fbpx

ನಾಳೆಯನ್ನು ಕಂಡವರು..

ಸಮಾಜವಾದಿ ರಷ್ಯಾದಲ್ಲಿ ಮಹಿಳೆ

ಸುನಂದಾ ಕಡಮೆ

ನಮ್ಮ ಮಹಿಳಾ ಸಮುದಾಯದ ಜಾಗ್ರತಿಗೆ ಲೆನಿನ್ ಚಿಂತನೆಗಳು ಎಷ್ಟು ಮಹತ್ವದ್ದು ಎಂಬುದನ್ನು ಅರಿತುಕೊಳ್ಳಲೇಬೇಕಾದ ಒಂದು ಸಂದಿಗ್ಧ ಕಾಲಘಟ್ಟದಲ್ಲಿ ನಾವಿದ್ದೇವೆ.

ಇತ್ತೀಚಿನ ಕೆಲ ಪ್ರಸಂಗಗಳನ್ನು ಅವಲೋಕಿಸಿದರೆ, ನಮ್ಮನ್ನು ಫ್ಯಾಸಿಸ್ಟರು ಪುನಃ ಅವೈಜ್ಞಾನಿಕವಾಗಿ ಸನಾತನದ ಗುಹೆಗೆ ಎಳೆದೊಯ್ಯುವ ಹುನ್ನಾರದಲ್ಲಿರುವುದು ಅಪಾಯಕಾರಿಯಾಗಿ ಇರಿಯುತ್ತಿದೆ.

‘ಸಮಾಜವಾದಿ ವ್ಯವಸ್ಥೆ ಮಹಿಳೆಯರ ಅಸ್ತಿತ್ವಕ್ಕೆ ನಿಜವಾದ ಘನತೆಯನ್ನು ತಂದುಕೊಟ್ಟಿತು’ ಎಂಬ ಮಾತಿನ ಮೂಲಕವೇ ಈ ಪುಸ್ತಕದ ಪರಿಚಯವನ್ನು ಸ್ವಲ್ಪದರಲ್ಲಿ ಮಾಡಬಹುದು ಅಂದುಕೊಂಡಿದ್ದೇನೆ.

ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರ ಸಮಾನತೆಯ ಕುರಿತು ಯೋಚಿಸಲು ಆರಂಭಿಸಿದ್ದು ರಷ್ಯಾ, ಅದೂ 1917 ರಷ್ಟು ಹಿಂದೆಯೇ. ಅಲ್ಲಿ ತಾರತಮ್ಯ ರಹಿತ ಸಮಾನತೆಯ ಸಾಮಾಜಿಕ ಸೃಷ್ಟಿಯ ಕನಸನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಚಿಂತಿಸಿದವರು ಲೆನಿನ್.

‘ಒಂದು ಐತಿಹಾಸಿಕ ಯುಗದ ಅಭಿವೃದ್ಧಿಯನ್ನು ಅಲ್ಲಿನ ಮಹಿಳೆಯರು ಸ್ವಾತಂತ್ರ್ಯದತ್ತ ಸಾಗಿರುವ ಪ್ರಗತಿಯ ಪ್ರಮಾಣದಿಂದ ಅಳೆಯಬಹುದು, ಮಹಿಳಾ ವಿಮುಕ್ತಿಯ ಮಟ್ಟವು ಸಮಾಜದ ಸಂಕೀರ್ಣ ವಿಮುಕ್ತಿಯ ನೈಜ ಮಾನದಂಡವನ್ನು ಬಿಂಬಿಸುತ್ತದೆ’ ಅಂದಿದ್ದರು ಕಾರ್ಲಮಾಕ್ರ್ಸ. ಈ ಮಾತನ್ನು ಲೆನಿನ್ ಹೇಗೆ ಕಾರ್ಯರೂಪಕ್ಕೆ ತಂದರು ಎಂಬ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.

‘ವಿಮೆನ್ಸ್ ಅಂಡರ್ ಸೋಷಿಯಲಿಸಂ’ ಎಂಬ ಪುಸ್ತಕವೊಂದರ ಅನುವಾದಿತ ಅವತರಣಿಕೆಯಿದು. ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆಯು ಇದನ್ನು ಪ್ರಕಟಿಸಿದೆ. ಸಮಾಜದಲ್ಲಿ ಅತ್ಯಂತ ದುರ್ಭರವಾಗಿ ಶೋಷಣೆಗೊಳಪಟ್ಟವರನ್ನು ಅದರಲ್ಲೂ ಮಹಿಳೆಯರನ್ನು ಪೂರ್ಣ ಪ್ರಮಾಣದ ಮಾನವರನ್ನಾಗಿ ಬೆಳೆಸಿ, ಪೋಷಿಸಿದಂತಹ ಸಮಾಜವಾದಿ ರಷ್ಯಾದ ಒಂದು ನೋಟವನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.

1917 ರ ನವೆಂಬರ್‍ನಲ್ಲಿ ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿಯಾದ ನಂತರ ಸೋವಿಯತ್ ಸಮಾಜವಾದಿ ರಾಷ್ಟ್ರಗಳ ಒಕ್ಕೂಟವೊಂದು ಸ್ಥಾಪನೆಯಾಗುತ್ತದೆ. ಈ ನವೆಂಬರ್ ಕ್ರಾಂತಿಪೂರ್ವ ರಷ್ಯಾದ ಮಹಿಳೆಯರ ಸ್ಥಿತಿಗತಿ ಹಾಗೂ ಕ್ರಾಂತಿಯೋತ್ತರ ಮಹಿಳೆಯರ ಸ್ಥಿತಿಗತಿಗಳನ್ನು ನಾವಿಲ್ಲಿ ಕಾಣಬಹುದು. ನವೆಂಬರ್ ಕ್ರಾಂತಿ ಇದೊಂದು ಬಹುದೊಡ್ಡ ಐತಿಹಾಸಿಕ ಸಾದನೆಯ ಘಟ್ಟ, ಅದಕ್ಕೀಗ ಶತಮಾನೋತ್ಸವದ ಪಯಣ.

ಕ್ರಾಂತಿಯೋತ್ತರ ಮಹಿಳೆಯರ ಸ್ಥಿತಿಗತಿ ತೀರಾ ದುರಂತಮಯವೂ ಹೃದಯವಿದ್ರಾವಕವಾಗಿಯೂ ಇತ್ತು. ಆಗ ಸಮಾಜದಲ್ಲಿ ಆಸ್ತಿಯುಳ್ಳವರು ಮತ್ತು ಆಸ್ತಿಯಿಲ್ಲದವರು ಎಂಬ ಎರಡೇ ರೀತಿಯ ವರ್ಗೀಕರಣವಿತ್ತು. ಉಳ್ಳವರು ಸರಿಯಾದ ಪ್ರತಿಫಲವನ್ನೂ ನೀಡದೇ ಇಲ್ಲದವರನ್ನು ಬಳಸಿಕೊಂಡು ಶೋಷಿಸುತ್ತಿದ್ದರು. ನ್ಯಾಯವೆಲ್ಲವೂ ಉಳ್ಳವರ ಪರವಾಗಿಯೇ ವಾದ ಮಂಡಿಸುತ್ತಿತ್ತು. ಆ ರೀತಿಯ ಅಸಮಾನತೆಯಲ್ಲಿ ಬಡವರು ದೀನ ದಲಿತರು ಕೂಲಿ ಕಾರ್ಮಿಕರು ಸಾವು ಬದುಕಿನ ಮಧ್ಯೆ ನರಳುತ್ತಿದ್ದರು. ಮಾನವ ಹಕ್ಕುಗಳ ಕುರಿತಾದ ಅರಿವು ತಿಳಿವಳಿಕೆಗಳು ಮೂಡಲು ಅವಕಾಶವೇ ಇಲ್ಲದ ಸನ್ನಿವೇಶದಲ್ಲಿ ಲೆನಿನ್, ಮಾಕ್ರ್ಸರಿಂದ ಪ್ರಭಾವಿತರಾಗಿ ಶೋಷಿತ ವರ್ಗವನ್ನು ಕ್ರಾಂತಿಯ ದಾರಿಗೆ ಸೆಳೆಯಲು ಯಶಸ್ವಿಯಾದರು.
ಲಿಂಗ ಅಸಮಾನತೆಯ ವಿಷಯಕ್ಕೆ ಬಂದರೆ ಯಾವಾಗ ಕುಟುಂಬದ ಯಜಮಾನಿಕೆ ತಾಯಿಯಿಂದ ತಂದೆಗೆ ಹಸ್ತಾಂತರವಾಯಿತೋ ಅಲ್ಲಿಂದಲೇ ಪುರುಷ ಪ್ರಾಧಾನ್ಯತೆಯ ಉಗಮವಾಗಿತ್ತು.

ಕ್ರಾಂತಿಯೋತ್ತರ ರಷ್ಯಾದಲ್ಲಿ ಜಾರ್ ದೊರೆಯ ನಿರಂಕುಶ ಪ್ರಭುತ್ವ ಇತ್ತು, ಒಂದು ರೀತಿಯಲ್ಲಿ ಹಿಟ್ಲರ್ ಆಡಳಿತದಂತೆ. ಲೆನಿನ್ ಅದನ್ನು ಜಾರಿಷ್ಟ್ ರಷ್ಯಾ ಅಂತಲೇ ಕರೆಯುತ್ತಿದ್ದರು. ಜಾರಿಸ್ಟ್ ರಷ್ಯಾದಲ್ಲಿ ಕಾರ್ಮಿಕರಿಗೆ ಹಾಗೂ ರೈತಾಪಿ ವರ್ಗಕ್ಕೆÀ ಮತ್ತು ಬಡಕೂಲಿ ವರ್ಗಕ್ಕೆ ಅತ್ಯಂತ ದಯನೀಯ ಸ್ಥಿತಿ ಇತ್ತು. ಅದು ಬಂಡವಾಳಶಾಹಿಗಳ ಲಾಭವೇ ಪ್ರಮುಖವಾದಂತಹ ಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಮಿಕ ವರ್ಗ ನರಳುತ್ತಿತ್ತು.

ಕಾರ್ಖಾನೆಗಳಲ್ಲಿ ಯಂತ್ರಗಳ ಉಪಯೋಗ ಆರಂಭಗೊಂಡ ನಂತರ ದೈಹಿಕ ಶಕ್ತಿಯ ಅಗತ್ಯ ಸಹಜವಾಗೇ ಕಡಿಮೆಯಾಯಿತು. ಕಾರ್ಖಾನೆಗಳಲ್ಲಿ ಪುರುಷ ಕಾರ್ಮಿಕರನ್ನು ಕಡಿತಗೊಳಿಸಿ, ಮಹಿಳೆಯರನ್ನು ಮತ್ತು ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡು ಅವರನ್ನು ನಿರ್ದಯವಾಗಿ ಶೋಷಿಸುವ ಸಂಪ್ರದಾಯ ಆರಂಭಗೊಂಡಿತ್ತು.

ದಿನಕ್ಕೆ 13 ರಿಂದ 15 ಗಂಟೆಗಳ ಕಾಲ ದುಡಿಯಲೇಬೇಕಾದ ನಿಯಮ ಹೊತ್ತುಕೊಂಡ ಮಹಿಳೆಯರು ಪುರುಷನಿಗಿಂತ ಅತಿಕಡಿಮೆ ವೇತನಗಳನ್ನು ಕೊಡುತ್ತಿದ್ದರು. ಕಾರ್ಖಾನೆಗಳಲ್ಲಿ ಹೆಣ್ಣುಮಕ್ಕಳ ಮೂಲ ಅವಶ್ಯಕತೆಗಳನ್ನು ಕಡೆಗಣಿಸಲಾಗುತ್ತಿತ್ತು, ಬಾಣಂತಿಯರಿಗೂ ರಜೆ ಕೊಡುತ್ತಿರಲಿಲ್ಲ, ಬಾಣಂತಿ ಮಹಿಳೆಗೆ ತನ್ನ ಮಗುವಿಗೆ ಎದೆಹಾಲು ನೀಡಲು ಸಹ ಸಮಯ ನೀಡುತ್ತಿರಲಿಲ್ಲ, ಆ ಸಂದರ್ಭದಲ್ಲೇ ಕಾರ್ಮಿಕ ಮಹಿಳೆ ಮತ್ತು ಮಕ್ಕಳ ಆರೋಗ್ಯ ಹದಗೆಟ್ಟು ಅವರ ಸಾವಿನ ಸಂಖ್ಯೆಯೂ ಹೆಚ್ಚಿತ್ತು.

ಕೆಲ ಕಾರ್ಖಾನೆಗಳಲ್ಲಿ ಕಾರ್ಮಿಕ ಹೆಣ್ಣುಮಗಳು ಗರ್ಬಿಣಿಯೆಂದು ತಿಳಿದೊಡನೆ ಅವಳನ್ನು ಕಾರ್ಖಾನೆಯಿಂದಲೇ ಹೊರಹಾಕುವ ಪದ್ದತಿಯಿತ್ತು. ಹಾಗಾಗಿ ಕೆಲವೇಳೆ ತಾಯಂದಿರು ತಾವು ಗರ್ಬಿಣಿ ಎಂಬ ಸಂಗತಿ ಮುಚ್ಚಿಟ್ಟು ಹೆರಿಗೆ ನೋವು ಬರುವವರೆಗೆ ಅದನ್ನು ಗೌಪ್ಯವಾಗೇ ಕೆಲಸಕ್ಕೆ ಬರುತ್ತಿದ್ದರು. ಹಲವು ಸಂದರ್ಭಗಳಲ್ಲಿ ಕಾರ್ಖಾನೆಯಲ್ಲಿಯೇ ಹೆರಿಗೆಯಾಗುವುದೂ ಇತ್ತು, ಮಗುವಿಗೆ ಜನ್ಮ ನೀಡಿದ ತಕ್ಷಣವೇ ಆಕೆ ಕೆಲಸಕ್ಕೆ ಹಿಂತಿರುಗಬೇಕಿತ್ತು, ಹಾಗಾಗಿ ಕಾರ್ಮಿಕ ಮಹಿಳೆಯರಿಗೆ ತಮಗೆ ಮಕ್ಕಳೇ ಬೇಡ ಅನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಶ್ರಾಂತಿಯಿಲ್ಲದೇ ಒಳಹೊರಗೂ ದುಡಿದು ಬಹುತೇಕ ಕೂಲಿಕಾರ ಮಹಿಳೆಯರ ಬೆನ್ನು ಬಾಗಿದ ಆಕಾರ ಪಡೆದಿತ್ತು.

ಜಾರ್ ದೊರೆಯ ಕಾನೂನಿನಲ್ಲಿ ಸಾಮಾಜಿಕವಾಗಿ ಮಹಿಳೆಗೆ ಸ್ವಂತಕ್ಕೆ ಭೂಮಿ ಹೊಂದುವ ಹಕ್ಕಿರಲಿಲ್ಲ, ಅವಳು ಪುರುಷನ ಅಧೀನಳಾಗೇ ಇರಬೇಕಿತ್ತು, ಕಾರ್ಖಾನೆಯಲ್ಲಿದ್ದ ಹಾಗೆ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಕೂಡ ಮಹಿಳೆಯರ ಮೇಲೆ ದಬ್ಬಾಳಿಕೆಗಳಿದ್ದವು. ಮುಖ್ಯವಾಗಿ ಮಹಿಳೆಗೆ ಚುನಾವಣೆ ಹಕ್ಕುಗಳಿರಲಿಲ್ಲ, ರಾಜಕೀಯ ಜೀವನದಿಂದ ಅವಳನ್ನು ಹೊರಗಿಡಲಾಗಿತ್ತು, ಮಹಿಳೆಗೆ ಸರಕಾರೀ ಕೆಲಸ ನಿಷೇಧಿಸಲಾಗಿತ್ತು, ಅಕಸ್ಮಾತಾಗಿ ವಿದೇಶಕ್ಕೆ ಹೋಗಿ ಬರುವ ಸಮದರ್ಭ ಸಿಕ್ಕರೆ, ಆಕೆಗೆ ಪಾಸ್ ಪೋಟ್ ನೀಡುತ್ತಿರಲಿಲ್ಲ, ಗಂಡನ ಪಾಸ್‍ಪೋರ್ಟಿನಲ್ಲೇ ತನ್ನ ಅಸ್ತಿತ್ವವನ್ನು ನೊಂದಾಯಿಸಬೇಕಾಗುತ್ತಿತ್ತು. ಆಸ್ತಿವಂತ ಹೆಣ್ಣುಮಕ್ಕಳಿಗೂ ತನ್ನ ಆಸ್ತಿಯನ್ನು ಮಾರುವ ಹಕ್ಕಿರಲಿಲ್ಲ, ವಿಚ್ಛೇಧನದ ಹಕ್ಕಂತೂ ಮಹಿಳೆಗೆ ಇರಲೇ ಇಲ್ಲ.

ಆಗ ರಷ್ಯಾದ ಕೌಟುಂಬಿಕ ಕಾನೂನು ಸಂಹಿತೆಯಲ್ಲೇ ‘ಹೆಂಡತಿಯರು ಪತಿ ಹೇಳಿದ್ದನ್ನು ಶಿರಸಾವಹಿಸಿ ಪಾಲಿಸಬೇಕು’ ಎಂಬ ವಾಕ್ಯವಿತ್ತು, ಇದು ನಮ್ಮಲ್ಲಿರುವ ಮನುವಾದಕ್ಕಿಂತ ಬೇರೆಯಾಗಿರಲಿಲ್ಲ. ಗಂಡ ತೀರಿ ಹೋದರೆ ವಿಧವೆಯ ಗಂಡನ ಹತ್ತಿರದ ಸಂಬಂಧಿಯೊಬ್ಬನ ಆಸ್ತಿ ಇವಳು. ಬೇರೆಲ್ಲ ಗ್ರಹ ಬಳಕೆಯ ಸಾಮಾನಿನಂತೆ ಜಾನುವಾರು ಮತ್ತು ಅವರ ಇತರ ಎಲ್ಲಾ ವಸ್ತುಗಳೊಂದಿಗೆ ಅವಳನ್ನು ಮಾರಾಟ ಮಾಡಬಹುದಿತ್ತು. ಕೆಲ ಸಂದರ್ಭಗಳಲ್ಲಿ ಗಂಡ ತೀರಿಕೊಂಡು ಅವಳು ಬದುಕಿದ್ದಾಗ್ಯೂ ಅವಳ ಮಕ್ಕಳಿಗೆ ಬೇರೆ ಪೋಷಕರನ್ನು ನೇಮಿಸಲಾಗುತ್ತಿತ್ತು, ವಿಧವೆಗೆ ಹೆಣ್ಣುಮಕ್ಕಳಿದ್ದರೆ ಅವರ ಮದುವೆಯಾಗೋ ತನಕ ಸಂಪೂರ್ಣ ಜವಾಬ್ದಾರಿಯನ್ನೂ ಪೋಷಕರೇ ಹೊತ್ತಿರುತ್ತಿದ್ದರು, ಆಸ್ತಿ ಆಸೆಗಾಗಿ ಅನೇಕ ಪೋಷಕರು ವಿಧವೆಯ ಹೆಣ್ಣುಮಕ್ಕಳನ್ನು ಮದುವೆಯಾಗಲು ತಡೆಗಾಲು ಹಾಕುತ್ತಿದ್ದರು.

ಮಹಿಳೆಯ ಮದುವೆ ಮುರಿದರೆ ಕಾನೂನಾತ್ಮಕ ಪರಿಹಾರವೇ ಸಿಗುತ್ತಿರಲಿಲ್ಲ. ಮಹಿಳೆಯ ಅಧೀನ ಸ್ಥಾನದ ಕಾರಣದಿಂದ ಅವಳ ಮಕ್ಕಳ ಮೇಲಿನ ಮೊದಲ ಹಕ್ಕು ತಂದೆಯದೇ ಆಗಿತ್ತು. ಮತ್ತು ಚರ್ಚಿನಲ್ಲಿ ನಡೆದ ವಿವಾಹಗಳಿಗೆ ಮಾತ್ರ ಕಾನೂನಿನ ಮಾನ್ಯತೆ ಲಭಿಸುತ್ತಿತ್ತು. ಅವಿವಾಹಿತೆ ಏನಾದರೂ ತಾಯಿಯಾದರೆ ಅದಕ್ಕೆ ಕಾರಣನಾದವನ ಮೇಲೆ ಕ್ರಮ ಕೈಕೊಳ್ಳುವ ಯಾವ ಅವಕಾಶವೂ ಅವಳಿಗೆ ಇರಲಿಲ್ಲ.

ಲೆನಿನ್ ಮೊಟ್ಟಮೊದಲು ಮಹಿಳೆಯರ ಈ ವಿವಾಹ ಮತ್ತು ಕೌಟುಂಬಿಕ ಕಾನೂನಿಗೆ ಸಂಬಂಧಪಟ್ಟ ಎಲ್ಲ ವಿದ್ಯಮಾನಗಳನ್ನೂ ಅಸಹ್ಯಕರ, ಹೀನ ಮತ್ತು ಆಷಾಡಭೂತಿತನದ್ದು ಅಂತ ಖಂಡಿಸುತ್ತಾರೆ.
ಆ ವೇಳೆಯಲ್ಲಿ ಬಂಡವಾಳಶಾಹಿ ವರ್ಗದ ಮಹಿಳೆಯರಿಗೆ ಮಾತ್ರ ಶಿಕ್ಷಣ ಪಡೆಯುವ ಹಕ್ಕಿತ್ತು, ಹಾಗಾಗಿ ಕಾರ್ಮಿಕ ಮತ್ತು ರೈತ ಮಹಿಳೆಯರು ಅನಕ್ಷರಸ್ಥರಾಗಿಯೇ ಇದ್ದರು. ಹಾಗಾಗಿ ಸ್ವಾತಂತ್ರ್ಯದ ಮತ್ತು ಸಮಾನತೆಯ ಚಿಂತನೆಗಳನ್ನು ಅವರಲ್ಲಿ ಬಿತ್ತುವುದು ಕಷ್ಟಕರವೇ ಆಗಿತ್ತು.

ಇತರ ರಾಷ್ಟ್ರೀಯತೆಯ ಮುಸ್ಲಿಂ ಮಹಿಳೆಯರಿಗೂ ಬೂರ್ಖಾ ಧರಿಸುವ ಕಟ್ಟಳೆಯಿದ್ದು, ಅವಳೇನಾದರೂ ಬೂರ್ಖಾ ತೆಗೆದದ್ದೇ ಆದರೆ ಅವಳನ್ನು ಸಾಯಿಸುವ ಹಕ್ಕನ್ನು ಕಾನೂನು ಅವಳ ಗಂಡನಿಗೆ ನೀಡಿತ್ತು, ಮುಲ್ಲಾಗಳು ಮತ್ತು ಮುಸ್ಲಿಂ ಧರ್ಮಗುರುಗಳು ಸಹ ಅದನ್ನು ಬೆಂಬಲಿಸುತ್ತಿದ್ದರು. ಅಂದು ಸರ್ವೇ ಸಾಮಾನ್ಯವಾಗಿದ್ದ ಬಾಲ್ಯವಿವಾಹ, ಬಹುಪತ್ನಿತ್ವ, ಬಾಲ್ಯ ವಧುವಿನ ಮಾರಾಟ ಇವೆಲ್ಲ ಜಾರ್‍ನ ದೌರ್ಬಲ್ಯಪೂರಿತ ರಾಷ್ಟ್ರ ನೀತಿ ಎಂಬ ತಿಳಿವಳಿಕೆಯನ್ನು ಲೆನಿನ್ ತಮ್ಮ ಬೆಂಬಲಿಗರೊಂದಿಗೆ ನಿಧಾನ ಪಸರಿಸಲಾರಂಭಿಸಿದರು.

ಲೆನಿನ್ ವಾದವು ಈ ಎಲ್ಲಾ ಶೋಷಣೆಯ ಹುಟ್ಟಿಗೆ ಕಾರಣವನ್ನು ಕಂಡುಕೊಳ್ಳುತ್ತ, ಮಹಿಳೆಯ ಅಸಮಾನತೆ ಮತ್ತು ದಬ್ಬಾಳಿಕೆಯ ಮೂಲವೇ ವರ್ಗ ಅಸಮಾನತೆಯಲ್ಲಿದೆ, ಅದಕ್ಕೆ ಕಾರಣ ಖಾಸಗೀ ಆಸ್ತಿ ವ್ಯವಸ್ಥೆ ಮತ್ತು ಮಾನವನಿಂದ ಮಾನವನ ಶೋಷಣೆ, ಅದನ್ನು ತಡೆಗಟ್ಟುವ ಒಂದಂಶದ ಕಾರ್ಯಕ್ರಮಗಳನ್ನು ಹಾಕಿಕೊಂಡು ಚಳುವಳಿಗೆ ಇಳಿಯಿತು.
‘ಕ್ರಾಂತಿಕಾರಿ ಮಾಕ್ರ್ಸವಾದವು ಮಹಿಳಾ ವಿಮುಕ್ತಿಯ ಹೋರಾಟವನ್ನು ಕಾರ್ಮಿಕ ವರ್ಗದ ಮುಕ್ತಿಯೊಂದಿಗೆ ಮತ್ತು ವರ್ಣಾಧಾರಿತ ಸಮಾಜದ ನಿರ್ನಾಮದೊಂದಿಗೆ ನಿಕಟವಾಗಿ ಬೆಸೆಯುತ್ತದೆ’ ಅಂದಿದ್ದರು ಲೆನಿನ್.

ಸೋವಿಯತ್ ರಷ್ಯಾದ ನವೆಂಬರ್ ಕ್ರಾಂತಿ ಇದನ್ನು ಸಾಕಾರಗೊಳಿಸಿತು ನಂತರ ರಷ್ಯನ್ ಮಹಿಳೆ ಅತ್ಯದ್ಭುತ ಸಾಧನೆ ಮಾಡತೊಡಗಿದಳು. ಇದು ಇಡೀ ವಿಶ್ವದ ಮಹಿಳಾ ಕುಲಕ್ಕೆ ಹೆಮ್ಮೆಯ ಸಂಗತಿಯಾಗಿ ಪರಿಣಮಿಸಿದ್ದಷ್ಟೇ ಅಲ್ಲದೇ ಒಂದು ಅಭೂತಪೂರ್ವ ಮಾದರಿಯಾಗಿ ಕೂಡ ರೂಪಗೊಂಡಿತು.

ಲೆನಿನ್ ‘ಬೋಲ್ಸೆವಿಕ್ ಪಕ್ಷ’ ಕಟ್ಟಿ ಕಾರ್ಮಿಕ ಹಾಗೂ ರೈತಾಪಿ ಜನತೆಯನ್ನು ಸಂಘಟಿಸಿದರು. ಹಾಗೆ 1917 ರ ಫೆಬ್ರವರಿ ನಲ್ಲಿ ಜಾರ್ ಆಳ್ವಿಕೆ ಕೊನೆಗೊಂಡಿತು. ಮುಂದೆ ನವೆಂಬರ್ ನಲ್ಲಿ ಕಾರ್ಮಿಕ ವರ್ಗದ ಮುಂಚೂಣಿಯಲ್ಲಿ ಬಂಡವಾಳಶಾಹಿ ವಿರೋಧಿ ಮತ್ತು ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಿತು. ಕಾರ್ಮಿಕರ ರಾಜ್ಯ ಶೋಷಣಾರಹಿತ ವ್ಯವಸ್ಥೆಯಾದ ‘ಸಮಾಜವಾದಿ ಸೋವಿಯತ್ ಒಕ್ಕೂಟ’ ಸ್ಥಾಪನೆಯಾಯಿತು. ಈ ಹೋರಾಟದಲ್ಲಿ ಸಹಸ್ರಾರು ಮಹಿಳೆಯರೂ ಪಾಲ್ಗೊಂಡಿದ್ದನ್ನು ಈ ಕೃತಿಯ ‘ನವೆಂಬರ್ ಕ್ರಾಂತಿಯಲ್ಲಿ ಮಹಿಳೆ’ ಎಂಬ ಭಾಗ ಸವಿವರವಾಗಿ ಪ್ರಸ್ತುತಪಡಿಸುತ್ತದೆ.
ಈ ಅಪರೂಪದ ಕ್ರಾಂತಿಯು ರೈತ ಹಾಗೂ ಕಾರ್ಮಿಕ ಮಹಿಳೆಯರಿಗೆ ಬಂಡವಾಳಿಗರ ಹಾಗೂ ಜಮೀನ್ದಾರರ ಶೋಷಣೆಯಿಂದ ಬಿಡುಗಡೆಗೊಳಿಸುವ ಜೊತೆಜೊತೆಗೆ ತಂದೆ ಮತ್ತು ಗಂಡನಿಂದಾಗುವ ದ್ರೌರ್ಜನ್ಯದಿಂದಲೂ ಕೂಡ ಬಿಡುಗಡೆ ನೀಡಿತು. ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕನ್ನೂ ಕೊಟ್ಟಿತು.

ಇಲ್ಲಿರುವ ‘ಪ್ಯಾಸೀವಾದದ ವಿರುದ್ಧ ಮಹಿಳೆ’ ಅನ್ನುವಂಥ 15 ನೇ ಅಧ್ಯಾಯ ಎಲ್ಲ ಹೆಣ್ಣುಮಕ್ಕಳೂ ಓದಲೇಬೇಕಾದಂತಹ ಭಾಗ. ನಂತರದ ವರ್ಷಗಳಲ್ಲಿ ಮಹಿಳೆಯರು ಕ್ರಾಂತಿಕಾರೀ ಯೋಧೆಯರೂ ಆದುದಲ್ಲದೇ, ಬೃಹತ್ ಕೈಗಾರಿಕೆ ಮತ್ತು ಕೃಷಿ ಹೀಗೆ ಉತ್ಪಾದನೆಯ ಎಲ್ಲಾ ಕ್ಷೇತ್ರಗಳನ್ನೂ ಪ್ರವೇಶಿಸಿ ಸಾಮೂಹಿಕವಾಗಿ ಸ್ವತಂತ್ರವಾಗಿ ದುಡಿದು ಸ್ವಾವಲಂಬಿಗಳಾಗತೊಡಗಿದರು. ಸುಶಿಕ್ಷಿತರಾದ ಕಾರ್ಮಿಕ ಮಹಿಳೆಯರು ನಂತರದಲ್ಲಿ ತನ್ನ ಇಚ್ಛೆಗನುಸಾರ ಉದ್ಯೋಗ ಪಡೆದರಲ್ಲದೇ ಅಧ್ಯಾಪಕಿ, ಶುಸ್ರೂಷಕಿ, ವಿಜ್ಞಾನ ಮತ್ತು ಕಲೆಗಳಲ್ಲೂ ತೊಡಗಿಕೊಂಡರು. ಪ್ರೇಮದ ಆಯ್ಕೆಯ ವಿಷಯದಲ್ಲೂ ಅನೇಕ ಕಟ್ಟಳೆಗಳಿಂದ ಬಿಡಿಸಿಕೊಂಡು ಮುಕ್ತ ಹಾಗೂ ಆರೋಗ್ಯಕರ ದಾರಿಗಳನ್ನು ಹೊಂದಿದರು. ಹೀಗೆ ಲೆನಿನ್ ಚಿಂತನೆಗಳು ರಷ್ಯದ ಸಾಮಾಜಿಕತೆಯನ್ನೇ ಪುನರ್ ಸ್ಥಾಪಿಸಿತು.

ಮಹಿಳಾ ಕಾರ್ಮಿಕರು ತಮ್ಮ ಮುಂದಿನ ಕ್ರಾಂತಿಕಾರೀ ಮುಖಂಡ ಸ್ಟಾಲಿನ್ನರಿಗೆ ಬರೆದ ಒಂದು ಪತ್ರದ ಒಕ್ಕಣೆ ಹೇಗಿತ್ತೆಂದರೆ ‘ಹಿಂತಿರುಗಿ ನೋಡಿದಾಗ ನಾವು ಒಂದು ದೊಡ್ಡ ಪರ್ವತದಿಂದ ಕೆಳಕ್ಕೆ ನೋಡುತ್ತಿದ್ದೇವೇನೋ ಎಂದು ಭಾಸವಾಗುತ್ತದೆ, ನಮ್ಮ ನಿನ್ನೆಗಳನ್ನು ನಾವು ಅಂಥದೊಂದು ಕೊಳಕು, ದಾರಿದ್ರ್ಯ ಮತ್ತು ಅಪಮಾನದಲ್ಲಿ ಬದುಕಿದ್ದೆವಾ ಎಂದು ನಂಬುವುದೇ ಕಷ್ಟವಾಗುತ್ತದೆ’ ಎಂಬ ಅವರ ಭಾವಪೂರ್ಣ ಮಾತುಗಳು ಮನಕಲಕದೇ ಇರಲಾರವು. ‘ಮನುಕುಲದ ಇತಿಹಾಸದಲ್ಲಿ ಶ್ರಮಿಕ ಮಹಿಳೆಯರ ಭಾಗವಹಿಸುವಿಕೆಯಿಲ್ಲದೇ ಒಂದೇ ಒಂದು ಮಹಾನ್ ಹೋರಾಟ ಕೂಡ ಸಾಧ್ಯವಾಗಿಲ್ಲ’ ಎಂದು ಸ್ಟಾಲಿನ್ ಒಂದೆಡೆ ಹೇಳಿದ್ದನ್ನೂ ನಾವಿಲ್ಲಿ ನೆನೆಯಬಹುದು. ಈ ಕೃತಿಯ ಹೂರಣವು ಇಡಿಯಾಗಿ ಸಮಜವಾದಿ ರಷ್ಯಾದಲ್ಲಿ ಮಹಿಳೆಯರ ಅಭಿವೃದ್ಧಿಯ ಕರಾಳ ಹೆಜ್ಜೆಗಳ ಹಂತಗಳನ್ನು ಮರು ಅಧ್ಯಯನಕ್ಕೆ ಒಳಪಡಿಸುವಂತಿದೆ.

ಇಂಥ ಕೃತಿಗಳ ಮರು ಓದಿನಂತಹ ಸ್ಟಡೀ ಸರ್ಕಲ್ ಗಳನ್ನು ನಿರ್ಮಿಸಿಕೊಂಡು, ಇಂದಿನ ಯುವ ತಲೆಮಾರಿಗೆ ಲೆನಿನ್ ಚಿಂತನೆಗಳ ಮಹತ್ವವನ್ನು ಮನದಟ್ಟು ಮಾಡಿಕೊಡುವ ಅಗತ್ಯದತ್ತ ನಾವೆಲ್ಲ ಕ್ರಿಯಾಶೀಲರಾಗಬೇಕಾಗಿದೆ, ಇಲ್ಲದಿದ್ದರೆ ನಮ್ಮ ಮುಂದಿನ ತಲೆಮಾರಿನ ಅರಿವಿನಲ್ಲಿ ಲೆನಿನ್ ಕೇವಲ ಮೂರ್ತಿಯಾಗಿ ಮಾತ್ರ ನಿಲ್ಲುವ ದುರಂತವನ್ನು ಎದುರಿಸಬೇಕಾದೀತು.

Leave a Reply