fbpx

ಅವ್ವ ತನ್ನೆದೆಯಲ್ಲೊಂದು ಹಾಡು  ಸಾಕಿಕೊಂಡಿದ್ದಳು..

ಅವಧಿಯ ಬರಹಗಾರರಾದ ಲಕ್ಷ್ಮಣ್ ಅವರು ಈ ಸಾಲಿನ ಕಣವಿ ಕಾವ್ಯ ಪ್ರಶಸ್ತಿ ಪುರಸ್ಕೃತರು.

‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ ಕವನ ಸಂಕಲನ ಇಂದು ಧಾರವಾಡದಲ್ಲಿ ಬಿಡುಗಡೆಯಾಗುತ್ತಿದೆ.

ಕೃತಿಗೆ ಅವರು ಬರೆದ ಮಾತು ಇಲ್ಲಿದೆ-

ಲಕ್ಷ್ಮಣ್ ವಿ ಎ 

ಕಾವ್ಯದಿಂದ ಕ್ರಾಂತಿಯಾಗುತ್ತದೆ ಎನ್ನುವ ಭ್ರಮೆ ನನಗಿಲ್ಲ. ಅಕ್ಷರ ಬಲ್ಲವನಾದುದರಿಂದ ಕಾವ್ಯ ನನ್ನ ಸಹಜ ಅಭಿವ್ಯಕ್ತಿ.

ಈ ಕುರಿತಾಗಿ ನನಗೆ ಅಂತಹ ಹೆಮ್ಮೆಗಳೇನೂ ಇಲ್ಲ, ನನ್ನ ಕಾವ್ಯ ಲೋಕದ ಹೀರೋಗಳು ಅಕ್ಷರ ಲೋಕದಿಂದ ಬೇರೆಯದೇ  ಕ್ಷಿತಿದಾಚೆಯಲ್ಲಿ ತಮ್ಮದೆ ಎದೆಯ ಸಂಕಟಗಳನ್ನು ತಮ್ಮ ದೈನಿಕಗಳಲ್ಲಿ ಹಾಡಾಗಿಸಿಕೊಂಡು ಕದ್ದು ಬದುಕುವ ಕಲೆಯನ್ನ ಕರಗತವಾಗಿಸಿಕೊಂಡು ಇದು ತಾವು ಬದುಕುವ ರೀತಿ , ಇದೇ  ತಾವು ಬದುಕುವ  ರೀತಿಯೆಂದು  ತಮ್ಮ ಹಣೆಬರಹಕೆ ದೇವರೊಂದಿಗೆ ಜಗಳಕ್ಕಿಳಿಯುತ್ತ, ಅದೇ ಖುಷಿಯಾದಾಗ ಅದೇ ದೇವರ ಪಲ್ಲಕ್ಕಿ ಹೊರುತ್ತ ತಾವು ಸುಖದಿಂದ ಇರುವವರು.

ಆದರೆ ಇವರ ಈ ಹುಸಿ ಸುಖ ನನ್ನ ಅಂತಃಸಾಕ್ಷಿಯನ್ನು ಕೆಲವೊಮ್ಮೆ ಕೆಣಕಿ ಅಪಾರವಾದ ಪಾಪಪ್ರಜ್ಞೆಗೀಡುಮಾಡುತ್ತದೆ. ಅಂತಹವರ ಸಂಕಟಗಳನ್ನು ಅಕ್ಷರ ಬಲ್ಲ ನನ್ನಂತವರು ಸೋ ಕಾಲ್ಡ್ ‘ನಾಗರೀಕತೆ ‘ಯನ್ನು, ಆಧುನಿಕತೆಯನ್ನ, ಈ ಲೋಕದ ಸಂಪತ್ತೆಲ್ಲಾ ತಮ್ಮ ಪಿತ್ರಾರ್ಜಿತ ಆಸ್ತಿಯೆನ್ನುವ ಲೋಭದಲ್ಲಿ ಅನುಭವಿಸುತ್ತಿರುವ ಸಮಾಜಕ್ಕೆ ಕಿಂಚಿತ್ತಾದರೂ ಅರಿವು ಮೂಡಲಿ ಎಂಬ ಕಳಕಳಿಯೂ ಒಮ್ಮೊಮ್ಮೆ ಕವಿತೆಯಾಗಿಸಿದೆಯೇನೊ..

ಕಾವ್ಯ ಸಮಾಜದ ಕಾರ್ಡಿಯೋಗ್ರಾಮ್ ಎಂಬ ಜಯಂತ ಸರ್ ಅವರ ಮಾತುಗಳನ್ನು ಇಲ್ಲಿ ಅನುಮೋದಿಸುತ್ತೇನೆ. .ಕಾವ್ಯ ಕ್ರಾಂತಿ ತರಲಾರದು ನಿಜ, ಆದರೆ  ಸಮಾಜ ಹೃದಯ ಸಂಬಂಧಿ ಬೇನೆಯಿಂದ ನಲುಗುತ್ತಿರುವ ಈ ಸಿ ಜಿ ನನ್ನ ಕಣ್ಣೆದುರಿಗಿದೆ. ಈ ದಿನದ ಕರಾವಳಿ ಜನಜೀವನ ವೆಂಟಿಲೇಟರಿನಲ್ಲಿ ಶುದ್ಧ ಆಮ್ಲಜನಕದ ಕೊರತೆಯಿಂದ ನರಳುತ್ತಿದೆ. ಇಲಿಯಾಜನ ಹತ್ಯೆ, ದೀಪಕನ ಹತ್ಯೆ, ದಾನಮ್ಮಳ ಮೇಲಿನ ಅತ್ಯಾಚಾರ ಇವೆಲ್ಲ ಘಟನೆಗಳು ಸಮಾಜ ಬಹುಅಂಗಾಂಗಳ ವೈಫಲ್ಯತೆಯಿಂದ ನರಳುತ್ತಿರುವ ಸಂಕೇತಗಳು.

ಸಮಾಜದ ಸಾಕ್ಷಿಯಾಗಿ ಒಬ್ಬ ವೈದ್ಯನಾದ ನನ್ನಂತವನಿಗೆ ಇಂತಹ ಕಾಯಿಲೆಗಳು ಬಲು ಬೇಗ ಅರಿವಿಗೆ ಬಂದು ನನ್ನ ಅಂತಃಸಾಕ್ಷಿಯನ್ನು ಕಲಕುತ್ತವೆ. ಈ ಸಮಾಜದ ಅಸಮಾನತೆಯನ್ನು ನನ್ನದೆ ಮಿತಿಗಳಲ್ಲಿ ಪ್ರತಿರೋಧಿಸಬೇಕಾಗುತ್ತದೆ.

ಬಂದೂಕಿನ ನಳಿಕೆಗಳಲ್ಲಿ ಗುಬ್ಬಚ್ಚಿ ಗೂಡು ಕಟ್ಟಲಿ ಎನ್ನುವುದು ನನ್ನ ಕನಸು. ಗಡಿಗಳು ಗೋಡೆಗಳು ಅಳಿಸಿ ಹೋಗಲಿ ಎನ್ನುವವನು;

ಕಾವ್ಯ ಅಂದರೇನೆಂದು ಅಕ್ಯಾಡೆಮಿಕ್ ಪ್ರಶ್ನೆ ಎದುರಾದಾಗ, ಯಾವ ಅನುಮಾನಗಳೂ ಇಲ್ಲದೆ ನನ್ನದುರು ಬಂದು ನಿಲ್ಲುವವಳು ನನ್ನ ಅವ್ವ , ನನ್ನ ಲಂಕೇಶರ ಅವ್ವ. ಪ್ರಪಂಚದೆಲ್ಲ ಕವಿತೆಗಳನ್ನು ಇವಳೆದುರು ನಿವಾಳಿಸಿ ಎಸೆಯಬೇಕು. ಆರು ಮಕ್ಕಳಲ್ಲಿ ನಾನು ಕೊನೆಯವನಾಗಿ, ಉಳ್ಳವರ ಹೊಲದಲ್ಲಿ ಕೂಲಿಗಾಗಿ ಜೋಳದ ತೆನೆಮುರಿಯುತ್ತ, ಕಳೆ ಕೀಳುತ್ತ, ಗಂಡು ಮಕ್ಕಳಂತೆ ಭಾವಿಯ ತೆಗೆಯುವ ಭಾರವಾದ ಬುಟ್ಟಿ ಹೊರುತ್ತ, ಸಣ್ಣವನಾದ ನಾನು ಬಲು ತೀಟೆ ಮಾಡುವವನೆಂದು ತೊಗರಿಯ ಗಿಡಕ್ಕೆ ನನ್ನ ಕಾಲು ಕಟ್ಟಿ ಕೀಳುತ್ತಿರುವ ಶೇಂಗಾ ಬಳ್ಳಿಯನ್ನು ಎಸೆದು ಅಲ್ಲಿಯ ತನಕ ಆಡುತ್ತಿರಲಿ ಎಂದು ತೊಗರಿ ಗಿಡದ ನೆರಳಿಗೆ ನನ್ನ ಬಿಟ್ಟು ತಾನು ಬಿಸಿಲಿನಲ್ಲಿ ನೆತ್ತಿ ಸುಟ್ಟುಕೊಂಡು ಭಾವಿಯ ಮಣ್ಣು ಹೊತ್ತವಳು.

ಅಪ್ಪನೂ ಈ ಕಷ್ಟಗಳಿಂದ ಹೊರತಾದವನಲ್ಲ.ಆದರೆ ಅವನು  ಎಷ್ಟೇ ಆದರೂ ಗಂಡಸಲ್ವ? ಸಹಜವಾಗಿ ಚಿಲುಮೆ ಸೇದುವುದು, ಸಾರಾಯಿ ಕುಡಿಯುವುದು, ತನ್ನ ಸಂಕಟಗಳಿಗೆ ಒತ್ತಡಗಳಿಗೆ ತಕ್ಷಣದ outlet ಕಂಡುಕೊಂಡವನು. ಆದರೆ ಅವ್ವನ ಸಂಕಟಗಳಿಗೆ ಯಾವ ಮಾರ್ಗ ?. ಅವ್ವ ಯಾವುದೊ ಹಾಡು ಗುನುಗುತ್ತಿದ್ದಳು. ಅದು ಅಳುವಾ, ಹಾಡಾ, ಅಥವ ತನ್ನ ಹಣೆಬರಹವ ಹಳಹಳಿಕೆಯಾ? ಯಾವುದೂ ಖಚಿತವಾಗಿ ನನ್ನ ಪ್ರಜ್ಞೆಗೆ ನಿಲುಕುತ್ತಿಲ್ಲ.

ತನ್ನ ಯಾವುದೇ ಕೆಲಸವಿರಲಿ ಅಕ್ಕಿ ಆಯುವಾಗ, ಕಸ ಗುಡಿಸುವಾಗ, ಹೊಟ್ಟು ತೂರುವಾಗ, ಅವ್ವ ತನ್ನೆದೆಯಲ್ಲೊಂದು ಹಾಡು  ಸಾಕಿಕೊಂಡಿದ್ದಳು. ಅದು ಜನಪದವಾ, ಲಾವಣಿಯಾ, ಕೋಲಾಟವಾ? ಅದನ್ನೆಲ್ಲಾ ಗುರುತಿಸಲು ನಮ್ಮ ಬುದ್ದಿವಂತರಿಗೆ ಬಿಟ್ಟುಕೊಡೋಣ. ಆ ಅಂತಹ ಅವ್ವನ ಒಡಲ ಹಾಡಿನ ಒಂದು ಸಾಲಾದರೂ ನನ್ನ ಕವಿತೆಯೊಳಗೆ ಇಣುಕಿದೆಯಾ?

ಹಾಗಂತ ನೀವು ಗುರುತಿಸಿದ್ದೇಯಾದಲ್ಲಿ ನನ್ನ  ಕವಿತೆಗಳಿಗೆ ಮೋಕ್ಷ ಪ್ರಾಪ್ತಿಯಾದಂತೆ. ಇನ್ನು ನೀವುಂಟು ನಿಮ್ಮ ಎದದುರುಗೊಳ್ಳುವ ಕವಿತೆಯುಂಟು ಮಧ್ಯೆ ನಾನು ಮೂಗು ತೂರಿಸಲಾರೆ.

ಮೊದಲ ಕವಿತಾ ಸಂಕಲನವೆಂಬ ಯಾವ ವಿನಾಯಿತಿಯೂ ಬೇಡ ನನಗೆ. ತಪ್ಪಿದ್ದರೆ ನನ್ನ ಕಿವಿ ಹಿಂಡುವ ಅಧಿಕಾರ ನಿಮಗೆ ವರ್ಗಾಯಿಸಿ ನಾನು ನಿರ್ಗಮನಿಸುತ್ತೇನೆ .

ಧಾರವಾಡದ ವಿಧ್ಯಾವರ್ಧಕ ಸಂಘದಲ್ಲಿ ಇಂದು ಸಂಜೆ ಮೂರು ಗಂಟೆಗೆ ಪುಸ್ತಕ ಬಿಡುಗಡೆ ದಯವಿಟ್ಟು ಬನ್ನಿ

ನಿಮ್ಮ ನಿರೀಕ್ಷೆಯಲ್ಲಿ

Leave a Reply