fbpx

ಜಿಎಸ್ಸೆಸ್ ಅಪರೂಪದ ಜಾತ್ಯತೀತ ವ್ಯಕ್ತಿಯಾಗಿದ್ದರು..

ಡಿ.ಎಸ್.ನಾಗಭೂಷಣ

ಇದೇ 12ರಂದು ಶಿವಮೊಗ್ಗದಲ್ಲಿ ಪ್ರದಾನ ಮಾಡಿದ ಜಿಎಸ್‌ಎಸ್ ಪುರಸ್ಕಾರವನ್ನು ಸ್ವೀಕರಿಸಿ ನಾನು ಆಡಿದ ಮಾತುಗಳ ಲಿಖಿತ ರೂಪ

ಮೊಟ್ಟ ಮೊದಲಿಗೆ ನನಗೆ ಈ ಜಿಎಸ್‌ಎಸ್ ಪುರಸ್ಕಾರ ನೀಡುತ್ತಿರುವ ಶಿವಮೊಗ್ಗದ ಜಿಎಸೆಸ್ ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳಿಗೆ, ವಿಶೇಷವಾಗಿ ಅದರ ಅಧ್ಯಕ್ಷರಾದ ಶ್ರೀಮತಿ ಕಿರಣ್ ದೇಸಾಯಿ ಅವರಿಗೆ ನಾನು ನನ್ನ ಪ್ರೀತಿಪೂರ್ವಕ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ.

ಬೆಂಗಳೂರಿನಲ್ಲಿಯೂ ಒಂದು ಜಿಎಸೆಸ್ ಪ್ರತಿಷ್ಠಾನವಿದೆ. ಅದು ಪ್ರತಿವರ್ಷ ವಿಮರ್ಶಕರೊಬ್ಬರಿಗೆ ಒಂದು ದೊಡ್ಡಮೊತ್ತದ ನಗದಿರುವ ಪ್ರಶಸ್ತಿಯನ್ನು ನೀಡುತ್ತದೆ. ಐದಾರು ವರ್ಷಗಳ ಹಿಂದೆ ಈ ಪ್ರಶಸ್ತಿಯನ್ನು ನನಗೆ ನೀಡುವ ಪರೋಕ್ಷ ಪ್ರಸ್ತಾಪವನ್ನು ಆ ಪ್ರತಿಷ್ಠಾನದ ಹಿರಿಯರೊಬ್ಬರು ನನ್ನೊಂದಿಗೆ ಮಾಡಿದಾಗ ನಾನು ಅದನ್ನು ನಯವಾಗಿಯೇ ನಿರಾಕರಿಸಿದ್ದೆ.

ಆದರೆ ಇಂದು ಶಿವಮೊಗ್ಗದ ಈ ಪ್ರತಿಷ್ಠಾನ ನೀಡುತ್ತಿರುವ ಅದೇ ಹೆಸರಿನ ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುತ್ತಿದ್ದರೆ ಅದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು, ಈ ಪ್ರತಿಷ್ಠಾನದ ಪದಾಧಿಕಾರಿಗಳು ನನ್ನ ಸಾಹಿತ್ಯದ ಬಗ್ಗೆ ಮತ್ತು ನನ್ನ ಬಗ್ಗೆ ಪ್ರೀತಿ ಗೌರವವಿರುವವರು ಮತ್ತು ಈ ಪ್ರಶಸ್ತಿಯನ್ನು ನಿರ್ವ್ಯಾಜ ಪ್ರೀತಿಯಿಂದ ಕೊಡುತ್ತಿರುವುದು. ಎರಡನೇ ಕಾರಣ, ಈ ಪ್ರಶಸ್ತಿ ಇನ್ನೂ ಹೊಸದಾಗಿದ್ದು, ಸಾಹಿತ್ಯೇತರ ಕಾರಣಗಳಿಂದ ಮಲಿನಗೊಂಡಿಲ್ಲ ಎನ್ನುವುದು.

ಇಂದು ಕನ್ನಡದಲ್ಲಿ ನೂರಾರು ಪ್ರಶಸ್ತಿಗಳಿವೆ. ಬೆಳಿಗ್ಗೆ ಎದ್ದು ಪತ್ರಿಕೆಯ ಪುಟ ತೆರೆದರೆ ಒಂದಲ್ಲ ಒಂದು ಪ್ರಶಸ್ತಿಯ ಸುದ್ದಿ ಇರುತ್ತದೆ. ಮಾನವಂತ ಸಾಹಿತಿಗಳು ಇಂದು ಯಾವ ಪ್ರಶಸ್ತಿ ಬರಸಿಡಿಲಿನಂತೆ ತಮ್ಮ ಮೇಲೆ ಎರಗುವುದೋ ಎಂಬ ಆತಂಕದಲ್ಲಿರುವ ಪರಿಸ್ಥಿತಿ ಇದೆ. ಇಂತಹ ಪ್ರಶಸ್ತಿಗಳ ಸಂತೆಯಲ್ಲಿ ಪ್ರಶಸ್ತಿ ಒಪ್ಪಿಕೊಳ್ಳಲು ನಿಮಗೆ ನಿಜವಾದ ಎಂಟೆದೆ ಬೇಕು!

ಜಿ.ಎಸ್. ಶಿವರುದ್ರಪ್ಪನವರ ಹೆಸರಿನಲ್ಲಿರುವ ಈ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಸಂತೋಷವೇ ಆಗುತ್ತಿದೆ. ಏಕೆಂದರೆ ನನ್ನ ಸಾಹಿತ್ಯ ವ್ಯಕ್ತಿತ್ವವನ್ನು ರೂಪಿಸಿದ ಹಲವರಲ್ಲಿ ಅವರು ಪ್ರಮುಖರು. ಅವರು ನನ್ನ ನೇರ ಗುರುಗಳಲ್ಲದಿದ್ದರೂ, ನಮ್ಮ ಒಡನಾಟದುದ್ದಕ್ಕೂ ಹಿರಿಯ ಗೆಳೆಯರಂತೆಯೇ ಇದ್ದು ತಮ್ಮದೇ ವಿಶಿಷ್ಟ ರೀತಿಯಲ್ಲಿ ನನ್ನ ಸಾಹಿತ್ಯ ಚಿಂತನೆಯನ್ನು ಪ್ರಭಾವಿಸಿದ್ದಾರೆ. ಅವರನ್ನು ನಾನು ಹಲವು ದೂರಗಳಿಂದ ನೋಡಿದ್ದೇನೆ.

ಕನ್ನಡದ ಸುಪ್ರಸಿದ್ಧ ಕವಿಯಾಗಿ, ಕನ್ನಡ ಪ್ರಾಧ್ಯಾಪಕರಾಗಿ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ದೂರದಿಂದ ಭಯಮಿಶ್ರಿತ ಗೌರವದಿಂದ ನೋಡಿದ್ದೇನೆ. ನಂತರ ನಾನು ಆನರ್ಸ್ ಮತ್ತು ಸ್ನಾತಕೋತ್ತರ ಪದವಿಗಳಿಗಾಗಿ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾದಾಗ ಅದೇ ಕಾಲೇಜಿನಲ್ಲಿ ಸ್ಥಿತವಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾಲೇಜಿನ ಆವರಣದಲ್ಲಿ ಮುಕ್ತವಾಗಿ ಓಡಾಡುತ್ತಿದ್ದ ಅವರನ್ನು ಭಯ ಕಳೆದುಕೊಂಡ ಗೌರವದಿಂದ ಗಮನಿಸಿದ್ದೇನೆ.

ವಿಶೇಷವಾಗಿ ನಮ್ಮ ಗಣಿತಶಾಸ್ತ್ರ ವಿಭಾಗದ ಕಟ್ಟಡದಲ್ಲೇ ಇದ್ದ ಸೆನೆಟ್ ಹಾಲ್‌ನಲ್ಲಿ ಅವರು ಪ್ರತಿವರ್ಷ ನಡೆಸುತ್ತಿದ್ದ ಸಾಹಿತ್ಯ ವಿಚಾರ ಸಂಕಿರಣಗಳಲ್ಲಿ ಸಾಹಿತ್ಯದ ಪ್ರಶ್ನೆಗಳನ್ನು ಸಾವು ಬದುಕಿನ ಪ್ರಶ್ನೆಗಳೆಂಬಂತೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಅವರು ಅದನ್ನು ಸುದೂರದಲ್ಲಿ ನಿಂತು ನಿರ್ವಹಿಸುತ್ತಿದ್ದ ಪ್ರಬುದ್ಧ ಯಜಮಾನರ ಪಾತ್ರವನ್ನು ಮಧ್ಯಮ ದೂರದಿಂದ ಕಂಡು, ಸಾಹಿತ್ಯದ ಅಧ್ಯಯನದಿಂದ ಏನೆಲ್ಲ ಕಲಿಯಬಹುದೆಂದು ಅರಿತು ಬೆರಗಾಗಿದ್ದೇನೆ.

ನಂತರ ನಾನು ಕೆಲಸಕ್ಕೆಂದು ದೆಹಲಿಯಲ್ಲಿ ವಾಸಮಾಡಬೇಕಾಗಿ ಬಂದಾಗ ಯೋಗಾಯೋಗವೆಂಬಂತೆ ಜಿಎಸ್‌ಎಸ್ ನನಗೆ ಬಹು ಹತ್ತಿರವಾಗಿ, ಅವರು ಅಧಿಕೃತ ಕೆಲಸಗಳ ಮೇಲೆ ದೆಹಲಿಗೆ ಬಂದಾಗಲೆಲ್ಲ ನನ್ನ ಪುಟ್ಟ ಮನೆಯಲ್ಲೇ ಉಳಿದುಕೊಳ್ಳುವ ವಿಶ್ವಾಸ ತೋರಿದಾಗ ಅವರನ್ನು ಬಹು ಹತ್ತಿರದಿಂದ ಆತ್ಮೀಯವಾಗಿ ಅರಿಯುವ ಸೌಭಾಗ್ಯ ನನ್ನದಾಗಿತ್ತು. ದೂರದಿಂದ ನೋಡಿದಾಗ ಬಹು ಬಿಗುಮಾನದ ವ್ಯಕ್ತಿಯಾಗಿ ಕಾಣುವ ಜಿಎಸ್ಸೆಸ್ ಹತ್ತಿರದಲ್ಲಿ ನೋಡಿದಾಗ ಮುಗ್ಧ ಮಗುವಿನಂತೆ ನನಗೆ ಕಾಣುತ್ತಿದ್ದರು. ಆ ಮುಗ್ಧತೆಯೇ ಅವರನ್ನು ಕವಿಯಾಗಿ ಮಾಡಿದ್ದೆಂದು ನಾನು ಭಾವಿಸಿದ್ದೇನೆ.

ಈ ಆತ್ಮೀಯತೆಯ ದಿನಗಳಲ್ಲೇ ಜಿಎಸ್ಸೆಸ್ ನನ್ನ ಮೇಲೆ ಪ್ರಭಾವ ಬೀರಿದ್ದು. ಅದು ಎಪ್ಪತ್ತರ ದಶಕ. ಲೋಹಿಯಾ ವಿಚಾರಗಳನ್ನು ಓದಿಕೊಂಡಿದ್ದ ನಾನು ನನ್ನ ಮಿತಿಯಲ್ಲೇ ತುರ್ತು ಪರಿಸ್ಥಿತಿ ವಿರೋಧಿ ಚಳುವಳಿಯಲ್ಲಿ ಭಾಗವಹಿಸಿ ನನ್ನ ಮನಸ್ಸು ಹೆಚ್ಚು ರಾಜಕೀಯವಾಗತೊಡಗಿದ್ದ ಆ ಕಾಲದಲ್ಲಿ ಸ್ವತಃ ಲೋಹಿಯಾ ವಿಚಾರಗಳ ಅಭಿಮಾನಿಯಾಗಿದ್ದ ಜಿಎಸ್ಸೆಸ್ ನನ್ನಲ್ಲಿದ್ದ ಸಾಹಿತ್ಯಾಸಕ್ತಿಯನ್ನೂ ಗಮನಿಸಿ, ನೀವು ಸಾಹಿತ್ಯ-ಸಂಸ್ಕೃತಿಗಳ ಕವಚದೊಂದಿಗೆ ರಾಜಕೀಯ ಚಟುವಟಿಕೆಗಳಳ್ಲಿ ತೊಡಗುವಿರಾದರೆ ನೀವು ರಾಜಕೀಯದಲ್ಲಿ ಕಳೆದುಹೋಗಲಾರಿರಿ ಎಂದು ಸೂಚಿಸಿದರು.

ಕಳೆದುಹೋಗಲಾರಿರಿ ಎಂದರೆ ಹಾಳಾಗಲಾರಿರಿ ಎಂದೇ ಅವರ ಅರ್ಥವಾಗಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ! ನಮ್ಮ ಸಾಹಿತ್ಯ ವಿಮರ್ಶೆಗೂ ಇದರಿಂದ ಹೊಸ ಆಯಾಮ ದೊರಕೀತೆಂದೂ ಅವರು ಸೇರಿಸದಿರಲಿಲ್ಲ. ಹಾಗೆ ನೋಡಿದರೆ ಆಗೀಗ ಪದ್ಯಗಳನ್ನೋ, ಕಥೆಯನ್ನೋ ಅಥವಾ ಒಂದು ವಿಮರ್ಶೆಯನ್ನೋ ಬರೆದುಕೊಂಡಿದ್ದ ನಾನು ಸಾಹಿತ್ಯ ವಿಮರ್ಶೆಯ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಲಾರಂಭಿಸಿದ್ದು ಆಗಲೇ.

ಅವರಂತಹವರ ಹಲವು ರೀತಿಯ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದಲೇ ನಾನಿಂದು ನಿಮ್ಮ ಮುಂದೆ ಸಾಹಿತ್ಯ ವಿಮರ್ಶೆಗಾಗಿ ಈ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರುವುದು. ನನ್ನ ಮೊದಲ ವಿಮರ್ಶಾ ಸಂಕಲನ ಗಮನಕ್ಕೆ ಅವರು ಬರೆದುಕೊಟ್ಟ ಅನನ್ಯ ಬೆನ್ನುಡಿಯ ಭಾರವನ್ನು ನಾನು ಈಗಲೂ ಹೊತ್ತು ನಡೆದಿದ್ದೇನೆ.

ಜಿಎಸೆಸ್ ಅವರು ರಾಜಕೀಯ ಎಚ್ಚರದ ಸಾಹಿತ್ಯ ವಿಮರ್ಶೆಯ ದೀಕ್ಷೆಯನ್ನು ನನಗೆ ನೀಡಿದರಾದರೂ, ಅದರ ಜೊತೆಯಲ್ಲೇ ಅವರು ಹೇಳಿದ ಮತ್ತೊಂದು ಮುಖ್ಯ ಪಾಠವೆಂದರೆ, ಸಾಹಿತ್ಯ ಸಾಹಿತ್ಯವಾಗಿಯೇ ಉಳಿಯಬೇಕೆಂಬುದು. ಅಂದರೆ ಅದು ಸಾಮಾಜಿಕತೆ ಹೆಸರಿನಲ್ಲಿ ತನ್ನನ್ನು ತಾನು ಕಳೆದುಕೊಳ್ಳಬಾರದು. ಸಾಹಿತ್ಯ ಸಾಹಿತ್ಯವಾಗಿ ಉಳಿಯದೆ ಸಮಾಜಶಾಸ್ತ್ರವೋ, ಮಾನವ ಶಾಸ್ತ್ರವೋ, ರಾಜಕೀಯ ಶಾಸ್ತ್ರವೋ ಆಗತೊಡಗಿದರೆ ಅದು ತನ್ನ ಪರಿಣಾಮಶೀಲತೆಯನ್ನು ಕಳೆದುಕೊಳ್ಳುವುದು.

ಹಾಗಾಗಿ ಯಾವುದೇ ವಿದ್ಯಮಾನ ತಾನು ತಾನಾಗಿ ಉಳಿಯದೆ ಅದು ಹೊರಗೆ ಘನವಾದ್ದೇನನ್ನೂ ಸೃಷ್ಟಿಸಲಾರದೆಂಬುದು ಅವರಿಂದ ನಾನು ಕಲಿತ ಪಾಠ.. ಹಾಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಬಹುಮುಖತೆಯ ಹೆಸರಿನಲ್ಲಿ ಸಾಹಿತ್ಯ ತನ್ನ ಮೂಲಗುಣವಾದ ಕಲಾತ್ಮಕತೆಯನ್ನೇ ಕಳೆದುಕೊಳ್ಳುತ್ತಿದೆ ಎನಿಸುತ್ತಿರುವುದರಿಂದ ಸಾಹಿತ್ಯದ ಸ್ವಾಯತ್ತತೆಯ ಬಗ್ಗೆ ನಾನು ಹೆಚ್ಚು ಮಾತನಾಡತೊಡಗಿರುವೆ. ಸಾಹಿತ್ಯ ವಿಮರ್ಶೆ ಬಹುಶಿಸ್ತೀಯ ಅಧ್ಯಯನವಾಗಿರಬಹುದೇ ಹೊರತು ಸಾಹಿತ್ಯ ಕೃತಿಯಲ್ಲ.

ಆದರೆ ಇಂದು ನಾವು ವ್ಯಾಪಕವಾಗಿ ಈ ಬೆಳವಣಿಗೆಯನ್ನು ನೋಡುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಸರ್ಕಾರದ ಸಾಹಿತ್ಯ-ಸಂಸ್ಕೃತಿ ಸಂಸ್ಥೆಗಳು ಮತ್ತು ಕೆಲವು ಖಾಸಗಿ ಸಂಸ್ಥೆಗಳೂ ತಂತಮ್ಮ ರಾಜಕೀಯ-ಸಾಮಾಜಿಕ ಉದ್ದೇಶಗಳಿಗಾಗಿ ಸಾಹಿತ್ಯದ ಮೌಲ್ಯಮಾಪನಕ್ಕೆ ಸಾಹಿತ್ಯೇತರ ಮಾನದಂಡಗಳನ್ನು ಬಳಸತೊಡಗಿ ಮಾನ್ಯತೆ-ಪ್ರಶಸ್ತಿ-ಪುರಸ್ಕಾರಗಳನ್ನು ಕೊಡತೊಡಗಿರುವುದು.

ಇದು ಕನ್ನಡ ಸಾಹಿತ್ಯದ ಹಿತದೃಷ್ಟಿಯಿಂದ ಮಾರಕ ಬೆಳವಣಿಗೆಯಾಗಿದೆ. ಜನಪ್ರಿಯ ರಾಜಕಾರಣ ಕನ್ನಡ ಸಾಹಿತ್ಯವನ್ನೇ ತಿಂದು ಹಾಕುವ ಅಪಾಯವನ್ನು ನಾವಿಂದು ಎದುರಿಸುತ್ತಿದ್ದೇವೆ. ಎರಡು-ಮೂರು ತಲೆಮಾರುಗಳ ಸಾಹಿತಿಗಳು ಮತ್ತು ವಿವಿಧ ಸಾಹಿತ್ಯ ದೃಷ್ಟಿಗಳಿದ್ದ ಎರಡು ಮೂರು ಸಾಹಿತ್ಯ ಚಳುವಳಿಗಳ ಮಧ್ಯೆ ಬೆಳೆಯುತ್ತಾ ಅಲ್ಲಲ್ಲಿ ವಿಚಲಿತರಾದಂತೆ ಕಂಡರೂ ಆತ್ಯಂತಿಕವಾಗಿ ತಮ್ಮ ಸಾಹಿತ್ಯದ ಹದ ಕೆಡದಂತೆ ಎಚ್ಚರ ವಹಿಸಿದ ಜಿಎಸೆಸ್‌ಗೆ ಗೌರವ ಸಲ್ಲಿಸುವುದೆಂದರೆ ಸಾಹಿತ್ಯವನ್ನು ಈ ಅಪಾಯದಿಂದ ಪಾರು ಮಾಡುವುದೇ ಆಗಿದೆ.

ಜಿಎಸ್‌ಎಸ್‌ಗೆ ಗೌರವ ಸಲ್ಲಿಸಲು ನಾವು ಮಾಡಲೇಬೇಕಾದ ಇನ್ನೊಂದು ಕೆಲಸವೆಂದರೆ ಕನ್ನಡದ ಮಕ್ಕಳ ಬಾಯಿಂದ ಕನ್ನಡವೇ ಕಾಣೆಯಾಗುತ್ತಿರುವ ಬೆಳವಣಿಗೆಯನ್ನು ತಡೆಯಲು ಕಂಕಣಬದ್ಧರಾಗುವುದು. ಕನ್ನಡ ಶಿಕ್ಷಣ ಮಾಧ್ಯಮವನ್ನು ಕಡ್ಡಾಯ ಮಾಡುವಂತೆ ತಾವಿರುವರೆಗೂ ಸರ್ಕಾರಗಳೊಂದಿಗೆ ಅನುಸಂಧಾನ ಮಾಡಿದ ಅವರು ಜಾಗತೀಕರಣದ ಎಲ್ಲ ಪಿಡುಗುಗಳಿಗೂ ಕನ್ನಡ ಶಿಕ್ಷಣ ಉತ್ತರವಾಗಬಲ್ಲುದೆಂದು ನಂಬಿದ್ದರು.

ಕಳೆದ ರಾಜ್ಯೋತ್ಸವ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ನನ್ನ ಅಷ್ಟಿಷ್ಟು ಕೆಲಸಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ನೀಡಿದ ರಾಜ್ಯೋತ್ಸವ ಪ್ರಶಸ್ತಿಯನ್ನು ನಾನು ಸ್ವೀಕರಿಸಲಿಲ್ಲ. ಕನ್ನಡದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನಾದರೂ ಕಡ್ಡಾಯವಾಗಿ ಕನ್ನಡದಲ್ಲಿ ಒದಗಿಸಲು ಅಡ್ಡಿಯಾಗಿರುವ ಆತಂಕಗಳನ್ನು ನಿವಾರಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂಬ ಕಾರಣದ ಮೇಲೆ ನಾನು ಆ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ.

ಆಗ ನನಗೆ ಉತ್ತರ ಕೊಡುವ ರೀತಿಯಲ್ಲೇ ಸುದ್ದಿಗಾರರೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಕನ್ನಡ ಮಾಧ್ಯಮ ಕಡ್ಡಾಯ ಮಾಡುವುದು ಸಂವಿಧಾನ ವಿರೋಧಿ ಎಂಬ ಸರ್ವೋನ್ನತ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಸಂವಿಧಾನ ತಿದ್ದುಪಡಿಗಾಗಿ ಏನು ಮಾಡಬಹುದೆಂಬುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸುತ್ತಿರುವುದಾಗಿ ತಿಳಿಸಿದ್ದರು. ತೀರ್ಪು ಬಂದಾಗಲೂ ಇಂತಹುದೇ ಭರವಸೆ ನೀಡಿದ್ದರು.

ಆದರೆ ಅವರ ಸರ್ಕಾರದ ಅವಧಿ ಮುಗಿಯುತ್ತಾ ಬಂದಿರುವ ಹೊತ್ತಿನಲ್ಲೂ ಈ ಸಂಬಂಧ ಅವರೇನು ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕನ್ನಡ ಜನತೆಗೆ ಸ್ಪಷ್ಟವಾಗಿಲ್ಲ. ಹಾಗಾಗಿ ಕನ್ನಡ ಸಾಹಿತ್ಯವನ್ನು ಉಳಿಸುವ ಆಂದೋಲನದ ಭಾಗವಾಗಿಯೇ ಕನ್ನಡ ಉಳಿಸುವ ಆಂದೋಲನ ಮತ್ತೆ ಚುರುಕುಗೊಳ್ಳಬೇಕಿದೆ.

ನನ್ನ ಈ ಮಾತುಗಳನ್ನು ಮುಗಿಸುವ ಮೊದಲು ಒಂದು ಕೋರಿಕೆ. ಕಿವಿ ಮಾತೆಂದರೂ ನಡೆದೀತು. ದಯವಿಟ್ಟು ಈ ಜಿಎಸ್‌ಎಸ್ ಪ್ರತಿಷ್ಠಾನವನ್ನು ಒಂದು ಜಾತಿ ಗುಂಪು ಎನ್ನುವಂತೆ ಮಾಡಬೇಡಿ. ಹಾಗೆ ಮಾಡಿದರೆ ಅದು ಜಿಎಸ್ಸೆಸ್ ವ್ಯಕ್ತಿತ್ವಕ್ಕೆ ಅಪಚಾರ ಮಾಡಿದಂತೆ. ಏಕೆಂದರೆ ಅವರು ಓರ್ವ ಅಪರೂಪದ ಜಾತ್ಯತೀತ ವ್ಯಕ್ತಿಯಾಗಿದ್ದರು.

ಅವರನ್ನು ನಾನು ಮೊದಲು ಕಣ್ಣಾರೆ ನೋಡಿದ್ದು ಎಪ್ಪತ್ತರ ದಶಕದ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ವೀರಶೈವ ಸಮ್ಮೇಳನವನ್ನು ಪ್ರತಿಭಟಿಸಲು ಪ್ರೊ. ನಂಜುಂಡಸ್ವಾಮಿ, ತೇಜಸ್ವಿ, ಲಂಕೇಶ್ ಅವರ ಜೊತೆ ನಿಂತಿದ್ದಾಗ. ಅವರು ಜಾತಿ-ಧರ್ಮಗಳ ಸಂಕುಚಿತತೆಯ ಕಾರಣಗಳಿಂದ ಪುಸ್ತಕಗಳನ್ನು ನಿಷೇಧಿಸುವ ಪ್ರಸ್ತಾಪ ಬಂದಾಗಲೆಲ್ಲ, ಅದು ಮಾಸ್ತಿಯವರ ಚೆನ್ನಬಸವನಾಯಕವೇ ಆಗಿರಬಹುದು, ಶಿವಪ್ರಕಾಶರ ಮಹಾಚೈತ್ರವೇ ಆಗಿರಬಹುದು, ಅಥವಾ ಪಿ.ವಿ. ನಾರಾಯಣರ ಧರ್ಮಕಾರಣವೇ ಆಗಿರಬಹುದು, ಅದನ್ನು ಬೇಷರತ್ತಾಗಿ ಖಂಡಿಸಿ ದನಿ ಎತ್ತಿದ್ದಾರೆ.

ಅವರ ಪ್ರತಿಭಾವಂತ ಶಿಷ್ಯಕೋಟಿಯಲ್ಲಿ ಎಲ್ಲ ಜಾತಿಗಳವರೂ ಇದ್ದರು ಎಂಬುದನ್ನು ನಾವು ಗಮನಿಸಬೇಕು. ಇದೊಂದು ಜಾತ್ಯತೀತ ಗ್ಯಾಂಗ್ ಎಂದೇ ಪ್ರಸಿದ್ಧವಾಗಿದ್ದು, ಈ ಸಂಬಂಧವಾಗಿ ಕೆಲವರು ಜಿಎಸ್ಸೆಸ್ ಅವರನ್ನು ಪ್ರೀತಿ ತುಂಬಿದ ತಮಾಷೆಯಿಂದ ಗ್ಯಾಂಗ್‌ಸ್ಟರ್ ಎಂದೂ ಕರೆಯುತ್ತಿದ್ದರು ಎಂಬುದನ್ನೂ ಇಲ್ಲಿ ತಿಳಿಸಬಯಸುವೆ.

ಕೊನೆಯದಾಗಿ ನನ್ನ ವ್ಯಕ್ತಿತ್ವ ಮತ್ತು ಸಾಹಿತ್ಯದ ಬಗ್ಗೆ ಮಾತಾಡಿದ ಗೆಳೆಯ ಡಾ. ಚನ್ನೇಶ್ ಹೊನ್ನಾಳಿಯವರು ಆಡಿದ ಒಂದು ಮಾತಿಗೆ ಪ್ರತಿಕ್ರಿಯಿಸಿ ನನ್ನ ಮಾತುಗಳನ್ನು ಮುಗಿಸಬಯಸುವೆ. ನಾನು ವಿಪುಲವಾಗಿ ಮತ್ತು ಶ್ರೇಷ್ಠ ಗುಣಮಟ್ಟದ ಕೃತಿಗಳನ್ನು ರಚಿಸಿದ್ದರೂ, ನನಗೆ ಸಾಹಿತ್ಯ ಲೋಕದಲ್ಲಿ ಅಗತ್ಯ ಮಾನ್ಯತೆ ಇಲ್ಲದಿರುವ ಬಗ್ಗೆ ಅವರು ವಿಷಾದಿಸುತ್ತಾ ಅದಕ್ಕೆ ಕೆಲವು ಕಾರಣಗಳನ್ನು ಹುಡುಕಲು ಯತ್ನಿಸಿದರು.

ಆದರೆ ಅವರ ಈ ಅಭಿಪ್ರಾಯ, ವಿಷಾದ ತಪ್ಪೆಂದು ನಾನು ಹೇಳಬಯಸುವೆ. ಏಕೆಂದರೆ, ಕಾಲೇಜು ಅಧ್ಯಾಪಕರಾದ ಅವರಿನ್ನೂ ಕನ್ನಡ ಸಾಹಿತ್ಯಲೋಕ ಕನ್ನಡ ಅಥವಾ ಇಂಗ್ಲಿಷ್ ಮೇಷ್ಟ್ರುಗಳ ಸಾಮ್ರಾಜ್ಯವಾಗಿದೆ ಎಂದು ಭಾವಿಸಿದಂತಿದೆ, ಈಗ ಮೇಷ್ಟ್ರುಗಳು ಯಾವುದೇ ಎಗ್ಗಿಲ್ಲದೇ ದಪ್ಪ ಸಂಬಳಗಳನ್ನು ಪಡೆಯಲಾರಂಭಿಸಿದ್ದೂ ಸೇರಿದಂತೆ ಇನ್ನೂ ಅನೇಕ ಕಾರಣಗಳಿಂದಾಗಿ ಕನ್ನಡ ಸಾಹಿತ್ಯಲೋಕ ವಿಶ್ವವಿದ್ಯಾಲಯ ಕೇಂದ್ರಿತವಾಗಿ ಉಳಿದಿಲ್ಲ ಎಂಬುದನ್ನು ಅವರು ಗಮನಿಸಿದಂತಿಲ್ಲ.

ಇಂದು ಕನ್ನಡ ಸಾಹಿತ್ಯ ಸಾಫ್ಟ್‌ವೇರ್ ಇಂಜಿಯರುಗಳೂ ಸೇರಿದಂತೆ ವೈವಿಧ್ಯಮಯ ವೃತ್ತಿ ಕ್ಷೇತ್ರಗಳ ಜನರಿಂದ ರಚಿತವಾಗುತ್ತಿದೆ ಮತ್ತು ಪೋಷಿಸಲ್ಪಡುತ್ತಿದೆ. ಹಾಗಾಗಿ ನನಗೆ ನನ್ನದೇ ಆದ ಒಂದು ಓದುಗ ವರ್ಗವಿದೆ. ಅವರಿಂದ ನಾನು ನಿರಂತರ ಪ್ರತಿಸ್ಪಂದನ ಪಡೆಯುತ್ತಿರುವೆ. ನನ್ನ ಪುಸ್ತಕಗಳನ್ನು ಪ್ರಕಟಿಸಿದ ಯಾವ ಪ್ರಕಾಶಕನೂ ನಷ್ಟ ಹೊಂದಿಲ್ಲ. ಬದಲಿಗೆ ನನ್ನ ಹಲವು ಪುಸ್ತಕಗಳು ಎರಡನೇ, ಮೂರನೇ ಆವೃತ್ತಿ/ ಮುದ್ರಣಗಳನ್ನು ಕಂಡಿವೆ.

ನಿಜ, ನಾನು ಪ್ರತಿಷ್ಠಿತ ಸಂಸ್ಥೆಗಳ ಮತ್ತು ಕಾಲೇಜು/ವಿಶ್ವವಿದ್ಯಾಲಯಗಳ ವಿಚಾರ ಸಂಕಿರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ನನ್ನ ಪುಸ್ತಕಗಳನ್ನು ಪ್ರಕಟಿಸಿಲ್ಲ. ಅದಕ್ಕೆ ಅವುಗಳದೇ ಆದ ಕಾರಣಗಳಿರಬಹುದು. ಅದರ ಬಗ್ಗೆ ನಾನು ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲು ಹೋಗಿಲ್ಲ. ಹಾಗೆ ಹೋಗಲು ನನಗೇನು ಕಡಿಮೆಯಾಗಿದೆ?

2 Responses

  1. ಸತ್ಯಕಾಮ ಶರ್ಮಾ says:

    “ಇಂದು ಕನ್ನಡದಲ್ಲಿ ನೂರಾರು ಪ್ರಶಸ್ತಿಗಳಿವೆ. ಬೆಳಿಗ್ಗೆ ಎದ್ದು ಪತ್ರಿಕೆಯ ಪುಟ ತೆರೆದರೆ ಒಂದಲ್ಲ ಒಂದು ಪ್ರಶಸ್ತಿಯ ಸುದ್ದಿ ಇರುತ್ತದೆ. ಮಾನವಂತ ಸಾಹಿತಿಗಳು ಇಂದು ಯಾವ ಪ್ರಶಸ್ತಿ ಬರಸಿಡಿಲಿನಂತೆ ತಮ್ಮ ಮೇಲೆ ಎರಗುವುದೋ ಎಂಬ ಆತಂಕದಲ್ಲಿರುವ ಪರಿಸ್ಥಿತಿ ಇದೆ. ಇಂತಹ ಪ್ರಶಸ್ತಿಗಳ ಸಂತೆಯಲ್ಲಿ ಪ್ರಶಸ್ತಿ ಒಪ್ಪಿಕೊಳ್ಳಲು ನಿಮಗೆ ನಿಜವಾದ ಎಂಟೆದೆ ಬೇಕು!”-ತುಂಬಾ ಮಾರ್ಮಿಕವಾದ ಮಾತು. ಪ್ರಶಸ್ತಿಗಳ ಹಾವಳಿಯಿಂದ ಕನ್ನಡ ಸಾಹಿತ್ಯ, ಕಲೆ ಇತ್ಯಾದಿಗಳನ್ನು ಕಾಪಾಡಬೇಕಾಗಿದೆ.

  2. nutana doshetty says:

    Prashastiya bagge neevu heliddu nijave. Prashastiya hapahapiyindagi ella prashsti padedavarannoo anumanadinda noduvantagide.

    Nutana

Leave a Reply

%d bloggers like this: