fbpx

ಇದು ಸಾಗರದಂತ ಹೋರಾಟ ಕಟ್ಟಿದ ಹೋಟೆಲ್..

ನಾಡಿಗೆ ಸಮ ಸಮಾಜದ ಕನಸು ಬಿತ್ತಿದ
ಇಂತಹ ಸ್ಥಳ ಸ್ಮಾರಕವಾಗಲಿ

ಆರ್ ಟಿ ವಿಠ್ಠಲಮೂರ್ತಿ 

ಆ ಹೋಟೆಲ್ಲಿನ ಮೂಲೆಯಲ್ಲಿ ಕುಳಿತು ನನಗೆ ಪ್ರಿಯವಾದ ಅವಲಕ್ಕಿಯನ್ನು ತಿನ್ನುತ್ತಾ ಅವರ ಬಳಿ: ಸಮಾಜವಾದ ಅಂದರೆ ಏನು? ಅಂತ ಮುಗ್ಧವಾಗಿ ಕೇಳಿದೆ.

ಯಾಕೆಂದರೆ ಆ ಹೊತ್ತಿಗಾಗಲೇ ನಮ್ಮಂತಹ ಪುಟ್ಟ ಹುಡುಗರ ಕಿವಿಗೂ ಸಮಾಜವಾದ ಎಂಬ ಪದ ಪದೇ ಪದೇ ಕೇಳುತ್ತಿತ್ತು. ನಾನು ಪ್ರಶ್ನೆ ಕೇಳಿದ ಧಾಟಿಗೆ ಪಕ್ಕದಲ್ಲಿ ಕೂತಿದ್ದವರು ಮೃದುವಾಗಿ ತಲೆಯ ಮೇಲೆ ಕೈಯ್ಯಾಡಿಸಿ, ಸಮ ಸಮಾಜದ ಆದರ್ಶವನ್ನು ಮೈಗೂಡಿಸಿಕೊಳ್ಳುವುದೇ ಸಮಾಜವಾದ ಎಂದರು.

ನನಗೆ ಅರ್ಥವಾಗಲಿಲ್ಲ.ಅಂದರೆ? ಅಂತ ಮತ್ತೆ ಕೇಳಿದೆ. ಆಗವರು ನಕ್ಕು: ನೀನಿನ್ನೂ ಸಣ್ಣ ಹುಡುಗ. ನಿನಗೆ ಇದೆಲ್ಲ ಅರ್ಥವಾಗುವುದಿಲ್ಲ. ದೊಡ್ಡವನಾಗುತ್ತಾ ಹೋದಂತೆ ನಿನಗೇ ಅರ್ಥವಾಗುತ್ತದೆ ಎಂದರು.

ಅವರ ಹೆಸರು ಎಸ್.ಎಸ್.ಕುಮಟಾ. ಆಗ ನಾವು ಕುಳಿತಿದ್ದುದು ನಮ್ಮೂರಿನ ‘ಸಾಗರ ಹೋಟೆಲ್’ನಲ್ಲಿ.ಅಂದ ಹಾಗೆ ಗೇಣಿ ಪದ್ಧತಿಯ ತಾರತಮ್ಯದ ವಿರುದ್ದ ನಡೆದ ಕಾಗೋಡು ಸತ್ಯಾಗ್ರಹದ ಆಸುಪಾಸಿನ ಕಾಲಘಟ್ಟದಲ್ಲಿ ಬಹಳ ಫೇಮಸ್ಸಾಗಿದ್ದುದು ಸಾಗರ್ ಹೋಟೆಲ್.

ಸಾಗರದ ತಿಲಕ್ ರಸ್ತೆ, ಅಶೋಕಾ ರಸ್ತೆ. ಮಾರಿಕಾಂಬಾ ದೇವಸ್ಥಾನ, ಸರ್ಕಾರಿ ಆಸ್ಪತ್ರೆಗೆ ಹೋಗುವ ದಾರಿಯ ಕೇಂದ್ರ ಬಿಂದುವಂತಿದ್ದುದು ಸಾಗರ್ ಹೋಟೆಲ್. ಅದರ ಮಾಲೀಕರ ಹೆಸರು ಎ.ಪಿ.ಕಲ್ಕೂರ್. ಹೆಚ್ಚು ಕಡಿಮೆ ಏಳು ದಶಕಗಳ ಹಿಂದೆ ಪ್ರಾರಂಭವಾದ ಸಾಗರ ಹೋಟೆಲ್ ಎಂದರೆ ನನ್ನ ಓರಗೆಯವರ ತನಕ ಎಲ್ಲರಿಗೂ ಚಿರಪರಿಚಿತ ಜಾಗ.

ಸಾಗರಕ್ಕೆ ಸಮಾಜವಾದಿಗಳ ತವರೂರು ಎಂಬ ಹೆಸರಿತ್ತಲ್ಲ? ಆಗೆಲ್ಲ ಸಮಾಜವಾದಿಗಳ ಪಾಲಿಗೆ ಚರ್ಚೆಯ ಪ್ರಮುಖ ಕೇಂದ್ರವಾಗಿದ್ದ ಜಾಗ ಇದು. ಪಟೇಲ್, ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಎಸ್.ಎಸ್.ಕುಮಟಾ ಅವರಿಂದ ಹಿಡಿದು ಎಲ್ಲರೂ ಈ ಕೇಂದ್ರಕ್ಕೆ ನುಗ್ಗಿದವರೇ.

ಅಲ್ಲಿ ಕೊಡುತ್ತಿದ್ದ ಟೀ, ಕಾಫಿ, ಗಾಜಿನ ಕಪಾಟಿನಲ್ಲಿ ವಿಶೇಷವಾಗಿ ಕಣ್ಣು ಕುಕ್ಕುತ್ತಿದ್ದ ಅವಲಕ್ಕಿ, ಮಸಾಲೆ ದೋಸೆ.. ಹೀಗೆ ಹೇಳುತ್ತಾ ಹೋದರೆ ಏಕಕಾಲಕ್ಕೆ ಲಕ್ಷಾಂತರ ಮಂದಿಯ ಪಾಲಿಗೆ ಸಾಗರ ಹೋಟೆಲ್ ಎಂದರೆ ಅನುಭವ ಮಂಟಪ ಇದ್ದಂತೆ.

ಹೊಟ್ಟೆಗೆ ರುಚಿಯಾದ ಆಹಾರ, ಮನಸ್ಸಿನ ಬೆಳವಣಿಗೆಗೆ ವಿಚಾರ ಅನ್ನುವುದು ಸಾಗರ ಹೋಟೆಲ್ ಅನ್ನುವುದಕ್ಕೆ ಪರ್ಯಾಯ ಪದವೇ ಆಗಿತ್ತು. ಸಾಗರ ಹೋಟೆಲ್ಲಿನ ಶ್ರೀಧರಣ್ಣ, ನಾಗರಾಜಣ್ಣ. ಅಲ್ಲಿ ಸೇರುತ್ತಿದ್ದ ಆತ್ಮೀಯರ ಸಮೂಹ.. ನಡೆಯುತ್ತಿದ್ದ ಚರ್ಚೆ,. ಹೇಳುತ್ತಾ ಹೋದರೆ ಅದೊಂದು ದೊಡ್ಡ ಕತೆ.

ಯಾಕೆಂದರೆ ಅವತ್ತು ಸಮ ಸಮಾಜದ ಆದರ್ಶವೇ ಸಮಾಜವಾದ ಎಂಬ ಪದ ಕಿವಿಗೆ ಬಿದ್ದ ನಂತರ ಹಲವು ದಶಕಗಳು ಕಳೆದು ಹೋಗಿವೆ. ಆದರೆ ಸಮಾಜವಾದ ಎಂಬುದು ಇನ್ನೂ ಆದರ್ಶವೇ ಹೊರತು. ವಾಸ್ತವಿಕವಾಗಿ ಅಸ್ತಿತ್ವದಲ್ಲಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಸಮಾಜ ಭೇದ ಪದ್ಧತಿ ಹೆಚ್ಚು ಹೆಚ್ಚಾಗಿ ಬೇರು ಬಿಡುತ್ತಿದೆ.

ಸಮಾಜ ಭೇದ ಪದ್ಧತಿಗೆ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ನೆಲೆಯಲ್ಲಿ ಕೊಡುಗೆ ನೀಡಿರುವುದೂ ನಿಜವೇ. ಸಮಾಜವಾದಕ್ಕೆ ಕೊಡುಗೆ ನೀಡಿದ ರಾಜಕೀಯ ಪಕ್ಷಗಳು ಕಣ್ಣು ಮುಚ್ಚಿವೆ. ಸಮಾಜ ಭೇಧಕ್ಕೆ ಕಾಣಿಕೆ ನೀಡಿದ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಬೆಳೆಸಿಕೊಂಡಿವೆ.

ಇದೆಲ್ಲ ಏಕೆ ನೆನಪಿಗೆ ಬಂತೆಂದರೆ ನನ್ನಣ್ಣನ ಮಗ ಚಿಂಟು (ಆರ್.ಎಂ.ರಾಮಕುಮಾರ್) ಸಾಗರ ಹೋಟೆಲ್ಲಿನ ಗತ ಕಾಲದ ಚಿತ್ರವೊಂದನ್ನು ಕಳಿಸಿದ್ದ. ಈಗ ಸಮಾಜವಾದದ ಪೋಷಕರಂತೆ, ಈ ಹೋಟೆಲ್ಲೂ ಮುಚ್ಚಿದೆ. ಆದರೆ ನನ್ನಂತಹ ಅಪಾರ ಜನರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದಿದೆ.

ಅಂದ ಹಾಗೆ ಸರ್ಕಾರ ರಾಜ್ಯದ ವಿವಿಧೆಡೆ ಹಲವು ಜಾಗಗಳನ್ನು ಖರೀದಿಸಿ, ಅದನ್ನು ಸ್ಮಾರಕವನ್ನಾಗಿಸುತ್ತದೆ. ಅದೇ ರೀತಿ ಇಡೀ ನಾಡಿಗೆ ಸಮಾಜವಾದದ ಕನಸು ಬಿತ್ತಲು ಕೇಂದ್ರವಾದ ಸಾಗರ್ ಹೋಟೆಲ್ ಜಾಗವನ್ನೂ ಖರೀದಿಸಿ ಅಲ್ಲೊಂದು ಸ್ಮಾರಕ ನಿರ್ಮಿಸಲಿ. ಸಮಾಜ ಭೇಧವೇ ಆದರ್ಶವಾಗುತ್ತಿರುವ ಕಾಲಘಟ್ಟದಲ್ಲಿ ಸಮ ಸಮಾಜದ ಆದರ್ಶ ಹೇಳಲು ಒಂದು ಹೊಸ ನೆಲೆ ತಲೆ ಎತ್ತಲಿ.

1 Response

  1. nutana doshetty says:

    saagara hotel will be remembered as a part of history.

Leave a Reply

%d bloggers like this: