fbpx

ಏರೋಪ್ಲೇನ್ ಚಿಟ್ಟೇ ….Sorry ಕಣೊ…!!

 

ಚರಿತಾ ಮೈಸೂರು

ಎರಡು ದಿನಗಳಿಂದ ಜುರ್ರ್ ಜುರ್ರ್ ಸದ್ದು ಮಾಡುತ್ತ, ಆ ಗೋಡೆಯಿಂದ ಈ ಗೋಡೆಗೆ ಹಾರಿ ಕೂರುತ್ತ, ಹೇಗಾದರೂ ತನ್ನವರನ್ನು ಸೇರಲು ಹಾತೊರೆಯುತ್ತ, ದಾರಿತೋರದೆ ಪರದಾಡ್ತಿತ್ತು ಈ ಚಿಟ್ಟೆ. ನಮ್ಮ ಮನೆಯ ದೊಡ್ಡ ಕಿಟಕಿಗಳಿಂದ ಹೀಗೆ ದಾರಿತಪ್ಪಿ, ಮನೆಯೊಳಗೆ ನುಗ್ಗಿಬಂದು, ಹೊರಹೋಗಲು ಪರದಾಡುವ ಸಣ್ಣ ಹಕ್ಕಿಗಳು, ಚಿಟ್ಟೆ – ದುಂಬಿಗಳು, ಅಳಿಲುಗಳನ್ನೂ ನೋಡಿದ್ದೆ ಈ ಹಿಂದೆ. ಆದ್ರೆ ಇದನ್ನ ಮನೆಯೊಳಗೆ ನೋಡಿದ್ದು ಮೊದಲಸಲ.

ಹೆಲಿಕಾಪ್ಟರ್ ಚಿಟ್ಟೆ, ಏರೋಪ್ಲೇನ್ ಚಿಟ್ಟೆ, ದೋಣಿ ಚಿಟ್ಟೆ ಅಂತೆಲ್ಲ ಕರೀತೀವಿ ಇದನ್ನ. ಚಿಕ್ಕಂದಿನಲ್ಲಿ ನಾವು ಚಿಳ್ಳೆಪಳ್ಳೆಗಳೆಲ್ಲ ಇಂಥ ಬಾಲದ ಚಿಟ್ಟೆಗಳನ್ನ ಹಿಡಿದು, ಅದರ ಬಾಲದ ತುದಿಗೆ ದಾರ ಕಟ್ಟಿ, ದಾರದ ಮತ್ತೊಂದು ತುದಿ ಹಿಡ್ಕೊಂಡು ಈ ಚಿಟ್ಟೆಗಳ ರೇಸ್ ಮಾಡಿಸ್ತಿದ್ವಿ!

ಇವುಗಳು ಪಾಪ ಸಂಕಟಪಡ್ತ, ಹಾರುವ ಕಸರತ್ತು ಮಾಡ್ತಿದ್ರೆ, ಬಾಲಕ್ಕೆ ಬಿಗಿದ ಆ ಉದ್ದ ದಾರಗಳು ಗಾಳಿಯಲ್ಲಿ ನಲಿಯುತ್ತ, ನುಲಿಯುತ್ತ, ಡ್ಯಾನ್ಸ್ ಮಾಡ್ತಿದ್ದದ್ನ ನೋಡೋದೆ ಮಜಾ ನಮ್ಗೆ ! ಆ ಬಾಲಗಳ ತುದಿಯ ದಾರಗಳೆಲ್ಲ ಒಂದರೊಳಗೊಂದು ಸಿಕ್ಕು, ನುಲಿದು, ಗಂಟುಗಳಾಗಿ, ಅದನ್ನೆಲ್ಲ ಬಿಡಿಸುವ ಭರದಲ್ಲಿ ಆ ಚಿಟ್ಟೆಗಳ ಬಾಲಗಳೂ ಹೊಟ್ಟೆಸಮೇತ ಕಿತ್ತುಬರ್ತಿದ್ದದ್ದು….ನೆನಪಿಸಿಕೊಂಡ್ರೆ…..

ಹೀಗೆ ತಮ್ಮ ಪ್ರಾಣವನ್ನೂ ಒತ್ತೆಯಿಟ್ಟು, ಮಕ್ಕಳೆಂಬ ‘ಕ್ಯೂಟ್ ಡೆವಿಲ್’ಗಳ ಆಟದ ವಸ್ತುಗಳಾಗಿದ್ದ ಈ ಚಿಟ್ಟೆಗಳೆಂಬ ಚಿಟ್ಟೆಗಳ ಪ್ರತಿನಿಧಿ ನಮ್ಮನೆಗೆ ಬಂದು ನನ್ನ ಬಾಲ್ಯ ನೆನಪಿಸಿದ. ಬಾಲ್ಯದಲ್ಲಿ ಇವುಗಳ ಬಾಲಗಳಿಗೆ ಕೊಟ್ಟಿದ್ದ ಯಮಯಾತನೆಯ ಪಾಪ ಕಳೆಯೋದಕ್ಕೆ ನನಗೆ ಒದಗಿಬಂದ ಅಪೂರ್ವ ಅವಕಾಶ ಇದು!

ನಮ್ಮ ಮನೆಗೆ ಹೀಗೆ ದಾರಿತಪ್ಪಿ ಬಂದು ಪರದಾಡುತ್ತಿದ್ದ ಅದೆಷ್ಟೋ ಚಿಟ್ಟೆ, ಹಕ್ಕಿ, ಜೇನುನೊಣ, ಹುಲಿಕಡಜ, ದುಂಬಿಗಳನ್ನೆಲ್ಲ ಹರಸಾಹಸಪಟ್ಟು ಕಿಟಕಿಯಿಂದ ಹೊರದಾಟಿಸಿದ ಪುಣ್ಯ ನನ್ನ ಹೆಸರಲ್ಲಿದ್ದೇ ಇದೆ. ಈಗ ಇದನ್ನೂ ರಕ್ಷಿಸಿ ನನ್ನ ಪುಣ್ಯದ ಲಿಸ್ಟ್ ದೊಡ್ಡದಾಗಿಸಿಕೊಳ್ಳುವ ಅವಕಾಶ ಕೂಡ ಒದಗಿಬಂದಿತ್ತು !

ಮೊನ್ನೆ ಸಂಜೆ ಟಿವಿ ರೂಮಲ್ಲಿ ಅಲ್ಲಲ್ಲಿ ಪರದಾಡ್ಕೊಂಡು ಜುರ್ರೊ ಅಂತಿತ್ತು ಇದು. ಮನೆಹೊರಗಿನ ಲೈಟೊಂದನ್ನ ಹೊತ್ತಿಸಿ, ಉಳಿದೆಲ್ಲ ಬೆಳಕನ್ನೂ ಆಫ್ ಮಾಡಿಟ್ಟು ಕಾದುಕೂತೆ. ಯಾಕೋ ಅದು ಹೊರಹೋಗುವ ಮನಸು ಮಾಡ್ಲಿಲ್ಲ. ಸರಿ, ನನ್ನ ಕೈಗೇ ಎಟುಕುವಷ್ಟು ಹತ್ತಿರದಲ್ಲಿ ಕೂತಿದ್ದ ಚಿಟ್ಟೆನ ಸಡಿಲವಾಗಿ ಹಿಡಿದು, ಕಿಟಕಿಯಿಂದ ಹೊರಗೆ ಬಿಟ್ಟೆ. ಗಾಬರಿಗೋ ಏನೊ, ಕೈಬಿಟ್ಟಕೂಡ್ಲೆ ಮತ್ತೆ ಮನೆಯೊಳಗೇ ಹಾರಿಬಂದು ಗೋಡೆಗಂಟಿ ಕೂರ್ತು ! ಮೂರ್ಖ ಚಿಟ್ಟೆ ಅನಿಸಿತು. ಮನೆಯೊಳಗೇ ಅದಕ್ಕೆ ಸೇಫೇನೊ ಅಂತ್ಲೂ ಅನಿಸಿದ್ರಿಂದ ಮತ್ತೆ ಹೊರಹಾಕುವ ಪ್ರಯತ್ನ ಮಾಡದೆ ಸುಮ್ಮನಾದೆ.

ಮಾರನೇ ದಿನ ಮೆಟ್ಟಿಲಮೇಲೆ ಬಿದ್ದುಕೊಂಡಿದ್ದ ಇದು ‘ಹೋಗಿರ್ಬೇಕು’ ಅನಿಸಿ, ಶ್ರದ್ಧಾಂಜಲಿ ಸಲ್ಲಿಸೋಕೆ ಅಂಗೈಗೆ ತಕೊಂಡ್ರೆ, ‘ಇದೀನಿ ಕಣವ್ವ’ ಅಂತು! ನಾನು ಕುಣಿದಾಡೋದೊಂದ್ ಬಾಕಿ ! ಮುಂದಿನೆರಡು ಪುಟ್ಟ ಕಾಲುಗಳು ಮಾತ್ರ ಆಡುತ್ತಿದ್ವು. ಹತ್ತಿರದಿಂದ ಗಮನಿಸಿದಾಗ ಅದರ ಬಾಲಕ್ಕೂ ರೆಕ್ಕೆಗಳಿಗೂ ಮೆತ್ತಿಕೊಂಡಿದ್ದ ಜೇಡರಬಲೆ ಕಾಣ್ತು. ನಮ್ಮ ಸ್ಕೈಲೈಟ್ ಹತ್ರ ಬೆಳಕಿರೋದರಿಂದ ಅಲ್ಲಿಗೆ ಹಾರಿಹೋಗಿ, ಬಲೆ ಅಂಟಿಸಿಕೊಂಡಿರೋದು ಖಾತ್ರಿಯಾಯ್ತು. ಇವುಗಳಿಗೋಸ್ಕರವಾದರೂ ಗೋಡೆಗಳಲ್ಲಿ ಜೇಡರಬಲೆ ಇರದಹಾಗೆ ಇಟ್ಕೊಬೇಕು ನೋಡಿ ! ನಿಧಾನವಾಗಿ, ಇದಕ್ಕೆ ಗಾಬರಿಯಾಗದಹಾಗೆ, ಅದರ ರೆಕ್ಕೆ, ಬಾಲದಿಂದ ಆ ಬಲೆಯನ್ನೆಲ್ಲ ಬಿಡಿಸಿ, ಸುಧಾರಿಸಿಕೊಳ್ಲಿ ಅಂತ ಮೆಟ್ಟಿಲ ಹತ್ತಿರ ಸೇಫಾದ ಜಾಗದಲ್ಲಿ ಕೂರಿಸಿ ಹೊರಟೆ. ಸಂಜೆ ಮನೆಗೆ ಬಂದವಳಿಗೆ ಯಾಕೊ ಇದರ ನೆನಪೇ ಆಗ್ಲಿಲ್ಲ.

ಇವತ್ತು ಬೆಳಿಗ್ಗೆ ತಿಂಡಿಗೆ ಕೂತವಳಿಗೆ ಮತ್ತೆ ಕಾಣ್ತು ಇದು.
ಮೆಟ್ಟಿಲಕೆಳಗಿಟ್ಟಿದ್ದ ಡಸ್ಟ್ ಬಿನ್ನಿನ ಮೇಲೆ, ನನ್ನ ಅಣಕಿಸೋಹಾಗೆ ಅಂಗಾತ ಬಿದ್ದಿದೆ !
ಅದನ್ನ ಮನೆಯಿಂದ ಹೊರಹಾಕುವ ಪ್ರಯತ್ನವಾಗಲೀ, ರೆಕ್ಕೆಗಂಟಿದ್ದ ಜೇಡರಬಲೆ ತೆಗೆದದ್ದಾಗಲೀ, ಉಳಿಸಲಿಲ್ಲ ಇದನ್ನ. ನಮ್ಮ ಮನೇಲಿ, ನನ್ನ ಕಣ್ಮುಂದೆಯೇ ಹೀಗೆ ಅಂಗಾತವಾಗಬೇಕು ಅಂತ ಪಣತೊಟ್ಟಿತ್ತೇನೊ ! ಸ್ಕೈಲೈಟ್ ಕೆಳಗಿನ ಮೆಟ್ಟಿಲುಗಳ ಮೇಲೆ ನಿತ್ರಾಣಗೊಂಡು ಬೀಳುವ ಇಂಥ ಅದೆಷ್ಟೋ ಜೀವಗಳನ್ನು ನಾನೇ ಕೈಯ್ಯಾರೆ ಎತ್ತಿ, ಕಿಟಕಿದಾಟಿಸಿ ಹಗುರಾದದ್ದಿದೆ.

ಯಾಕೋ ಈ ಜೀವ ಅಷ್ಟು ಪುಣ್ಯ ಮಾಡಿರಲಿಲ್ಲವೇನೊ. ಅಕಸ್ಮಾತ್ ಇನ್ನೂ ಜೀವ ಇದ್ದಿರಬಹುದಾಂತ ಹತ್ತಿರದಿಂದ ಗಮನಿಸಿದೆ.
ಊಹೂಂ, ಮಾತಿಲ್ಲ ಕತೆಯಿಲ್ಲ…
ಇದನ್ನು ಮನೆಯಿಂದ ಹೊರಗಟ್ಟಿ, ನನ್ನ ಪುಣ್ಯಗಳ ಲಿಸ್ಟ್ ದೊಡ್ಡದಾಗಿಸಿಕೊಳ್ಳುವ ನನ್ನಾಸೆಯೂ ಈಡೇರಲಿಲ್ಲ !
ನಾನೂ, ಇದೂ – ಇಬ್ಬರೂ ದುರದೃಷ್ಟವಂತರು ಅಂತ ಪ್ರೂವ್ ಆಯ್ತು !

ಏರೋಪ್ಲೇನ್ ಚಿಟ್ಟೆ, ….sorry ಕಣೊ…

 

Leave a Reply