fbpx

ರಾತ್ರಿ ಮಲಗೋದು ಇಷ್ಟದ ಅಡುಗೆ ಮಾಡಿದವಳ ಜೊತೆ..!

”ನಾಳೆ ನಾನು ಬರೋದಿಲ್ಲ ಚೀಫ್”, ನನ್ನೆದುರು ಕೈಕಟ್ಟಿಕೊಂಡು ನಿಂತಿದ್ದ ದುಭಾಷಿ ಮಹಾಶಯ ಮಿಗೆಲ್ ಎಂಬೋಸೋ ಹೇಳಿದ್ದ.

ಇಪ್ಪತ್ತೈದರ ಆಸುಪಾಸಿನವನಾದ ನನ್ನ ದುಭಾಷಿ ಇನ್ನೂ ಹುಡುಗುಬುದ್ಧಿಯನ್ನಿಟ್ಟುಕೊಂಡೇ ಕೆಲಸ ಮಾಡುವವನು. ತೀರಾ ಕಾಲೇಜು ವಿದ್ಯಾರ್ಥಿಯಂತೆ ಇಡೀ ದಿನ ತನ್ನ ಸ್ಮಾರ್ಟ್‍ಫೋನಿನಲ್ಲೇ ಮುಳುಗಿ ಸೋಷಿಯಲ್ ಮೀಡಿಯಾ, ಚಾಟಿಂಗ್, ಅದು-ಇದು ಎಂಬಂತಹ ಕೆಲಸಕ್ಕೆ ಬಾರದ ಚಟುವಟಿಕೆಗಳಲ್ಲಿ ವ್ಯಸ್ತನಾಗಿರುವವನು.

ಬಹುತೇಕ ಎಲ್ಲಾ ಅಂಗೋಲನ್ನರಂತೆ ಸ್ವಭಾವತಃ ಕೊಂಚ ಮೈಗಳ್ಳನೂ ಹೌದು. ”ಅಲ್ಲಯ್ಯಾ… ಕಳೆದ ವಾರವಷ್ಟೇ ರಜೆ ಬೇಕು ಅಂದುಕೊಂಡು ಹೋಗಿದ್ದೆ. ಹೀಗೆ ಪದೇ ಪದೇ ಹೋದರೆ ಹೇಗೆ? ಇಲ್ಲಿ ಇಂಗ್ಲಿಷ್-ಪೋರ್ಚುಗೀಸ್ ಭಾಷೆಗಳೆರಡನ್ನೂ ಬಲ್ಲವನೇ ನೀನೊಬ್ಬ. ನೀನು ಹೀಗೆ ಚಕ್ಕರ್ ಹೊಡೆಯುತ್ತಿದ್ದರೆ ನಮ್ಮ ಕೆಲಸಗಳೂ ಕಾಲುಮುರಿದುಕೊಂಡು ಬೀಳುತ್ತವೆ”, ಎಂದಿದ್ದೆ ನಾನು.

ಒಂದರ್ಥದಲ್ಲಿ ಇದು ಸತ್ಯವೂ ಆಗಿತ್ತು. ಪೋರ್ಚುಗೀಸ್ ಭಾಷೆಯನ್ನು ಒಂದಿಷ್ಟು ಅರ್ಥಮಾಡಿಕೊಳ್ಳುವ ನಾನು ಹೇಗೋ ಕಷ್ಟಪಟ್ಟು ಮಾತಾಡುತ್ತಾ ಕೆಲಸಗಳನ್ನು ನಿಭಾಯಿಸುತ್ತಿದ್ದಿದ್ದು ಹೌದಾದರೂ ಎಲ್ಲಾ ಸಂದರ್ಭಗಳಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅಧಿಕೃತವಾಗಿ ನೇಮಿಸಲಾಗಿದ್ದ ದುಭಾಷಿಯನ್ನು ಅವನ ಹುಡುಗಾಟಗಳಿಗಾಗಿ ಸುಮ್ಮನೆ ಬಿಡುವಷ್ಟು ಉದಾರಿಯೂ ನಾನಾಗಿರಲಿಲ್ಲ.

”ಅದು… ಅದು… ಒಂದು ಮೆಡಿಕಲ್ ಟೆಸ್ಟ್ ಮಾಡಿಸಿಕೊಳ್ಳೋಕಿದೆ. ನಾಳೆಯೇ ಮುಗಿಸಿ ನಾಡಿದ್ದು ಖಂಡಿತ ಬರುತ್ತೇನೆ”, ಎಂದ ಆತ. ”ನಿನಗೇನಯ್ಯಾ ಆಗಿದೆ? ಚೆನ್ನಾಗೇ ಇದ್ದೀಯಲ್ವಾ?”, ಎಂದು ಮತ್ತೆ ವಿಚಾರಿಸಿದೆ ನಾನು. ”ಅದು ನನ್ನ ಗರ್ಲ್‍ಫ್ರೆಂಡ್ ಗೆ ಎಚ್.ಐ.ವಿ ಟೆಸ್ಟ್ ಅನ್ನು ಮಾಡಿಸಿಕೊಳ್ಳಬೇಕಿತ್ತು. ಹೀಗಾಗಿ ಹೋಗಲೇಬೇಕು”, ಅಂದುಬಿಟ್ಟ ಮಿಗೆಲ್.

ಏಡ್ಸ್ ಅಂದಾಕ್ಷಣ ನೆಟ್ಟಗಾದ ನಾನು ಆಕೆಗೆ ಹಾಗೇನಾದರೂ ಇದೆ ಎಂದು ನಿನಗನ್ನಿಸುತ್ತಿದೆಯೇ ಎಂದು ಕೇಳಿದ್ದೆ. ”ಹಾಗೇನಿಲ್ಲ, ಸುಮ್ಮನೆ ಒಂದು ಚೆಕಪ್ ಮಾಡಿಸಿಕೊಂಡು ಬರುತ್ತೇವೆ”, ಎಂದು ಉತ್ತರಿಸಿದ ಆತ. ನಂತರ ಇವನನ್ನು ಕುಳ್ಳಿರಿಸಿ ಈ ಬಗ್ಗೆ ಆಳವಾಗಿ ವಿಚಾರಿಸಿಕೊಂಡಾಗ ಅಂಥಾ ಸಮಸ್ಯೆಗಳೇನೂ ಇಲ್ಲ ಎಂಬುದು ತಿಳಿದುಬಂತು.

ತಾನು ಆರೋಗ್ಯವಾಗಿದ್ದೇನೆ ಎಂಬ ಬಗ್ಗೆ ಖಾತ್ರಿಯುಳ್ಳ ಈತ ತನ್ನ ಹುಡುಗಿ ಇನ್ಯಾರೊಂದಿಗಾದರೂ ಇದ್ದು ಏನಾದರೂ ಬೇಡದ ಖಾಯಿಲೆಯನ್ನು ತರಿಸಿಕೊಂಡಿದ್ದಾಳೆಯೇ ಎಂಬುದನ್ನು ಪರೀಕ್ಷಿಸಲು ಈ ಹೆಜ್ಜೆಯಂತೆ. ಈ ವಿಚಿತ್ರ ವಿವರಣೆಯನ್ನು ಕೇಳಿದ ನಾನು ನಗಬೇಕೋ ಅಳಬೇಕೋ ಎಂದು ತಿಳಿಯದೆ ಸುಮ್ಮನಾಗಿಬಿಟ್ಟೆ. ಮರುದಿನದ ರಜೆಯು ಆತನಿಗೆ ನನ್ನಿಂದ ತಕ್ಷಣವೇ ಮಂಜೂರಾಯಿತು.

ಏಡ್ಸ್ ಅಂಗೋಲಾ ಒಂದರ ಸಮಸ್ಯೆಯಷ್ಟೇ ಅಲ್ಲ. ಒಟ್ಟಾರೆಯಾಗಿ ಇಡೀ ಆಫ್ರಿಕಾ ಖಂಡಕ್ಕೇ ಬಡಿದುಕೊಂಡ ಶಾಪ. ಅದರಲ್ಲೂ ಅಂಗೋಲಾದಲ್ಲಿ ಏಡ್ಸ್ ನಿಯಂತ್ರಣವನ್ನು ಮೀರಿಯೇ ಬೆಳೆದುಬಿಟ್ಟಿದೆ. ಅಂಗೋಲಾದ ಆರೋಗ್ಯ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದ ನನಗೆ ಇತರೆ ಖಾಯಿಲೆಗಳು ಅದೆಷ್ಟೋ ಇದ್ದರೂ ಏಡ್ಸ್ ಇವೆಲ್ಲದಕ್ಕಿಂತಲೂ ಮಿಗಿದಾದ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೆಂಬಂತೆ ಕಾಣುತ್ತಿತ್ತು, ಕಾಡುತ್ತಿತ್ತು. ಸರಕಾರವು ಏಡ್ಸ್ ನಿರ್ಮೂಲನೆಗೆ ತನ್ನದೇ ಆದ ಹೆಜ್ಜೆಗಳನ್ನಿಟ್ಟಿದ್ದರೂ ಹೇಳಿಕೊಳ್ಳುವಷ್ಟು ಒಳ್ಳೆಯ ಫಲಿತಾಂಶಗಳೇನೂ ದಕ್ಕಿರಲಿಲ್ಲ. ದೂರದೃಷ್ಟಿಗಳಿಲ್ಲದ ಇತರ ಯೋಜನೆಗಳಂತೆಯೇ ಇದೂ ಕೂಡ ಮಕಾಡೆ ಮಲಗಿಕೊಂಡಿದೆ ಎಂಬುದು ಎಲ್ಲರ ಅಭಿಪ್ರಾಯವೂ ಹೌದು.

ಏಡ್ಸ್ ಅಂಗೋಲಾದ ಇಂದು ನಿನ್ನೆಯ ಸಮಸ್ಯೆಯಲ್ಲ. ಅಂಗೋಲಾದ ರಾಜಕೀಯ ಜಗತ್ತಿನಲ್ಲಿ ಮುಂಚೂಣಿಯ ಪಕ್ಷವಾಗಿದ್ದ ಪೀಪಲ್ಸ್ ಮೂಮೆಂಟ್ ಫಾರ್ ಲಿಬರೇಷನ್ ಆಫ್ ಅಂಗೋಲಾ (ಎಮ್.ಪಿ.ಎಲ್.ಎ) ಗೆ ಮಿಲಿಟರಿ ಸಹಾಯವನ್ನು ನೀಡಲು ಫಿಡೆಲ್ ಕಾಸ್ಟ್ರೋರ ಆಣತಿಯ ಮೇರೆಗೆ ಕ್ಯೂಬನ್ ಸೈನಿಕರು ಮೊಟ್ಟಮೊದಲು ಅಂಗೋಲಾಕ್ಕೆ ಬಂದಿಳಿದಾಗ ಅವರನ್ನು ಕಂಗೆಡಿಸಿದ್ದು ಎರಡೇ ಸಂಗತಿಗಳು. ಅವುಗಳೆಂದರೆ ಅಂಗೋಲನ್ನರು ಸಿಕ್ಕಸಿಕ್ಕಲ್ಲಿ ಮೂತ್ರಮಾಡುತ್ತಿದ್ದ ದೃಶ್ಯ ಮತ್ತು ಅಂಗೋಲನ್ನರ ತೀರಾ ಹೆಚ್ಚು ಎಂಬಷ್ಟಿದ್ದ ಲೈಂಗಿಕತೆ. ಈ ಬಗ್ಗೆ ಕ್ಯೂಬನ್ ಸೈನಿಕರು ‘ಅಂಗೋಲನ್ನರದ್ದು ಅಕ್ಷರಶಃ ಪಶುಸದೃಶ ಲೈಂಗಿಕತೆ’ ಎಂದು ಹೇಳಿಕೊಳ್ಳುವುದೂ ಇತ್ತಂತೆ.

ಅಂಗೋಲಾಕ್ಕೆ ಬಂದಿಳಿದ ಕ್ಯೂಬನ್ ಸೈನಿಕರು ಹೆಜ್ಜೆಹೆಜ್ಜೆಗಳಲ್ಲೂ ಸವಾಲನ್ನೇ ಎದುರಿಸುತ್ತಿದ್ದರು. ತಾವು ಚಲಿಸುವ ಮಾರ್ಗದಲ್ಲಿ ಇರಬಹುದಾಗಿದ್ದ ನೆಲಬಾಂಬುಗಳನ್ನು ಅವರು ಮೊದಲು ನಿಷ್ಕ್ರಿಯಗೊಳಿಸಬೇಕಿತ್ತು. ಇತ್ತ ವರ್ಷಗಳಾದರೂ ಮುಗಿಯದಂತೆ ಕಾಣುತ್ತಿದ್ದ ದಂಗೆ, ಹಿಂಸೆಗಳಿಂದ ಕಂಗಾಲಾಗಿದ್ದ ಅಂಗೋಲನ್ನರು ಕ್ಯೂಬಾದ ಸೈನಿಕರ ಮೇಲೆ ಭರವಸೆಯಿರದಿದ್ದ ಪರಿಣಾಮವಾಗಿ ಸ್ಥಳೀಯ ಅಂಗೋಲನ್ನರಿಂದಲೇ ಇವರ ಮೇಲೆ ದಾಳಿಗಳಾಗುತ್ತಿದ್ದವು. ಅದರಲ್ಲೂ ಒಂದಿಷ್ಟು ದೇಹಸುಖವನ್ನು ಅರಸಿಕೊಂಡು ಕ್ಯೂಬನ್ ಸೈನಿಕರು ರಾತ್ರಿಯ ವೇಳೆಗಳಲ್ಲಿ ಸ್ಥಳೀಯ ಹೆಂಗಸರನ್ನು ಹುಡುಕಿಕೊಂಡು ಹೊರಟರೆ ಇಂಥಾ ದಾಳಿಗಳಾಗುವುದು ಸಾಮಾನ್ಯವಾಗಿತ್ತು.

ಹೀಗೆ ಮೊದಲಿನಿಂದಲೂ ಲೈಂಗಿಕತೆಯ ಬಗ್ಗೆ ಕೊಂಚ ಹೆಚ್ಚೇ ಅನ್ನುವಷ್ಟು ಒಲವನ್ನು ಹೊಂದಿದ್ದ ಅಂಗೋಲನ್ನರು ಕಾಲಾನುಕ್ರಮದಲ್ಲಿ ಅಸುರಕ್ಷಿತ ಲೈಂಗಿಕತೆಗಳಿಂದ ಏಡ್ಸ್ ನಂತಹ ಮಹಮ್ಮಾರಿಗಳಿಗೂ ಕೂಡ ಆಹ್ವಾನವನ್ನು ಕೊಟ್ಟುಬಿಟ್ಟಿದ್ದರು. ವಿಪರ್ಯಾಸವೆಂದರೆ ಇವುಗಳು ಇಂದಿಗೂ ಕೂಡ ಮುಂದುವರಿದು ಲೈಂಗಿಕ ಖಾಯಿಲೆಗಳನ್ನು ಹೆಚ್ಚಿನ ವೇಗದಲ್ಲಿ ಹರಡುವಂತೆ ಮಾಡುತ್ತಿವೆ. ಏಡ್ಸ್ ಗೆ ಅಸುರಕ್ಷಿತ ಲೈಂಗಿಕತೆಯೊಂದೇ ಕಾರಣವೆನ್ನುವುದು ತಪ್ಪಾದರೂ ಅಸುರಕ್ಷಿತ ಲೈಂಗಿಕತೆಯು ಅಂಗೋಲಾದಾದ್ಯಂತ ಖಾಯಿಲೆಯ ಪ್ರಮಾಣವನ್ನು ಉಲ್ಬಣಗೊಳಿಸಿರುವಲ್ಲಿ ಸಂಶಯವೇ ಇಲ್ಲ.

ಕಾನೂನಿನ ಪ್ರಕಾರ ಬಹುಪತ್ನಿತ್ವವು ಅಂಗೋಲಾದಲ್ಲಿ ಅಕ್ರಮವಾದರೂ ಸಾಮಾಜಿಕವಾಗಿ ಈ ರೂಢಿಯನ್ನು ಮುಕ್ತವಾಗಿ ಒಪ್ಪಿಕೊಳ್ಳಲಾಗಿದೆ. ಹೀಗಾಗಿ ವ್ಯಕ್ತಿಯೊಬ್ಬ ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಿರುವುದು ಇಲ್ಲಿ ಹೌಹಾರುವ ವಿಷಯವೇನಲ್ಲ. ಬಹಳಷ್ಟು ಸ್ಥಳೀಯ ಪುರುಷರು ಮತ್ತು ಮಹಿಳೆಯರು ಈ ಬಗ್ಗೆ ನನ್ನೊಂದಿಗಿನ ಸಂಭಾಷಣೆಗಳಲ್ಲಿ ಒಪ್ಪಿಕೊಂಡಿದ್ದಾರೆ ಕೂಡ. ಅರವತ್ತರ ಅಂಚಿನಲ್ಲಿದ್ದರೂ ಊರು ತುಂಬಾ ಪ್ರೇಯಸಿಯರನ್ನಿಟ್ಟುಕೊಂಡಿರುವ, ತನ್ನ ಮೊಮ್ಮಕ್ಕಳ ಪ್ರಾಯದ ಹೆಣ್ಣುಮಕ್ಕಳೊಂದಿಗೆ ದೇಹಸಂಬಂಧವನ್ನು ಇಟ್ಟುಕೊಂಡಿರುವ ಹಲವು ವೃದ್ಧ(?)ರನ್ನು ನಾನು ಬಲ್ಲೆ.

ಅಂಗೋಲಾದಲ್ಲಿ ಇವೆಲ್ಲಾ ಹುಬ್ಬೇರಿಸುವ ವಿಷಯಗಳೂ ಅಲ್ಲ. ಇಲ್ಲಿಯ ಹಳ್ಳಿಗಳಲ್ಲಿರುವ ಸೋಬಾ (ಸರಪಂಚ್) ಒಬ್ಬರು ವಿಚಿತ್ರವೆನಿಸುವ ಪದ್ಧತಿಯ ಬಗ್ಗೆ ನನ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ಈ ಪದ್ಧತಿಯ ಪ್ರಕಾರ ಏಳೆಂಟು ಪತ್ನಿಯರನ್ನು ಹೊಂದಿರುವ ಸೋಬಾನಿಗೆ ಎಲ್ಲಾ ಪತ್ನಿಯರೂ ಕೂಡ ಬಗೆಬಗೆಯ ಖಾದ್ಯಗಳನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಾರಂತೆ.

ಸೋಬಾ ಬಂದು ಎಲ್ಲವನ್ನೂ ರುಚಿ ನೋಡಿ ತನಗೆ ಇಷ್ಟವಾದ ಖಾದ್ಯವನ್ನು ಸಿದ್ಧಪಡಿಸಿದ ಪತ್ನಿಯೊಂದಿಗೆ ಅಂದಿನ ರಾತ್ರಿಯನ್ನು ಕಳೆಯುತ್ತಾನೆ. ವಿಶೇಷಗಳೇನಾದರೂ ಇದ್ದರೆ ಮಾಂಸದಡುಗೆಯನ್ನೂ ಅಂದು ಸಿದ್ಧಪಡಿಸಲಾಗುತ್ತದೆ. ಉಳಿದ ಪತ್ನಿಯರು ತಮ್ಮ ಪಾಡಿಗೆ ತಮ್ಮ ತಮ್ಮ ಗುಡಿಸಲುಗಳಲ್ಲಿ ಎಂದಿನಂತೆ ಜೊತೆಯಾಗಿರುತ್ತಾರೆ.

ಇಂಥದ್ದೇ ಒಂದು ವಿಚಿತ್ರ ಪದ್ಧತಿಯು ಕೆಲ ದಶಕಗಳ  ಹಿಂದೆ ಅಂಗೋಲಾದ ಸಾಮಾನ್ಯ ಜನಜೀವನದಲ್ಲೂ ಪ್ರಚಲಿತದಲ್ಲಿತ್ತು. ಇಲ್ಲೇನಾಗುತ್ತಿತ್ತೆಂದರೆ ಹರೆಯಕ್ಕೆ ಬಂದ ಗಂಡು/ಹೆಣ್ಣಿಗೆ ಲೈಂಗಿಕತೆಯ ಬಗ್ಗೆ ಒಂದು ಪ್ರಾಯೋಗಿಕ ಅನುಭವವನ್ನು ಕುಟುಂಬದ ಸದಸ್ಯರಿಂದಲೇ ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಆಗಷ್ಟೇ ದನಿ ಗಡುಸಾಗುತ್ತಿರುವ, ಮೀಸೆ ಬೆಳೆಯಲು ಶುರುವಾದ ಹುಡುಗನ ಬಳಿ ಆಕೆಯ ಸೋದರತ್ತೆಯು ಬಂದು ಒಂದು ರಾತ್ರಿಯನ್ನು ಕಳೆದು ದೇಹಸಂಬಂಧ ಅನ್ನುವುದು ಹೇಗಿರುತ್ತೆ ಎಂಬುದನ್ನು ಪ್ರಾಯೋಗಿಕವಾಗಿ ಅವನ ಅನುಭವಕ್ಕೆ ತರುತ್ತಿದ್ದಳು.

ಹೀಗೆಯೇ ಮುಟ್ಟಿನ ವಯಸ್ಸಿಗೆ ಬಂದ ಹೆಣ್ಣಿನೊಂದಿಗೆ ಮಾವನೋ, ಚಿಕ್ಕಪ್ಪನೋ ಬಂದು ಒಂದು ರಾತ್ರಿಯನ್ನು ಕಳೆಯುತ್ತಿದ್ದ. ನೀವು ವಯಸ್ಸಿಗೆ ಬಂದಿದ್ದೀರಿ, ಇನ್ನೇನು ಬೆರಳೆಣಿಕೆಯ ವರ್ಷಗಳಲ್ಲಿ ವಿವಾಹ ಬಂಧನಕ್ಕೆ ಬೀಳುತ್ತೀರಿ. ಹೀಗಿರುವಾಗ ಇವೆಲ್ಲಾ ನಿಮಗೆ ಮೊದಲೇ ಗೊತ್ತಿರಬೇಕು ಎಂಬ ಲೈಂಗಿಕತೆಯ ಜ್ಞಾನವನ್ನು ನೀಡಲು ಹೀಗೆ ಮಾಡಲಾಗುತ್ತಿತ್ತು.

ಆದರೆ ಇಂಥಾ ತಂತ್ರಗಳು ತಿರುಗುಬಾಣಗಳಾಗಿದ್ದೇ ಹೆಚ್ಚು. ಬಹುಬೇಗನೇ ದೇಹಸುಖದ ರುಚಿ ನೋಡಿದ ಹರೆಯದ ಮಕ್ಕಳು ಮುಂದೆ ಇವುಗಳನ್ನು ಹುಡುಕಿಕೊಂಡು ಹೊಸ ಹೊಸ ಲೈಂಗಿಕ ಸಂಗಾತಿಗಳನ್ನು ಅರಸಿಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಈ ಪದ್ಧತಿಯು ಸದ್ಯಕ್ಕಂತೂ ಅಂಗೋಲಾದಲ್ಲಿಲ್ಲ. ಇದ್ದರೂ ದಕ್ಷಿಣ ಅಂಗೋಲಾದ ಕೆಲ ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ಜೀವಂತವಾಗಿರಬಹುದೇನೋ. ಆದರೆ ಸದ್ಯದ ಪೀಳಿಗೆಯ ಬಹುತೇಕ ಅಂಗೋಲನ್ನರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ.

ಕಳೆದ ಏಳೆಂಟು ದಶಕಗಳಲ್ಲಿ ಕ್ರಮೇಣ ಬ್ರೆಜಿಲ್ ಮತ್ತು ಪೋರ್ಚುಗೀಸ್ ಸಂಸ್ಕøತಿಗಳ ಕಡೆಗೆ ಆಕರ್ಷಿತರಾದ ಅಂಗೋಲನ್ನರು ಮೆಲ್ಲಗೆ ಪಾಶ್ಚಾತ್ಯರಂತಾಗಲು ಪ್ರಯತ್ನಿಸಿದ್ದಂತೂ ಸತ್ಯ. ಆ ಸೆಳೆತವು ಇಂದಿಗೂ ಅಂಗೋಲನ್ನರಲ್ಲಿದೆ. ಹೀಗಾಗಿಯೇ ಹರೆಯಕ್ಕೆ ಬಂದು ಲೈಂಗಿಕ ಹಾರ್ಮೋನುಗಳು ಮೆಲ್ಲನೆ ತಮ್ಮ ಆಟವನ್ನು ಪ್ರದರ್ಶಿಸುವ ಹೊತ್ತಿಗೇ ಬಹಳಷ್ಟು ಹದಿಹರೆಯದವರು ತಮ್ಮ ದೇಹತೃಷೆಗಳನ್ನು ತೀರಿಸಿಕೊಳ್ಳಲು ಮುಗಿಬೀಳುತ್ತಿರುವುದಲ್ಲದೆ ಅದನ್ನೇ ಚಟವನ್ನಾಗಿಸಿಕೊಂಡವರೂ ಇದ್ದಾರೆ.

ಹೀಗಾಗಿಯೇ ಅಂಗೋಲನ್ ಹೆಣ್ಣುಮಕ್ಕಳು ಬಹುಬೇಗನೇ ಗರ್ಭವನ್ನು ಧರಿಸುವುದು, ಕೈಗೊಂದು ಕಂಕುಳಿಗೊಂದು ಎನ್ನುವಂತೆ ಮನೆ ತುಂಬಾ ಮಕ್ಕಳನ್ನು ಹೆತ್ತು ಸಂಭಾಳಿಸುವುದು ಇಲ್ಲಿ ಕಾಣಬರುವ ಸಾಮಾನ್ಯ ದೃಶ್ಯಗಳಲ್ಲೊಂದು. ಹಲವು ಬಾರಿ ವಯಸ್ಸಿನ ಖಯಾಲಿಗೆ ಬಿದ್ದು ತಮ್ಮ ಪ್ರೇಯಸಿ/ಪತ್ನಿಯರಿಗೆ ಮಕ್ಕಳನ್ನು ಕರುಣಿಸಿದ ಗಂಡಸರು ಏಕಾಏಕಿ ಎದ್ದುಹೋಗುವ ಪ್ರಕರಣಗಳೂ ಇಲ್ಲಿ ಸಾಕಷ್ಟಿವೆ. ಇಂಥಾ ಸಂದರ್ಭಗಳಲ್ಲಿ ಹೆಣ್ಣು ಏಕಾಂಗಿಯಾಗಿ ತನ್ನ ಮಕ್ಕಳನ್ನು ಹೇಗೋ ಸಾಕುತ್ತಾಳೆ. ಕಳೆದ ವರ್ಷ ನಿಧನನಾಗಿದ್ದ 32 ವರ್ಷದ ನಮ್ಮ ಯುವಸಿಬ್ಬಂದಿಯೊಬ್ಬ ಬರೋಬ್ಬರಿ ಒಂಭತ್ತು ಮಕ್ಕಳನ್ನು ಅನಾಥರನ್ನಾಗಿಸಿದ್ದ.

”ವೀಜ್ ಸೇರಿದಂತೆ ಅಂಗೋಲಾದಾದ್ಯಂತ ವೇಶ್ಯಾವಾಟಿಕೆಯ ಚಟುವಟಿಕೆಗಳು ಮಿತಿಮೀರಿ ಬೆಳೆಯತೊಡಗಿವೆ. ಆಧುನಿಕತೆಯ ಆಕರ್ಷಣೆಗೆ ಬೀಳುವ ಗಂಡುಮಕ್ಕಳು ದುಡಿದು ಸಂಪಾದಿಸುವ ಗೋಜಿಗೆ ಹೋಗದೆ ಕಳ್ಳತನ, ದರೋಡೆ, ಸುಲಿಗೆ ಇತ್ಯಾದಿ ಅಪರಾಧಗಳಲ್ಲಿ ತೊಡಗಿಸಿಕೊಂಡರೆ ವಿಲಾಸಿ ಜೀವನದ ಕನಸನ್ನು ಕಾಣುವ ಹರೆಯದ ಹೆಣ್ಣುಮಕ್ಕಳು ಪುಡಿಗಾಸಿಗಾಗಿ ತಮ್ಮ ದೇಹವನ್ನು ಮಾರಿಕೊಂಡು ದೇಹವನ್ನು ಖಾಯಿಲೆಗಳ ಗೂಡಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ”, ಎನ್ನುತ್ತಿದ್ದರು ಡಾಕ್.

ಲುವಾಂಡಾದಲ್ಲಿ ಸಾಮಾನ್ಯ ರೆಸ್ಟೊರೆಂಟುಗಳಲ್ಲೂ ವಿದೇಶೀಯರನ್ನು ಮತ್ತು ಹೆಂಗಸರನ್ನು ಕಂಡ ಕೂಡಲೇ ಕಾಸುಬಿಚ್ಚಿ ದುಂದುವೆಚ್ಚ ಮಾಡುವ ಮಧ್ಯವಯಸ್ಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ ತರುಣಿಯರನ್ನು ನಾನು ಲೆಕ್ಕವಿಲ್ಲದಷ್ಟು ಬಾರಿ ಕಂಡಿದ್ದೆ. ನೋಡಲು ಸಾಮಾನ್ಯ ಹೆಣ್ಣುಮಕ್ಕಳಂತೆ ಕಾಣುವ, ನಾಲ್ಕೈದು ಮಂದಿಯ ಗುಂಪಿನಲ್ಲಿ ಗ್ರಾಹಕರಂತೆ ಬರುತ್ತಿದ್ದ ಈ ಹೆಣ್ಣುಮಕ್ಕಳನ್ನು ಇವರು ಇದಕ್ಕಾಗಿಯೇ ಬರುವವರು ಎಂಬುದನ್ನು ಗುರುತಿಸುವುದೂ ಕೂಡ ಬಹಳ ಕಷ್ಟ.

ಹೀಗೆ ಬಂದ ತರುಣಿಯರಿಗಾಗಿ ಖಾದ್ಯಗಳನ್ನು ತರಿಸಿಕೊಳ್ಳುತ್ತಿದ್ದ ಈ ಪುರುಷ ಗ್ರಾಹಕರು ನಂತರ ಅವರನ್ನು ಖಾಸಗಿಯಾಗಿ ಕರೆದುಕೊಂಡು ಹೋಗುವ ದೃಷ್ಟಾಂತಗಳನ್ನು ನಾನು ಗಮನಿಸಿದ್ದೆ. ಇವರಲ್ಲಿ ಬಹುತೇಕ ಹೆಣ್ಣುಮಕ್ಕಳು ಕಾಲೇಜು ವಿದ್ಯಾರ್ಥಿನಿಯರೋ, ಲುವಾಂಡಾ ಮಹಾನಗರಿಯಲ್ಲಿ ತರಹೇವಾರಿ ಕೆಲಸಗಳಿಗಾಗಿ ಬಂದು ತಾತ್ಕಾಲಿಕವಾಗಿ ನೆಲೆಯೂರಿದವರೂ ಆಗಿದ್ದಾರೆ ಎಂಬ ಖಚಿತ ಮಾಹಿತಿಯು ನನಗೆ ದೊರಕಿತ್ತು. ಅಂಗೋಲಾದ ಹಲವಾರು ಭಾಗಗಳಲ್ಲಿ ವ್ಯವಸ್ಥಿತವಾಗಿ ವೇಶ್ಯಾವಾಟಿಕೆಗಳು ನಡೆಯುತ್ತಿದ್ದರೆ ಉಳಿದ ಭಾಗಗಳಲ್ಲಿ ಇಂಥಾ ಸನ್ನಿವೇಶಗಳು ಪದೇ ಪದೇ ಎದುರಾಗುತ್ತಾ ಸಮಸ್ಯೆಯ ಗಂಭೀರತೆಗೆ ಕನ್ನಡಿ ಹಿಡಿಯುವಂತಿದ್ದವು.

ನನ್ನ ಕೀನ್ಯಾದ ಪರಿಚಿತನೊಬ್ಬ ತನ್ನ ವೈದ್ಯ ಗೆಳೆಯನ ಬಗ್ಗೆ ಹೇಳುತ್ತಾ ದಿನದ ಹೊತ್ತಿನಲ್ಲಿ ಸಾಮಾನ್ಯ ಕ್ಲಿನಿಕ್ ಆಗಿರುವ ಆತನ ಕಚೇರಿ ರಾತ್ರಿಯ ಹೊತ್ತಿಗೆ ರಹಸ್ಯ ಗರ್ಭಪಾತಗಳ ಪ್ರಯೋಗಶಾಲೆಯಾಗಿ ಬದಲಾಗುತ್ತದೆ ಎಂದಿದ್ದ. ಬಹುಬೇಗನೇ ಗರ್ಭವನ್ನು ಧರಿಸಿ ಮಕ್ಕಳನ್ನು ಒಂದರ ಹಿಂದೊಂದಂತೆ ಸಾಲಾಗಿ ಹುಟ್ಟಿಸುವ ಅಂಗೋಲಾದ ಬಹುಪಾಲು ಎಳೆಯ ಹೆಣ್ಣುಮಕ್ಕಳು ತಮ್ಮ ವಿದ್ಯಾಭ್ಯಾಸ, ಭವಿಷ್ಯಗಳ ಜೊತೆ ಚೆಲ್ಲಾಟವಾಡುತ್ತಾ ಎಲ್ಲೂ ಸಲ್ಲದವರಂತೆ ಬದುಕುತ್ತಿದ್ದಾರೆ. ದೇಶದ ಯುವಶಕ್ತಿಯು ಈ ಮಟ್ಟದಲ್ಲಿ ಅಡ್ಡದಾರಿಗಿಳಿದು ನಾಶವಾಗುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಹೌದು. ಈ ಪರಿಸ್ಥಿತಿಯು ಆಫ್ರಿಕಾದ ಹಲವು ದೇಶಗಳಲ್ಲಿದೆ ಎಂಬುದೂ ಕೂಡ ವಿಷಾದದ ಸಂಗತಿ.

ಇನ್ನು ಕಾಂಡೋಮ್ ಗಳ ಬಗ್ಗೆ ಅಂಗೋಲನ್ ಪುರುಷರಿಗಿರುವ ತಾತ್ಸಾರವೂ ಕೂಡ ಏಡ್ಸ್ ಅನ್ನು ಹದ್ದುಮೀರಿ ಹರಡುವಂತೆ ಮಾಡಲು ಯಶಸ್ವಿಯಾಗಿದೆ. ನನಗೆ ಕಾಂಡೋಮ್ ಗಳನ್ನು ಬಳಸದೇ ಮಾಡುವ `ಸ್ಕಿನ್-ಟು-ಸ್ಕಿನ್’ ಸೆಕ್ಸೇ ಇಷ್ಟ ಎನ್ನುವ ಅಂಗೋಲನ್ ಪುರುಷರು ತಮ್ಮ ಕ್ಷಣಿಕ ಸುಖಕ್ಕಾಗಿ ತನ್ನ ಮತ್ತು ತನ್ನ ಸಂಗಾತಿಗಳ ಜೀವನವನ್ನು ಅಪಾಯದಂಚಿಗೆ ದೂಡುತ್ತಿದ್ದಾರೆ. ‘

‘ಅಂಗೋಲಾದ ರಾಜಧಾನಿ ಲುವಾಂಡಾದಲ್ಲಿ ನಾನು ಬೆರಳೆಣಿಕೆಯ ಪತ್ರಿಕೆಗಳನ್ನು ನೋಡಿದ್ದೆ. ವೀಜ್ ನಲ್ಲಿ ದಿನಪತ್ರಿಕೆಗಳೇ ಅಸ್ತಿತ್ವದಲ್ಲಿಲ್ಲ. ಆದರೆ ರೇಡಿಯೋ ಅಥವಾ ಟೆಲಿವಿಷನ್ ಗಳ ಮೂಲಕವಾದರೂ ಏಡ್ಸ್ ಬಗ್ಗೆ, ಕಾಂಡೋಮ್ ಗಳ ಬಳಕೆಯ ಬಗ್ಗೆ ಜಾಹೀರಾತು, ಪ್ರಕಟಣೆಗಳ ಮೂಲಕ ಜನಜಾಗೃತಿಯನ್ನು ಹುಟ್ಟಿಸಬಹುದಲ್ಲವೇ?”, ಎಂದು ಡಾಕ್ ರಲ್ಲಿ ಕೇಳಿದೆ ನಾನು.

”ಹಾಗೆ ಮಾಡಬಹುದೇನೋ ಸರಿ. ಆದರೆ ಅಂಥಾ ಕೆಲಸಗಳೇನೂ ಆಗುತ್ತಿಲ್ಲ. ಉದಾಹರಣೆಗೆ ಸರಕಾರವು ಒಮ್ಮೆ ಕಾಂಡೋಮ್ ಬಳಕೆಯನ್ನು ಜನಪ್ರಿಯಗೊಳಿಸಲು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕಾಂಡೋಮ್ ಗಳನ್ನು ವಿತರಿಸಲು ಪ್ರಾರಂಭಿಸಿತ್ತು. ಆದರೆ ಅವುಗಳನ್ನು ಸಮರ್ಪಕವಾಗಿ ಬಳಸುವುದು ಹೇಗೆ, ಅವುಗಳನ್ನು ಎಲ್ಲಿಂದ ಪಡೆದುಕೊಳ್ಳಬಹುದು ಎಂಬ ಮಾಹಿತಿಗಳು ಜನರಿಗೆ ತಲುಪಬೇಕಾದ ಮಟ್ಟದಲ್ಲಿ ತಲುಪಲಿಲ್ಲ.

ವೀಜ್ ನಲ್ಲಿ ಏನಾಯಿತು ಎಂದು ಕೇಳುತ್ತೀರಾ? ಒಮ್ಮೆ ಇಲ್ಲಿಯ ಆರೋಗ್ಯ ಮಂತ್ರಾಲಯದ ಕಚೇರಿಗೆ ಬಂದಿದ್ದ ನಾನು ಹಿರಿಯ ಅಧಿಕಾರಿಯೊಬ್ಬರ ಕೋಣೆಯಲ್ಲಿ ಇಟ್ಟಿದ್ದ ಕಾಂಡೋಮ್ ಗಳ ಡಬ್ಬಗಳನ್ನು ನೋಡಿದ್ದೆ. ಜನಸಾಮಾನ್ಯರು ಹೆಚ್ಚು ಭೇಟಿ ಕೊಡುವುದು ಮಂತ್ರಾಲಯದ ಕಚೇರಿಗೋ ಅಥವಾ ಆಸ್ಪತ್ರೆಗಳಿಗೋ ನೀವೇ ಹೇಳಿ. ಈ ಕಚೇರಿಗಳಿಗೆ ಜನರು ಬರುವುದು ಕೆಲ ದಾಖಲಾತಿ ಸಂಬಂಧಿ ಕೆಲಸಗಳಿಗೆ ಮಾತ್ರ. ಮಂತ್ರಾಲಯದ ಕಚೇರಿಯಲ್ಲಿ ಕಾಂಡೋಮ್ ಗಳು ರಾಶಿ ಬಿದ್ದಿವೆ, ತೆಗೆದುಕೊಂಡು ಹೋಗ್ರಪ್ಪಾ ಎಂದು ಜನರಿಗೆ ಹೇಳುವುದಾದರೂ ಹೇಗೆ? ಅವುಗಳು ಅಲ್ಲೇ ಡಬ್ಬದಲ್ಲಿ ಕೊಳೆಯುತ್ತಿದ್ದವು”, ಎಂದು ವಿಷಾದದಿಂದ ಹೇಳುತ್ತಿದ್ದರು ಡಾಕ್.

ಇನ್ನು ಏಡ್ಸ್ ನಿರ್ಮೂಲನೆಗೆ ಕೆಲ ಸಮಿತಿಗಳನ್ನು, ಕಾರ್ಯಕರ್ತರ ಗುಂಪುಗಳನ್ನು ಸರಕಾರವು ಈ ಹಿಂದೆ ನೇಮಿಸಿದ್ದರೂ ಇಲ್ಲಿಯ ಸಿಬ್ಬಂದಿಗಳಿಗೆ ಅವಶ್ಯಕ ತರಬೇತಿಗಳನ್ನು ಕಾಲಕಾಲಕ್ಕೆ ನೀಡುವುದರಲ್ಲಿ ವ್ಯವಸ್ಥೆಯು ವಿಫಲವಾಗಿದೆ. ಹಲವಾರು ಬಾರಿ ಹಣಕಾಸಿನ ಕೊರತೆಗಳಿಂದಾಗಿ ಕೆಲ ಯೋಜನೆಗಳು ಅರ್ಧಕ್ಕೇ ನಿಂತುಹೋಗಿವೆ ಎಂದು ಹೇಳುವ ಕೆಲ ಸಂಘಟನೆಗಳ ಕಾರ್ಯಕರ್ತರು ಸಂಬಳ, ಲೇಖನ ಸಾಮಗ್ರಿಗಳಂತಹ ಅಗತ್ಯ ವಸ್ತುಗಳ ಖರೀದಿಗೂ ಸಂಬಂಧಿ ಮೂಲಗಳಿಂದ ನಿಧಿಗಳು ಬರುವುದು ನಿಂತುಹೋಗಿ ಯೋಜನೆಗಳು ನೆಲಕಚ್ಚಿದವು ಎನ್ನುತ್ತಾರೆ. ಒಟ್ಟಿನಲ್ಲಿ ಏಡ್ಸ್ ನ ವಿಚಾರಕ್ಕೆ ಬಂದರೆ ಅಂಗೋಲಾವು ಸಾಗಬೇಕಾದ ದೂರ ಸಾಕಷ್ಟಿದೆ.

4 Responses

  1. Shreedevi keremane says:

    ಚೆನ್ನಾಗಿದೆ ಲೇಖನ

  2. ಕೈದಾಳ್ ಕೃಷ್ಣಮೂರ್ತಿ says:

    ಅಂಗೋಲಾದ ಯುವಕರ ಯೌವ್ವನ ಲೈಂಗಿಕ ಆಸಕ್ತಿಯಲ್ಲಿ ಸೋರಿ ಹೋಗುತ್ತಿರುವುದನ್ನು ಚೆನ್ನಾಗಿ ವಿವರಿಸಿದ್ದೀರಿ

Leave a Reply

%d bloggers like this: