fbpx

ಹೀಗೂ ಉಂಟು ಫೇರ್ ನೆಸ್ ಕ್ರೀಮು!

ಫಿಫಾ ಅಂಡರ್ – 17  ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ (6-28 ಅಕ್ಟೋಬರ್ 2017) ಕೋಲ್ಕತಾ ನಗರದಲ್ಲಿ ನಡೆದದ್ದು ನೆನಪಿದೆಯೇ? ಇಗ್ಲಂಡ್ ತಂಡ ಸ್ಪೇನನ್ನು 5-2 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿತ್ತು!

ಈ ಪಂದ್ಯಾವಳಿ ಆಯೋಜನೆಗಾಗಿ ಕೋಲ್ಕತಾ ನಗರವನ್ನು “ಅಂದಗೊಳಿಸಲು” ಪಶ್ಚಿಮ ಬಂಗಾಳ ಸರಕಾರವು ಕೋಲ್ಕತಾದ ಸಾಲ್ಟ್ ಲೇಕ್ ಸಿಟಿಯಿಂದ 88 ಬಡವರ ಗುಡಿಸಲುಗಳನ್ನು ನೆಲಸಮ ಮಾಡಿತ್ತು, 5000 ರಸ್ತೆಬದಿ ಮಾರಾಟಗಾರರನ್ನು ಅಲ್ಲಿಂದ ಎಬ್ಬಿಸಿ ಓಡಿಸಿತ್ತು ಮತ್ತು  18,000 ರಿಕ್ಷಾ ಎಳೆಯುವವರಿಗೆ ಅನುಮತಿ ನಿರಾಕರಿಸಿತ್ತು. ಆ ಹೊತ್ತಿಗೆ ಸಾರ್ವಜನಿಕರು, ರಾಷ್ಟ್ರೀಯ- ಅಂತಾರಾಷ್ಟ್ರೀಯ ಪ್ರತಿರೋಧ ಬಂದು ಇನ್ನಷ್ಟು ಮಂದಿಯ ಒಕ್ಕಲೆಬ್ಬಿಸುವಿಕೆಗೆ ಬ್ರೇಕ್ ಬಿತ್ತು!

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ತಾವು ಇಂತಹಾ ಯೋಜನೆಯಡಿ ಇಷ್ಟು ವಸತಿ ಒದಗಿಸಿದ್ದೇವೆ, ಇಷ್ಟು ದುಡ್ಡು ಖರ್ಚು ಮಾಡಿದ್ದೇವೆ ಎಂದು ವರದಿಗಳನ್ನು ನೀಡುತ್ತಿರುವ ಹೊತ್ತಿನಲ್ಲೇ ವಸತಿ ಮತ್ತು ಭೂಮಿ ಹಕ್ಕುಗಳ ಸಂಸ್ಥೆ (HLRN)  ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, 2017ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಗರ-ಹಳ್ಳಿ ಎಂಬ ತರತಮವಿಲ್ಲದೆ ದೇಶದಾದ್ಯಂತ 53,700 ವಸತಿಗಳನ್ನು ನೆಲಸಮ ಮಾಡುವ ಮೂಲಕ ಎಲ್ಲ ಮಾನವೀಯತೆಯನ್ನೂ ಗಾಳಿಗೆ ತೂರಿವೆ.

ಇದಕ್ಕಾಗಿ ಎಲ್ಲ ಕಾನೂನುಗಳನ್ನು ಉಲ್ಲಂಘಿಸಿವೆ ಹಾಗೂ ಇದರಿಂದಾಗಿ 2,60,000 ಮಂದಿ ಭಾರತೀಯರು ನೆಲವೇ ಹಾಸಿಗೆ- ಆಕಾಶವೇ ಹೊದಿಕೆಯಾಗಿ ತೆರೆದ ಬಯಲಿನಲ್ಲಿ ದಿನದೂಡುತ್ತಿದ್ದಾರೆ.

ಗಮನಿಸಬೇಕಾದ ಸಂಗತಿ ಎಂದರೆ, ಈ ಮಾಹಿತಿ ಸರ್ಕಾರಿ ಮತ್ತಿತರ ಲೆಕ್ಕಗಳಿಂದ ಪಡೆಯಲಾದ ಮಾಹಿತಿ ಆಗಿದ್ದು, ಇದನ್ನು ದಾಟಿ ನಡೆದಿರಬಹುದಾದ ‘ವಸತಿನಾಶ’ ಕಾರ್ಯಕ್ರಮಗಳಿಗೆ ಯಾವ ಲೆಕ್ಕಾಚಾರವೂ ಇಲ್ಲ; ಇಂತಹ ದತ್ತಾಂಶಗಳನ್ನು ಸರ್ಕಾರಿ ಮಷಿನರಿ ಒದಗಿಸುವುದೂ ಇಲ್ಲ. ಮಾಧ್ಯಮಗಳಿಗಂತೂ ಇದು ಬೇಡವೇ ಬೇಡ! ಪ್ರಧಾನ ಮಂತ್ರಿ ಆವಾಸ ಯೋಜನಾ ಅಡಿ “2022ಹೊತ್ತಿಗೆ ಎಲ್ಲರಿಗೂ ಸೂರು” ಎಂಬ ಘೋಷವಾಕ್ಯ ಮಾತ್ರ ಮೊಳಗುತ್ತಿದೆ.

ನಗರ-ಹಳ್ಳಿ ಎಂಬ ಭೇದವಿಲ್ಲದೇ ನಡೆಯುತ್ತಿರುವ ಈ ಬಲವಂತದ ತಳ ತಪ್ಪಿಸುವಿಕೆಗಳಿಗೆ ಕಾರಣ ಏನೆಂಬುದರ ಕುರಿತು HLRN ಅಧ್ಯಯನ ನಡೆಸಿತು. 2017ರಲ್ಲಿ ನಡೆದ ಇಂತಹ 213 ಪ್ರಕರಣಗಳಲ್ಲಿ ಸರ್ಕಾರಗಳು ಒಕ್ಕಲೆಬಿಸಲು ಕಾರಣ ಏನೆಂದು ಹುಡುಕಿದಾಗ ಸಿಕ್ಕಿದ ಮಿತಿ ಹೀಗಿತ್ತು:

1. 99 ಪ್ರಕರಣಗಳಲ್ಲಿ ನಗರ ಸೌಂದರ್ಯ ವ್ರದ್ಧಿ, ಮೆಗಾ ಈವೆಂಟ್ ಗಳಿಗೆ ಸ್ಥಳಾವಕಾಶ, “ಕೊಳಚೆ ರಹಿತ ನಗರ”ನಿರ್ಮಾಣ ಕಾರಣ.

2. 53 ಪ್ರಕರಣಗಳಲ್ಲಿ ರಸ್ತೆ, ಹೆದ್ದಾರಿ ವಿಸ್ತರಣೆ ಮತ್ತಿತರ ಅಭಿವ್ರದ್ಧಿ ಯೋಜನೆಗಳು ಕಾರಣ.

3. 30 ಪ್ರಕರಣಗಳಲ್ಲಿ ಪರಿಸರ ಸಂರಕ್ಷಣೆ, ಅರಣ್ಯ ರಕ್ಷಣೆ ಕಾರಣ.

4. 16 ಪ್ರಕರಣಗಳಲ್ಲಿ ಪ್ರಕ್ರತಿ ವಿಕೋಪ ನಿರ್ವಹಣಾ ಪ್ರಯತ್ನಗಳು ಕಾರಣ.

ಅಂದರೆ, 2017ರಲ್ಲಿ ದೇಶದೊಳಗೆ ಪ್ರತೀ ದಿನ 147ಮನೆಗಳ ವಾಸಿಗಳು ತಾವು ನಗರದ ಚೆಂದ-ಬೆಳವಣಿಗೆಗಳಿಗೆ ಕಜ್ಜಿ-ಅಡ್ಡಿ ಎಂಬ ಕಾರಣಕ್ಕಾಗಿ ಮನೆ ಕಳೆದುಕೊಂಡಿದ್ದಾರೆ!

ಇವೆಲ್ಲ ಎಲ್ಲೋ ಜನರ ಕಣ್ಣಿಗೆ ಬೀಳದ ಜಾಗಗಳಲ್ಲಿ ನಡೆದ ಕಥೆಗಳಲ್ಲ, ಚೆನ್ನೈ, ದಿಲ್ಲಿ, ಕೋಲ್ಕತಾ, ಮುಂಬಯಿ ಮಹಾನಗರಗಳು, ಟಯರ್ ಒಂದು ವ್ಯಾಪ್ತಿಗೆ ಬರುವ ನಗರಗಳಾದ ಹೈದರಾಬಾದ್, ಚಂಡೀಗಡ, ಸೂರತ್, ಗಾಝಿಯಾಬಾದ್, ಗುರುಗ್ರಾಮ್, ಗುವಾಹತಿ, ಜಬಲ್ಪುರ, ಪಣಜಿ, ಪಾಟ್ನಾ, ಪುಣೆ, ರಾಯಪುರ, ಶ್ರೀನಗರ, ಬರೋಡಾ ಮತ್ತು ವಿಶಾಖಪಟ್ಟಣಂ ಅಲ್ಲದೇ ಅರುಣಾಚಲ, ಅಸ್ಸಾಂ, ಹರ್ಯಾಣ, ಕರ್ನಾಟಕ, ತೆಲಂಗಾಣ, ಉತ್ತರ ಪ್ರದೇಶ, ಪಂಜಾಬ್ ಮತ್ತು ಓದಿಷಾ ರಾಜ್ಯಗಳಲ್ಲಿರುವ ಪುಟ್ಟ ಊರು-ಹಳ್ಳಿಗಳಲ್ಲಿ ಸಂಭವಿಸಿದ ಘಟನೆಗಳು.

ಸ್ಲಮ್– ಫ್ರೀ “ಸ್ಮಾರ್ಟ್ ಸಿಟಿ” ಗಳಿಗೆ ಪಟ್ಟಿಯಲ್ಲಿಲ್ಲದವರು ತೆರಬೇಕಾಗಿರುವ ದಂಡ ಇದು! ಬಡತನವನ್ನು ಅಪರಾಧೀಕರಣಗೊಳಿಸುವ ಇಂತಹ ಸರ್ಕಾರಿ ಕ್ರಮಗಳು ನಾಗರಿಕ ಸಮಾಜದ ರೀತಿ-ರಿವಾಜುಗಳನ್ನು ಮಾತ್ರವಲ್ಲದೇ ಸಂವಿಧಾನವನ್ನೂ ಉಲ್ಲಂಘಿಸುವಂತಹವು. ನಗರಗಳಲ್ಲಿ 40-50ವರ್ಷಗಳಿಂದ ವಾಸವಿದ್ದು, ಅದಕ್ಕೆ ಪಡಿತರ ಚೀಟಿ ಮೋಟರ್ ಐಡಿ ಗಳಂತಹ ವಿಳಾಸ ದಾಖಲೆಗಳನ್ನು ಹೊಂದಿರುವವರೂ ಈ ರೀತಿಯ ಆಕ್ರಮಣಕ್ಕೆ ಒಳಗಾಗಿದ್ದಾರೆ. ಸ್ವತಃ ಸುಪ್ರೀಂ ಕೋರ್ಟು ವಸತಿಯು ಬದುಕುವ ಹಕ್ಕಿನ ಅವಿಚ್ಛಿನ್ನ ಭಾಗ ಎಂದು ಹಲವು ಬಾರಿ ಹೇಳಿದೆ.

ಜನವರಿ – ಅಕ್ಟೋಬರ್ ನಡುವೆ ನವೀ ಮುಂಬಯಿಯಲ್ಲಿ 3300 ಮನೆಗಳನ್ನು ಕೊಳಚೆ ಪ್ರದೇಶ ನಿರ್ಮೂಲನದಡಿ ಕಿತ್ತು ಹಾಕಲಾಗಿದ್ದರೆ, ದಿಲ್ಲಿಯ ಕಿಷನ್ ಗಢ, ಬಲ್ಜೀತ್ ನಗರ್ ಮತ್ತು ಶಾಸ್ರಿ ಪಾರ್ಕ್ ಬಳಿ 190 ಮನೆಗಳು ನೆಲಸಮವಾಗಿವೆ.

ಹೆಚ್ಚಾಗಿ “ಸಾರ್ವಜನಿಕ ಉದ್ದೇಶಕ್ಕೆ” ಎಂದು ನಡೆಯುವ ಈ ದೌರ್ಜನ್ಯಗಳು ಮಾನವ ಹಕ್ಕುಗಳನ್ನು ಸಂಪೂರ್ಣ ಉಲ್ಲಂಘಿಸುವುದರ ಜೊತೆಗೆ, ಸೂರು ತಪ್ಪಿ ಮನೆ-ಬದುಕು-ಸುರಕ್ಷೆ ಕಳೆದುಕೊಂಡು ಬೀದಿಗೆ ಬಂದವರಿಗೆ ಈ “ಸಾರ್ವಜನಿಕ ಉದ್ದೇಶ” ದ ಲಾಭ ಸಿಕ್ಕುವುದೇ ಇಲ್ಲ.

ಬಹಳ ಬಾರಿ ಯಾವುದೋ ರಿಯಲ್ ಎಸ್ಟೇಟ್ ಉದ್ದೇಶಗಳಿಗಾಗಿ ಇವು ನಡೆದಿರುತ್ತವೆ. ಮನೆ ಕಳೆದುಕೊಂಡವರು ಚಳಿ, ಮಳೆ, ಬಿಸಿಲ ತಾಪತ್ರಯಗಳನ್ನು ಬೀದಿ ಬದಿಯಲ್ಲೇ ಉಣ್ಣಬೇಕಾಗುತ್ತದೆ. ಉದಾಹರಣೆಗೆ ಕಳೆದ ಅಕ್ಟೋಬರ್ 30 ರಂದು ದಿಲ್ಲಿಯ ಕಟಪುತ್ಲಿ ಕಾಲನಿಯಲ್ಲಿ ದಿಲ್ಲಿ ಅಭಿವ್ರದ್ಧಿ ಪ್ರಾಧಿಕಾರ (ಡಿಡಿಎ) ನಡೆಸಿದ 2000 ಗುಡಿಸಲುಗಳ ನಿರ್ಮೂಲನಾ ಕಾರ್ಯಾಚರಣೆಯ ವೇಳೆ ಹಿಂಸೆ ನಡೆದು  ಅಶ್ರುವಾಯು ಸಿಡಿಸಬೇಕಾಗಿ ಬಂದಿತ್ತು. ಅಂದಹಾಗೆ ಅಲ್ಲಿ ದೊಡ್ಡ ಬಿಲ್ಡರ್ಸ್ ಸಂಸ್ಥೆಯೊಂದರ ಜೊತೆ ಡಿಡಿಎ ಯು ಸರ್ಕಾರಿ-ಖಾಸಗಿ ಭಾಗೀದಾರಿಯಲ್ಲಿ “ಅಭಿವ್ರದ್ಧಿ” ಮಾಡುವ ಉದ್ದೇಶ ಹೊಂದಿತ್ತು.

ಈ ರೀತಿಯ ವಸತಿ ನಿರ್ಮೂಲನಾ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಮುಂದಾಗಿ ನೋಟೀಸು ನೀಡುವುದರ ಸಹಿತ ಪರ್ಯಾಪ್ತ ಪರ್ಯಾಯ ವ್ಯವಸ್ಥೆ ಒದಗಿಸಬೇಕೆಂಬ ಹಲವು ರಾಷ್ಟ್ರೀಯ-ಅಂತಾರಾಷ್ಟ್ರೀಯ ನಿಯಮಗಳಿವೆ. ಆದರೆ ಸರ್ಕಾರಗಳು ಈ ಯಾವುದೇ ನಿಯಮವನ್ನು ಪಾಲಿಸುವುದಿಲ್ಲ. ಆಕ್ರಮಣಕ್ಕೊಳಗಾದವರಿಗೆ ವಸತಿ, ಉದ್ಯೋಗ, ಆರೋಗ್ಯ, ನೀರು, ಶೌಚ, ಶಿಕ್ಷಣದಂತಹ ಮೂಲಭೂತ ಸವಲತ್ತುಗಳು ಸಿಗದೇ ಮಾನವ ಹಕ್ಕುಗಳ ಸಾರಾಸಗಟು ಉಲ್ಲಂಘನೆ ಆಗಿರುತ್ತದೆ.

“ಸ್ಮಾರ್ಟ್ ಸಿಟಿ”, ಬ್ರಹತ್ ಯೋಜನೆಗಳು, ಅರಣ್ಯ ರಕ್ಷಣೆ, ನಗರ ಸೌಂದರ್ಯದ ಹೆಸರಲ್ಲಿ ಯಾವತ್ತು ಪ್ರಹಾರ ನಡೆಯಲಿದೆಯೋ ಎಂಬ ಭಯದಲ್ಲಿ ಲಕ್ಷಾಂತರ ಕುಟುಂಬಗಳು ದೇಶದಾದ್ಯಂತ ಈವತ್ತೂ ಬದುಕುತ್ತಿವೆ. ಆದರೆ ಇದು ಯಾವುದೇ ಮುಖ್ಯ ವಾಹಿನಿ ಮಾಧ್ಯಮಗಳಿಗೆ ಸುದ್ದಿ ಅಲ್ಲ ಹಾಗೂ ಅಲ್ಲಿನ ಸಂತ್ರಸ್ತರು ನಮ್ಮ ನಾಗರಿಕ ಸಮಾಜದ ಭಾಗವೂ ಅಲ್ಲ ಎಂಬುದು ನಾವು ಈವತ್ತು ತಲುಪಿರುವ “ಹುಣ್ಣಿನ” ಸ್ಥಿತಿಗೆ ಕೈಗನ್ನಡಿ!

Leave a Reply