ ಶಿಷ್ಯರಾಗಿ 9 ವರ್ಷ ಸರೋದ್ ವಾದನದಲ್ಲಿ ಶಿಷ್ಯತ್ವ; ನಂತರ ಧ್ಯಾನೇಶ್ ಅವರ ಅಣ್ಣ ಉಸ್ತಾದ್ ಆಶಿಶ್‍ಖಾನ್ ಅವರ ಬಳಿಯೂ ಸರೋದ್ ಕಲಿಕೆ. ಪಂ. ಸಂತೋಷ್ ಬ್ಯಾನರ್ಜಿ ಅವರ ಶಿಷ್ಯತ್ವದಲ್ಲಿ 17 ವರ್ಷಗಳ ಕಾಲ ಅಭ್ಯಾಸ.

ಅಹಮದಾಬಾದಿನ ಸಪ್ತಕ್ ಸಂಗೀತ ಹಬ್ಬದಲ್ಲಿ, ‘ಒಂದು ದಶಕದ ಪ್ರತಿಭಾವಂತ ಯುವ ಕಲಾವಿದ’ ಎಂಬ ಗೌರವ (2010ರಲ್ಲಿ). ಆಕಾಶವಾಣಿಯ ‘ಎ’ ದರ್ಜೆಯ ಕಲಾವಿದರು. ಭಾರತದ ಪ್ರಮುಖ ಸಂಗೀತ ಕೇಂದ್ರಗಳಲ್ಲಿ, ಯೂರೋಪಿನ ಹಲವು ರಾಷ್ಟ್ರಗಳಲ್ಲಿ ತಮ್ಮ ಕಲೆಯನ್ನು ಪ್ರಸ್ತುತ ಪಡಿಸಿರುವ ಸೌಗತ್, ಸರೋದ್ ವಾದನದ ಸೂಕ್ಷ್ಮಗಳನ್ನು, ಕೌಶಲಗಳನ್ನು ಯುವ ಕಲಾವಿದರಿಗೆ ಕಲಿಸುತ್ತಿದ್ದಾರೆ.

ಭೀಮಾಶಂಕರ ಬಿದನೂರ:

ಮೈಸೂರಿನ ಸಂಗೀತ ರಸಿಕರಿಗೆ ಪರಿಚಿತರಾದ ಭೀಮಾಶಂಕರ ಬಿದನೂರ ಹೆಸರಾಂತ ಅನೇಕ ಕಲಾವಿದರಿಗೆ ತಬಲಾ ನುಡಿಸಿದ್ದಾರೆ. ಪಂ.ಶಿವಪುತ್ರಪ್ಪ ಹೂಗಾರ, ಪಂ.ಕೆ.ಎಸ್.ಹಡಪದ, ಪಂ.ಪುಟ್ಟರಾಜ ಗವಾಯಿ ಅವರಲ್ಲಿ ತಬಲಾ ಶಿಕ್ಷಣವನ್ನು ಪಡೆದಿರುವ ಭೀಮಾಶಂಕರ ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ತಬಲಾ ಸಾಥಿದಾರರಾಗಿ ಸೇವೆ ಸಲ್ಲಿಸುತ್ತಿರುವ ಭೀಮಾಶಂಕರ್ ಮೈಸೂರಿನಲ್ಲಿ ತಮ್ಮದೇ ಶಾಲೆಯನ್ನು ಸ್ಥಾಪಿಸಿ, ಎಳೆಯ ತಲೆಮಾರಿಗೆ ತಬಲಾ ವಾದನವನ್ನು ಕಲಿಸುತ್ತಿದ್ದಾರೆ

ಈ ಕಾರ್ಯಕ್ರಮಕ್ಕೆ ಪ್ರವೇಶ ಧನವಿಲ್ಲ.

ಸಂಗೀತ ರಸಿಕರು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಪಂ.ತಾರಾನಾಥ್ ಫೌಂಡೇಷನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಪಂ.ರಾಜೀವ್ ತಾರಾನಾಥ್ ಕೋರಿದ್ದಾರೆ.

Leave a Reply