fbpx

ಅಂಗೋಲಾದ ಆ ಸಿಂಪಲ್ ‘ಡಾಕ್’..!!

ನಾವಿಬ್ಬರೂ ಅಂದು ಮಾತಾಡುತ್ತಲೇ ಇದ್ದೆವು. ಎಲ್ಲೋ ಕಳೆದು ಹೋಗಿ ದಶಕಗಳ ನಂತರ ಭೇಟಿಯಾದ ಬಾಲ್ಯದ ಗೆಳೆಯರಂತೆ.

ನಾನು ಅಂದು ಮಾತಾಡುತ್ತಿದ್ದಿದ್ದು ಡಾ. ಜೆರಾಂಡುಬ ಯೊಟೊಬುಂಬೆಟಿ ಅವರೊಂದಿಗೆ. ಇಷ್ಟುದ್ದ ಇರುವ ಅವರ ಹೆಸರಿನ ಸರಿಯಾದ ಉಚ್ಚಾರಣೆಯು ಹೀಗೇನೇ ಎಂದು ನಾನು ಹೇಳುವ ಹಾಗಿಲ್ಲ. ಆದರೆ ನನಗೆ ಅವರು ‘ಡಾಕ್ಟರ್’ ಮಾತ್ರ. ಸಿಂಪಲ್ಲಾಗಿ ‘ಡಾಕ್’. ನಾನು ಮೊಟ್ಟ ಮೊದಲ ಬಾರಿಗೆ ವೀಜ್ ನಲ್ಲಿರುವ ಒಂದು ಸರ್ಕಾರೇತರ ಸಂಸ್ಥೆಯ ಕದ ತಟ್ಟಿದಾಗ ಅಲ್ಲಿಯವರೊಬ್ಬರು ”ನೀವು ನಮ್ಮ ಚೀಫ್ (ಮುಖ್ಯಸ್ಥ) ರನ್ನು ಭೇಟಿಯಾಗಬೇಕು”, ಅಂದಿದ್ದರು. ಹೂಂ ಎಂದ ನಾನು ಕೆಲದಿನಗಳ ನಂತರ ಮತ್ತೊಮ್ಮೆ ಹೋದರೆ ”ನೀವು ಹೀಗೆಲ್ಲಾ ಬರೋ ಹಾಗಿಲ್ಲ. ಮೊದಲು ಒಂದು ಪತ್ರ ಬರೀಬೇಕು. ನಂತರ ಇಲ್ಲಿಂದ ನಿಮಗೆ ಉತ್ತರ ಬರುತ್ತದೆ. ಅನಂತರವಷ್ಟೇ ನಿಗದಿತ ಸಮಯವನ್ನು ಹೊಂದಿಸಿಕೊಂಡು ಬರಬೇಕು”, ಎಂದು ಆತ ನನ್ನನ್ನು ಹೊರಗಟ್ಟಲು ನೋಡಿದ್ದ.

ಅಯ್ಯೋ, ಇದೊಳ್ಳೆ ಕಥೆಯಾಯಿತಲ್ಲಾ ಎಂದು ತಲೆಕೆರೆದುಕೊಂಡ ನಾನು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಲು ನಿರ್ಧರಿಸಿದ್ದೆ. ಇ-ಮೈಲ್ ಗಳನ್ನು ಅಷ್ಟಾಗಿ ಉಪಯೋಗಿಸದ ಇವರುಗಳು ಪತ್ರಕ್ಕೆಲ್ಲಾ ಉತ್ತರ ನೀಡುವವರಲ್ಲ ಎಂಬ ಸಂಗತಿಯನ್ನು ನನ್ನ ಹಿಂದಿನ ಅನುಭವಗಳಿಂದ ತಿಳಿದುಕೊಂಡಿದ್ದೆ. ಇನ್ನು ದೇವರಿಗಿಂತ ಪೂಜಾರಿಯೇ ಬಲು ಜಿಗುಟು ಎಂಬಂತಾಗಿದ್ದು ನನ್ನ ದಾರಿಗೆ ಹೊಸ ಅಡಚಣೆಯನ್ನು ತಂದೊಡ್ಡಿತ್ತು.

ನಾನು ಇನ್ನೇನು ಹೊರಡಬೇಕು ಎಂದಾಗ ನನ್ನ ಕಣ್ಣೆದುರೇ ಆ ಸಂಸ್ಥೆಯ ವಾಹನವೊಂದು ಕಟ್ಟಡದ ಮತ್ತೊಂದು ಭಾಗದಲ್ಲಿ ಬಂದು ನಿಂತಿತ್ತು ನೋಡಿ. ಕ್ಷಣಾರ್ಧದಲ್ಲಿ ಟೋಪಿಯಿಂದ ಬೂಟಿನವರೆಗೂ ಆಫ್ರಿಕನ್ ಸಾಂಪ್ರದಾಯಿಕ ದಿರಿಸನ್ನು ಧರಿಸಿದ್ದ ವ್ಯಕ್ತಿಯೊಬ್ಬರು ಕಾರಿನಿಂದ ಕೆಳಕ್ಕಿಳಿದರು. ನನ್ನನ್ನು ದೂರದಿಂದಲೇ ನೋಡಿದ ಆತ ಮುಗುಳ್ನಕ್ಕು ಕಣ್ಣಲ್ಲೇ ನಮಸ್ಕಾರ ಅಂದಿದ್ದ. ಆರಡಿ ಎತ್ತರದ ನನ್ನನ್ನೇ ಮೀರಿಸುವಂತಿದ್ದ, ಧಡೂತಿ ದೇಹವನ್ನು ಹೊಂದಿದ್ದು ಭಾರೀ ಗಾತ್ರವಿರುವಂತೆ ಕಂಡ ಅವರನ್ನು ನೋಡಿ ‘ಅಬ್ಬಾ, ಏನು ಪರ್ಸನಾಲಿಟಿ’ ಎಂದು ನಾನು ಮನದಲ್ಲೇ ಲೆಕ್ಕಹಾಕಿದೆ.

ಆಫ್ರಿಕನ್ನರ ಸಾಂಪ್ರದಾಯಿಕ ದಿರಿಸುಗಳು ಸಾಮಾನ್ಯವಾಗಿ ದೇಹದ ಗಾತ್ರಕ್ಕಿಂತ ಕೊಂಚ ಹೆಚ್ಚೇ ದೊಡ್ಡದಾಗಿದ್ದು ಸಡಿಲವಾಗಿರುವ ಕಾರಣ ಆ ದಿರಿಸಿನಲ್ಲಿ ಅವರು ಮತ್ತಷ್ಟು ದಪ್ಪಗಾಗಿ ಕಾಣುತ್ತಿದ್ದರು. ತನ್ನ ಅಡ್ಡಾದಲ್ಲಿ ಗೊಂದಲದಲ್ಲಿ ನಿಂತಿದ್ದ ವಿದೇಶೀ ತರುಣನನ್ನು ಕಂಡು ಅವರಿಗೆ ಬೇಜಾರಾಯಿತೋ ಏನೋ! ನನ್ನೊಂದಿಗೆ ಒಳಕ್ಕೆ ಬನ್ನಿ ಎಂದು ಕೈಸನ್ನೆ ಮಾಡಿ ಕರೆದರು. ”ಅವರೇ ನಮ್ಮ ಚೀಫ್, ಹೋಗಿಬನ್ನಿ”, ಎಂದು ಈವರೆಗೆ ಧಿಮಾಕು ತೋರಿಸುತ್ತಿದ್ದ ಉದ್ಯೋಗಿ ನನ್ನ ಕಿವಿಯಲ್ಲಿ ಮೆಲ್ಲಗೆ ಉಸುರಿದ. ಕೂಡಲೇ ಜಾಗೃತನಾದ ನಾನು ಸಂತಸದಿಂದಲೇ ಅವರನ್ನು ಹಿಂಬಾಲಿಸಿ ಒಳನಡೆದೆ.

ಆ ದಿನವೇ ಡಾ. ಯೊಟೊಬುಂಬೆಟಿ ನನಗೆ ‘ಡಾಕ್’ ಆಗಿಬಿಟ್ಟರು. ಎಲ್ಲಿಂದಲೋ ಬಂದವರು ಮೊದಲು ಸುಧಾರಿಸಿಕೊಳ್ಳುವುದನ್ನು ಬಿಟ್ಟು ನನ್ನೊಂದಿಗೆ ಆಪ್ತವಾಗಿ ಮಾತಿಗಿಳಿದಿದ್ದರು. ಅಂದಿನಿಂದ ಯಾವಾಗ ಅವರ ಕಚೇರಿಗೆ ಹೋದವರೂ ಡಾಕ್ ಗಂಟೆಗಟ್ಟಲೆ ಮಾತಾಡುವವರು. ನನ್ನೊಂದಿಗೆ ಮಾತನಾಡುವುದನ್ನು ಬಿಟ್ಟು ಅವರಿಗೆ ಬೇರೆ ಕೆಲಸವೇ ಇಲ್ಲವೇನೋ ಎಂಬಂತೆ ನನ್ನೆಲ್ಲಾ ಕುತೂಹಲದ ಪ್ರಶ್ನೆಗಳಿಗೆ, ಅಭಿಪ್ರಾಯಗಳಿಗೆ, ಚರ್ಚೆಗಳಿಗೆ ಕಿವಿಯಾಗುವವರು. ಮೇಲಾಗಿ ಡಾಕ್ ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತಾಡಬಲ್ಲವರಾದ್ದರಿಂದ ದುಭಾಷಿಯ ಹಂಗಿನ ಅವಶ್ಯಕತೆಯೂ ಇರದೆ ನನ್ನ ಕೆಲಸಗಳು ಏಕಾಏಕಿ ಸಲೀಸಾಗಿಬಿಟ್ಟಿದ್ದವು.

ಚಾಡ್ ಮೂಲದ ವೈದ್ಯರಾಗಿರುವ ಡಾಕ್ ಅಂಗೋಲಾದಲ್ಲಿ ಚಿಕಿತ್ಸೆ, ಆರೋಗ್ಯ, ನೈರ್ಮಲ್ಯ ಇತ್ಯಾದಿಗಳನ್ನು ಅಮೆರಿಕನ್ ದಾನಿಗಳಿಂದ ನಡೆಯುತ್ತಿರುವ ಸಂಸ್ಥೆಯೊಂದರ ಸಹಯೋಗದಿಂದ ಬಹಳ ಮುತುವರ್ಜಿಯಿಂದ ನಡೆಸಿಕೊಂಡು ಬರುತ್ತಿರುವವರು. ಸಂಸ್ಥೆಯ ಪ್ರತಿಯೊಂದು ಯೋಜನೆಯನ್ನೂ ಕೂಡ ತನ್ನ ವೈಯಕ್ತಿಕ ಕೆಲಸವೇ ಎಂಬಷ್ಟು ಕಾಳಜಿಯಿಂದ ಮಾಡಿಕೊಂಡು ಅದರಲ್ಲಿ ಯಶಸ್ಸನ್ನೂ ಪಡೆದವರು. ಈ ಹಿಂದೆ ಕಾಂಗೋದಲ್ಲೂ ಕೂಡ ಕೆಲಸ ಮಾಡಿದ ಅನುಭವವು ಅವರಿಗಿದೆಯಂತೆ. ಸ್ಥಳೀಯ ವೈದ್ಯರು, ಸೋಬಾ (ಸರಪಂಚ್) ಗಳು, ಸಾಂಪ್ರದಾಯಿಕ ವೈದ್ಯರು, ಶಾಲೆಗಳು, ಶಿಕ್ಷಕರು, ಅಧಿಕಾರಿಗಳು, ಸಮುದಾಯದ ಮುಖ್ಯಸ್ಥರು, ಧಾರ್ಮಿಕ ಮುಖಂಡರು… ಹೀಗೆ ಎಲ್ಲರನ್ನೂ ಕೂಡ ತನ್ನ ಕಳಕಳಿಯ ಹೆಜ್ಜೆಗಳಲ್ಲಿ ಜೊತೆಯಾಗಿ ಕರೆದುಕೊಂಡು ಅಂಗೋಲಾದ ವೈದ್ಯಕೀಯ ಕ್ಷೇತ್ರದಲ್ಲಿ ಏನನ್ನಾದರೂ ಮಹತ್ತರವಾದ ಬದಲಾವಣೆಯನ್ನು ತರುವ ತುಡಿತ ಇವರದ್ದು.

”ಯಾಕೆ ಹೀಗಾಗುತ್ತಿದೆ ಡಾಕ್? ತನ್ನ ನಾಗರಿಕರು ಜುಜುಬಿ ಖಾಯಿಲೆಗಳಿಂದ, ಮೂಲಭೂತ ವೈದ್ಯಕೀಯ ಸೌಲಭ್ಯಗಳಿಂದ ಪ್ರಾಣಬಿಡುತ್ತಿದ್ದರೂ ವ್ಯವಸ್ಥೆ ಮಾತ್ರ ತನಗೂ ಇದಕ್ಕೂ ಸಂಬಂಧವೂ ಇಲ್ಲಂತೆ ರಾಜಧಾನಿಯ ವಿಲಾಸಿ ಗೂಡಿನಲ್ಲೇಕೆ ಬೆಚ್ಚಗೆ ಕುಳಿತುಕೊಂಡಿದೆ?”, ಎಂದು ನಾನು ಕೇಳಿದ್ದೆ. ಉತ್ತರಿಸುವ ಸರದಿಯು ಬಂದಾಗ ಡಾಕ್ ನನ್ನಷ್ಟೇ ನಿರಾಶರಾದಂತೆ ಕಂಡರು. ಅವರ ಮುಖದಲ್ಲಿ ದಟ್ಟ ವಿಷಾದದ ಕಾರ್ಮೋಡ. ”ನೋಡಿ… ನಾನು ಹೇಳಿದರೆ ನೀವು ನಂಬಲಿಕ್ಕಿಲ್ಲ. ನಾನು ಮೊಟ್ಟಮೊದಲು ಅಂಗೋಲಾಕ್ಕೆ ಬಂದಾಗ ಇಲ್ಲಿಯ ಆರೋಗ್ಯಕ್ಷೇತ್ರವನ್ನು ಕಂಡು ಬೆಚ್ಚಿಬಿದ್ದಿದ್ದೆ.

ನಾನೇನು ಮುಗಿಯದ ದುಃಸ್ವಪ್ನವೊಂದನ್ನು ಕಾಣುತ್ತಿರುವೆನೇ ಎಂದನಿಸತೊಡಗಿತ್ತು. ಇಲ್ಲಿಯ ಹಳ್ಳಿಗಳಲ್ಲಿ ಒಳ್ಳೆಯ ಆಸ್ಪತ್ರೆಗಳೇ ಇಲ್ಲ. ನೂರಾರು ಕಿಲೋಮೀಟರುಗಳ ದೂರವಿರುವ ನಗರಕ್ಕೆ ಚಿಕಿತ್ಸೆಗೆಂದು ಹೋಗಲು ಇವರು ಶಕ್ತರೂ ಅಲ್ಲ, ಅಲ್ಲಿಯ ದುಬಾರಿ ವೆಚ್ಚಗಳನ್ನು ಭರಿಸುವಷ್ಟು ಸ್ಥಿತಿವಂತರೂ ಅಲ್ಲ. ಲುವಾಂಡಾ, ಬೆಂಗೇಲಾ, ವಾಂಬೋಗಳಂತಹ ಶಹರಗಳಲ್ಲಿ ಸುಸಜ್ಜಿತವಾದ ಆಸ್ಪತ್ರೆಗಳನ್ನು ಸರ್ಕಾರವು ಆರಂಭಿಸಿದ್ದರೂ ಅರ್ಹ ವೈದ್ಯರ ಸಂಖ್ಯೆ ಮಾತ್ರ ಇಲ್ಲವೇ ಇನ್ನುವಷ್ಟು ಕಮ್ಮಿ. ಅಸಲಿಗೆ ಅಂಗೋಲಾದಿಂದ ಒಳ್ಳೆಯ ವೈದ್ಯರೇ ಹೊರಬರುತ್ತಿಲ್ಲ. ಒಂದಿಷ್ಟು ಬಂದರೂ ಇಲ್ಲಿಯ ಜನಸಂಖ್ಯೆಗೆ ಎಲ್ಲಿಯೂ ಸಾಲುವುದಿಲ್ಲ ಅನ್ನುವಷ್ಟು”, ಅಂದರು ಡಾಕ್.

ಅವರ ಮಾತಿನಲ್ಲಿ ಸತ್ಯಾಂಶವಿತ್ತು. ಸ್ವಾತಂತ್ರ್ಯ ಸಂಗ್ರಾಮದ ಅಂತಿಮ ಭಾಗ, ಆಂತರಿಕ ಯುದ್ಧದ ಕಾಲಘಟ್ಟದಿಂದ ಹಿಡಿದು ಇಂದಿಗೂ ಅಂಗೋಲಾದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಸೇವೆಯನ್ನು ಸಲ್ಲಿಸುತ್ತಿರುವವರು ಕ್ಯೂಬನ್ನರು. ಫಿಡೆಲ್ ಕಾಸ್ಟ್ರೋ ತನ್ನ ನಾಗರಿಕರಿಗೆ ಕಂದೀಲು, ಪುಸ್ತಕ ಹಿಡಿದುಕೊಂಡು ಕ್ಯೂಬಾದ ಹಳ್ಳಿಹಳ್ಳಿಗೂ ಹೋಗಿ ಅಕ್ಷರ ಕ್ರಾಂತಿಯನ್ನು ಮಾಡಿ ಎಂದು ಕರೆಕೊಟ್ಟಾಗ ಹಚ್ಚಲ್ಪಟ್ಟ ಜ್ಞಾನದ ಹಣತೆಯ ಬೆಳಕು ಕ್ಯೂಬಾವನ್ನು ಬೆಳಗಿದ್ದು ಮಾತ್ರವಲ್ಲದೆ ಅಂಗೋಲಾ ಸೇರಿದಂತೆ ಅದೆಷ್ಟೋ ಆಫ್ರಿಕನ್ ದೇಶಗಳನ್ನೂ ಬೆಳಗಿಸಿತ್ತು.

”ಜಗತ್ತಿನ ಯಾವ ಮೂಲೆಯಲ್ಲಾದರೂ ಆಗುತ್ತಿರುವ ದೌರ್ಜನ್ಯವನ್ನು ಕಂಡು ನೀನು ಸಿಡಿದೆದ್ದಿದ್ದೇ ಆದರೆ ನೀನು ನನ್ನ ಸಂಗಾತಿ”, ಎಂದು ಹೇಳಿದ ಚೇಗೆವಾರ ಕ್ಯೂಬನ್ನರನ್ನು ತಯಾರುಗೊಳಿಸಿದ್ದು ಭ್ರಾತೃತ್ವದ, ವಿಶ್ವಮಾನವ ತುಡಿತವನ್ನು ಹೊಂದಿದ್ದ ”ಇಂಟನ್ರ್ಯಾಷನಲಿಸಂ” ಅನ್ನು ಮುಂದಿಟ್ಟುಕೊಂಡು. ಇಂದಿಗೂ ಅಂಗೋಲಾ ಸೇರಿದಂತೆ ಆಫ್ರಿಕಾದ ಹಲವು ದೇಶಗಳಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವವರು ಕ್ಯೂಬನ್ನರೇ.

ಹಾಗೆಂದು ಕ್ಯೂಬನ್ನರ ಬೆನ್ನಿಗೇ ಶಾಶ್ವತವಾಗಿ ಜೋತುಬೀಳಲಾಗುವುದೇ? 1975 ರಲ್ಲಿ ಅಂಗೋಲಾಕ್ಕೆ ಸ್ವಾತಂತ್ರ್ಯವೇನೋ ಸಿಕ್ಕಿತು. ಆದರೆ ಅದನ್ನು ದೇಶದ ಉನ್ನತಿಗಾಗಿ ವ್ಯವಸ್ಥಿತವಾಗಿ ಬಳಸುವುದು ಬೇಡವೇ? ಚಿಕ್ಕದೊಂದು ಸಮಸ್ಯೆಗಾಗಿ ವೈದ್ಯರನ್ನು ಕಾಣಲು ಅಂಗೋಲಾ ರಾಜಧಾನಿಯಾದ ಲುವಾಂಡಾಗೆ ತೆರಳಿದ್ದ ನಾನು ಪರವಾಗಿಲ್ಲ ಎಂಬಂತಹ ಆಸ್ಪತ್ರೆಯೊಂದರ ಒಳಹೊಕ್ಕಿದ್ದೆ. ನೋಂದಣಿ ಅರ್ಜಿಯ ಶುಲ್ಕ, ವೈದ್ಯರ ಶುಲ್ಕ, ಮುಂಚಿತವಾಗಿ ನೀಡಬೇಕಾದ ಶುಲ್ಕ ಎಂದೆಲ್ಲಾ ಹೇಳಿ ನನ್ನಿಂದ ಸುಮಾರು 45,000 ಕ್ವಾಂಝಾಗಳನ್ನು (ಸುಮಾರು 270 ಡಾಲರ್ / 17,500 ರೂಪಾಯಿ) ರಿಸೆಪ್ಷನ್ನಿನಲ್ಲಿ ಕುಳಿತುಕೊಂಡಿದ್ದ ಸಿಬ್ಬಂದಿಯೊಬ್ಬ ತೆಗೆದುಕೊಂಡ.

ಇದರಲ್ಲಿ ವೈದ್ಯರ ಸಲಹಾ ಶುಲ್ಕವೇ 35,000 (ಸುಮಾರು 212 ಡಾಲರ್ / 13,700 ರೂಪಾಯಿ) ಕ್ವಾಂಝಾಗಳಷ್ಟಿತ್ತು. ಇನ್ನು 10,000 ಕ್ವಾಂಝಾ ಹೆಚ್ಚುವರಿಯಾಗಿ ಏಕೆ ತೆಗೆದುಕೊಂಡಿರಿ ಎಂದು ಕೇಳಿದರೆ ”ಇದು ಔಷಧಿಗಳ ಶುಲ್ಕ. ನಿಮ್ಮ ಔಷಧಿಗಳ ಮೌಲ್ಯವು ಈ ಶುಲ್ಕಕ್ಕಿಂತ ಕಮ್ಮಿಯಾದರೆ 10,000 ಕ್ವಾಂಝಾಗಳಲ್ಲಿ ಔಷಧಿಯನ್ನು ದರವನ್ನಷ್ಟೇ ಪಡೆದುಕೊಂಡು ಉಳಿದ ಮೊತ್ತವನ್ನು ನಿಮಗೆ ಮರಳಿಸುತ್ತೇವೆ”, ಎಂದಿದ್ದ ಆತ. ಇರುವ ಸಮಸ್ಯೆಯನ್ನು ವೈದ್ಯರಿಗೆ ತೋರಿಸಿ ಪರಿಹರಿಸಿಕೊಳ್ಳಲು ಬಂದಿದ್ದ ನನಗೆ ಈ ದರಗಳನ್ನು ನೋಡಿ ಮೂರ್ಛೆ ಹೋಗುವುದೊಂದೇ ಬಾಕಿ.

ಮೊದಲೇ ಮಿತಿಮೀರಿದ ಭ್ರಷ್ಟಾಚಾರ, ನಿರುದ್ಯೋಗದಂತಹ ಸಮಸ್ಯೆಗಳಿಂದ ಕಂಗೆಟ್ಟು ಎರಡು ಹೊತ್ತಿನ ಊಟವನ್ನು ಹೇಗೋ ನಿಭಾಯಿಸುತ್ತಿರುವ ಅಂಗೋಲಾದ ಗ್ರಾಮೀಣ ಭಾಗದವರು ಇಲ್ಲಿಯವರೆಗೆ ಬಂದು, ಇಷ್ಟು ಬೆಲೆ ತೆತ್ತು ಸಹಾಯವನ್ನು ಪಡೆಯುವುದು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟವಾಗಿತ್ತು. ಇದೇನಿದ್ದರೂ ನಗರಗಳಲ್ಲಿರುವ ಮೇಲ್ವರ್ಗದ ಅಂಗೋಲನ್ನರಿಗೆ ಮತ್ತು ಡಾಲರುಗಳಲ್ಲಿ ಸಂಬಳವನ್ನು ಪಡೆಯುತ್ತಿರುವ ವಿದೇಶೀಯರಿಗೆ ದಕ್ಕುವಂತಹ ಆರೋಗ್ಯ ಸೇವೆಗಳಾಗಿದ್ದವು.

40,000 ಕ್ವಾಂಝಾದ ಮೊತ್ತದಲ್ಲಿ ವೀಜ್ ನಲ್ಲಿ ನನ್ನ ಇಡೀ ತಿಂಗಳ ಖರ್ಚನ್ನು ಅನಾಯಾಸವಾಗಿ ನಿಭಾಯಿಸುವವನು ನಾನು. ನನ್ನ ಆಹಾರ, ಪ್ರಯಾಣ, ಚಿಕ್ಕಪುಟ್ಟ ವಿಲಾಸಗಳಿಂದ ಹಿಡಿದು ಇತರೆ ಖರ್ಚುಗಳೂ ಕೂಡ ಈ ಮೊತ್ತದಲ್ಲಿ ಒಂದು ತಿಂಗಳಿಗೆ ಸರಿಹೊಂದುತ್ತವೆ. ಅಂಥದ್ದರಲ್ಲಿ ಲುವಾಂಡಾದ ವೈದ್ಯರೊಂದಿಗೆ ಒಂದ್ಹತ್ತು ನಿಮಿಷಗಳ ಸಮಾಲೋಚನೆ ಮತ್ತು ಒಂದಿಷ್ಟು ಮಾತ್ರೆಗಳಿಗಾಗಿ ನಾನು 45,000 ಕ್ವಾಂಝಾಗಳನ್ನು ವ್ಯಯಿಸಿದ್ದೆ. ಖರ್ಚುಗಳು ಕೆಲವೊಮ್ಮೆ ಏರುಪೇರಾಗುವುದು ಸಹಜ. ಆದರೆ ಇದಕ್ಕೊಂದು ಅರ್ಥವೇ ಇರಲಿಲ್ಲ!

ವೀಜ್ ನಂತಹ ಹಳ್ಳಿಗಳಲ್ಲಿರುವ ದಿನಕೂಲಿ ಕಾರ್ಮಿಕರಿಗೆ, ಚಿಕ್ಕಪುಟ್ಟ ಉದ್ಯೋಗಗಳಲ್ಲಿರುವವರ ಮಾಸಿಕ ವೇತನವೇ ಸುಮಾರು 40,000 ಕ್ವಾಂಝಾಗಳಷ್ಟಾಗುತ್ತದೆ. ಹೀಗಿರುವಾಗ ತನ್ನ ಇಡೀ ಒಂದು ತಿಂಗಳ ದುಡಿಮೆಯನ್ನು ಸಂಪೂರ್ಣವಾಗಿ ಆಸ್ಪತ್ರೆಯ ಜೋಳಿಗೆಗೆ ಸ್ಥಳೀಯ ನಾಗರಿಕನೊಬ್ಬ ಹೇಗಾದರೂ ತುಂಬಿಸಬಲ್ಲ? ಬಂದು ವೈದ್ಯರಿಗೆ ತೋರಿಸಿ ಹೋಗುವ ಹೊರರೋಗಿಗಳಿಗೇ ಇಷ್ಟು ಖರ್ಚಾದರೆ ಇನ್ನು ಆಸ್ಪತ್ರೆಗಳಲ್ಲಿ ಹಲವು ದಿನಗಳವರೆಗೆ ದಾಖಲಾಗುವ ಒಳರೋಗಿಗಳು ಅದೆಷ್ಟು ವ್ಯಯಿಸಬೇಕು ಎಂದು ಒಮ್ಮೆ ಲೆಕ್ಕಹಾಕಿಕೊಳ್ಳಿ.

”ನೆಟ್ಟಗೆ ಸತ್ತರೂ ಪರವಾಗಿಲ್ಲ. ಆದರೆ ಇಲ್ಲಿಯ ಕೆಲ ವೈದ್ಯರು ನನಗೆ ಭಯಹುಟ್ಟಿಸುತ್ತಾರೆ”, ಎಂದ ನಾನು ನನ್ನ ‘ಟಾರ್ಚರ್ ಚೇಂಬರ್’ ಕಥೆಯನ್ನು ಡಾಕ್ ಗೆ ಹೇಳಿದೆ. ನನ್ನ ಮಾತುಗಳನ್ನು ಕೇಳಿ ಅವರು ವಿಷಾದದಿಂದ ತಲೆಯಾಡಿಸಿದರು. ”ವಿದೇಶೀಯರು ಕಂಡರೆ ಸಾಕು, ಕೆಲವರು ಡಾಲರುಗಳಿಗಾಗಿ ಮುಗಿಬೀಳುತ್ತಾರೆ”, ಎಂದರು ಡಾಕ್. ”ಅಂಗೋಲಾದಲ್ಲಿರುವಾಗ ನಿಮ್ಮ ಆರೋಗ್ಯವು ಚೆನ್ನಾಗಿರುವಂತೆ ನೀವು ನೋಡಿಕೊಳ್ಳಬೇಕು. ಈ ವಿಚಾರದಲ್ಲಿ ನಿಮಗೆ ಬೇರೆ ಆಯ್ಕೆಯೇ ಇಲ್ಲ. ವೀಜ್ ನಲ್ಲಿ ನಿಮಗೆ ಬೇಕಿರುವ ಔಷಧಿಗಳು ಸದಾ ಲಭ್ಯವಿರುವುದಿಲ್ಲ. ಇದು ಅಂಗೋಲಾದಲ್ಲಿರುವ ಬಹುತೇಕ ಹಳ್ಳಿಗಳಲ್ಲೂ ನಿಜ. ಇನ್ನು ಅಷ್ಟು ದೂರ ಇರುವ ಲುವಾಂಡಾಗೆ ಪದೇ ಪದೇ ಹೋಗಿ ಚಿಕಿತ್ಸೆಯನ್ನು ಪಡೆಯುವುದು ಸಾಧ್ಯವಾಗದ ಮಾತು. ಶುದ್ಧ ನೀರು, ಆಹಾರ, ಒಳ್ಳೆಯ ಜೀವನಶೈಲಿ ಇತ್ಯಾದಿ ಮುನ್ನೆಚ್ಚರಿಕೆಗಳನ್ನು ನೀವು ಕೈಗೊಳ್ಳಬೇಕು. ಆಗಲೇ ನಿಮ್ಮ ಇಲ್ಲಿಯ ದಿನಗಳು ಸುಸೂತ್ರವಾಗಿ ನಡೆಯಬಹುದು”, ಎಂದು ಸಲಹೆಯನ್ನು ನೀಡಿದರು ಡಾಕ್. ಹಾಗೆಯೇ ಏನಾದರೂ ಸಮಸ್ಯೆಗಳಿದ್ದರೆ ನನ್ನನ್ನು ಸಂಪರ್ಕಿಸಲು ಮೀನಮೇಷ ಎಣಿಸಬೇಡಿ ಎಂಬ ಭರವಸೆಯನ್ನೂ ಕೂಡ ಕೊಡಲು ಮರೆಯಲಿಲ್ಲ ಈ ಸಹೃದಯಿ ವೈದ್ಯ.

ಹೀಗೆ ನಮ್ಮ ಚರ್ಚೆಗಳು ಮುಂದುವರೆಯುತ್ತಿರುವಂತೆಯೇ ಹೊರಗಿನಿಂದ ಲಗುಬಗೆಯಿಂದ ಒಳಬಂದ ದುಭಾಷಿ ಏನೋ ಅತೀ ಮುಖ್ಯವಾದ ಸಮಾಚಾರವೆಂಬಂತೆ ನನ್ನ ಕಿವಿಯಲ್ಲಿ ಪಿಸುಗುಟ್ಟಿದ. ನಮ್ಮ ಕಾಮಗಾರಿಯು ನಡೆಯುತ್ತಿರುವ ಜಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನ ಗರ್ಭಿಣಿ ಪತ್ನಿ ಹೆರಿಗೆಯ ಸಂದರ್ಭದಲ್ಲಿ ಅಸುನೀಗಿದ್ದಳು. ತಾಯಿಯೊಂದಿಗೆ ಮಗುವೂ ಕೂಡ ಮರಣವನ್ನಪ್ಪಿಕೊಂಡಿತ್ತು. ಹೆಣವು ಎಂದಿನಂತೆ ವೀಜ್ ನ ಹೃದಯಭಾಗದಲ್ಲಿರುವ ಮಿಲಿಟರಿ ಜನರಲ್ ಆಸ್ಪತ್ರೆಯಲ್ಲಿ ಕಾಯುತ್ತಿತ್ತು. ಅಂದರೆ ಮತ್ತದೇ ದುಃಖದ ದೃಶ್ಯಗಳು! ಶವಗಳನ್ನು ಹೊರಸಾಗಿಸಲೆಂದೇ ಮೀಸಲಾಗಿರುವ ಆಸ್ಪತ್ರೆಯ ಚಿಕ್ಕ ಗೇಟು, ಶವಾಗಾರದಿಂದ ಹೊರಬರುವ ಹೆಣ, ಹೆಣವನ್ನು ಸಾಗಿಸಲು ರಸ್ತೆಯ ಪಕ್ಕದಲ್ಲಿ ಕಾಯುತ್ತಿರುವ ಒಂದು ಟೆಂಪೋ, ಗೇಟಿನೆದುರು ಕಣ್ಣೀರು ಹಾಕುತ್ತಿರುವ ಕುಟುಂಬದ ಸದಸ್ಯರು, ಬಿಕ್ಕಳಿಕೆ, ನಿಲ್ಲದ ರೋದನೆ…

ಸಾಮಾನ್ಯವಾಗಿ ಇಲ್ಲಿ ನಾವು ಸಿಬ್ಬಂದಿಗಳೆಲ್ಲರೂ ಒಂದಿಷ್ಟು ಹಣವನ್ನು ಚಂದಾದಂತೆ ಸಂಗ್ರಹಿಸಿ ಸಾವನ್ನಪ್ಪಿರುವ ಕುಟುಂಬದ ಮನೆಯವರಿಗೆ ಕೊಟ್ಟು ನಮ್ಮ ಕೈಲಾದಷ್ಟು ನೆರವಾಗುವ ಪರಿಪಾಠವನ್ನಿಟ್ಟುಕೊಂಡಿದ್ದೇವೆ. ಮೊತ್ತಗಳು ಚಿಕ್ಕದೇ ಆಗಿದ್ದರೂ ಎಲ್ಲಾ ಸಿಬ್ಬಂದಿಗಳನ್ನು ಸೇರಿಸಿ ನೋಡಿದಾಗ ಹನಿಹನಿಗೂಡಿ ಹಳ್ಳ ಎಂಬಂತೆ ಒಂದೊಳ್ಳೆಯ ಮೊತ್ತವೊಂದಕ್ಕೆ ಅದು ಬಂದು ನಿಂತಿರುತ್ತದೆ. ಇದು ಹೂಳುವಿಕೆ, ಅಂತ್ಯಕ್ರಿಯೆ, ಬಂದವರಿಗೆ ಊಟ-ತಿಂಡಿ ಎಂದೆಲ್ಲಾ ಉಂಟಾಗುವ ಹತ್ತಾರು ಖರ್ಚುಗಳನ್ನು ಗಮನದಲ್ಲಿರಿಸಿಕೊಂಡು ಸಿಬ್ಬಂದಿಗಳು ತನ್ನ ಬಡ ಸಹೋದ್ಯೋಗಿಗೆ ನೀಡುವ ಕಿಂಚಿತ್ತು ಸಹಾಯವೂ ಹೌದು. ಸಂಸ್ಥೆಯ ಆಡಳಿತ ಮಂಡಳಿಯು ಹೊಸ ನಿಯಮವನ್ನು ತರುವವರೆಗೂ ಕಾಯದೆ ಸಿಬ್ಬಂದಿಗಳು ತಮ್ಮತಮ್ಮಲ್ಲೇ ಮಾಡಿಕೊಂಡು ಕಾರ್ಯರೂಪಕ್ಕೆ ತಂದಿರುವ ಮಾನವೀಯ ಸಂವೇದನೆಯುಳ್ಳ ಹೆಜ್ಜೆಯಿದು.

”ಸಾವಿನ ಸುದ್ದಿಯೊಂದು ಬಂದಿದೆ ಡಾಕ್. ಸದ್ಯ ನಾನು ತುರ್ತಾಗಿ ಹೋಗಬೇಕಾಗಿದೆ. ಇನ್ನೂ ನಿಮ್ಮೊಂದಿಗೆ ಬಹಳಷ್ಟು ಚರ್ಚಿಸಲು ಬಾಕಿಯಿದೆ. ಮತ್ತೆ ಬರುತ್ತೇನೆ”, ಎಂದ ನಾನು ಎದ್ದು ನಿಂತು ಕೈಚಾಚಿದೆ. ”ಯಾವಾಗಲಾದರೂ ಸರಿಯೇ, ಖಂಡಿತ ಬನ್ನಿ”, ಎಂದು ಮುಗುಳ್ನಗುತ್ತಾ ಕೈಕುಲುಕಿದರು ಡಾಕ್. ನಮ್ಮ ಮನದೊಳಗಿನ ಹತಾಶೆಗೆ ತನ್ನ ದನಿಯನ್ನೂ ಸೇರಿಸುತ್ತಿರುವಂತೆ ಆಗಸದಲ್ಲಿ ಜಮೆಯಾಗಿದ್ದ ಕಾರ್ಮೋಡಗಳು ಮೆಲ್ಲನೆ ವರ್ಷಧಾರೆಯನ್ನು ಸುರಿಸಲು ಶುರುಮಾಡಿದವು.

ನಮ್ಮ ಮಜ್ದಾ ಕಾರು ಆ ಮಳೆಯಲ್ಲೂ ಸದ್ದು ಮಾಡುತ್ತಾ ಸಾವಿನ ಮನೆಯತ್ತ ಸಾಗಿತ್ತು.

************

1 Response

  1. Chi na hally kirana says:

    Nimma maanaviya, antakaranakke abinandanegalu sir.

Leave a Reply

%d bloggers like this: