fbpx

1,000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕು’!

 ರವಿರಾಜ ಅಜ್ರಿ

ಇದು ಜೈನ ಮುನಿ ತರುಣ ಸಾಗರ್ ಜೀ ಮಹಾರಾಜ್ ಅವರು 1000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕೆಂದು ಮಾಡಿರುವ ಭಾಷಣ.ಇದಕ್ಕೆ ಬರಹಗಾರ ರವಿರಾಜ ಅಜ್ರಿಯವರ ಪ್ರತಿಕ್ರಿಯೆ ಇಲ್ಲಿದೆ.ಈ ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ.’ಜುಗಾರಿಕ್ರಾಸ್’ ಚರ್ಚೆಗೆಂದೇ ಇರುವ ವೇದಿಕೆ. ನಿಮ್ಮ ಪ್ರತಿಕ್ರಿಯೆಯನ್ನು avadhimag@gmail.com ಗೆ ಕಳುಹಿಸಿ.

‘ 1,000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕು’!

ಇದು ಕ್ರಾಂತಿಕಾರಿ ಸಂತ ಜೈನ ಮುನಿಶ್ರೀ ತರುಣ ಸಾಗರ ಅವರ ಕಿಡಿ ಮಾತು. ಅವರ ಬೆಂಕಿಯ ಈ ಮಾತುಗಳನ್ನು ಕೇಳಿ ಎಂಥವರ ಎದೆ ಝಲ್ಲೆನಿಸುತ್ತದೆ. ಯಾವ ಧರ್ಮದ ಉಗ್ರ ಭಕ್ತ ಇಂಥ ಮಾತುಗಳನ್ನು ಅರಗಿಸಿಕೊಳ್ಳಲು ಕಷ್ಟ ಪಡಬೇಕಾಗುತ್ತದೆ.

ನಾವು ತಾಳ್ಮೆಯಿಂದ ಯೋಚಿಸಿದಾಗ, ಮುನಿಶ್ರೀ ತರುಣಸಾಗರ ಅವರ ಮಾತುಗಳನ್ನು ಹೌದೆಂದು ಒಪ್ಪಿಕೊಳ್ಳಬೇಕಾಗುತ್ತದೆ.
ಅವರು ಹೇಳುತ್ತಾರೆ : ” 1,000 ವರ್ಷಗಳಲ್ಲಿ ಧರ್ಮದಲ್ಲಿಯೂ ( ರೂಢಿಗತವಾದ ಕಂದಾಚಾರಗಳಿಂದ) ಕೊಳೆ- ಗಲೀಜು ಸೇರಿಕೊಂಡು ಬಿಡುತ್ತದೆ. ಇಂದು ಪ್ರತಿಯೊಂದು ಧರ್ಮದ ಸ್ಥಿತಿಯೂ ಹೀಗೆ ಆಗಿರುವುದರಿಂದ ಅವುಗಳ ಸಮಸ್ಯೆಗಳಿಗೆ ಪರಿಹಾರ ಇಲ್ಲದಂತಾಗಿದೆ” ಎನ್ನುತ್ತಾರೆ.

ಇಂದು ತರುಣಸಾಗರ ಅವರ ಮಾತುಗಳು ಎಷ್ಟು ಪ್ರಸ್ತುತ? ನೀವೇ ಯೋಚಿಸಿ. ಇಂದು ನಡೆಯುತ್ತಿರುವುದೇನು?
ಇಂದಿನ ಯುವಪೀಳಿಗೆಗೆ ಧರ್ಮದ ಬಗ್ಗೆ ಅಷ್ಟೊಂದು ಆಸಕ್ತಿಯಿಲ್ಲ. ಈ ವೈಜ್ಞಾನಿಕ, ತಾಂತ್ರಿಕ ಯುಗದಲ್ಲಿ ಧರ್ಮದ ಪಾಲನೆ ಬಿಟ್ಟು, ಹೊಸ ಹೊಸ ಆವಿಷ್ಕಾರಗಳನ್ನು ಹುಡುಕುವುದರಲ್ಲಿ ಆಸಕ್ತಿ ಯುವ ಪೀಳಿಗೆ ಬಯಸುತ್ತಿದೆ. ಆ ಪೀಳಿಗೆ ಬಯಸುವಂತೆ ಧರ್ಮವೂ ಬದಲಾಗಬೇಕೆಂಬುದು ಮುನಿಶ್ರೀಗಳ ಮಾತಿನ ತಾತ್ಪರ್ಯ.

ಆದರೆ ನಮ್ಮ ಹಿರಿಯರು, ನಮ್ಮನ್ನಾಳುವ ರಾಜಕಾರಣಿಗಳು ಅಧಿಕಾರಕ್ಕಾಗಿ ಮಾಡುವ ಕಿತ್ತಾಟ,ಬೆಂಕಿಯಾಟ ಆಡುತ್ತಿದ್ದಾರೆ. ಪೀಳಿಗೆಗೆ ಯಾವ ಧರ್ಮವಾದರೇನು? ಬದುಕು ಮುಖ್ಯ.

ಆದರೆ ನಮ್ಮ ರಾಜಕಾರಣಿಗಳು ಸಾಮಾನ್ಯ ಜನರನ್ನು ಬಿಡಬೇಕಲ್ಲವೇ? ಅದಕ್ಕೆ ಉತ್ತಮ ಉದಾಹರಣೆ ಈಗ ‘ ಲಿಂಗಾಯತ- ವೀರಶೈವ’ ಅವರೊಡನೆ ನಡೆಯುವ ಅಂತರ್ ಯುದ್ಧ! ಅದಕ್ಕೆ ತುಪ್ಪ ಸುರಿಯುತ್ತಿರುವುದು ನಮ್ಮ ರಾಜಕೀಯಪಕ್ಷಗಳು!.
ಈ ಕುರಿತೇ ನಾವು ಮುನಿಶ್ರೀಗಳ ಮಾತು- ಚಿಂತನೆ ಕಡೆ ಗಮನಹರಿಸಬೇಕಾಗಿದೆ.

‘ ಲಿಂಗಾಯತ- ವೀರಶೈವ’ ಅವರ ಹೋರಾಟದ ಪರಿಸ್ಥಿತಿ ಕಂಡು- ತರುಣಸಾಗರ ಅವರ ಮಾತು- ಚಿಂತನೆಗಳು ನೆನಪಾದವು. ಅವರ ಮಾತುಗಳು ಸಮಾಜಕ್ಕೆ ಕನ್ನಡಿ ಹಿಡಿದಂತೆ ಇದೆ. ಇದನ್ನು ನೀವೂ ಅನುಭವಿಸಿ ಎಂದು ಈ ಲೇಖನ ಬರೆಯಲಾಗಿದೆ.
ಜಗತ್ತಿನ ಎಲ್ಲಾ ಧರ್ಮಗಳ ಸಾರ- ಸಂದೇಶ ಒಂದೇ- ‘ ಶಾಂತಿ’ ಬಯಸುವುದು- ಆಚರಣೆಗಳು ಬೇರೆ ಬೇರೆ ಇರುತ್ತವೆ. ಆ ಧರ್ಮಗಳ ಭಕ್ತರು, ಧರ್ಮಪ್ರಚಾರಕ್ಕಾಗಿ ಶಾಂತರೀತಿಯಿಂದ ಮಾಡದೆ, ಉಗ್ರ,ರಕ್ತ ಕ್ರಾಂತಿ ನಡೆಸುವಾಗ ಮಾತ್ರ ಗಲಾಟೆ- ಹೋರಾಟ- ದೊಂಬಿಗಳಾಗುತ್ತವೆ.

ಯಾಕೆ ಹೀಗೆ?

ಮೊನ್ನೆ ‘ ತ್ರಿಪುರ’ ದಲ್ಲಿ ಚುನಾವಣೆ ನಡೆದ ಬಳಿಕ ಅಲ್ಲಿ- ಲೆನಿನ್ ಪ್ರತಿಮೆ ಕೆಡಹಿದರು. ಎಡ-ಬಲಗಳ ಪ್ರತಿಮೆಗಳಿಗೆ ಹಾನಿಗೊಳಿಸಿದರು. ಅಂಬೇಡ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ ಪ್ರತಿಮೆಗಳಿಗೆ ಹಾನಿ. ಇದು ನಮ್ಮಲ್ಲಿ ಮಾತ್ರವಲ್ಲ- ವಿದೇಶದಲ್ಲಿ ಬೌದ್ದ, ಹಿಂದೂ ದೇವಾಲಯಗಳನ್ನೂ, ವಿಗ್ರಹಗಳನ್ನೂ ಕೆಡವಿದ್ದಾರೆ .ನಮ್ಮ ದೇಶದಲ್ಲಿ ಮಸೀದಿ, ದೇವಾಲಯಗಳನ್ನು ದ್ವಂಸ ಗೊಳಿಸಿದ್ದ ಬೇಕಾದಷ್ಟು ಚಾರಿತ್ರಿಕ ದಾಖಲೆಗಳಿವೆ. ಇರಲಿ- ಈಗ ನಾವು ಮುನಿಶ್ರೀ ಅವರ ಚಿಂತನೆ ಬಗ್ಗೆ ಬರೋಣ-
ಅವರು ಹೇಳುತ್ತಾರೆ: ” 50 ವರ್ಷಗಳ ನಂತರ ನಮ್ಮ ಊಟದ ಪದ್ಧತಿಯನ್ನು ಬದಲಾಯಿಸಬೇಕು- 100 ವರ್ಷಗಳ ನಂತರ ಮನೆಯನ್ನು ಕೆಡಹಬೇಕು. 500 ವರ್ಷಗಳ ನಂತರ ಮಂದಿರ – ಮಸೀದಿಗಳನ್ನು ಬೀಳಿಸಬೇಕು ” ಎಂದು.
ಅದಕ್ಕೆ ಅವರು ಕೊಡುವ ಕಾರಣ ಕೇಳಿ:

“50 ವರ್ಷಗಳಲ್ಲಿ ನಮ್ಮ ಊಟದ ಏಕತಾನತೆ ರುಚಿಯನ್ನು ಹದಗೆಡಿಸುತ್ತದೆ. 100 ವರ್ಷಗಳಲ್ಲಿ ಮನೆಗಳ ವಾಸ್ತುಶಿಲ್ಪ ಹಳೆಯದಾಗುತ್ತದೆ. 500 ವರ್ಷಗಳಲ್ಲಿ ಮಂದಿರಗಳು ತಮ್ಮ ಮೂಲ ಉದ್ದೇಶಗಳನ್ನು ಮರೆತು ಬಿಡುತ್ತವೆ” ಎಂದು.
ಇದು ನಿಜವಲ್ಲವೇ? ಹಾಗೆ ಅವರು ನುಡಿಯುತ್ತಾರೆ :

” ಇಂದು ಸಂತರು, ಮುನಿಗಳು ತಮ್ಮ ಪ್ರವಚನವನ್ನು ಸಾಧಾರಣ ಜನರ ನಡುವೆ ಮಾಡುವುದರ ಬದಲು, ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಾಡಬೇಕು- ಏಕೆಂದರೆ, ಅಪಾಯಕಾರಿ ಜನರು ಅಲ್ಲಿಯೇ ಹಾಜರಿದ್ದಾರೆ. ದೇಶ ಮತ್ತು ಪ್ರದೇಶದ ರಾಜಧಾನಿಗಳಲ್ಲಿ ಕುಳಿತಿರುವ ಸುಮಾರು 10 ಸಾವಿರ ಜನರು ಸುಧಾರಿಸಿದರೆ, ದೇಶದ 100 ಕೋಟಿ ಜನರು ತಮ್ಮಷ್ಟಕ್ಕೆ ತಾವೇ ರಾತ್ರೋರಾತ್ರಿಯಲ್ಲಿ ಸುಧಾರಿಸುತ್ತಾರೆಂಬ ವಿಶ್ವಾಸ ನನಗಿದೆ.

” ಸುಧಾರಣೆ ಪ್ರಕ್ರಿಯೆ ಕೆಳಗಿನಿಂದ ಅಲ್ಲ- ಮೇಲಿನಿಂದ ಪ್ರಾರಂಭವಾಗಬೇಕು.ಏಕೆಂದರೆ ಭ್ರಷ್ಟಾಚಾರದ ಗಂಗೋತ್ರಿ ಮೇಲಿಂದ ಕೆಳಗಡೆ ಹರಿಯುತ್ತದೆ. ಋಷಿಕೇಶದಲ್ಲಿ ಗಂಗಾನದಿಯು ಶುದ್ದೀಕರಣವಾದರೆ, ಹರಿದ್ವಾರ ಮತ್ತು ಕೆಳಗಿನ ಎಲ್ಲಾ ಸ್ತರಗಳಲ್ಲಿ ಸ್ವತ : ಶುದ್ದವಾಗುತ್ತದೆ ” – ಇದು ಮುನಿಶ್ರೀಗಳ ಮಾತುಗಳು.

ನುಡಿದಂತೆ ನಡೆವ ಸಂತ…

ಕಳೆದ ವರ್ಷ ಅಂದರೆ, 2016ರ ಆಗಸ್ಟ್ 26 ರಂದು ಹರಿಯಾಣದ ಅಸೆಂಬ್ಲಿಯಲ್ಲಿ ಮುನಿಶ್ರೀ ಅವರು,” ರಾಜಕಾರಣದಲ್ಲಿ ಸಾಮಾಜಿಕ ಧರ್ಮ” ಕುರಿತು ಸುಮಾರು 40 ನಿಮಿಷ ಮಾತಾಡಿದರು.
ಮುನಿಶ್ರೀ ಅವರ ಕಟು ಕಹಿ ಮಾತುಗಳನ್ನು ಸಹಿಸದ ‘ ಆಮ್ ಆದ್ಮಿಯ’ ಶಾಸಕ ವಿಶಾಲ್ ದಾದ್ ಲಾನಿ, ಸಂತರನ್ನು ಅವಮಾನಿಸಿದರು. ಇದರಿಂದ ಆಸೆಂಬ್ಲಿಯಲ್ಲಿ ಗಲಾಟೆಯಾಯಿತು.

ಆಸೆಂಬ್ಲಿಯಲ್ಲಿ ಉಳಿದ ಶಾಸಕರು ಪಕ್ಷಬೇಧ ಮರೆತು ‘ ಅಮ್ ಆದ್ಮಿ’ ಶಾಸಕನ ವಿರುದ್ಧ ಪ್ರತಿಭಟನೆ ಮಾಡಿದರು. ಈ ಕುರಿತು ಪೋಲಿಸ್ ಕೇಸು ದಾಖಲೆಯಾಗಿ, ಆ ಶಾಸಕನನ್ನು ಪಕ್ಷದಿಂದ ಉಚ್ಛಾಟಿಸಲಾಯಿತು.
ಹಿಂದುಪರಿಷತ್ ನ ಮುಖಂಡ ಪ್ರವೀಣ ತೊಗಡಿಯಾ ಅವರು, ” ರಾಷ್ಟ್ರದ ರಾಜಕಾರಣಿಗಳಿಗೆ ಮುನಿಶ್ರೀಗಳ ಮಾತುಗಳು ದೊಡ್ಡ ಆಶೀರ್ವಾದ( ಸಲಹೆ) ಆಗಿದೆ ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮುನಿಶ್ರೀಗಳ ಮಾತುಗಳು- ನಮ್ಮ ಸಾಮಾನ್ಯ ಮನುಷ್ಯನ ಬದುಕಿನ ಸುತ್ತಮುತ್ತಲ ವಿಷಯವೇ ಆಗಿದೆ. ಬೇರೆ ಶ್ರೀಗಳ ಹಾಗೇ ಹರಿಕಥಾ ರೂಪದಲ್ಲಿರುವುದಿಲ್ಲ- ಹಾಸ್ಯ, ಪರಿಹಾಸ್ಯ, ರೇಶ್ಮೆ ಬಟ್ಟೆಯಲ್ಲಿ ಸುತ್ತಿ ಹೊಡೆದ ರೀತಿ ಇರುತ್ತದೆ. ಕೇಳುಗರನ್ನು ಅವರ ಮಾತುಗಳು ನಗಿಸುತ್ತವೆ- ಜತೆಗೆ ನಾಚಿ ನೀರಾಗುವಂತೆ ಮಾಡುತ್ತವೆ.
ರಾಷ್ಟೀಯ, ಸಾಮಾಜಿಕ ಮತ್ತು ವ್ಯಕ್ತಿಗತ ಕೆಡುಕುಗಳ ಮೇಲೆ ಎಷ್ಟೊಂದು ಸ್ಪಷ್ಟ ಹಾಗೂ ತೀಕ್ಷಣ ಪೆಟ್ಟು ನೀಡುತ್ತವೆ. ಬಹುಶ: ಯಾವುದೇ ಬೇರೆ ಸಂತ ಮುನಿಗಳು ಇವರ ಹಾಗೆ ಮಾತಾಡುವುದಿಲ್ಲ.
” ಕಹಿ ಮಾತಾಡುವುದು ನನ್ನ ಸ್ವಭಾವ ಅಲ್ಲ- ಅನಿವಾರ್ಯತೆ. ಸಿಹಿ ಮಾತಾಡಿದರೆ, ಜನರಿಗೆ ಮಲಗಿಸಲು ಜೋಗುಳ ಹಾಡುತ್ತಿದ್ದೇನೆಂದು ಅನಿಸುತ್ತದೆ” ಎಂದು ಅವರು ಹೇಳುತ್ತಾರೆ. ಅವರ ಮಾತುಗಳ ಇನ್ನೊಂದು ಉದಾಹರಣೆ ಇಲ್ಲಿದೆ ನೋಡಿ :

ಮಹಾವೀರನನ್ನು ನಡುರಸ್ತೆಯಲ್ಲಿಡಿ …
ಜೈನರಿಂದ ಮುಕ್ತಗೊಳಿಸಿ…

” ನಾನು ಮಹಾವೀರನನ್ನು ಮಂದಿರಗಳಿಂದ ಮುಕ್ತ ಮಾಡಲು ಇಚ್ಛಿಸುತ್ತೇನೆ. ಈ ಕಾರಣಗಳಿಂದಲೇ ನಾನು ಇತ್ತೀಚಿನ ದಿನಗಳಲ್ಲಿ ಮಂದಿರಗಳಲ್ಲಿ ಪ್ರವಚನ ಮಾಡುವುದನ್ನು ನಿಲ್ಲಿಸಿದ್ದೇನೆ. ನಾನು ಪಟ್ಟಣಗಳಲ್ಲಿ ನಾಲ್ಕು ರಸ್ತೆಗಳು ಕೂಡಿರುವ ಚೌಕಗಳಲ್ಲಿ ಪ್ರವಚನ ಮಾಡುತ್ತೇನೆ. ಮಹಾವೀರನನ್ನು ಜೈನರಿಂದ ಮುಕ್ತಗೊಳಿಸಿ, ಆತನ ಸಂದೇಶಗಳು,ಆತನ ಆಚಾರ,ಆದರ್ಶ ಜೀವನ ಜಗತ್ತಿನ ಮುಂದೆ ಬರಲಿ ” ಎಂದು!
ಎಂಥ ಮಾತು- ಎಂಥ ಚಿಂತನೆಗಳು!

ಈಗ ನಾನು ಈ ಬರವಣಿಗೆಯ ಮುಖ್ಯ ಉದ್ದೇಶಕ್ಕೆ ಬರುತ್ತೇನೆ. ಪೀಠಿಕೆಯಲ್ಲಿ ಹೇಳಿದ ಹಾಗೆ- ‘ 1,000 ವರ್ಷಗಳ ನಂತರ ಧರ್ಮಕ್ಕೆ ಬೆಂಕಿ ಹಚ್ಚಬೇಕು!’ ಎಂದು ಮುನಿಶ್ರೀಗಳ ಚಿಂತನೆಯನ್ನು ಪುನ: ಪ್ರಸ್ತಾಪ ಮಾಡುತ್ತೇನೆ ಅಂದರೆ :

ಜೈನ ಧರ್ಮದ ಕುಠಾರಕರು:

ನನ್ನ ಈ ಬರವಣಿಗೆ ಜೈನೇತರ ಬಂಧುಗಳಿಗೆ, ಗೆಳೆಯರಿಗೆ ನೋವಾಗ ಬಹುದು- ಇಲ್ಲಿ ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ.
9-10 ನೇ ಶತಮಾನದ ತನಕ ಇಡೀ ದೇಶದಲ್ಲಿ ಜೈನ ಧರ್ಮ ಮೊದಲ ಸ್ಥಾನವಿತ್ತು. ರಾಜಾಶ್ರಯ ತಪ್ಪಿದ್ದರಿಂದ ಜೈನಧರ್ಮ ಅವನತಿಗೆ ಬಂತೆಂದು ಬಹಳ ಸುಲಭ ಕಾರಣದಿಂದ ಜಾರಿಕೆಯ ಉತ್ತರದಿಂದ ತಪ್ಪಿಸ ಬಹುದಾಗಿದೆ.

ಇಡೀ ದೇಶದ ಮೂಲೆಗಳಲ್ಲಿ ನೋಡಿ, ಜೈನರಿದ್ದ ಕುರುಹುಗಳಿವೆ. ಆದರೆ ಅಲ್ಲಿ ಜೈನರು ವಾಸವಿಲ್ಲ. ಆ ಕುರುಹುಗಳು ಜೈನರ ಇತಿಹಾಸವನ್ನು ಸಾರಿ ಹೇಳುತ್ತಿವೆ. ದಕ್ಷಿಣದಲ್ಲಿ ತಮಿಳ್ ನಾಡು, ಕೇರಳ, ಆಂಧ್ರ- ಈಗಲೂ ಇಲ್ಲಿನ ಗುಡ್ಡ- ಬೆಟ್ಟಗಳಲ್ಲಿರುವ ಗುಹೆಗಳಲ್ಲಿ ಜೈನ ತೀರ್ಥಂಕರರ ಬಿಂಬಗಳು ಕಾಣ ಸಿಗುತ್ತವೆ.

ಕರ್ನಾಟಕದಲ್ಲಿ ಹೇಳುತ್ತ ಹೋದರೆ- ತುಂಬಾ ಸ್ಥಳಗಳಿವೆ . ಕೊಪ್ಪಳ, ಬನವಾಸಿ, ಗೇರುಸೊಪ್ಪೆ, ಭಟ್ಕಳ, ಹೊನ್ನವಾರ, ಬಾರಕೂರು- ಇಲ್ಲಿ ಈಗಲೂ ಸಿಗುತ್ತಿರುವ ಜೈನವಿಗ್ರಹಗಳು- ಜೈನಧರ್ಮದ ಇತಿಹಾಸ ಹೇಳುತ್ರಿವೆ. ಆಗ ಇದ್ದ ಜೈನರು ಬೇರೆ ಬೇರೆ ಧರ್ಮಗಳಿಗೆ ಮತಾಂತರವಾಗಿದ್ದಾರೆ. ಅದರ ಬಳುವಳಿಯೇ ‘ ವೀರಶೈವ’ ಪಂಥ ಒಂದು.

ಇದೆಲ್ಲಾ ಈಗ ಯಾಕೆ ನೆನಪಾಗುತ್ತಿದೆಂದರೆ: ಇತ್ತೀಚೆಗೆ ಚಾನೆಲ್ ಗಳಲ್ಲಿ ” ವೀರಶೈವ- ಲಿಂಗಾಯತ” ಅವರ ವಿವಾದದ ಕುರಿತು ಆ ಪಂಗಡದ ಸ್ವಾಮಿಗಳು, ನಾಯಕರು ಮಾತಾಡಿದಾಗ, ನಮ್ಮ ಹಿನ್ನಲೆ 12 ನೇ ಶತಮಾನದಿಂದ ಎಂದು ಶುರು ಮಾಡುತ್ತಾರೆ!
ಇದನ್ನು ಕೇಳಿ ನಮಗೆ ನಗು ಬರುತ್ತದೆ! ಅದರ ಹಿಂದೆ ಆ ಪಂಗಡದವರು ಏನಾಗಿದ್ದರು?

ಆ ‘ವೀರ ಶೈವ’ ಬೇರೆ ಯಾರೂ ಅಲ್ಲ- ಜೈನಧರ್ಮದಿಂದ ಮತಾಂತರ ಹೊಂದಿದವರು.ಇದಕ್ಕೆ ಬೇಕಾದ ದಾಖಲೆಗಳಿವೆ. ಆದರೆ ವೀರ ಶೈವರ ದೊಡ್ಡ ಸಾಹಿತಿ, ಸಂಶೋಧಕ ಡಾ| ಚಿದಾನಂದ ಮೂರ್ತಿ ಯಾವತ್ತೂ ತಮ್ಮ ಬರಹ, ಭಾಷಣಗಳಲ್ಲಿಈ ಮಾತುಗಳನ್ನು ಹೇಳುವುದಿಲ್ಲ- ಆದರೆ ಅವರು ಯಾವಾಗಲೂ” ಮುಸ್ಲಿಮರು ನಮ್ಮನ್ನು ಹಾಳು ಮಾಡಿದರು! ಟಿಪ್ಪು ಸುಲ್ತಾನ್ ವೀರ ಶೈವ – ಲಿಂಗಾಯತರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ ” ಎಂದು ಕಿಡಿ ಕಾರುತ್ತಾರೆ.
ವೀರ ಶೈವ – ಲಿಂಗಾಯತರು ಸುಮಾರು 25 % ದೊಡ್ಡ ಜನ ಸಂಖ್ಯೆ ಇದೆ. ಜೈನರು ಇಡೀ ದೇಶದಲ್ಲಿ 0.04% ಮಾತ್ರ ಇದೆ. ಜೈನರು ಏನು ಬೊಬ್ಬೆ ಹಾಕಿದರೂ ದಟ್ಟ ಅರಣ್ಯದಲ್ಲಿ ನಡುವೆ ನಿಂತು ಕೂಗಿದ ಹಾಗೇ! ಇದೆ ದು: ಖ.
ಈಗ ಮತ್ತೆ ಕೊನೆ ಮುಕ್ತಾಯಕ್ಕೆ ಬಂದಿದ್ದೇನೆ.

ಮುನಿಶ್ರೀಗಳ ಹಿನ್ನಲೆ-ಸಾಧನೆ- ಸನ್ಮಾನ

51ರ ಹರೆಯದ ಮುನಿಶ್ರೀಗಳು 1967 ಜೂನ್ 26ರಂದು ಮಧ್ಯಪ್ರದೇಶದ ದಮೋಹ ಜಿಲ್ಲೆಯ ಗುಹಂಚಿ ಗ್ರಾಮದಲ್ಲಿ ಜನಿಸಿದರು. ಪ್ರತಾಪ ಚಂದ್ರ ಜಿ ಜೈನ ಅವರ ತಂದೆ. ತಾಯಿ: ಶಾಂತಿ ಬಾಯಿ.
18 ನೇ ವಯಸ್ಸಿನಲ್ಲಿ ದೀಕ್ಷೆ. ” ರಾಜಕೀಯ ಅತಿಥಿ”- ಸನ್ಮಾನವನ್ನು ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ ಹಾಗೂ ಕರ್ನಾಟಕ ಸರಕಾರಗಳಿಂದ ‘ ಸಮ್ಮಾನ’ ಲಭಿಸಿದೆ.
ಲೇಖನಕ್ಕೆ ಆಧಾರ: ಕಡವೆ ಪ್ರವಚನ ( ಕಹಿ ಮಾತ್ರೆ)

4 Responses

  1. ಈ ಲೆಖನಕ್ಕೆ ಪ್ರತಿಕ್ರಿಯೆಯಾಗಿ ನನ್ನ ಹಳೆಯ ಲೇಖನವೊಂದನ್ನು ಕಳಿಸಿರುವೆ, ದಯಮಾಡಿ ಗಮನಿಸಿ

  2. prathibha nandakumar says:

    ಸಾವಿರ ವರ್ಷದ ನಂತರ ಧರ್ಮಕ್ಕೆ ಬೆಂಕಿ ಹಚ್ಚಲು ಹೇಳುವ ವ್ಯಕ್ತಿ ಮತ್ತೆ ಯಾಕೆ ಸನಾತನ ಆಚಾರಕ್ಕೆ ಕಟ್ಟುಬಿದ್ದು ನಗ್ನರಾಗಿದ್ದಾರೆ? ಸಾವಿರ ವರ್ಷವಾಯಿತು ಇನ್ನು ಬಟ್ಟೆ ತೊಟ್ಟುಕೊಳ್ಳಿ

  3. Chi na hally kirana says:

    Very, good suggestion madam

  1. March 26, 2018

    […] ಎಂದು ಭಾಷಣ ಮಾಡಿದ್ದರು. ಅದಕ್ಕೆ ರವಿರಾಜ ಅಜ್ರಿಯವರ  ಪ್ರತಿಕ್ರಿಯೆ ಅವಧಿಯಲ್ಲಿ ಪ್ರಕಟವಾಗಿತ್ತು.  […]

Leave a Reply

%d bloggers like this: