fbpx

ಎಲ್ಲ ಖುಷಿಯ ಕ್ಷಣಗಳನ್ನೂ ಮಡಿಲಿಗೆ ತಂದು ಸುರಿದವನೇ..

ಕೃಷ್ಣನೆಂಬ ವ್ಯಕ್ತಿತ್ವವೇ ಹಾಗೆ! ‍ಬಿಟ್ಟನೆಂದರೂ ಬಿಡದಾ ಮಾಯೆ.. ಊಹಾಕಲ್ಪಿತ ಪಾತ್ರವೋ, ನಿಜದ ರೂಪವೋ, ದೈವವೋ , ಮನುಷ್ಯನೋ ಅಥವಾ ಇವೆಲ್ಲವನ್ನೂ ಮೀರಿ ಮತ್ತೇನೋ..

ಏನಾಗಿಯಲ್ಲದಿದ್ದರೂ ಪ್ರೀತಿಯಾಗಿ ಅವ ಆವರಿಸಿಕೊಳ್ಳುತ್ತಾನೆ. ಅವನ ಜೊತೆ ಜೊತೆಗೇ ಮತ್ತೊಂದು ಭಾವವೂ ನಮ್ಮನ್ನಾವರಿಸಿಕೊಳ್ಳುತ್ತದೆ ಮತ್ತು ಯಾವುದೋ ಚಣದಲ್ಲಿ ಆ ಭಾವ ನಮ್ಮದೇ ಪ್ರತಿರೂಪವಾಗುತ್ತದೆ. ‘ಮತ್ತದೇ ಸಂಜೆ, ಅದೆ ಏಕಾಂತ..’ ಎನಿಸಿದ ಸಂಜೆಗಳೆಲ್ಲಾ ಕೃಷ್ಣ ಅವನ ಸಖಿಯ ಜೊತೆಗೆ ನನ್ನೆದೆಗೆ ನಡೆದು ಬಂದಿದ್ದಾನೆ. ಅವರಿಬ್ಬರ ಎಲ್ಲ ಭಾವತಲ್ಲಣಗಳನ್ನೂ ನನಗೂ ದಾಟಿಸುವ ಹಾಯಿದೋಣಿಯಾಗಿದ್ದಾನೆ. ಕಡೆಗೊಂದು ದಿನ ಅವರಿಬ್ಬರೊಳಗೆ ನಾನೂ ಒಬ್ಬಳಾಗಿಬಿಟ್ಟಿದ್ದೇನೆ.  ಎದೆಯೊಳಗೆ ಮೂಡಿದ ಬಿಡಿ ಭಾವಗಳೆಲ್ಲವನ್ನೂ ಇಲ್ಲಿ ಹರಡಿಟ್ಟಿದ್ದೇನೆ. ನೀವಿನ್ನು ನಿಮ್ಮದಾಗಿಸಿಕೊಳ್ಳಬೇಕಷ್ಟೇ..

ಗೋಕುಲ ನಿರ್ಗಮನ..
ಕಥೆ ಹೇಳಲಿಕ್ಕಿದೆ ನಂಗಿಂದು.. ಕಥೆಯೆಂದರೆ ಬರೀ ಕಥೆಯಲ್ಲ! ಹಾಗಾದರೆ ವ್ಯಥೆಯಾ? ಛೇ.. ಹಾಗೂ ಅಲ್ಲ. ಮತ್ತೇನು? ಹುಡುಕಲು ಹೊರಟಿದ್ದೇನೆ ನಾನೂ.. ಕಥೆಯೊಳಗಿನ ವ್ಯಥೆಯನ್ನು.. ಅವ್ಯಕ್ತ ಭಾವಗಳು ಹೆಣೆಯುವ ಕಥಾ ಹಂದರವನ್ನು..

ಆ ಗೋಪಿಕೆ ನನ್ನೆದುರು ಬಿಚ್ಚಿಟ್ಟ ರಾಗ ಮಾಲಿಕೆಯನ್ನು.. ನಡು ಮಧ್ಯಾಹ್ನದ ಕನಸಲ್ಲಿ ಆ ಹುಡುಗಿ ಬಂದಿದ್ದಳು! ಆ ಹುಡುಗಿಯ ಹೆಸರೇನು, ಅವಳ್ಯಾರು ? ಕಡೆಗೂ ಉತ್ತರಿಸಲೇ ಇಲ್ಲ ಅವಳು.. ಬಂದವಳೇ ಕಥೆ ಹೇಳಲು ಆರಂಭಿಸಿದಳು! ಗೊಲ್ಲನೊಬ್ಬನ ಕಥೆ.. ಗೋಪಾಲಕನ ಕಥೆ.. ಕೊಳಲನೂದುವವನ ಕಥೆ.. ನವಿಲುಗರಿ ಹಿಡಿದವನ ಕಥೆ.. ಕೃಷ್ಣನ ಕಥೆ..

ಅವಳು ಹೇಳುತ್ತಾ ಹೋದಂತೆಲ್ಲಾ ನಾ ಪರವಶಳಾಗುತ್ತಾ ಸಾಗಿದೆ..
ಅಲ್ಲೊಂದು ನದೀತೀರ.. ಯಮುನೆಯಿರಬೇಕು ಬಹುಶಃ.. ಯಮುನೆಯ ತಟದಲ್ಲಿ ಹೂ ಕಂಪು ಚೆಲ್ಲಿದ ದೊಡ್ಡ ವೃಂದಾವನ.. ಜಿಂಕೆ-ಸಾರಂಗಗಳು ಕುಣಿಕುಣಿದು ಸಾಗುವ ಹಚ್ಚ ಹಸಿರಿನ ಬಯಲು.. ಗೋವ ಕಾಯಲು ಬಂದ ಆ ಗೊಲ್ಲ.. ನೀರಲ್ಲಾಡಲು ಬಂದ ಈ ಗೋಪಿಕೆ.. ಹೇಳಿಕೇಳಿ ಕೃಷ್ಣ ಅವ.. ಚೆಲುವಾಂತ ಚೆನ್ನಿಗ! ಮೋಹವೇ ಮೈತಳೆದಂತೆ ರೂಪು..

ಇವಳೂ ಅಂದಗಾತಿಯೇ! ಹಾಲ್ಗೆನ್ನೆ, ನೀಲ ವೇಣಿ, ಕಡುಗಪ್ಪು ಗೋಲಿ ಕಣ್ಣು.. ಪ್ರೀತಿಯಾಯ್ತೇನೇ ಅವನೆದೆಗೆ ಎಂದು ಕೇಳಿದೆ ನಾನು.. ನಸುನಾಚಿ, ತುಸು ಬಳುಕಿ , ಕೆನ್ನೆ ಕೆಂಪಾಗಿಸಿ ಹೌದೆಂದುಬಿಟ್ಟಳವಳು;) ಕಾಲ-ದೇಶಗಳ ಅರಿವಿಲ್ಲದೇ ಪ್ರೀತಿಸಿದರಂತೆ ಅವರಿಬ್ಬರೂ..  ಸೂರ್ಯನೂ ನಕ್ಕು ಮೋಡದ ಹಿಂದೆ ಸರಿದು ಮುಖ ಮುಚ್ಚಿಕೊಳ್ಳುವಷ್ಟು ತುಂಟಾಟ ಆ ಗೆಳೆಯನದ್ದು! ಗಾಳಿಯೂ ಲಯಬಧ್ಧವಾಗಿ ಬೀಸುವಷ್ಟು ಮಧುರ ಕಂಠ ಇವಳದ್ದು.. ಸಂಪ್ರೀತಿ ಸುಮಧುರವಾಗಿ ಸಾಗುತ್ತಿರಲು ಮಧ್ಯದಲ್ಲೇನೋ ಬಿರುಗಾಳಿ! ಅವ ಆ ಊರನ್ನೇ ಬಿಟ್ಟು ನಡೆದುಬಿಟ್ಟ..

ದೂರದೂರಿನ ಕರೆಗೆ ಓಗೊಟ್ಟು ಕೊಳಲ ಬಿಸುಟು ಹೊರಟುಬಿಟ್ಟ.. ಇವಳಿಲ್ಲಿ ಒಬ್ಬಂಟಿ! ಅನುರಾಗದ ಕೊಳಲ ದನಿಯಿಲ್ಲದೆ, ಮಧುರ ಸ್ಪರ್ಶದ ಅನುಭೂತಿಯಿಲ್ಲದೆ ಏಕಾಂಗಿ.. ಯಮುನೆಯೂ ಬಿಕ್ಕಿದಳಂತೆ ಇವಳ ವಿರಹ ಕಂಡು.. ನೀನೂ ಅವನ ಜೊತೆ ಹೊರಟು ಬಿಡಬಹುದಿತ್ತಲ್ಲ? ಮತ್ತೆ ಕೇಳಿದೆ ನಾನು.. ಉತ್ತರಿಸುವ ಗೋಜಿಗೇ ಹೋಗಲಿಲ್ಲ ಆ ಹುಡುಗಿ.. ಅದೇನನ್ನೋ ನೆನೆದು ಇನ್ನೂ ಬಿಕ್ಕುತ್ತಿದ್ದಳು.. ಅರ್ರೆ.., ರಾಧೆಯಲ್ಲವಾ ಇವಳು? ಕೇಳುವಷ್ಟರಲ್ಲಿ ಕಥೆ ಮುಗಿಯಿತೆಂಬ ಭಾವ ಹೊತ್ತು ಆ ದೂರದ ಬಂಡೆಗಲ್ಲ ಮೇಲೆ ಕಾಯುತ್ತಿದ್ದಾಳವಳು.. ಕೊಳಲ ಜೊತೆ ನವಿಲುಗರಿಯ ಹಿಡಿದು! ಗೋಪಾಲಕ ಹೋದ ಊರಿನ ದಾರಿ ನೋಡುತ್ತಾ.. ಸಂಜೆಗತ್ತಲಲ್ಲಿ ಎಚ್ಚರಾಗಿತ್ತು ನಂಗೆ! ಎದುರಿಗೆ ಕೃಷ್ಣ ನಗುತ್ತಿದ್ದ..

ಬಿಟ್ಟೂ ಬಿಡದೆ ಕಾಡುತ್ತಾಳೆ ಆ ಹುಡುಗಿ.. ನಡುಮಧ್ಯಾಹ್ನದ ಕನಸಲ್ಲಿ ಕಂಡವಳು! ಜನಜಂಗುಳಿಯ ರಸ್ತೆಯಲ್ಲೊಮ್ಮೆ ಕೈ ತಾಕಿ ಹೋದವಳು.. ಪಕ್ಕದಲ್ಲೇ ಇದ್ದಂತಿದ್ದು ಜಾಜಿಯಂಥ ನಗೆ ಬೀರಿ ಮಾಯವಾದವಳು.. ಒಮ್ಮೊಮ್ಮೆ ವಿರಹಿಯಂತೆ, ಮತ್ತೊಮ್ಮೆ ಮೌನಿಯಂತೆ, ಅಪರೂಪಕ್ಕೊಮ್ಮೆ ನೆನಪಾಗೋ ರಾಗದಂತೆ ಕಾಡುವ ಹುಡುಗಿ ಅವಳು.. ಅಂದ್ಯಾಕೋ ರಾಧೆಯೆನಿಸಿದ್ದ ಅವಳು ಇವತ್ತಿಗಾಗಲೇ ಮೀರಳಾಗಿದ್ದಾಳೆ! ಘಳಿಗೆ ಕಳೆಯುವಷ್ಟರಲ್ಲಿ ಭಾಮೆಯಾದರೂ ಆಶ್ಚರ್ಯವೇನಿಲ್ಲ… ನಾ ನೋಡುವ ಪ್ರತಿ ಹುಡುಗಿಯಲ್ಲೂ ಇವಳಿದ್ದಾಳಾ ಎಂದು ಹುಡುಕಿದ್ದೇನೆ!

ಆ ಹೆಣ್ಮನವನ್ನೊಮ್ಮೆ ಹೊಕ್ಕು ಬಂದು ಇವಳ ಛಾಯೆಗಳನ್ನು ಅವಲೋಕಿಸಿದ್ದೇನೆ.. ಊಹೂಂ.. ಎಲ್ಲೂ ಇಡಿ ಇಡಿಯಾಗಿ ದಕ್ಕಿಲ್ಲ! ಉತ್ಕಟತೆಯಿಂದ ಅವಳನ್ನು ಮೋಹಿಸಿದ್ದ ಕೃಷ್ಣನಾದರೂ ಆಗಾಗ ಸಿಗುವುದುಂಟು ಈ ಹುಡುಗಿಯ ಸುಳಿವೇ ಇಲ್ಲ.. ತೊರೆದು ಹೋಗದಿರು ಜೋಗೀ ಎಂದು ಮಾಧವನ ಹೆಗಲು ತಬ್ಬಿ ಬಿಕ್ಕಿದ ಮೇಲೆ ಅದೆಲ್ಲಿ ಮರೆಯಾದಳೋ ಏನೋ! ತೊರೆಯಬಹುದೆ ನನ್ನ ಹೀಗೆ ಕಂಪು ಹೂವ ತೊರೆದ ಹಾಗೆ ಎಂದೆಲ್ಲಾದರೂ ಹಾಡುತ್ತಾ ಕೂತಿರಬಹುದಾ ಎಂಬ ಅನುಮಾನ ಮೂಡಿ ಯಮುನೆಯ ದಡದಲ್ಲೆಲ್ಲಾ ಹುಡುಕಿಬಂದಿದ್ದೇನೆ..

ಅವಳ ಘಮ, ಅಸ್ತಿತ್ವದ ಹೆಜ್ಜೆಗುರುತು , ಘಲ್ ಎಂದಿದ್ದ ಗೆಜ್ಜೆಗಳ ದನಿಯ ಹೊರತು ಮತ್ತೇನೂ ಸಿಕ್ಕಿಲ್ಲ.. ಕೈಯಲ್ಲೊಂದು ಕೊಳಲ ಜೊತೆ ನವಿಲಗರಿ ಹಿಡಿದಂತೆ ಕುಳಿತ ರೂಪವ ನನ್ನೊಳಗೆ ಮೂಡಿಸಿ ಮರೆಯಾದ ಆ ಕುಸುಮ ಬಾಲೆ ಎಲ್ಲಿರುವಳೋ ಏನೋ! ಮತ್ತೆ ಪ್ರತಿ ಮಧ್ಯಾಹ್ನ ಬಲವಂತದಿಂದೊಮ್ಮೆ ಕಣ್ಮುಚ್ಚಿ ಮಲಗಲಾರಂಭಿಸಿದ್ದೇನೆ. ಕನಸಲ್ಲೊಮ್ಮೆ ಆ ಗೋಪಿಕೆ ಬಂದು ಕಥೆ ಮುಂದುವರಿಸುತ್ತಾಳೆ ಎಂಬ ಹುಚ್ಚು ಆಸೆಯೊಂದಿಗೆ..

ಮತ್ತೆ ಸಿಕ್ಕಿದ್ದಳವಳು.. ಅದೇ ಹೆಸರು ಹೇಳದೆ ಬರಿದೆ ಭಾವಗಳ ರವಾನಿಸೋ ಹುಡುಗಿ! ನಾ ಹುಡುಕುವುದ ಬಿಟ್ಟ ಮೇಲೆಯೇ ಕೈಗೆ ಸಿಗುವಂತೆ ಪಣ ತೊಟ್ಟಿದ್ದಳೇನೋ ಬಹುಶಃ… ಕೈಲಿದ್ದ ನವಿಲುಗರಿ, ಕೊಳಲುಗಳ ಕಿಟಕಿಯಂಚಲ್ಲಿ ಇಟ್ಟು ಸುಮ್ಮನೇ ಬಂದು ಪಕ್ಕ ಕುಳಿತಳು! ಕಿಟಕಿಯಾಚೆಗೆ ಪುನರ್ವಸು ನಕ್ಷತ್ರದ ಧೋ ಸುರಿಯೋ ಮಳೆ..

‘ನೀ ರಾಧೆಯಾ?’
‘..:)’
‘ಹಾಗಾದರೆ ಭಾಮೆಯಾ?’
‘…:)’
‘ಸರಿ.. ಮೀರಾಳಾದರೂ ಹೌದಾ?’
‘…:)’
‘ ಮರಳಿ ಬಂದನಾ ಕೃಷ್ಣ?’
‘….:)’
‘ಪಾಂಚಜನ್ಯವ ತೊರೆದು ಕೊಳಲ ನುಡಿಸಿದನಾ ನಿಂಗಾಗಿ?’
‘…:)’

ನನ್ನೆಲ್ಲಾ ಪ್ರಶ್ನೆಗಳಿಗೂ ಮೌನಿ ಅವಳು.. ಅವಳ ನಗೆಯ ಹಿಂದೆ ಅಡಗಿರೋ ಅದೆಷ್ಟೋ ಭಾವಗಳ ಗುರುತಿಸಲಾರದೇ ಹೋಗುವ ಬಡಪಾಯಿ ನಾನು!
ಅವನೆದೆಗೆ ಒಲವಾದದ್ದು, ಅವ ಕೊಳಲ ಬಿಸುಟು ನಡೆದದ್ದು, ನೀ ನವಿಲಿಗರಿಯ ಹಿಡಿದು ಕಾದು ಕೂತದ್ದು.. ‘ಈಗಲಾದರೂ ಬಂದನೇನೇ ಕೃಷ್ಣ?’.. ಅವಳು ಉತ್ತರಿಸದಿದ್ದರೂ ಸಾವಿರ ಪ್ರಶ್ನೆಗಳು ನನ್ನೊಳಗೆ..

ಅವಳ್ಯಾವತ್ತೂ ಹಾಗೆಯೇ ನನ್ನೆಲ್ಲಾ ಗೊಂದಲಗಳೂ ತಾಕಿಯೇ ಇಲ್ಲವೇನೋ ಎಂಬಂತೆ ಎದ್ದು ನಡೆದುಬಿಡುತ್ತಾಳೆ..
ಅವನನ್ನೋ ಪರಿಪೂರ್ಣ ವ್ಯಕ್ತಿತ್ವವ ಹುಡುಕಿ ಸೋತು ಹೋದೆಯೇನೇ ಎಂದರೆ ಸುಮ್ಮನೊಮ್ಮೆ ಆಕಾಶ ದಿಟ್ಟಿಸುತ್ತಾಳೆ!
“ನಾನು ಮುಗಿಲು, ನೀನು ನೆಲ” ಎಂಬುದ್ಯಾವುದಾದರು ರಾಗ ಹಿನ್ನೆಲೆಯಲ್ಲಿ ನುಡಿಯುತ್ತಿತ್ತಾ? ಊಹೂಂ.. ನೆನಪಿಲ್ಲ ನಂಗೆ..
ಮಾತೇ ಆಡದಿದ್ದರೂ ಅವಳೊಳಗಿನ ಭಾವ ತಲ್ಲಣಗಳು ನನ್ನ ತಾಕಿ ಹೋದಂತೆ ಭಾಸವಾಯಿತೊಮ್ಮೆ..

‘ಅವ ಬಾರದಿದ್ದರೇನಾಯ್ತು, ಬರುತ್ತಾನೆಂಬ ಕನವರಿಕೆಯ ಉಳಿಸಿಹೋಗಿದ್ದಾನಲ್ಲ!’ ತಡವರಿಸಿದಂತಾಯ್ತು ಆ ಗೋಪಿಕೆ.. ಅಲ್ಲೆಲ್ಲೋ ಮಳೆ ಮೋಡದ ಹಿಂದಿನಿಂದ ಮಿಂಚೊಂದು ಹೊಳೆದು ಅವ ನಕ್ಕಂತಾಯ್ತು..

‘ಎಲ್ಲಿರುವೆಯೋ ಘನಶ್ಯಾಮ ತೊರೆದು ರಾಧೆಯಾ.. ನಿನ್ನ ವಿನಾ ಬದುಕೆನು ನಾ! ತೋರಿಸಯ್ಯಾ ಕರುಣೆಯಾ..’ ರಾಗವ ಧೇನಿಸತೊಡಗಿದಳು ಅವಳು.. ಸ್ವರಗಳ ಝೇಂಕಾರದಲ್ಲಿ ಕೃಷ್ಣನ ಕಂಪು ಮೂಡುತ್ತಿತ್ತು.. ಬಾನಿಗೆಲ್ಲಾ ಕನಕಾಂಬರದ ಬಣ್ಣ ಅಡರಿ ರಂಗೇರುವಾಗ ಆ ತೀರಕ್ಕೆ ನಡೆದುಹೋಗುತ್ತಿದ್ದಾಳೆ ಅವಳು! ನವಿಲು ಗರಿ, ಕೊಳಲ ಹಿಡಿದು.. ‘ ಎಷ್ಟುಂಟು ಪಕಳೆ ಹೇಳು ಸೇವಂತಿಗೆ ; ಅಷ್ಟೇ ಬಗೆಯ ಸೆಳೆತ ನಿನಗೆ ಅವನೊಂದಿಗೆ ‘ ನನ್ನಷ್ಟಕ್ಕೆ ನಾನೇ ರಾಗ ಗುನುಗುನಿಸುವುದರಲ್ಲಿ ಕನಸು ಮುಗಿದು ಮತ್ತೆ ಸಂಜೆಯಾಗಿತ್ತು.. ಕಣ್ಣೆದುರು ಕೃಷ್ಣನಂಥಾ ಹುಡುಗ ನಗುತ್ತಿದ್ದ 🙂

ಅದೆಷ್ಟು ದಿನವಾಯಿತು ಆ ಹುಡುಗಿ ಕನಸಿಗೆ ಬಂದು ಎಂದುಕೊಳ್ಳುತ್ತಿದ್ದೆ. ಮದ್ಯಾಹ್ನ ನಿದ್ದೆಯಿಂದ ಏಳುವಷ್ಟರಲ್ಲಿ ಅವಳಿತ್ತ ಪತ್ರ ನವಿಲುಗರಿಯೊಂದಿಗೆ ಕಣ್ಣೆದುರಿಗಿತ್ತು..

“ಪಾಳುಬಿದ್ದ ದ್ವಾರಕೆಯ ಕೃಷ್ಣ ಅವನು.. ನಾನೇ ರಾಧೆ! ನವಿಲುಗರಿಯಂಥಾ ಬದುಕು. ಆ ಬದುಕಿಗೊಂದಷ್ಟು ಬಣ್ಣಗಳು. ಜೊತೆಕಂಡ ಕನಸುಗಳೆಲ್ಲಾ ನೀಲಿ ನೀಲಿ. ನನ್ನವನ ಮುನಿಸಿಗೆ ಸಂಜೆಗೆಂಪಿನದೇ ರಂಗು. ಹಾಲುಚೆಲ್ಲಿದ ಬೆಳದಿಂಗಳಂತೆ ನಮ್ಮ ಪ್ರೀತಿ. ಅವನು ಕೊಳಲ ನಾದವಾದಾಗಲೆಲ್ಲಾ ಗರಿ ಬಿಚ್ಚಿ ಕುಣಿವ ನವಿಲು ನಾನು. ನನ್ನ ಮೌನ ರಾಗಕ್ಕೆ ಮಾರುಹೋಗುವ ಮಾಧವ.. ಕನವರಿಕೆಗಳಲ್ಲೂ ಕಾಡುವ ರಾಘವ. ನನ್ನೆಲ್ಲಾ ಆತ್ಮೀಯವೆನಿಸುವ ಭಾವಗಳೂ ಅವನವೇ. ಕಟ್ಟಿಕೊಂಡ ಬದುಕಿನಲ್ಲಿ ಪ್ರೀತಿಯ ಹಣತೆ ಹಚ್ಚಿದವ ನನ್ನ ಕೃಷ್ಣ . ಭಾಮೆಯರನ್ನೆಲ್ಲ ಬದಿಗೊತ್ತಿ ಬರಿಯ ನನ್ನ ಕಾಲ್ಗೆಜ್ಜೆಯ ದನಿಗಾಗಿ ಕಾಯುತ್ತಾ ಅದೆಷ್ಟೋ ಸಂವತ್ಸರಗಳನ್ನು ಕಳೆದ ಆತ್ಮಸಖ.

ತಿಂಗಳ ರಾತ್ರಿ ತೊರೆಯ ಸಮೀಪ
ಉರಿಯಲು ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ
ಪಡುತಿರುವನು ಪರಿತಾಪ
ಯಮುನೆಯ ಮರಳ ತಟದ ತುಂಬೆಲ್ಲಾ ನಮ್ಮಿಬ್ಬರ ಅನುರಾಗದ ಹೆಜ್ಜೆ ಗುರುತುಗಳು.. ಈ ಅನುಬಂಧಕ್ಕೊಂದು ಹೆಸರಿಡುವ ಅಗತ್ಯವಿಲ್ಲವೇನೋ ಎಂಬಷ್ಟು ಆಪ್ತತೆ. ಜಗವ ಕಾಯ್ವ ಗೊಲ್ಲನೆದುರು ವಿನೀತ ಭಾವದಿಂ ಸುಳಿವ ಗೋಪಿಕೆಯಂತಾಗುತ್ತದೆ ಮನಸ್ಸು. ‘ವಿರಹಿ ರಾಧೆ ಮಾಧವ..’ ಎಂಬ ಬೇಸರ ಮೂಡುವ ಮೊದಲೇ ಹೆಗಲು ತಬ್ಬಿ ನಿಲ್ಲುವ ಶ್ಯಾಮ. ಬದುಕಿನ ಎಲ್ಲ ಖುಷಿಯ ಕ್ಷಣಗಳನ್ನೂ ಮಡಿಲಿಗೆ ತಂದು ಸುರಿದ ಮಧುಸೂದನ.

ನವಿರು ಭಾವಗಳನ್ನೆಲ್ಲಾ ಹೆಣೆದಂತೆ ನನ್ನವನ ಪ್ರೀತಿ. ನೀಲನಭದ ರಾಣಿ ನಾನಾದರೆ ಮುದ್ದುಗರೆದು ಆಲಂಗಿಸುವ ಬೆಳ್ಳಿಯಂಚಿನ ಮೋಡ ಅವನು. ಮಾತಿನಲ್ಲೂ, ಮೌನದಲ್ಲೂ, ಮೌನದಾಚೆಯ ತೀರದಲ್ಲೂ ಅವನದೇ ಪ್ರತಿಬಿಂಬ. ಎಲ್ಲ ಉಪಮೆಗಳನ್ನೂ ಮೀರಿ ನಿಂತ ಮಧುರ ಬಾಂಧವ್ಯ ಅವನದು. ಭಾವಶರಧಿಯ ಲಹರಿಗಳಲ್ಲಿ ಮುಳುಗೇಳುತ್ತಿರುವ ಅನುಭವ. ನನ್ನತನವೆಲ್ಲ ಕರಗಿ ನಾನೇ ಅವನಾಗಿ, ಅವನೇ ನಾನಾಗಿ ಹೋಗುವ ಅನುಭಾವ.
ನಾನು ನನ್ನದು ನನ್ನವರೆನ್ನುವ
ಎಲ್ಲ ತೊಡಕುಗಳ ಮೀರಿ
ಧಾವಿಸಿ ಸೇರಲು ವೃಂದಾವನವ
ರಾಧೆ ತೋರುವಳು ದಾರಿ.. “

1 Response

  1. Vidya Hegde says:

    lahariyara yanadalli radhe – mansannavarise

Leave a Reply

%d bloggers like this: