fbpx

ಆದರೆ ಭಂಡಾರಿ ಮಾಸ್ತರ್ ‘ತಿಥಿ’ ಅಂದರೆ ಹಾಗಲ್ಲ..

ಸುಧಾ ಆಡುಕಳ

ಆರ್. ವಿ. ಭಂಡಾರಿ ನಮ್ಮ ಜಿಲ್ಲೆ ಕಂಡ ಒಬ್ಬ ಅತ್ಯುತ್ತಮ ಮಾಸ್ತರ್.

ನಾನು ಮಾಸ್ತರ್ ಎಂದುದನ್ನು ನೀವು ಶಾಲೆಯಾಚೆಗಿನ ಸಮಾಜದ ಪರಿಧಿಗೆ ಹಿಗ್ಗಿಸಿಕೊಂಡರಾಯಿತು ಅಷ್ಟೇ.

ಅವರು ಇಡಿಯ ಸಮಾಜದ ಓರೆಕೋರೆಗಳನ್ನು ಗ್ರಹಿಸಿ, ತಿದ್ದುತ್ತಾ, ಕೆಲವೊಮ್ಮೆ ಮಾತಿನ ಚಾಟಿಯೇಟು ಹೊಡೆಯುತ್ತಾ ತಮ್ಮ ಇಡಿಯ ಜೀವನವನ್ನು ಹೋರಾಟವಾಗಿ ಮಾಡಿಕೊಂಡರಷ್ಟೇ ಅಲ್ಲ; ತನ್ನ ಸಹಜೀವಿಗಳಲ್ಲಿಯೂ ಆ ಕಿಚ್ಚನ್ನು ಉಳಿಸಿಹೋಗಿದ್ದಾರೆ. ಅವರ ಜೀವನದ ಮಜಲುಗಳನ್ನು ಹಿಡಿದಿಡಲು ಈ ಬರಹಕ್ಕೆ ಹಾಗೂ ನನಗೆ ಮಿತಿಯಿದೆ.

ಅವರ ನೆನಪಿನಲ್ಲಿ ನಡೆಯುವ ಸಹಯಾನ ಸಾಹಿತ್ಯೋತ್ಸವಕ್ಕೆ ಸಮಾನಮನಸ್ಕರೆಲ್ಲರೂ ಅವರ ಮನೆಯಂಗಳದಲ್ಲಿ ಸೇರುತ್ತೇವೆ. ಅವರ ನೆನಪಿನಲ್ಲಿ ಒಂದಿಷ್ಟು ಸಾಹಿತ್ಯಿಕ ಮತ್ತು ಸಾಮಾಜಿಕ ಚರ್ಚೆಗಳು ದಿನವಿಡೀ ನಡೆಯುತ್ತವೆ. ದಿನಾಂತ್ಯದಲ್ಲಿ ಒಂದೊಳ್ಳೆಯ ಸಾಂಸ್ಕ್ರತಿಕ ಕಾರ್ಯಕ್ರಮವೂ ಇರುತ್ತದೆ. ಮತ್ತುಳಿದಂತೆ ಒಂದು ಚೆಂದದ ಸಾಂಪ್ರದಾಯಿಕ ಅಡುಗೆಯನ್ನೊಳಗೊಂಡ ಸಹಭೋಜನವೂ ನಡೆಯುತ್ತದೆ.

ನಾನು ಪ್ರತಿಸಲವೂ ಅಲ್ಲಿಗೆ ಹೋದಾಗ ಅವರ ಮನೆಯ ಪಕ್ಕದಲ್ಲೇ ಇರುವ ನನ್ನ ಅತ್ತೆಯ ಮನೆಗೂ ಹೋಗಿಬರುತ್ತೇನೆ. ಮೊದಲಸಲ ಹೋದಾಗ ಹೀಗಾಯ್ತು. ಅತ್ತೆ ಊಟಕ್ಕೆ ಅವರ ಮನೆಗೇ ಬರುವಂತೆ ಒತ್ತಾಯಿಸಿದರು. ನಾನಾಗ ಅವರಿಗೆ ಭಂಡಾರಿ ಸರ್ ಮನೆಯಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ತಿಳಿಸಿ, ಅಲ್ಲಿಯೇ ಊಟ ಮಾಡುವುದಾಗಿ ಹೇಳಿದೆ.

ಅದಕ್ಕವರು ಪಟ್ಟನೇ , “ಓಹೋ ಭಂಡಾರಿ ಮಾಸ್ತರ್ ರ ತಿಥಿಯಾ ಇವತ್ತು?” ಎಂದು ಪ್ರಶ್ನಿಸಿದರು. ಹೇಳಿ, ಕೇಳಿ ಎಲ್ಲಾ ವೈದಿಕ ಆಚರಣೆಗಳ ಕಡುವಿರೋಧಿಯಾಗಿ ಇದ್ದವರು ನಮ್ಮ ಸರ್. ಇನ್ನು ತಿಥಿ ಗಿಥಿಗಳೆಲ್ಲ ಎಲ್ಲಿಂದ ಬರಬೇಕು? ಅತ್ತೆಗೆ ಇದನ್ನು ಹೇಗೆ ವಿವರಿಸುವುದು? ಎಂದು ಯೋಚಿಸುತ್ತಿರುವಾಗಲೇ ಅವರು ಭಂಡಾರಿ ಸರ್ ಅವರ ಮಡದಿಯ ಗುಣಗಾನ ಆರಂಭಿಸಿದರು.

ಅಯ್ಯೋ, ಮಾಸ್ತರ್ ಬಗ್ಗೆ ನಮಗೆಲ್ಲಾ ಹೆಚ್ಚು ಗೊತ್ತಿಲ್ಲ. ಅವರು ಮಾತಾಡೋದೇ ಕಮ್ಮಿ. ಇಡೀ ದಿನ ಬರೇತಾ, ಓದ್ತಾ ಇರ್ತಾರೆ. ಆದರೆ ಅವರ ಹೆಂಡತಿ ಇದ್ದಾರೆ ನೋಡು ಅಪ್ಪಟ ಚಿನ್ನದಂತವರು. ಗಂಡ ನೋಡಿದ್ರೆ ಮಾಸ್ತರ್ರು. ಆದರೆ ಹೆಂಡತಿ ನಮ್ಮ ಹಾಗೇ ಬೆಳಿಗ್ಗೆ ಎದ್ದು ಸೊಪ್ಪಿನ ಹೊರೆ ತರ್ತಿದ್ದರು. ಅದೂ ಹೆಂಗೆ ಹೇಳು?

ಶಾಲೆ ದಾರಿಯಿಂದ ಬಂದರೆ ಮಕ್ಕಳೆಲ್ಲ ನೋಡಿ ಮಾಸ್ತರ್ ಹೆಂಡತಿ ಸೊಪ್ಪು ತರತಾರೆ ಅಂತ ನಗಾಡಿದರೆ ಮಾಸ್ತರ್ರಿಗೆಲ್ಲಿ ಬೋಜಾರಾಗ್ತದೋ ಅಂತ ಸುತ್ತಿ ಬಳಸಿ ಆಚೆ ದಾರಿಯಿಂದ ಬರ್ತಿದ್ರು. ಅಂತಾ ಮರ್ಯಾದಸ್ತೆ. ಈಗ ಹೇಗಿದ್ದಾರೊ ಏನೋ? ಅವರ ಮನೆಯ ಅಷ್ಟೂ ತೆಂಗಿನಮರವನ್ನು ಬಾವಿಯಿಂದ ನೀರು ಸೇದಿ ಎತ್ತಿ ಬೆಳೆಸಿದ್ದಾರೆ ಅತ್ತೆ, ಸೊಸೆ. ಒಂದಿನ ಅತ್ತೆ, ಸೊಸೆ ಜಗಳಾಡಿದ್ದನ್ನ ಕಂಡೋರಿಲ್ಲ. ಎಲ್ಲರೂ ಅವರು ಅಮ್ಮ ಮಗಳು ಅಂತಾನೇ ಅಂದುಕೊಂಡಿದ್ದರು….

ಮಕ್ಕಳೂ ಹಾಗೆ. ಭಾರೀ ಗುಣಾಢ್ಯರು. ಮನುಷ್ಯರನ್ನ ಕಂಡರೆ ಮುಖ ತಿರುಗಿಸಿ ಹೋಗೋರಲ್ಲ. ಒಂದು ಸಣ್ಣ ನಗೆಯಾದ್ರೂ ಆಡಿಯೇ ಹೋಗುವವರು. ಅದ್ಕೆ ನೋಡು ಊರಿನೋರನ್ನೆಲ್ಲ ಕರೆದು ಇಷ್ಟು ದೊಡ್ಡ ತಿಥಿ ಮಾಡ್ತಾರೆ. ಒಳ್ಳೆಯವರಿಗೆ ಒಳ್ಳೆಯೋರೇ ಹುಟ್ಟೂದು.

ನಾನು ಎಲ್ಲಾ ಕೇಳಿಸಿಕೊಂಡು, “ಹಾಂ, ಆದರೆ ತಿಥಿ ಅಂದರೆ ಹಾಗಲ್ಲ…..”ಎಂದು ತಡವರಿಸತೊಡಗಿದೆ. ಅದಕ್ಕವರು, “ಅದೇಯೇ, ತಿಥಿ ಅಂದರೆ ಮತ್ತೆಂತದು? ಸತ್ತವರಿಗೆ ಇಷ್ಟವಾದಧ್ದನ್ನ ಮಾಡೋದು. ಮಾಸ್ತರ್ರಿಗೆ ಓದುದು ಬರಿಯೂದು ಅಂದರೆ ಜಗತ್ತು ಬ್ಯಾಡ ನೋಡು. ಅದ್ಕೆ ಓದೋರು, ಬರೆಯೋರನ್ನೆಲ್ಲ ಕರೆಸ್ತಾರೆ ಬಿಡು” ಎಂದು ಅರ್ಥೈಸಿದರು.

ಮತ್ತೀಗ ಅವರು ಸಿಕ್ಕಿದಾಗಲೆಲ್ಲ ಯಾವಾಗ ಬರುವೆ ನಮ್ಮನೆಗೆ? ಎಂದು ಕೇಳುವುದು, ಅದಕ್ಕುತ್ತರವಾಗಿ ನಾನು ಭಂಡಾರಿ ಸರ್ ತಿಥಿಗೆ ಬಂದಾಗ ಬರುವೆ ಎನ್ನುವುದು ಅನೂಚಾನವಾಗಿ ನಡೆದೇ ಇದೆ.

4 Responses

  1. Gurushanth sy says:

    Nice

  2. subray mattihalli. says:

    ಸಹಯಾನದ ಸಂದರ್ಭವನ್ನು ಮತ್ತೆ ನೆನಪಿಸಿ ಆರ್.ವಿ ಯವರನ್ನು ಮತ್ತೆ ಸಜೀವ ಗೊಳಿಸಿದ್ದಕ್ಕೆ ಅನಂತ ಕೃತಜ್ಞತೆಗಳು ಸುಧಾ.

  3. SUDHA SHIVARAMA HEGDE says:

    Thank u sir

Leave a Reply

%d bloggers like this: