fbpx

ಆಗಲೇ ‘ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾ ಕಣ್ಣಿಗೆ ಬಿದ್ದಿದ್ದು..!!

ನಾನೇನೂ ಶ್ರೀದೇವಿಯ ದೊಡ್ಡ ಫ್ಯ‍ಾನ್ ಅಲ್ಲ! ಯಾವುದೋ ಎರಡು ಫಿಲ್ಮ್ ಬಿಟ್ಟರೆ ಮತ್ಯಾವುದನ್ನೂ ನೋಡಿಲ್ಲ. ಯಾವುದಾದರೂ ಹಳೆಯ ಶ್ರೀದೇವಿಯ ಫೋಟೋ ತೋರಿಸಿ ಯಾರು ಎಂದು ಕೇಳಿದರೂ ಖಂಡಿತವಾಗಿಯೂ ಗುರುತಿಸಲು ಸಾಧ್ಯವಿಲ್ಲ ನಂಗೆ.

ಆದರೆ ಅದೊಂದು ಪಾತ್ರ ಎಷ್ಟು ಆವರಿಸಿಕೊಂಡಿದೆ ನನ್ನ ಎಂದರೆ ‘ಅಯ್ಯೋ! ಶಶಿ ತೀರಿಕೊಂಡುಬಿಟ್ಲಾ’ ಅನ್ನೋ ಭಾವವೇ ಇನ್ನೂ ಕಾಡುತ್ತಿದೆ.

ಭಾಷೆಯ ನಡುವಿನ ತೊಡಕನ್ನು ಅದ್ಭುತವಾಗಿ ಕಟ್ಟಿಕೊಟ್ಟ ಚಿತ್ರವದು. ಅದರಲ್ಲೂ ಶಶಿಯ ನೋವುಗಳು, ಅಸಹಾಯಕತೆ ನಮ್ಮೊಳಗಿನ ಅಂಥದೇ ಕಥೆಗಳಿಗೆ ಹಿಡಿದ ಕನ್ನಡಿ. ಯಾಕಷ್ಟು ಆ ಚಿತ್ರವಾಗಲಿ, ಪಾತ್ರವಾಗಲಿ ಇಷ್ಟವಾಗಿದೆ ಎಂದು ತಿಳಿಸಬೇಕಾದರೆ ಮತ್ತಷ್ಟು ಕಥೆ ಹೇಳಬೇಕಾದೀತು..

ಏಳನೇ ತರಗತಿಯವರೆಗೆ ಕನ್ನಡ ಮೀಡಿಯಂ ನಲ್ಲೇ ಓದಿದ್ದು ನಾನು. ಅಪ್ಪನಿಗೆ ಕನ್ನಡದ ಮೇಲಿದ್ದ ಅಭಿಮಾನವೋ ಅಥವಾ ಇಂಗ್ಲಿಷ್ ಕಾನ್ವೆಂಟ್ಗಳ ಫೀಸು ಹುಟ್ಟಿಸಿದ್ದ ಭಯಕ್ಕೋ ಗೊತ್ತಿಲ್ಲ, ಒಟ್ಟಂತೂ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ.. ಇಂಗ್ಲೀಷ್ ಅನ್ನೂ ಕನ್ನಡದಲ್ಲೇ ಪಾಠ ಮಾಡುತ್ತಿದ್ದರು ನಮಗೆ.

ಸ್ವಾತಂತ್ರ್ಯೋತ್ಸವಕ್ಕೋ, ಗಣರಾಜ್ಯೋತ್ಸವಕ್ಕೋ ಎಲ್ಲ ಶಾಲೆಯ ಮಕ್ಕಳನ್ನು ಒಟ್ಟಿಗೇ ಸೇರಿಸಿ ಮಾರ್ಚ್ ಫಾಸ್ಟ್ ಅಥವಾ ಡ್ರಿಲ್ ಮಾಡಿಸುತ್ತಿದ್ದರು. ಇಂಗ್ಲೀಷ್ ಶಾಲೆಯ ಮಕ್ಕಳ್ಯಾರಾದರೂ ಬಂದರೆ ಅದೆಷ್ಟು ಆಡಿಕೊಂಡು ನಗುತ್ತಿದ್ದೆವೆಂದರೆ ಮತ್ತೊಂದು ತಿಂಗಳಿಗಾಗುವಷ್ಟು ಮನರಂಜನೆಯ ವಸ್ತು ದಕ್ಕಿಬಿಡುತ್ತಿತ್ತು.

ಅವರು ಮಾತಿನ ನಡುವೆ ಉಪಯೋಗಿಸುತ್ತಿದ್ದ ಆಂಗ್ಲ ಪದಗಳು, ಟೀಚರ್ ಜೊತೆ ಇಂಗ್ಲೀಷ್ ನಲ್ಲೇ ಮಾತಾಡುತ್ತಿದ್ದ ರೀತಿ ನಮಗೆ ಹಾಸ್ಯಾಸ್ಪದವೆನಿಸುತ್ತಿತ್ತು.

ಆ ಹಾವಭಾವಗಳನ್ನೆಲ್ಲಾ ಅನುಕರಿಸಿ, ಅವಕಾಶ ಸಿಕ್ಕಾಗಲೆಲ್ಲಾ ಅವರನ್ನು ಗೋಳುಹೊಯ್ದುಕೊಳ್ಳುತ್ತಿದ್ದೆವು. ಅಪ್ಪಿ ತಪ್ಪಿ ನಮ್ಮೊಡನೆಯೇನಾದರೂ ಇಂಗ್ಲೀಷ್ ನಲ್ಲಿಯೇ ಮಾತಾಡಲು ಬಂದರೆ ‘ಯಾಕೆ? ಕನ್ನಡ ಬರಲ್ವಾ..? ಕನ್ನಡದಲ್ಲಿ ಮಾತಾಡಿದ್ರೆ ಮಾತ್ರ ಉತ್ತರ ಕೊಡೋದು ನಾವು’ ಅಂತೊಂದು ಜೋರು ದನಿಯಲ್ಲಿ ರೋಫು ಹಾಕಿಬಿಡುತ್ತಿದ್ದೆವು. ಅದೆಲ್ಲಿತ್ತೋ ಅಷ್ಟೊಂದು ಧೈರ್ಯ ಆಗ.. ಈಗ ನೆನಸಿಕೊಂಡ್ರೂ ಆಶ್ಚರ್ಯವಾಗತ್ತೆ. 6ನೇ ತರಗತಿಗೆ ಸ್ವಲ್ಪ ದೊಡ್ಡ ಊರಿಗೆ ಬಂದಮೇಲೆ ಮೊದಲಿದ್ದ ಧೈರ್ಯ ಇರಲಿಲ್ಲವಾದರೂ, ಇಂಗ್ಲೀಷ್ ಬರದಿರುವುದು ಅವಮಾನಕರ ಸಂಗತಿಯಂತೂ ಆಗಿರಲಿಲ್ಲ.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ನನ್ನ ಪ್ರತಿಭಾ ಕಾರಂಜಿಗೆ ಅಂತ ಯಾವುದೋ ಬೇರೆ ಶಾಲೆಗೆ ಕರೆದೊಯ್ದಿದ್ದರು. ಜಾನಪದ ನೃತ್ಯದ ಸ್ಪರ್ಧೆ ಅದು. ಯಾವುದೋ ಶಾಲೆಯ ಹುಡುಗಿ ಬೆಂಡಿನಿಂದ ನವಿಲಿನ ಚಿತ್ರವನ್ನೇನೋ ಹಿಡಿದು ತಂದಿದ್ದಳು! ಯಾವುದೋ ಜೋಷ್ ನಲ್ಲಿ ಕುಣಿದುಕೊಂಡು ಓಡುತ್ತಿದ್ದ ನಂಗೆ ಅವಳಿಗೆ ನನ್ನ ಕೋಲಾಟದ ಕೋಲು ತಾಗಿದ್ದಾಗಲೀ, ಅವಳ ನವಿಲು ಮುರಿದಿದ್ದಾಗಲೀ ಪರಿವಿಗೇ ಬಂದಿರಲಿಲ್ಲ. ಕಣ್ಮುಚ್ಚಿ ಬಿಡುವಷ್ಟರಲ್ಲಿ ಆ ಹುಡುಗಿ ನನ್ನೂ ಕರೆದುಕೊಂಡು ಅವಳ ಟೀಚರ್ ಹತ್ರ ಎಳೆದುಕೊಂಡೇ ಹೋದಳು.

ನಂಗೆ ಯಾಕೆ ಕರ್ಕೊಂಡು ಹೋಗ್ತಿದಾಳೆ ಅಂತನೂ ಅರ್ಥವಾಗದೇ ಸುಮ್ಮನೇ ಮುಖ ನೋಡುತ್ತಿದ್ದೆ. ಆ ಮಿಸ್ ಹತ್ತರ ‘This girl broke my peacock ma’m, tell her to ask sorry and punish her’ ಅಂತಂದ್ಲು! ಅವಳಾಡಿದ್ದು ಕೇಳಿಸಿತೇ ಹೊರತು ಒಂದಕ್ಷರ ಅರ್ಥವಾಗಲಿಲ್ಲ ನಂಗೆ.

ಅವಳ ಮಿಸ್ ಮತ್ತೂ ಇಂಗ್ಲೀಷ್ ನಲ್ಲೇ ಏನೋ ಬೈದುಬಿಟ್ರು ನಂಗೆ. ‘ಬೇಕಂತ ಮಾಡಿದ್ದಲ್ಲ ನಾನು , sorry ಕಣೇ!’ ಅಂತ ಅವಳಿಗರ್ಥ ಆಗೋ ಹಾಗೇ ಆ ಭಾಷೆಯಲ್ಲಿ ಹೇಳಲಾರದ ಸಂಕಟ ಒಂದೆಡೆಯಾದ್ರೆ , ಎಲ್ಲರೆದುರೂ ನಂಗರ್ಥವಾಗದ ಭಾಷೆಯಲ್ಲಿ ಬೈಸಿಕೊಂಡ ಅವಮಾನ ಇನ್ನೊಂದೆಡೆ.

ಕುಗ್ಗಿಹೋಗುವುದೇನೆಂದು ಅವತ್ತಿಗೆ ತಿಳಿದಿತ್ತು. ಸುಮ್ಮನೇ ಕಣ್ಣೀರು ಹಾಕಿಕೊಂಡು ಅಲ್ಲಿಂದ ಹೊರಬರುವುದರ ಹೊರತು ಇನ್ನೇನೂ ಮಾಡಲು ತೋಚಿರಲಿಲ್ಲ. ಅವತ್ತು ಶುರುವಾದ ಹಿಂಜರಿಕೆ, ಭಯ, ತೊಳಲಾಟಗಳು ಮುಂದೆ ಬದುಕಿನ ಸುದೀರ್ಘ ಹತ್ತು ವರ್ಷಗಳು ಬಿಡದೇ ಕಾಡಿದ್ದವು. ಹೇಗಾದರೂ ಇಂಗ್ಲೀಷ್ ಕಲಿಯಲೇಬೇಕೆಂಬ ಹಠ ತೊಟ್ಟು ಹೈ ಸ್ಕೂಲ್ ಗೆ ತೀರಾ ಅನ್ನೋಷ್ಟು ಅತ್ತು-ಕರೆದು ರಂಪ ಮಾಡಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗೆ ಸೇರಿದ್ದೆ.

8ನೇ ತರಗತಿಯ ಮೊದಲ ದಿನದ ಶಾಲೆ ಸ್ಫುಟವಾಗಿ ನೆನಪಿದೆ. ಸಮಾಜ, ಗಣಿತ, ವಿಜ್ಞಾನ ಎಲ್ಲ ವಿಷಯಗಳನ್ನೂ ಇಂಗ್ಲೀಷ್ ನಲ್ಲೇ ಹೇಳಿಕೊಡುತ್ತಿದ್ದರು ಅವರು. ಅಕ್ಕ ಪಕ್ಕ ಕೂತವರೆಲ್ಲಾ ಅರ್ಥವಾಯಿತೆಂಬಂತೆ ತಲೆ ಆಡಿಸುತ್ತಿದ್ದರೆ ಕೂತಲ್ಲೇ ಕಂಗಾಲಾಗಿಹೋಗಿದ್ದೆ ನಾನು. ಎಲ್ಲಿ ಟೀಚರ್ ಎದ್ದು ನಿಲ್ಲಿಸಿ ಇಂಗ್ಲೀಷ್ ನಲ್ಲಿ ಏನಾದರೂ ಪ್ರಶ್ನೆ ಕೇಳಿಬಿಡುತ್ತಾರೋ, ನಾ ತಪ್ಪು ತಪ್ಪು ಉತ್ತರಿಸಿ ನಗೆಪಾಟಲಿಗೆ ಗುರಿಯಾಗುತ್ತೀನೇನೋ ಎಂಬ ಭಯ ಕೈ ಕಾಲುಗಳಲ್ಲಿ ನಡುಕ ಹುಟ್ಟಿಸುತ್ತಿತ್ತು.

ಸ್ವಪರಿಚಯವನ್ನು ಮಾತ್ರ ಅಚ್ಚುಕಟ್ಟಾಗಿ ಉರುಹೊಡೆದು, ಕೇಳಿದಾಕ್ಷಣ ಹೇಳಿ ಕುಳಿತುಬಿಡುತ್ತಿದ್ದಾಗ ಮೂಡುತ್ತಿದ್ದ ‘ಉಫ್’ ಎಂಬ ಉಸಿರು ಬದುಕಿನ ಮೊದಲ ಸಮಾಧಾನ. ಅರೆಘಳಿಗೆಯೂ ಬಾಯಿಮುಚ್ಚಿ ಅಭ್ಯಾಸವಿಲ್ಲದ ನಾನು, ಹದಿನೈದೇ ದಿನಗಳಲ್ಲಿ ಕ್ಲಾಸಿನ ಅತೀ silent ವಿದ್ಯಾರ್ಥಿಯಾಗಿದ್ದೆ.

ಅಲ್ಲಿಯವರೆಗೂ 1st rank ನಿಂದ ಯಾವತ್ತೂ ಕೆಳಗಿಯದ ನಾನು, ಮೊದಲ ತಿಂಗಳ ಟೆಸ್ಟ್ ನ ವಿಜ್ಞಾನದಲ್ಲಿ ಫೇಲ್ ಆಗಿಬಿಟ್ಟಿದ್ದೆ. ಪ್ರತಿ ದಿನವೂ ಮನೆಗೆ ಬಂದು ‘ನಂಗೇನೂ ಅರ್ಥ ಆಗಲ್ಲ ಶಾಲೆಲೀ.. ಕಷ್ಟ ಆಗ್ತಿದೆ ನಂಗೆ’ ಅಂತ ಅಳುತ್ತಿದ್ದರೆ ಏನು ಮಾಡಬೇಕೆಂದು ತೋಚದೇ ಅಮ್ಮನೂ ಪಕ್ಕದಲ್ಲಿ ಕೂತು ಅಳುತ್ತಿದ್ದಳು.

‘ಇಷ್ಟ್ ಕಷ್ಟ ಆಗೋದಾದರೆ ಈ ಶಾಲೆ ಬಿಟ್ಟು ಬೇರೆ ಶಾಲೆ ಸೇರ್ಕೊ.. ಕನ್ನಡ ಮೀಡಿಯಂ ನಲ್ಲೇ ಓದು. ದಿನಾ ಮನೆಗ್ ಬಂದು ಅಳೋದನ್ನ ನಿಲ್ಸು’ ಅಂತ ಅಪ್ಪ ಬೈದುಬಿಟ್ಟಿದ್ದರು ಅವತ್ತು. ಒಂದಕ್ಕೆ ನಾಲ್ಕು ಪಟ್ಟು ಓದಿ , ‘spoken english’ ತರಗತಿಗಳಿಗೆಲ್ಲಾ ಹೋಗಿ, ‍ಎಷ್ಟೆಷ್ಟೋ ಒದ್ದಾಡಿ ಕಡೆಗೂ 10ನೇ ಕ್ಲಾಸ್ ಮುಗಿಯುವಷ್ಟರಲ್ಲಿ ಮಾತನಾಡಿದರೆ ಅರ್ಥವಾಗುವಷ್ಟು, ಓದಿದ್ದನ್ನು ಬರೆಯುವಷ್ಟು ಇಂಗ್ಲೀಷ್ ನ್ನು ಅರಗಿಸಿಕೊಂಡಿದ್ದೆ.

ಆಮೇಲಿನೊಂದಷ್ಟು ವರ್ಷಗಳು ಅಳುಕಿತ್ತಾದರೂ, ಅದೊಂದು ಸಮಸ್ಯೆಯಾಗಿರಲಿಲ್ಲ. ಕಡೆಯ ವರ್ಷದ ಇಂಜಿನಿಯರಿಂಗ್ ಬಂದಾಗ ಸಮಸ್ಯೆಯ ಇನ್ನೊಂದು ಮುಖ ತೆರೆದುಕೊಂಡಿತ್ತು. ಅರ್ಥವಾದರೆ ಸಾಕೇ? ತಿರುಗಿ ಮಾತಾಡಲು ಬರಬೇಕಲ್ಲ! ಕಾಲೇಜಿನ ಯಾವುದೋ ಸಮಾರಂಭಕ್ಕೆ ಬಂದಿದ್ದ ಅತಿಥಿಯ ಪರಿಚಯವನ್ನು ಇಂಗ್ಲೀಷ್ ನಲ್ಲಿ ಮಾಡುವಷ್ಟರಲ್ಲಿ ಜೀವ ಬಿದ್ದುಹೋಗಿತ್ತು.

ಮತ್ತೆ ಎದುರಾಗಿದ್ದು ಇಂಟರ್ ವ್ಯೂ ಎಂಬ ಮಹಾಯುದ್ಧ . MNC ಇಂದ ಬರುವ ಜನ ಕೇಳುವ ಪ್ರಶ್ನೆಗಳಿಗೆಲ್ಲಾ ಇಂಗ್ಲೀಷ್ ನಲ್ಲೇ ಉತ್ತರಿಸಬೇಕೆಂಬ ನಿಯಮವೇ ನನ್ನೆಲ್ಲಾ ಆತ್ಮವಿಶ್ವಾಸವನ್ನೂ ಮಣ್ಣುಪಾಲಾಗಿಸಿತ್ತು. ಇಂಗ್ಲೀಷ್ ನಲ್ಲಿ ಮಾತನಾಡುವುದನ್ನು ಕಲಿಯಲು ಪಟ್ಟ ಪಾಡು ಸಣ್ಣದಲ್ಲ.

ಯಾರೋ ಇಂಗ್ಲೀಷ್ ಚಿತ್ರಗಳನ್ನು ನೋಡಿದರೆ fluency ಚೆನ್ನಾಗಿ ಬರುತ್ತದೆ ಎಂದಿದ್ದು ಕೇಳಿ, subtitle ಇರುವ ಚಿತ್ರಗಳನ್ನು ಹುಡುಕಿ ಹುಡುಕಿ ನೋಡುತ್ತಿದ್ದೆ. ಆಗಲೇ ‘ಇಂಗ್ಲೀಷ್ ವಿಂಗ್ಲೀಷ್’ ಸಿನಿಮಾ ಕಣ್ಣಿಗೆ ಬಿದ್ದಿದ್ದು.

ಆ ಶಶಿಯ ಜೊತೆಗೆ ನನ್ನನ್ನು ನಾನು ಅದೆಷ್ಟು ಸಮೀಕರಿಸಿಕೊಂಡಿದ್ದೆನೋ ನಂಗೇ ಗೊತ್ತು. ಅದರಲ್ಲೊಂದು ದೃಶ್ಯವಿದೆ.. ದೂರದ ಊರಲ್ಲಿರುವ ಶಶಿಗೆ ಮಗಳು, ಅವಳ ಬುಕ್ ಎಲ್ಲಿದೆ ಎಂದು ಕೇಳಲು ಕರೆ ಮಾಡುತ್ತಾಳೆ. ತೀರಾ ಅವಸರದಲ್ಲಿ, ಸಿಟ್ಟಲ್ಲಿದ್ದ ಮಗಳನ್ನು ಸಮಾಧಾನಿಸಲು ‘ ನಾನೇನೂ ಅದನ್ನ ಓದಿಲ್ಲ.. ಯೋಚನೆ ಮಾಡ್ಬೇಡ’ ಅನ್ನೋ ಅಮ್ಮನಿಗೆ,  ‘ಯಾಕಂದ್ರೆ ನಿಂಗ್ ಓದಿದ್ರೆ ಅರ್ಥ ಆಗಲ್ಲ! ಅದು ಇಂಗ್ಲೀಷ್ ನಲ್ಲಿದೆ’ ಅನ್ನೋ ಮಗಳ ಉತ್ತರ ಸೀದಾ ಎದೆಗೇ ನಾಟಿತ್ತು. ಇವತ್ತು ‘ಇಂಗ್ಲೀಷ್ ವಿಂಗ್ಲೀಷ್’ ನೋಡಿದರೂ , ಕ್ಲೈಮಾಕ್ಸ್ ಸೀನ್ ನಲ್ಲಿ ಬಿಕ್ಕಿ ಬಿಕ್ಕಿ ಅಳುತ್ತೇನೆ ನಾನು.

ಆ ಅವಮಾನ, ಹಿಂಜರಿಕೆ, ಸಂಕಟ, ಮುಜುಗರ, ಹಠ ಹಾಗೂ ಕಡೆಯ Success ಎಲ್ಲವೂ ನಂದೂ ಹೌದು! ಹೀಗಾಗಿಯೇ ಶ್ರೀದೇವಿ ತೀರಿಕೊಂಡಾಗ ಯಾರೋ ತುಂಬ ಹತ್ತಿರದವರ ಅಗಲಿಕೆಯ ಹಾಗೆ ಬೇಜಾರಾಗುತ್ತಿದೆ. ನಂಗೊಂದು ಕನಸಿತ್ತು.. ಶಶಿಯನ್ನ ಮೀಟ್ ಮಾಡಿ ಇಷ್ಟೆಲ್ಲಾ ಕಥೆಯನ್ನ ಅವಳಿಗೆ ಹೇಳಬೇಕಿತ್ತು. ಅವಳು ತುಂಬಿದ ಆತ್ಮವಿಶ್ವಾಸದಿಂದಲೇ ಇವತ್ತಿಗೆ ಯಾವುದೇ ಅಂಜಿಕೆ ಇಲ್ಲದೆ ಇಂಗ್ಲೀಷ್ನಲ್ಲಿ ಮಾತಾಡಬಲ್ಲೆ ಎಂಬುದನ್ನ ತೋರಿಸಬೇಕಿತ್ತು.

ಯಾರಾದ್ರೂ ಈಗ ಇಂಗ್ಲೀಷ್ನಲ್ಲಿ ಮಾತಾಡ್ಸಿದ್ರೆ ‘ ಕನ್ನಡ ಬರುತ್ತಲ್ವಾ? ಮಾತಾಡಕ್ಕೇನ್ ರೋಗ?’ ಅಂತ ದಬಾಸಿಯಿ ಕೇಳೋಷ್ಟು ಧೈರ್ಯ ಬಂದಿದೆ ಅಂತನೂ ಹೇಳ್ಬೇಕಿತ್ತು.. ಇದೆಲ್ಲಾ ಸಾಧ್ಯವಾಗಲ್ಲ ಅನ್ನೋದೇ ಬೇಜಾರು ಈಗ!

ಶ್ರೀದೇವಿ ಮೇಡಂ.. ತುಂಬಾ ಬೇಗ ಹೋಗ್ಬಿಟ್ರಿ ನೀವು..

4 Responses

 1. nutana doshetty says:

  sanna oorugalinda baruva ellaradoo English Vinglish Anubhavave.. Lahari is good

 2. Archana Bhat says:

  ತುಂಬಾ ಮನಸ್ಸು ಮುಟ್ಟುವ ಬರಹ.

 3. Chandra says:

  ಚೆನ್ನಾಗಿ ಬರೆಯುತ್ತಿಯಾ, ತೀರ್ಥಹಳ್ಳಿ ಯ ಮಣ್ಣಿನ ಗುಣ

 4. Kiran says:

  ನನಗೆ ಒಂದು ವಿಷಯ ಅರ್ಥ ಆಗ್ತಿಲ್ಲ, ನಾನು ಚಿಕ್ಕ ಹಳ್ಳಿಗಳಲ್ಲಿ ಕನ್ನಡ ಮೀಡಿಯಂನಲ್ಲೇ ಏಳನೇ ತರಗತಿವರೆಗೆ ಅಚ್ಚ ಕನ್ನಡ ಮೀಡಿಯಂನಲ್ಲಿ ಓದಿ, ಹೈಸ್ಕೂಲ್ ನಂತರ ಯಾವುದೇ ಗಲಾಟೆ ಮಾಡದೇ, ಅಪ್ಪನೇ ಸೇರಿಸಿದ್ದಕ್ಕೆ ಇಂಗ್ಲಿಷ್ ಮಧ್ಯಮಕ್ಕೆ ಸೇರಿ ಮುಂದೆ ಇಂಜಿನಿಯರಿಂಗ್ ಸರಾಗವಾಗಿ ಮುಗಿಸುವವರೆಗೂ ಎಲ್ಲೂ ಅಸಹಜ ಅನುಭವವಾಗಲಿ, ಅವಮಾನವಾಗಲಿ ಆಗಲಿಲ್ಲ, ಎಲ್ಲ ಅತ್ಯಂತ ಸಹಜವೆನ್ನುವಂತೆ ನೆಡೆಯಿತು, ಹೈಸ್ಕೂಲ್ ನಲ್ಲಿ ಇದ್ದಕ್ಕಿದ್ದಂತೆ ಎಲ್ಲ ವಿಷಯಗಳನ್ನು ಇಂಗ್ಲಿಷ್ ನಲ್ಲಿ ಕಲಿಯಬೇಕಾದಾಗಲೂ ಏನು ವಿಶೇಷ ಅನ್ನಿಸಲಿಲ್ಲ! ಏಳನೇ ತರಗತಿವರೆಗೂ ನಾನು ಫಸ್ಟ್ ಕ್ಲಾಸ್ ವಿದ್ಯಾರ್ಥಿ ಆಗಿದ್ದೆ, ಮುಂದೆ ಇಂಜಿನಿಯರಿಂಗ್ ಮುಗಿದಾಗಲೂ ಅದೇ ಫಸ್ಟ್ ಕ್ಲಾಸ್ ಮುಂದುವರೆದಿತ್ತು.. ಅದಕ್ಕೆ ನನಗೆ ಕೆಲವರು ನಿಮ್ಮಂತೆ ಹೇಳುವಾಗ relate ಮಾಡೋದಕ್ಕೆ ಅಸಾಧ್ಯ…ನನ್ನ ಪ್ರಕಾರ ಈ ರೀತಿ ಮಾಡುವುದೇ ಸರಿ ಮತ್ತು ನನಗೆ ತುಂಬಾ ಖುಷಿ ಇದೆ ನನಗೆ ಕನ್ನಡ ಮತ್ತು ಇಂಗ್ಲಿಷ್ ಎರಡು ಮಾಧ್ಯಮಗಳಲ್ಲಿ ಕಲಿತಿರೋದಕ್ಕೆ..

Leave a Reply

%d bloggers like this: