fbpx

ಸ್ಟಾಕ್ ಮಾರ್ಕೆಟ್ ಮತ್ತು ದಾರಿ ತಪ್ಪಿದ “ರಾಜು ಕನ್ನಡ ಮೀಡಿಯಂ”..

 

 

 

 

ಸಿರೂರ್ ರೆಡ್ಡಿ 

 

 

 

 

ಹೋದ ವಾರದ ಸ್ಟಾಕ್ ಮಾರ್ಕೆಟ್ ಹೊಡೆತ ಜೋರಾಗಿಯೇ ತಾಗಿದೆ. ಇಂದು ಮುಂಜಾನೆ ಮತ್ತೆ ಶುರುವಾದ ಅದೇ ಹೊಡೆತಕ್ಕೆ ರಿಟೈರ್ಮೆಂಟ್ ಖಾತೆಯಿಂದ ೨೦ ಸಾವಿರ ಡಾಲರ್ ಒಂದೇ ಸಾರಿ ಡಮಾರ್!

ಟಿವಿ, ಫಿಡೆಲಿಟಿ, ಈ-ಟ್ರೇಡ್…. ಎಲ್ಲ ಬಂದ್ ಮಾಡಿ ಅತ್ಲಾಗೆ ಕನ್ನಡ ಸಿನೆಮಾನಾದ್ರೂ ನೋಡಿ ಮನಸ್ಸು ತಣ್ಣಗೆ ಮಾಡಿಕೊಳ್ಳೋಣವೆಂದು ಥೀಯೇಟರ್ಗೆ ನುಗ್ಗಿದ್ದಾಯ್ತು. ಹತ್ತು ನಿಮಿಷ ತಡ ಮಾಡಿ ಹೋದರೂ ಸಿನಿಮಾ ಶುರು ಆಗಿರಲಿಲ್ಲ. ಕಾರಣ ಅಲ್ಲಿ ಪ್ರೇಕ್ಷಕರೇ ಇಲ್ಲ.

ಇತ್ತೀಚೆಗೆ ಟೆಕ್ಸಾಸ್ ರಾಜ್ಯದಲ್ಲಿ ಕನ್ನಡ ಸಿನಿಮಾಗಳನ್ನ ತೋರಿಸಿ ಕಾಸು ಮಾಡೋಣವೆಂದು ಬಂದಿದ್ದ ಒಂದು ಪ್ರಪೋಸಲ್ ನೆನಪಿಸಿಕೊಂಡು ಒಂದು ಕ್ಷಣ ಮೈ ಕಂಪಿಸಿತು.

ಕೊನೆಗೆ ೧೦ ಡಾಲರ್ ತಗೊಂಡ ಟಿಕೆಟ್ ಮಾರೋ ಹುಡುಗ “ರಾಜು ಕನ್ನಡ ಮೀಡಿಯಂ” ಸಿನಿಮಾ ಚಾಲೂ ಮಾಡಿದ. ಇಡೀ ಥಿಯೇಟರ್ಗೆ ನಾನೊಬ್ಬನೇ ರಾಜ. ಅದಿರಲಿ, ಸಿನಿಮಾದ ಹೆಸರು ಕೇಳಿ ಇದೊಂದು ನವಿರಾದ ಕಾಮೆಡಿ ಕಥೆ ಅಂತ ಭಾವಿಸಿದ್ದರೆ ಮೋಸ ಹೋಗೋದು ಖಂಡಿತ.

ಹಳ್ಳಿಗಾಡಿನಿಂದ ಬಂದು ಬೆಂಗಳೂರೆಂಬ ಮಾಯಾವಿನಿಯ ಕೈಯಲ್ಲಿ ಸಿಕ್ಕಿಹಾಕಿಕೊಳ್ಳೋ ಜನರ ಬಗ್ಗೆ ಹಲವು ಸಿನೆಮಾಗಳು ಬಂದು ಹೋಗಿವೆ. ಆ ಪೈಕಿ ಅಣ್ಣಾವ್ರ “ಮೇಯರ್ ಮುತ್ತಣ್ಣ” ಈಗಲೂ ನೆನಪಿನಲ್ಲುಳಿಯೋ ಚಿತ್ರ. ಈ “ರಾಜು ಕನ್ನಡ ಮೀಡಿಯಂ” ಅನ್ನೋ ಸಿನಿಮಾದಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಡುವೆ ನಡೆಯೋ ಸ್ವಾರಸ್ಯಕರ ಸಂದರ್ಭಗಳು ಕಾಟಾಚಾರಕ್ಕೆ ಒಂದೆರಡಿವೆ ಅಷ್ಟೇ.

ಇನ್ನುಳಿದಂತೆ ಮೊದಲರ್ಧದಲ್ಲಿ ಮಲೆನಾಡಿನ ಸುಂದರ ತಾಣದಲ್ಲಿ ನಡೆಯೋ ಹದಿಹರೆಯದ ಪ್ರೇಮ ಪ್ರಕರಣ ಪರವಾಯಿಲ್ಲ ಅನ್ನೋ ಹೊತ್ತಿಗೆ ಕಥೆ ಬೆಂಗಳೂರಿಗೆ ಸ್ಥಳಾಂತರಗೊಂಡು ಸ್ವಾರಸ್ಯ ಕಳೆದುಕೊಳ್ಳುತ್ತೆ. ಅಲ್ಲಿಂದ ಅಮೆರಿಕಾ, ಯಾವುದೋ ಅಜ್ಞಾತ ದ್ವೀಪ ಮತ್ತು ಆ ದ್ವೀಪದಲ್ಲಿ ಅಲ್ಲಾವುದ್ದೀನನ ಮ್ಯಾಜಿಕ್ ರೀತಿ ಪ್ರತ್ಯಕ್ಷ ಆಗೋ ಬಿಳಿ ಹುಡುಗಿ, ನಮ್ಮ ಕನ್ನಡದ ರಾಜನನ್ನ ತಿನ್ನಲು ಬರೋ ಶಾರ್ಕ್…… ಇತ್ಯಾದಿ, ಇತ್ಯಾದಿ..

ಹೀಗೇ ಕಥೆ ಮುಂದುವರಿದು ಪ್ರೇಕ್ಷಕ ಎದ್ದೋದ್ರೆ ಸಾಕು ಅನ್ನೋ ತೀರ್ಮಾನ ತಗೋಳ್ಳೋ ಹೊತ್ತಿಗೆ ಎಲ್ಲ “ಶುಭಮ್”. ಆಶ್ಚರ್ಯದ ಸಂಗತಿ ಏನಂದ್ರೆ ಈ ಸಿನೆಮಾ ಕರ್ನಾಟಕದಲ್ಲಿ ಚೆನ್ನಾಗಿ ಓಡಿದೆಯಂತೆ. ಅಂದರೆ, ಉತ್ತಮ ಕನ್ನಡ ಸಿನಿಮಾಗಳಿಗೆ ಎಂಥಾ ಬರ ಬಂದಿರಬೇಕು.

ಥಿಯೇಟರ್ ಹೊರಗೆ ಬಂದು ಮತ್ತೊಮ್ಮೆ ರಿಟೈರ್ಮೆಂಟ್ ಖಾತೆ ನೋಡಿಕೊಳ್ಳೋಕೆ ಮನಸ್ಸು ಒಪ್ಪಲಿಲ್ಲ. ಸೀದಾ ನನ್ನ ಅಚ್ಚುಮೆಚ್ಚಿನ ಗೆಳೆಯರ ಬಳಿಗೆ ಹೋಗೋಣವೆಂದರೆ ಅವರು ೧೦ ಸಾವಿರ ಮೈಲಿ ದೂರದಲ್ಲಿ ರಾತ್ರಿ ಮಜಾ ಮಾಡಿ ಇನ್ನೂ ಬೆಚ್ಚಗೆ ಮಲಗಿರುತ್ತಾರೆ. ಅದೆಲ್ಲ ಆಗದ ಮಾತೆಂದು ವಾಸ್ತವಕ್ಕೆ ಬಂದೆ.

ಸ್ಟಾಕ್ ಮಾರ್ಕೆಟಿನಲ್ಲಿ ಮತ್ತು ಕನ್ನಡ ಸಿನಿಮಾ ನೋಡಿ ಆದ ಮಾನಸಿಕ ಆಘಾತ ಮರೆಯಲು ನಮ್ಮ ಕೇಶವರೆಡ್ಡಿ ಹಂದ್ರಾಳರ “ದ್ರವಾ ರಕ್ಕಸಿ”ಯ ಮೊರೆ ಹೋಗುತ್ತಿದ್ದೇನೆ. ಆದದ್ದಾಗಲಿ.

1 Response

  1. G Mruthyunjaya says:

    You are absolutely right. I also saw the film yesterday. I should have read your article yesterday.

Leave a Reply

%d bloggers like this: