fbpx

ಐವತ್ತು ರೂಪಾಯಿಗೆ ವೋಡ್ಕಾ ಕೂಡಾ ಬರ್ಲಿಲ್ಲ..!!

ಸಂವರ್ತ ಸಾಹಿಲ್

ಕನ್ನಡದ ಖ್ಯಾತ ಪತ್ರಿಕೆಯೊಂದು ನಾನು ಮಾಡಿದ ಒಂದು ಕಾವ್ಯಾನುವಾದಕ್ಕೆ ಗೌರವ ಧನವಾಗಿ ಮನಿ ಆರ್ಡರ್ ಮೂಲಕ ರೂಪಾಯಿ ಐವತ್ತು ಕಳುಹಿಸಿಕೊಟ್ಟಿದೆ.

ಹಿಂದೊಮ್ಮೆ ಇದೇ ಪತ್ರಿಕೆ ಸಿನಿಮಾ ಕಲಾವಿದನೋರ್ವನ ಕುರಿತು ಸಾವಿರದೈನೂರು ಪದಗಳ ಲೇಖನ ಬರೆಸಿಕೊಂಡು ರೂಪಾಯಿ ನೂರೈವತ್ತನ್ನು ಮನಿ ಆರ್ಡರ್ ಮೂಲಕ ಕಳುಹಿಸಿಕೊಟ್ಟಿತ್ತು.

ಆ ಲೇಖನಕ್ಕಾಗಿ ನಾನು ಆ ಕಲಾವಿದನ ಸಿನಿ-ಕೃತಿಗಳನ್ನು ಮತ್ತೊಮ್ಮೆ ನೋಡಿ, ನೋಟ್ಸ್ ಮಾಡಿಕೊಂಡು ಲೇಖನ ಬರೆಯಲು ಎರಡು ವಾರ ತೆಗೆದುಕೊಡಿದ್ದೆ.

ಆ ಸಲ ಮನಿ ಆರ್ಡರ್ ತಲುಪಿದ ದಿನ ನನ್ನ ಸ್ನೇಹಿತರೊಬ್ಬರು, “ಬಾ ಹೊಸ ಸಿನಿಮಾ ನೋಡಿಬರೋಣ,” ಎಂದು ಸಿನಿಮಾ ನೋಡಲು ಕರೆದುಕೊಂಡು ಹೋಗಿದ್ದರು. ಆ ಒಂದು ಸಿನಿಮಾ ನೋಡಲಿಕ್ಕೆ ಟಿಕೆಟ್ ಬೆಲೆ ರೂಪಾಯಿ ನೂರಾ ಎಂಬತ್ತು ಆಗಿತ್ತು.

ಒಬ್ಬ ಸಿನಿ-ಕಲಾವಿದನ ಸಮಗ್ರ ಕಲಾಕೃತಿಗಳ ಕುರಿತು ಬರೆದ ಲೇಖನ ತಂದು ಕೊಟ್ಟ ಗೌರವಧನದಿಂದ ನಾನು ಒಂದೇ ಒಂದು ಸಿನಿಮಾ ನೋಡುವುದು ಸಾಧ್ಯವಿರಲಿಲ್ಲ.

ಬೆವರು ಸುರಿಸುವ ಜನಗಳ ಹಿತಾಸಕ್ತಿಯನ್ನು ಎತ್ತಿ ಹಿಡಿಯುವ ಪತ್ರಿಕೆಗಳಿಗೆ ಬರಹಗಾರರು ಬರೆದುಕೊಡುವ ಲೇಖನವೂ ಒಂದು ಬಗೆಯ ಶ್ರಮ ಎಂದು ಅನ್ನಿಸದೆ ಇದ್ದರೆ ಏನೆನ್ನಬೇಕೋ ತಿಳಿಯುವುದಿಲ್ಲ.

ಬೇರೆ ಕೆಲವು ಪತ್ರಿಕೆಗಳು ಲೇಖನ ಬರೆಸಿಕೊಂಡು ಸಂಭಾವನೆ ಕೊಡದೆ ಹೋದದ್ದೂ ಉಂಟು. ಸಂಭಾವನೆ ಕೊಡದೆ ಇರುವುದು ಮತ್ತು ಈ ರೀತಿಯಾಗಿ ಮನಿ ಆರ್ಡರ್ ಡೆಲಿವೆರಿ ಮಾಡುವ ಪೋಸ್ಟ್ ಮ್ಯಾನ್ ವ್ಯಂಗ್ಯದ ನಗು ಬೀರುವಷ್ಟು ಮೊತ್ತದ ಹಣ ಗೌರವ ಧನವಾಗಿ ನೀಡುವುದು, ಇವೆರಡರ ನಡುವೆ ಯಾವುದು ಉತ್ತಮ ಎಂದು ಹೇಳಲಿ? ಎಲ್ಲವೂ ಅಗೌರವವೇ!

ಇಂಥಾ ಘಟನೆ ನಡೆದಾಗೆಲ್ಲ, ನೆನಪಿಸಿಕೊಂಡಾಗಲೆಲ್ಲ ಹಿಂದೆ ನನ್ನ ಪಾಡಿಗೆ ನಾನು ಬ್ಲಾಗ್ ಬರೆದುಕೊಂಡು ಇದ್ದ ದಿನಗಳಲ್ಲಿ, “ಕನ್ನಡದವನಾಗಿ ಕನ್ನಡದಲ್ಲಿ ಬರೀಲಿಕ್ಕೆ ಆಗೂದಿಲ್ಲವಾ?” ಎಂದು ಭಯಂಕರ ನೈತಿಕ ಮಾತುಗಳನ್ನಾಡಿ ವಿನಾಕಾರಣ ನನ್ನೊಳಗೆ ಅಪರಾಧಿಪ್ರಜ್ಞೆ ಮೂಡಿಸಿದ ಅನೇಕ ಕನ್ನಡಾಭಿಮಾನಿಗಳು ನೆನಪಾಗುತ್ತಾರೆ.

ಅಷ್ಟೇ ಅಲ್ಲ, “ಬದಲಾವಣೆಗಾಗಿ ಬರವಣಿಗೆ” ಎಂದೆಲ್ಲಾ ಪುಗ್ಸಟೆ ಆದರ್ಶದ ಮಾತುಗಳನ್ನಾಡಿದ ತಿಂಗಳು ತಿಂಗಳು ಸಂಬಳ ಪಡೆಯುವ ಮೇಷ್ಟ್ರುಗಳು ನೆನಪಾಗುತ್ತಾರೆ. ಅವನ್ನೆಲ್ಲಾ ಸಂಶಯ ಪಡದೆ ನಂಬಿದ ಮೂರ್ಖ ಯವ್ವನದ ಕಾಲವೂ ನೆನಪಾಗುತ್ತದೆ.

ಅದೂ ಅಲ್ಲದೆ, “ಹಣದ ವಿಷಯ ಮೊದಲೇ ಮಾತ್ನಾಡಿಕೊಳ್ಳಬೇಕು,” ಎಂದು ಹಣ ಕೊಡದೆ ಕೆಲಸ ಮಾಡಿಸಿಕೊಂಡವರ ಮತ್ತು ನ್ಯಾಯವಾಗಿ ಸಂಭಾವನೆ ಪಡೆಯಬೇಕಾದ ನನ್ನ ನಡುವೆ, ನನ್ನದೇ ತಪ್ಪು ಎಂಬಂತೆ ಮಾತನಾಡುವ ಹಿತೈಷಿಗಳೂ ನೆನಪಾಗುತ್ತಾರೆ.

ಇದನ್ನು ಇಲ್ಲಿ ತನಕ ಓದಿದ ನಿಮ್ಮಲ್ಲಿ ಅನೇಕರಿಗೆ ಇದೊಂದು ಹಾಸ್ಯಮಯ ಸಂಗತಿ ಎಂದು ಅನಿಸಿದ್ದು ಇಲ್ಲಿ ತನಕ ಒಂದೆರಡು ಬಾರಿಯಾದರೂ ನಕ್ಕಿರುತ್ತೀರಿ. ಅದೇ ದುರಂತ. ಇರ್ಲಿ ಬಿಡಿ… ನಗಬೇಕು. ಹಾಗೆ ನಗ್ತಾ ಇರಿ.

ನಾನು ಈಗತಾನೇ ಬಂದ ಐವತ್ತು ರೂಪಾಯಿಗೆ ಇನ್ನೊಂದು ಹತ್ತು ಇಪ್ಪತ್ತು ರೂಪಾಯಿ ಸೇರಿಸಿ ಸಿಕ್ಸ್ಟಿ ವೋಡ್ಕಾ ತೆಗೊಂಡು ಬರ್ತೇನೆ. ಸೆಲೆಬ್ರೇಟ್ ಮಾಡೋಣ! ಬಟ್ ಬ್ರಿನ್ಗ್ ಯುವರ್ ಓನ್ ಡ್ರಿಂಕ್… ಸೆಲೆಬ್ರೇಶನ್ ಮುಗಿಯೋ ತನಕ ಒಂದಿಷ್ಟು ಅನುವಾದಿತ ಕವಿತೆಗಳನ್ನು, ಒಳ್ಳೇದೋ ಕೆಟ್ಟದೋ, ನನ್ನದೇ ಸ್ವರದಲ್ಲಿ ಕೇಳುವ ಭಾಗ್ಯ ನಿಮ್ಮದು.

ಜೈ ಕನ್ನಡಾಂಬೆ! ಕನ್ನಡ ಸಾಹಿತ್ಯಿಕ-ಸಾಂಸ್ಕೃತಿಕ ಲೋಕ ಚಿರಾಯುವಾಗಲಿ.

3 Responses

 1. SUMANGALA says:

  ಒಹ್.. ಸಂವರ್ತ ಅವರೇ… ನಿಮಗಾದ ಅನುಭವ ನನಗೂ ತುಂಬ ಸಲ ಆಗಿದೆ. ನಾನು ತುಂಬ ಕಷ್ಟಪಟ್ಟು ಹೆಸರಾಂತ ಸಂಗೀತಗಾರರೊಬ್ಬರ ಸಂದಶನಕ್ಕೆ ಪ್ರಯತ್ನಿಸಿ, ಅವರ ಕಛೇರಿಗೆ ಹೋಗಿ, ಅತ್ಯುತ್ತಮ ಎನ್ನಬಹುದಾದ ಒಂದು ಲೇಖನವನ್ನು ಬರೆದುಕೊಟ್ಟಿದ್ದಕ್ಕೆ ತುಂಬ ಕಡಿಮೆ ಗೌರವಧನ ಕಳಿಸಿದ್ದರು, ಕೊನೆಗೆ ತಡೆಯಲಾಗದೇ ನಾನು ಸಂಪಾದಕರಿಗೆ ಪತ್ರಿಸಿದೆ, ಮತ್ತೆ ಹೇಳಿದೆ, ನಾನೊಬ್ಬಳು ನಿಮ್ಗೆ ನೇರವಾಗಿ ಬರೆಯುತ್ತಿರುವೆ, ಆದರೆ ಇದು ತುಂಬ ಜನ ಬರಹಗಾರರ ಅನುಭವ + ಅಭಿಪ್ರಾಯ ಎಂದು. ಆಮೇಲೆ ಮೊದ್ಲು ಕೊಟ್ಟಿದ್ದಕ್ಕೆ ಇನ್ನು ಕೊಂಚ ಸೇರಿಸಿ ಕಳಿಸಿದರು! ನನಗೆ ಯಾವಾಗಲೂ ಅಚ್ಚರಿ ಎನ್ನಿಸುವುದು ಇದೇ… ಮೊದಲ ಪುಟದಿಂದ ಹಿಡಿದು, ಕೊನೇ ಪುಟದವರೆಗೂ ಅರ್ಧಕ್ಕರ್ಧ ಜಾಹೀರಾತುಗಳೇ ರಾರಾಜಿಸುತ್ತವೆ, ಅವರು ನಷ್ಟದಲ್ಲೇನೂ ಪತ್ರಿಕೆ ನಡೆಸುವುದಿಲ್ಲ, ಆದರೂ ಗೌರವಧನ ಎನ್ನುವುದು ಕೊಡುವ್ವರಿಗೆ, ತೆಗೆದುಕೊಳ್ಳುವವರಿಗೆ ಇಬ್ಬರಿಗೂ ಗೌರವ ಕೊಡುವಂತಿರಬೇಕು, ಬರೆದವರ ಶ್ರಮ, ಸಮಯ, ಸೃಜನಶೀಲತೆ ಎಲ್ಲದಕ್ಕೆ ಗೌರವ ಕೊಡುವಂತೆ ಇರ್ಬೇಕು ಅಂತ ಯಾಕೆ ಯೋಚಿಸುವುದಿಲ್ಲ… ಪ್ರತೀ ಸಲ ನನ್ನ ಲೇಖನ, ಕಥೆ ಪ್ರಕಟವಾದಾಗ ನಿಂಗೆಷ್ಟು ಕೊಡ್ತಾರೆ ಎಂದು ಕೇಳುವ ಮಗ, “ನೀವೆಲ್ಲ ಬರೆಯೋವ್ರು ಸೇರಿ ಪ್ರೊಟೆಸ್ಟ್ ಯಾಕೆ ಮಾಡಬಾರದು, ಇಷ್ಟು ಕಡಿಮೆ ಕೊಟ್ಟರೆ ನಾವು ಯಾರೂ ಬರೆಯೋದೆ ಇಲ್ಲ ಅಂತ ಎಲ್ರೂ ಸೇರಿ ನಿರ್ಧಾರ ಯಾಕೆ ಮಾಡಬಾರದು… ಅಷ್ಟು ಜಾಹೀರಾತು ಹಾಕ್ತಾರೆ, ನಿಮ್ಗೆ ಬರೆಯೋವ್ರಿಗೆ ಕೊಡಕ್ಕೆ ಅವ್ರ ಹತ್ರ ದುಡ್ಡು ಇರಲ್ಲವಾ… ಯಾಕೆ ಒದ್ದಾಡಿಕೊಂಡು ಬರಿತೀಯ ಬಿಡು” ಎನ್ನುತ್ತಿರುತ್ತಾನೆ!
  ಸರಿ, ನಾನು ೭೦ ಅಥವಾ ೮೦ ರೂ. ಕೊಡುವೆ, ನನಗೂ ಒಂದು ಸಿಕ್ಸ್ಟಿ ವೋಡ್ಕಾ ತನ್ನಿ, ಇವರಿಗೆ ಬೈದಾಡಿಕೊಂಡು + ನಿಮ್ಮ ಕವನಗಳನ್ನು ಕೇಳಿಸಿಕೊಂಡು + ನನ್ನ ಸುಮ(ಕು?!)ಕಥೆಗಳನ್ನು ಓದಿಕೊಂಡು ಸೆಲೆಬ್ರೇಟ್ ಮಾಡೋಣ!!!

  ಸುಮಂಗಲಾ

 2. ಕೈದಾಳ್ ಕೃಷ್ಣಮೂರ್ತಿ says:

  ನಗು ತರಿಸಬಹುದಾದ ದಾಟಿಯಾದರೂ ನಮ್ಮ ದೇಶ ಬೌದ್ದಿಕತೆ ಮತ್ತು ಕ್ರಿಯಾಶೀಲತೆಯನ್ನು ನಡೆಸಿಕೊಳ್ಳುತ್ತಿರುವ ಪರಿ ದಯಾನೀಯ.

 3. ಸತ್ಯಕಾಮ ಶರ್ಮಾ ಕಾಸರಗೋಡು says:

  ಗೌರವ ಧನ ( ಅಥವಾ ಸಂಭಾವನೆ) ಅನ್ನುವುದು ಇಂಗ್ಲಿಶ್ ನ hon·o·rar·i·um ಎಂಬ ಪದಕ್ಕೆ ಪರ್ಯಾಯವಾಗಿ ಕನ್ನಡದಲ್ಲಿ ಬಳಸುತ್ತಾ ಬಂದಿರುವ ಪದ. ಇದು ಶುಲ್ಕ, ಮಜೂರಿ, ಕೂಲಿ ಅಥವಾ ವೇತನ ಅಲ್ಲ. ಅನರೇರಿಯಮ್ ಅಂದರೆ, ನಿಘಂಟು ಪ್ರಕಾರ A payment given to a professional person for services for which fees are not legally or traditionally required. ಅಂದರೆ ‘ಕಾನೂನಿನಂತೆ ಅಥವಾ ಪದ್ಧತಿಯಂತೆ ಈ ಶುಲ್ಕವನ್ನು ನೀಡುವ ಅಗತ್ಯವಿಲ್ಲ’ ಅಂದಂತಾಯಿತು. ಆದುದರಿಂದ ಗೌರವಧನ ದೊರೆತಾಗ ಅದನ್ನು ಸ್ವೀಕರಿಸಿ ತೆಪ್ಪಗಿರಬೇಕು. ಸಿಗಲಿಲ್ಲ ಎಂದು ವರಾತ ತೆಗೆಯುವ ಹಕ್ಕು ಕೂಡಾ ನಮಗಿಲ್ಲ. ಇನ್ನು ‘ಬರಹಗಾರರೆಲ್ಲಾ ಹೋರಾಟಗಾರರಾಗಿರಬೇಕು’ ಎಂಬ ಅಲಿಖಿತ ನಿಯಮವನ್ನು ಪಾಲಿಸುವವರು ಗೌರವ ಧನಕ್ಕಾಗಿಯೂ ಹೋರಾಟಕ್ಕೆ ಸಜ್ಜಾದರೆ ತಪ್ಪೇನಿಲ್ಲ. ಆದರೆ ಈ ಹೋರಾಟ ಮೊದಲು ಪ್ರಾರಂಭವಾಗಬೇಕಾದ್ದು ಬರಹಗಾರರಿಂದಲ್ಲ-ಹೋಟೆಲ್ ಮಾಣಿಗಳಿಂದ, ಇಂತಿಷ್ಟು ಸೇವೆಗೆ ಇಂತಿಷ್ಟು ‘ಟಿಪ್ಸ್’ ಎಂದು!. ಭಾಷಾಂತರ, ಟೈಪಿಂಗ್, ಜಾಹೀರಾತು/ ಚಲನ ಚಿತ್ರ ಟಿವಿ ಸೀರಿಯಲ್ ಗಳ ಸಂಭಾಷಣೆ ಬರಹ, ಗೀತ ರಚನೆ ಮಾಡಿ ಹೊಟ್ಟೆ ಹೊರೆಯುವವರು ಸಾಕಷ್ಟು ಮಂದಿ ಇದ್ದಾರೆ. ನೀವು ಹೇಳಿದ ರೀತಿ ಚೌಕಾಶಿ ಮಾಡುವ ಹಕ್ಕು ಇರುವುದು ಅವರಿಗೆ. ಸುಮಾರು ಎರಡು ಮೂರು ವರ್ಷಗಳ ಹಿಂದೆ ನನ್ನ ಕವಿತೆಯನ್ನು ಪ್ರಕಟಿಸಿದ ‘ಕನ್ನಡ’ ದಿನ ಪತ್ರಿಕೆಯೊಂದು ನನಗೆ ಯಾವ ಗೌರವ ಧನವನ್ನೂ ನೀಡಲಿಲ್ಲ. ಪರವಾಗಿಲ್ಲ, ಆ ಕವಿತೆಯ ಮೌಲ್ಯ ಮಾಪನವನ್ನು ಅವರು ಮಾಡಿದ್ದಾರೆ ಅಂದುಕೊಂಡು ನಾನು ಸುಮ್ಮನಾದೆ. ದಶಕಗಳ ಹಿಂದೆ ನನ್ನ ಕವಿತೆಗಳನ್ನು ಪ್ರಕಟಿಸಿ ತಲಾ ರೂ ೭೫ ನೀಡುತ್ತಿದ್ದ ದಕ್ಷಿಣ ಕನ್ನಡದ ಪತ್ರಿಕಾ ಸಮೂಹ, ೨೦೧೬ರಲ್ಲಿ ನನ್ನ ಒಂದು ಲೇಖನಕ್ಕೆ ರೂ ೧೦೦೦ ಗೌರವಧನ ನೀಡಿದಾಗ ‘ಕನ್ನಡ ಪತ್ರಿಕೆಗಳು ನಿಜಕ್ಕೂ ಆರ್ಥಿಕವಾಗಿ ಇಷ್ಟು ಸಧೃಢವಾಗಿವೆಯೇ?’ ಎಂದು ಅಚ್ಚರಿಪಟ್ಟೆ. ( ಅದೇ ಪತ್ರಿಕೆ ಇತ್ತೀಚೆಗೆ ನೀಡಿದ ಗೌರವ ಧನ ರೂ ೧೨೦೦). ಅಂದ ಹಾಗೆ ಈ ಪತ್ರಿಕಾ ಸಮೂಹ ಮುದ್ರಣದ ಗುಣಮಟ್ಟದಲ್ಲಿ ಮುಂದೆ ಇದೆಯೇ ಹೊರತು, ಪ್ರಸಾರದಲ್ಲಿ ಅಲ್ಲ! ಅಷ್ಟಕ್ಕೂ ಗೌರವ ಧನಕ್ಕೆ ಹೋರಾಡುವ ಹಂತಕ್ಕೆ ಲೇಖಕ/ಕಿ ಬರುವುದು ಪತ್ರಿಕೆಯೊಂದು ತಾನಾಗಿ ಲೇಖನ ಇತ್ಯಾದಿ ಬರೆದು ಕೊಡಿ ಎಂದು ವಿನಂತಿಸಿದಾಗ. ಆ ಹಂತ ತಲುಪುವವರು ಮೊದಲ ಹಂತದಲ್ಲಿ ತಮ್ಮ ಕಾಯಕದಲ್ಲೆ ಮಗ್ನರಾಗಿರುತ್ತಾರೆ, ಗೌರವ ಧನ ಅವರಿಗೆ ಗೌಣವೆನಿಸಿರುತ್ತದೆ.

Leave a Reply

%d bloggers like this: