fbpx

ಅಂಗೋಲಾದಲ್ಲಿ ಶಾರೂಖನೂ, ಬಾಹುಬಲಿಯೂ..

 

ಲುವಾಂಡಾದ ಖ್ಯಾತ ಮಾರ್ಜಿನಲ್ ಬೀದಿಯಲ್ಲಿದ್ದ ಭಾರತೀಯ ರೆಸ್ಟೊರೆಂಟ್ ಒಂದರ ಒಳಕ್ಕೆ ನಾವು ಅಂದು ನುಗ್ಗಿದ್ದೆವು.

ನಾವು ಅಂದು ಹೋಗಿದ್ದು ‘ಓ ಕಾರಿಲ್’ ರೆಸ್ಟೊರೆಂಟಿಗೆ. ಒಳನಡೆಯುತ್ತಿರುವಂತೆಯೇ ”ವಾವ್” ಅಂದುಬಿಟ್ಟ ನನ್ನ ದುಭಾಷಿ ಮಿಗೆಲ್.

ರೆಸ್ಟೊರೆಂಟ್ ಹೆಚ್ಚೇನೂ ದೊಡ್ಡದಾಗಿಲ್ಲದಿದ್ದರೂ ಒಳಾಂಗಣವು ಸುಂದರವಾಗಿತ್ತು. ಅಲಂಕರಿಸಿದ ಮದುವೆಮನೆಯಂತೆ ಝಗಮಗ ಹೊಳೆಯುತ್ತಿತ್ತು. ನಾನು ತಪ್ಪಿ ಯಾರದ್ದೋ ವಿವಾಹ ಸಮಾರಂಭಕ್ಕೇನೂ ಬಂದಿಲ್ಲವಲ್ಲಾ ಎಂಬ ಗೊಂದಲದಲ್ಲಿ ಸುತ್ತಲೂ ಕಣ್ಣಾಡಿಸಿದೆ.

ಸುಡುಮಧ್ಯಾಹ್ನದ ವೇಳೆಯಾಗಿದ್ದರಿಂದಲೋ ಏನೋ, ಹೆಚ್ಚೇನೂ ಜನಜಂಗುಳಿಯಿರಲಿಲ್ಲ. ಕೋಣೆಯ ಮಧ್ಯಭಾಗದಲ್ಲಿ ಬಿಳಿಯರ ಕುಟುಂಬವೊಂದು ಜೊತೆಯಾಗಿ ಕುಳಿತುಕೊಂಡು ಊಟ ಮಾಡುತ್ತಿದ್ದರೆ ಇನ್ನೊಂದು ಮೂಲೆಯಲ್ಲಿ ಆಫ್ರಿಕನ್ ಜೋಡಿಯೊಂದು ‘ಕಣ್ಣು ಕಣ್ಣು ಕಲೆತಾಗ’ ಗುಂಗಿನಲ್ಲಿ ತಮ್ಮದೇ ಪ್ರೇಮಲೋಕದಲ್ಲಿ ಕಳೆದುಹೋಗಿತ್ತು.

ಲುವಾಂಡಾದಂತಹ ದುಬಾರಿ ಮಹಾನಗರಿಯಲ್ಲಿ ವಿದೇಶೀಯರು ಇಂಥದ್ದೊಂದು ರೆಸ್ಟೊರೆಂಟನ್ನು ಆರಂಭಿಸಿ ನಡೆಸುವುದು ಅಷ್ಟು ಸುಲಭವಲ್ಲ. ಅಂತೂ ಉದ್ಗಾರವೆತ್ತುತ್ತಲೇ ನಾವು ಒಳನಡೆದೆವು.

ಅಂದಹಾಗೆ ಭಾರತೀಯ ಖಾದ್ಯವನ್ನು ಸವಿಯಲೇನೂ ನಾವು ಅಂದು ಕಾರಿಲ್ ನತ್ತ ನಡೆದಿರಲಿಲ್ಲ. ಮಸಾಲೆಭರಿತ ಭಾರತೀಯ ಖಾದ್ಯಗಳನ್ನು ಸವಿಯುವ ಹಂಬಲದಲ್ಲಿ ಹೊಟ್ಟೆ ಚುರುಗುಟ್ಟುತ್ತಿತ್ತು ಎಂಬುದನ್ನು ಅಲ್ಲಗಳೆದರೆ ಸುಳ್ಳಾದೀತು. ಆದರೇನು ಮಾಡುವುದು? ನಾನಿದ್ದಿದ್ದು ಲುವಾಂಡಾದಲ್ಲೇ ಹೊರತು ನಮ್ಮೂರಿನ ಬೀದಿಗಳಲ್ಲಲ್ಲ. ಮನಸ್ಸು ”ಬೇಕು ಬೇಕು” ಎಂದರೂ ಜೇಬು ”ಬೇಡ ಬೇಡ” ಅನ್ನುವ ಕ್ಷಣಗಳವು.

ಇಡೀ ತಿಂಗಳ ರೇಶನ್ನಿನ ಖರ್ಚನ್ನು ಒಂದು ಹೊತ್ತಿನ ಊಟಕ್ಕೆ ವ್ಯಯಿಸಲು ಧೈರ್ಯವಷ್ಟೇ ಅಲ್ಲ, ಜೇಬೂ ದಪ್ಪಗಿರಬೇಕು! ಇರಲಿ. ಅಸಲಿಗೆ ನಾವು ಗುಪ್ತಚರ ವಿಭಾಗದ ಅಧಿಕಾರಿಗಳಂತೆ ಈ ಸ್ಥಳವನ್ನು ಹುಡುಕುತ್ತಾ ಹೋಗಿದ್ದು ತರಹೇವಾರಿ ಭಾರತೀಯ ಮಸಾಲೆಗಳು ಎಲ್ಲಿ ಸಿಗಬಹುದು ಎಂಬ ಮಾಹಿತಿಯನ್ನು ಪಡೆಯಲು ಮಾತ್ರ. ಎಲ್ಲಾ ಕಡೆ ಹುಡುಕಿ ಹುಡುಕಿ ನಿರಾಶರಾಗಿ ನಮಗುಳಿದಿದ್ದ ಒಂದೇ ದಾರಿಯದು. ಹೋಟೇಲಿನವರು ಎಲ್ಲಿಂದಾದರೂ ತರಿಸಿಕೊಳ್ಳುತ್ತಾರಲ್ಲವೇ? ಹಾಗಾಗಿ ಒಮ್ಮೆ ಪ್ರಯತ್ನಿಸಿಯೇಬಿಡೋಣ ಎಂಬ ಹುರುಪಿನಿಂದ ನಾನು ಹೊರಟಿದ್ದೆ.

ದಿನದ ವಿಶೇಷವೆಂದರೆ ಹೋಟೇಲಿನ ಮಧ್ಯಭಾಗದಲ್ಲಿ ಅಳವಡಿಸಲಾಗಿದ್ದ ದೊಡ್ಡ ಟೆಲಿವಿಷನ್ನಿನಲ್ಲಿ ಶಾರೂಖ್ ಖಾನ್ ‘ಮೊಹಬ್ಬತೇ’ ಚಿತ್ರದ ಹಾಡೊಂದಕ್ಕೆ ಕುಣಿಯುತ್ತಿದ್ದ. ಅರೇ ವಾಹ್ ಎಂದು ಕಣ್ಣರಳಿಸದೆ ಬೇರೆ ದಾರಿಯಿರಲಿಲ್ಲ. ಅಂಗೋಲಾದಲ್ಲಿ ಭಾರತೀಯ ಚಲನಚಿತ್ರವೊಂದನ್ನು ಕಂಡಿದ್ದು ಅದೇ ಮೊದಲು ನಾನು. ಅದು ಇಂಡಿಯನ್ ರೆಸ್ಟೊರೆಂಟ್ ಆಗಿತ್ತು ಅನ್ನುವುದರಿಂದಾಗಿ ಇದೊಂದು ದೊಡ್ಡ ವಿಷಯವಲ್ಲದಿರಬಹುದು. ಇನ್ನು ಬಾಲಿವುಡ್ಡಿಗೂ ತನಗೂ ಯಾವ ಸಂಬಂಧವೂ ಇಲ್ಲದಂತಹ ರಾಷ್ಟ್ರಗಳಲ್ಲೂ ಈ ಮೇರುನಟನಿಗೆ ಅಭಿಮಾನಿಗಳಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅದೇನೇ ಇದ್ದರೂ ಅಚಾನಕ್ಕಾಗಿ ಬರುವ ಇಂಥಾ ಚಿಕ್ಕಪುಟ್ಟ ಅನಿರೀಕ್ಷಿತ ಖುಷಿಗಳು ಪುಳಕವನ್ನು ನೀಡುವುದಂತೂ ಸತ್ಯ.

ಆ ದಿನ ಭಾರತೀಯ ಚಲನಚಿತ್ರಗಳ ಬಗ್ಗೆ ನನ್ನ ದುಭಾಷಿ ಮಹಾಶಯ ಅದ್ಭುತವಾಗಿ ಮಾತಾಡಿದ. ಹಿಂದೆಲ್ಲಾ ಅಂಗೋಲನ್ ಟಿ.ವಿ ಚಾನೆಲ್ ಗಳಲ್ಲಿ ಭಾರತೀಯ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದರಂತೆ. ಹೀಗಾಗಿ ಈ ಬಗ್ಗೆ ಅಲ್ಪಸ್ವಲ್ಪವಾದರೂ ಇವರುಗಳಿಗೆ ತಿಳಿದಿತ್ತು.

ಈತ ಎಲ್ಲೋ ತಮಾಷೆಗೆ ಹೇಳಿರಬೇಕು ಎಂದು ನಾನು ಅಂದುಕೊಂಡರೆ ಅಚ್ಚರಿಯೆಂಬಂತೆ ಮುಂದೆ ಹಲವರಿಂದ ಇಂಥಾ ಅಭಿಪ್ರಾಯಗಳು ಕೇಳಿಬಂದಿದ್ದವು. ಇವರಲ್ಲಿ ಬಹಳಷ್ಟು ಮಂದಿ ಭಾರತೀಯ ಚಿತ್ರಗಳನ್ನು ವೀಕ್ಷಿಸುತ್ತಿದ್ದಿದ್ದು ಹಾಡುಗಳಿಗೆ ಅದ್ಭುತವಾಗಿ ಹೆಜ್ಜೆಹಾಕುತ್ತಿದ್ದ ಭಾರತೀಯ ನಟನಟಿಯರನ್ನು ನೋಡಲು.

ಈ ಬಗ್ಗೆ ಹಲವು ಬಗೆಯ ತಮಾಷೆಯ ಪ್ರಶ್ನೆಗಳು ನನಗೆ ಎದುರಾಗಿದ್ದೂ ಇದೆ. ಅದ್ಯಾಕೆ ಭಾರತೀಯ ಚಿತ್ರಗಳಲ್ಲಿ ಇಷ್ಟುದ್ದ ಹಾಡುಗಳಿರುತ್ತವೆ? ನಟ-ನಟಿಯರ ಹಿಂದೆ ನರ್ತಿಸುವ ಎಲ್ಲಾ ಕಲಾವಿದರು (ಜೂನಿಯರ್ ಆರ್ಟಿಸ್ಟ್ ಗಳು) ಪಾತ್ರವಾಗಿಯೂ ಬರುತ್ತಾರೋ? ಭಾರತೀಯ ನಟಿಯರ ಸೌಂದರ್ಯದ ಗುಟ್ಟೇನು? ಹೀಗೆ ತರಹೇವಾರಿ ಪ್ರಶ್ನೆಗಳು. ”ಸ್ವಲ್ಪ ಹೊತ್ತಿನ ಮುಂಚೆಯಷ್ಟೇ ಹತ್ತಿಪ್ಪತ್ತು ಜನ ಭಯಂಕರವಾಗಿ ಹೊಡೆದಾಡುತ್ತಿದ್ದರು. ಈಗ ಎಲ್ಲರೂ ಜೊತೆಯಾಗಿ ಥಕಥೈ ಥಕಥೈ ಕುಣಿಯುತ್ತಿದ್ದಾರೆ. ಇದ್ಹೇಗೆ ಸಾಧ್ಯ?”, ಎನ್ನುತ್ತಾ ಒಬ್ಬನಂತೂ ನಮ್ಮಲ್ಲಿ ನಗೆಯುಕ್ಕಿಸಿದ್ದ.

ಈ ಹಿಂದೆ ಲುವಾಂಡಾ ಏರ್-ಪೋರ್ಟಿನಲ್ಲಿ ಪರಿಚಯವಾಗಿದ್ದ ನಮೀಬಿಯನ್ ತರುಣಿಯೊಬ್ಬಳೂ ಕೂಡ ಈ ಬಗ್ಗೆ ಮಾತಾಡುತ್ತಾ ಪುಂಖಾನುಪುಂಖವಾಗಿ ಪ್ರಶ್ನೆಗಳನ್ನೆಸೆಯುತ್ತಿದ್ದಿದ್ದು ನೆನಪಾಗುತ್ತಿದೆ. ಕೆಲವೇ ದಿನಗಳ ಹಿಂದೆ ಭಾರತೀಯ ಚಿತ್ರವೊಂದನ್ನು ಕಂಡು ಆಕೆ ಬಹಳ ಇಷ್ಟಪಟ್ಟಿದ್ದಳಂತೆ. ಆದರೆ ಅದು ಯಾವ ಭಾಷೆಯಲ್ಲಿದೆ, ಚಿತ್ರದ ಹೆಸರೇನು ಎಂಬ ಬಗ್ಗೆಯೆಲ್ಲಾ ಆಕೆಗೆ ಏನೇನೂ ತಿಳಿದಿರಲಿಲ್ಲ. ನಂತರ ಪ್ರಶ್ನೆಗಳನ್ನೆಸೆಯುವ ಸರದಿಯು ನನಗೆ ಬಂದಾಗ ಆಕೆ ಮಾತಾಡುತ್ತಾ ಇದ್ದಿದ್ದು ‘ತ್ರೀ ಈಡಿಯಟ್ಸ್’ ಚಿತ್ರದ ಬಗ್ಗೆ ಎಂದು ತಿಳಿದುಬಂದಿತ್ತು.

ಹೀಗೆಯೇ ವೀಜ್ ನ ಸರಕಾರಿ ಇಲಾಖೆಯೊಂದರಲ್ಲಿರುವ ಹಿರಿಯ ಅಧಿಕಾರಿಯೊಬ್ಬರು ಫೇಸ್-ಬುಕ್ಕಿನಲ್ಲಿ ಮೆಸೇಜ್ ಮಾಡಿ ”ಇಲ್ಲೊಂದು ವೀಡಿಯೋ ಇದೆ ನೋಡಿ, ಸಖ್ಖತ್ತಾಗಿದೆ”, ಎಂದು ಕಳಿಸಿದ್ದರು. ಏನಿದೆಯಪ್ಪಾ ಎಂದು ನೋಡಿದರೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ರೌಡಿಗಳ ದೊಡ್ಡ ಪಡೆಯೊಂದಕ್ಕೆ ಯದ್ವಾತದ್ವಾ ಬಾರಿಸುತ್ತಿದ್ದರು. ”ಇದು ನನ್ನದೇ ಭಾಷೆ ಸಾಹೇಬ್ರೇ… ಈ ಭಾಷೆಯಲ್ಲೇ ನಾನು ಬರೆಯೋದು”, ಎಂದೆ ಅವರಿಗೆ. ”ಏನೋ ಚೆನ್ನಾಗಿತ್ತು, ನಿಮಗೂ ಕಳಿಸಿದೆ”, ಅಂದರವರು (ಹೊಡೆದಾಟದ ದೃಶ್ಯಗಳಲ್ಲಿ ಗುರುತ್ವಾಕರ್ಷಣೆಯಂತಹ ಭೌತಶಾಸ್ತ್ರದ ಮೂಲತತ್ವಗಳು ಈ ಪಾತ್ರಧಾರಿಗಳಿಗೆ ಅನ್ವಯವಾಗದಿರುವುದು ಅವರಿಗೆ ವಿಭಿನ್ನವಾಗಿ ಕಂಡಿತೋ ಏನೋ).

ಇವರ ಪೂರ್ವಜರಲ್ಲಿ ಕೆಲವರು ಪೋರ್ಚುಗೀಸ್ ಆಡಳಿತದಲ್ಲಿ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರಂತೆ. ನಂತರ ಅವರಿಂದಾಗಿ ಗೋವಾದ ಹೊಸ ನಂಟೊಂದು ಶುರುವಾಗಿ ಇವರೂ ಒಂದೆರಡು ವರ್ಷಗಳಿಗೊಮ್ಮೆ ಗೋವಾಗೆ ಭೇಟಿ ನೀಡುವ ಪರಿಪಾಠವು ಶುರುವಾಗಿತ್ತಂತೆ. ”ನಿಮ್ಮ ಚಿತ್ರಗಳಲ್ಲಿ ಬರುವ ಡ್ಯಾನ್ಸ್ ನೋಡುವುದೆಂದರೆ ನನಗಂತೂ ಖುಷಿಯೋ ಖುಷಿ”, ಎನ್ನುತ್ತಾ ಮುಗುಳ್ನಗುತ್ತಾರೆ ಈತ.

ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ಅಷ್ಟೇ ಅಲ್ಲ ಎಂದು ನಾನು ನನ್ನ ಅಂಗೋಲನ್ ಮಿತ್ರರಿಗೆ ಸಾಮಾನ್ಯವಾಗಿ ಹೇಳುತ್ತಿರುತ್ತೇನೆ. ಹಾಗೆಯೇ ಕನ್ನಡ, ಮರಾಠಿ, ಬೆಂಗಾಲಿ, ಮಲಯಾಳಂ ಚಿತ್ರಗಳ ಕಲಾಶ್ರೀಮಂತಿಕೆಯ ಬಗ್ಗೆಯೂ. ಅಂಗೋಲಾದಲ್ಲಿ ವ್ಯವಸ್ಥಿತವಾಗಿ ನಡೆಯುವಂತಹ ಚಿತ್ರೋದ್ಯಮವೇನೂ ಇಲ್ಲದಿದ್ದರೂ ಇಲ್ಲಿಯ ಗಾಯಕರು ಮತ್ತು ಕಲಾವಿದರು ಜನಪ್ರಿಯರೇ. ಯೊಲಾ ಸಿಮೋಡೋ, ಬೊಂಗ, ಅನ್ಸೆಲ್ಮೋ ರಾಲ್ಫ್, ಆರಿ ಗೇಬ್ರಿಯೆಲಾ, ಪೌಲೋ ಫ್ಲೋರ್ಸ್, ಯೂರಿ ಡಕುನ್ಹ ಇವರಲ್ಲಿ ಪ್ರಮುಖರು. ಈ ಬಾರಿಯ (2018) ಕಾರ್ನಿವಲ್ ಆಚರಣೆಯಲ್ಲಿ ಖ್ಯಾತ ಅಂಗೋಲನ್ ಗಾಯಕಿಯಾದ ಯೊಲಾ ಸಿಮೋಡೋರನ್ನು ಕಾರ್ನಿವಲ್ ರಾಯಭಾರಿಯನ್ನಾಗಿಯೂ ಕೂಡ ನೇಮಿಸಲಾಗಿತ್ತು.

ನಮ್ಮ ವೀಜ್ ನಿವಾಸದಲ್ಲಿ ಮನೆಗೆಲಸಕ್ಕೆಂದು ನೇಮಿಸಲಾಗಿರುವ ಕೆಲ ತರುಣಿಯರೂ ಕೂಡ ಕ್ರಮೇಣ ಭಾರತೀಯ ಚಿತ್ರಗೀತೆಗಳ ಹುಚ್ಚನ್ನು ತಲೆಗೇರಿಸಿಕೊಂಡಿದ್ದರು. ನಮ್ಮ ಬಳಕೆಗೆಂದೇ ಹಾಕಿಸಲಾಗಿದ್ದ ನಾಲ್ಕೈದು ಮನರಂಜನಾ ಚಾನೆಲ್ಲುಗಳಿಂದಾಗಿ ಇವರಿಗೂ ‘ಸಾಂಸ್ಕೃತಿಕ ವಿನಿಮಯ’ದ ಭಾಗ್ಯ. ಹಾಡುಗಳು ಎಲ್ಲಿ ಬರುತ್ತಿವೆ ಎಂಬ ತಲಾಶೆಯಲ್ಲಿ ಹೂವಿನಿಂದ ಹೂವಿಗೆ ಹಾರುವ ದುಂಬಿಗಳಂತೆ ಚಾನೆಲ್ಲಿನಿಂದ ಚಾನೆಲ್ಲಿಗೆ ಹಾರುವ ಕುತೂಹಲಿಗಳಿವರು. ನಡುನಡುವಿನಲ್ಲಿ ”ಎಲ, ಮುಯ್ತು ಬುನೀತ… ಮುಯ್ತು ಬುನೀತ… (ಆಕೆ ಅದೆಷ್ಟು ಸುಂದರಿ)”, ಎಂಬ ಉದ್ಗಾರಗಳು.

ನಿಂತಲ್ಲೇ, ಕೂತಲ್ಲೇ ಹಾಡಿನ ಲಯಕ್ಕೆ ಸರಿಯಾಗಿ ನೆಲತಟ್ಟುವ ಕಾಲುಗಳು. ರೋಜಾ ಎಂಬ ಮಧ್ಯವಯಸ್ಕ ಮಹಿಳೆಯಂತೂ ಗಂಟೆಗಟ್ಟಲೆ ಸಿಳ್ಳೆಯಲ್ಲೇ ಅಂಗೋಲನ್ ಬುಡಕಟ್ಟು ಜನಾಂಗದ ಹಾಡುಗಳನ್ನು ಯಾವಾಗಲೂ ಗುನುಗುನಿಸುತ್ತಿರುವವಳು. ಆ ಸಿಳ್ಳೆಯು ಕೇಳಲು ಅದೆಷ್ಟು ಮಧುರವೆಂದರೆ ದೂರದಲ್ಲಿ ಕೂತವರಿಗೆ ಯಾರೋ ತನ್ಮಯರಾಗಿ ಕೊಳಲು ನುಡಿಸುತ್ತಿದ್ದಾರೆ ಎಂದು ಅನ್ನಿಸಬೇಕು. ಅಂಥಾ ರೋಜಾಳಂಥಾ ರೋಜಾಳೂ ಕೂಡ ಆ ದಿನ ಪೆನ್-ಡ್ರೈವ್ ಒಂದನ್ನು ಎಲ್ಲಿಂದಲೋ ಪಡೆದುಕೊಂಡು ಬಂದು ನನ್ನ ಕೈಯಲ್ಲಿರಿಸಿ ಹೇಳಿಯೇಬಿಟ್ಟಿದ್ದಳು: ”ನಿಮ್ಮ ಕಂಪ್ಯೂಟರಿನಲ್ಲಿರುವ ಎಲ್ಲಾ ಬಗೆಯ ಭಾರತೀಯ ಹಾಡುಗಳನ್ನೂ ಇದರಲ್ಲಿ ಹಾಕಿಬಿಡಿ. ನನಗೊಮ್ಮೆ ಕೇಳಬೇಕು!”

‘ಲಗ್ ಜಾ ಗಲೇ…’ ಹಾಡನ್ನು ನೆನಪಿಸುತ್ತಾ ”ನಮ್ಮ ಹಾಡುಗಳು ಯಾವ ಥೆರಪಿಗಳಿಗೂ ಕಮ್ಮಿಯಿಲ್ಲ” ಎಂದು ಸಂದರ್ಶನವೊಂದರಲ್ಲಿ ಹೇಳಿದ್ದ ಚಿತ್ರನಿರ್ದೇಶಕ ಕರಣ್ ಜೋಹರ್ ಅದ್ಯಾಕೋ ಅಂದು ನೆನಪಾದರು.

ಅಂಗೋಲಾದಲ್ಲೂ ಬಾಹುಬಲಿ:

ಭಾರತೀಯ ಚಿತ್ರರಂಗದ ಬ್ಲಾಕ್ ಬಸ್ಟರ್ ಗಳಲ್ಲೊಂದಾದ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಬಿಡುಗಡೆಯಾದಾಗ ನಾನು ಚಿತ್ರವನ್ನು ನೋಡಿರಲಿಲ್ಲ. ವಿಷುವಲ್ ಎಫೆಕ್ಟ್ ಗಳನ್ನು ಹೆಚ್ಚಾಗಿ ಬಳಸುವ ಫ್ಯಾಂಟಸಿ, ಸೈ-ಫೈ ಚಿತ್ರಗಳೆಂದರೆ ಅಷ್ಟಕ್ಕಷ್ಟೇ ಎಂಬಂತಿರುವ ನಾನು ಈ ಚಿತ್ರವನ್ನು ಕೈಬಿಟ್ಟಿದ್ದೆ. ಆದರೆ ನಂತರ ಚಿತ್ರಕ್ಕೆ ಸಿಕ್ಕ ಜನಪ್ರಿಯತೆಯನ್ನು ಕಂಡಾಗ ಕುತೂಹಲಕ್ಕಾದರೂ ಒಮ್ಮೆ ನೋಡಬಹುದಿತ್ತು ಎಂದು ತಲೆಕೆರೆದುಕೊಂಡಿದ್ದು ಸತ್ಯ. ಮುಂದೆ 2017 ರಲ್ಲಿ ಚಿತ್ರದ ಎರಡನೇ ಭಾಗವು ಬಿಡುಗಡೆಯಾದಾಗ ನಾನು ಅಂಗೋಲಾದಲ್ಲಿದ್ದೆ. ಹೀಗಾಗಿ ಇಂಥದ್ದೊಂದು ಮೆಗಾ ಚಿತ್ರವನ್ನು ದೊಡ್ಡ ಪರದೆಯ ಮೇಲೆ ನೋಡುವ ಅವಕಾಶವೊಂದು ಮತ್ತೊಮ್ಮೆ ತಪ್ಪಿಹೋಗಿತ್ತು.

ಈ ದಿನಗಳಲ್ಲೇ ಅಚ್ಚರಿಯೆನಿಸುವ ಸನ್ನಿವೇಶವೊಂದು ನಡೆಯಿತು. ವೀಜ್ ನ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ತರಲೆಂದು ಹೋಗಿದ್ದ ನನಗೆ ಬಾಹುಬಲಿ ಅಲ್ಲೂ ಎದುರಾಗಿದ್ದ. ಮಾರುಕಟ್ಟೆಯ ಒಂದು ಮೂಲೆಯಲ್ಲಿ ಮಾರಲಿಟ್ಟಿದ್ದ ಹಲವು ಡಿ.ವಿ.ಡಿ.ಗಳ ರಾಶಿಯಲ್ಲಿ ಬಾಹುಬಲಿಯೂ ಇತ್ತು. ಅಸಲಿಗೆ ಅದೊಂದು ಅಂಗಡಿಯೂ ಆಗಿರಲಿಲ್ಲ. ಸಿಕ್ಕ ಒಂದಿಷ್ಟು ಜಾಗದಲ್ಲಿ ತೆಳುವಾದ ಬಟ್ಟೆಯೊಂದನ್ನು ಹಾಸಿ ಇಪ್ಪತ್ತೈದರಿಂದ ಐವತ್ತು ಡಿ.ವಿ.ಡಿ.ಗಳನ್ನು ಸಾಲಾಗಿ ಚೊಕ್ಕವಾಗಿಟ್ಟು ಮಾರುವ ಪುಟ್ಟ ಜಾಗವದು. ತನ್ನದು ಎಂದು ಹೇಳಿಕೊಳ್ಳಲು ಒಂದು ಸೂರೂ ಇಲ್ಲದ ಹಿಡಿಯಷ್ಟು ಜಾಗ.

ಸೂರಿಲ್ಲದ ಪರಿಣಾಮವಾಗಿ ಈ ಡಿ.ವಿ.ಡಿ.ಗಳು ಮಧ್ಯಾಹ್ನದ ಬಿರುಬಿಸಿಲಿಗೆ ಒಣಮೀನಿನಂತೆ ಚೆನ್ನಾಗಿ ಒಣಗುತ್ತಿರುತ್ತವೆ. ಮಳೆಯ ದಿನಗಳಲ್ಲಿ ಕಾರ್ಮೋಡಗಳು ಗರ್ಜಿಸುತ್ತಾ ಭೋರೆಂದು ವರ್ಷಧಾರೆಯನ್ನು ಸುರಿಸಿದ್ದೇ ಆದಲ್ಲಿ ಆ ಬಟ್ಟೆಯಲ್ಲೇ ಈ ಡಿ.ವಿ.ಡಿ.ಗಳನ್ನು ಸುತ್ತಿಕೊಂಡು ಎದೆಗವಚಿ ಆತ ಓಡಬೇಕು. ಅಲ್ಲಿ ಬಿಕರಿಯಾಗುತ್ತಿದ್ದ ಎಲ್ಲಾ ಡಿ.ವಿ.ಡಿ.ಗಳು ಪೋರ್ಚುಗೀಸ್ ಭಾಷೆಯಲ್ಲಿದ್ದವು ಎಂಬ ಒಂದೇ ಒಂದು ಕಾರಣದಿಂದಾಗಿ ನಾನು ಯಾವ ಖರೀದಿಯನ್ನೂ ಅಲ್ಲಿ ಈವರೆಗೂ ಮಾಡಿರಲಿಲ್ಲ. ನಂಬಲೇಬೇಕಾದ ಸಂಗತಿಯೆಂದರೆ ಬಾಹುಬಲಿ ಅಲ್ಲಿಗೂ ಬಂದಿಳಿದಿದ್ದ. ಎಲ್ಲಿಯ ರಾಜಮೌಳಿ? ಎಲ್ಲಿಯ ವೀಜ್? ಭಗವಂತನೇ ಬಲ್ಲ!

”ಇದು ಭಾರತದ ಸೂಪರ್ ಹಿಟ್ ಚಿತ್ರ ಗೊತ್ತಾ? ಇದರೊಂದಿಗೆ ನಿನ್ನದೊಂದು, ನಿನ್ನ ಈ ಪುಟ್ಟ ಅಂಗಡಿಯದೊಂದು ಫೋಟೋ ತೆಗೆಯಲೇಬೇಕು ಮಾರಾಯ. ನಾಳೆ ಇಲ್ಲೇ ಇರುತ್ತೀಯಲ್ಲಾ?”, ಎಂದು ಆ ವ್ಯಾಪಾರಿಯನ್ನು ಕೇಳಿದೆ ನಾನು. ಇತ್ತ ನನ್ನ ಉತ್ಸಾಹವು ಅವನಿಗಷ್ಟು ಅರ್ಥವಾದಂತೇನೂ ತಿಳಿಯಲಿಲ್ಲ. ಸ್ಥಳೀಯ ಮಾರುಕಟ್ಟೆಗಳಂತಹ ಹೆಚ್ಚು ಜನಸಂದಣಿಯಿರುವ ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ದುಬಾರಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ನಗದನ್ನು ತೆಗೆದುಕೊಂಡು ಹೋಗುವುದು ಅಪಾಯವಾದ್ದರಿಂದ ಆ ಕ್ಷಣದಲ್ಲಿ ನನ್ನೊಂದಿಗೆ ಸಾವಿರ ಕ್ವಾಂಝಾಗಳ ಎರಡು ಮುದಿನೋಟುಗಳಲ್ಲದೆ ಇನ್ನೇನೂ ಇರಲಿಲ್ಲ. ಸ್ಮಾರ್ಟ್‍ಫೋನ್ ಮನೆಯಲ್ಲೇ ಬೆಚ್ಚಗೆ ಮಲಗಿತ್ತು. ಹೀಗಾಗಿ ನಾಳೆ ಬರುತ್ತೇನೆ ಎನ್ನದೆ ವಿಧಿಯಿರಲಿಲ್ಲ. ಅಂತೂ ಒಲ್ಲದ ಮನಸ್ಸಿನಿಂದಲೇ ಅಲ್ಲಿಂದ ಮರಳಿದೆ.

ನನ್ನ ‘ನಾಳೆ’ಯ ಬಗ್ಗೆ ಆತ ಮರೆತಿರಬೇಕು. ಕೆಲವು ದಿನಗಳ ಕಾಲ ಅವನ ಪತ್ತೆಯೇ ಇರಲಿಲ್ಲ. ನಂತರ ಮರಳಿ ಬಂದಾಗ ಆತ ಈ ಬಗ್ಗೆ ಮರೆತವನಂತೆ ಅನ್ನಿಸಿತು. ”ಅದೆಲ್ಲಿ ಹೋಯಿತೋ ಗೊತ್ತಿಲ್ಲಪ್ಪ. ಯಾರೋ ಖರೀದಿಸಿರಬಹುದು”, ಎಂದು ಗೊಣಗಿದ ನಮ್ಮ ಮಹಾನುಭಾವ. ಆ ದಿನ ತರಕಾರಿಯ ಶಾಪಿಂಗ್ ನೀರಸವೆನ್ನಿಸಿತು.

ಅಂದಹಾಗೆ ಕೆಲ ದಿನಗಳ ನಂತರ, ಅಂದರೆ ನವೆಂಬರ್ 2017 ರಲ್ಲಿ ‘ಬಾಹುಬಲಿ’ ಚಿತ್ರವು ವೀಜ್ ನ ಚಿತ್ರಮಂದಿರವೊಂದರಲ್ಲಿ ಪ್ರದರ್ಶನವಾಯಿತು. ವಾರಾಂತ್ಯದ ದಿನದಂದು ಎರಡು ಶೋಗಳು ನಿಗದಿಯಾಗಿದ್ದವು. ಅಂದು ವಾಹನದಲ್ಲಿ ಎಲ್ಲಿಗೋ ಪ್ರಯಾಣಿಸುತ್ತಿದ್ದರೂ ಪಕ್ಕದಲ್ಲಿ ಪಾರ್ಕ್ ಮಾಡಿಸಿ ಪೋಸ್ಟರಿನ ಚಿತ್ರವೊಂದನ್ನು ಕ್ಲಿಕ್ಕಿಸಿದೆ. ಚಿತ್ರವು ಲುವಾಂಡಾದಲ್ಲಿ ಪ್ರದರ್ಶನವಾಗಿದ್ದರೆ ಇಷ್ಟು ಆಶ್ಚರ್ಯವಾಗುತ್ತಿರಲಿಲ್ಲವೋ ಏನೋ, ಆದರೆ ವೀಜ್ ನಂತಹ ಪುಟ್ಟ ಹಳ್ಳಿಯಲ್ಲೂ ಭಾರತೀಯ ಚಿತ್ರವೊಂದು ದೊಡ್ಡ ಪರದೆಯಲ್ಲಿ ಬಂದಿದ್ದು ಅಚ್ಚರಿಯೇ ಸರಿ.

ಅವಕಾಶ ಸಿಕ್ಕರೆ ಈ ಬಗ್ಗೆ ರಾಜಮೌಳಿಯವರಿಗೊಮ್ಮೆ ಹೇಳಬೇಕು. ಹಾಗೆಯೇ ಅವರ ಪ್ರತಿಕ್ರಿಯೆಯ ಬಗ್ಗೆಯೂ ಬರೆಯಬೇಕು!

3 Responses

 1. nutana doshetty says:

  sappe cinemagala noduvavarige masale ishta agbahudu.. neevu masale hudukikondu hodante ..

  • Prasad says:

   ಹ್ಹಹ್ಹಹ್ಹ… ಒಪ್ಪಿದೆ ಒಪ್ಪಿದೆ ನೂತನಾ ಅವರೇ… 🙂

 2. Sowmya Palimar says:

  very surprising Prasad..as usual very nice narration..

  Sowmya from Pune…

Leave a Reply

%d bloggers like this: