fbpx

ಅಂದು ನಾನು ಚೆಗೆವಾರನ ಮೋಟಾರ್ ಸೈಕಲ್ ಡೈರಿಯನ್ನು ಓದುತ್ತಿದ್ದೆ..

ಅಂದು ನಾನು ಚೇಗೆವಾರನ ಮೋಟಾರ್ ಸೈಕಲ್ ಡೈರಿಯನ್ನು ಓದುತ್ತಿದ್ದೆ..

ಚೇಗೆವಾರ ಮತ್ತು ಆತನ ಮಿತ್ರ ಆಲ್ಬರ್ಟೋರ ಸಾಹಸಮಯ ಪಯಣದಲ್ಲಿ ವಿಚಿತ್ರ ರಾತ್ರಿಯೊಂದು ಎದುರಾಗುತ್ತದೆ. ಅಂದು ಮೈಕೊರೆಯುವ ಚಳಿಯಲ್ಲಿ ಚಿಲಿಯನ್ ಕಮ್ಯೂನಿಸ್ಟ್ ದಂಪತಿಗಳೊಬ್ಬರು ಈ ತರುಣರಿಗೆ ಮಾತಿಗೆ ಸಿಗುತ್ತಾರೆ. ಜೀವನದುದ್ದಕ್ಕೂ ಕಷ್ಟವನ್ನೇ ಉಸಿರಾಡಿದ ಜೋಡಿಯದು.

ಆತ ಮೂರು ತಿಂಗಳುಗಳ ಕಾಲ ಜೈಲಿನಲ್ಲಿ ಒದ್ದಾಡಿದ್ದರೆ ಆತನ ಪತ್ನಿ ಆ ಸಂಕಷ್ಟದ ಸಮಯದಲ್ಲೂ ಆತನ ಜೊತೆಗೆ ನಿಂತಿದ್ದಳು. ಮಕ್ಕಳನ್ನು ಒಬ್ಬ ಸಹೃದಯಿ ನೆರೆಮನೆಯವನ ಬಳಿ ನೋಡಿಕೊಳ್ಳಲು ಬಿಟ್ಟು ಜೀವನೋಪಾಯಕ್ಕೊಂದು ದಾರಿ ಮಾಡಿಕೊಳ್ಳಲು ಈ ಜೋಡಿಯು ಹೊರಟಿತ್ತು. ಆದರೆ ತಮ್ಮ ಮಾರ್ಗದುದ್ದಕ್ಕೂ ಅವರಿಗೆ ಸಿಕ್ಕಿದ್ದು ಕಣ್ಣೀರು ಮತ್ತು ಹತಾಶೆ ಮಾತ್ರ.

ಹೊರಗಡೆ ಮೈಕೊರೆಯುವ ಚಳಿಯಾದರೆ ಒಳಗಡೆ ಇಬ್ಬರಿಗೂ ದೇಹದ ಕಸುವನ್ನು ಇಷ್ಟಿಷ್ಟಾಗಿ ತಿಂದುಹಾಕುವ ಹಸಿವು. ಅಂದು ಅವರಿಬ್ಬರು ಅದ್ಯಾವ ದೈನ್ಯ ಸ್ಥಿತಿಯಲ್ಲಿದ್ದರೆಂದರೆ ಬೆನ್ನಮೂಳೆಯನ್ನು ಹರಿದುಹಾಕಬಲ್ಲ ಆ ಚಳಿಗೆ ಹೊದ್ದುಕೊಳ್ಳಲು ಒಂದು ಕಂಬಳಿಯೂ ಆ ದಂಪತಿಗಳ ಬಳಿಯಲ್ಲಿರಲಿಲ್ಲ.

ಮಾತುಕತೆಗಳು ನಡೆಯುತ್ತಿರುವಂತೆಯೇ ಚೇ ಮತ್ತು ಆಲ್ಬರ್ಟೋ ಅವರಿಗೆ ತಿನ್ನಲು ರೊಟ್ಟಿ ಮತ್ತು ಚಳಿಗೆ ಸವಿಯಲು ಬಿಸಿಬಿಸಿ ಮೇಟ್ (ಅರ್ಜೆಂಟೀನಾದ ಚಹಾ) ಅನ್ನು ನೀಡುತ್ತಾರೆ.

ನಂತರ ಇವರ ಕಥೆಯನ್ನು ಕೇಳಿ ಮರುಗುವ ಈ ಇಬ್ಬರೂ ತಮ್ಮಲ್ಲಿರುವ ದಪ್ಪನೆಯ ಒಂದು ಕಂಬಳಿಯನ್ನು ದಂಪತಿಗಳಿಗೆ ನೀಡುತ್ತಾರೆ. ಉಳಿದ ಒಂದು ಕಂಬಳಿಯಲ್ಲಿ ಚೇ ಮತ್ತು ಆಲ್ಬರ್ಟೋ ಇಬ್ಬರೂ ಮುದುಡಿಕೊಂಡು ರಾತ್ರಿಯನ್ನು ಹೇಗೋ ಕಳೆಯುತ್ತಾರೆ.

ಆ ರಾತ್ರಿಯ ಬಗ್ಗೆ ತನ್ನ ಡೈರಿಯಲ್ಲಿ ಚೇ ಹೀಗೆಂದು ಬರೆಯುತ್ತಾನೆ: ”ಆ ದಂಪತಿಗಳು ಜಗತ್ತಿನ ಯಾವುದೇ ಭಾಗದ ಕಾರ್ಮಿಕನೊಬ್ಬನ ಜೀವನವನ್ನು ಪ್ರತಿನಿಧಿಸುತ್ತಿರುವವರಂತೆ ಅಂದು ಕಂಡರು. ಅದು ನನ್ನ ಜೀವನದ ಅತ್ಯಂತ ಚಳಿಯ ರಾತ್ರಿಗಳಲ್ಲೊಂದು. ಆದರೆ ಅಂದು ನನಗೆ ಈ ಜನಾಂಗದ ಪ್ರತಿಯಾಗಿ ಮತ್ತಷ್ಟು ಭ್ರಾತೃತ್ವದ ಭಾವನೆಯು ಜಾಗೃತವಾಯಿತು. ಈ ಜನಾಂಗವನ್ನು ಮಾನವ ಪ್ರಬೇಧವೆಂದೇ ಕರೆಯೋಣ”.

ತನ್ನ ಹನ್ನೆರಡು ಸಾವಿರ ಕಿಲೋಮೀಟರುಗಳಿಗೂ ಮಿಕ್ಕಿದ ಪಯಣದ ಮುಂದಿನ ದಿನಗಳಲ್ಲೂ ಇಂಥಾ ಹಲವು ಅನುಭವಗಳು ಚೇಗೆವಾರನಿಗಾಗುತ್ತವೆ. ಈ ಕಾರಣಕ್ಕಾಗಿಯೇ ಏನೋ, ಚೇ ಕೊನೆಯಲ್ಲಿ ಬರೆದುಬಿಟ್ಟ: ”ಈ ಪಯಣವು ನನ್ನನ್ನು ಬದಲಿಸಿಬಿಟ್ಟಿತು. ಮನೆಯಿಂದ ಹೊರಡುವ ಮುನ್ನ ಇದ್ದ ಚೇ ಈಗ ನಾನಲ್ಲ”, ಎಂದು.

ನಾನು ಪ್ರವಾಸಕಥನಗಳನ್ನು ಹೆಚ್ಚು ಓದಿದವನಲ್ಲ. ತನ್ನ ಈ ಹಿಂದಿನ ಚಿಕ್ಕಪುಟ್ಟ ಪ್ರಯಾಣಗಳನ್ನು ಇಷ್ಟು ವಿವರವಾಗಿ ದಾಖಲಿಸಿಕೊಂಡವನಂತೂ ಅಲ್ಲವೇ ಅಲ್ಲ. ಆದರೆ ಚೇ ಯ ಪ್ರಯಾಣದ ಅನುಭವಗಳು ನನ್ನ ಮನಕಲಕಿದ್ದು ಸತ್ಯ. ”ದ ಮೋಟಾರ್ ಸೈಕಲ್ ಡೈರಿ”ಯ ಬಗ್ಗೆ ಅಷ್ಟು ಕೇಳಿದ್ದರೂ ಓದಲು ಇಷ್ಟು ವರ್ಷ ತೆಗೆದುಕೊಂಡೆನಲ್ಲಾ ಎಂಬ ಪಶ್ಚಾತ್ತಾಪವೂ ನಂತರ ನನಗಾಗಿತ್ತು.

ಏಕೆಂದರೆ ಚೇಗೆವಾರನಿಗಾದಂಥಾ ಅನುಭವಗಳು ಅಂಗೋಲಾದಲ್ಲೂ ನನಗೆ ಸಾಕಷ್ಟು ಆಗಿದ್ದವು. ನನ್ನನ್ನು ಕಂಗೆಡಿಸಿದ್ದವು, ಕಣ್ಣಾಲಿಗಳನ್ನು ಒದ್ದೆಯಾಗಿಸಿದ್ದವು, ತಿಂಗಳಾನುಗಟ್ಟಲೆ ದುಃಸ್ವಪ್ನದಂತೆ ಕಾಡಿದ್ದವು. ಒಂದೆಡೆ ಇಂಥದ್ದೊಂದು ಜಗತ್ತೂ ಕೂಡ ಇದೆ ಎಂಬುದನ್ನು ಒಪ್ಪಿಕೊಳ್ಳಲು ಕಷ್ಟವಾದರೆ ಮತ್ತೊಂದೆಡೆ ಇವರಿಗೆ ಯಾವ ರೀತಿಯಲ್ಲಿ ನೆರವಾಗಬಹುದು ಎಂಬ ಕಳಕಳಿಯೂ ಕೂಡ. ಹೇಗೆ, ಏನು ಮಾಡಬೇಕೆಂದು ತಿಳಿಯದೆ ಪರಿಸ್ಥಿತಿಯು ನಮ್ಮನ್ನು ಗೊಂದಲದಲ್ಲಿ ದೂಡುವ, ಒಂದು ರೀತಿಯಲ್ಲಿ ಅಕ್ಷರಶಃ ಅಸಹಾಯಕತೆಯ ಭಾವವದು.

ಅಂದು ನಡೆದ ಒಂದು ಘಟನೆಯೂ ಕೂಡ ಇನ್ನೇನು ಬಂದು ನನ್ನನ್ನು ಕಾಡಲಿದ್ದ ಯೋಚನಾಸರಣಿಗೆ ಮುನ್ನುಡಿ ಬರೆದಿತ್ತು. ನನ್ನ ಮಟ್ಟಿಗೆ ಅದೊಂದು ಒಳ್ಳೆಯ ಮುಂಜಾನೆ. ಹೆಚ್ಚೇನೂ ವಿಶೇಷವಿಲ್ಲದ ಯಥಾಪ್ರಕಾರ ಬರುವ ಒಂದು ಮುಂಜಾನೆ. ಆಗಂತೂ ನನಗೆ ಎಲ್ಲವನ್ನೂ ಎಲ್ಲರನ್ನೂ ನನ್ನೊಳಗೆ ಇಳಿಸಿಕೊಳ್ಳುವ ಸಂಭ್ರಮ.

ಅಂಗೋಲಾ ನೆಲದಲ್ಲಿ ಕಾಲಿರಿಸಿದ ಆರಂಭದ ದಿನಗಳು ಬೇರೆ. ಹೀಗಿರುವಾಗಲೇ ದೊಡ್ಡದಾದ ಟ್ರಕ್ ಒಂದು ನಾವಿದ್ದ ಮಜ್ದಾ ಕಾರಿನ ಬಳಿಯಲ್ಲೇ ಹಾದುಹೋಯಿತು ನೋಡಿ. ಆ ಟ್ರಕ್ಕಿನ ಹಿಂದಿನ ತೆರೆದ ಭಾಗದಲ್ಲಿ ಸುಮಾರು ನಲವತ್ತು ಜನರಾದರೂ ಇದ್ದರು ಅನ್ನಿಸುತ್ತೆ. ದೊಡ್ಡದಾಗಿ ಅದೇನೋ ಹಾಡು ಹೇಳುತ್ತಾ, ಚಪ್ಪಾಳೆ ತಟ್ಟುತ್ತಾ, ನಿಂತಿದ್ದ ಒಂದಿಂಚು ಜಾಗದಲ್ಲೇ ಮೆತ್ತಗೆ ಹೆಜ್ಜೆಹಾಕುತ್ತಿರುವಂತೆ ಕಾಣುತ್ತಿತ್ತು ಈ ಜನಸಮೂಹ.

ಇನ್ನೇನು ಒಬ್ಬನೇ ಒಬ್ಬನನ್ನೂ ಅದರಲ್ಲಿ ಕೂರಿಸುವಂತಿರಲಿಲ್ಲ ಎಂಬಷ್ಟರ ಮಟ್ಟಿಗೆ ತುಂಬಿಹೋಗಿತ್ತು ಆ ಟ್ರಕ್ಕಿನ ಹಿಂಭಾಗ. ಆದರೆ ಅಲ್ಲೇನು ನಡೆಯುತ್ತಿದೆ ಎಂಬುದನ್ನು ಸರಿಯಾಗಿ ನೋಡುವುದಾದರೂ ಹೇಗೆ? ಜನರನ್ನೇ ತನ್ನಲ್ಲಿ ತುಂಬಿಕೊಂಡಿದ್ದ ಆ ಟ್ರಕ್ ಕ್ಷಣಾರ್ಧದಲ್ಲಿ  ನಮ್ಮತ್ತ ಹೀಗೆ ಬಂದು ಹಾಗೆ ಹಾದುಹೋಗಿತ್ತು.

ಇದಾದ ಕೆಲವೇ ಸೆಕೆಂಡುಗಳಲ್ಲಿ ಜನರನ್ನು ತುಂಬಿದ್ದ ಇಂಥದ್ದೇ ಮತ್ತೆರಡು ಟ್ರಕ್ಕುಗಳು ನಮ್ಮನ್ನು ಹಾದುಹೋದವು. ಎಲ್ಲದರಲ್ಲೂ ಜನವೋ ಜನ. ಸ್ಥಳೀಯ ಗುತ್ತಿಗೆದಾರರು ತಮ್ಮ ಕಾರ್ಮಿಕರನ್ನು ಎಲ್ಲಿಗೋ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ತಕ್ಷಣದ ಲೆಕ್ಕಾಚಾರ ನನ್ನದು. ಆದರೆ ಆ ಚಪ್ಪಾಳೆ, ಹಾಡುಗಳು ಅದ್ಯಾಕೋ ನನ್ನ ತರ್ಕಕ್ಕೆ ನ್ಯಾಯವನ್ನೊದಗಿಸಿದಂತೆ ಕಾಣಲಿಲ್ಲ. ಹೀಗೆ ಮಾತುಮಾತಲ್ಲೇ ಈಗ ನಾವು ಕಂಡಿದ್ದೇನು ಎಂದು ನಮ್ಮ ದುಭಾಷಿಯನ್ನು ನಾನು ಕೇಳಿಯೇಬಿಟ್ಟಿದ್ದೆ.

ಅವರೆಲ್ಲರೂ ಶವಸಂಸ್ಕಾರಕ್ಕೆಂದು ಸ್ಮಶಾನಕ್ಕೆ ಹೋಗುತ್ತಿದ್ದಾರೆ ಎಂದ ಆತ. ಆ ರಸ್ತೆಯಲ್ಲಿ ಹಾಗೇ ಅರ್ಧ ಕಿಲೋಮೀಟರ್ ಮುಂದುವರಿದು ಎಡಕ್ಕೆ ತಿರುಗಿದರೆ ಸಿಗುವ ಮಣ್ಣಿನ ಮಾರ್ಗವೊಂದು ನಮ್ಮನ್ನು ಊರ ಸ್ಮಶಾನಕ್ಕೆ ತಲುಪಿಸುತ್ತದಂತೆ. ಆ ಚಪ್ಪಾಳೆ, ಹಾಡುಗಳೂ ಕೂಡ ಶವಸಂಸ್ಕಾರದ ಅವಧಿಯಲ್ಲೇ ಅನುಸರಿಸಲಾಗುವ ಪರಿಪಾಠಗಳು ಎಂಬ ಮಾಹಿತಿಯು ನನಗೆ ಆತನಿಂದ ದೊರಕಿತು. ”ಮುಂದೆ?”, ಎನ್ನುವಂಥಾ ಭಾವವನ್ನು ಕಣ್ಣಲ್ಲೇ ತೋರಿಸಿದ ನಾನು ಅವನ ಮತ್ತಷ್ಟು ಮಾತುಗಳಿಗೆ ಕಿವಿಯಾಗಲು ಅಣಿಯಾದೆ.

ಅಸಲಿಗೆ ನಾನಂದು ನೋಡಿದ ದೃಶ್ಯವು ಅದೆಷ್ಟು ಚಿಕ್ಕ ಅವಧಿಯದ್ದಾಗಿತ್ತೆಂದರೆ ಬಹಳಷ್ಟು ಸಂಗತಿಗಳು ನನ್ನ ಕಣ್ಣಿಗೆ ಗೋಚರಿಸಿಯೇ ಇರಲಿಲ್ಲ. ನಾನು ನೋಡಿದ ಮೂರು ಟ್ರಕ್ಕುಗಳಲ್ಲಿ ಮೊದಲ ಟ್ರಕ್ ನ ಹಿಂಭಾಗವು ಶವಪೆಟ್ಟಿಗೆಯನ್ನು ಹೊಂದಿತ್ತಂತೆ. ಇದ್ದಿರಲೂಬಹುದು. ಆ ಟ್ರಕ್ಕಿನಲ್ಲಿ ಅದೆಷ್ಟು ಜನ ತುಂಬಿಕೊಂಡಿದ್ದರೆಂದರೆ ಸಮತಲದಲ್ಲಿ ಇಟ್ಟಿದ್ದ ಶವಪಟ್ಟಿಗೆಯು ಜನರ ರಾಶಿಯಲ್ಲಿ ನನಗೆ ಕಂಡೇ ಇರಲಿಲ್ಲ. ”ಉಳಿದೆರಡು ಟ್ರಕ್ಕುಗಳಲ್ಲಿ ವಿಶೇಷವೇನೂ  ಇಲ್ಲ. ಜನರೆಲ್ಲರೂ ಜೊತೆಯಾಗಿ ಸ್ಮಶಾನಕ್ಕೆ ಹೋಗುತ್ತಿದ್ದಾರೆ”, ಎಂದಷ್ಟೇ ಹೇಳಿ ನನ್ನ ಕುತೂಹಲಕ್ಕೆ ಮಂಗಳ ಹಾಡಿಬಿಟ್ಟಿದ್ದ ದುಭಾಷಿ ಸಾಹೇಬ. ನಾನೂ ಕೂಡ ಮನೆ ತಲುಪಿದ ನಂತರ ಇದನ್ನು ಮರೆತೇಬಿಟ್ಟೆ. ಆದರೂ ಬೆಳ್ಳಂಬೆಳಗ್ಗೆ ಶವಯಾತ್ರೆ ನೋಡಬೇಕಾಗಿ ಬಂದಿತಲ್ವಾ ಎಂಬ ಅಳುಕಂತೂ ಇದ್ದೇ ಇತ್ತು.

ಆದರೆ ನನಗೆ ನಿಜವಾದ ಗೊಂದಲಗಳಾಗಿದ್ದು ಮುಂದಿನ ದಿನಗಳಲ್ಲಿ. ಮುಂದಿನ ಮೂರು ದಿನಗಳಲ್ಲಿ ಸತತವಾಗಿ ಇಂಥಾ ದೃಶ್ಯಗಳು ಕಣ್ಣೆದುರು ಮರುಕಳಿಸಿದ್ದವು. ನಾಲ್ಕನೇ ದಿನವಂತೂ ಪೂರ್ವಾಹ್ನದಲ್ಲಿ ಒಂದು, ಅಪರಾಹ್ನದ ನಂತರ ಮತ್ತೊಂದು, ಹೀಗೆ ಎರಡು ಜನನಿಬಿಡ ಶವಯಾತ್ರೆಗಳನ್ನು ನಾನು ನೋಡಿದ್ದೆ.

ಸಾವು ನನಗೆ ಹೌಹಾರುವ ಸಂಗತಿಯೇನಲ್ಲ. ಆದರೆ ಸಾವನ್ನು ತೀರಾ ಹತ್ತಿರದಿಂದ ಕಂಡವನೂ ನಾನಲ್ಲ. ”ಏನಾಗುತ್ತಿದೆ ಇಲ್ಲಿ? ಇಷ್ಟು ಜನ ಇಷ್ಟು ಕಡಿಮೆ ಅವಧಿಯಲ್ಲಿ ಸಾಯುವುದಾದರೂ ಹೇಗೆ? ಇದು ಶವಸಂಸ್ಕಾರದ ಮೆರವಣಿಗೆಗಳೇ ಎಂಬ ಬಗ್ಗೆ ನಿನಗೆ ಖಾತ್ರಿಯಿದೆಯೇ?”, ಹೀಗೆ ಪ್ರಶ್ನೆಗಳನ್ನು ಪುಂಖಾನುಪುಂಖವಾಗಿ ಕೇಳುತ್ತಲೇ ಇದ್ದೆ ನಾನು.

ಕನಿಷ್ಠ ಪಕ್ಷ ಅಂಗೋಲಾದಲ್ಲಿ ಹೊಸಬನಾಗಿದ್ದ ನನಗಂತೂ ಇವುಗಳು ನನ್ನ ಬಾಲಿಶ ತರ್ಕಕ್ಕೆ ಮೀರಿದ್ದಾಗಿದ್ದವು. ಅಂಗೋಲಾದಲ್ಲಿ ಯುದ್ಧವೇನೂ ನಡೆಯುತ್ತಿರಲಿಲ್ಲ. ಮಹಾರಕ್ತಪಾತ, ಮಾರಣಹೋಮಗಳೇನೂ ಆಗಿರಲಿಲ್ಲ. ಎಬೋಲಾ ಆ ದಿನಗಳಲ್ಲಿ ಜಗತ್ತಿನಾದ್ಯಂತ ಭಯವನ್ನು ಹುಟ್ಟಿಸಿದ್ದಂತೂ ಸತ್ಯ. ಅಂಗೋಲಾದಲ್ಲಿ ಎಬೋಲಾ ಇನ್ನೂ ಕಾಲಿಟ್ಟಿಲ್ಲ ಎಂಬ ಖಚಿತ ಸುದ್ದಿಯನ್ನು ಪಡೆದ ನಂತರವೇ ನಾವು ಭಾರತವನ್ನು ಬಿಟ್ಟು ಆಫ್ರಿಕಾದ ಕಡೆಗೆ ಹಾರಿದ್ದೆವು. ಅಂದರೆ ಎಬೋಲಾ ಖಾಯಿಲೆಯೂ ಕೂಡ ಅಂಗೋಲಾದಲ್ಲಿರಲಿಲ್ಲ. ಹೀಗಿರುವಾಗ ಇಲ್ಲಿಯ ನಾಗರಿಕರು ಈ ಮಟ್ಟಕ್ಕೆ ಹುಳುಗಳಂತೆ ಏಕೆ ಸಾಯುತ್ತಿದ್ದರು ಎಂಬ ನನ್ನ ಪ್ರಶ್ನೆಯು ಕೇಳಬೇಕಾಗಿರುವಂಥದ್ದೇ ಆಗಿತ್ತು.

ಈ ಬಗ್ಗೆ ಹಲವರಲ್ಲಿ ಕೇಳಿದರೂ ನನಗೆ ಸಿಕ್ಕ ಉತ್ತರವು ಒಂದೇ: ”ಅಂಗೋಲಾದ ದಯನೀಯ ವೈದ್ಯಕೀಯ ವ್ಯವಸ್ಥೆ”. ವೀಜ್ ಹಳ್ಳಿಯಲ್ಲಿದ್ದ ವೈದ್ಯಕೀಯ ಸೌಲಭ್ಯಗಳು ಅದೆಷ್ಟು ಕೆಳಮಟ್ಟದ್ದಾಗಿತ್ತೆಂದರೆ ಮಲೇರಿಯಾದಂತಹ ಖಾಯಿಲೆಗೂ ಜನರು ಪ್ರಾಣ ಬಿಡುತ್ತಿದ್ದರು. ವೀಜ್ ಅಂಗೋಲಾದ ಹದಿನೆಂಟು ‘ಪ್ರೊವಿನ್ಸ್’ (ಪ್ರಾಂತ್ಯ) ಗಳಲ್ಲಿ ಒಂದು. ಈ ಪ್ರಾಂತ್ಯ ಅನ್ನುವುದು ಬಹುತೇಕ ನಮ್ಮ ತಾಲೂಕು ಮಟ್ಟಕ್ಕೆ ಸರಿಸಮನಾಗಿರುವಂಥದ್ದು.

ಅಂಗೋಲಾವು ವೀಜ್ ಅನ್ನು `ಟೌನ್’ (ಪಟ್ಟಣ) ಎಂದು ಕರೆದಿದ್ದರೂ ಒಂದು ರೀತಿಯಲ್ಲಿ ಇದೊಂದು ಅತ್ತ ಹಳ್ಳಿಯೂ ಅಲ್ಲದ ಇತ್ತ ಪಟ್ಟಣವೂ ಅಲ್ಲದ ಸೆಮಿ-ಅರ್ಬನ್ ಪ್ರದೇಶ (ಆದರೆ ನನ್ನಂತಹ ವಿದೇಶೀಯರಿಗೆ ಅದೊಂದು ಹಳ್ಳಿಯೇ). ಹೀಗಾಗಿಯೇ ವೀಜ್ ನಲ್ಲಿ ಬಹುತೇಕ ಎಲ್ಲವೂ ಇದ್ದವು. ಸರಕಾರಿ ಆಫೀಸುಗಳು, ಗವರ್ನರ್ ಸಾಹೇಬರ ಅರಮನೆ, ವ್ಯವಸ್ಥಿತ ಮಾರುಕಟ್ಟೆ, ಒಂದೆರಡು ಐಷಾರಾಮಿ ಹೋಟೇಲುಗಳು, ಒಳ್ಳೆಯ ರೆಸ್ಟೊರೆಂಟುಗಳು… ಹೀಗೆ ಎಲ್ಲವೂ. ವ್ಯವಸ್ಥಿತವಾದ ಆಸ್ಪತ್ರೆಯೊಂದನ್ನು ಬಿಟ್ಟು!

ವೀಜ್ ನ ಹೃದಯಭಾಗದಲ್ಲಿರುವ ಸರಕಾರಿ ಆಸ್ಪತ್ರೆಯು ಇಲ್ಲಿಯ ಹೆಚ್ಚಿನ ನಿವಾಸಿಗಳು ಆಗಾಗ ಹೋಗುವ ಆರೋಗ್ಯ ಕೇಂದ್ರಗಳಲ್ಲೊಂದು. ಇಲ್ಲಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂಬುದೇನೋ ಸರಿ. ಆದರೆ ಇಲ್ಲಿಯ ಸೌಲಭ್ಯಗಳು ಮಾತ್ರ ದೇವರಿಗೇ ಪ್ರೀತಿ. ಆಸ್ಪತ್ರೆಯೊಂದರಲ್ಲಿ ಏನೆಲ್ಲಾ ಇರಬಾರದೋ ಇವೆಲ್ಲವೂ ಕೂಡ ವೀಜ್ ನ ಈ ಮುಖ್ಯ ಆಸ್ಪತ್ರೆಯಲ್ಲಿ ಕೊಂಚ ಹೆಚ್ಚೇ ಇದ್ದವು: ಔಷಧಿಗಳ ಅಲಭ್ಯತೆ, ಆಧುನಿಕ ಉಪಕರಣಗಳ ಕೊರತೆ, ನುರಿತ ತಜ್ಞರ ಅಭಾವ, ಗಾಳಿ-ಬೆಳಕು-ನೈರ್ಮಲ್ಯಗಳ ಕೊರತೆ… ಹೀಗೆ ಹೊರಗಿನಿಂದ ನೋಡಲು ಇದೊಂದು ಪ್ರತಿಷ್ಠಿತ ಆಸ್ಪತ್ರೆಯಂತೆ ಕಂಡರೂ ಒಳಗಿನ ನೋಟಗಳು ಬೇರೆಯದೇ ಕಥೆಯನ್ನು ಹೇಳುತ್ತಿದ್ದವು.

ಈ ಸರಕಾರಿ ಆಸ್ಪತ್ರೆಯನ್ನು ಬಿಟ್ಟರೆ ಮಹಿಳೆ ಮತ್ತು ಮಕ್ಕಳಿಗಾಗಿಯೇ ಇರುವ ಕೆಲ ಆರೋಗ್ಯ ಕೇಂದ್ರಗಳು ಇಲ್ಲಿವೆ. ನಾಲ್ಕೈದು ಖಾಸಗಿ ಒಡೆತನದ ಆಸ್ಪತ್ರೆಗಳೂ ಇವೆ. ಇವುಗಳು ಸರಕಾರಿ ಆಸ್ಪತ್ರೆಗಿಂತ ಐದು ಪ್ರತಿಶತ ವಾಸಿ ಎನಿಸುವಂತಿದ್ದವು ಎಂಬುದನ್ನು ಬಿಟ್ಟರೆ ಇವುಗಳೇನೂ ಒಳ್ಳೆಯ ಗುಣಮಟ್ಟದ ಚಿಕಿತ್ಸೆಗಳನ್ನು ನೀಡಬಲ್ಲ ಆರೋಗ್ಯ ಕೇಂದ್ರಗಳೇನೂ ಆಗಿರಲಿಲ್ಲ. ಮೇಲಾಗಿ ದುಬಾರಿ ಎಂಬ ಕಾರಣದಿಂದಾಗಿ ಬೆರಳೆಣಿಕೆಯ ನಿವಾಸಿಗಳಷ್ಟೇ ಇಂಥಾ ಆಸ್ಪತ್ರೆಗಳ ಕದ ತಟ್ಟುತ್ತಿದ್ದರು. ಅಂತೂ ಉಳಿದ ಹೆಚ್ಚಿನವರಿಗೆ ಸರಕಾರಿ ಆಸ್ಪತ್ರೆಯೇ ಖಾಯಿಲೆ ಬಿದ್ದ ದಿನಗಳಲ್ಲಿ ಇರುವ ಒಂದು ಆಶಾಕಿರಣವಾಗಿತ್ತು.

ವೀಜ್ ನ ನಿವಾಸಿಗಳ ಜೀವಕ್ಕೆ ಕುತ್ತಾಗಿ ಪರಿಣಮಿಸಿದ್ದ ಮತ್ತೊಂದು ಅಂಶವೆಂದರೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಬೇಕಿದ್ದರೆ ಇವರುಗಳು ನಗರಕ್ಕೇ ಹೋಗಬೇಕಿತ್ತು. ವೀಜ್ ಗೆ ಅತ್ಯಂತ ಹತ್ತಿರವಿದ್ದ ಏಕೈಕ ಮಹಾನಗರಿಯೆಂದರೆ ಅಂಗೋಲಾದ ರಾಜಧಾನಿ ಲುವಾಂಡಾ. ಅಂದರೆ ಮತ್ತೆ ಮುನ್ನೂರೈವತ್ತು ಚಿಲ್ಲರೆ ಕಿಲೋಮೀಟರುಗಳ ಪ್ರಯಾಣ.

ಸಾವು ಬದುಕುಗಳ ಮಧ್ಯೆ ಉಯ್ಯಾಲೆಯಾಡುತ್ತಿದ್ದ ರೋಗಿಯೊಬ್ಬನನ್ನು ಉಳಿಸಿಕೊಳ್ಳಲು ವೀಜ್ ನ ನಿವಾಸಿಗಳು ಮಾಡಬಹುದಾಗಿದ್ದ ಪ್ರಯತ್ನವೆಂದರೆ ಅದೇ. ಆರರಿಂದ ಏಳು ತಾಸು ರಸ್ತೆಮಾರ್ಗವಾಗಿ ಪ್ರಯಾಣಿಸಿ ಲುವಾಂಡಾದ ಆಸ್ಪತ್ರೆಗೆ ರೋಗಿಯನ್ನು ಭರ್ತಿ ಮಾಡುವುದು. ನಂತರ ಅಲ್ಲಿ ಕೇಳುವ ದೊಡ್ಡ ಮೊತ್ತದ ಶುಲ್ಕವನ್ನು ಕಟ್ಟಲಾಗದೆ ತನ್ನ ಕಣ್ಣೆದುರಿಗೇ ಸಾಯುತ್ತಿರುವ ಆಪ್ತ ಜೀವವೊಂದನ್ನು ಕಂಡು ಕಣ್ಣೀರಾಗುವುದು. ”ಅಯ್ಯೋ ದೇವರೇ, ಇದೆಂಥಾ ಸ್ಥಿತಿಯನ್ನು ನನಗೆ ತಂದುಬಿಟ್ಟೆ?”, ಎಂದು ಎದೆಹಿಡಿದು ಗೋಳಾಡುವುದು.

ಹೀಗಾಗಿ ವೀಜ್ ನ ನಿವಾಸಿಗಳು ಚಿಕ್ಕಪುಟ್ಟ ಆರೋಗ್ಯಸಂಬಂಧಿ ಕಾರಣಕ್ಕೆ ಹುಳುಗಳಂತೆ ಸಾಯುವುದು ಸಹಜವೇ ಆಗಿತ್ತು. ಯಾವ ಬಡವ ತಾನೇ ತುರ್ತಿನ ಸಂದರ್ಭಗಳಲ್ಲಿ ರೋಗಿಯನ್ನು ಲುವಾಂಡಾದವರೆಗೆ ಕೊಂಡೊಯ್ಯಬಲ್ಲ? ಕೊಂಡೊಯ್ದರೂ ವಿಶ್ವದ ಅತೀ ದುಬಾರಿ ನಗರಗಳಲ್ಲೊಂದಾದ ಲುವಾಂಡಾದಲ್ಲಿ ಚಿಕಿತ್ಸೆಯನ್ನು ನೀಡಬಲ್ಲ? ಹೀಗೆ ಅಲ್ಲಿ ಮುಗಿಯದ ಪ್ರಶ್ನೆಗಳಷ್ಟೇ ಇದ್ದವು. ಉತ್ತರಗಳನ್ನು ಕಂಡುಕೊಳ್ಳಲು ನಾನಿಲ್ಲಿ ಚಿಂತಿಸುತ್ತಿದ್ದರೆ ಅಲ್ಲಿ ಬೆನ್ನುಬೆನ್ನಿಗೆ ಹೆಣಗಳು ಬೀಳುತ್ತಿದ್ದವು. ಇಂಥದ್ದೊಂದು ಅಸಹಾಯಕ ಪರಿಸ್ಥಿತಿಯನ್ನು ಕನಸು ಮನಸಲ್ಲೂ ಊಹಿಸಿರದ ನಾನು ಸಹಜವಾಗಿಯೇ ಬೆಚ್ಚಿಬಿದ್ದಿದ್ದೆ.

ಇದಾದ ಒಂದೆರಡು ವಾರಗಳ ನಂತರ ವೀಜ್ ನ ಸರಕಾರಿ ಆಸ್ಪತ್ರೆಯ ಆವರಣದ ಹೊರಗಡೆ ನಿಂತ ನಾನು ಸುಮ್ಮನೆ ಅಲ್ಲಿರುವವರನ್ನೇ ನೋಡುತ್ತಿದ್ದೆ. ಅಲ್ಲೊಂದು ಚಿಕ್ಕ ಗೇಟು. ಆ ಗೇಟಿನೆದುರು ಸೇರಿದ್ದ ಜನರ ದೊಡ್ಡ ಗುಂಪು. ಆಸ್ಪತ್ರೆಯ ಶವಾಗಾರದಿಂದ ಶವವನ್ನು ಸಿಬ್ಬಂದಿಗಳು ನೇರವಾಗಿ ಆ ಗೇಟಿಗೆ ತರುತ್ತಾರಂತೆ. ಅಲ್ಲಿ ಸಂಬಂಧಿ ಜನರು ಬಂದು ಶವವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು.

ಅಂದರೆ ಸಾವಿನ ನಂತರವೂ ಆ ದೇಹವನ್ನು ವ್ಯವಸ್ಥಿತವಾಗಿ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗುವ ಭಾಗ್ಯವು ವೀಜ್ ನ ನಿವಾಸಿಗಳಿಗಿರಲಿಲ್ಲ. ಸಾವಿನ ಸುದ್ದಿಯನ್ನಷ್ಟೇ ತಿಳಿದ ಈ ಜನರು ಬೇಸಿಗೆಯ ಬಿಸಿಲ ಝಳಕ್ಕೆ ಸುಡುತ್ತಾ, ಮಳೆಗಾಲದ ಗಾಳಿಮಳೆಗೆ ನೆನೆಯುತ್ತಾ ಆ ಗೇಟಿನೆದುರು ತಮ್ಮ ಆಪ್ತರ ಶವಕ್ಕಾಗಿ ಗಂಟೆಗಟ್ಟಲೆ ಕಾಯಬೇಕಿತ್ತು.

ಹೀಗೆ ಶವಕ್ಕಾಗಿ ಎರಡರಿಂದ ಮೂರು ತಾಸುಗಳ ಕಾಲ ನಾನು ಸ್ವತಃ ಸುಡುಬಿಸಿಲಿನಲ್ಲಿ ಕಾದ ದೃಷ್ಟಾಂತಗಳೂ ಇವೆ. ಹೀಗಾಗಿ ಅಲ್ಲಿದ್ದಿದ್ದು ಮಾತಿಗಿಂತ ಹೆಚ್ಚು ಕಣ್ಣೀರು, ಬಿಕ್ಕಳಿಕೆಗಳೇ. ಅಲ್ಲಿ ಎಲ್ಲರೂ ರೋದಿಸುವವರೇ, ಬಾಯಿ ಬಡಿದುಕೊಳ್ಳುವವರೇ. ಅತ್ತು ಅತ್ತು ನೆಲದ ಮೇಲೋ, ಇನ್ಯಾರ ಮಡಿಲಲ್ಲೋ ಮೂರ್ಛೆ ಹೋಗುವವರೇ!

ಮುಂದೆ ವೀಜ್ ನಲ್ಲಿ ದಿನಗಳು ಉರುಳತೊಡಗಿದಂತೆ ಕ್ರಮೇಣ ಇವೆಲ್ಲವೂ ಸಾಮಾನ್ಯವಾಗತೊಡಗಿತು. ಪ್ರತೀದಿನವೂ ಶವಯಾತ್ರೆಗಳನ್ನು ನೋಡುವುದು ಬಹುತೇಕ ನಿತ್ಯದ ಮಾತಾಯಿತು. ಹೀಗಾಗಿ ನಾನು ಶವಗಳ ಲೆಕ್ಕವಿಡುವುದನ್ನು ಬಿಟ್ಟುಬಿಟ್ಟೆ. ಹಾಗೆಂದು ಇದು ನಿರಾಳತೆಯನ್ನು ತರುವ ಸಂಗತಿಯೇನಲ್ಲ.

ಸರಕಾರಿ ಆಸ್ಪತ್ರೆಯ ಆ ಪುಟ್ಟ ಗೇಟು, ಗೇಟಿನೆದುರು ಶವವನ್ನು ಕೊಂಡೊಯ್ಯಲು ಕಾಯುತ್ತಿರುವ ವಾಹನಗಳು, ದೀನರಾಗಿ ನರ್ತಿಸುತ್ತಾ ರೋದಿಸುತ್ತಿರುವ ಅಂಗೋಲನ್ ಮಹಿಳೆಯರು, ಯಾರೋ ಸತ್ತರೆಂದು ಏಕಾಏಕಿ ರಜೆ ಕೇಳಿ ಪದೇ ಪದೇ ಹೊರಟುಹೋಗುವ ಉದ್ಯೋಗಿಗಳು… ಹೀಗೆ ಇವೆಲ್ಲವೂ ಕೂಡ ಇಂದಿಗೂ ನನ್ನಲ್ಲಿ ವಿಚಿತ್ರವಾದ ದಿಗಿಲನ್ನು ಹುಟ್ಟಿಸುತ್ತದೆ. ಶವಗಳನ್ನು ನೋಡುವುದು, ಶವಯಾತ್ರೆಗಳಿಗೆ ಎದುರಾಗುವುದು ನನಗೀಗ ಅಪಶಕುನವಾಗಿ ಕಾಣಿಸುತ್ತಿಲ್ಲ. ಬದಲಾಗಿ ತನಗರಿವಿಲ್ಲದಂತೆಯೇ ಭಾರವಾದ ನಿಟ್ಟುಸಿರಿಡುವಂತೆ ಮಾಡುತ್ತದೆ. ಸಾವಿನ ಕಮಟಿಗೆ ಎದೆಬಡಿತದ ತಾಳವು ತನ್ನಷ್ಟಕ್ಕೇ ತಪ್ಪಿಹೋಗುತ್ತದೆ.

ಅಂದು ಹತಾಶನಾಗಿ ಮನೆಗೆ ಮರಳಿದ ನಾನು ನನ್ನೊಂದಿಗಿರುವ ಏಕಮಾತ್ರ ಭಾರತೀಯ ಸಹೋದ್ಯೋಗಿಗೆ ಸ್ಪಷ್ಟವಾಗಿ ಹೇಳಿದೆ: ”ಜೀವನವು ಹೊಸದೊಂದು ತಿರುವಿಗೆ ನಮ್ಮನ್ನಿಂದು ತಂದು ನಿಲ್ಲಿಸಿದೆ. ನಾವು ವಿಚಿತ್ರವಾದ ದೇಶದ ಬಲುವಿಚಿತ್ರವಾದ ಪ್ರದೇಶವೊಂದಕ್ಕೆ ಬಂದಿಳಿದಿದ್ದೇವೆ. ಇಲ್ಲಿ ನಾವು ಕೂಡ ಮರೆತೂ ಕೂಡ ಖಾಯಿಲೆ ಬೀಳುವಂತಿಲ್ಲ!”

Leave a Reply