fbpx

ಮೂಗಿಗೆ ಮೂಗನುಜ್ಜಿ.. ಕೆನ್ನೆ ಸವರಿ..

ವಿನಯಚಂದ್ರ

ಗೆಳತೀ,

ದುಂಡುಗಲ್ಲದ ತುಂಬು ಕೆನ್ನೆಯ
ಬೋಡುತಲೆಯ ಬೊಚ್ಚುಬಾಯಿಯ
ಅಕಾರಣವಾಗಿ ಹರ್ಷಿಸುವ
ಮಾತನಾಡಿಸಿದರೆ ಕಿಕ್ಕಿರಿದು ನಗುವ
ಎತ್ತಿಕೊಂಡರೆ ಮುಖ ಪರಚುವ
ಮೂಗು ಕಚ್ಚುವ, ಕನ್ನಡಕ ಎಳೆಯುವ
ಎದೆಯನೇ ಏಣಿಯಾಗಿಸಿ ಹೆಜ್ಜೆಯೊತ್ತುತ್ತಾ
ಮೇಲಮೇಲಕ್ಕೇರಿ ಗುಂಗು ಹಿಡಿಸಿಬಿಡುವ
ಮುದ್ದು ಮಗುವೆಂದರೆ,

ಅದು ಯಾರದ್ದಾದರೂ ಆಗಿರಲಿ,
ಒಮ್ಮೆ ಎತ್ತಿ, ಕೆನ್ನೆಗೊಂದು ಮುತ್ತನಿತ್ತು
ಹಗುರಾಗಿ ಮೇಲಕ್ಕೆಸೆದು ಹಿಡಿದು
ಮೂಗಿಗೆ ಮೂಗನುಜ್ಜಿ
ಕೆನ್ನೆ ಸವರಿ, ಅದರ ಪುಟ್ಟ ಅಂಗೈಯರಳಿಸಿ
ಪುರ್ರೆಂದು ಗಾಳಿಯೂದಿ, ಹೂಮುತ್ತನಿತ್ತು
ಕೆಳಗಿಳಿಸುವುದರಲ್ಲಿ ಮೈಮನವೆಲ್ಲಾ
ಹಕ್ಕಿಯ ಗರಿಯಾಗಿರುತ್ತದೆ

ಎಕ್ಕದ ಬೀಜದ ಸಾರಥಿಯಾಗುತ್ತದೆ
ಕಬ್ಬಿನ ಹೂವಾಗುತ್ತದೆ
ಹೆತ್ತವರಿಗೊಂದು ಕಣ್ಣಲ್ಲೇ ಮೆಚ್ಚುಗೆ ಸೂಸಿ
ನಡೆದುಬಿಡುತ್ತೇನೆ ಸಂಭ್ರಮಿಸುತ್ತಾ

ಕಿಚಾಯಿಸಿ ನೋಡದಿರು, ನಾನು ಹೇಳಿದ್ದು
ಮಗುವಿನ ಬಗೆಗಷ್ಟೇ, ನಿನಗಲ್ಲ!
ಬೇಕಿದ್ದರೆ ನೀನೂ ಮಾಡಿನೋಡು!

 

Leave a Reply