fbpx

ಕನಸುಗಳೆಲ್ಲಾ ಗುಳೆ ಹೋಗಿವೆ..

ಸ್ವಗತ

ಎನ್ ರವಿಕುಮಾರ್ / ಶಿವಮೊಗ್ಗ

ರಾತ್ರಿಯೇ..
ಇವತ್ತೂ…..ನೀನೆ ನನ್ನ
ತಬ್ಬಿಕೊಂಡು ಸಂತೈಸು
ಚಿನ್ನದ ಪಲ್ಲಂಗದ ಮೇಲೆ
ಕಣ್ಣೀರ ಚಿತ್ತಾರ ಚೆಲ್ಲಾಡಿವೆ
ಅವನ ಸುಖದ ಮಾತುಗಳು
ಸೋತ ನನ್ನ ಕಿವಿ ಮುಟ್ಟದಿರಲಿ
ನೋವ ಹಡೆಯುತ್ತಲೆ ಇದ್ದೇನೆ
ಕಾಲ ಕಾಲದ ಗರ್ಭದಿಂದಲೂ
ನಾನು ನಾನಷ್ಟೇ…

ಅವರೆಲ್ಲಾ ಆಳುತ್ತಿದ್ದಾರೆ
ನನ್ನನ್ನು.
ಆಳಿನಿಂದ ಆಳರಸರವರೆಗೂ ಪಾಲಾಗಿದ್ದೇನೆ
ಗಂಡರ ಗಂಡ  ಗಂಡಾಳಿಕೆ  ಶೌರ್ಯ – ಪರಾಕ್ರಮಕ್ಕೆ ನಾನೆ ಅಳತೆಗೋಲು
ಅಂತಃಪುರದ ಮುಸುಕಿನೊಳಗೆ
ಸವತಿಯರ ಸಾಲು ಅಲ್ಲಿ
ನಾನು ನಾನಷ್ಟೆ…

ದೇವರೂ ನನ್ನ ಬಿಡಲಿಲ್ಲ
ದಾಸಿಯಂತೆ ಇಟ್ಟುಕೊಂಡ
ತೊಗಲು ಹುರುಪು ಸುಕ್ಕುಗಟ್ಟಿದಾಗ ಊರ ಹೊರಗಟ್ಟಿದೆ
ಪುಣ್ಯದ ಹೊರೆಕಟ್ಟಿ ಕೆರೆಗೆ ಹಾರವೆಸೆದರು
ನನ್ನಂತಲ್ಲದ ಗರತಿಯನ್ನೂ
ಬೆಂಕಿಗೊಡ್ಡಿ  ದೇವರ ತಣಿಸಿದರು
ಬಾಯಾರಿದ ಬೆಂಕಿಯೂ
ಕಣ್ಣೀರ ಕುಡಿಯುತ್ತಿದೆ
ನಾನು ನಾನಷ್ಟೇ..

ಹೊಸ ಬಜಾರು ತೆರೆದಿದೆ
ರಂಗು ರಂಗಾಗಿ
ಮುಸುಕು ತೆಗದು ನನ್ನ ಚಿತ್ರಪಟ ತೂಗಿದ್ದಾರೆ
ಗಿರಾಕಿ‌ ಕರೆಯಲು
ದರಿದ್ರ ಮುಖ ಯಾರಿಗೂ ತೋರಿಸಬೇಡ ಎಂದವರು ಬಜಾರಿನಲ್ಲಿ‌ ನನ್ನನ್ನೆ ನೋಡುತ್ತಾ ನಾಲಿಗೆ ಸವರುತ್ತಿದ್ದಾರೆ.
ಪ್ರಭುತ್ವದ ಚಾವಡಿಯಲ್ಲಿ
ನನ್ನದೆ ಚರ್ಚೆ
ಎಲ್ಲರೂ ಇದ್ದರೂ
ನಾನು ನಾನಷ್ಟೇ….

ಕನಸುಗಳೆಲ್ಲಾ ಗುಳೆ ಹೋಗಿವೆ
ನಿದ್ದೆ ಒತ್ತರಿಸದ ಕಣ್ಣ ಪಾಪೆಯಿಂದ
ಅಂಗಾಂಗಗಳ ಖರೀದಿಗೆ ಬೆಲೆ ತೂಗುವವರ ದಂಡು ನೆರೆದಿದೆ ಪದವಾಗಿ,ಕಥೆಯಾಗಿ ಚರಿತ್ರೆಯಾಗಿ ಬರೆಯುವವರ ಬೆರಳ ತುದಿಯಲ್ಲಿ ನಾನೀನ್ನೂ ಬದುಕಿದ್ದೇನೆ
ನಾನು ನಾನಷ್ಟೇ…

2 Responses

  1. Nasrin says:

    Very nice…..

Leave a Reply

%d bloggers like this: