fbpx

ಪುಗಸಟ್ಟೆ ಪುಳಕಗಳ ಹೀಗೊಂದು ಮಳ್ಳ್ ಪತ್ರ..!!

ಕಾವ್ಯ ಎಸ್ ಕೋಳಿವಾಡ್

ಹೇ , ಗುಳಿಕೆನ್ನೆಯ ಹುಡುಗ..

ಕಪ್ಪೆಚಿಪ್ಪಿನೊಳಗೆ ಮುತ್ತಿನ ತರ ಕಾಪಿಟ್ಟ ಎದೆಮಾತುಗಳನೆಲ್ಲ ಕಾಮನಬಿಲ್ಲಿನ ದೋಣಿಯಲ್ಲಿ ನಿನ್ನೆಡೆಗೆ ಕಳಿಸುತಿದ್ದೇನೆ ಸುಪ್ತವಾದ ತೀರ  ತಲುಪೀತೊ ಇಲ್ವೋ ಅನ್ನುವ ಭಯದಲಿ …..

ಅವತ್ತು ನೀ ಈ ಯುನಿವರ್ಸಿಟಿಯ ಸೈಲೆಂಟು ಸಂಜೆಯಲಿ ನಿನ್ನ ನೋಡಿದ ತಕ್ಷಣ ಶುರುವಾಯ್ತು ಈ ಮಧುರ ಸಂಚು . ಇಳಿಜಾರು ರಸ್ತೆಲಿ ಹೃದಯ ನಿನ್ನ ಬಳಿ‌ ಸುಂಯ್ ಅಂತ ಜಾರಿದ್ದು ಒಂದು ಸಿಹಿ ಅಚ್ಚರಿ .

ಇವತ್ಯಾಕೊ ಮತ್ತೆ ನೆನಪುಗಳು ಅಲ್ಲಿಗೆ ಎಳೆದು ಕೊಂಡು ಹೋಗ್ತಿದೆ…
ಕೆರೆಯಂಚಿನ ಕಲ್ಲು ಬೆಂಚು  ಅಚ್ಚುಮೆಚ್ಚಿನ ಜಾಗ. ಬರೋ ದಾರಿ ಹೂ ಹೆದ್ದಾರಿ ಹಾಸಿದ್ದ ಗುಲ್ ಮೊಹರ್

ಏಕಾಂತದಲಿ ತನ್ನ ಹದಿಹರೆಯದ ಮನ ಹಚ್ಚುತಿದ್ದ  ಹುಚ್ಚು ಬಯಕೆ ,ದೊಡ್ ದೊಡ್ಡ ಕನಸು , ಹತಾಷೆ , ಸುಮ್ನೆ ಬರುತಿದ್ದ ಅಳು    ಮೌನ ಸಂವಹನ ನಡೆಸ್ತಾ ಕೂತವಳಿಗೆ ಕಾಯ್ಕಿಣಿಯವರ ಹಾಡುಗಳು ಸಾಥ್ ಕೊಟ್ಟಿತ್ತು .

ಈ ಹದಿಹರೆಯದ ಹೃದಯದ ತಲ್ಲಣಗಳಿಗೊಂದು ಮಾಪನ  ಇರ್ಬೇಕಿತ್ತು . ನಿಮಿಷಕೊಂದು ಮಿಡಿತ , ಮಿಡಿತಕೊಂದು ಭಾವ .. ನನ್ನೆದೆಯ ಆವರಣದಲಿ ಆವರಿಸಿರುವ ನಿನ್ನ ಅಮಲಿಗೆ ಚಂದಮಾಮನೂ ಸಾಕ್ಷಿ .

ಎದೆಯಲಿ ಹುದುಗಿಸಿಟ್ಟ ಕನವರಿಕೆಗಳ   ನಿನ್ನ ಎಂಟ್ರಿ ನಂತರ ಈ ಟೀನೇಜು ಹುಡುಗಿಯ ಹಾರ್ಟಲಿ ಗೋಲ್ಡನ್ ಬಜರ್ ಹೊಡ್ಕೊಂಡೇ ಬಿಡ್ತು  ನೀ ಬಂದೆ …

ನನ್ನೊಳಗಿನ ಒಲವ ವಿದ್ಯಮಾನಕೆಲ್ಲ ವಿಧ್ಯುಕ್ತ ಚಾಲನೆ ಸಿಕ್ಕಿದ್ದು ಆ ಕುರುಚಲು ಗಡ್ಡ , ಒಂಚೂರು ಜಾಸ್ತಿನೇ ಅನಿಸುವಷ್ಟು ಒತ್ತೊತ್ತಾದ ಕೂದಲು , ಐದಡಿ ಆರಿಂಚಿನ ನಾನೇ ಕುಳ್ಳಿ ಅನಿಸುವ ಆ ಹೈಟು .ಮತ್ತೆ ..ಆ ಗಾಗಲ್ಸ್ ನಿಂದ..

ನನ್ನ ಮಾತಾಡಿಸ್ತಾ
ಆ ಗಡ್ಡ ಕೆರ್ಕೊಂಡು “ಹಾಯ್ ” ಅಂದೆ.  ಜೊತೆಗೊಂದು ಸುಪರ್ ಸ್ಮೈಲೂ ಇತ್ತು.  ಮನಸು ಇದಾವ ರಾಗ .. ಮತ್ತೆ ಇದಾವ ರಾಗ .. ಎದೆಯಾಳದಿಂದೆದ್ದು ನಭನೀಲಿಗೇರುತಿದೆ … ಅಂತ ಹಾಡ್ತಾನೇ ಇತ್ತು.
ಈ ಕಿತ್ತಳೆ ಸಂಜೆಯಲ್ಲಿ ನನ್ನ ಎದೆಬಡಿತದ ಪಾಸ್ವರ್ಡು ನೀನೇ ಹುಡುಗಾ ‌‌‌…

ಕೆನ್ನೆ ಕೊಂಚ ಕೆಂಪಾಯಿತೇ . ,ತುಟಿಯ ರಂಗು ಹೆಚ್ಚೇ ? ನಗುತ ಅವಳ ಛೇಡಿಸುತಿದೆ .. ಗಲ್ಲದ ಕರಿ ಮಚ್ಚೆ … ಈ ಪದ್ಯನಾ  ಅಸ್ಖಲಿತ ಮಾತಿನಿಂದ ವಿವರಿಸುವ ನಿನ್ನ ಪಾಠ ಇಂದು ಪ್ರಾಕ್ಟಿಕಲ್ ಅನಿಸುತಿತ್ತು …. ನಿನ್ನ ಗಡ್ಡ ಎಳೀವಾಗೆಲ್ಲ ನಾ ನಿನ್ ಲೆಕ್ಚರರ್ ಕಣೇ ಅಂತ ಛೇಡಿಸ್ತಿದ್ದಿದ್ದು ನಾ ಮತ್ತೆ ಸಾರಿ ಸರ್ ಅಂದಿದ್ದು ಈ ಪುಟ್ಟ ಹೃದಯಕೆ ಸಿಹಿ ಅಪಘಾತದ ಸರಣಿ ಶುರುವಾಗಿದ್ದು ಹೀಗೆ ನೋಡು ಸಾಹಿತ್ಯದೊಡನೇ ವಿಜ್ಞಾನ ಬೆರೆತಾಗಿತ್ತು .

ಈ ಪೆದ್ದು ಹುಡುಗಿಯ ಮುಗಿಯದ ಮಾತಿಗೆ ಬೇಸರವಿಲ್ಲದೇ ಹ್ಞೂ ಗುಟ್ಟಿ , ಕೇಳಿಸಿಕೊಳ್ಳೊ ತಾಳ್ಮೆ ನೋಡಿದರೆ  ಜಗತ್ತಿನ ಸಹನೆಯೆಲ್ಲ ನಿನ್ನತ್ರ ನೆ ಇದೆಯೋ ಏನೋ ಅನುಮಾನ ನಂಗೆ .

ಈ ನಿನ್ನ ಮುದ್ಮುದ್ದು ಮುಖ ಚಿವುಟಿದರೆ ಕೆಂಪಾಗಿದ್ದು ನೀನೋ ನಾನೋ ಅನ್ನೋದೆ ಸಿಹಿ ಗೋಜಲು ಕಣೊ .
ಗುಳಿ ಬೀಳೋ ಕೆನ್ನೆಲಿ ಅದ್ಯಾವಾಗ ನಾ ಬಿದ್ದೋಗಿದ್ದು ನಂಗೇ ಗೊತ್ತಿಲ್ಲ . ಕಿಡಿಗೇಡಿ ರಾತ್ರಿಯ ಎಲ್ಲ ಕನಸಲೂ  ಕಡ್ಡಾಯ ನಿನ್ನ ಹಾಜರಿ

ಗಡ್ಡದ ಮೇಲೊಮ್ಮೆ ಕೈಯಾಡಿಸಿ ನಕ್ಕು ಕಣ್ಣಲ್ಲೊಮ್ಮೆ  ಸಂಜ್ಞೆ ಕೊಟ್ಟು ಆಗಷ್ಟೇ ರೆಕ್ಕೆ ಬಡಿಯುತಿದ್ದ  ನನ್ನ ಹೃದಯವನ್ನ ನೀ ಹೀಗೆ ಎಗರಿಸಿಕೊಂಡು ಹೋಗಬಹುದಾ ಹೇಳು .

ಹುಡುಗಾ …
ನಿನ್ನ ಪದ್ಯದಲಿ ಮತ್ತದೇ  ಜುಮಕಿ , ಕಣ್ಣು  ,ಮೂಗುತಿ , ಮುಂಗುರುಳು ಅಂತ ಹಳೇ ಪದಗಳ ಜಾತ್ರೆಲಿ ಕಳೆದು ಹೋಗದಿರು ಪೆದ್ದಾ

ಮುಂಗುರುಳ ಹಿಂದಿನ ಮನಸನೊಮ್ಮೆ ನೋಡು , ಅಲ್ಲಿ ನಿನಗಾಗಿ ಕಾಪಿಟ್ಟ ಮಿಡಿತಗಳ ಕೇಳಿಸಿಕೋ , ರಾಶಿ ಕನಸುಗಳ ನಿನ್ನ ಮುಂದೆ ಗುಡ್ಡೆ ಹಾಕಿ ಕೂತಾಗ ಪ್ರತಿ ಕನಸಲು ನಿನ್ನದೇ ಉಸಿರಿನ ಬಿಸುಪು ಹಾಗೇ ಇದೆ ಅನ್ನೋದನೂ ಮರೀಬೇಡ . ಬಿಕೋ ಎನ್ನುವ ಕತ್ತಲಲಿ ತೇಲಿಬರುವ ತಂಗಾಳಿಯೂ ಸುಡುತಿದೆ ಈಗೀಗ ನನ್ನ ಧಿಮಾಕುಗಳನೆಲ್ಲ ಮಟ್ಟ ಹಾಕಿದ ಸಾಂಗತ್ಯಕೆ ಏನಂದು ಹೆಸರಿಡಲಿ …

ಬದುಕು ಸಾವಿಗಿಂತ ಸತಾಯಿಸುತ್ತೆ ಕಣೇ
ಅಂತ ಆತ್ಮಜ್ಞಾನಿಯ ತರ ನೀ ಮಾತಾಡೋವಾಗ ನಿಜಕೂ ವಿಸ್ಮಿತಳಾಗ್ತೀನಿ . ಅವಮಾನ , ಹಸಿವು ಎಲ್ಲವನು ಕಲಿಸಿಬಿಡುತ್ತದಲ್ವಾ ಅಂತ . ಬದುಕ ಚಾರಣದಲ್ಲಿ ಏರಿಳಿತ ಕಂಡ ನೀನು ಅದನ್ನ ಉತ್ಕಟವಾಗಿ ಪ್ರೀತಿಸುವಾಗೆಲ್ಲ‌  ನಿನ್ನ  ಅಸೂಯೆ   ನಿನ್ನ ಮೇಲೆ .ನಿನ್ನ ಖಾಸಾ  ನೆನಪುಗಳಿಗೆ ಮೈಯೊಡ್ಡಬೇಕೆನಿಸುತ್ತಿದೆ. ಈ ಹುಚ್ಚು ಮನದ ವಿಹಾರಿಗೆ ವಿರಹಿ ಎನ್ನಬೇಡ .. ಈ ಜನುಮಕಂತೂ ನಿನ್ನ ಮರೆಸುವ ಮದ್ದು ಸಿಗಲಿಕ್ಕಿಲ್ಲ ….

ಅವತ್ತು ಸಂಜೆ ನಕ್ಷತ್ರ ನೋಡ್ತಾ ನೆನಪಾಯ್ತು  ಚುಕ್ಕಿಗಳೆಂದರೆ ಮತ್ತೇನಲ್ಲ
ನಿನ್ನದೇ ಕನವರಿಕೆಯಲಿ ಚಂದಮಾಮನಿಗಿಟ್ಟ ಮುತ್ತುಗಳು ಕಣೋ ಅಂದಾಗ ಮಳ್ಳು ಅಂತ ಮೀಸೆ ಬದಿಯಲಿ ನಕ್ಕವ ನೀನೇ ಅಲ್ವ .  ಪ್ಲೀಸ್ ನಿನ್ನ ಮೌನದ ಧರಣಿ ಕೈಬಿಟ್ಟು ಮುದ್ದಾದ ಪಿಸುನುಡಿಗಳನ್ನ ಉಸಿರಿಬಿಡು .

ಮುದ್ದು ಸುರಿವ ನಿನ್ನ ಕನವರಿಕೆ ಶುರುವಾದಾಗ ಶೀತಲ ಗಾಳಿಯೂ ಈಗೀಗ  ಬೆಚ್ಚಗಿನ  ಭಾಷ್ಯೆ ಬರೆಯುತ್ತದೆ .
ನನ್ನೊಳಗೆ ಅಡಗಿದ್ದ ಹೆಣ್ತನ ಒಮ್ಮೊಮ್ಮೆ ಹೊರಬರೋದು ಆಗಲೇನೆ. ಪುಗಸಟ್ಟೆ ಪುಳಕಗಳಿಗೆಲ್ಲ  ಪುರಾವೆ ಹುಡುಕುವ ಕೆಲಸ…

ಹಳೆವರ್ಷ ನಿನ್ನ ಕೆನ್ನೆ ತೋಯಿಸಿದ ಮುರುಕು ಕನಸುಗಳಿಗೆ ಈಗ ಕಾವುಕೊಟ್ಟು ಜೀವ ಬರಿಸಿ ಈ ವರ್ಷ ನನಸು ಮಾಡ್ತೀ ಅಂತ ಭರವಸೆ ಇದೆ . ಆ ಚಂದಮಾಮನ ಆಣೆಗೂ . ಅಂತರಂಗದ ಅಚಾನಕ್  ಅನಾಹುತಗಳ ಆಚೆ ಹಾಕಲು ಯಾವ ಕನಸಿನೂರ ಕದ ತಟ್ಟಲಿ ?

ನಿನ್ನ ಚುರುಗುಡುವ ಬೆಳದಿಂಗಳು

Leave a Reply