fbpx

ಹಸಿದ ಹೊಟ್ಟೆಗೆ ರೂಲರ್ ಪಟ್ಟಿ ಇಳಿಸುವವರು..

ಮೊದಲನೆಯ ಹಂತ “ಹಸಿವು”, ಎರಡನೆಯ ಹಂತ “ಗ್ರೀಡ್” . ಎರಡಕ್ಕೂ ಉದಾಹರಣೆಗಳು ಕಳೆದ ವಾರ ದೇಶಮುಖಕ್ಕೆ ಅಪ್ಪಳಿಸಿದವು. ಅಟ್ಟಪ್ಪಾಡಿಯ ಮಧು, ಗುಜರಾತಿನ ನೀರವ್ ಮೋದಿ!

ಒಂದು ಮನುಷ್ಯ ಜೀವ ಇನ್ನೊಂದು ಮನುಷ್ಯಜೀವದ ಸ್ವತ್ತನ್ನು ಕಸಿದುಕೊಳ್ಳುವುದಕ್ಕೆ ಇರಬಹುದಾದ ಎರಡೇ ಎರಡು ಕಾರಣಗಳಿವು: ಹಸಿವು, ಗ್ರೀಡ್ – ಇದು ಅನ್ನಕ್ಕೂ ಸತ್ಯ; ವಜ್ರಕ್ಕೂ ಸತ್ಯ.

ಇಂತಹದೊಂದು ಸ್ಥಿತಿಗೆ ನಾವು ಯಾಕೆ ತಲುಪಿದ್ದೇವೆ?

“ಸಿವಿಲ್ ಸೊಸೈಟಿ” ಎಂದು ನಾವು ಕರೆದುಕೊಳ್ಳುವ ನಮ್ಮ ಸಮಾಜ ಇದೆಯಲ್ಲ – ಇದರೊಳಗೆ ಮಧುವಿಗೆ ಜಾಗವಿಲ್ಲವಾದರೆ ನಿರವ್ ಮೋದಿಗೆ ಜಾಗ ಬೇಕಾಗಿಲ್ಲ. ಈವತ್ತು ಸಿವಿಲ್ ಸೊಸೈಟಿ ಎಂಬುದು ತಿರ್ಸಂಕು ಸ್ವರ್ಗ!!

ಸರಕಾರ ಬಡತನವನ್ನು ನಿರ್ಧರಿಸುವ ವಿಧಾನವೇ ಒಂದು ಜೋಕ್. 1947ರಲ್ಲಿ ದೇಶದ ಸಿವಿಲ್ ಸೊಸೈಟಿಯ 70%ಜನ ಬಡವರಾಗಿದ್ದರು. 1994ರ ವೇಳೆಗೆ ಅವರ ಸಂಖ್ಯೆ 45%ಇದ್ದುದು ಈಗ 2012 ರ ಹೊತ್ತಿಗೆ 22%  ಆಗಿದೆ.

ತೆಂಡುಲ್ಕರ್ ಸಮಿತಿ 2011-12ರಲ್ಲಿ ತೀರ್ಮಾನಿಸಿದಂತೆ ಹಳ್ಳಿಗಳಲ್ಲಿ ತಿಂಗಳಿಗೆ  816ರೂ. ಮತ್ತು ನಗರಗಳಲ್ಲಿ ತಿಂಗಳಿಗೆ  1000ರೂ. ಕ್ಕಿಂತ ಕಡಿಮೆ ಆದಾಯ ಇರುವವರು ಬಡತನದ ರೇಖೆಗಿಂತ ಕೆಳಗಿರುವವರು.

ಸರ್ಕಾರಿ ಲೆಕ್ಕದಲ್ಲೇ ಹೀಗೆ ದಿನಕ್ಕೆ 22-30 ರೂಪಾಯಿಗಿಂತ ಕಡಿಮೆ ದುಡಿಯುವವರ ಸಂಖ್ಯೆ ದೇಶದಲ್ಲಿ 26.9ಕೋಟಿ. ಅವರು ಬಡವರು. ಈ ನಿರ್ಧಾರದ ಹಿಂದಿರುವ ಕ್ರೌರ್ಯ ಇದೆಯಲ್ಲ – ಅದು ಕಳೆದ ವಾರದ ಮಧುವಿನ ಸಾವಿಗಿಂತ ಹೆಚ್ಚು ಕ್ರೂರ.

100 ಕಿಮೀ ಸಾಗಿದರೆ ಜೀವನ ಪದ್ಧತಿಯೇ ಬದಲಿರುವ ಬಹುಜನ ಭಾರತದಲ್ಲಿ ಬಡವರು ಯಾರೆಂದು ನಿರ್ಧರಿಸುವವರು ಎಲ್ಲೋ ವಿದೇಶದಲ್ಲಿ ಕುಳಿತಿರುವ ಸಾಲ ಕೊಡುವ ಧಣಿಗಳು ಅಥವಾ ಅವರ ಏಜಂಟರು. ಅಮೆರಿಕದ ಅಂತಾರಾಷ್ಟ್ರೀಯ ಆಹಾರನೀತಿ ಸಂಶೋಧನಾ ಸಂಸ್ಥೆ (IFPRI)ಪ್ರತಿವರ್ಷ ಜಾಗತಿಕ ಹಸಿವಿನ ಇಂಡೆಕ್ಸ್ (global hunger index)ಪ್ರಕಟಿಸುತ್ತದೆ.

ಅದರ 2017ನೇ ಸಾಲಿನ ವರದಿಯನ್ವಯ, ಒಟ್ಟು 119ಅಭಿವ್ರದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತ 100ನೇ ಸ್ಥಾನದಲ್ಲಿದೆ. ಅದೂ ಉತ್ತರ ಕೊರಿಯಾ, ಬಾಂಗ್ಲಾದೇಶಗಳಿಗಿಂತಲೂ ಕೆಳಗೆ! ಇದು ಸಿವಿಲ್ ಸೊಸೈಟಿಯ ಕಥೆ. ಈ ಇಂಡೆಕ್ಸಿನಲ್ಲಿ ಮಧುವಿನ ಹಸಿವಿಗೆ ಸ್ಥಾನ ಇಲ್ಲ.

ಯಾಕೆಂದರೆ ಹಸಿವನ್ನು ಅಳೆಯಲು ಇವರ ಅಳತೆಗೋಲು ನಾಲ್ಕು.

೧. ಪೌಷ್ಟಿಕಾಂಶದ ಕೊರತೆ. (ಅಂದರೆ, ಮನುಷ್ಯನೊಬ್ಬನಿಗೆ ತನ್ನ ದಿನಕ್ಕೆ ನಿಗದಿಯಾದ ಆಹಾರಕ್ಕಿಂತ ಕಡಿಮೆ ಆಹಾರ ಸಿಗುವುದು)

೨. ಕಡಿಮೆ ತೂಕದ ಮಕ್ಕಳು (ಅಂದರೆ, ಐದು ವರ್ಷದೊಳಗಿನವರಲ್ಲಿ ಎತ್ತರಕ್ಕೆ ತಕ್ಕಂತೆ ತೂಕ ಇಲ್ಲದವರು)

೩. ಕಡಿಮೆ ಎತ್ತರದ ಮಕ್ಕಳು (ಅಂದರೆ, ಐದು ವರ್ಷದೊಳಗಿನವರಲ್ಲಿ ತೂಕಕ್ಕೆ ತಕ್ಕಂತೆ ಎತ್ತರ ಇಲ್ಲದವರು)

೪. ಶಿಶು ಮರಣದ ಪ್ರಮಾಣ (ಐದು ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣ – ಪೌಷ್ಟಿಕಾಂಶ ಕೊರತೆ ಮತ್ತು ಗಲೀಜು ಪರಿಸರಗಳ ಕಾರಣದಿಂದಾಗಿ).

ಇಂತಹದೊಂದು ಮಾನದಂಡದಲ್ಲಿ, ಅಟ್ಟಪ್ಪಾಡಿಯ ಮಧು ಒಳಗೊಳ್ಳುವುದೇ ಇಲ್ಲ.

ಹಾಗಾಗಿ ಮಧುವಿನಂತಹವರು ಅಸ್ಥಿತ್ವದಲ್ಲೇ ಇಲ್ಲದವರು. ಅವರ ಹಸಿವು ಹಸಿವಲ್ಲ; ಬದುಕು ಬದುಕಲ್ಲ. ಯಾವುದೇ ದಾಖಲೆಗಳಲ್ಲಿ ಅವರು ಇರುವುದಿಲ್ಲ. ಅವರ ಸಾವು ಸುದ್ದಿಯಾಗುವುದು ಕಾಡುನ್ಯಾಯದ ಕೊಲೆಗಡುಕರ ವಿಡಿಯೋಗಳು-ಸೆಲ್ಫೀಗಳ ಮೂಲಕ ಮಾತ್ರ. ಹಸಿದ ಹೊಟ್ಟೆಗೆ ಅನ್ನ ಹಾಕುವ ಯೋಜನೆಯೊಂದನ್ನು ಸರ್ಕಾರ ತಂದರೆ, ಅದನ್ನು ತಾವು ತಿಂದು ತೇಗುವ ಅಥವಾ ಹೀಗೆ ಅನ್ನ ಹಾಕಿದರೆ ಜನ ಕೆಲಸ ಮಾಡದೆ ಸೋಮಾರಿಗಳಾಗುತ್ತಾರೆಂದು ವಾದ ಹೂಡುವ ಹೊಟ್ಟೆ ತುಂಬಿದ ಜನರಿಗೂ ಮಧುವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಸೆಲ್ಫೀ ಹೊಡೆದುಕೊಂಡವರಿಗೂ ಏನು ವ್ಯತ್ಯಾಸ ಇದೆ ಹೇಳಿ?

ತಿಂಗಳಿಗೆ ಏಳೆಂಟು ಸಾವಿರ ಸಂಬಳ (ಇದು ಸ್ರಕಾರವೇ ನಿರ್ಧರಿಸಿರುವ ಕನಿಷ್ಟ ವೇತನ) ಸಿಕ್ಕಿದರೂ ಮೂರು ಹೊತ್ತು ಹೊಟ್ಟೆ ತುಂಬುವಷ್ಟು (ಪೌಷ್ಟಿಕಾಂಶ ಮರೆತುಬಿಡಿ!) ಉಣ್ಣುವುದು ಕಷ್ಟ ಇರುವಾಗ 816ರೂಪಾಯಿ ಆದಾಯದ ತನಕ ಮಾತ್ರ ಬಡತನದ ರೇಖೆ ಎಂದು ಅಲ್ಲಿಂದ ಮೇಲಿನವರು ಬಡವರೇ ಅಲ್ಲ; ಹಸಿವಿನ ಕಷ್ಟ ಅವರಿಗಿಲ್ಲ ಎಂದು ನಿರ್ಧರಿಸುವುದು ಕ್ರೌರ್ಯ ಅಲ್ಲದೇ ಇನ್ನೇನು?

ಹೆಚ್ಚುವರಿ ಓದಿಗಾಗಿ:

ಗ್ಲೋಬಲ್ ಹಂಗರ್ ಇಂಡೆಕ್ಸ್ ವರದಿ ೨೦೧೭:

 http://www.globalhungerindex.o rg/pdf/en/2017.pdf

 

Leave a Reply