fbpx

ಧರ್ಮವೊಂದು ಪ್ರಭುತ್ವವಾಗುವ ಯೋಚನೆಯೇ ಡೇಂಜರ್..!!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

(ನಿನ್ನೆ ಪ್ರಕಟವಾದ  ಜೈನಮುನಿ ತರುಣಸಾಗರ್ ಭಾಷಣ ಕುರಿತು ರವಿರಾಜ ಅಜ್ರಿಯವರ “..ಧರ್ಮಕ್ಕೆ ಬೆಂಕಿಹಚ್ಚಬೇಕು” ಲೇಖನಕ್ಕೆ ಪ್ರತಿಕ್ರಿಯೆ)

ಧರ್ಮ ಪತಿಯಾದರೆ, ರಾಜಕಾರಣ ಪತ್ನಿ!

ಜೈನಮುನಿ ತರುಣ್ ಸಾಗರ್ ಅವರ ಉಪದೇಶಾಮೃತ

ಹರಿಯಾಣರಾಜ್ಯವಿದಾನಸಭೆಯ ಮುಂಗಾರು ಅಧಿವೇಶನದ ಮೊದಲದಿನ ಜೈನ ಮುನಿ ಶ್ರೀ ತರುಣ್ ಸಾಗರ್ ಅವರು  ಸದನದಲ್ಲಿ ರಾಜ್ಯಪಾಲರು ಮತ್ತು ಸ್ಪೀಕರ್ ಅವರುಗಳಿಗಿಂತ ಎತ್ತರದ ಆಸನದಲ್ಲಿ ಕುಳಿತು ಹರಿಯಾಣದ ಸಮಸ್ತ ಜನಪ್ರತಿನಿಧಿಗಳಿಗೂ ಹಿತವಚನ  ಹೇಳುವ ಬಾಷಣವನ್ನು ಅಥವಾ ಉಪನ್ಯಾಸವನ್ನು ನೀಡುವುದರ ಮೂಲಕ ಇಂಡಿಯಾದಂತಹ ಜಾತ್ಯಾತೀತ ಪ್ರಜಾಪ್ರಭುತ್ವದಲ್ಲಿಯೂ ಜನರಿಂದ ಆರಿಸಿಬಂದ ಜನಪ್ರತಿನಿಧಿಗಳಿಗಿಂತ ತಮ್ಮಂತಹ ಧಾರ್ಮಿಕ ಮುಖಂಡರುಗಳೇ ಶಕ್ತಿಶಾಲಿಗಳು ಮತ್ತು ಶ್ರೇಷ್ಠರೆನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಅವರು ಹೇಳಿದ ವಿಷಯಗಳ ಬಗ್ಗೆ ನಾನು ಹೆಚ್ಚು ಬರೆಯಲಾರೆ. ಏಕೆಂದರೆ ಹಾಗೆ ಅವರು ಹೇಳಿದ ಯಾವ ವಿಚಾರಗಳು ನನ್ನ ಮಟ್ಟಿಗೆ ಹೊಸದೇನಲ್ಲ. ಅಲ್ಲಿ ಅವರ ಬದಲಿಗೆ ಯಾವುದೇ ಧರ್ಮದ ಮುಖಂಡರನ್ನು ಅಥವಾ ಇಂಡಿಯಾದ ಸಮಸ್ಯೆಗಳ ಬಗ್ಗೆ ಅರಿವು ಇರುವ ಯಾರನ್ನೇ ಕೂರಿಸಿದ್ದರು ಅವರು ಸಹ ಅವೇ ಮಾತುಗಳನ್ನಾಡುತ್ತಿದ್ದರು.ಅಷ್ಟಲ್ಲದೆ ದೇಶದ ದಿನನಿತ್ಯದ ರಾಜಕಾರಣವನ್ನು, ಸೂಕ್ಷ್ಮವಾಗಿ ಅವಲೋಕಿಸಬಲ್ಲ ಯಾವುದೇ ಒಬ್ಬ ಸಾಮಾನ್ಯನೂ ಆ ಮಾತುಗಳನ್ನು ಸಲೀಸಾಗಿ ಹೇಳಬಲ್ಲವನಾಗಿದ್ದ.

ಆದರೆ ನನಗೆ ಅವರ ಮಾತುಗಳಲ್ಲಿಬಹಳ ಮುಖ್ಯವೆನಿಸಿದ್ದು: ಧರ್ಮ ಪತಿಯಿದ್ದಂತೆ, ರಾಜಕಾರಣ(ಅರ್ಥಾಥ್ ಪ್ರಭುತ್ವ) ಪತ್ನಿಯಿದ್ದಂತೆ ಎಂದು ಹೇಳಿದ ಮಾತು. ಅವರ ಪ್ರಕಾರ ಧರ್ಮ ಗಂಡನಾದರೆ ರಾಜಕಾರಣ ಹೆಂಡತಿಯಿದ್ದಂತೆ. ಗಂಡನ ಅಂದರೆ ಧರ್ಮದ ಆಧೇಶದಂತೆ ನಡೆಯುವುದು ಹೆಂಡತಿಯ ಅಂದರೆ ರಾಜಕಾರಣದ ಕರ್ತವ್ಯವಾಗಿದೆ.ಅದೇರೀತಿ ಪತ್ನಿಯನ್ನು ರಕ್ಷಿಸುವುದು ಗಂಡನ ಕರ್ತವ್ಯವಾಗಿದೆ.ಒಟ್ಟಿನಲ್ಲಿ ಈ ಮಾತಿನ ತಾತ್ಪರ್ಯ ಈ ರೀತಿ ಇದೆ:

ಧರ್ಮದ ಮಾತನ್ನು ಯಾವಾಗಲೂ ಪ್ರಭುತ್ವ ಕೇಳಬೇಕಾಗಿದ್ದು, ಅದು ಅದರ ಕರ್ತವ್ಯವಾಗಿದೆ. ಅದೇ ರೀತಿ ಪ್ರಭುತ್ವವನ್ನು ರಕ್ಷಿಸುವುದು ಧರ್ಮದ ಕೆಲಸವಾಗಿದೆ. ಇವೆರಡನ್ನು ಸಮತೋಲನದಿಂದ ನಿಬಾಯಿಸಲು ಧರ್ಮ ಮತ್ತು ಪ್ರಭುತ್ವ ಪರಸ್ಪರ ಪೂರಕವಾಗಿ ಕೆಲಸ ಮಾಡುವ ಎರಡು ಶಕ್ತಿಗಳಾಗಿರಬೇಕೆಂಬುದು ಅವರ ಒಟ್ಟಾರೆ ಇಂಗಿತವಾಗಿತ್ತು.

ಇಂಡಿಯಾದಂತಹ ಜಾತ್ಯಾತೀತ ,ಮತ್ತು ಬಹುಸಂಸ್ಕೃತಿಯ ರಾಷ್ಟçದಲ್ಲಿ ಧರ್ಮ ಮತ್ತು ರಾಜಕಾರಣ ಇವತ್ತಿನವರೆಗೂ ಬೇರೆಬೇರೆಯಾಗಿ ಹೋಗುತ್ತಿದ್ದು, ನಮ್ಮ ಹಲವು ಕೊರತೆಗಳ ನಡುವೆಯೂ ನಮ್ಮ ಪ್ರಜಾಸತ್ತೆ ಇನ್ನೂ ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾದ್ಯವಾಗಿದೆ.  ವಿಶ್ವದ ಇತಿಹಾಸವನ್ನು ಗಮನಿಸಿದರೆ ನಮಗಿದು ಅರ್ಥವಾಗುತ್ತದೆ.  ಯಾವಾಗೆಲ್ಲ ಪ್ರಭುತ್ವವೊಂದು ತನ್ನನ್ನು ಅಧಿಕಾರದ ಗದ್ದುಗೆಗೆ ಏರಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಧರ್ಮದ ನೆರವನ್ನು ಪಡೆಯುತ್ತದೆಯೋ ಆಗೆಲ್ಲ ಧರ್ಮವೊಂದು ಇನ್ನಿಲ್ಲದ ಪ್ರಾಮುಖ್ಯವನ್ನು ಪಡೆಯ ತೊಡಗುತ್ತದೆ.

ಕ್ರಮೇಣ  ಆ ಧರ್ಮ ತಾನೇ ಪ್ರಭುತ್ವವಾಗಿಬಿಡಲು ಹವಣಿಸುತ್ತದೆ.ಹೀಗೆ ಪರಸ್ಪರ ಪೂರಕವಾಗಿ ಕೆಲಸ ಮಾಡತೊಡಗಿದ ಪ್ರಭುತ್ವ ಮತ್ತು ಧರ್ಮಗಳು ಪ್ರಜಾಪ್ರಭುತ್ವದ ಎಲ್ಲ ಆಶಯಗಳನ್ನೂ ಗಾಳಿಗೆ ತೂರುತ್ತವೆ. ಇವತ್ತು ಯಾವ್ಯಾವ ದೇಶಗಳು ಧರ್ಮ ರಾಜಕಾರಣ ಮಾಡಿವೆಯೊ ಅವೆಲ್ಲ ಧರ್ಮವನ್ನೆ ಪ್ರಭುತ್ವವನ್ನಾಗಿಸಿಕೊಂಡು ಸರ್ವಾಧಿಕಾರದ ನೆರಳಲ್ಲಿ ಬದುಕುತ್ತಿವೆ.

ಧರ್ಮವನ್ನು ಬಳಸಿಕೊಳ್ಳುವ ಪ್ರಭುತ್ವ  ತನ್ನ  ಬೆಂಬಲಕ್ಕೆ ನಿಲ್ಲುವ ಬಹುಸಂಖ್ಯಾತರ ಧರ್ಮದ ಆಜ್ಷೆಗಳನ್ನು ಪಾಲಿಸ ತೊಡಗಿದಾಗ, ಆ ಧರ್ಮ ತನಗೆ ಎದುರಾಗಬಹುದೆಂದು ತಾನು ಪರಿಬಾವಿಸಿದ ಉಳಿದ ಧರ್ಮ, ಸಂಸ್ಕೃತಿಗಳನ್ನು ಇಲ್ಲವಾಗಿಸಲು ಪ್ರಭುತ್ವವನ್ನು  ಬಳಸಿಕೊಳ್ಳತೊಡಗುತ್ತದೆ. ಇಂಡಿಯಾದಂತಹ ಬಹುಧರ್ಮಗಳ, ಬಹು ಸಂಸ್ಕೃತಿಗಳ, ಹಲವಾರು ಉಪಪಸಂಸ್ಕೃತಿಗಳ ನಾಡಿನಲ್ಲಿ ಹೀಗೆ ಧರ್ಮವೊಂದು ಪ್ರಭುತ್ವವಾಗಿಬಿಡುವ ಯೋಚನೆಯೇ ಅಪಾಯಕಾರಿಯಾದುದು.

ಈ ಹಿನ್ನೆಲೆಯಲ್ಲಿಯೇ ಜೈನಮುನಿಗಳಾದ ಶ್ರೀ ತರುಣ್ ಸಾಗರ್ ಅವರ ಮೇಲಿನ ಮಾತುಗಳನ್ನು ಮತ್ತು ಅದರ ಹಿಂದಿರಬಹುದಾದ ಗುಪ್ತಕಾರ್ಯಸೂಚಿಗಳನ್ನೂ ಅನುಮಾನದಿಂದ ನೋಡಬೇಕಾಗಿದೆ. ಆ ಮಾತುಗಳ  ಹಿಂದಿನ ಆಶಯಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆಯೆಂದು ಅನಿಸುತ್ತಿರುವುದು.ಇದನ್ನು ನಾನೇನು ಊಹೆ ಮಾಡಿಕೊಂಡು ಹೇಳುತ್ತಿಲ್ಲ.

ಯಾವಾಗೆಲ್ಲ ಪ್ರಭುತ್ವಗಳು ಧರ್ಮದ ನೆರವಿನೊಂದಿಗೆ ಅಧಿಕಾರ ನಡೆಸತೊಡಗಿವೆಯೋ ಹಾಗೆಲ್ಲ ಧರ್ಮಗಳು ಮನುಷ್ಯರ ದೈನಂದಿನ ಆಗುಹೋಗುಗಳ ಮೇಲೆಯೂ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗುತ್ತ ಕ್ರಮೇಣ ಧರ್ಮರಾಜಕಾರಣವೇ ಮೆರೆಯತೊಡಗುವುದು ಚಾರಿತ್ರಿಕ ಸತ್ಯ. ಹೀಗೆ ಧರ್ಮದ ಕೈಗೆ ಅಧಿಕಾರದ ಚುಕ್ಕಾಣಿ ಕೊಟ್ಟ ಯಾವ ದೇಶವೂ ನೆಮ್ಮದಿಯಾಗಿರುವುದು ಸಾದ್ಯವಿಲ್ಲ.

ಹೀಗಾಗಿ ಇವತ್ತು ಹರಿಯಾಣ ವಿದಾನಸಭೆಗೆ ಆಗಮಿಸಿ ಜನಪ್ರತಿನಿಧಿಗಳಿಗೆ ಉಪದೇಶ ಮಾಡಿದ ಇವರನ್ನು ನೆಪವಾಗಿಟ್ಟುಕೊಂಡು, ನಾಳೆ ಬೇರೆಬೇರೇ ಧರ್ಮದ ಸಾಧುಸಂತರುಗಳು ತಾವೂ ಕೂಡ ಜನಪ್ರತಿನಿಧಿಗಳಿಗೆ ಉಪನ್ಯಾಸ ನೀಡುವುದಾಗಿ ಹೇಳಿದಾಗ ಸರಕಾರಗಳು ಅವರಿಗೆ ಬೇಡವೆನ್ನುವಂತಿಲ್ಲ. ಇವತ್ತು ಹರಿಯಾಣದಲ್ಲಾಗಿದ್ದು ನಾಳೆ ಕರ್ನಾಟಕದಲ್ಲೂ ಆಗಬಹುದು. ಆದರೆ ಹಾಗಾಗದಂತೆ ನೋಡಿಕೊಳ್ಳಬೇಕಾದುದು ರಾಜಕಾರಣಿಗಳ ಕರ್ತವ್ಯವಾಗಿದೆ. ಯಾಕೆಂದರೆ ಒಮ್ಮೆ ಅಧಿಕಾರದ ರುಚಿ ಕಂಡ ಯಾವ ಧರ್ಮವೂ ಅದನ್ನು ಸುಲಭವಾಗಿ ಬಿಟ್ಟುಕೊಡಲು ಒಪ್ಪುವುದಿಲ್ಲ.

ಮತಾಂಧರಾಜಕಾರಣ ಹೆಚ್ಚಾಗುತ್ತಿರುವ ಇವತ್ತಿನ ಸಂಕೀರ್ಣ ಸನ್ನಿವೇಶದಲ್ಲಿ ಯಾವುದೇ ಧರ್ಮಗಳು ರಾಜಕೀಯ ಶಕ್ತಿಗಳ ಮೇಲೆ ಹಿಡಿತ ಸಾಧಿಸುವ ಪ್ರಯತ್ನಗಳನ್ನು ನಿಷ್ಪಲಗೊಳಿಸಬೇಕಿದೆ. ಇಲ್ಲದೆ ಹೋದಲ್ಲಿ ಮತೀಯ ರಾಜಕಾರಣ ಈ ನೆಲದ  ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಇಲ್ಲವಗಿಸುವ ಸಾದ್ಯತೆಯಿದೆ.

Leave a Reply