fbpx

ಹಾಯ್ ವಸಂತ..!!

ಎಂ ಆರ್  ಕಮಲ

ವಸಂತ ಬಂದ, ಋತುಗಳ ರಾಜ ತಾ ಬಂದ,
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ,
ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ,
ಕೂವೂ, ಜಗ್ ಜಗ್, ಪುವ್ವಿ, ಟೂವಿಟ್ಟವೂ !

ಶಾಲೆಯ ಪಠ್ಯಪುಸ್ತಕದಲ್ಲಿದ್ದ ಬಿ ಎಂ ಶ್ರೀಯವರ `ವಸಂತ’ ಕವಿತೆಯನ್ನು (ನ್ಯಾಶ್ ಕವಿಯ `ಸ್ಪ್ರಿಂಗ್’ ಕವಿತೆಯ ಅನುವಾದ) ಹೇಳಿಕೊಳ್ಳುತ್ತಾ, ಜಿಂಕೆಯಂತೆ ಜಿಗಿಯುತ್ತಿದ್ದ ನನಗೆ `ಹೆಣ್ಗಳ ಕುಣಿಸುತ ನಿಂದ’ ಎನ್ನುವ ಸಾಲು ಅರ್ಥವಾಗದೆಯೂ ಆಗಿತ್ತು ಎಂದು ಈಗನಿಸುತ್ತಿದೆ.

ಈ ಕವಿತೆಯ ಕೊನೆಯಲ್ಲಿ ಬರುವ ಅನುಕರಣವಾಚಿಗಳು ಕೊಟ್ಟಿದ್ದಷ್ಟು ಖುಷಿಯನ್ನು ಆಗ ಆ ಕವಿತೆಯು ಕೊಟ್ಟಿರಲಿಲ್ಲ.

ಈ ಬಗ್ಗೆ ಯೋಚಿಸುತ್ತಿದ್ದಾಗ `ನಮ್ಮನೆಗೆ ವಸಂತಕ್ಕೆ ಬನ್ನಿ’ ಎಂದು ಕುಂಕುಮದ ಬಟ್ಟಲನ್ನು ಹಿಡಿದುಕೊಂಡು ಹೋಗಿ ಕರೆಯುತ್ತಿದ್ದ `ರಾಮನವಮಿ’ ಥಟ್ ಅಂತ ನೆನಪಿಗೆ ಬಂದು ಖುಷಿ, ರೋಮಾಂಚನ ಎರಡು ಆಯ್ತು!

ಅರೆ, ಬಿರುಬಿಸಿಲ ಬಯಲು ಸೀಮೆಯಲ್ಲಿ ‘ವಸಂತ’ವನ್ನು ಅದೆಷ್ಟು ಅರ್ಥಪೂರ್ಣವಾಗಿ ನಾವು ಸ್ವಾಗತಿಸುತ್ತಿದ್ದೆವು! ಬೇಂದ್ರೆಯವರ `ಹೊಂಗೆ ಹೂವ ತೊಂಗಲಲ್ಲಿ……’ ನಮ್ಮ ಅನುಭವಕ್ಕೆ ಬಂದಿರಲೇ ಇಲ್ಲ. ಅಲ್ಲೊಂದು ಇಲ್ಲೊಂದು ಬಿಟ್ಟರೆ ಹೊಂಗೆ ಮರಗಳನ್ನು ಅಷ್ಟಾಗಿ ನೋಡಿರಲಿಲ್ಲ.

ನಮ್ಮಕಡೆ ಮರಗಳು ಅಂದ್ರೆ ಆಲ, ಅರಳಿ, ಮಾವು, ನೇರಳೆ, ಹಾಲವಾಣ, ಬೇಲ, ಕೊಂಡಮಾವು, ಅತ್ತಿ, ಬೇವು, ಹುಣಸೆ ಇತ್ಯಾದಿ.. ಇವುಗಳ ಹೊರತಾಗಿ ನಮ್ಮ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಇದ್ದ `ಕೆಂಜಿಗೆ’! ಅದನ್ನು `ಮೇ ಫ್ಲವರ್’, `ಗುಲ್ ಮೊಹರ್ ಅಂತೆಲ್ಲ ಕರೀತಾರೆ ಎನ್ನುವುದು ಹಳ್ಳಿ ಬಿಡುವತನಕ ತಿಳಿದಿರಲಿಲ್ಲ.

ಮೇ ತಿಂಗಳ ಕೊನೆಯಲ್ಲಿ ಶಾಲೆ ಆರಂಭವಾದಾಗ ಹುಚ್ಚಿಯಂತೆ ಕೆಂಪು ತಲೆಗೆದರಿ ನಿಂತಿರುತ್ತಿದ್ದ ಈ ಗಿಡದ ಕೆಳಗೆ ಕೂತು ಅರೆ ಅರಳಿದ ಹೂಗಳನ್ನು ಆಯ್ದುಕೊಂಡು ಪ್ರಶ್ನಾರ್ಥಕ ಚಿಹ್ನೆಗಳಂತಿದ್ದ ಕೇಸರಗಳನ್ನು ಸಿಕ್ಕಿಸಿಕೊಂಡು `ತಲೆ ಕಡಿಯುವ’ ಆಟ ಆಡುತ್ತಿದ್ದೆವು! ಹೂವಿನ ಪುಷ್ಪ ಪಾತ್ರೆಯನ್ನು ಉಗುರುಗಳಿಗೆ ಮೆತ್ತಿಕೊಂಡು ಅವರಿವರನ್ನು ಹೆದರಿಸುತ್ತಿದ್ದೆವು!

ನಾನು ಕಂಡಿದ್ದ ಭಾರೀ ಕಾಡು ಎಂದರೆ ಮೇಟಿಕುರ್ಕೆಯಿಂದ ಅರಸೀಕೆರೆಗೆ ಹೋಗುವ ಹಾದಿಯಲ್ಲಿರುವ `ರಾಮನಹಳ್ಳಿ ಸ್ಟೇಟ್ ಫಾರೆಸ್ಟ್’! ಅದೊಂದು ಬರಿಯ ಕುರುಚಲು ಗಿಡಗಳ ಅರಣ್ಯ.. ಅರಸೀಕೆರೆಗೆ ಹೋಗುವಾಗ ಈ ಕಾಡಿನ ಮಧ್ಯೆ ಬಸ್ಸಿನಲ್ಲಿ ನಾನು ಉಸಿರು ಬಿಗಿಹಿಡಿದುಕೊಂಡು ಕೂತಿರುತ್ತಿದ್ದೆ.

ಹಿಂದೆ ಅಲ್ಲಿ ಹುಲಿ, ಚಿರತೆ, ಕತ್ತೆ ಕಿರುಬ, ಕರಡಿಗಳು ಇದ್ದವೆಂದು ಅಣ್ಣ ಕಥೆ ಹೇಳುತ್ತಿದ್ದರು. ಒಂದೆರಡು ನಾಯಿಗಳಂತೆ ಕಾಣುತ್ತಿದ್ದ ನರಿಗಳನ್ನು ಬಿಟ್ಟರೆ ಮತ್ತೇನನ್ನು ನೋಡಿರಲಿಲ್ಲ! ರಾತ್ರಿ ಗಾಡಿಗಳನ್ನು ಕಟ್ಟಿಕೊಂಡು ಹೋಗುವಾಗ ಕನಿಷ್ಠ ನಾಲ್ಕೈದು ಗಾಡಿಗಳು ಒಟ್ಟಿಗೆ ಹೋಗಬೇಕಾಗಿತ್ತೆಂದು, ಪ್ರಾಣಿಗಳನ್ನು ಹೆದರಿಸುವುದಕ್ಕೆ ಪಂಜುಗಳನ್ನು ಬಳಸುತ್ತಿದ್ದರೆಂದು, ಹಾಗಿದ್ದೂ ಅದ್ಯಾರನ್ನೋ ಹುಲಿ ಹಿಡಿದುಕೊಂಡು ಹೋಗಿತ್ತೆಂದು .. ಹೀಗೆ ಎಂದು ಎಂದು ಎಂದು ಸೇರಿಸಿ ಹೇಳುತ್ತಿದ್ದ ವಿಚಾರಗಳು ನೂರಾರು ಇದ್ದವು.

ಎ ಎನ್ ಮೂರ್ತಿರಾಯರ `ವ್ಯಾಘ್ರಗೀತೆ’ ಪ್ರಬಂಧದಲ್ಲಿ ಬರುವ, ಖಿರ್ದಿ ಎಸೆದು ಹುಲಿಯಿಂದ ತಪ್ಪಿಸಿಕೊಂಡ ಶಾನುಭೋಗರು ಅದರಲ್ಲಿ ಸೇರಿಹೋಗಿದ್ದರು! ಈ ರಾಮನಹಳ್ಳಿ ಕಾಡಿನಲ್ಲಿ ಒಂದು ಭಯಂಕರ (!) ತಿರುವು! ಪ್ರತಿಬಾರಿ ಅರಸೀಕೆರೆಗೆ ಹೋಗುವಾಗ ನಾವೆಲ್ಲಾ ಬಸ್ ಮಗುಚಿ ಬಿದ್ದು ಸತ್ತೇಹೋಗಿಬಿಡುತ್ತೇವೇನೋ ಎಂದು ಆತಂಕಪಟ್ಟುಕೊಳ್ಳುತ್ತಿದ್ದೆವು.

ಮೊನ್ನೆ ಊರಿಗೆ ಹೋಗಿದ್ದಾಗ ಈ `ಭಯಂಕರ ಕಾಡ’ನ್ನು ನೋಡಿ ಜೋರಾಗಿ ನಕ್ಕುಬಿಟ್ಟೆ. `ತಿರುವ’ನ್ನು ನೋಡಿದ ಮೇಲೆ ಹೊಟ್ಟೆ ಹುಣ್ಣಾಗುವುದು ಬಾಕಿ ಉಳಿಯಿತು. ಕೊಬ್ಬರಿ ಸಾಗಿಸುತ್ತಿದ್ದ ಗೋವಿಂದಪ್ಪನ ವ್ಯಾನು, ಅರಸೀಕೆರೆಯ ಪೆದ್ದಯ್ಯ ಶೆಟ್ಟರ ಅಂಗಡಿ, ಅಯ್ಯನವರ ಮಂಡಿ, ರತ್ನ ಥೀಯೇಟರ್, ರೈಲ್ವೆ ಸ್ಟೇಷನ್ (ಜಂಕ್ಷನ್), ಬಸ್ ಸ್ಟ್ಯಾಂಡು, ಗರುಡನಗಿರಿ ಸುಬ್ಬರಾಯರ ಪೇಪರ್ ಅಂಗಡಿ (?) ಇವೆಲ್ಲ ನಮ್ಮ ಮಾತುಗಳಲ್ಲಿ ಬಂದು ಹೋಗುತ್ತಿದ್ದ ಮಾಮೂಲಿ ವಿಚಾರಗಳು.

`ರಾಮ’ ಶಬ್ದಕ್ಕೆ ರಾಜಕೀಯ ಸೇರಿರದ ಕಾಲ ಅದು!

ಹಾಗೆ ನೋಡಿದರೆ ನಮ್ಮೂರಲ್ಲಿ ರಾಮನನ್ನು ಪೂಜೆ ಮಾಡುತ್ತಿದ್ದವರನ್ನು ಕಾಣೆ! ಹರಿಹರೇಶ್ವರ, ರೇವಣಸಿದ್ದೇಶ್ವರ ಹೊಳಲಕೆರೆಯ ರಾಮೇಶ್ವರ….ಈಶ್ವರಮಯ .. ನಮ್ಮ ಮನೆಯಲ್ಲಿ ಮಾತ್ರ `ರಾಮನವಮಿ’ಯನ್ನು ಭರ್ಜರಿಯಾಗಿ ಆಚರಿಸುತ್ತಿದ್ದರು. ಪೂಜೆ, ಗೀಜೆ, ವ್ರತ ಕಥೆ ಇತ್ಯಾದಿಗಳನ್ನು ಅಷ್ಟಾಗಿ ಕಂಡವಳಲ್ಲ.. ಅಡಿಗರ `ಶ್ರೀರಾಮನವಮಿಯ ದಿವಸ’ದಂತೆ ಪಾನಕ, ಪನಿವಾರ, ಕೋಸಂಬರಿಯ ಸಮಾರಾಧನೆ!

ಫ್ರಾಕ್ ಹಾಕಿಕೊಳ್ಳುತ್ತಿದ್ದ ನಾನು ಅವತ್ತು ಲಂಗ, ಬ್ಲೌಸ್ ತೊಟ್ಟು, ಹಸಿರುಬಳೆ ಹಾಕಿಕೊಂಡು, ಎರಡು ಜಡೆಗಳಲ್ಲಿ ಒಂದಕ್ಕೆ ಗೊರಟೆ ಹೂ (ಸ್ಪಟಿಕ) ಮುಡಿದುಕೊಂಡು, ಅಕ್ಕಂದಿರ, ವಿಶೇಷವಾಗಿ ಸರೋಜಳ ಕೈ ಹಿಡಿದು ಊರಿನ ಮುಂದೆ ಇದ್ದ ಬ್ಯಾಂಕ್ ಮ್ಯಾನೇಜರ್, ಮೇಷ್ಟ್ರುಗಳು, ಜನಕರಾಯರು, ನೆರೆಮನೆ… ಹೀಗೆ ಅನೇಕ ಮನೆಗಳಿಗೆ ಹೋಗಿ ಕುಂಕುಮದ ಬಟ್ಟಲನ್ನು ಹಿಡಿದು, `ವಸಂತಕ್ಕೆ ನಮ್ಮನೆಗೆ ದಯವಿಟ್ಟು ಎಲ್ಲರು ಬನ್ನಿ’ ಎಂದು ಕರೆಯುತ್ತಿದ್ದೆ.

ಸಾಧಾರಣವಾಗಿ ಹನ್ನೊಂದೋ, ಹನ್ನೆರಡು ಗಂಟೆಗೋ ಕರೆದವರು ಬರುತ್ತಿದ್ದರು. ಎರಡು ದಿನಗಳ ಮೊದಲೇ ಕೆಕ್ಕರಿಕೆ, ಕರಬೂಜ, ಸಿದ್ದೋಟೆ, ಬನಾಸ್ಪತ್ರೆ (ಆಕಾರಗಳಲ್ಲಿ ಸ್ವಲ್ಪ ಬೇರೆ, ರುಚಿ ಒಂದೇ..ಇವುಗಳ ವ್ಯತ್ಯಾಸವನ್ನು ಬಲ್ಲವರು ಹೇಳಿದರೆ ಒಳ್ಳೆಯದು ) ಇತ್ಯಾದಿಗಳನ್ನು ಸಂತೆಯಿಂದ ತಂದಿಟ್ಟಿರುತ್ತಿದ್ದೆವು.

ಆ ದಿನ ಅಟ್ಟದಲ್ಲಿದ್ದ ದೊಡ್ಡ ದೊಡ್ಡ ಕೊಳಗಗಳು ಅಡುಗೆ ಮನೆಗೆ ಇಳಿಯುತ್ತಿದ್ದವು. ಒಂದೊಂದು ಕೊಳಗದಲ್ಲೂ ಒಂದೊಂದು ಬಗೆ ..ಮೊದಲೆಲ್ಲ ಬೆಲ್ಲ ಹಾಕಿ ಬೇಲದ ಹಣ್ಣಿನ ಪಾನಕ ಮಾಡುತ್ತಿದ್ದರು. ಸಿದ್ದೋಟೆಯಲ್ಲೂ ಬೆಲ್ಲ ಹಾಕಿ ಪಾನಕ ಮಾಡುತ್ತಿದ್ದ ನೆನಪು. ಆಮೇಲೆ ನಿಂಬೆ ಹಣ್ಣಿನಲ್ಲಿ ಪಾನಕ ಮಾಡುವುದು ರೂಢಿಯಾಯಿತು. ನೀರು ಮಜ್ಜಿಗೆಗೆ ಕರಿಬೇವಿನ ಒಗ್ಗರಣೆ, ಕಡಲೆಬೇಳೆ ಅಥವಾ ಹೆಸರುಬೇಳೆ ಕೋಸಂಬರಿ.. ಬಾಳೆಹಣ್ಣಿಗೆ ಬೆಲ್ಲ, ಕಾಯಿತುರಿ, ಏಲಕ್ಕಿ ಹಾಕಿದ ರಸಾಯನ..

ಬಂದವರಿಗೆಲ್ಲ ಪಾನಕ ಕೊಟ್ಟು ಉಪಚರಿಸುತ್ತ, ಒಣಗಿದ ಮುತ್ತುಗದ ಎಲೆಯಲ್ಲಿ ರಸಾಯನ, ಕೋಸಂಬರಿ ಜೋರದಂತೆ ಹಿಡಿದು ದಿವಾನಖಾನೆಯಲ್ಲಿ ಸಂಭ್ರಮದಿಂದ ಸರಭರ ಮಾಡುವುದು.. ಬಂದವರೆಲ್ಲ, `ನಿಮ್ಮ ಮನೆಯ ಹೆಣ್ಣುಮಕ್ಕಳು ಎಷ್ಟು ಚೆನ್ನಾಗಿದ್ದಾರೆ’, ಅಂದರೆ ಅಣ್ಣನಿಗೆ ಖುಷಿಯೋ ಖುಷಿ! ನನ್ನ ನೋಡಿ `ಈ ಹುಡುಗಿ ಕಣ್ಣು ಇಷ್ಟಿಷ್ಟಗಲ’ ಎಂದು ಉದ್ಗಾರ ತೆಗೆಯುತ್ತಿದ್ದರು. ಎಲ್ಲರ ಮನೆಗೂ ಹೋಗಿ ಪಾನಕ ಕುಡಿದು, ಕೋಸಂಬರಿ, ರಸಾಯನ ತಿಂದು ಆ ದಿನ ಊಟ ಮಾಡುತ್ತಲೇ ಇರಲಿಲ್ಲ..

ಚೈತ್ರ, ವೈಶಾಖ`ವಸಂತ ಋತು’ ಅಂತ ಅಜ್ಜ ಹೇಳಿಕೊಟ್ಟಿದ್ದು ಅರ್ಥವಾಗಿದ್ದು `ವಸಂತಕ್ಕೆ ಬನ್ನಿ’ ಎಂದು ಕರೆದು ಎಲ್ಲರೊಂದಿಗೆ ಕೂತು ಕುಡಿಯುತ್ತಿದ್ದ ಪಾನಕದ ಮೂಲಕ!

1 Response

  1. M R kamala says:

    Thanks a lot Avadhi

Leave a Reply

%d bloggers like this: