fbpx

ಕರಗಿಸುವ ಕಡಾಯಿಯಲ್ಲಿ ಹುಟ್ಟಿದ ಕಥನ

ಕಾವ್ಯಾ ಕಡಮೆ ನಾಗರಕಟ್ಟೆ

ಗುರುಪ್ರಸಾದ ಕಾಗಿನೆಲೆಯವರ ಹೊಸ ಕಾದಂಬರಿ ‘ಹಿಜಾಬ್’ನಲ್ಲಿ ಅಮೆರಿಕವನ್ನು ‘ಕರಗಿಸುವ ಕಡಾಯಿ’ ಅಂತ ವರ್ಣಿಸಲಾಗಿದೆ. ಅಮೆರಿಕನ್ ಡ್ರೀಮ್ ಎಂಬ ಆಕರ್ಷಕ ಸ್ವಪ್ನಲೋಕಕ್ಕೆ ವೈರುಧ್ಯವನ್ನು ಸೃಷ್ಟಿಸಬಲ್ಲ ವ್ಯಾಖ್ಯೆಯಿದು.

ಭೂಪಟದಲ್ಲಿ ಹುಡುಕಿದರೂ ಸಿಗಲಾರದ ಊರು ಅಮೋಕಾ. ಅಮೆರಿಕಾದ ಈ ಕಲ್ಪಿತ ಊರಿನಲ್ಲಿ ಒಂದು ಆಸ್ಪತ್ರೆ. ಅಲ್ಲಿ ಮೂವರು ಕನ್ನಡದ ಡಾಕ್ಟರುಗಳು. ಅವರ ಪೇಶಂಟುಗಳೆಲ್ಲ ಮುಖ್ಯವಾಗಿ ಅಮೋಕಾದಲ್ಲಿ ವಾಸವಾಗಿರುವ ಸೋಮಾಲಿ ನಿರಾಶ್ರಿತರು. ಹೀಗೆ ಅಮೆರಿಕವೆಂಬ ಅನ್ಯ ಪರಿಸರದಲ್ಲಿ ನಿಂತು, ಆ ಸಂಸ್ಕೃತಿಗೆ ಸೇರದ ಸೋಮಾಲಿಗಳ ಕತೆಯನ್ನು ಕನ್ನಡದಲ್ಲಿ ಹೇಳುವುದು ಸವಾಲಿನ ಕಾಯಕವೇ ಸರಿ.

ಇಡೀ ಕಥನದ ಆತ್ಮವಿರುವುದು ಸೋಮಾಲಿ ಜನಾಂಗಕ್ಕೆ ಸೇರಿದ ಬಾಣಂತಿಯರ ಸಾಲು ಸಾಲು ಆತ್ಮಹತ್ಯೆಗಳ ನಿಗೂಢತೆಯಲ್ಲಿ. ಈ ಆತ್ಮಹತ್ಯೆಗಳು ಒಂದು ಬಿಡಿಸಲಾರದ ಒಗಟಿನಂತೆ ಒಳಗಿಳಿದಷ್ಟೂ ಹೊಸ ಹೊಸ ತಿರುವುಗಳನ್ನು ಪಡೆದು ಸತಾಯಿಸುತ್ತವೆ. ಕಪ್ಪು ಚರ್ಮದವರೂ ಮುಸ್ಲಿಮರೂ ಆದ ಈ ಸೋಮಾಲಿ ನಿರಾಶ್ರಿತರು, ಅವರಿಗೆ ಶುಶ್ರೂಷೆ ಮಾಡುವ ಭಾರತೀಯ ಡಾಕ್ಟರುಗಳು, ಎಲ್ಲ ಮೇಲ್ಮಟ್ಟದ ನಿರ್ಣಯಗಳನ್ನೂ ಕೈಗೊಳ್ಳುವ ಅಧಿಕಾರವಿರುವ ಬಿಳಿಯ ವರ್ಣದ ಸ್ಥಳೀಯ ಅಮೆರಿಕನ್ನರು.. ಈ ಎಲ್ಲರ ನಡುವೆ ನಡೆವ ವರ್ಣ ರಾಜಕೀಯ ಕಾದಂಬರಿಯ ರಂಗಕ್ಕೊಂದು ವಿಸ್ತಾರವಾದ ಜಮಖಾನೆಯನ್ನು ಹಾಸಿದೆ.

ದುಭಾಷಿಗಳ ಸಹಾಯದಿಂದಷ್ಟೇ ಅಮೆರಿಕವನ್ನು ಕೇಳುವ ಕಿವಿ ಪ್ರಾಪ್ತವಾಗುವ ಸೋಮಾಲಿಗಳಿಗೆ, ಮುಖ್ಯವಾಗಿ ಗರ್ಭಿಣಿ ಹೆಂಗಸರಿಗೆ ಎಷ್ಟೋ ಭಾವನೆಗಳು ಭಾಷಾನುವಾದದಲ್ಲೇ ಕಳೆದುಹೋಗುವ ಪರಿಸ್ಥಿತಿ. ಅವರ ಸಾಂಪ್ರದಾಯಿಕ ನಂಬಿಕೆಗಳಿಗೆ ಧಕ್ಕೆ ಬರುವುದೆಂಬ ಕಾರಣಕ್ಕೆ ಸೋಮಾಲಿಗಳು ಮತ್ತು ಡಾಕ್ಟರುಗಳ ನಡುವೆ ನಡೆಯುವ ಸಂಘರ್ಷ ಮತ್ತು ಈ ಎರಡೂ ಗುಂಪಿನವರು ಅನುಭವಿಸುವ ಅಸಹಾಯಕತೆ ಈ ಕಾದಂಬರಿಗೆ ಬಡಿಯುವ ಹೃದಯವೊಂದನ್ನು ನೀಡಿದೆ. ಇಬ್ಬರು ಕಪ್ಪುವರ್ಣದ ಯುವಕರ ನಡುವೆ ವ್ಯತ್ಯಾಸ ಹೇಳಲು ಅಸಮರ್ಥರಾಗಿ ಬಿಳಿಯ ಪೊಲೀಸರು ಮಾಡುವ ಪ್ರಮಾದ, ಸೋಮಾಲಿಯಾದ ಮುಸ್ಲಿಮರೂ ಪಾಕಿಸ್ಥಾನದ ಮುಸ್ಲಿಮರೂ ಒಂದೇ ಎಂಬರ್ಥದ ವಾದ ಹೂಡಿ ಅಜ್ಞಾನ ಮೆರೆವ ಆಸ್ಪತ್ರೆಯ ಆಡಳಿತ ಮಂಡಳಿ ಮುಂತಾದವು ಅಮೆರಿಕದ ಇನ್ನೊಂದು ಮುಖವನ್ನು ಹಸಿಹಸಿಯಾಗಿ ತೆರೆದಿಡುತ್ತವೆ.

ಕಾದಂಬರಿ ಮುಚ್ಚಿಟ್ಟ ನಂತರವೂ ಕಾಡುವುದು ಡಾಕ್ಟರ್ ಗುರು ಮತ್ತು ಡಾಕ್ಟರ್ ರಾಧಿಕಾರ ಮನೋಲೋಕ. ಅಮೋಕಾದ ಆಸ್ಪತ್ರೆಯಲ್ಲಿ ನಡೆವ ವಿದ್ಯಮಾನಗಳಿಂದ ಇಂಚಿಂಚೇ ಬದಲಾಗುವ ರಾಧಿಕಾ ಬಹುಪಾಲು ವಲಸಿಗರ ಪ್ರತಿನಿಧಿಯಂತಿದ್ದಾಳೆ. ತನ್ನ ಅಮೆರಿಕನ್ ಡ್ರೀಮ್ ಕನಸನ್ನು ಸಾಧಿಸಲು ಅವಳು ತನ್ನ ಕೈಲಾಗುವ ಯಾವ ತ್ಯಾಗವನ್ನೂ ಮಾಡಲು ಸಿದ್ಧಳಿರುವಳು. ಅದೇ ಕಾರಣಕ್ಕಾಗಿ ಜೀವದಷ್ಟು ಪ್ರೀತಿಸುವ ಗೆಳೆಯನನ್ನೂ ದೂರ ಮಾಡಿದ್ದಾಳೆ.

ನಿರೂಪಕನಾದ ಗುರು ಎಂಬ ವೈದ್ಯಾಧಿಕಾರಿ ನಿರೀಕ್ಷಿಸದಿರುವ ಬಗೆಯಲ್ಲಿ ಅವಳ ವ್ಯಕ್ತಿತ್ವ ಪಲ್ಲಟವಾಗುವುದು ಕಾದಂಬರಿಗೊಂದು ಚಲನೆಯನ್ನು ತಂದುಕೊಟ್ಟಿದೆ.
ಅಮೆರಿಕದಲ್ಲಿ ಖಾಯಂ ನೆಲೆಸಲು ಮೊದಲ ಹೆಜ್ಜೆಯಾದ ಗ್ರೀನ್‍ಕಾರ್ಡ್ ಪಡೆಯಲು ಈ ವೈದ್ಯರಿಗೆ ಅಮೋಕಾದಂಥ ಊರಿನಲ್ಲಿ ಕೆಲವು ವರ್ಷಗಳಾದರೂ ಕೆಲಸ ಮಾಡುವುದು ಕಡ್ಡಾಯ. ಹೀಗೆ ಗ್ರೀನ್‍ಕಾರ್ಡ್ ಪಡೆವ ಒಂದೇ ಗುರಿಯಿಟ್ಟುಕೊಂಡು ಅಮೋಕಾದಲ್ಲಿ ನೆಲೆಸಿರುವ ರಾಧಿಕಾ ಪ್ರಸೂತಿತಜ್ಞೆ. ಈ ಆಸ್ಪತ್ರೆಯ ಪ್ರಸೂತಿ ವಿಭಾಗದಲ್ಲಿ ಅವಳು ಏಕೈಕ ಸ್ತ್ರೀವೈದ್ಯಳಾಗಿರುವುದರಿಂದ ಅವಳಿಗೆ ಬೇಡಿಕೆಯೂ ಹೆಚ್ಚು.

ಸಹಜ ಹೆರಿಗೆ ಸಾಧ್ಯವಾಗದಿದ್ದಾಗ ಸಿಸೇರಿಯನ್ ಹೆರಿಗೆ ಮಾಡಿಸುವ ಸಾಮಾನ್ಯ ವೈದ್ಯಕೀಯ ಪದ್ಧತಿಗೆ ಸೋಮಾಲಿ ಸಮುದಾಯದವರಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಸಾಂಪ್ರದಾಯಿಕ ನಂಬಿಕೆಗಳಿಗೆ ಧಕ್ಕೆಯಾಗುವುದೆಂಬ ಕಾರಣಕ್ಕೆ ಶುರುವಾಗುವ ಸಂಘರ್ಷ ನಿಧಾನವಾಗಿ ರಾಜಕೀಯ ತಿರುವು ಪಡೆಯುತ್ತದೆ. “ಸೋಮಾಲಿ ಹೆಂಗಸರಿಗೆ ಸಿಸೇರಿಯನ್ ಹೆರಿಗೆ ಮಾಡಿದರೆ ಹೆಣಗಳು ಉರುಳುತ್ತವೆ” ಎಂಬ ಮಾತು ಸಾಲುಸಾಲು ಆತ್ಮಹತ್ಯೆಗಳ ಮೂಲಕ ಕಾರ್ಯರೂಪಕ್ಕೆ ಬರುತ್ತದೆ. ಈ ಎಲ್ಲ ವಿದ್ಯಮಾನಗಳಿಗೆ ವೈದ್ಯರೂ, ಆಸ್ಪತ್ರೆಯ ಆಡಳಿತ ಮಂಡಳಿಯವರೂ ಸಾಕ್ಷಿಯಾಗುತ್ತಾರೆ.

ವಿಶೇಷವೆಂದರೆ ಈ ಎಲ್ಲ ಸಂಗತಿಗಳು ಎಳೆಯ ಡಾಕ್ಟರುಗಳನ್ನು ಬದಲಾಯಿಸುವುದು. ಗರ್ಭಿಣಿಯರ ಜೀವ ಉಳಿಸಲೆಂದೇ ಇರುವ ಸಿಸೇರಿಯನ್ ಸೆಕ್ಷನ್ ಕುರಿತ ನಿರ್ಧಾರವನ್ನು ತೆಗೆದುಕೊಳ್ಳಬೇಕಾದವರು ಯಾರು? ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವುದೇ ಮುಖ್ಯವೆಂದು ವಾದಿಸುವ ಡಾಕ್ಟರುಗಳು ಮತ್ತು ಮುಂದಿನ ಹತ್ತು ಮಕ್ಕಳನ್ನು ಹೆರಲು ಇದೊಂದು ಮಗು ಬಲಿಯಾದರೂ ಪರವಾಗಿಲ್ಲ ಎಂದು ವಾದಿಸುವ ಸೋಮಾಲಿ ಮುಖಂಡರು ಪೂರ್ವ-ಪಶ್ಚಿಮಗಳಂತೆ ವಿರುದ್ಧ ದಿಕ್ಕಿನಲ್ಲಿ ನಿಲ್ಲುತ್ತಾರೆ. ಸಾಂಪ್ರದಾಯಿಕ ಮೌಲ್ಯಗಳು ಮತ್ತು ಆಧುನಿಕ ನಂಬಿಕೆಗಳ ನಡುವಿನ ತಿಕ್ಕಾಟವೇ ಕಾದಂಬರಿಯ ಜೀವದನಿಯಾಗುತ್ತದೆ.

ಎಲ್ಲ ಸಂದರ್ಭಗಳನ್ನೂ ಕಪ್ಪು-ಬಿಳುಪಿನಲ್ಲೇ ಕಾಣುತ್ತಿದ್ದ ರಾಧಿಕಾಳ ಮುಂದೆ ಅವೆರಡರ ನಡುವಿನ ಬೂದುಬಣ್ಣದ ಜಗತ್ತು ನಿಧಾನವಾಗಿ ತೆರೆದುಕೊಳ್ಳುತ್ತದೆ. ಅದಕ್ಕೆ ಕಾರಣವಾಗುವುದು ಸಿಸೇರಿಯನ್ ಸೆಕ್ಷನ್ ಒಂದರ ಟೆಲಿವಿಷನ್ ನೇರಪ್ರಸಾರ ಮತ್ತು ಅದಕ್ಕೆ ಮೊದಲು ಅವಳು ಮಾಡಿಕೊಳ್ಳಬೇಕಾದ ತಯಾರಿಗಳು. ಈ ನೇರಪ್ರಸಾರಕ್ಕಾಗಿ ಅಭ್ಯರ್ಥಿಗಳನ್ನು ಹುಡುಕುವ ಕ್ರಿಯೆಯಲ್ಲೇ ರಾಧಿಕಾ ಮಾರ್ಪಾಡಾಗುತ್ತಾಳೆ. ಆಶಾ ಸ್ಕಾಟ್, ಸಾನ್ವಿ ಮುಂತಾದವರ ಸ್ನೇಹವೂ ಅದಕ್ಕೆ ಕಾರಣವಾಗಿರಬಹುದು. “ನಿರಾಕರಣೆ, ಕೋಪ, ಚೌಕಾಶಿ, ಖಿನ್ನತೆ ಕೊನೆಗೆ ರಾಜಿ. ಮೊದಲ ಮೂರು ಘಟ್ಟಗಳನ್ನು ದಾಟಿದ್ದಾಳೆ ರಾಧಿಕಾ… ಇದು ಚೌಕಾಶಿಯೋ ಅಥವಾ ನಿರಾಕರಣವೋ ನನಗೆ ಗೊತ್ತಾಗಲಿಲ್ಲ. ರ್ಯಾಶನಲೈಜ್ ಮಾಡುತ್ತದ್ದಾಳೆ ಅನ್ನಿಸಿತು” ಎಂಬ ಡಾ. ಗುರು ಮಾತುಗಳು ಆ ಪರಿವರ್ತನೆಗೆ ಕನ್ನಡಿ ಹಿಡಿದಿವೆ.

“ಬರೇ ಅಸಹಾಯಕತೆಯಿಂದ ಒಂದು ಮುತ್ತು ಪರಸ್ಪರ ವಿನಿಮಯವಾಗಬಲ್ಲದೇ?” ಎಂಬ ಅತಿ ಪ್ರಾಮಾಣಿಕ ಪ್ರಶ್ನೆಯೊಂದನ್ನು ಮನಸ್ಸಿನಲ್ಲಿ ಹುಟ್ಟಿಸಿಕೊಳ್ಳಬಲ್ಲ ಡಾ. ಗುರು ಈ ಕಥನದುದ್ದಕ್ಕೂ ನಿರೂಪಕನ ಪಾತ್ರವನ್ನು ವಹಿಸಿಕೊಳ್ಳುವಾತ, ರಾಧಿಕಾಳ ಆತ್ಮೀಯ. ಸೋಮಾಲಿ ಬಾಣಂತಿಯರ ನಿಗೂಢ ಸಾವುಗಳು ಅವನಿಗೂ ಆತಂಕ ಮೂಡಿಸಿದೆ. ಇನ್ನೊಂದು ಸಂಸ್ಕøತಿಯನ್ನು ಎಷ್ಟೇ ಹತ್ತಿರದಿಂದ ನೋಡಿದರೂ ಕೊನೆಗೊಂದು ಲಕ್ಷ್ಮಣರೇಖೆ ಆ ಎರಡೂ ಜಗತ್ತುಗಳ ನಡುವೆ ಉಳಿದೇ ಹೋಗುತ್ತದೆ ಎಂಬ ಸತ್ಯವನ್ನು ತನ್ನ ವೃತ್ತಿ ಅನುಭವದಿಂದಲೇ ಕಂಡುಕೊಂಡವ. ಅವನಿಗೆ ರಾಧಿಕಾಳ ಹಾಗೆ ಈ ಎಲ್ಲ ಸಂಗತಿಗಳ ಕುರಿತು ಬಿಂದಾಸ್ ಆಗಿರಲು, ‘ಚಿಲ್’ ಆಗಿರಲು ಸಾಧ್ಯವಿಲ್ಲ. ರಾಧಿಕಾಳಷ್ಟು ಬೇಗ ಈತ ಬದಲಾಗಲಾರ.

ಇನ್ನು ಸುದ್ದಿಯೊಂದು ರಿಯಾಲಿಟಿ ಶೋ ಆಗುವ ಬಗೆ, ಸೋಷಿಯಲ್ ಮೀಡಿಯಾ ಸುದ್ದಿ ಸ್ಪೋಟ, ಕಪ್ಪು ಜೀವಗಳ ಬ್ಲಾಕ್ ಲೈವ್ಸ್ ಮ್ಯಾಟರ್, ಮೇಕ್ ಅಮೆರಿಕಾ ಗ್ರೇಟ್ ಅಗೈನ್ ಮುಂತಾದವುಗಳ ಕುರಿತ ಸಮಕಾಲೀನ ಅಮೆರಿಕಾದ ಸಂಕಟಗಳೂ ಚರ್ಚಿಸಲ್ಪಟ್ಟಿವೆ. ಯಾವುದೇ ಒತ್ತಡವನ್ನು ಕಾನೂನಿಗಿಂತ ಧರ್ಮ ಚೆನ್ನಾಗಿ ನಿಭಾಯಿಸಬಲ್ಲದೇ? ಎಂಬ ಪ್ರಶ್ನೆ ಮತ್ತು ಕುಕಿ ಎಂಬ ವಿಶೇಷ ವ್ಯಕ್ತಿ ಅದಕ್ಕೆ ಕಾಣಿಸುವ ಉತ್ತರಗಳು ಯೋಚನೆಗೆ ಹಚ್ಚುವಂತಿವೆ.

ನುಸ್ರತ್ ಳ ಹೊಸ ಮಗು, ರಾಧಿಕಾ-ಗುರು ಇಬ್ಬರಿಗೂ ಸಿಗುವ ಗ್ರೀನ್ ಕಾರ್ಡು ಮತ್ತು ಅಮೋಕಾದ ಆಗಸದಲ್ಲಿ ಮಾತ್ರ ಸ್ಪಷ್ಟವಾಗಿ ಕಾಣುವ ಪ್ರಕೃತಿಯ ಸೋಜಿಗ- ಈ ಮೂರು ಪ್ರಸಂಗಗಳ ಜೊತೆಗೆ ಕಾದಂಬರಿ ಮುಗಿಯುತ್ತದೆ. ಈ ಮೂರೂ ಪ್ರಸಂಗಗಳು ಮೇಲುನೋಟಕ್ಕೆ ಬೇರೆ ಬೇರೆ ಅನ್ನಿಸಬಹುದು. ಆದರೆ ಈ ಮೂರೂ ಪ್ರಸಂಗಗಳ ಕೊಂಡಿ ಒಳಗಿಂದೊಳಗೇ ಸೇರಿಕೊಂಡಿರುವುದು ಕಂಡಾಗ ಈ ಕಥನಕ್ಕಿರುವ ಜೀವಂತ ಆಶಯ ಅರಿವಾಗುತ್ತದೆ. ಒಳ್ಳೆಯದೊಂದು ಓದು ಸಾರ್ಥಕವೆನಿಸುವುದು ಹೀಗೆ.
***

Leave a Reply