ಸಾಂಗ್ಲಿಯಾನಾ ಎಂಬ ಸಾಮಾಜಿಕ ಕ್ರಿಮಿ..

ಜ್ಯೋತಿ ಅನಂತಸುಬ್ಬರಾವ್

ಸಾಂಗ್ಲಿಯಾನಾ ಎಂಬ ಒಬ್ಬ ಸಾಮಾಜಿಕ ಕ್ರಿಮಿ ಒಬ್ಬ ಪೊಲೀಸ್ ಅಧಿಕಾರಿಯಾಗಿ ಸಂಸದನಾಗಿ ಕಾರ್ಯ ನಿರ್ವಹಿಸಿದ್ದರೆಂಬ ವಾಸ್ತವ ಈ ನಾಡಿನ ದುರಂತ ಸಂಗತಿಗಳಲ್ಲೊಂದು.

ಇಡೀ ದೇಶದ ಪ್ರಜ್ಞಾವಂತರು “ನಿರ್ಭಯ” ಪ್ರಕರಣದಿಂದ ಬೆಚ್ಚಿ ಇನ್ನೆಂದೂ ಅಂತಹ ಅಹಿತಕರ ಘಟನೆಗಳು ಜರುಗಬಾರದೆಂದು ಕಣ್ಣೀರಿಟ್ಟು ಪರಿತಪಿಸುತ್ತಿರುವಾಗ, ಈ ದುಷ್ಟನಾದರೂ ನಿರ್ಭಯ ಅಥವಾ ಜ್ಯೋತಿ ಸಿಂಗ್ ನ ತಾಯಿಯ ದೇಹಚೌಕಟ್ಟಿನ ಬಗ್ಗೆ ಮಾತನಾಡುತ್ತಾನೆ. ಹಾಗೆಯೇ ಅತ್ಯಂತ ಹೀನವಾಗಿ ಅತ್ಯಾಚಾರಕ್ಕೊಳಗಾಗಿ ಹೋರಾಡಿ ಮಡಿದ ಜ್ಯೋತಿ ಸಿಂಗ್‌ನ ಸೌಂದರ್ಯವನ್ನು ಕಲ್ಪಿಸಿಕೊಳ್ಳುವಷ್ಟು ಅಮಾನವೀಯತೆ ಈ ವೃದ್ಧನಲ್ಲಿ ಮನೆಮಾಡಿದೆ. ಅಷ್ಟೇ ಅಲ್ಲದೆ ಅದನ್ನು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುತ್ತಾನೆ! ತಾಯಿ ಮಗಳ ಸೌಂದರ್ಯ ಪ್ರಶಂಸಿಸಿದ್ದು ಅವರಿಗೆ ನೀಡಿದ ಅಭಿನಂದನೆ ಎನ್ನುತ್ತಾನೆ…

ಮಗಳನ್ನು ಕಳೆದುಕೊಂಡ ತಾಯಿಗೆ ಸಾಂತ್ವನ, ಧೈರ್ಯ, ಆತ್ಮವಿಶ್ವಾಸ, ಬೆಂಬಲ ಕೊಡುವುದರ ಬದಲು ಯಾವ ಮುಠ್ಠಾಳ ಅಭಿನಂದನಾ ನುಡಿಗಳನ್ನು ಹೇಳಲು ಸಾಧ್ಯ? ಗೋರಿಯಾಗಿರುವ ಹೆಣ್ಣಿನ ದೇಹವನ್ನೂ ಬಿಡದ ಈ ಹೊಲಸು, ದರಿದ್ರ ಮನಸ್ಥಿತಿಗೆ ಏನನ್ನಬೇಕು? ಅಂದವಾಗಿರುವ ಹೆಣ್ಣುಮಕ್ಕಳೇ ಅತ್ಯಾಚಾರದಂತಹ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆಂಬ ಅಜ್ಞಾನದಿಂದ ಸಂವೇದನೆ ಕಳೆದುಕೊಂಡಿರುವ ಸಾಂಗ್ಲಿಯಾನನಂತಹ ವ್ಯಕ್ತಿಗಳು ಪೊಲೀಸ್ ಇಲಾಖೆಯಲ್ಲಿ ಮೇಲ್ಮಟ್ಟದಲ್ಲಿ ಕೆಲಸ ಮಾಡಿದ್ದರಿಂದಲೇ ಏನೋ ಇಂದು ಇಲಾಖೆಯಲ್ಲೂ ಸಮಾಜದಲ್ಲೂ ಈ ಅವ್ಯವಸ್ಥೆ ಏರ್ಪಟ್ಟಿರುವುದು…

ಸಾಂಗ್ಲಿಯಾನನ ಮಾತುಗಳು ಸಮಾಜದ ಒಟ್ಟಾರೆ ಮನಸ್ಥಿತಿಯ ದ್ಯೋತಕವಾಗಿದೆ. ಆದರೂ ಪ್ರಮುಖ ಸ್ಥಾನದಲ್ಲಿದ್ದವರೂ, ಸಮಾಜದ ಗಣ್ಯ ವ್ಯಕ್ತಿ ಎನಿಸಿಕೊಂಡವರೂ ಈ ರೀತಿಯ ಬೇಜವಾಬ್ದಾರಿ ಮಾತುಗಳನ್ನಾಡಿದರೆ, ಹೆಣ್ಣು ಸರಕೆಂಬ ಮನಸ್ಥಿತಿಗೆ ಇಂಬು ಕೊಟ್ಟರೆ, ಸಮಾಜದ ಗತಿ ಏನಾದೀತು ಎಂಬ ಸಾಮಾನ್ಯ ಪ್ರಜ್ಞೆ ಇವರಲ್ಲಿ ಇಲ್ಲವಾಗಿಬಿಟ್ಟಿದೆಯಲ್ಲಾ?

ಪುರುಷರು ದಾಳಿ ಮಾಡಿದಾಗ ಮಹಿಳೆಯರು ಶರಣಾಗಿ ತಮ್ಮ ಜೀವ ಉಳಿಸಿಕೊಂಡು ಆನಂತರ ಹೋರಾಡಬೇಕೆಂದು ಪಾಠ ಹೇಳಿಕೊಡುವ ಈ ಮಾಜಿ ಪೊಲೀಸ್ ಅಧಿಕಾರಿಗೆ ಲೈಂಗಿಕ ದಾಳಿಗೊಳಗಾಗಿ ಹೋರಾಟ ನಡೆಸಿ ಗೆದ್ದುಬಂದಿರುವ ಮಹಿಳೆಯರ ಗಾಥೆಯ ತಿಳುವಳಿಕೆ ಇಲ್ಲವೆಂದೇ ಭಾವಿಸಬಹುದೇನೋ… ಶರಣಾಗುವುದಕ್ಕೇನೂ ಹೆಣ್ಣುಮಕ್ಕಳು ಅಪರಾಧಿಗಳಲ್ಲ…

ಖಾಕಿ ತೊಟ್ಟು ಪಿಸ್ತೂಲು ಹಿಡಿದವ ಶರಣಾಗತಿಯಲ್ಲದೆ ಬೇರೇನು ತಾನೇ ಹೇಳಿಕೊಡಲು ಸಾಧ್ಯ? ಆತನಿಗೆ ಹೋರಾಟದ ಮನಸ್ಥಿತಿ ಬರುವುದಾದರೂ ಹೇಗೆ? ಹೆಣ್ಣುಮಕ್ಕಳಿಗೆ ಬದುಕಿನುದ್ದಕ್ಕೂ ಬರೀ ಶರಣಾಗತಿಯನ್ನೇ ಕಲಿಸುವ ಇಂತಹ ಪೀಡಕರು ಅಧಿಕಾರಕ್ಕೋಸ್ಕರ ತಾವೂ ಬಿಜೆಪಿಯಂತಹ ಪಕ್ಷಕ್ಕೆ ಶರಣಾಗಿ ತಮ್ಮನ್ನು ತಾವು ಹರಾಜು ಹಾಕಿಕೊಂಡಿದ್ದು!

3 comments

  1. Madam,

    He is no more in BJP…He joined BJP , coz he was power hungry. Why cant you mention the present party he is in?

  2. ಸಾಂಗ್ಲಿಯಾನಾ ಸ್ಥಾಪಿತ ವ್ಯವಸ್ಥೆಯ ಎಲ್ಲ ಮೌಲ್ಯಗಳನ್ನೂ ಒಪ್ಪಿಕೊಂಡು ಒಂದು ಭ್ರಷ್ಟಾತಿಭ್ರಷ್ಟ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ದುಡಿದ ಅಧಿಕಾರಿ – ಇದನ್ನು ಮೀರಿ ಅವರನ್ನು ನೋಡುವ ಅಗತ್ಯವಿಲ್ಲ. ಹಾಗಾಗಿ ನಿರ್ಭಯ ಅಥವಾ ಆಕೆಯ ತಾಯಿಯ ಬಗ್ಗೆ ಸಾಂಗ್ಲಿಯಾನಾ ಆಡಿರುವ ಮಾತುಗಳು ಪಿತೃಪ್ರಧಾನ ವ್ಯವಸ್ಥೆಯ ಸಹಜ ಅಭಿವ್ಯಕ್ತಿಯಾಗಿಯೇ ಕಾಣುತ್ತದೆ.ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಬೇಕಿಲ್ಲ. ಜ್ಯೋತಿ ನೀನು ಹೇಳಿರುವುದು ಸತ್ಯ ಸಾಂಗ್ಲಿಯಾನಾ ಆಡಿರುವ ಮಾತುಗಳು ಸ್ಥಾಪಿತ ವ್ಯವಸ್ಥೆಯ ಅಭಿವ್ಯಕ್ತಿಯನ್ನು ಬಿಂಬಿಸುತ್ತವೆ ಅಷ್ಟೆ. ಇಂತಹ ಪ್ರಾಮಾಣಿಕ ಅಧಿಕಾರಿಗಳು ದಂತಕಥೆಗಳಾದಾಗ ಸಿನಿಮಾಗಳೂ ಹೊರಬರುತ್ತವೆ. ಆದರೆ ಈ ಮಿಥ್ಯೆಯನ್ನು ಸೃಷ್ಟಿಸುತ್ತಲೇ ಯಥಾಸ್ಥಿತಿಯನ್ನೂ ಕಾಪಾಡಲಾಗುತ್ತದೆ. ಬಂಗಾರದ ಮನುಷ್ಯ ಚಿತ್ರ ಸಾವಿರಾರು ಜನರ ಮನಃಪರಿವರ್ತನೆಗೆ ಕಾರಣವಾಯಿತು. ಸಾಂಗ್ಲಿಯಾನಾ ಹಾಗಾಗಲಿಲ್ಲ. ಈ ವ್ಯತ್ಯಾಸವನ್ನೂ ಗಮನಿಸಬೇಕು. ಅಲ್ಲವೇ ?

Leave a Reply