fbpx

ಮಾರ್ಕ್ಸ್, ಗಾಂಧಿ ನನ್ನ ಹೆಗಲೇರಿದ್ದು ಅಮ್ಮನಿಂದ..

ಕೇಶವರೆಡ್ಡಿ ಹಂದ್ರಾಳ

ಮಾರ್ಕ್ಸ್ , ಗಾಂಧಿ , ಅಂಬೇಡ್ಕರ್ ಮುಂತಾದ ಅನೇಕ ಮಹಾತ್ಮರ ಬಗ್ಗೆ ಕಿಂಚಿತ್ತೂ ಪರಿಜ್ಞಾನವಿಲ್ಲದ ಅನಕ್ಷರಸ್ಥಳಾದ ನಮ್ಮಮ್ಮ ಗಂಟಲು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಬೆಂಗಳೂರಿನ ಕಿದ್ವಾಯ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅಸುನೀಗಿ ಶ್ರೀರಾಮ ನವಮಿಯ ಇವೊತ್ತಿಗೆ ನಲವತ್ತೆರಡು ವರ್ಷಗಳಾದವು.

ಎರಡನೇ ಪಿಯುಸಿ ಓದುತ್ತಿದ್ದ ನಾನು ಒಂದು ತಿಂಗಳ ಕಾಲ ಕಿದ್ವಾಯ್ ಆಸ್ಪತ್ರೆಗೆ ನಮ್ಮಮ್ಮನೊಂದಿಗೆ ಓಡಾಡುತ್ತಿದ್ದೆ. ನಲವತ್ತೆರಡು ವರ್ಷಗಳ ಹಿಂದೆ ಕಿದ್ವಾಯ್ ಆಸ್ಪತ್ರೆ ಥೇಟ್ ನರಕದಂತೆಯೇ ಇತ್ತು. ಕರ್ನಾಟಕವೇ ಅಲ್ಲದೆ ಆಂಧ್ರ ,ತಮಿಳುನಾಡುಗಳಿಂದ ಕ್ಯಾನ್ಸರ್ ರೋಗಿಗಳು ಅಲ್ಲಿಗೆ ಬರುತ್ತಿದ್ದರು.

ಆಸ್ಪತ್ರೆಯಲ್ಲಿ ಬೆಡ್ಗಳಿಲ್ಲದೆ ಆಸ್ಪತ್ರೆಯ ಕಾಂಪೌಂಡ್ ಆವರಣದಲ್ಲೆ ರೋಗಿಗಳನ್ನು ಹಾಕಿಕೊಂಡು ಅಲ್ಲೆ ಅಡುಗೆಯನ್ನು ಮಾಡಿಕೊಂಡು ಇರುತ್ತಿದ್ದರು.ಒಂದು ತಿಂಗಳ ಕಾಲ ಆ ಆಸ್ಪತ್ರೆಯೊಂದಿಗೆ ಒಡನಾಡಿದ್ದ ನನಗೆ ಡಾಕ್ಟರ್ ಗಳಿಂದ ಹಿಡಿದು ಕಸಗುಡಿಸುವವರವರೆಗೆ ಅಲ್ಲಿ ಯಾರಲ್ಲೂ ಮಾನವೀಯತೆಯ ಲವಶೇಷದ ದರ್ಶನವೂ ಆಗಿರಲಿಲ್ಲ. ಪರೀಕ್ಷೆಗಳೆಲ್ಲ ಮುಗಿದ ಮೇಲೆ ಒಂದು ದಿನ ನೇರವಾಗಿ ಆಸ್ಪತ್ರೆಯ ಡೈರೆಕ್ಟರ್ ರೂಮಿಗೆ ಹೋಗಿ ಸಿಟ್ಟಿನಿಂದ ಅಲ್ಲಿನ ಅವ್ಯವಸ್ಥೆಯ ಬಗ್ಗೆ ಮಾತನಾಡಿ ಬಂದಿದ್ದೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಿದ್ದುದ್ದರಿಂದ ನನ್ನ ಮಾತುಗಳಿಂದ ಅವರು ನನ್ನನ್ನು ಒದ್ದು ಜೈಲಿಗಟ್ಟಬಹುದಿತ್ತು…! ಆದರೆ ನನ್ನ ಮಾತುಗಳಿಂದ ಅವರು ನೈತಿಕವಾಗಿ ಭಯಪಟ್ಟಿದ್ದರೇನೋ…!!

ಇವೊತ್ತಿಗೂ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಈ ದೇಶದ ಸಾಮಾನ್ಯರಿಗೆ ಯೋಗ್ಯವಾದ ಸಾರ್ವಜನಿಕ ಆರೋಗ್ಯ ,ಸಾರ್ವಜನಿಕ ಶಿಕ್ಷಣ ಕೊಡಲು ಯಾವ ರಾಜಕೀಯ ಪಕ್ಷಗಳ ಸರ್ಕಾರಗಳಿಂದಲೂ ಸಾಧ್ಯವಾಗಿಲ್ಲವೆಂಬುದು ಪ್ರಜಾಪ್ರಭುತ್ವ ವ್ಯವಸ್ಥೆಗಾದ ನಾಚಿಕೆ ಮತ್ತು ಅವಮಾನಗಳೇ ಸರಿ.

ಅದಿರಲಿ , ನಮ್ಮ ಹಳ್ಳಿಗಾಡಿನ ಅಂದಿನ ಹೆಣ್ಣು ಮಕ್ಕಳಲ್ಲಿ ಜಾತಿ ,ಮತ ಭೇದವಿಲ್ಲದೆ ಗಂಡಸರಿಗಿಂತಲೂ ಹೆಚ್ಚಿನ ದಯಾಪರತೆ , ನಿಸ್ವಾರ್ಥಪರತೆ ಮತ್ತು ಶ್ರಮಸಂಸ್ಕೃತಿ ನೆಲೆಯಾಗಿದ್ದದ್ದು ನನ್ನ ಅನುಭವಕ್ಕೆ ದಕ್ಕಿದ ಸತ್ಯವೆ ಸರಿ . ನಮ್ಮ ಮನೆತುಂಬಾ ವರ್ಷ ಪೂರ್ತಿ ಬೇಸಾಯವಿರುತ್ತಿದ್ದ ಕಾರಣದಿಂದಾಗಿ ಪ್ರತಿನಿತ್ಯವೂ ನಮ್ಮಮ್ಮ ನಲವತೈವತ್ತು ರಾಗಿ ಮುದ್ದೆಗಳನ್ನು ಕಟ್ಟಬೇಕಾಗಿರುತ್ತಿತ್ತು.

ಅಂದಿನ ಕಾಲದ ಮುದ್ದೆಗಳೋ ನಮ್ಮ ತಲೆಯ ಗಾತ್ರದಷ್ಟಿರುತ್ತಿದ್ದವು. ನಮ್ಮಮ್ಮ ಯಾರೇ ಹಸಿದು ಮನೆಯ ಹತ್ತಿರ ಬಂದರೂ ಒಂದು ಮುದ್ದೆ , ಒಂದೆರಡು ಸೌಟು ಸಾರು ಕೊಡುತ್ತಿದ್ದಳು.ನನಗಿನ್ನೂ ಚನ್ನಾಗಿ ನೆನಪಿದೆ , ನಮ್ಮ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಮಾದಿಗರ ಕದುರಮ್ಮಜ್ಜಿ ನಡೆದಾಡಲು ಸಾಧ್ಯವಾಗದಿದ್ದಾಗ ಹಿಟ್ಟು ಸಾರನ್ನು ನಮ್ಮಮ್ಮ ನಮ್ಮ ಕೈಲಿ ಕಳುಹಿಸುತ್ತಿದ್ದಳು. ಇಲ್ಲವೇ ಮಾದಿಗರಟ್ಟಿಯಿಂದ ಯಾರಾದರೂ ಬಂದರೆ ಅವರ ಕೈಯಲ್ಲಿ ಕಳುಹಿಸುತ್ತಿದ್ದಳು.ಮಕ್ಕಳಿಗಾಗಿಯೇ ಒಂದು ಸೇರು ಅಕ್ಕಿ ಅನ್ನ ಮಾಡಿ ಅನ್ನ ಮಾಡದಿದ್ದವರ ಮಕ್ಕಳಿಗೆ ಅನ್ನ ಅದಕ್ಕೊಂದು ತೊಟ್ಟು ತುಪ್ಪವನ್ನೂ ಕೊಡುತ್ತಿದ್ದಳು.

ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೀಕರ ಬರಗಾಲ ಆವರಿಸಿತ್ತು. ನಾನಾಗ ಪ್ರೈಮರಿ ಸ್ಕೂಲಿನ ಮೂರನೆಯ ಕ್ಲಾಸಿನಲ್ಲಿದ್ದಿರಬಹುದು. ದೇಶದಾದ್ಯಂತ ಆಹಾರ ಕೊರತೆ ಉದ್ಬವಿಸಿದ್ದರಿಂದ ವಾರದಲ್ಲಿ ಸೋಮವಾರದಂದು ಒಂದೊತ್ತು ಮಾತ್ರ ಊಟಮಾಡಿ ಆಹಾರ ಹಂಚಿಕೊಳ್ಳಬೇಕಾಗಿ ಖುದ್ದು ಪ್ರಧಾನಿಯೇ ದೇಶದ ಜನರಲ್ಲಿ ಮನವಿ ಮಾಡಿದ್ದರು. ಹಿಂದಿನ ವರ್ಷ ನಮ್ಮಪ್ಪ ಮೂವತ್ತು ಪಲ್ಲ ರಾಗಿ ಬೆಳೆದಿದ್ದ. ಭತ್ತವನ್ನು ಮನೆಗೆಷ್ಟು ಬೇಕೋ ಅಷ್ಟನ್ನಿಟ್ಟುಕೊಂಡು ಮಿಕ್ಕಿದ್ದನ್ನು ಮಾರಾಟ ಮಾಡುತ್ತಿದ್ದ ನಮ್ಮಪ್ಪ ರಾಗಿಯನ್ನು ಮಾತ್ರ ಮಾರುತ್ತಿರಲಿಲ್ಲ.

ಹಾಗಾಗಿ ನಮ್ಮ ಕಣಜದಲ್ಲಿ ಇನ್ನೂ ಇಪ್ಪತ್ತು ಪಲ್ಲ ರಾಗಿ ಇತ್ತು. ಇಲ್ಲ ಎಂದು ಬಂದವರಿಗೆಲ್ಲ ಐದು ಹತ್ತು ಸೇರು ರಾಗಿಯನ್ನು ನಮ್ಮಪ್ಪ ಕೊಟ್ಟ ಹಾಗೂ ನಮ್ಮಮ್ಮಹೆಚ್ಚಿಗೆ ಮುದ್ದೆಗಳನ್ನು ಮಾಡಿ ಹಂಚುತ್ತಿದ್ದ ದೃಶ್ಯಗಳು ನನ್ನ ಕಣ್ಮುಂದೆ ಇಷ್ಟೆಲ್ಲಾ ವರ್ಷಗಳಾದರೂ ಹಸಿಹಸಿಯಾಗಿ ಎದುರಾಗುತ್ತಿವೆ. ಪಿಯುಸಿ ಓದುವಾಗ ಮಾರ್ಕ್ಸ್ ಮತ್ತು ಗಾಂಧಿ ಮಹಾತ್ಮರು ನನ್ನ ಹೆಗಲೇರಲು ನಮ್ಮಮ್ಮ ,ನಮ್ಮಪ್ಪ ಮತ್ತು ನಮ್ಮೂರಿನ ಅನೇಕನೇಕ ಅನಕ್ಷರಸ್ಥ ಶ್ರಮಜೀವಿಗಳು ಕಾರಣವೆನ್ನುವುದು ನನ್ನ ಬದುಕಿನ ಹೆಮ್ಮೆಯಾಗಿದೆ.

ನೂರಾರು ವರ್ಷಗಳ ಕಾಲ ಹಳ್ಳಿಗಳಲ್ಲಿ ಬಡತನ ಮತ್ತು ಜಾತಿ ವ್ಯವಸ್ಥೆಗಳೊಂದಿಗೆ ಇಂಥಾ ಅನಕ್ಷರಸ್ಥ ಜೀವಿಗಳು ಜಾತಿ ,ಮತ ಭೇದವಿಲ್ಲದೆ ಪ್ರೀತಿ ,ವಿಶ್ವಾಸ ,ಸಹಕಾರಗಳಿಂದ ಹೇಗೆ ಬದುಕಬಹುದೆಂಬುದನ್ನು ಕಂಡುಕೊಂಡಿದ್ದರಲ್ಲದೆ ಕಲಿಸಿಕೊಡುತ್ತಿದ್ದರು. ಆದರೆ ಇಂದಿನ ಅಕ್ಷರಸ್ಥ ರಾಜಕಾರಣಿಗಳು ,ಘನಚಿಂತಕರು ,ಮಹಾನ್ ಹೋರಾಟಗಾರರು , ಪಂಥವ್ಯಾಧಿ ಬುದ್ದಿ ಜೀವಿ ಮಹಾಪುರುಷರು ಪ್ರೀತಿ ,ವಿಶ್ವಾಸ ,ಸಹಕಾರಗಳಿಂದ ಹೇಗೆ ಬದುಕಬಾರದೆಂಬುದರ ಬಗ್ಗೆ ಹೇಳುತ್ತಿದ್ದಾರೆ.

ನಮ್ಮಮ್ಮ ಸತ್ತ ದಿನ ನಮ್ಮೂರಲ್ಲಿ ಕಣ್ಣೀರು ಮಿಡಿಯುತ್ತಾ ಯಾರೂ ಶ್ರೀರಾಮನವಮಿ ಹಬ್ಬವನ್ನು ಮಾಡಿರಲಿಲ್ಲ.ಅದು ನನ್ನ ಅಮ್ಮನಿಗೆ ಸಂದ ಸಣ್ಣ ಪ್ರೀತಿ ಮಾತ್ರವಾಗಿತ್ತು. ಇಡೀ ಜೀವ ಜಗತ್ತು ಹಸಿವಿನಿಂದ , ನೋವಿನಿಂದ ಮುಕ್ತವಾಗಲೆಂದು ಹೃದಯಪೂರ್ವಕವಾಗಿ ಆಶಿಸುತ್ತಾ.

ಈ ದೇಶದ ಎಲ್ಲಾ ನೊಂದ ವರ್ಗಗಳ ಜನರ ಸಂಕಷ್ಟಗಳನ್ನು ಹೋಗಲಾಡಿಸಲು ರಾಹುಲ್ ಗಾಂಧಿಯೋ ,ಮೋದಿಯೋ ,ಸಿದ್ದರಾಮಯ್ಯನೋ ,ಯಡಿಯೂರಪ್ಪನೋ ,ಕುಮಾರಸ್ವಾಮಿಯೋ ಯಾರಾದರೂ ಹೋರಾಡಲಿ..ಅಂಥವರೆಲ್ಲರಿಗೂ ನಮ್ಮ ಶಿರಸಾಸ್ಟಾಂಗ ನಮಸ್ಕಾರಗಳು.

3 Responses

  1. Shyamala Madhav says:

    ನಿಮ್ಮಮ್ಮನ ಮಾನವೀಯತೆಯೇ ಧರ್ಮವಾದ ಪ್ರೀತಿ ತುಂಬಿದ ಅಂತಃಕರಣಕ್ಕೆ, ಅಂದಿನ ಅಂತಹ ಎಲ್ಲ ಸಹೃದಯಗಳಿಗೆ ಅನಂತಾನಂತ ವಂದನೆ.

  2. Anasuya M R says:

    ಕದರಜ್ಜಿಗೆ ಊಟ ಕಳಿಸಃವ ಪ್ರಸಂಗ ಮನ ಮುಟ್ಟುತ್ತದೆ. ನಿಮ್ಮಮ್ಮ ಊರಿಗೇ ತಾಯಿ ಸರ್

  3. ಓದಿ ಖುಷಿಯೂ ಆಯ್ತು, ನೋವೂ ಆಯ್ತು… ☺️

Leave a Reply

%d bloggers like this: