fbpx

‘ಮಾಮಿ ದೇರ್ ಈಸ್ ಎ ಬ್ಯಾಡ್ ಮ್ಯಾನ್..’

ಸಿರೂರ್ ರೆಡ್ಡಿ 

ಹೋದ ವಾರ ಮನೆ ಹತ್ತಿರದಲ್ಲೇ ಇರೋ “ಭೀಮಾಸ್” ಎಂಬ ಪುಟ್ಟ ತೆಲುಗು ಹೋಟೆಲ್ಲಿಗೆ ನಾನು ರಾಜಶ್ರೀ ಹೋಗಿದ್ದೆವು. ಆ ಹೋಟೆಲ್ಲಿನ ಕೋಣೆಯೊಂದರ ಗೋಡೆಗಳಿಗೆ ಗೋಡೆ ಸೈಜಿನ ವಾಲ್ ಪೇಪರ್ ಅಂಟಿಸಿದ್ದಾರೆ.

ಅಲ್ಲಿ ವೈಭವೋಪಿತ ಪೌರಾಣಿಕ ಪೋಷಾಕಿನಲ್ಲಿ ತೆಲುಗಿನ ಮೇರುನಟ ಎನ್ ಟಿ ರಾಮರಾವ್ ವಿಜೃಂಭಿಸುತ್ತಿದ್ದಾರೆ.

ಯುವಕುಟುಂಬವೊಂದು ಪುಟ್ಟ ಮಗುವಿನೊಂದಿಗೆ ಹೋಟೆಲ್ ಒಳಕ್ಕೆ ಬಂತು. ಗೋಡೆ ಮೇಲಿರೋ ಎನ್ ಟಿ ಆರ್ ಚಿತ್ರವನ್ನ ನೋಡಿದ ಮಗುವಿಗೆ ಏನೆನ್ನಿಸೊತೋ ಗೊತ್ತಿಲ್ಲ. ಅದು ಇದ್ದಕ್ಕಿದ್ದಂತೆ ಅಮ್ಮನ ಬಳಿ ಹೋಗಿ “ಮಾಮಿ ದೇರ್ ಈಸ್ ಎ ಬ್ಯಾಡ್ ಮ್ಯಾನ್ ಇನ್ ದಟ್ ರೂಮ್!” ಅನ್ನಬೇಕೇ? ಈ ದೇಶದಲ್ಲಿ ಹುಟ್ಟಿದಂತಿರೋ ಆ ಮಗುವಿಗೆ ಏನ್.ಟಿ.ಆರ್ ಇರಲಿ ಆತ ಹಾಕಿರೋ ವೇಷಭೂಷಣ ಹೇಗೆ ಅರ್ಥವಾಗಬೇಕು. ಅಂತೂ ಆ ಪ್ರಸಂಗ ನೋಡಿ ಅಲ್ಲಿದ್ದವರೆಲ್ಲ ನಕ್ಕಿದ್ದೇ ನಕ್ಕಿದ್ದು.

ಸದರಿ ಎನ್.ಟಿ.ಆರ್ ಹಿಂದೆ ಆಂಧ್ರದ ಮುಖ್ಯಮಂತ್ರಿಯಾಗಿದ್ದಾಗ ಕೇದ್ರ ಸರ್ಕಾರದ ಚಿತಾವಣೆಗೆ ಅಧಿಕಾರ ಕಳೆದುಕೊಂಡು ಇಡೀ ರಾಜ್ಯ ಸುತ್ತಾಡಿ ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಆ ಸಂಧರ್ಭದಲ್ಲಿ ಗೆಳೆಯ ಸಿ.ಎಸ್. ದ್ವಾರಕಾನಾಥ್ ಮತ್ತು ನಾನು ಒಂದು ತಿಂಗಳ ಕಾಲ ಎನ್.ಟಿ.ಆರ್ ಹೋದಕಡೆಯೆಲ್ಲ ಸಂಚರಿಸಿ “ಲಂಕೇಶ್ ಪತ್ರಿಕೆ”ಗೆ ವರದಿ ಮಾಡಿದ್ದೆವು.

ಪತ್ರಿಕೆ ಆಗ ಕರ್ನಾಟಕಲ್ಲಿ ಮಾತ್ರವಲ್ಲ ಆಂಧ್ರದ ಹಲವು ಜಿಲ್ಲೆಗಳಲ್ಲಿ ಹೆಸರು ಮಾಡಿತ್ತು. ಪತ್ರಿಕೆಯ ಇತಿಹಾಸದಲ್ಲೇ ಅತಿ ಹೆಚ್ಚು ಪ್ರಸಾರ ಕಂಡ ದಿನಗಳವು. ಆ ಸಮಯದಲ್ಲಿ ಎನ್.ಟಿ.ಆರ್ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಮತ್ತು ಪತ್ರಿಕೆಗಾಗಿ ಅವರ ಸಂದರ್ಶನ ಮಾಡಲು ನಾನು ಮತ್ತು ದ್ವಾರಿ ಆಗಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಪರ್ವತಾಲ ರಾವ್ ಬಳಿ ಹೋಗಿದ್ದೆವು.

ಅವರು “ಆಯ್ತು ಐದು ಗಂಟೆಗೆ ಬಂದುಬಿಡಿ” ಅಂದರು. ನಾವು ಖುಷಿಯಾಗಿ ಹೊರಡಲು ತಯಾರಾದಾಗ ಮುಖ್ಯ ಕಾರ್ಯದರ್ಶಿಗಳು “ಸಾರಿ, ಐದು ಗಂಟೆ ಅಂದ್ರೆ, ಬೆಳಗಿನ ಜಾವ ಐದು ಗಂಟೆ” ಅಂದ ಕೂಡಲೇ ನಾವು ಸುಸ್ತಾಗಿ ಹೋಗಿದ್ದೆವು.

ಅಂತೂ ಬೆಳಗಿನ ಜಾವ ನಾಲ್ಕಕ್ಕೇ ಎದ್ದು ತಯಾರಾಗಿ ಹೈದರಾಬಾದಿನ ಎನ್.ಟಿ.ಆರ್ ಮನೆಗೆ ಹೋದಾಗ ಅಲ್ಲಿ ಮುಖ್ಯಮಂತ್ರಿ ಕೇಸರಿ ಕೌಪೀನ, ಕುಂಡಲಿ ಧರಿಸಿ ಪೌರಾಣಿಕ ನಟರಂತೆ ತಯಾರಾಗಿದ್ದರೆ ಅವರ ಮುಖ್ಯ ಕಾರ್ಯದರ್ಶಿಗಳು “ಜೀ ಹುಜೂರ್” ಅನ್ನೋ ಭಂಗಿಯಲ್ಲಿ ನಿಂತಿದ್ದರು.

ಅಂತೂ ನಾವು ಒಳಹೊಕ್ಕಾಗ ಎನ್.ಟಿ.ಆರ್ ನಮ್ಮನ್ನ “ವೆಲ್ಕಮ್ ಕನ್ನಡ ಬ್ರದರ್ಸ್ …” ಎಂದು ಸ್ವಾಗತಿಸಿ ಗಂಟೆ ಕಾಲ ನಮ್ಮೊಂದಿಗೆ ಮಾತಾಡಿ ಬೀಳ್ಕೊಟ್ಟರು. ಅದಾಗಿ ಒಂದು ವಾರ ಕಳೆದಿರಬೇಕು, ಲಂಕೇಶರಿಗೆ ಎನ್.ಟಿ.ಆರ್ ಪತ್ರವೊಂದನ್ನ ಬರೆದು ತಮ್ಮನ್ನ ಸಂದರ್ಶನ ಮಾಡಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದರು.

ಪಾಪ ಮಗು ಗೊತ್ತಿಲ್ಲದೇ ಎನ್.ಟಿ.ಆರ್ ಬ್ಯಾಡ್ ಮ್ಯಾನ್ ಅಂದುಕೊಂಡಿದೆ ನಿಜ. ಆದರೆ ಮಗು ಏನೆಲ್ಲಾ ನೆನಪು ಮಾಡಿಕೊಟ್ಟಿತು.

1 Response

  1. ಕೈದಾಳ್ ಕೃಷ್ಣಮೂರ್ತಿ says:

    ಮಗುವಿನ ಮುಗ್ದತೆಗೆ ದೊಡ್ಡವರ ಪ್ರಬುದ್ಧತೆ ಸಾಟಿಯಾಗುವುದಿಲ್ಲವೇನೋ?

Leave a Reply

%d bloggers like this: