fbpx

ಅಂಗೋಲಾದ ‘ಟಾರ್ಚರ್ ಚೇಂಬರ್’ ಗಳು..!!

”ಅಂಗೋಲಾದಲ್ಲಿ ನಾವು ಮರೆತೂ ಖಾಯಿಲೆ ಬೀಳುವಂತಿಲ್ಲ”, ಎಂದು ನಾನು ನನ್ನ ಸಹೋದ್ಯೋಗಿಯಾದ ಸಿಂಗ್ ಸಾಹೇಬರಿಗೆ ಹೇಳಿದ್ದೇನೋ ಸರಿ. ಆದರೆ ಖಾಯಿಲೆಗಳೇನು ನಕಾಶೆ ಹಿಡಿದುಕೊಂಡು, ಮುಹೂರ್ತ ನೋಡಿಕೊಂಡು ಬರುತ್ತವೆಯೇ? ಬಹುಷಃ ಅಂಗೋಲಾದ ವೈದ್ಯಕೀಯ ಜಗತ್ತಿನ ಒಳಹೊರಗನ್ನು ಮತ್ತಷ್ಟು ಹತ್ತಿರದಿಂದ ನೋಡುವ ಅವಕಾಶಗಳು ಇನ್ನೂ ಬಾಕಿಯಿದ್ದವು. ಅಂತೂ ನಾನು ಖಾಯಿಲೆ ಬಿದ್ದಿದ್ದೆ!

ಅಂಗೋಲಾದ ಆಸ್ಪತ್ರೆಗಳ ಸ್ಥಿತಿಯನ್ನು ಕಂಡು ಕೊಂಚ ಕೆಮ್ಮಿದರೂ ಕಂಗಾಲಾಗುತ್ತಿದ್ದ ದಿನಗಳವು. ಸಸ್ಯಾಹಾರವನ್ನು ಹೆಚ್ಚು ತಿಂದರೆ ರೋಗನಿರೋಧಕ ಶಕ್ತಿಗಳು ಹೆಚ್ಚಾಗುತ್ತವೆ ಎಂಬ ನನ್ನ ಸಹೋದ್ಯೋಗಿಯ ಸಲಹೆಯನ್ನು ಆಧರಿಸಿ ಸಸ್ಯಾಹಾರದ ಬಳಕೆಯು ಹೆಚ್ಚಾಗಿತ್ತು. ಅವರೇನೋ ಶುದ್ಧ ಸಸ್ಯಾಹಾರಿಗಳು. ಹೀಗಾಗಿ ಇದು ಅವರ ನಿತ್ಯದ ಆಹಾರಪದ್ಧತಿಯೇ ಆಗಿತ್ತು ಎಂದರೆ ತಪ್ಪಿಲ್ಲ. ಆದರೆ ನಾನು ಶುದ್ಧ ಮಾಂಸಾಹಾರಿಯಾಗಿದ್ದ ಪರಿಣಾಮವಾಗಿ ಕೆಲ ದಿನಗಳು ಆಹಾರವು ನೀರಸವೆನಿಸಿದ್ದಂತೂ ಸತ್ಯ. ಆದರೆ ಆಗಾಗ, ಅಂದರೆ ಮೊದಲಿಗಿಂತ ಕಡಿಮೆ ಪ್ರಮಾಣದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಮಾಂಸಾಹಾರವನ್ನು ಸವಿಯುವ ಅವಕಾಶಗಳೂ ಸಿಗುತ್ತಿದ್ದರಿಂದ ಎಲ್ಲವೂ ಪರವಾಗಿಲ್ಲ ಎಂಬ ಸ್ಥಿತಿಯಲ್ಲೇ ನಡೆಯುತ್ತಿತ್ತು ಎಂಬುದನ್ನು ಹೇಳಲೇಬೇಕು.

ಶುಚಿತ್ವದ ಅಂಶವನ್ನು ಗಮನದಲ್ಲಿರಿಸಿಕೊಂಡು ಮನೆಯ ಹೊರಗಿನ ಆಹಾರವನ್ನು ತಿನ್ನುವ ಅಭ್ಯಾಸಗಳು ಬಹುತೇಕ ನಿಂತೇಹೋಗಿದ್ದವು. ರೆಸ್ಟೊರೆಂಟುಗಳಲ್ಲೂ ಆಯ್ದ ಕೆಲವಕ್ಕೆ ಮಾತ್ರ ನಮ್ಮ ಸವಾರಿಗಳು ತಲುಪಿದವು. ಸ್ಥಳೀಯ ಅಧಿಕಾರಿಗಳ ಸೂಚನೆಯಂತೆ ಕುಡಿಯುವ ನೀರಿಗಾಗಿ ಮಿನೆರಲ್ ವಾಟರ್ ಬಾಟಲಿಗಳು ನಮ್ಮ ಅಡುಗೆಮನೆಗಳನ್ನು ನುಗ್ಗಿದವು. ಲುವಾಂಡಾದ ಕೆಲ ಆಯ್ದ ರೆಸ್ಟೊರೆಂಟುಗಳಲ್ಲಾದರೂ ನಾನು ಹೊಸ ಹೊಸ ಖಾದ್ಯಗಳನ್ನು ಸವಿದರೆ ಸಿಂಗ್ ಸಾಹೇಬ್ರು ಮಾತ್ರ ಇವುಗಳ ಸಹವಾಸವೇ ಬೇಡ ಎಂದು ತರಿಸಿಕೊಂಡದ್ದನ್ನೇ ಮತ್ತೆ ಮತ್ತೆ ತರಿಸಿಕೊಂಡು ಒಂದಿಷ್ಟು ತಿನ್ನುತ್ತಿದ್ದರು. ಹಾಗಂತ ಇದಕ್ಕೆ ಆರೋಗ್ಯದ ಕಾರಣವು ಮಾತ್ರವಲ್ಲ. ಬೇರೊಂದು ತಮಾಷೆಯ ಹಿನ್ನೆಲೆಯೂ ಇದೆ. ನಮ್ಮ ವೀಜ್ ನಿವಾಸದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ, ಹಚ್ಚಹಸಿರ ಗರ್ಭದಲ್ಲಿ ನೋಡಲು ರೆಸಾರ್ಟ್‍ನಂತಿರುವ ರೆಸ್ಟೊರೆಂಟ್ ಒಳಕ್ಕೆ ಅಂದು ನಾವು ಕಾಲಿರಿಸಿದ್ದೆವು.

ಆ ದಿನ ನಮ್ಮ ಜೊತೆ ದುಭಾಷಿಯೂ ಇರಲಿಲ್ಲವಾದ್ದರಿಂದ ಪೋರ್ಚುಗೀಸ್ ಭಾಷೆಯಲ್ಲಿದ್ದ ಹೋಟೇಲಿನ ಮೆನು ನಮಗೇನೂ ಅಷ್ಟು ಅರ್ಥವಾಗಲಿಲ್ಲ. ಆದರೂ ನಾನು ಅದೇನು, ಇದೇನು ಅಂತ ಕೇಳುವುದು, ಕೌಂಟರಿನಾಚೆ ಕೂತ ಸುಂದರಿಯೋರ್ವಳು ತನಗೆ ತಿಳಿದಷ್ಟು ಇಂಗ್ಲಿಷಿನಲ್ಲಿ ಖಾದ್ಯಗಳ ಬಗ್ಗೆ ವಿವರಿಸುವುದು ಇತ್ಯಾದಿಗಳೂ ಪರವಾಗಿಲ್ಲ ಎಂಬ ಮಟ್ಟಿಗೆ ನಡೆಯುತ್ತಿದ್ದವು. ಅಷ್ಟಕ್ಕೂ ಅಂದು ಆಗಿದ್ದೇನೆಂದರೆ ಮೆನು ಕಾರ್ಡಿನಲ್ಲಿ ‘ಬೆಫೆ’ ಎಂಬ ಪದವನ್ನು ನೋಡಿದ ನಮ್ಮ ಸಿಂಗ್ ಸಾಹೇಬ್ರು ಅದನ್ನು ‘ಬುಫೆಟ್’ ಎಂದು ಊಹಿಸಿ ತರಿಸಿಕೊಂಡಿದ್ದರು. ಆದರೆ ಅದು ‘ಬುಫೆಟ್’ ಅಲ್ಲ, ಬದಲಾಗಿ ‘ಬೀಫ್’ ಎಂದು ತಿಳಿದಿದ್ದು ನನ್ನ ನಂತರದ ವಿಚಾರಣೆಗಳಿಂದಾಗಿಯೇ. ಮೊದಲೇ ಶುದ್ಧ ಸಸ್ಯಾಹಾರಿಗಳು, ಮೇಲಾಗಿ ದನದ ಮಾಂಸ ಬೇರೆ. ಅರವತ್ತರ ಹಿರಿಯರಿಗೆ ಹೇಗಾಗಿರಬೇಡ! ಅದೇ ಕೊನೆ. ಸಿಂಗ್ ಸಾಬ್ ಅಂಗೋಲಾದಲ್ಲಿ ಮತ್ತೆಂದೂ ಹೊಸ ಖಾದ್ಯಗಳನ್ನು ಪ್ರಯತ್ನಿಸುವ ಗೋಜಿಗೆ ಹೋಗಲಿಲ್ಲ.

ಅಂಗೋಲಾಕ್ಕೆ ಬಂದಿಳಿದ ಹೊಸತರಲ್ಲಿ ನಮ್ಮನ್ನು ಕಾಡಿದ ಮೊಟ್ಟ ಮೊದಲ ಕೌತುಕವೆಂದರೆ ಅದ್ಯಾವುದೋ ಅದೃಶ್ಯ ಕೀಟದ ಕಾರುಬಾರು. ಕೈಕಾಲುಗಳು ವಿಚಿತ್ರವಾಗಿ ತುರಿಸುತ್ತಿದ್ದ ಆರಂಭದ ಆ ದಿನಗಳು ನನಗಿಂದೂ ನೆನಪಿದೆ. ತುರಿಸುವುದನ್ನು ಮುಂದುವರಿಸಿದರೆ ನಂತರ ಚಿಕ್ಕ ಚಿಕ್ಕ ಕೆಂಪು ಬೊಕ್ಕೆಗಳು ಮೇಲೇಳುತ್ತಿದ್ದು ನಂತರದ ಕೆಲ ತಾಸುಗಳಲ್ಲಿ ತನ್ನಷ್ಟಕ್ಕೇ ಮಾಯವಾಗುತ್ತಿದ್ದವು. ಸಾಮಾನ್ಯವಾಗಿ ಉಂಟಾಗುವ ಸೊಳ್ಳೆ ಕಡಿತದಿಂದ ಹೆಚ್ಚು ತೀಕ್ಷ್ಣವಾಗಿದ್ದ, ಎಲ್ಲೆಂದರಲ್ಲಿ ಯಾವುದೇ ಪೂರ್ವಸೂಚನೆಗಳಿಲ್ಲದೆ ಉಂಟಾಗುತ್ತಿದ್ದ ತುರಿಕೆಗಳು ನಮ್ಮನ್ನು ಇರಿಸುಮುರುಸಾಗಿಸಿದ್ದಂತೂ ಸತ್ಯ. ನನ್ನ ಸ್ಪ್ಯಾನಿಶ್ ಸಹೋದ್ಯೋಗಿಯಾಗಿದ್ದ ಆಲ್ಬರ್ಟೋನಂತೂ ತುರಿಸುವುದಕ್ಕಾಗಿಯೇ ಹುಟ್ಟಿರುವವನಂತೆ ಕೆರೆದು ಕೆರೆದು ತನ್ನೆರಡೂ ಕೈಗಳಲ್ಲಿ ಅದೆಷ್ಟೋ ಬೊಕ್ಕೆಗಳನ್ನು ತರಿಸಿಕೊಂಡಿದ್ದ. ಮೊದಲೇ ಬಿಳಿಯನಾಗಿದ್ದ ಆತನ ಕೈಯಲ್ಲಿ ಕೆಂಪು ಬೊಕ್ಕೆಗಳು ಕೊಂಚ ಹೆಚ್ಚೇ ಎದ್ದುಕಾಣುವಂತೆ ಕಣ್ಣಿಗೆ ರಾಚುತ್ತಿದ್ದವು. ಕೊನೆಗೂ ಯಾವುದರಿಂದ ಹೀಗಾಗುತ್ತದೆ ಎಂಬ ಮಾಹಿತಿಯು ನಮಗೆ ಸಿಕ್ಕಿಲ್ಲದ ಪರಿಣಾಮವಾಗಿ ‘ಅದೃಶ್ಯ ಕೀಟ’ ಎಂಬ ನಾಮಕರಣವೊಂದನ್ನು ಈ ಜಂತುವಿಗೆ ನಾವಿಲ್ಲಿ ಮಾಡಿದೆವು.

ಈ ಮಧ್ಯೆ ನನ್ನ ಎಡಗಾಲ ಹೆಬ್ಬೆರಳ ಮೂಲೆಯು ತನ್ನಷ್ಟಕ್ಕೇ ಕುಟುಕುತ್ತಿರುವ ಹೊಸ ಸಮಸ್ಯೆಯೊಂದೂ ಪ್ರಾರಂಭವಾಗಿತ್ತು. ನಂತರ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಉಗುರಿನ ಮೂಲೆಯು ಮಾಂಸದೊಳಗೆ ಬಹುತೇಕ ಒಳನುಗ್ಗಿ ಆ ಮೃದುಮಾಂಸವನ್ನು ಕುಟುಕುತ್ತಾ ನೋವಿನ ತರಂಗವನ್ನು ಕಳಿಸುತ್ತಿತ್ತು. ಕೆಲದಿನಗಳ ಕಾಲ ಕಾದು ನೋಡಿದ ನಾನು ಮಾಂಸದೊಳಗೆ ಬಚ್ಚಿಟ್ಟುಕೊಂಡ ಉಗುರಿನ ಮೂಲೆಯನ್ನು ತಲುಪಲೂ ಆಗದೆ, ಅದನ್ನು ಮರೆಯಲೂ ಆಗದೆ ಸ್ಥಳೀಯ ವೈದ್ಯರ ಬಳಿ ಹೋಗಿಯೇ ಬಿಡೋಣ ಎಂದು ನಿರ್ಧರಿಸಿದ್ದೆ. ಬಹುಷಃ ಅಂಗೋಲಾದಲ್ಲಿ ನಾನು ಮಾಡಿದ್ದ ಬೆರಳೆಣಿಕೆಯ ತಪ್ಪು ನಿರ್ಧಾರಗಳಲ್ಲಿ ಇದು ಮುಂಚೂಣಿಯಲ್ಲಿ ನಿಲ್ಲುವಂಥದ್ದು!

”ಇಲ್ಲಿಯ ಆಸ್ಪತ್ರೆಗಳಿಗೆ ಹೋಗುವುದೆಂದರೆ ನನಗೆ ಭಯ ಮಾರಾಯ. ಸಾಧ್ಯವಾದರೆ ಇಂಗ್ಲಿಷ್ ಭಾಷೆಯನ್ನು ಮಾತನಾಡುವ ವೈದ್ಯರು ಸಿಗುತ್ತಾರೋ ನೋಡೋಣ. ಏಕೆಂದರೆ ನೀವಿಬ್ಬರೂ ಏನು ಮಾತಾಡುತ್ತಿದ್ದೀರಿ ಎಂದು ನನಗೂ ಕೊಂಚ ಅರ್ಥವಾಗುತ್ತದೆ”, ಎಂದೆ ನಾನು. ಆಗಲಿ ಎಂದ ದುಭಾಷಿ ಮಿಗೆಲ್ ಸಾಕಷ್ಟು ದೊಡ್ಡದಾಗಿದ್ದ ಖಾಸಗಿ ಆಸ್ಪತ್ರೆಯೊಂದಕ್ಕೆ ನನ್ನನ್ನು ಕರೆದೊಯ್ದ. ನನ್ನ ಪುಣ್ಯವೇನೋ ಎಂಬಂತೆ ಆಂಗ್ಲಭಾಷೆಯನ್ನು ಮಾತನಾಡುವ ಒಬ್ಬ ವೈದ್ಯರೂ ಅಂದು ಸಿಕ್ಕಿದರು. ಮೂವತ್ತರ ಆಸುಪಾಸಿನ ಈ ವೈದ್ಯ ಹಸನ್ಮುಖಿಯಾಗಿದ್ದು ಅಂಗೋಲನ್ನರ ಸ್ನೇಹಪರತೆಯನ್ನು ಹೊಂದಿದ್ದ. ಸಾಲದ್ದಕ್ಕೆ ಆತ ಶುದ್ಧ ಇಂಗ್ಲಿಷ್ ಅನ್ನು ಬೇರೆ ಮಾತಾಡುತ್ತಿದ್ದ. ”ಹಾಯ್, ನಾನು ಡಾ. ರಾಯ್ಮುಂಡು”, ಆತ ಮುಗುಳ್ನಗುತ್ತಾ ತನ್ನನ್ನು ತಾನು ಪರಿಚಯಿಸಿಕೊಂಡ. ನಾನೂ ಕೂಡ ಕೈಕುಲುಕಿ ಸ್ವಪರಿಚಯ ಮಾಡಿಕೊಂಡೆ. ತಡಮಾಡದೆ ಇಬ್ಬರೂ ಕೂಡ ನೇರವಾಗಿ ವಿಷಯಕ್ಕಿಳಿದೆವು.

ಆಸ್ಪತ್ರೆಯ ಕೋಣೆಯು ಹೆಚ್ಚೇನೂ ಆಧುನಿಕವಾಗಿಲ್ಲದಿದ್ದರೂ ಮೇಲ್ನೋಟಕ್ಕೆ ದೂರುವಂಥದ್ದೇನೂ ಇರಲಿಲ್ಲ. ಆದರೆ ಎಂದಿನಂತೆ ಗಾಳಿ, ಬೆಳಕಿನ ವ್ಯವಸ್ಥೆಗಳು ಕಳಪೆಯಾಗಿದ್ದವು. ಕೈಗೊಂದು ಕೈಗವಸನ್ನು ಧರಿಸಿ ಸೂಕ್ಷ್ಮವಾಗಿ ನನ್ನ ಕಾಲ ಹೆಬ್ಬೆರಳನ್ನು ಪರೀಕ್ಷಿಸಿದ ಈ ಯುವವೈದ್ಯ ”ತಲೆಕೆಡಿಸಿಕೊಳ್ಳುವುದಕ್ಕೇನೂ ಇಲ್ಲ, ಈ ಮೂಲೆಯನ್ನು ಒಂದು ಚಿಕ್ಕ ಸರ್ಜರಿ ಮಾಡಿಸಿ ತೆಗೆದುಬಿಡೋಣ” ಅಂದ. ಹಾಗೆಯೇ ಬಲಗಾಲ ಹೆಬ್ಬೆರಳನ್ನೂ ಪರೀಕ್ಷಿಸಿ ಜೊತೆಜೊತೆಗೇ ಇದನ್ನೂ ಸರ್ಜರಿ ಮಾಡಿಬಿಡೋಣ ಅಂದುಬಿಟ್ಟ. ಮೊದಲ ಭೇಟಿಯ ಮೊದಲ ಪರೀಕ್ಷೆಯಲ್ಲೇ ಸರ್ಜರಿಯಂತಹ ಬ್ರಹ್ಮಾಸ್ತ್ರವನ್ನು ನಿರೀಕ್ಷಿಸದಿದ್ದ ನಾನು ಕೊಂಚ ಹಿಂದೇಟು ಹಾಕಿದೆ. ”ಅಯ್ಯೋ, ಸರ್ಜರಿಯೆಂದರೆ ಒಂದ್ಹತ್ತು ನಿಮಿಷಗಳ ಕೆಲಸವಷ್ಟೇ. ಬೇಗನೇ ಮುಗಿದುಹೋಗುತ್ತದೆ”, ಎಂದ ಆತ.

”ಅಲ್ಲ, ಒಂದು ಬೆರಳಿಗೆ 20,000 ಕ್ವಾಂಝಾ ಶುಲ್ಕವನ್ನು ಬೇರೆ ನೀವು ಕೇಳುತ್ತಿದ್ದೀರಿ. ಅಷ್ಟು ನಗದು ಈಗ ನನ್ನ ಬಳಿಯಿಲ್ಲ. ಹೀಗಾಗಿ ನಾಳೆ ಬರುತ್ತೇನೆ”, ಎಂದು ನಾನು ಈ ‘ಮಹಾಸರ್ಜರಿ’ಯನ್ನು ಮುಂದೂಡಲು ಪ್ರಯತ್ನಿಸಿದೆ. ಕೊನೆಗೂ ಮಾತುಕತೆಗಳ ನಂತರ ಇಂದಿನ ಬದಲು ಈ ಶಸ್ತ್ರಚಿಕಿತ್ಸೆಯನ್ನು ಮುಂದಿನ ದಿನಕ್ಕೆ ನಿಗದಿಪಡಿಸಲಾಯಿತು. ”ಮೊದಲಿಗೆ ನೋಯುವ ಈ ಎಡಬೆರಳನ್ನಷ್ಟೇ ನಾನು ನಿಮಗೆ ಕೊಡೋದು. ಬಲಗಾಲಿನದ್ದು ಮತ್ತೊಮ್ಮೆ ನೋಡೋಣ”, ಎಂದು ಕೊನೆಯಲ್ಲಿ ನಾನು ತೀರ್ಪನ್ನು ಕೊಟ್ಟೆ. ”ಆಯ್ತಪ್ಪಾ… ಯಾವುದಕ್ಕೂ ನಾಳೆ ಬಂದುಬಿಡಿ”, ಎಂದು ನಗುನಗುತ್ತಲೇ ನನ್ನನ್ನು ಕಳುಹಿಸಿಕೊಟ್ಟರು ಡಾ. ರಾಯ್ಮುಂಡು.

ಮರುದಿನ ಮುಂಜಾನೆಯ ಹತ್ತಕ್ಕೆ ಆಸ್ಪತ್ರೆಗೆ ಬಂದ ನನಗೆ ನನ್ನ ಸರದಿಯು ಬರುವಷ್ಟರಲ್ಲಿ ಹನ್ನೊಂದೂವರೆಯಾಗಿತ್ತು. ”ಹೋ, ಬನ್ನಿ ಬನ್ನಿ…”, ಎಂದು ಸ್ವಾಗತಿಸಿದ ಡಾ. ರಾಯ್ಮುಂಡು ತನ್ನ ಸಹಾಯಕನನ್ನು ಕರೆದು ಈ ಸರ್ಜರಿಗೆ ಬೇಕಿದ್ದ ಉಪಕರಣಗಳನ್ನು ತರಿಸಿಕೊಂಡರು. ಆ ಆಯುಧಗಳನ್ನು ನೋಡಿ ಕಂಗಾಲಾದ ನಾನು ”ಸಾರ್, ಅದೇನು ಮಾಡೋದಿದ್ರೂ ಮೊದಲು ಅನಸ್ತೇಸಿಯಾ ಹಾಕಲು ಮಾತ್ರ ಮರೆಯಬೇಡಿ”, ಎಂದು ಅವರಿಗೆ ನೆನಪಿಸಿದೆ. ನನ್ನ ಪೆಚ್ಚಾದ ಮುಖವನ್ನು ಕಂಡ ಆತ ಆಗಲಿ ಎನ್ನುತ್ತಾ ಮುಗುಳ್ನಕ್ಕ. ಮುಂದಿನ ಕೆಲನಿಮಿಷಗಳಲ್ಲೇ ನನ್ನ ಬೆರಳಿನ ರಿಪೇರಿಯು ಶುರುವಾಗಿತ್ತು.

ಉಗುರ ಹೆಬ್ಬೆರಳಿನ ಸುತ್ತಲಿನ ಸೂಕ್ಷ್ಮವಾದ ಜಾಗಕ್ಕೆ ಮೂರು ಚುಚ್ಚುಮದ್ದುಗಳನ್ನು ಅನಸ್ತೇಸಿಯಾದ ಹೆಸರಿನಲ್ಲಿ ಚುಚ್ಚಿದ ವೈದ್ಯರು ತನ್ನ ಅರ್ಧಶಕ್ತಿಯನ್ನಂತೂ ಅಲ್ಲೇ ಉಡುಗಿಸಿಬಿಟ್ಟಿದ್ದರು. ಆದರೆ ಏನೆಲ್ಲಾ ರಿಪೇರಿಗಳಾಗಿದೆ ಎಂಬುದನ್ನು ನಾನು ಪರೀಕ್ಷಿಸುವ ಮೊದಲೇ ರಕ್ತಸಿಕ್ತವಾಗಿದ್ದ ನನ್ನ ಹೆಬ್ಬೆರಳಿಗೆ ಏನೇನೋ ಹಚ್ಚಿ, ದಪ್ಪನೆಯ ಬ್ಯಾಂಡೇಜನ್ನು ಸುತ್ತಿ ”ಶುಭಂ” ಅಂದುಬಿಟ್ಟರು ಡಾ. ರಾಯ್ಮುಂಡು. ವಾರಕ್ಕೆರಡು ಬಾರಿ ಡ್ರೆಸ್ಸಿಂಗ್ ಬದಲಾಯಿಸಬೇಕು ಎಂಬ ಸೂಚನೆಯೊಂದಿಗೆ ಅಂದು ನಾನು ಕುಂಟುತ್ತಾ ಮನೆಗೆ ಮರಳಿದೆ.

ದುರಾದೃಷ್ಟವಶಾತ್ ಎರಡನೇ ಮತ್ತು ಮೂರನೇ ಡ್ರೆಸ್ಸಿಂಗ್ ಗಳು ಸರ್ಜರಿಗಿಂತಲೂ ಯಾತನಾಮಯವಾಗಿ ಪರಿಣಮಿಸಿ ನನ್ನನ್ನು ಮತ್ತೆ ನಿರಾಶೆಗೆ ದೂಡಿದವು. ಇನ್ನು ಎಲ್ಲವೂ ಮುಗಿಯಿತು ಎಂಬ ಕೊನೆಯ ಹಂತದಲ್ಲಿರುವಾಗ ಕೀವೊಂದು ಮೇಲೆದ್ದು ಮತ್ತೆ ನಾನು ಆಸ್ಪತ್ರೆಗೇ ಮರಳಬೇಕಾಯಿತು. ಡಾ. ರಾಯ್ಮುಂಡುರವರ ಅನುಪಸ್ಥಿತಿಯಲ್ಲಿ ಈ ಬೆರಳನ್ನು ಪರೀಕ್ಷಿಸಿ ”ಅದ್ಯಾವುದೋ ಕೀಟವು ಮೊಟ್ಟೆಯಿಟ್ಟಿದೆ” ಎಂದ ವೈದ್ಯನೊಬ್ಬ ಉಗುರಿನ ಒಂದಿಂಚು ಆಳಕ್ಕೆ ಬೆಂಕಿಕಡ್ಡಿಯೊಂದನ್ನು ತೂರಿಸಿ ಭಯಾನಕವಾಗಿ ಕೀವನ್ನು ಶುಚಿಗೊಳಿಸಿದ. ಉರಿದು ಎಸೆಯಲು ಲಾಯಕ್ಕಾಗಿದ್ದ ಬೆಂಕಿಕಡ್ಡಿಯೊಂದನ್ನು ಹೀಗೂ ಬಳಸಬಹುದು ಎಂದು ನನಗೆ ತಿಳಿದದ್ದು ಆ ದಿನವೇ. ಚುಚ್ಚುಮದ್ದುಗಳನ್ನು ಚುಚ್ಚಿ ಚುಚ್ಚಿ, ಏನೇನೋ ವಸ್ತುಗಳನ್ನು ತೂರಿಸಿ ತೂರಿಸಿ ಹೆಬ್ಬೆರಳ ಉಗುರು ವಿಕಾರವಾಗಿ ಹೋಗಿತ್ತು.

”ಈ ಕಥೆ ಶುರುವಾಗಿ ಒಂದು ತಿಂಗಳಾಗುತ್ತಾ ಬಂತು. ನಾನು ಕಟ್ಟಡ ಕಾಮಗಾರಿಗಳು ನಡೆಯುವ ಜಾಗದಲ್ಲಿ ಇಂಜಿನಿಯರ್ ಆಗಿ ದುಡಿಯುವವನು. ಹೀಗಾಗಿ ಮದುಮಗನಂತೆ ಗಾಜಿನರಮನೆಯಲ್ಲಿ ಕೂರುವುದು ಕಷ್ಟ. ನಡೆಯಲು ಬೇರೆ ಆಗುತ್ತಿಲ್ಲ. ಯಾವಾಗ ಈ ರಾಮಾಯಣವನ್ನು ನೀವು ಮುಗಿಸುವುದು?”, ಎಂದು ನಾನು ಒಂದು ದಿನ ನೇರವಾಗಿಯೇ ಕೇಳಿಬಿಟ್ಟೆ. ”ಕೊನೆಯ ಹಂತವಾಗಿ ಇನ್ನೆರಡು ಚುಚ್ಚುಮದ್ದುಗಳನ್ನು ಕೊಡುವುದಿದೆ. ಅದು ಮುಗಿದರೆ ಎಲ್ಲವೂ ಮುಗಿದಂತೆ”, ಎಂದ ಹಸನ್ಮುಖಿ ವೈದ್ಯ ಚುಚ್ಚುಮದ್ದುಗಳ ಹೆಸರನ್ನು ಬರೆದುಕೊಟ್ಟು ಮುಂದಿನ ಬಾರಿ ಬರುವಾಗ ಇದನ್ನೂ ತಂದುಬಿಡಿ ಎಂದು ನನ್ನನ್ನು ಬೀಳ್ಕೊಟ್ಟ.

ನನ್ನ ಅಸಮಾಧಾನಕ್ಕೆ ಕಾರಣಗಳೂ ಇದ್ದವು ಅನ್ನಿ. ನನ್ನನ್ನು ಕರೆದೊಯ್ಯಲಾಗಿದ್ದ ಒಂದು ಕ್ಲಿನಿಕ್ ಅಂತೂ ನೋಡಲು ವಿಚಿತ್ರವಾಗಿತ್ತು. ಹವಾನಿಯಂತ್ರಣ ವ್ಯವಸ್ಥೆಯಂತೂ ದೂರದ ಮಾತು. ಗಾಳಿಯಾಡಲು ಒಂದು ಟೇಬಲ್ ಫ್ಯಾನ್ ಕೂಡ ಅಲ್ಲಿರಲಿಲ್ಲ. ಕೋಣೆಯ ಒಂದು ಮೂಲೆಯಲ್ಲಿ ವಿಚಿತ್ರವೆಂಬಷ್ಟು ಚಿಕ್ಕದಾಗಿದ್ದ ಕಿಟಕಿಯೊಂದಿತ್ತು. ಬೆಳಕು ಮಂದವಾಗಿದ್ದು ಬಾರಿನಂತಿದ್ದರೆ, ಒಟ್ಟಾರೆ ವ್ಯವಸ್ಥೆಯು ವೈದ್ಯರ ಕೋಣೆಯಂತಿರದೆ ಒಂದು ಅಡಗುತಾಣದಂತಿತ್ತು. ಇಂಥಾ ವಿಲಕ್ಷಣ ವ್ಯವಸ್ಥೆಯಲ್ಲಿ ವಿಚಿತ್ರವಾದ ಭಂಗಿಯಲ್ಲಿ ಕುಳಿತು ನೋವಿನಿಂದ ಒದ್ದಾಡುತ್ತಿದ್ದ ನನ್ನ ಕಾಲಹೆಬ್ಬೆರಳ ಮೇಲೆ ಏನೇನೋ ಪ್ರಯೋಗಗಳು ನಡೆಯುತ್ತಿದ್ದವು. ಮತ್ತದೇ ಔಷಧಿಗಳ ರಾಶಿ ಮತ್ತು ನಗುಮುಖದ ಭರವಸೆ. ಕೊನೆಗೂ ಎಲ್ಲವೂ ಮುಗಿಯುಷ್ಟರಲ್ಲಿ ನಾನು ತೀವ್ರವಾಗಿ ಬೆವತು ಒದ್ದೆ ಕೋಳಿಯಂತಾಗುತ್ತಿದ್ದೆ. ನೋವಿನಿಂದ ನಡೆಯಲಾಗದೆ ಕಾಲುಗಳು ಕಂಪಿಸುತ್ತಿದ್ದವು. ಕ್ರಮೇಣ ಈ ಕೋಣೆಗಳನ್ನು ನಾನು ‘ಟಾರ್ಚರ್ ಚೇಂಬರ್’ ಎಂದು ಕರೆಯಲಾರಂಭಿಸಿದ್ದೆ.

ಈ ‘ಸೆಮಿಫೈನಲ್’ ಚುಚ್ಚುಮದ್ದು ಕೂಡ ನೋಡಲು ದೊಡ್ಡದಾಗಿದ್ದು ವಿಚಿತ್ರವಾಗಿತ್ತು. ಇಂಥಾ ಚುಚ್ಚುಮದ್ದುಗಳಿಗೆ ನಾವು ಬಾಲ್ಯದಲ್ಲಿ ‘ದನಕ್ಕೆ ಹಾಕುವ ಇಂಜೆಕ್ಷನ್’ ಅನ್ನುತ್ತಿದ್ದೆವು. ಇವುಗಳನ್ನು ದನಕ್ಕೆ ಹಾಕುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಇವುಗಳು ಮನುಷ್ಯರಿಗಂತೂ ಅಲ್ಲ, ಇದೇನಿದ್ದರೂ ದಪ್ಪ ಚರ್ಮದ ಪ್ರಾಣಿಗಳಿಗೆ ಮಾತ್ರ ಎಂಬ ಅರ್ಥದಲ್ಲಿ ಇದನ್ನು ಹೇಳಲಾಗುತ್ತಿತ್ತು. ಏನಪ್ಪಾ ಇದು ಎಂದು ಕಂಗಾಲಾದ ನಾನು ಈ ಬಾರಿ ಎರಡರಲ್ಲಿ ಒಂದನ್ನು ಮಾತ್ರ ಆಸ್ಪತ್ರೆಗೆ ಕೊಂಡೊಯ್ದು ಹಾಕಿಸಿಕೊಂಡೆ. ಎಂದಿನಂತೆ ಮತ್ತದೇ ಮುಗಿಯದ ಭಯಾನಕ ಯಾತನೆ. ಆದರೆ ಮುಂದಿನ ದಿನಗಳಲ್ಲಿ ತಲೆಯು ಭಾರವಾದಂತಾಗಿ ಹಸಿವು ಇಲ್ಲವೇ ಇಲ್ಲವೆಂಬಷ್ಟು ಕಮ್ಮಿಯಾಗಿತ್ತು. ”ಒಂದೂವರೆ ತಿಂಗಳಾಗುತ್ತಾ ಬಂತು. ಇನ್ನು ನೀವು ಅಲ್ಲಿಗೆ ಹೋಗಬೇಡಿ.

ನಿಮ್ಮ ಬಿಲ್ ಈಗಾಗಲೇ ನೂರು ಡಾಲರ್ ದಾಟಿಯಾಗಿದೆ. ಆತ ಬಹುಷಃ ನಿಮ್ಮನ್ನು ಆಟವಾಡಿಸುತ್ತಿದ್ದಾನೆ. ಅವನಿಗೆ ಸಮಸ್ಯೆಯ ಪರಿಹಾರವೇ ಬೇಕಿಲ್ಲ”, ಎಂದರು ಸಿಂಗ್ ಸಾಹೇಬ್ರು. ಈ ಮುಗಿಯದ ನಾಟಕಗಳಿಂದಾಗಿ ನನ್ನ ದೈನಂದಿನ ಚಟುವಟಿಕೆಗಳಿಗೆ ಭಾರೀ ಪೆಟ್ಟು ಬಿದ್ದಿದ್ದಲ್ಲದೆ ಉದ್ಯೋಗಸಂಬಂಧಿ ಚಟುವಟಿಕೆಗಳಿಗೂ ತೀವ್ರ ಹಿನ್ನಡೆಯಾಗಿತ್ತು. ಈವರೆಗೆ ಅನುಭವಿಸಿದ ಯಾತನೆಗಳನ್ನು ನೆನಪಿಸಿಕೊಳ್ಳುತ್ತಾ ನಾನು ಮತ್ತೆ ಯೋಚಿಸುವ ಗೋಜಿಗೆ ಹೋಗದೆ ಎರಡನೇ ಚುಚ್ಚುಮದ್ದನ್ನು ಕಸದ ಬುಟ್ಟಿಗೆ ಎಸೆದಿದ್ದೆ. ಮತ್ತೇನನ್ನೋ ಹೊಸದಾಗಿ ಪ್ರಯತ್ನಿಸಲು ನನಗಂತೂ ದೇಹದಲ್ಲಿ ಕಸುವೇ ಉಳಿದಿರಲಿಲ್ಲ.

ಈ ಯುವವೈದ್ಯನೊಂದಿಗಿನ ನನ್ನ ಮುಂದಿನ ಭೇಟಿಯಲ್ಲಿ ಬಹಳಷ್ಟು ವಿಲಕ್ಷಣ ಸಂಗತಿಗಳು ಬೆಳಕಿಗೆ ಬಂದವು. ನೀಡಲಾಗಿದ್ದ ಔಷಧಿಗಳ ಪಟ್ಟಿಯಲ್ಲಿ ಮಲೇರಿಯಾದ ಮಾತ್ರೆಗಳೂ ಸೇರಿದ್ದವು. ಸೊಳ್ಳೆಯ ಚಿತ್ರವೊಂದು ಪೊಟ್ಟಣದ ಮೇಲಿದ್ದ ಪರಿಣಾಮವಾಗಿ ಇದು ನನ್ನ ಕಣ್ಣಿಗೆ ಬಿದ್ದಿತ್ತು. ಕೂಡಲೇ ಜಾಗೃತನಾದ ನಾನು ದೆಹಲಿಯ ಮಿತ್ರರೊಬ್ಬರಿಗೆ ಫೋನಾಯಿಸಿ ಮಾತ್ರೆಗಳ ಪಟ್ಟಿಯನ್ನು ಓದಿ ಅರ್ಧಕ್ಕೂ ಹೆಚ್ಚಿನವುಗಳನ್ನು ತಿಪ್ಪೆಗೆಸೆದೆ. ಮುಂದೆ ಸುಮಾರು ಹದಿನೈದು ದಿನಗಳ ನಂತರ ಸ್ವತಃ ನನಗೆ ಕರೆ ಮಾಡಿದ ವೈದ್ಯ ಮಹಾಶಯ ”ಏನು ನೀವು ಇತ್ತ ಕಡೆ ಬರಲೇ ಇಲ್ಲ” ಎಂದು ಮಾತನ್ನಾರಂಭಿಸಿ ನನ್ನಲ್ಲಿ ಕೆಲ ಡಾಲರುಗಳ ಸಾಲವನ್ನು ಕೇಳುತ್ತಿದ್ದ. ಆದರೆ ನಾನು ಅಂಗೋಲಾದ ಸ್ಥಳೀಯ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿಲ್ಲವಾದ್ದರಿಂದ ಈ ಡೀಲ್ ಮುರಿದುಬಿತ್ತು. ಮುಂದೆ ವೈದ್ಯಕೀಯ ದಾಖಲೆಗಳಿಗಾಗಿ ನಿಮ್ಮ ರಿಜಿಸ್ಟ್ರೇಷನ್ ಸಂಖ್ಯೆ ಕೊಡಿ ಎಂದು ನಾನು ಕೇಳಿದರೆ ಅಲ್ಲಿ ಬನ್ನಿ, ಇಲ್ಲಿ ಬನ್ನಿ ಎಂದು ಆಟವಾಡಿಸುತ್ತಾ ಈತ ಕೊನೆಗೂ ಭೂಗತಪಾತಕಿಯಂತೆ ತಲೆಮರೆಸಿಕೊಂಡಿದ್ದೇ ಆಯಿತು. ಕೊನೆಗೂ ನನ್ನ ದಾಖಲೆಗಳು ಈತನ ರಿಜಿಸ್ಟ್ರೇಷನ್ ಸಂಖ್ಯೆಯ ಮಾಹಿತಿಯಿಲ್ಲದೆ ಅಪೂರ್ಣವಾಗಿಯೇ ಉಳಿದುಹೋದವು.

ಹೀಗೆ ಚಿಕ್ಕದೊಂದು ಸಮಸ್ಯೆಗೆ ಬಿದ್ದು, ಅಂಗೋಲನ್ ವೈದ್ಯರ ಕೈಗೆ ಸಿಕ್ಕಿಹಾಕಿಕೊಂಡು, ಬರೋಬ್ಬರಿ ಐದು ತಿಂಗಳು ಕಾಲೆಳೆಯುತ್ತಾ ನಡೆಯುತ್ತಿದ್ದ ನಾನು ಭಾರತಕ್ಕೆ ಬಂದು ಮಾಡಿದ ಮೊಟ್ಟಮೊದಲ ಕೆಲಸವೆಂದರೆ ಭಾರತೀಯ ವೈದ್ಯರ ಬಳಿ ಇದನ್ನು ತೋರಿಸಿದ್ದು. ”ಇದೆಲ್ಲಾ ಹೇಗಾಯಿತು ಎಂದು ನನಗೆ ಅಚ್ಚರಿಯಾಗುತ್ತದೆ. ಬಂದ ಕೂಡಲೇ ನಡೀರಿ, ಶಸ್ತ್ರಚಿಕಿತ್ಸೆ ಮಾಡೋಣ ಎಂದು ಯಾವ ವೈದ್ಯ ತಾನೇ ಹೇಳುತ್ತಾನೆ? ‘ಕಾದು ನೋಡುವುದು’ ಅನ್ನುವಂಥದ್ದೂ ಒಂದಿದೆ”, ಎಂದ ನನ್ನ ಮಂಗಳೂರಿನ ಪರಿಚಿತ ವೈದ್ಯರು ವಿಷಾದದಿಂದಲೇ ನಕ್ಕುಬಿಟ್ಟರು. ”ಇದು ಉಗುರುಸುತ್ತೇನೂ ಅಲ್ಲ. ಮೂಲೆಗಳಲ್ಲಿ ಹೆಚ್ಚಾಗಿ ಬೆಳೆದ ಉಗುರಷ್ಟೇ. ನೂರಕ್ಕೆ ತೊಂಭತ್ತು ಪ್ರತಿಶತ ಜನರಲ್ಲಿ ಇದು ಕಾಣಬರುವುದು ಸಾಮಾನ್ಯ. ತೀರಾ ಪರಿಹಾರವೇ ಇಲ್ಲ ಎಂಬಂತಹ ಸಂದರ್ಭಗಳಲ್ಲಿ ಮಾತ್ರ ಉಗುರಿನ ಒಂದು ಭಾಗ ಅಥವಾ ಇಡೀ ಉಗುರನ್ನು ಕೀಳಲಾಗುತ್ತದೆ”, ಎಂದರು ಅವರು. ಗುಪ್ತ ಉದ್ದೇಶಗಳನ್ನಿಟ್ಟುಕೊಂಡು ಮುಂದುವರೆದಿದ್ದ ವೀಜ್ ನ ವೈದ್ಯರು ನಿಸ್ಸಂದೇಹವಾಗಿ ಉದ್ದೇಶಪೂರ್ವಕವಾಗಿಯೇ ಕಡ್ಡಿಯನ್ನು ಗುಡ್ಡ ಮಾಡಿಬಿಟ್ಟಿದ್ದರು. ನಾನು ಸ್ವತಃ ಕೈಯಾರೆ ಕೋಲನ್ನು ಕೊಟ್ಟು ಏಟು ತಿಂದು ಬಂದಿದ್ದೆ.

ಈ ವಿಚಿತ್ರ ಪ್ರಕರಣದೊಂದಿಗೆ ಅಂಗೋಲಾದ ವೈದ್ಯಕೀಯ ಜಗತ್ತಿನ ಹೊಸದೊಂದು ಮುಖವು ಕೊಂಚ ಭಯಾನಕವಾಗಿಯೇ ನನ್ನೆದುರು ತೆರೆದುಕೊಂಡಿತ್ತು. ಭಾರತದಲ್ಲೂ ವೈದ್ಯರ ನಿರ್ಲಕ್ಷ್ಯ ಮತ್ತಿತರ ಘಟನೆಗಳ ಬಗ್ಗೆ ಅಲ್ಲೊಮ್ಮೆ ಇಲ್ಲೊಮ್ಮೆ ನಾವು ಕೇಳುತ್ತಲೇ ಇರುತ್ತೇವೆ. ಅದೇನೇ ಇರಲಿ. ಅಮಾಯಕರನ್ನು ಆರ್ಥಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಇಷ್ಟಿಷ್ಟೇ ಕೊಲ್ಲುವ ಇವುಗಳು ನನ್ನ ಮಟ್ಟಿಗೆ ಆಸ್ಪತ್ರೆಗಳೇ ಅಲ್ಲ. ಮೊದಲೇ ಹೇಳಿದಂತೆ ಅಕ್ಷರಶಃ ‘ಟಾರ್ಚರ್ ಚೇಂಬರ್’ ಗಳು!

*********

2 Responses

  1. Chi na hally kirana says:

    Nimma baravanige nijakku adbhuta ondsaalu bidade oduttene……
    abhinandanegalu.

  2. Prasad says:

    Thank you sir 🙂

Leave a Reply

%d bloggers like this: