fbpx

ಅಲ್ಲಿನ ಕಮ್ಯೂನಿಸ್ಟ್ ಪಕ್ಷವು ‘ಮಾಜುಬಿ’ಯಂತೆ ಕಾಣತೊಡಗಿದೆ..!!

ಪರಿಮಳಾ ಯಡಹಳ್ಳಿ

ಅದೊಂದು ಚಿತ್ರ. ಸೌದಾಗರ್ ಎಂದದರ ಹೆಸರು. ಅಮಿತಾಬ್ ಬಚ್ಚನ್ ಬೈನೇಮರದ ಕಳ್ಳು ಇಳಿಸಿ ವಾಲೆಬೆಲ್ಲ ತಯಾರಿಸುವವನು. ಅವನು ತನ್ನದೇ ಊರಿನ ಮಾಜುಬೀ (ನೂತನ್) ಎಂಬ ತಬ್ಬಲಿ ಹೆಣ್ಣುಮಗಳೊಂದಿಗೆ ನಿಕಾಹ್ ಮಾಡಿಕೊಳ್ಳುತ್ತಾನೆ. ಅಂದಿನಿಂದಲೇ ಹಗಲು ರಾತ್ರಿ ಅವನ ಒಂಟಿ ಬದುಕಿನ ಮಾತ್ರವಲ್ಲದೆ ಅವನ ದುಡಿಮೆಯ ಸಂಗಾತಿ ಅವಳು.

ಮುಂಜಾನೆಯೇ ಎದ್ದು ಗಂಡ ಬೈನೆ ರಸ ಇಳಿಸಲು ಹೊರಟರೆ ಇವಳು ಮನೆಯ ಕೆಲಸ ಮುಗಿಸಿ ಬೆಲ್ಲ ತಯಾರಿಸುವುದು, ಗಂಡ ಬರುತ್ತಲೇ ಗುಡಗುಡಿಯ ಸೇದಲು ಕೊಟ್ಟು ಸೇವೆ ಮಾಡುವುದು ಗಂಡ ಉಂಡು ತಿಂದು ಬೆಲ್ಲ ಮಾರಲು ಹೊರಟರೆ ಬಂದ ಹಣದಲ್ಲಿ ಇನ್ನಷ್ಟು ಸುವಾಸನೆಯ ಬೆಲ್ಲ ತಯಾರಿಸಲು ಬೇಕಾದ ವಸ್ತುವನ್ನು ತರಲು ನೆನಪಿಸುವುದು ಹೀಗೆ ಮಾಜುಬೀ ತನ್ನ ಬದುಕನ್ನೇ ಬೆಂಕಿಯ ಕಡಾಯಿಯಲ್ಲಿ ಕುದಿಸಿ ಪಾಕ ತೆಗೆದು ತಯಾರಿಸುವ ಬೆಲ್ಲಕ್ಕೀಗ ಸಂತೆಯಲ್ಲಿ ಬೇಡಿಕೆಯೋ ಬೇಡಿಕೆ. ಅಕ್ಕಪಕ್ಕದ ಬೆಲ್ಲದ ವ್ಯಾಪಾರಿಗಳು ಇವನ ಮುಂದೆ ಕೂತು ನೊಣ ಓಡಿಸುತ್ತಿರುತ್ತಾರೆ.

ಹೀಗೆ ನಾಲ್ಕು ಕಾಸು ಹೆಚ್ಚು ಸಂಪಾದನೆಯಾಗುತ್ತಲೇ ಹೆಚ್ಚು ಹೆಚ್ಚು ರಸ ತೆಗೆದು ಹೆಚ್ಚು ಹೆಚ್ಚು ಬೆಲ್ಲ ತೆಗೆಯುವ ಇರಾದೆಯಿಂದ ಕಥಾನಾಯಕ ಇನ್ನಷ್ಟು ಮರಗಳನ್ನು ಗುತ್ತಿಗೆ ಪಡೆಯುತ್ತಿದ್ದರೆ ಮಾಜುಬೀಗೆ ಬೆನ್ನು ಮೂಳೆ ಮುರಿಯುವಷ್ಟು ಕೆಲಸ ಹೆಚ್ಚುತ್ತಾ ಹೋಗುತ್ತದೆ. ಯಂತ್ರದಂತೆ ದುಡಿಯುತ್ತಿದ್ದರೂ ಚೂರೂ ನೊಂದುಕೊಳ್ಳದೆ ಗಂಡನ ಶ್ರೇಯಸ್ಸಿಗಾಗಿ ಗಾಣದೆತ್ತಾಗಿಬಿಡುತ್ತಾಳವಳು.

ಆದರೆ ಕಥಾನಾಯಕನ ಮನಸ್ಸಲ್ಲೀಗ ಕುಣಿಯುತ್ತಿರುವವಳು ಫೂಲ್ ಬಾನು. ಅವನೀಗ ಬೆಲ್ಲ ಮಾರಿದ ಹಣ ಉಳಿಸಿ ಅವಳಿಗೆ ಸೀರೆ, ಹೂ ಖರೀದಿಸಲು ಮತ್ತು ಅವಳನ್ನು ನಿಕಾಹ್ ಮಾಡಿಕೊಳ್ಳಲು ತೆರಕಟ್ಟಲು ಮತ್ತು ಬೈನೆ ರಸದ ಋತು ಮುಗಿದು ಮತ್ತೆ ರಸದ ಋತು ಶುರುವಾಗುವ ತನಕ ಆರಾಮವಾಗಿ ಕೂತುಣ್ಣಲು ಕೂಡಿಡುತ್ತಿದ್ದಾನೆ. ಮತ್ತು ರಸದ ಋತು ಮುಗಿಯುವ ಹೊತ್ತಿಗೆ ಸರಿಯಾಗಿ ಮಾಜುಬೀಗೆ ತಲ್ಲಾಕ್ ಕೊಟ್ಟು ಒದ್ದೋಡಿಸಿ ಫೂಲ್ ಬಾನುವಿನೊಡನೆ ನಿಕಾಹ್ ಮಾಡಿಕೊಳ್ಳುತ್ತಾನೆ.

ಸದಾ ಸಿಂಗರಿಸಿಕೊಂಡು ತನ್ನ ಮೋಹದ ಬಲೆಯಲ್ಲಿ ಕೆಡವಿಕೊಂಡು ಸುಖದಿಂದಿರುವ ಫೂಲ್ ಬಾನುವಿನೊಡನೆ, ಹಿರಿ ಹೆಂಡತಿಗೆ ಕತ್ತೆಯಂತೆ ದುಡಿಸಿಕೊಂಡು ಬರಿಗೈಲಿ ಒದ್ದೋಡಿಸಿದ್ದರ ಸಣ್ಣ ಪಶ್ಚಾತ್ತಾಪವೂ ಕಾಡದೆ ಮೋಜಿನಿಂದ

ಉಳಿದುಬಿಡುವ ನಾಯಕನಿಗೆ ಮತ್ತೆ ರಸದ ಋತು ಶುರುವಾಗುವಾಗ ತಾನು ಒದ್ದೋಡಿಸಿದ ಮತ್ತು ಜೊತೆಗಿರಿಸಿಕೊಂಡು ಮುದ್ದುಗರೆಯುತ್ತಿರುವ ಹೆಂಡಿರ ನಡುವಿನ ವ್ಯತ್ಯಾಸ ತಿಳಿಯುವಂತಾಗುತ್ತದೆ.

ಕಥಾನಾಯಕನು ಕೆಲಸಕ್ಕೆ ಸೋಂಭೇರಿಯಾದ ಫೂಲ್ ಬಾನು ಕೆಟ್ಟ ಬೆಲ್ಲ ತಯಾರಿಸಿ ಸಂತೆಯಲ್ಲಿ ಕೊಳ್ಳುವವರಿಲ್ಲದೆ ಅಪಮಾನಗೊಂಡು ಸೋಲಬೇಕಾದುದು ಒಂದೆಡೆಯಾದರೆ ಫೂಲ್ ಬಾನು ತನ್ನ ಕೆಲಸದಲ್ಲಿ ಸುಧಾರಣೆ ತಂದುಕೊಳ್ಳಬೇಕಾದೆಡೆ ಸುಂದರವಾಗಿ ಅಲಂಕರಿಸಿಕೊಂಡು ತನ್ನ ಮೋಹದ ಬಲೆಯಲ್ಲಿ ಗಂಡನನ್ನು ಮರುಳುಗೊಳಿಸಿಬಿಡುತ್ತೇನೆ ಎಂದು ಹೊರಟುಬಿಡುವುದು ಅವನಲ್ಲಿ ಅಸಹ್ಯ ಹುಟ್ಟಿಸಿಬಿಡುತ್ತದೆ.

ಹೀಗೆ ತಾನೇ ಒದ್ದೋಡಿಸಿದ ಮಾಜುಬಿಯ ನೆನಪು ಅಡಿಗಡಿಗೂ ಅವನನ್ನು ಕಾಡುವ ಹೊತ್ತಿಗಾಗಲೇ ಅವಳು ವಿಧುರನೊಬ್ಬನನ್ನು ನಿಕಾಹ್ ಮಾಡಿಕೊಂಡು ಅವನ ತುಂಬು ಕುಟುಂಬದಲ್ಲಿ ಒಂದಾಗಿ ಬಾಳತೊಡಗಿರುತ್ತಾಳೆ. ಕಥಾನಾಯಕನಿಗೆ ಮಾಡಿಕೊಂಡ ತಪ್ಪಿಗೆ ಬಂದದಾರಿಗೆ ಸುಂಕವಿಲ್ಲವೆಂಬಂತೆ ಹತಾಶನಾಗಿ ಬೆನ್ನು ಹಾಕಿ ನಡೆಯಬೇಕಾಗುತ್ತದೆ.

ತ್ರಿಪುರಾದ ಪ್ರಜೆ ನನಗೆ ಈ ಕಥಾನಾಯಕನಂತೆ ಕಾಣತೊಡಗಿದ್ದಾರೆ. ಅಲ್ಲಿನ ಕಮ್ಯೂನಿಸ್ಟ್ ಪಕ್ಷವು ಮಾಜುಬಿಯಂತೆ ಕಾಣತೊಡಗಿದೆ. ಮತ್ತು ಈಗಾಗಲೇ ಒಂದು ವಿನಾಶವು ಎರಗಿಬಿಟ್ಟಿದೆ.

Leave a Reply