fbpx

ಇಸ್ ಬಾರ್ ಜಾಯೇ ಕಹಾಂ ಯಾರ್ !

 

ಹದಿನೈದು ಸೆಕೆಂಡು ಮಾತ್ರ ನಿಲ್ಲುವ ಲೋಕಲ್ ಟ್ರೇನನ್ನು ಕಿಶೋರನೊಬ್ಬ ಓಡುತ್ತಾ ಬಂದು ಸ್ಟೈಲಿನಲ್ಲಿ ಹತ್ತುತ್ತಾನೆ. ಅವನದೇ ವಯಸ್ಸಿನ ಹುಡುಗಿಯನ್ನೂ ಪುಸಲಾಯಿಸಿ ಜೊತೆಗೆ ಹತ್ತಿಸಿಕೊಂಡಿದ್ದಾನೆ. ಇಬ್ಬರೂ ಗೇಟ್ ಸಮೀಪವೇ ನಿಂತು ಪಿಸುಪಿಸು ಮಾತು, ಮಾತಿಗಿಂತ ಹೆಚ್ಚು ವಿನಾಕಾರಣ ನಗುವಿನಲ್ಲಿ ಮೈಮರೆತಿದ್ದಾರೆ. ಮುಂಬೈನ ಉಪನಗರವೊಂದರಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್  ಕಡೆಗೆ ಹೊರಟಿರುವ ಆ ಲೋಕಲ್ ಮುಂದಿನ ಸ್ಟೇಶನ್ನುಗಳಲ್ಲಿ ಜನ ತುಂಬಿಕೊಳ್ಳುತ್ತಾ ಗಚ್ಚಾಗಿಚ್ಚಿಯಾಗುವುದು ಆ ಪೋರನಿಗೆ ಅರಿವಿಲ್ಲವೆಂದಲ್ಲ.  ಆ ಭೀಡ್‌ನಲ್ಲಿ ತನ್ನ ಹುಡುಗಿಯ ಸಾಮೀಪ್ಯವನ್ನು ಸಾಧ್ಯವಾಗಿಸಿಕೊಳ್ಳುವ ಚಾಲಾಕಿತನ ಅವನಲ್ಲಿ ಇದ್ದಂತಿದೆ. ಒಂದು ಪಕ್ಕದಲ್ಲಿ ಹುಡುಗಿಯನ್ನು ನಿಲ್ಲಿಸಿಕೊಂಡು ಧಕ್ಕಾಮುಕ್ಕಿಯಿಂದ ರಕ್ಷಿಸುವವನಂತೆ ತನ್ನ ಎರಡೂ ಕೈಗಳನ್ನು ಅವಳ ಸೊಂಟದ ಸುತ್ತ ಬಳಸಿದ್ದಾನೆ.

 

ಗರ್ದಿ ಹೆಚ್ಚಾದಂತೆ ಅವರಿಬ್ಬರ ನಡುವಿನ ಅಂತರವೂ ಕಡಿಮೆಯಾಗುತ್ತಾ ಹೋಗುತ್ತದೆ. “ಅರೆ ಧಕ್ಕಾ ಮತ್ ಮಾರೋ ಯಾರ್, ಲೇಡೀಸ್ ಹೈ ..” ಎಂದು ಯಾರೋ ಕೂಗುತ್ತಾರೆ. ” ಇಸ್ ಭೀಡ್‌ಮೆ  ಲೇಡೀಸ್ ಕ್ಯೂ ಚಡಾ ಹೈ?” ಎಂದು ಒಂದು ಧ್ವನಿ ತಕರಾರು ತೆಗೆಯುತ್ತದೆ. “ಅರೆ, ಚೋಡ್ನಾ ಯಾರ್..ಆಜ್ ವೆಲಂಟೈನ್ಸ್ ಡೇ!” ಎಂಬ ಇನ್ನೊಂದು ಧ್ವನಿ ಅಲ್ಲಿಯ ಒರಟು ಹವಾಕ್ಕೆ ಕೋಮಲಭಾವದ ಟಚ್ ನೀಡುತ್ತದೆ. ಮುಂದಿನ ಸ್ಟೇಶನ್ನುಗಳಲ್ಲಿ ಇನ್ನಷ್ಟು ಜನ ಹತ್ತುತ್ತಿದ್ದಂತೆಯೇ ಗೌಜಿ ಗದ್ದಲ ನೂಕಾಟ ಬೆವರು ಬೈಗುಳ ಜಾಸ್ತಿಯಾಗಿ ಇರುವೆಯೂ ಹೋಗದಂತ ಗಚ್ಚಾಗಿಚ್ಚಿಯಲ್ಲಿ ಅವರಿಬ್ಬರೂ ಆಲಂಗಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಕಿಶೋರಾವಸ್ಥೆಯ ಸಹಜ ಆಕರ್ಷಣೆ, ಹಿಂಜರಿಕೆಯಿಂದ ಸುಮ್ಮನೇ ಸುಳಿದಾಡುತ್ತಿದ್ದ ಮೊಹಬತ್‌ಗೆ ಲೋಕಲ್ ಟ್ರೇನಿನ ಪಬ್ಲಿಕ್ಕಿನಿಂದ ಅಧಿಕೃತ ಮುದ್ರೆ ಬೀಳುತ್ತದೆ!

 

ಮುಂಬೈನಂಥ ಜನನಿಬಿಡ ಪ್ರದೇಶದಲ್ಲಿ ಕಿಶೋರ ಪ್ರೇಮಿಗಳಿಗೆ ಪ್ರೈವಸಿ ಸುಲಭವಲ್ಲ.  ಫ್ಲೈಓವರಗಳ ಕೆಳಗೆ, ಸ್ಕೈವಾಕುಗಳ ಕಾರ್ನರುಗಳಲ್ಲಿ, ರಶ್ ಇಲ್ಲದ ಡಬಲ್ ಡೆಕ್ಕರ್ ಬಸ್ಸಿನ ಮೇಲೆ,  ಲೈಬ್ರರಿಗಳ ಪುಸ್ತಕ ಸಾಲುಗಳ ನಡುವೆ,  ಲಿಫ್ಟಿನೊಳಗೆ -ಇಂಥ ಕಡೆಯಲ್ಲೆಲ್ಲ  ಕಣ್ಣಾಮುಚ್ಚಾಲೆಯಾಡುವಂಥ “ಸೃಜನಶೀಲ” ಸಾಧ್ಯತೆಗಳನ್ನು ಅರಸುತ್ತಾರೆ

.

ಪ್ಯಾರ್ ಮೊಹಬತ್ ಇಶ್ಕ್ ವಿಷಯದಲ್ಲಿ ಮುಂಬೈ ಉದಾರವಾಗಿದೆಯಾದರೂ ಸಾರ್ವಜನಿಕವಾಗಿ ಖುಲ್ಲಂಖುಲ್ಲಾ ಅಭಿವ್ಯಕ್ತಿಯನ್ನು ಅಷ್ಟಾಗಿ ಪಸಂದ್ ಮಾಡುವುದಿಲ್ಲ. ಹುಡುಗಿಯರನ್ನು ಪಟಾಯಿಸಿಕೊಂಡು ಪಾರ್ಕಿನಲ್ಲೋ ಸ್ಟೇಶನ್ನಿನ ಮೂಲೆಯಲ್ಲೋ ಸಮುದ್ರ ತೀರದಲ್ಲೋ ಡಿಂಗಡಾಂಗ್ ನಡೆಸುವ ಪಡ್ಡೆಗಳು ಆಗಾಗ ಸಂಸ್ಕೃತಿ ಪೋಷಕರ, ಪೋಲೀಸರ ಕೆಂಗಣ್ಣಿಗೆ ಗುರಿಯಾಗುವುದುಂಟು. ಹೀಗಾಗಿ ಚೌಪಾಟಿಗಳು, ಉದ್ಯಾನಗಳು ಮತ್ತು ಸೀಫೇಸುಗಳ ಮಂದ ಬೆಳಕುಗಳಲ್ಲಿ ಒಂದು ಮಿತಿಯಲ್ಲೇ ಹುಡುಗ-ಹುಡುಗಿಯರು ತಮ್ಮ ಪ್ರೀತಿ ಹಣತೆ ಹಚ್ಚುತ್ತಾರೆ. ಮರೀನ್ ಡ್ರೈವ್, ನರಿಮನ್ ಪಾಯಿಂಟ್, ಪವಾಯಿ ಲೇಕ್, ಜುಹೂ ಬೀಚ್, ಜೀಜಾಬಾಯಿ ಉದ್ಯಾನ, ಹ್ಯಾಂಗಿಗ್ ಗಾರ್ಡನ್, ಬೋರಿವಲಿ ನ್ಯಾಶನಲ್ ಪಾರ್ಕ್, ದಾದರ್ ಚೌಪಾಟಿ, ಬಾಂದ್ರಾ ಬ್ಯಾಂಡಸ್ಟ್ಯಾಂಡ್-ಇವೆಲ್ಲ ಅಮ್ಚಿ ಮುಂಬೈನ ಪ್ರೀತಿಪ್ರೇಮದ ನಿತ್ಯೋತ್ಸವ ತಾಣಗಳೇ ಆಗಿರುತ್ತವೆ.

 

ನವಿರು ಪ್ರೀತಿಗೆ ಅತ್ಯಂತ ರೋಮ್ಯಾಂಟಿಕ್ ಜಾಗವೆಂದರೆ ಮರೀನ್ ಡ್ರೈವ್. ಮೈಲಿಗಟ್ಟಲೆ ಚಾಚಿರುವ ಸಮುದ್ರ ತೀರದುದ್ದಕ್ಕೂ ನಿರ್ಮಿಸಿದ ತಡೆಗೋಡೆ ಮೇಲೆ ನೂರಾರು ಜೋಡಿಗಳು ಕೂತಿರುವುದನ್ನು ನೋಡುವುದೇ ಚಂದ.  ಕಿರುತೆರೆಗಳು, ಬೀಸುವ ತಂಗಾಳಿ, ಅರ್ಧಚಂದ್ರಾಕೃತಿಯಲ್ಲಿ ಬಾಗಿರುವ ಸಾಗರ ತೀರವನ್ನು ಬೆಳಗಿಸುವ ಹೊಂಬಣ್ಣದ ದೀಪಗಳು-ಚಕ್ಕಂದಕ್ಕೆ ಪೂರಕ ವಾತಾವರಣ ನಿರ್ಮಿಸುತ್ತವೆ. ತಡರಾತ್ರಿ ವರೆಗೂ ಅಪ್ಪಿ ಕೂತಿರುವ ಪ್ರೇಮಿಗಳು ನಿಸರ್ಗ ಸೌಂದರ್ಯ ಆಸ್ವಾದಿಸುತ್ತ ಆಪ್ತ ಸಂಭಾಷಣೆ, ಹಿತವಾದ ಸ್ಪರ್ಷ, ಕಚಗುಳಿಯಿಡುವ ಚುಂಬನದಲ್ಲಿ ಮೈಮರೆಯುತ್ತಾರೆ.

 

ಮರೀನ್ ಡ್ರೈವ್, ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್, ವರ್ಲಿ ಸೀಫೇಸ್‌ಗಳ  ದೃಶ್ಯಗಳು ಮಳೆಗಾಲದಲ್ಲಿ ಇನ್ನಷ್ಟು ಮೋಹಕವಾಗಿರುತ್ತವೆ.  ಸಣ್ಣಮಳೆ, ಸುರಿಮಳೆ, ಜರಿಮಳೆ, ಜಡಿಮಳೆ-ಹೀಗೆ  ಮೂಡಿಗೆ ತಕ್ಕಂತೆ ಪ್ರೇಮವನ್ನು ಉದ್ದೀಪಿಸುವ ಬಾರೀಶ್‌ನಲ್ಲಿ ಈ ತಾಣಗಳು ಬಾಲಿವುಡ್ ಸಿನಿಮಾಗಳ ಸೆಟ್‌ನಂತೆ ಕಾಣುತ್ತವೆ. ಮನ್ಸೂನ್‌ನಲ್ಲಿ ಒಂದೇ ಛತ್ರಿಯೊಳಗೆ ಅವಿತು ಸಾರ್ವಜನಿಕರ ಇಣುಕು ನೋಟಗಳಿಂದ ಬಚಾವ್ ಆಗುವ ಅವಕಾಶವೂ ಇರುತ್ತದೆ! ಇಷ್ಟಾಗಿಯೂ ಇಲ್ಲೆಲ್ಲ ಸಾರ್ವಜನಿಕ ಸಭ್ಯತೆಯನ್ನು ಮೀರುವಂತಿಲ್ಲವಾದ್ದರಿಂದ ಈ “ಚೌಪಾಟಿ ಪ್ಯಾರ್” ಒಂದು ಮಿತಿಯೊಳಗೇ ತೃಪ್ತಿಪಡಬೇಕಾಗುತ್ತದೆ. ಇಂಥ ಪ್ರೇಮಕ್ಕೆ ಪರಿಪೂರ್ಣ ದೈಹಿಕ ಆಯಾಮ ಸಾಧ್ಯವಾಗುವುದಿಲ್ಲ.

 

ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್ ಕೂಡ ಮುಂಬೈನ ಪ್ರಸಿದ್ಧ ರೋಮ್ಯಾಂಟಿಕ್ ಜಾಗಗಳಲ್ಲಿ ಒಂದು.  ಕೈಕೈ ಹಿಡಿದು ಉದ್ದಕ್ಕೂ ನಡೆಯಬಹುದಾದ ಸಮುದ್ರ ತೀರ, ದಡಗಳಲ್ಲಿ ತೂಗುವ ಸಾಲು ತೆಂಗಿನ ಮರಗಳು ಸ್ನೇಹ-ಪ್ರೀತಿ-ಪ್ರೇಮಕ್ಕೆ ಸುಂದರ ಪರಿಸರ ನಿರ್ಮಿಸಿವೆ. ಸನಿಹದಲ್ಲೇ ಇರುವ ಶಾರುಖ್ ಖಾನನ ಮನೆ “ಮನ್ನತ್ ” ಇಡೀ ಪ್ರದೇಶವನ್ನು ಇನ್ನಷ್ಟು ರೋಮ್ಯಾಂಟಿಕ್ ಆಗಿಸಿದೆ. ಆದಾಗ್ಯೂ ಇದು ಜನವಸತಿ ಇರುವ ಸ್ಥಳವಾದ್ದರಿಂದ ಸಾರ್ವಜನಿಕ ಶಿಷ್ಟತೆಗೆ ಭಂಗ ತರುವಂತಿಲ್ಲ. ಬ್ಯಾಂಡ್ ಸ್ಟ್ಯಾಂಡ್ ತುದಿಯಲ್ಲಿ  ಸಮುದ್ರದ ತುದಿಕ್ಕೆ ಒತ್ತಿರುವ ಒಂದು ಕಾರ್ನರ್ ಇದ್ದು ಅದು ಪ್ರೇಮಕಾಶಿ ಎನಿಸಿಕೊಂಡಿದೆ. ಈ ಜಾಗಕ್ಕೆ ಸಾಮಾನ್ಯವಾಗಿ ಸಾರ್ವಜನಿಕರು ಕಾಲಿಡುವುದಿಲ್ಲ. ಉತ್ಕಟ ಪ್ರೇಮದಲ್ಲಿ ಮೈಮರೆಯುವ ಜೋಡಿಗಳಿಗೆ “ಏನುಬೇಕಾದರೂ ಮಾಡಿಕೊಳ್ಳುವಂಥ” ಪ್ರೈವಸಿ ಲಭ್ಯವಾಗುವ ಪಬ್ಲಿಕ್ ಜಾಗವಿದು!

 

ಮುಂಬೈನಿಂದ ಸುಮಾರು ಮೂವತ್ತು ಮೈಲಿ ದೂರದಲ್ಲಿರುವ ವಸಾಯಿ-ಚಾ-ಕಿಲ್ಲಾ ಕೂಡ ಲವರ್ಸ್ ಸ್ಪಾಟ್ ಎಂದು ಹೆಸರಾಗಿದೆ. ಪಾಲ್ಗರ್ ಜಿಲ್ಲೆಯ ಈ ವಸಾಯಿ ಎಂಬ ಸ್ಥಳವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಸಮುದ್ರ ತಟದಲ್ಲಿರುವ ಈ ಸುಂದರ ಪ್ರದೇಶವು ಗುಜರಾತ್ ಸುಲ್ತಾನರು, ಪೋರ್ಚುಗೀಸರು , ಮರಾಠಾ ಪೇಶ್ವೆಗಳು ಮತ್ತು ಬ್ರಿಟಿಷರ ಆಡಳಿತಕ್ಕೊಳಪಟ್ಟಿತ್ತು. ನಮ್ಮ ಚಾಲುಕ್ಯರೂ ಕೂಡ ಈ ಭಾಗವನ್ನು ಆಳಿದ ಬಗ್ಗೆ ದಾಖಲೆಗಳಿವೆಯಂತೆ.

 

ಈಗ ವಸಾಯಿ-ಚಾ-ಕಿಲ್ಲಾ ಪಾಳುಬಿದ್ದ ಕೋಟೆಯಾಗಿದ್ದು ಜನಸಂಪರ್ಕ ಕಡಿಮೆಯಾದ್ದರಿಂದ ಪಡ್ಡೆಪ್ರೇಮಿಗಳಿಗೆ ಪ್ಯಾರಾಡೈಸ್ ಎನಿಸಿಕೊಂಡಿದೆ. ಇಲ್ಲಿಯ ಪೋರ್ಚುಗೀಸರ ಕಾಲದ ಚರ್ಚುಗಳು ಪೇಶ್ವೆ ಮತ್ತು ಬ್ರಿಟಿಷರ ಕಾಲದ ಭಗ್ನ ಇಮಾರತುಗಳು ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದಿದಿರುವುದರಿಂದ ಅದೆಷ್ಟೇ ಸುಂದರವಾಗಿದ್ದರೂ ಮಾನವಂತ ಪ್ರೇಮಿಗಳಿಗೆ ಈ ಜಾಗ ತರವಲ್ಲ!

 

ಇಂದಿನ ಯುವಜನರು ಲವ್ ಮತ್ತು ಸೆಕ್ಸ್ ವಿಷಯದಲ್ಲಿ ಹೆಚ್ಚು ತೆರೆದ ಮನಸ್ಸಿನವರಾಗಿದ್ದಾರೆ, ಸಮಾಜವೂ ನಿಧಾನವಾಗಿ ಬಿಗಿ ಮನಸ್ಥಿಯಿಂದ ಸಡಿಲುಗೊಂಡಿದೆಯಾದರೂ ಸಾರ್ವಜನಿಕ  ಶಿಷ್ಟತೆ ಗಟ್ಟಿಯಾಗಿಯೇ ಇದೆ.  ಹೀಗಾಗಿ ಅನೇಕ ಅವಸ್ಥಾಂತರಗಳಲ್ಲಿ ಪ್ರೀತಿಯನ್ನು ಕೊಂಡೊಯ್ಯಬೇಕಾದರೆ ಪ್ರೇಮಿಗಳು ಹೊಸ ಹೊಸ ಸಾಹಸಗಳಿಗೆ ಇಳಿಯಬೇಕಾಗುತ್ತದೆ. ಲಾಂಗ್ ಡ್ರೈವ್ ಕ್ಯಾಬ್ ಬುಕ್ ಮಾಡಿ ಕಾರಿನಲ್ಲೇ ಪ್ರೇಮಿಸುವುದು, ಕೈಲಿ ಕಾಂಚಾಣವಿದ್ದು ಧೈರ್ಯವೂ ಸಾಥ್ ನೀಡಿದ್ದರೆ ಗೇಟವೇ ಬಳಿ ಇಡೀ ಬೋಟ್ ಬಾಡಿಗೆ ಪಡೆದು ಸಂಜೆ ಕಳೆಯುವುದು, ಮುಂಬೈನಿಂದ ಹೊರಗೆ ಸುಂದರ ಖಂಡಾಲಾ, ಲೋನಾವಾಳದಲ್ಲಿ ಐಶ್ ಮಾಡುವುದು ಇತ್ಯಾದಿ. ಲೋನಾವಳದಂಥ ತಾಣಗಳಲ್ಲಿ ಸ್ವಾತಂತ್ರ್ಯ ಸಿಕ್ಕರೂ ಹೋಟೆಲ್ಲಿನವರು ಜೋಡಿಗಳನ್ನು ಒಂದು ರೀತಿಯ ಕೀಳು ಗುಮಾನಿಯಿಂದ ಕಾಣುವುದರಿಂದ ನಿಜವಾದ ಪ್ರೇಮಿಗಳಿಗೆ ಕಿರಿಕಿರಿ ತಪ್ಪುವುದಿಲ್ಲ. ಅವರು ಬಯಸಿದ ಮಾನಸಿಕ ಸ್ವಚ್ಛಂದತೆ ಅಲ್ಲಿಯೂ ದಕ್ಕುವುದಿಲ್ಲ. ಸಹಜ ಪ್ರೇಮಕ್ಕೂ ಕಳಂಕದ ಛಾಯೆ ಹಿಂಬಾಲಿಸುವ ಮುಜುಗುರ ಉಂಟಾಗುತ್ತದೆ.

 

ಹೈ-ಫೈ ವರ್ಗದವರಿಗೆ, ಶ್ರೀಮಂತರಿಗೆ ಮತ್ತು ಸಿನಿಮಾ- ಜಾಹೀರಾತಿನಂಥ ಕ್ಷೇತ್ರಗಳಲ್ಲಿ ಉತ್ತಮ ಗಳಿಕೆ ಮತ್ತು ಸ್ವಾತಂತ್ರ್ಯ ಹೊಂದಿರುವ, ಅಂಧೇರಿ-ಬಾಂದ್ರಾದಂಥ ಉಪನಗರಗಳಲ್ಲಿ ಸಿಂಗಲ್ ಲಿವಿಂಗ್‌ನಲ್ಲಿರುವ ಯುವಕ ಯುವತಿಯರಿಗೆ “ಸ್ಪೇಸ್’’ ಅಂಥ ಸಮಸ್ಯೆಯಲ್ಲ. ಕೆಲವು ಸೊಸೈಟಿಗಳಲ್ಲಿ ಅಕ್ಕಪಕ್ಕದವರಿಗೆ ತೊಂದರೆಯಾಗದಿದ್ದರೆ ನೀವು ಏನು ಮಾಡಿಕೊಂಡರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಒನ್ ಬಿಎಚ್ಕೆಯಲ್ಲಿ ಇಡೀ ಕುಟುಂಬ ಇರುವ ಮಧ್ಯಮ ವರ್ಗದವರಿಗೆ, ಒಂದೇ ರೂಮಲ್ಲಿ ನಾಲ್ಕೈದು ಜನ ಶೇರ್ ಮಾಡಿಕೊಳ್ಳುವ ಯುವ ವರ್ಗಕ್ಕೆ ಮಾತ್ರ ಇಂಥದ್ದಕ್ಕೆಲ್ಲ ಅವಕಾಶ ಇರುವುದಿಲ್ಲ. ಇವರು “ಚೌಪಾಟಿ ಪ್ಯಾರ್” ನಲ್ಲಿ  “ಬ್ಯಾಂಡ್ ಸ್ಟ್ಯಾಂಡ್ ಇಶ್ಕ” ನಲ್ಲೇ ತೃಪ್ತರಾಗುವುದು ಅನಿವಾರ್ಯವಾಗುತ್ತದೆ.

 

ಯುವ ಮನಸುಗಳು ವಯೋಸಹಜ ಭಾವನೆಗಳ ಅಭಿವ್ಯಕ್ತಿಗೆ ಆಪ್ತಕ್ಷಣ ಮತ್ತು ಸುರಕ್ಷಿತ ತಾಣವನ್ನು ಸದಾ ಬಯಸುತ್ತವೆ. ಮುಂಬೈನಂಥ ಜನನಿಬಿಡ ಸ್ಥಳದಲ್ಲಿ ಪೂರ್ಣ ಪ್ರಮಾಣದ ಏಕಾಂತ ಕಷ್ಟವಾದರೂ ಈ ಜನರೇಶನ್ ಹೊಸಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಮಹಾನಗರಿಯಂಥ ಬಟಾಬಯಲಿನಲ್ಲೂ ಪಲ್ಲವಿಸುವ ಪ್ರೇಮಕ್ಕೆ ಪುಟ್ಟ ಚಪ್ಪರದ ಕನಸು ಕಾಣುತ್ತಾರೆ.

ಬರಲಿರುವ ವ್ಯಾಲೆಂಟೈನ್ ಡೇ ಅನ್ನು ಅಮ್ಚಿ ಮುಂಬೈ ಪಬ್ಲಿಕ್‌ನ ಕಣ್ತಪ್ಪಿಸಿ ವಿಶೇಷ ರೀತಿಯಲ್ಲಿ ಸಂಭ್ರಮಿಸಲು ಈಗಾಗಲೇ ಚೋಕರಾ-ಚೋಕರಿಯರು ಪ್ರೈವೇಟಾಗಿ ಸ್ಕೆಚ್ ಹಾಕುತ್ತಿರಬಹುದು!

***

 

 

Leave a Reply