fbpx

ನನ್ನ ಕಥೆಯೂ.. ‘ಚರ್ಮಾಯಿ’ಯೂ..

ಗೀತಾ ಹೆಗ್ಡೆ ಕಲ್ಮನೆ 

ಹೋದೆ, ಹೋದೆ, ಹೋಗೇಬಿಟ್ಟೆ.  ಎಲ್ಲಿಗೆ ಅಂತೀರಾ?  ಅದೇ 1974ರ ಶಿವರಾತ್ರಿ ಹಬ್ಬದಲ್ಲಿನ ನನ್ನ ಸಾಹಸಕ್ಕೆ.

ನಿಜ.  ಶ್ರೀದೇವಿ ಕೆರೆಮನೆಯವರು ಬರೆದ  “ಚರ್ಮಾಯಿ” ಈ ಪುಸ್ತಕದ ವಿಮರ್ಶಾತ್ಮಕ ಲೇಖನ ಓದುತ್ತಿದ್ದಂತೆ ಇದುವರೆಗೂ ನನ್ನೊಳಗಿನ ಗುಟ್ಟೊಂದು ಇದ್ದಕ್ಕಿದ್ದಂತೆ ನೆನಪಿಗೆ ಬಂದಿತು. ಘಟನೆಗಳು  ನೆನಪಾದಾಗಲೆಲ್ಲ ಕೈ ತನ್ನಷ್ಟಕ್ಕೇ ಬರೆಯುವ ರೂಢಿ ಇಂದೂ ಕೂಡಾ ಬಿಡಲಿಲ್ಲ.

ನಮ್ಮ ಹಳ್ಳಿಯಲ್ಲಿ ಪ್ರತೀ ವರ್ಷ ಶಿವರಾತ್ರಿ ಹಬ್ಬಕ್ಕೆ ಹತ್ತಿರದ ಯಾವುದಾದರೂ ಕ್ಷೇತ್ರಕ್ಕೆ ಊರ ಹಿರಿ ಕಿರಿಯರೆಲ್ಲ ಸೇರಿ ಒಂದು ವಾಹನ ಮಾಡಿಕೊಂಡು ಬೆಳ್ಳಂಬೆಳಗ್ಗೆ ಹೋಗುವುದು ರೂಢಿ.  ಆದರೆ ಆ ವರ್ಷ ಮಾತ್ರ ನನ್ನ ಅಣ್ಣ “ಸಂಗೀತಾ ಯಾಣಕ್ಕೆ ಹೋಪನ ಬತ್ಯನೆ.  ಅವೆಲ್ಲ ಸಹಸ್ರ ಲಿಂಗಕ್ಕೆ ಹೋಗ್ತ್ವಡಾ.  ನಾ ಆಗ್ಲೇ ನೋಡಿದ್ದಿ.  ಬಾರೆ, ಹೋಪನ.”

“ಹೂಂ ಅಡ್ಡಿಲ್ಲೆ , ಹೋಪನ, ನಾನೂ ನೋಡಿದ್ನಿಲ್ಲೆ.” ಸರಿ, ನಮ್ಮಿಬ್ಬರ ಸವಾರಿ ಹೊರಟಿತು ಬಸ್ಸಲ್ಲಿ ಯಾಣಕ್ಕೆ.

ಇನ್ನೇನು ಯಾಣಕ್ಕೆ ನಾಲ್ಕು ಕಿ.ಮೀ.ಇರುವಾಗಲೇ ಬಸ್ಸು ಅಲ್ಲಿಗೇ ನಿಂತಿತು.  ದಾರಿಗೆ ಅಡ್ಡಲಾಗಿ ಒಂದು ದೊಡ್ಡ ಬಂಡೆ.  ಬಸ್ಸು ಅಲ್ಲಿ ನುಗ್ಗಿಸಲಾಗದಷ್ಟು ಇಕ್ಕಟ್ಟು. ಚಿಕ್ಕ ವಾಹನಗಳು ಮಾತ್ರ ಹೋಗುವಂತಿತ್ತು.  ಮಣ್ಣಿನ ಹಾದಿ.  ಒಂದು ಕೀ.ಮೀ. ಈ ಹಾದಿಯಲ್ಲಿ ನಡೆದು ನಂತರ ಸಿಗುವುದು ಕಾಡಿನಲ್ಲಿ ಕಾಲಾದಿ.  ಎತ್ತರವಾದ ದೊಡ್ಡ ದೊಡ್ಡ ಮರಗಳು, ಬೆತ್ತದ ಗಿಡದ ಗುಂಪು, ಅಲ್ಲಲ್ಲಿ ಸಣ್ಣ ಸಣ್ಣ ತೊರೆ, ಚಿಲಿಪಿಲಿ ಹಕ್ಕಿಗಳ ನಿನಾದ!  ಹೋಗುವಾಗಿನ ಆ ಖುಷಿ ವರ್ಣಿಸಲಸಾಧ್ಯ.

ಅಂತೂ ಯಾಣ ತಲುಪಿದ್ದೇ ತಡ ಯಾಕೋ ಅನುಮಾನ.  ಹೌದು, ನಿಜ. ಅರೆ ಇಸ್ಕೀ? ಏನು ಮಾಡೋದು ಈಗಾ?  ಅಣ್ಣನಲ್ಲಿ ಹೇಳೊ ಹಾಗಿಲ್ಲ, ವಾಪಸ್ ಹಾಗೇ ಹೋಗಲು ಸಾಧ್ಯ ಇಲ್ಲ, ಏನೂ ನೋಡದೇ ಹಿಂತಿರುಗುವ  ಮನಸ್ಸು ಮೊದಲೇ ಇಲ್ಲ.

ಒಳಗೊಳಗೇ ನನ್ನದೇ ಥಿಯರಿಯಲ್ಲಿ ಲೆಕ್ಕಾಚಾರ ಹಾಕಿ ಭಂಡ ಧೈರ್ಯದಲ್ಲಿ ಅಣ್ಣನ ಜೊತೆ ಆ ಕಡಿದಾದ ಮೆಟ್ಟಿಲಿರದ ಹಾದಿಯಲ್ಲಿ ಹಳ್ಳದವರೆಗೂ ಇಳಿಯುತ್ತ ಜೊತೆಗೆ ಹೋದೆ.  ಅಲ್ಲಿಗೆ ಹೋದವರೆಲ್ಲ ಈ ತೊರೆಯಲ್ಲಿ ಸ್ನಾನ ಮಾಡಿ ದೇವರ ದರ್ಶನಕ್ಕೆ ಹೋಗಬೇಕು.  ಎಲ್ಲರೂ ಹೋಗುವಾಗಲೇ ಒಂದು ಜೊತೆ ಮಡಿ ಬಟ್ಟೆ ಜೊತೆಗೆ ಒಯ್ಯುತ್ತಾರೆ.

“ಓಂ ನಮಃ ಶಿವಾಯ” ಹೇಳುತ್ತ ಮೈಲಿಗೆಯಲ್ಲಿ ಮಡಿ ಸ್ನಾನ ಮುಗಿಸಿ ದೇವರ ದರ್ಶನ, ಪೂಜೆ ಎಲ್ಲಾ ಮಾಡಿ ಅಲ್ಲೇ ಸಂಜೆಯವರೆಗೂ ಸುತ್ತಾಡಿ ಊರು ಸೇರಿದಾಗ ರಾತ್ರಿಯಾಗಿತ್ತು.  ಮನೆಗೆ ಬಂದು ಹೊರಗೆ ಕುಳಿತೆ ಅದೇ ದಿಂಬಿಲ್ಲದ ಒಂಟಿ ಕಂಬಳಿ ತಂಬಿಗೆಯೊಂದಿಗೆ.

ಅಮ್ಮ ಹೋಗುವಾಗಲೇ ಹಾಕಿದ ಲೆಕ್ಕಾಚಾರ ತಲೆ ಕೆಳಗಾಗಿ ಈ ಅವಾಂತರವಾದರೂ ಅವಳು ಕೇಳಿದಾಗ “ಈಗ ಬರಕರೆ ಆಜ್ಞೆ! ನೀ ಎಂತಕ್ಕೆ ತಲೆ ಕೆಡಸ್ಕತ್ತೆ?”

“ಅಲ್ದೆ ಅಲ್ಲಿರಕಾದರೆ ಹೆಜ್ಜೇನು ಅಟ್ಟಿಸ್ಕಂಡು ಬರ್ತಿತ್ತಲೆ.  ಮೈಲಿಗೆ ಆಗಲಾಗ್ದಡ.  ಸಧ್ಯ ದೇವರು ದೊಡ್ಡವನು!”

ನನಗೆ ಈ ವಿಷಯ ಗೊತ್ತಿರಲಿಲ್ಲ. ಮೈಲಿಗೆಯಲ್ಲಿ ದೇವರ ದರ್ಶನಕ್ಕೆ ಹೋಗಬಾರದು ಎಂಬುದನ್ನು ನಂಬಿದ್ದೆ ಅಷ್ಟೆ. ಆದರೆ ನನಗೆ ಯಾಣ ಎಲ್ಲಾ ಸುತ್ತಾಡಲೇಬೇಕೆಂಬ ಹಠ, ಮೊಂಡು ಧೈರ್ಯ, ಉತ್ಸಾಹ, ಶಾಸ್ತ್ರವನ್ನು ಮನಸ್ಸು ಮೂಲೆಗೆ ತಳ್ಳಿತ್ತು ಅನಿಸುತ್ತದೆ.  ಅಲ್ಲಿ ಬೇಕಾದಷ್ಟು ಜೇನು ಗೂಡುಗಳು ನೇತಾಡುತ್ತಿದ್ದರೂ ಒಂದೇ ಒಂದು ಜೇನೂ ನನ್ನ ಹತ್ತಿರವೂ ಸುಳಿಯಲಿಲ್ಲ. ಬಹುಶಃ ಜೇನಿಗೆ ಮೈಲಿಗೆಯ ಶಾಸ್ತ್ರ ಸುತ್ತಿಕೊಂಡಿರಬಹುದೇ?  ಅನುಮಾನ ಈಗಲೂ ಕಾಡುತ್ತದೆ.

ಪುಸ್ತಕ ಓದುವ ಗೀಳಿಲ್ಲದ ಎಂಥವರಿಗಾದರೂ ಈ ಪುಸ್ತಕ ಓದಲೇಬೇಕು ಅನ್ನುವಷ್ಟು ಕುತೂಹಲ ಹುಟ್ಟಿಸುವ ಅತ್ಯುತ್ತಮ ಶೈಲಿಯ ಬರಹ ಶ್ರೀದೇವಿಯವರದು. ಒಮ್ಮೆ ಓದಲು ಶುರುಮಾಡಿದರೆ ಮನಸ್ಸು ನಿಲ್ಲುವುದಿಲ್ಲ. ಸರಾಗವಾಗಿ ಓದಿಸಿಕೊಂಡು ಪುಸ್ತಕದ ಕಥೆ ತಲೆಯಲ್ಲಿ ಗಟ್ಟಿಯಾಗಿ ಬೇರೂರುವುದಂತೂ ದಿಟ.

ಸಮಾಜದಲ್ಲಿ ಮೂಢ ನಂಬಿಕೆಗಳನ್ನು ನಿರ್ಮೂಲ ಮಾಡಲು ಇನ್ನಷ್ಟು “ಚರ್ಮಾಯಿ” ಅಂತಹ ಪುಸ್ತಕಗಳು ಹೊರಬರಲಿ.  ಲೇಖಕರಿಗೂ ಹಾಗೂ ಈ ಅಂಕಣ ಶುರುಮಾಡಿದ ಅವಧಿಗೂ ಧನ್ಯವಾದಗಳು.

3 Responses

  1. Shreedevi keremane says:

    ಗೀತಕ್ಕ. ಎಂತ ಹೇಳವು ಗೊತ್ತಾಗ್ತಲ್ಲೆ ಈ ಪ್ರೀತಿಗೆ

  2. ನಿಮ್ಮ ಬರಹದ ಮುಂದೆ ಇದೆಲ್ಲ ಗೌಣ. ಇನ್ನಷ್ಟು ಸೊಗಸಾದ ಬರಹ ನಿಮ್ಮಿಂದ ಬರಲಿ.
    ನಮ್ಮ ಹವ್ಯಕ ಭಾಷೆಯಲ್ಲಿ ಮಾತಾಡಿದ್ದು ರಾಶಿ ಖುಷಿ ಆತು. ಮೊಗೆದಷ್ಟೂ ಪ್ರೀತಿ, ಮಮತೆ ನನ್ನಿಂದ.

Leave a Reply

%d bloggers like this: