fbpx

ಮೂರೂ ಪಕ್ಷಗಳಲ್ಲಿ ನಮ್ ಡಿಮಾಂಡ್..

ವಸಂತ ಶೆಟ್ಟಿ

ಈ ಬಾರಿಯ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ನನ್ನ ಕೆಲವು ಬೇಡಿಕೆಗಳು:

1. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾ ಸಂಸ್ಥೆಯಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಏರ್ಪಾಡುಗಳು, ರಾಜಕೀಯ ಮತ್ತು ಆರ್ಥಿಕ ಅಧಿಕಾರ ವಿಕೇಂದ್ರಿಕರಣದ ಕುರಿತು ಅಧ್ಯಯನ ಮತ್ತು ಶಿಫಾರಸ್ಸುಗಳನ್ನು ನೀಡಲು ಫೆಡರಲಿಸಂ ಚೇರ್ ಸ್ಥಾಪನೆ. 

– ಭಾರತದಂತಹ ವೈವಿಧ್ಯತೆ ತುಂಬಿರುವ ನಾಡಿನ ಏಳಿಗೆಯಲ್ಲಿ ಒಕ್ಕೂಟ ವ್ಯವಸ್ಥೆಯ ಪಾತ್ರ ಹಿರಿದಿದೆ. ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದು, ರಾಜ್ಯಗಳಿಗೆ ಹೆಚ್ಚು ಸ್ವಾಯತ್ತತೆ ನೀಡುವುದು ಪ್ರತಿ ರಾಜ್ಯಕ್ಕೂ ತನ್ನ ಏಳಿಗೆಯ ದಿಕ್ಕುದೆಸೆಯನ್ನು ನಿರ್ಧರಿಸಲು ಸಹಾಯ ಮಾಡುವುದಲ್ಲದೇ ರಾಜ್ಯ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಅನುಕೂಲ ಮಾಡಿಕೊಡುವುದರ ಮೂಲಕ ದೇಶದ ಏಳಿಗೆಗೆ ಕಾರಣವಾಗಬಲ್ಲದು.

ಈ ಹಿನ್ನೆಲೆಯಲ್ಲಿ ಒಕ್ಕೂಟ ವ್ಯವಸ್ಥೆಯ ಏರ್ಪಾಡುಗಳು ಮತ್ತು ಅಧಿಕಾರ ವಿಕೇಂದ್ರಿಕರಣದ ಕುರಿತು ಸಂಶೋಧನೆ, ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ಕಾಲಕಾಲಕ್ಕೆ ಸರಿಯಾದ ಶಿಫಾರಸ್ಸು ಮತ್ತು ಮಾರ್ಗದರ್ಶನ ನೀಡುವುದಕ್ಕೆ ಸಾಧ್ಯವಾಗುವಂತೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ಫೆಡರಲಿಸಂ ಚೇರ್ ಸ್ಥಾಪನೆ.

2. ಕೇಂದ್ರ ಸರ್ಕಾರಿ ಹುದ್ದೆಗಳಿಗೆ ನಡೆಯುವ ಪ್ರವೇಶ ಪರೀಕ್ಷೆ, ಸಂದರ್ಶನಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಗುಲಬರ್ಗಾ, ಧಾರವಾಡ, ಮಂಗಳೂರು, ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ವೃತ್ತಿಪರ ಮಾರ್ಗದರ್ಶಕರ ನೇತೃತ್ವದಲ್ಲಿ ತರಬೇತಿ ಕೇಂದ್ರಗಳ ಸ್ಥಾಪನೆ.

– ಕೇಂದ್ರ ಸರ್ಕಾರ ಇಂದು ಬ್ಯಾಂಕ್, ಅಂಚೆ ಕಚೇರಿ, ವಿಮೆ, ತೆರಿಗೆ,ಪಿಂಚಣಿ, ರೈಲ್ವೆ, ರಕ್ಷಣೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದರೂ ಕರ್ನಾಟಕದಲ್ಲಿ ಅವುಗಳನ್ನು ಪಡೆಯಲು ಕನ್ನಡಿಗರಿಗೆ ಸಾಧ್ಯವಾಗದ ಸ್ಥಿತಿ ಇದೆ.

ಇದಕ್ಕೆ ಮುಖ್ಯ ಕಾರಣ ಈ ಪರೀಕ್ಷೆಗಳು, ಸಂದರ್ಶನಗಳು ಕನ್ನಡದಲ್ಲಿ ನಡೆಯದಿರುವುದು ಹಾಗೂ ಈ ಉದ್ಯೋಗಗಳ ಪ್ರವೇಶಕ್ಕೆ ಬೇಕಾದ ಮಾಹಿತಿ, ತರಬೇತಿ ಯುವ ಕನ್ನಡಿಗರಿಗೆ ತಲುಪದಿರುವುದು. ಇದನ್ನು ಸರಿಪಡಿಸಲು ತರಬೇತಿ ಕೇಂದ್ರಗಳ ಸ್ಥಾಪನೆ ಸಹಾಯ ಮಾಡುವುದು.

3. ಕನ್ನಡ ಮಾಧ್ಯಮದಲ್ಲಿ ಶಿಕ್ಷಣದ ಮಹತ್ವ ಮತ್ತು ಲಾಭದ ಕುರಿತು ಪ್ರಚಾರಾಂದೋಲನ
– ಕರ್ನಾಟಕ ಸರ್ಕಾರ ಶಿಕ್ಷಣಕ್ಕಾಗಿ ಹದಿನೆಂಟು ಸಾವಿರ ಕೋಟಿಗೂ ಮಿಗಿಲಾದ ಹಣವನ್ನು ಮೀಸಲಿಟ್ಟಿದೆ. ಬಿಸಿಯೂಟ, ಸೈಕಲ್, ಸಮವಸ್ತ್ರ, ಶೂಸ್, ಪಠ್ಯಪುಸ್ತಕ ಹೀಗೆ ಮಕ್ಕಳನ್ನು ಶಾಲೆಯತ್ತ ಸೆಳೆಯಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಹೀಗಿದ್ದಾಗಲೂ ಮಕ್ಕಳ ಸಂಖ್ಯೆಯ ಕೊರತೆಯಿಂದ ಸಾಕಷ್ಟು ಸರ್ಕಾರಿ ಶಾಲೆಗಳು ದಾಖಲಾತಿಯ ಕೊರತೆ ಎದುರಿಸುತ್ತಿವೆ. ಇಂಗ್ಲಿಷ್ ಒಂದು ಭಾಷೆಯಾಗಿ ಕಲಿಯುವ ಲಾಭ ಮತ್ತು ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಯುವುದರಿಂದ ಮಗುವಿನ ಬುದ್ದಿಯ ವಿಕಾಸಕ್ಕೆ ಎದುರಾಗುವ ತೊಂದರೆಗಳ ಕುರಿತು ಸಾಮಾನ್ಯ ಜನರಲ್ಲಿ ಇರುವ ಅರಿವಿನ ಕೊರತೆಯಿಂದಾಗಿ ಚೆನ್ನಾಗಿ ನಡೆಯುವ ಶಾಲೆಗಳಿಗೂ ಮುಚ್ಚುವ ಆತಂಕ ಎದುರಾಗಿದೆ. ಇದನ್ನು ಪರಿಹರಿಸಲು ತಾಯ್ನುಡಿ/ಪರಿಸರದ ನುಡಿಯಲ್ಲಿ ಶಿಕ್ಷಣದ ಮಹತ್ವ, ಅದರ ಬಗೆಗಿನ ವೈಜ್ಞಾನಿಕ ಸಂಶೋಧನೆಗಳು, ಕನ್ನಡದಲ್ಲೇ ಕಲಿತು ದೊಡ್ಡ ದೊಡ್ಡ ಸಾಧನೆ ಮಾಡಿರುವ ಸಾಧಕರ ಪರಿಚಯ, ಮೊದಲ ಹಂತದಲ್ಲಿ ಕನ್ನಡದಲ್ಲಿ ಕಲಿಯುವುದರಿಂದ ಮಕ್ಕಳಿಗೆ ಆಗುವ ಲಾಭಗಳ ಕುರಿತು ದೊಡ್ಡ ಮಟ್ಟದಲ್ಲಿ ರಾಜ್ಯವ್ಯಾಪಿ ಪ್ರಚಾರಾಂದೋಲನವನ್ನು ಸರ್ಕಾರ ಹಮ್ಮಿಕೊಳ್ಳಬೇಕು. ಪೊಲಿಯೋ ಲಸಿಕೆ ಹಾಕಿಸುವ ಕುರಿತು, ಕುಡಿತದ ಕೆಡುಕುಗಳ ಕುರಿತು ಸರ್ಕಾರ ಕೈಗೊಳ್ಳುವ ಜನಜಾಗೃತಿಯ ಮಾದರಿಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣದ ಕುರಿತೂ ಜನಜಾಗೃತಿಗೆ ಸರ್ಕಾರ ಮುಂದಾಗಬೇಕು.

4. ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆಂದೇ ಮೀಸಲಾದ ಸಂಸ್ಥೆಯ ಸ್ಥಾಪನೆ
– ಯಾವುದೇ ನಾಡಿನ ಏಳಿಗೆಯಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರವಹಿಸುತ್ತದೆ. ಆ ಶಿಕ್ಷಣ ಹೆಚ್ಚು ವ್ಯಾಪಕವೂ, ಪರಿಣಾಮಕಾರಿಯೂ ಆಗಲು ಅಲ್ಲಿನ ಜನರ ಭಾಷೆಯಲ್ಲಿ ಉನ್ನತ ಶಿಕ್ಷಣದ ಎಲ್ಲ ಅನುಕೂಲಗಳೂ ಸೃಷ್ಟಿಯಾಗಬೇಕು. ಈ ಹಿನ್ನೆಲೆಯಲ್ಲಿ ನೋಡಿದಾಗ ಇಂದು ಕನ್ನಡ ಕೇವಲ ಹೈಸ್ಕೂಲ್ ಹಂತದ ಶಿಕ್ಷಣಕ್ಕೆ ಹೆಚ್ಚು ಕಡಿಮೆ ಸೀಮಿತವಾಗಿದೆ. ವಿಜ್ಞಾನ-ತಂತ್ರಜ್ಞಾನದಂತಹ ವಿಷಯಗಳಿಗೆ ಬಂದಾಗ ಕನ್ನಡ ಸೋಲುತ್ತಿದೆ. ಇದನ್ನು ಸರಿಪಡಿಸುವುದು ಹಲವು ದಶಕಗಳ ಕೆಲಸವೇ ಆಗಿರುವುದರಿಂದ ಈ ದೂರಗಾಮಿ ಯೋಜನೆಯತ್ತ ಕೆಲಸ ಮಾಡಲು ಅದಕ್ಕೆಂದೇ ಮೀಸಲಾದ ಸಂಸ್ಥೆಯೊಂದನ್ನು ಸ್ಥಾಪಿಸಿ, ಅದರಡಿ ಕನ್ನಡದ ವ್ಯಾಕರಣದ ನಿಜ ಸ್ವರೂಪದ ಅಧ್ಯಯನ, ಕನ್ನಡದಲ್ಲೇ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಪದಗಳ ಕಟ್ಟಣೆ, ಹೊಸ ಪದಗಳ ಕಟ್ಟಣೆಗೆ ಬೇಕಾದ ಡೈಲೆಕ್ಟ್ ಸ್ಟಡೀಸ್, ವಿಜ್ಞಾನ-ತಂತ್ರಜ್ಞಾನ ಸಾಹಿತ್ಯ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸರಳಗನ್ನಡದಲ್ಲಿ ಅನುವಾದ ಮತ್ತು ಪ್ರಕಟಣೆ, ಯುವ ಸಮುದಾಯವನ್ನು ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಕೆಲಸ ಮಾಡುವಂತೆ ಸೆಳೆಯುವ ಕೆಲಸ, ಮಶಿನ್ ಲರ್ನಿಂಗ್, ರೊಬೊಟಿಕ್ಸ್ ಮುಂತಾದ ಹೊಸ ಜಗತ್ತಿನ ವಿದ್ಯಮಾನಗಳಿಗೆ ಕನ್ನಡ ತೆರೆದುಕೊಳ್ಳಲು ಬೇಕಿರುವ ಕೆಲಸಗಳನ್ನ ಈ ಸಂಸ್ಥೆ ಮಾಡಬೇಕು. ವಿಜ್ಞಾನ-ತಂತ್ರಜ್ಞಾನದ ತವರಾಗಿರುವ ಬೆಂಗಳೂರಿನಲ್ಲೇ ಈ ಕೇಂದ್ರ ಸ್ಥಾಪಿಸಿ, ಸೂಕ್ತ ಪ್ರತಿಭೆಗಳನ್ನು ಈ ಸಂಸ್ಥೆಗೆ ನೇಮಕ ಮಾಡಿಕೊಳ್ಳಬೇಕು.

1 Response

  1. Lalitha siddabasavayya says:

    ಇಲ್ಲಿ ಉಲ್ಲೇಖಿಸಿರುವ ಮೂರನೆಯ ಅಂಶ ಮೊದಲಿಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಕನ್ನಡವು ಶಿಕ್ಷಣ ಮಾಧ್ಯಮ ಆಗಬೇಕೆನ್ನುವ ಈ ಅಂಶಕ್ಕೆ ಕನ್ನಡಿಗರೆಲ್ಲರೂ ಸಹಮತ ಸೂಚಿಸಿ ಒತ್ತಾಯಿಸದ ಹೊರತು ಅದು ಜಾರಿಯಾಗುವ ಯಾವ ಲಕ್ಷಣವೂ ಸದ್ಯಕ್ಕಿಲ್ಲ.

    ಯಾವ ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲೂ ಈ ಮಾತನ್ನು ಮರೆತೂ ಯಾರೂ ಸೇರಿಸುತ್ತಿಲ್ಲ. ಇಂಗ್ಲಿಷ್ ಮೀಡಿಯಂ ಮಾಫಿಯಾದ ಮುಂದೆ ಪಕ್ಷಗಳು ಮಂಡಿಯೂರಿ ತೆವಳುತ್ತಿರುವುದರಿಂದ ಈ ವಿಷಯ ಎಂದೆಂದಿಗೂ ಪ್ರಣಾಳಿಕೆಯಲ್ಲಿ ಸೇರದು.

    ಇದನ್ನು ತಾರ್ಕಿಕವಾಗಿ ಪ್ರಶ್ನಿಸಬಹುದಾದ ವ್ಯಾಪ್ತಿಯುಳ್ಳ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ತಮ್ಮ ಅವಧಿಯನ್ನು ವಿಸ್ತರಿಸಿಕೊಳ್ಳುವ ಅತಿ ತುರ್ತಿನ ಜೀವನ್ಮರಣದ ಪ್ರಶ್ನೆಯ ಇತ್ಯರ್ಥದಲ್ಲಿರುವುದರಿಂದ ಅವರಿಗೆ ಕೈಗೂ ಕಾಲಿಗೂ ಬಿಡುವಿಲ್ಲ, ಪಾಪ.

    ಇನ್ನೇನಿದ್ದರೂ ಸಾಮಾನ್ಯ ಕನ್ನಡಿಗರು ಕೋರ್ಟಿಗೆ ಓಡಾಡಿ , ಸಾಧ್ಯವಾದರೆ ತಾವೇ ವಾದವನ್ನೂ ಮಂಡಿಸಿ ಕೋರ್ಟಿನ ಮೂಲಕವೇ ಜಾರಿಗೊಳಿಸಿಕೊಳ್ಳಬೇಕು ಅಷ್ಟೇ.

Leave a Reply

%d bloggers like this: