fbpx

ವಿಸಾಜಿ ಬರೆದ – ರಸಗಂಗಾಧರ

ಆನಂದ್ ಋಗ್ವೇದಿ ಮತ್ತು  ಡಾ. ವಿಕ್ರಮ್ ವಿಸಾಜಿ

ಡಾ. ವಿಕ್ರಮ್ ವಿಸಾಜಿಯವರ  ರಸಾಭಿಜ್ಞ ನಾಟಕ – ರಸಗಂಗಾಧರ

ಆತ್ಮೀಯ ಸನ್ಮಿತ್ರ, ದಶಕಗಳ ಕಾವ್ಯ ಒಡನಾಡಿ, ಕವಿ ವಿಮರ್ಶಕ ವಿದ್ವಾಂಸ ಡಾ. ವಿಕ್ರಮ್ ವಿಸಾಜಿ  ನಾಟಕಕಾರನಾಗಿ ಹೊರ ಹೊಮ್ಮಿದ್ದು ವಿಸ್ಮಯಕಾರಿ ಹೆಮ್ಮೆ. ಅವರ ನಾಟಕ -ರಸಗಂಗಾಧರ ಈ ದಿನಗಳಲ್ಲಿ ನನಗೆ ಓದುವಿಕೆಯ ಸುಖ ಕಲ್ಪಿಸಿದ ಉತ್ತಮ ಕೃತಿ.

ನಾಟಕ : ಪ್ರಸಿದ್ಧ ಕವಿ ಹಾಗೂ ಮೀಮಾಂಸಕಾರ ಜಗನ್ನಾಥ ಪಂಡಿತನ ಜೀವನ ಆಧಾರಿತ. *ಜಗನ್ನಾಥ ಪಂಡಿತ* (1590-1641) ದೆಹಲಿ ಮತ್ತು ವಾರಣಾಸಿಗಳಲ್ಲಿ ವಾಸಿಸಿದ್ದ ಪ್ರಸಿದ್ಧ ಕವಿ ಹಾಗೂ ಕಾವ್ಯ ಮೀಮಾಂಸಕ. ಸಂಸ್ಕೃತದ ಸೃಜನಶೀಲ ಪಾಂಡಿತ್ಯದ ಕೊನೆಯ ಕೊಂಡಿ ಎಂದೇ ಭಾಸವಾಗುವ ಜಗನ್ನಾಥ ಪಂಡಿತ ಮೊಘಲ್ ದೊರೆ ಷಹಜಹಾನ್ ಆಸ್ಥಾನದಲ್ಲಿದ್ದವನು.

ದೊರೆಯ ಮಗ ಸೂಫಿ ತತ್ವ ಪ್ರತಿಪಾದಕ ದಾರಾಶಿಕೋನ ಗೆಳೆಯನಾಗಿದ್ದ ಜಗನ್ನಾಥ ‘ಅರಮನೆಯ ಸ್ತ್ರೀಯರನ್ನು ಕಾವ್ಯದಲ್ಲಿ ವರ್ಣಿಸಿದ ಆರೋಪಕ್ಕೆ ಗುರಿಯಾಗಿ ಗಡಿಪಾರಾದವನು. ವಾರಣಾಸಿಯ ಕರ್ಮಠ ಪಾಂಡಿತ್ಯ ಇವನ ಸೃಜನಶೀಲ ವಿದ್ವತ್ತನ್ನು ಪರಿಗಣಿಸಿರಲಿಲ್ಲ’ ಎಂಬುದು ಇತಿಹಾಸದ ಗೃಹೀತ. ಆತನ (ಆತ್ಮಹತ್ಯೆ ಮಾಡಿಕೊಂಡ) ಆ ಅಕಾಲಿಕ ಸಾವಿನ ಹಿನ್ನೆಲೆಯನ್ನು ಈಗ ಅರಿಯುವುದು ಕಷ್ಠ.

ಜಗನ್ನಾಥ ಪಂಡಿತರಂತಹ ಬಹು ಸೂಕ್ಷ್ಮ ಮೀಮಾಂಸಕ ಹಾಗೂ ಕವಿಯನ್ನು ಚಿತ್ರಿಸುವುದು ಸುಲಭವಲ್ಲ. ಸ್ವತಃ ಸೂಕ್ಷ್ಮ ಮನಸ್ಸಿನ ಕವಿ, ವಿಶ್ವವಿದ್ಯಾಲಯಗಳಲ್ಲಿ ದಶಕದ ಕಾಲ ವಿದ್ಯಾರ್ಥಿಗಳಿಗೆ ಛಂದಸ್ಸು ಮತ್ತು ಕಾವ್ಯ ಮೀಮಾಂಸೆ ಬೋಧಿಸಿದ ಅನುಭವ ಇರುವ ವಿಕ್ರಮ್ ವಿಸಾಜಿ ಇದನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಷಹಜಹಾನನ ಕಾವ್ಯ ಪ್ರೀತಿ, ಮೊಘಲರ ಕಾಲದ ರಾಜಕಾರಣ, ದಾರಾಶಿಕೋನ ಅಂತಃಕರಣಪೂರಿತ ಬಂಡುಕೋರತನ, ಕಾವ್ಯಾಸಕ್ತ ರಾಜಕುವರಿ ಲಾವಂಗಿಯ ತರ್ಕ ಮತ್ತು ಅನುರಕ್ತಿ, ಔರಂಗಜೇಬನ ಕುತ್ಸಿತ ಮನಸ್ಥಿತಿ, ಈ ಎಲ್ಲದರೊಂದಿಗೇ ಜಗನ್ನಾಥ ಪಂಡಿತನ ಕಾವ್ಯ, ಮೀಮಾಂಸೆ ಮತ್ತು ಮೋಹ!

ಶುಷ್ಕವಾಗಬಹುದಾಗಿದ್ದ ಜಗನ್ನಾಥ ಕೃತ “ರಸ ರಮಣೀಯತೆ”ಯ ಮೀಮಾಂಸೆಯನ್ನು ಅಕ್ಷರಶಃ ಕಾವ್ಯದಂತೆ ರಮ್ಯಗೊಳಿಸಿ ಉಣಬಡಿಸುತ್ತದೆ ನಾಟಕ. ಸಮಯೋಚಿತ ಸಂಭಾಷಣೆಗಳಲ್ಲಿ ಸಚಿತ್ರಕವೆನ್ನಿಸುವ ದೃಶ್ಯ ಸಂಯೋಜನೆ ಕಥಾ ಪರಿಪಾಠಕ್ಕೆ ಸಹಜ ಓಟ ನೀಡಿದೆ. ಅಭಿನಯಕ್ಕೆ ಅವಕಾಶ ಈಯುವ ಮೌನದ ನಿಲ್ದಾಣಗಳ ಅವಶ್ಯಕತೆ ಇತ್ತಾದರೂ, ಎಲ್ಲೂ ವಾಚಾಳಿ ಎನ್ನಿಸದ ಕ್ಲುಪ್ತ ಮಾತುಗಳ ಮೂಲಕ ನಾಟಕ ಆವರಿಸುತ್ತದೆ.

ಮೊದಲ ದೃಶ್ಯದಿಂದ ಕಟ್ಟಿ ತಂದ ತೀವ್ರತೆಯನ್ನು ಕೊನೆಯ ದೃಶ್ಯಗಳಲ್ಲಿಯೂ ನೀಡುವಷ್ಟು ಸಾವಕಾಶ ಬೇಕೆನಿಸುತ್ತದೆ. ಆದರೆ ಕತೆಯ ತೀವ್ರತೆಯೇ ಈ ಸಂಭವನೀಯತೆಯನ್ನು ಕೊರತೆಯಾಗದಂತೆ ನಿರ್ವಚಿಸಿದೆ. ಹೊಸ ನಾಟಕಗಳೇ ಇಲ್ಲವಾಗುತ್ತಿರುವ ಈ ಕಾಲದಲ್ಲಿ ಮಹತ್ವದ ನಾಟಕ ಕೊಟ್ಟ ವಿಸಾಜಿ ಅಭಿನಂದನೀಯರು.

ಆನಂದ್ ಋಗ್ವೇದಿ

 

1 Response

  1. Prakash parvatikar says:

    ಪಂಡಿತ ಜಗನ್ನಾಥನ ರಸಗಂಗಾಧರ ಹಾಗು ಚಿತ್ರಮಿಮಾಂಸಖಂಡನ ಗ್ರಂಥ ಪ್ರಸಿಧ್ಧವಾದುದು. ಈತನ ಕವಿತೆಗಳಲ್ಲಿ ನಾವಿನ್ಯವಾದ ಕಲ್ಪನೆಗಳು,ಶಬ್ದ ಚಮತ್ಕಾರ, ಶ್ಲೇಷಾರ್ಥ,ಅಲಂಕಾರಗಳು ತುಂಬಿ ತುಳುಕುತ್ತವೆ. ಈತನ ಪಾಂಡಿತ್ಯ ಕಂಡು ಅನೇಕ ರಾಜರು ತಮ್ಮ ಆಸ್ಥಾನಕ್ಕೆ ಆಮಂತ್ರಿಸಿದರು.ಆಗ ಹೇಗೆ ಚಮತ್ಕಾರದಿಂದ ಉತ್ತರಿಸಿದ ಎಂಬುದನ್ನು ಕೆಳಗಿನ ಕವಿತೆಯಲ್ಲಿ ಕಾಣುವಿರಿ. ದಿಲ್ಲೀಶ್ವರೋ ವಾ ಜಗದೀಶ್ವರೋ ವಾ ಮನೋರಥಾನ್ ಪೂರಯಿತುಂ ಸಮರ್ಥಃ!!!! ಅ‌ನ್ಯೈನೃ೯ಪಾಲೈಃ ಪರದೀಯಮಾನಂ ಶಾಕಾಯ ವಾ ಸ್ಯಾಲ್ಲವಣಾಯ ವಾ ಸ್ಯಾತ್ !!!!, ದಿಲ್ಲೀಶ್ವರನೋ,ಜಗದೀಶ್ವರನೋ ನನ್ನ ಆಸೆಗಳನ್ನು ಪೂರೈಸಬಹುದಷ್ಟೆ.!! ಇತರ ರಾಜರಿಂದ ದೊರೆಯುವದೆಲ್ಲವೂ ಕೇವಲ ಉಪ್ಪು ತರಕಾರಿಗಳಿಗೆ ಸಾಕಾಗುತ್ತದೆ.

Leave a Reply

%d bloggers like this: