ಅದಕ್ಕೇ ಅನ್ನೋದು ‘ ಜವಾರಿ ಮಂದಿ’ ಯ ಹೃದಯ ಅಂತ

ಕಿರಣ್ ಭಟ್ ಹೊನ್ನಾವರ

ನಿನ್ನೆ ಊರಿಗೆ ಹೊರಟಿದ್ದೆ.
ಸಂಜೆ ಹೊತ್ತಿಗೆ ಸಣ್ಣಗೆ ಮಳೆ ಸುರುವಾಗಿತ್ತು.

ಮಳೇಲಿ ತೊಯ್ಯೋದನ್ನ ತಪ್ಪಿಸ್ಕೊಳ್ಳೋಕೆ ಬಸ್ ಸ್ಟ್ಯಾಂಡ್ ಒಳಹೊಕ್ಕೆ.ಜನ, ದನ, ನಾಯಿಗಳೆಲ್ಲ ಮಳೆಯ ಕಾರಣ ಬಸ್ ಸ್ಟ್ಯಾಂಡ್ ನ್ನೇ ಆಶ್ರಯಿಸಿದ್ದವು. ನಾನು ನಿಂತ ಜಾಗದಿಂದ ಸ್ವಲ್ಪ ದೂರದಲ್ಲಿ ಬಿಜಾಪುರ ಕಡೆಯ ಇಬ್ಬರು ಹುಡುಗರು ಜೋರಾಗಿ ಕಷ್ಟ ಸುಖ ಮಾತಾಡುತ್ತಿದ್ದರು.ಅಲ್ಲೇ ಆಶ್ರಯ ಪಡೆದಿದ್ದ ನಾಯಿಯೊಂದು ಕುಂಯ್ ಎಂದು ಸಣ್ಣಗೆ ಕೂಗುತ್ತ ಮಲಗಿತ್ತು.

ಮಾತಾಡಿ, ಮಾತಾಡಿ ಹಸಿವಾಗಿರಬೇಕು.” ಊಟ ಮಾಡೋಣೇನು?” ಅಂದ ಒಬ್ಬ. ಇನ್ನೊಬ್ಬ ಊಟದ ಗಂಟು ಬಿಡಿಸತೊಡಗಿದ.ಗಟ್ಟಿ ರೊಟ್ಟಿ, ಕೆಂಪು ಚಟ್ನಿ, ಉಳ್ಳಾಗಡ್ಡಿಯ ಬುತ್ತಿಯದು.

ಬುತ್ತಿ ಬಿಚ್ಚುತ್ತಿದ್ದ ಹುಡುನಿಗೆ ಕುಂಯ್ ಗುಡುತ್ತಿದ್ದ ನಾಯಿಯನ್ನು ಕಂಡು ಏನನ್ನಿಸಿತೋ ಏನೋ, ” ಕುರ್, ಕುರ್..” ಅಂತ ನಾಯಿಯನ್ನ ಕರೆಯತೊಡಗಿದ. ಆ ಕರೆಗಾಗೇ ಕಾಯುತ್ತಿತ್ತೇನೋ ಎನಿಸುವಂತೆ ಒಂದೇ ಜಿಗಿತಕ್ಕೆ ಆ ನಾಯಿ ಹುಡುಗನ ಮುಂದಿತ್ತು. ಬುತ್ತಿಯಿಂದ ರೊಟ್ಟಿಯನ್ನೆತ್ತಿ ಆ ಹುಡುಗ ನಾಯಿಯ ತಲೆ ನೇವರಿಸುತ್ತ ರೊಟ್ಟಿಯನ್ನು ತಿನ್ನಿಸತೊಡಗದ.

ಅಷ್ಟು ಹೊತ್ತಿಗೆ, ಎಲ್ಲಿದ್ದವೋ ಏನೋ ಇನ್ನೆರಡು ನಾಯಿಗಳು, ಒಂದು ದನ ಏಕಾಏಕಿ ಅಲ್ಲಿಗೆ ಧಾಳಿಯಿಟ್ಟವು.ರೊಟ್ಟಿಗಾಗಿ ಪೈಪೋಟಿ ಸುರುವಾಯ್ತು. ತನ್ನ ಹಸಿವನ್ನೇ ಮರೆತ ಆ ಹುಡುಗ ಒಂದೊಂದೇ ರೊಟ್ಟಿ ತೆಗೆದು ತಿನ್ನಿಸತೊಡಗಿದ.

ಪಕ್ಕದ ಹುಡುಗ ಅಸಹಾಯಕನಾಗಿ ನೋಡುತ್ತ ಕುಳಿತಿದ್ದ. ನೋಡನೋಡುತ್ತಿದ್ದಂತೆ ಬುತ್ತಿಯೇ ಖಾಲಿಯಾಗಿಹೋಗಿತ್ತು.

ಇಬ್ಬರ ಊಟವನ್ನೂ ಆ ಹುಡುಗ ನಾಯಿಗಳಿಗೆ ಹಂಚಿಬಿಟ್ಟಿದ್ದ…ಬುತ್ತಿ ಕಟ್ಟಿದ್ದ ಬಟ್ಟೆ ಕೊಡವಿ ಸಮಾಧಾನದ ನಗು ನಗುತ್ತಿದ್ದ…
ಅದಕ್ಕೇ ಅನ್ನೋದು ‘ ಜವಾರಿ ಮಂದಿ’ ಯ ಹೃದಯ ಅಂತ…..

3 comments

  1. ಇದೆ ಉತ್ತರ ಕರ್ನಾಟಕ ಮಂದಿಯ ಹೃದಯವಂತಿಕೆ…..

Leave a Reply