fbpx

ಎಂಜಾಯ್ ಮುಂಬೈ, ವಿತ್ ವಡಾಪಾವ್ ಆಂಡ್ ಕಟಿಂಗ್ ಚಾಯ್!

ಒಂದು ಸಂಜೆ ನೀವು ನರಿಮನ್ ಪಾಯಿಂಟ್ ತುದಿಯಲ್ಲಿ ಕೂತಿದ್ದೀರಿ ಅಂತಿಟ್ಟುಕೊಳ್ಳಿ. ಸೂರ್ಯಾಸ್ತದ ಕೆಂಪು ಸಮುದ್ರದ ತೆರೆಗಳಲ್ಲಿ ಕಲಸಿಕೊಂಡು ನಿಮ್ಮತ್ತ ಬರುತ್ತಿದೆ. ಸಿಮೆಂಟಿನ ಚತುಷ್ಪದಿಗಳಿಗೆ ಅಪ್ಪಳಿಸುವ ತೆರೆಗಳು ನಿಮ್ಮ ಮೇಲೆ ಆಗಾಗ ಸಿಂಚನಗೈಯುತ್ತಿವೆ. ಕಡಲಿನಿಂದ ಬೀಸುವ ತಂಗಾಳಿ ದಿನದ ಧಗೆಯನ್ನು ತಂಪಾಗಿಸುತ್ತಿದೆ. ಆವರಿಸುತ್ತಿರುವ ಕತ್ತಲಲ್ಲಿ ಮರಿನ್‌ಡ್ರೈವ್ ನಿಧಾನವಾಗಿ ಬೆಳಕಿನಿಂದ ಸಿಂಗರಿಸಿಕೊಳ್ಳುತ್ತಿದೆ.

ಪರವಶಗೊಳಿಸುವ ಆ ಗಳಿಗೆಯಲ್ಲಿ ನಿಮ್ಮ ಮನಸ್ಸಿನಲ್ಲಿ ಆಹಾ ಈಗೊಂದು ಚಹಾ ಸಿಕ್ಕಿದರೆ, ಎಂಬ ಭಾವನೆ ಹಾದುಹೋಗುತ್ತದೆ. ಅಗೋ ಕಿಣಿಕಿಣಿ ಬೆಲ್ಲಿನ ಸೈಕಲ್  ಹುಡುಗ ಚಾಯ್ ಚಾಯ್ ಎನ್ನುತ್ತಾ ಬಂದೇ ಬಿಟ್ಟಿದ್ದಾನೆ! ಅವನ ಕಟಿಂಗ್ ಚಾಯ್ ನಿಮ್ಮ ಪಂಚೇಂದ್ರಿಯಗಳನ್ನು ಸೂಕ್ಷ್ಮಗೊಳಿಸಿ ಆ ದೃಶ್ಯ ವೈಭವದೊಳಗೆ ಲೀನವಾದ ಅನುಭೂತಿ ಉಂಟಾಗುತ್ತದೆ!

ಅಥವಾ ಇನ್ನೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಮುಂಬೈ ದರ್ಶನಕ್ಕೆಂದು ಲೋಕಲ್ ಟ್ರೇನು ಹತ್ತಿದ್ದೀರಿ. ಆ ಗಚ್ಚಾಗಿಚ್ಚಿ, ಧಕ್ಕಾಮುಕ್ಕಿ, ಬೆವರು, ಬೈಗುಳಗಳಿಂದ ನಜ್ಜುಗುಜ್ಜಾಗಿ ಹೇಗೋ ನಿಮ್ಮ ಸ್ಟೇಶನ್ನಿನಲ್ಲಿ ಇಳಿದು ಸಾಕಪ್ಪಾ ಎನಿಸಿ ಸ್ಟೇಶನ್ನಿನ ಹೊರಗೆ ಆಗಷ್ಟೇ ಕುದಿಸಿಳಿಸಿದ ಚಾಯ್ ಹೀರುತ್ತೀರಿ. ಒಂದೆರಡು ಗುಟುಕು ಹೀರುತ್ತಿರುವಂತೆಯೇ ಆಯಾಸವೆಲ್ಲ ಕರಗಿ ನಿಮ್ಮಲ್ಲಿ ಮತ್ತೆ ಚೈತನ್ಯ ಚಿಗುರಿಕೊಳ್ಳುತ್ತದೆ; ಮುಂಬೈ ಸಹನೀಯವಾಗುತ್ತದೆ!

ಹೀಗೆ ಖುಶಿಗೂ ದಣಿವಿಗೂ ಸಾಥ್ ನೀಡುವ ಮುಂಬೈ ಸಂಗಾತಿಯೆಂದರೆ ಕಟಿಂಗ್ ಚಾಯ್! ನಿಮ್ಮನ್ನೇ ಚಹ ಕುಡುಕಿ ಬರುವುದು, ಕುದಿಸುವಲ್ಲೇ ನಿಂತು ಚಹ ಕುಡಿಯುವುದು- ಮುಂಬೈ ನಿಮಗೆ ಒದಗಿಸುವ ವಿಶೇಷ ಆಯ್ಕೆಗಳು! ಮುಂಬೈನ ಯಾವುದೇ ಭಾಗದಲ್ಲೂ ನಿಮಗೆ ಫಟಾಫಟ್ ಒಂದು ಚಹ ಕುಡಿಯಬೇಕೆನಿಸಿದರೆ ಹೊಟೆಲುಗಳನ್ನು ಹುಡುಕಬೇಕಾದ ಅಗತ್ಯವಿರುವುದಿಲ್ಲ. ನಾಲ್ಕೇ ಮಾರು ದೂರದಲ್ಲಿ  ಫುಟಪಾತಿನ ಒಂದು ಮೂಲೆಯಲ್ಲಿ ಚಾಯ್‌ವಾಲಾ ಬಿಸಿಬಿಸಿ ಚಹ ಕುದಿಸುತ್ತಿರುತ್ತಾನೆ.

ನಾಲ್ಕು ಕಾಲುಗಳ ಮೇಲೆ ಅಡ್ಡ ಇಟ್ಟ ಎರಡು ಬೈ ಮೂರರ ಹಲಗೆಯೇ ಅವನ ಕಿಚನ್. ಒಂದು ಸ್ಟೋವ್ ಮತ್ತು ನಾಲ್ಕಾರು ಚಿಕ್ಕಚಿಕ್ಕ ಪಾತ್ರೆಗಳು ಹತ್ತಾರು ಗ್ಲಾಸುಗಳು ಅವನ ಆಸ್ತಿ. ಹಾಲು ಚಹಪುಡಿ ಸಕ್ಕರೆ ಜೊತೆಗೆ ಶುಂಠಿ ಏಲಕ್ಕಿ ಅವನ ಕಚ್ಚಾ ಸಾಮಗ್ರಿಗಳು. ಉಕ್ಕಿ ಬರುವ ಚಹವನ್ನು ಸೌಟಿನಿಂದ ಎತ್ತೆತ್ತಿ ಹುಯ್ಯುವ ಮೂಲಕ ಅದಕ್ಕೊಂದು ಹದ ತರಿಸುತ್ತಾನೆ. ಹಸಿ ಶುಂಠಿಯನ್ನೂ ಏಲಕ್ಕಿಯನ್ನೂ ಒಂದು ಪ್ರಮಾಣದಲ್ಲಿ ಕುಟ್ಟಿ ಸೇರಿಸಿದ್ದಾನೆ. ಅವೆಲ್ಲವೂ ಒಂದು ಕುದಿಬಿಂದುವಿನಲ್ಲಿ ಅನುರಕ್ತಗೊಂಡು ಆಹ್ಲಾದಕರ ಘಮವೊಂದು ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಚಹದ ಆ ಪರಿಮಳವೇ ಮುಂಬೈನ ಎಲ್ಲಾ ಅಪರಿಚಿತ ಮೊಹಲ್ಲಾಗಳಿಗೂ ಒಂದು ರೀತಿಯ ಆಪ್ತತೆಯನ್ನು ತರುತ್ತದೆ!

ಭಾರತೀಯರು ಚಹಪ್ರಿಯರು. ಪ್ರದೇಶಗಳಿಗನುಗುಣವಾಗಿ ರುಚಿಯಲ್ಲಿ ಅಷ್ಟಿಷ್ಟು ಬದಲಾವಣೆ ಕಾಣುತ್ತೇವೆ. ಮುಂಬೈನ ವಿಶೇಷವೆಂದರೆ ಅಲ್ಲಿ ಸಿಗುವ ಚಹಗಳ ವೈವಿಧ್ಯತೆ… ಅದ್ರಕ್ ಚಾಯ್, ಇಲೈಚಿ ಚಾಯ್, ಮಸಾಲಾ ಚಾಯ್, ದೂಧ್‌ಕಮ್ ಚಾಯ್, ಚೀನಿಕಮ್ ಚಾಯ್, ಖಡಕ್ ಚಾಯ್, ಕಟಿಂಗ್ ಚಾಯ್….ಇಷ್ಟೆಲ್ಲ ಇದ್ದೂ ಸ್ಪೆಷಲ್ ಚಾಯ್ ಮತ್ತೆ ಬೇರೆ! ನಡುರಾತ್ರಿ ವರೆಗೂ ನಸುಕಿನ ನಾಲ್ಕರ ಜಾವದಲ್ಲೂ ಚಹ ಬೇಕೆನಿಸಿದರೆ ಚಿಂತಿಸಬೇಕಾಗಿಲ್ಲ. ಅಲ್ಲೆಲ್ಲಾದರೂ ಚಾಯ್ ಸಿಕ್ಕೇ ಸಿಗುತ್ತದೆ!

ಪದೇ ಪದೇ ಚಹ ಕುಡಿಯುವ ಅಭ್ಯಾಸವಿರುವ ಮುಂಬೈಕರರು ಕಟಿಂಗ್ ಚಾಯ್ ಇಷ್ಟಪಡುತ್ತಾರೆ. ಕಟಿಂಗನಲ್ಲಿ ಪ್ರಮಾಣ ಕಡಿಮೆಯಾಗುವುದರಿಂದ ನಾಲ್ಕಾರು ಬಾರಿ ಕುಡಿದರೂ ಒಟ್ಟಾರೆ ಅದು ಹೆಚ್ಚೇನು ಅನಿಸುವುದಿಲ್ಲ.  ಇಡೀ ಕಪ್ ಚಹವನ್ನೇ ಅರ್ಧ ಮಾಡಿಕೊಟ್ಟರೆ ಅದು ಕಟಿಂಗ್ ಚಾಯ್ ಆಗುತ್ತದೆ ಎಂದು ಭಾವಿಸಬೇಡಿ. ಕಟಿಂಗ್ ಚಾಯ್ ಮಾಡುವ ಸ್ಟೈಲೇ ಬೇರೆ. ಅದನ್ನು ನೀಡುವ ಗ್ಲಾಸೇ ಬೇರೆ. ಅದರ ಟೇಸ್ಟೇ ಬೇರೆ! ನಾಲ್ಕಾರು ಗುಟುಕಿನಲ್ಲಿಯೇ ಪೂರ್ತಿ ಕಪ್ ಚಹ ಕುಡಿದ ಸಂತೃಪ್ತಿ ಸಿಗುವಂತಿರಬೇಕು. ಹೀಗಾಗಿ ಇದನ್ನು ವಿಶೇಷ ಕಾಳಜಿಯಿಂದ ಮಾಡಬೇಕಾಗುತ್ತದೆ. ಚಹಪುಡಿ ಸಕ್ಕರೆ ಹಾಲಿಗೆ ಆಗಷ್ಟೆ ಜಜ್ಜಿದ ಶುಂಠಿ ಏಲಕ್ಕಿ ಇತ್ಯಾದಿ ಹಾಕಿ ದೀರ್ಘ ಸಮಯದ ವರೆಗೆ ಕುದಿಸಿ ಸೌಟಿನಲ್ಲಿ ಮೇಲೆಕೆಳಗೆ ಆಡಿಸಿ ಹದ ತರಿಸಲಾಗುತ್ತದೆ. ಆಗಲೇ ಅದಕ್ಕೆ ಟೇಸ್ಟ್ ಬಡ್‌ಗಳನ್ನು ಓಲೈಸುವ ರುಚಿ, ಹಿತವೆನಿಸುವ ಬಣ್ಣ, ನವಿರೇಳಿಸುವ ಗಂಧ ಮಿಳಿತವಾಗುತ್ತವೆ. ಕುಡಿದಾಗ “ಮಜಾ ಆಗಯಾ” ಎನ್ನುವ ಉದ್ಘಾರ ಹೊಮ್ಮುತ್ತದೆ!

ಮುಂಬೈನ ಪ್ರತಿಯೊಂದು ರಸ್ತೆ ಬದಿಯಲ್ಲಿ, ಪುಟಪಾತುಗಳ ಮೇಲೆ, ಇಮಾರತುಗಳ ಸಂಧಿಯಲ್ಲಿ, ರೋಡ್‌ಗಳ ಜಾಯಿಂಟ್‌ಗಳಲ್ಲಿ, ಮರದ ನೆರಳಲ್ಲಿ ಚಾಯ್ ಟಪ್ರಿಗಳು ತಮ್ಮ ಛತ್ರಿ ಏರಿಸಿರುತ್ತಾರೆ. ಇವೆಲ್ಲವೂ ಅನಧಿಕೃತವಾಗಿ ನಡೆಯುವ ಅಡ್ಡೆಗಳೇ! ಲೋಕಲ್ ದಾದಾಗಳು, ಪೋಲೀಸು, ಬಿಎಮ್‌ಸಿ ಇತ್ಯಾದಿಗಳಿಗೆಲ್ಲ ಹಫ್ತಾ ಹೋದರೂ ಯಾವುದೇ ಸಮಯದಲ್ಲೂ ಮಹಾನಗರಪಾಲಿಕೆಯ ಗಾಡಿ ಬಂದು ಸರಕುಗಳನ್ನೆಲ್ಲಾ ಎತ್ತೊಯ್ಯುವ ಭಯವು ಸದಾ ಚಾಯ್‌ವಾಲಾಗಳ ಧಿಮಾಕಿನಲ್ಲಿ ಕುದಿಯುತ್ತಿರುತ್ತದೆ.

ಮುಂಬೈನ ಮುಕ್ಕಾಲು ಭಾಗ ಚಾಯ್ ಟಪ್ರಿಗಳು ಯುಪಿ ಬಿಹಾರಿಗಳದ್ದು. ಈ ಟಪ್ರಿಗಳಲ್ಲಿ ಕೆಲಸ ಮಾಡುವವರಲ್ಲಿ ಇನ್ನೂ ಮೀಸೆ ಮೂಡದ ಕಿಶೋರರೇ ಹೆಚ್ಚಿರುತ್ತಾರೆ. ದೂರದ ರಾಜ್ಯಗಳಿಂದ ಕಾಮ್‌ದಂಧಾ ಹುಡುಕಿ ಮುಂಬೈಗೆ ವಲಸೆ ಬರುವ ಹೆಚ್ಚಿನ ಬಾಲಕರು ಚಾಯ್ ಟಪ್ರಿಗಳ ಮೂಲಕ ಎಂಟ್ರಿ ಪಡೆಯುತ್ತಾರೆ. ಚಾಕಪ್‌ಗಳನ್ನು ತೊಳೆಯುವುದು, ಶುಂಠಿ ಏಲಕ್ಕಿಗಳನ್ನು ಕುಟ್ಟಿಕೊಡುವುದು,  ಹತ್ತಿರದ ಬಿಲ್ಡಿಂಗುಗಳಿಗೆ, ಅಲ್ಲಿಯ ನೌಕರವರ್ಗದವರಿಗೆ ಚಹ ಸಪ್ಲೈ ಮಾಡುವುದು ಇತ್ಯಾದಿ ಕೆಲಸಗಳ ಮೂಲಕವೇ ಅವರಲ್ಲಿ ಮುಂಬೈ ಅನಾವರಣಗೊಳ್ಳುತ್ತದೆ!

ಬಹುಮಹಡಿ ಕಟ್ಟಡಗಳೊಳಗೆ ರೆಸ್ಟೋಗಳೂ, ಕ್ಯಾಂಟೀನುಗಳೂ, ಕಾಫಿ ಹೌಸಗಳೂ, ಚಾಯ್ ವೆಂಡಿಂಗ್ ಮಶೀನುಗಳೂ ಇದ್ದರೂ ನಿಯಮಿತವಾಗಿ ರಸ್ತೆ ಬದಿಯ ಕಟಿಂಗ್ ಚಾಯ್ ಕುಡಿಯಲು ಮಹಡಿಯಿಂದಿಳಿದು ಬರುವವರೂ ಇರುತ್ತಾರೆ. ಮಿನಿಸ್ಕರ್ಟಿನ, ಫಟಾಹುವಾ ಜೀನ್ಸನ ಚೆಲುವೆಯರೂ ಒಂದು ಕೈಯಲ್ಲಿ ಚಾಯ್ ಗ್ಲಾಸ್ ಇನ್ನೊಂದು ಕೈಯಲ್ಲಿ ಸಿಗರೇಟು ಹಿಡಿದು ನಿಂತಾಗ ಈ ಫುಟಪಾತಿನ ಚಾಯ್ ಪಟ್ರಿಗಳಿಗೂ ಗ್ಲಾಮರ್ ಬರುತ್ತದೆ.

ಚಾಯ್ ಪಟ್ರಿಗಳಲ್ಲಿ ಕೆಲಸಕ್ಕಿರುವ ಚೋಟುಗಳದು ಏನೇನೋ ಕತೆಗಳಿರುತ್ತವೆ. ಯುಪಿಯ ಸೀತಾಪುರ್ ಬಿಹಾರದ ಗೋಪಾಲಗಂಜ್ ಜಾರ್ಖಂಡಿನ ಹಜಾರಿಭಾಗ್- ಹೀಗೆ ಅವರೆಲ್ಲ ಎಲ್ಲಿಂದಲೋ ಬಂದವರು!  ಗರೀಬಿ ಕಾರಣದಿಂದ ಸ್ಕೂಲು ಬಿಟ್ಟು ದೂರದ ಮುಂಬೈಗೆ ಬಂದಿರುವ ಅವರಿಗೆ ರಸ್ತೆ ಬದಿಯ ಮರದ ನೆರಳೇ ಅವರಿಗೆ ಆಸರೆ. ಆ ಮರಕ್ಕೆ ಗಂಗಾ ಕಿನಾರೆಯ ದೇವದೇವತೆಗಳನ್ನು ಮೊಳೆಹೊಡೆದು ತೂಗಿಕೊಂಡಿರುತ್ತಾರೆ. ಒಂದೆರಡು ಕ್ರಿಕೆಟ್ ಬ್ಯಾಟುಗಳು ಮರದ ಬುಡದಲ್ಲಿ ಚಾಚಿಕೊಂಡಿರುತ್ತವೆ. ಹಗಲಲ್ಲಿ ಅವುಗಳಿಗೆ ದೀರ್ಘ ಟೀ ಬ್ರೇಕ್ ! ಚಾಯ್ ಪಟ್ರಿಯ ಚೋಕರಾಗಳು ಅವುಗಳನ್ನು ಸಜೀವಗೊಳಿಸುವುದು ನಡುರಾತ್ರಿ ಬೀದಿಗಳು ಬರಿದಾದ ನಂತರವೇ!

ಚಹದಂತೆಯೇ ಮುಂಬೈಯನ್ನು ಬೆಸೆಯುವ ಇನ್ನೊಂದು ಅಂಶವೆಂದರೆ ವಡಾಪಾವ್. ಬಡವರ ಪಾಲಿಗೆ ಹೊಟ್ಟೆತುಂಬಿಸುವ ಶ್ರೀಮಂತರ ಪಾಲಿಗೆ ಸಮಥಿಂಗ್ ಡಿಫರೆಂಟ್ ಟ್ರೈ ಮಾಡುವ ಮತ್ತು ಪ್ರವಾಸಿಗರಿಗೆ ರುಚಿಯ ಮೂಲಕವೂ ಮುಂಬೈ ದರ್ಶನ ಮಾಡಿಸುವ ಈ ಸ್ಟ್ರೀಟ್‌ಫುಡ್ ಮುಂಬೈ ಬರ್ಗರ್ ಎಂದು ಪ್ರಸಿದ್ಧವಾಗಿದೆ!  ಬೇಯಿಸಿದ ಬಟಾಟೆ ಕೊತ್ತಂಬರಿ ಸೊಪ್ಪು ಜೀರಿಗೆ ಮೆಣಸು ಬೆಳ್ಳುಳ್ಳಿ ಇಂಗು ಸಾಸಿವೆ ಇತ್ಯಾದಿ ಮಸಾಲೆ ಕಲಸಿ ಕಡ್ಲೆಹಿಟ್ಟಿನಲ್ಲಚ್ಚಿ ಎಣ್ಣೆಯಲ್ಲಿ ಬಿಟ್ಟರೆ ಗರಂಗರಂ ವಡಾ ತಯಾರು. ಉಬ್ಬಿದ ಪಾವ್ ಕತ್ತರಿಸಿ ಹೊಟ್ಟೆಗೆ ಹರಾಚಟ್ನಿ ಸವರಿ ನಡುವೆ ವಡಾ ಇಟ್ಟು ಬಾಯೊಳಗಿಟ್ಟರೆ ಆಹಾ ಅದರ ಮಜವೇ! ನಂಜಿಕೊಳ್ಳಲು ಬೆಳ್ಳುಳ್ಳಿ ಚಟ್ನಿ ಮತ್ತು ಕಚ್ಚಿಕೊಳ್ಳಲು ಹಸಿಮೆಣಸು ಬೇರೆ!

ಧಾವಂತದಲ್ಲಿರುವ ಮುಂಬೈಕರರಿಗೆ ಇದು ಹೇಳಿ ಮಾಡಿಸಿದ ತಿನಿಸು. ಕೆಲವು ಪ್ರಸಿದ್ಧ ವಡಾಪಾವ್ ಸೆಂಟರುಗಳಲ್ಲಿ ದೊಡ್ಡ ಕ್ಯೂನೇ ಇರುತ್ತದೆ. ಪಾನೀಪುರಿ, ಭೇಲ್‌ಪುರಿ, ಪಾವ್‌ಭಾಜಿ ಮುಂತಾದ ತಿನಿಸುಗಳೂ ಮುಂಬೈನಲ್ಲಿ ಪ್ರಸಿದ್ಧವಾದರೂ ವಡಾಪಾವ್‌ಗೆ ಕೊಂಡೊಯ್ಯುವ ಅನುಕೂಲತೆ ಇರುವುದರಿಂದ ಅವಸರದಲ್ಲಿರುವ ಮುಂಬಯಿಗರು ಅದನ್ನು ನಡೆಯುವ ದಾರಿಯಲ್ಲಿ ಅಥವಾ ಓಡುವ ಲೋಕಲ್‌ನಲ್ಲಿ ತಿನ್ನಬಹುದು. ಇದರಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟ್ ಮತ್ತು ಸ್ವಲ್ಪ ಪ್ರೋಟೀನ್ ಇರುವುದರಿಂದ ವಡಾಪಾವ್ ಹೊಟ್ಟೆಯನ್ನೂ ತುಂಬಿಸುತ್ತದೆ ಮತ್ತು ತಕ್ಷಣಕ್ಕೆ ಅಗತ್ಯವಿರುವ ಶಕ್ತಿಯನ್ನೂ ಪೂರೈಸುತ್ತದೆ. ಈ ಕಾರಣಗಳಿಗಾಗಿಯೇ ಉಳಿದ ತಿನಿಸುಗಳಿಗಿಂತ ವಡಾಪಾವ್‌ಗೆ ಬಡಾ ಡಿಮಾಂಡ್!

ಚಾಯ್ ಟಪ್ರಿಗಳನ್ನು ಸಾಮಾನ್ಯವಾಗಿ ಯುಪಿ ಬಿಹಾರಿ ಭಯ್ಯಾಗಳು ಚಲಾಯಿಸುತ್ತಿದ್ದರೆ ವಡಾಪಾವ್ ಸ್ಟಾಲ್‌ಗಳನ್ನು ಹೆಚ್ಚಾಗಿ ಮರಾಠಿಗರು ನಡೆಸುತ್ತಾರೆ. ಶಿವಸೇನೆಯವರು ವಡಾಪಾವ್‌ನ್ನು ಮರಾಠಿ ಮಾಣೂಸ್‌ರಿಗೆ ರೋಜಗಾರ್ ಒದಗಿಸುವ ಸಾಧನವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದುಂಟು. ವಡಾಪಾವ್‌ಗೆ ಮೆಕಡೊನಾಲ್ಡ್ ನಂತೆ ಜಾಗತಿಕ ಹೆಸರು ಮತ್ತು ವ್ಯಾಪ್ತಿ ಸಿಗಬೇಕು ಎಂಬುದು ಅವರ ಅಜೆಂಡಾ. ಏನೇ ಇರಲಿ, ಮರಾಠಿಗರ ಕೈಯಲ್ಲಿ ತಯಾರಾದ ವಡಾ ಮತ್ತು ಚಟ್ನಿಗೆ ವಿಶಿಷ್ಟ ರುಚಿ ಇರುತ್ತದೆ ಎಂಬುದು ಮಾತ್ರ ಸತ್ಯವೇ!

ಮುಂಬೈನಲ್ಲಿ ಅಪ್ಪಟ ರುಚಿಯ ಫುಡ್ ಎಲ್ಲಿ ಸಿಗುತ್ತದೆ ಎಂಬುದನ್ನು ಗೂಗಲ್ ಮಾಮಾಗೆ ಕೇಳಿದರೆ ಸಾಕು, ನಿಮಗೆ ಸುಲಭದಲ್ಲಿ ಮಾಹಿತಿ ಸಿಗುತ್ತದೆ. ಆದರೆ ಅಪ್ಪಟ ಮುಂಬೈನ ಪೆಹಚಾನ್ ಆಗಿರುವ ಚಾಯ್ ಮತ್ತು ವಡಾಪಾವ್ ಹುಡುಕಲು  ಸರ್ಚ್ ಇಂಜಿನ್ನುಗಳೇನು ಬೇಕಾಗಿಲ್ಲ. ಬಸ್, ಅದ್ರಕ್ ಪರಿಮಳವನ್ನೂ ಗರಗರಿ ವಡಾ ಗಂಧವನ್ನೂ ಘ್ರಾಣಿಸುವ ಶಕ್ತಿಯಿದ್ದರೆ ಸಾಕು! ಯಾವುದೇ ಗಲ್ಲಿಯಲ್ಲೂ ಇವು ನಿಮ್ಮನ್ನು ಸ್ವಾಗತಿಸುತ್ತವೆ; ಅದೂ ಕೈಗೆಟಕುವ ಬೆಲೆಯಲ್ಲಿ!

ಸೋ, ನೆಕ್ಸಟೈಮ್ ಎಂಜಾಯ್ ಮುಂಬೈ, ವಿತ್ ವಡಾಪಾವ್ ಆಂಡ್ ಕಟಿಂಗ್ ಚಾಯ್!

4 Responses

 1. ಚಹಾ ಎಂದರಾಗದ ನನ್ನನ್ನೂ ನಿಮ್ಮ ಕಟ್ಟಿಂಗ್ ಚಾಯ್ ವಡಾ ಪಾವ್ ಲೇಖನ ,ರಂಜಿಸಿತು ರಾಜೀವ್ . ನಗರದ ಆಪ್ತ ಚಿತ್ರಗಳನ್ನು ಹೀಗೇ ಕೊಡುತ್ತಾ ಇರಿ. ಓದಲು ಕಾದಿದ್ದೇವೆ.

  • ರಾಜೀವ ನಾಯಕ says:

   ಓಹ್, ಹೌದಾ? ಚಹ ಕಂಡರಾಗದಿದ್ರೂ ಚಾಯ್ ಲೇಖನ ಇಷ್ಟಪಟ್ರಿ, ಪುಣ್ಯಕ್ಕೆ 🙂 ಥ್ಯಾಂಕ್ಯೂ ಶ್ಯಾಮಲಾ ಮ್ಯಾಮ್..regards

 2. ಅಜಿತ says:

  ಎಷ್ಟೊಂದು ಆಪ್ತ ಬರಹ. ನನ್ನ ಮುಂಬೈ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು

  • ರಾಜೀವ ನಾಯಕ says:

   ಥ್ಯಾಂಕ್ಯೂ ಅಜಿತ ಸರ್…ಆ ನೆನಪುಗಳಲ್ಲಿ ಕಟಿಂಗ್ ಚಾಯ್ ಕೂಡ ಇರುತ್ತೆ ಅಂದುಕೊಳ್ಳುತ್ತೇನೆ 🙂

Leave a Reply

%d bloggers like this: