fbpx

ಅವರು ‘ಆನಂದಿಬಾಯಿ’

ಇಂದು ಆನಂದಿಬಾಯಿ ಜೋಶಿ ಅವರ ಹುಟ್ಟುಹಬ್ಬ. ದೇಶದ ಮೊದಲ ಮಹಿಳಾ ವೈದ್ಯೆಯ ಸಾಧನೆಯನ್ನು ಗೂಗಲ್ ತನ್ನ ಡೂಡಲ್ ಮೂಲಕ ಗೌರವಿಸಿದೆ. 

ಪತ್ರಕರ್ತ ಚಂದ್ರಶೇಖರ ಮಂಡೆಕೋಲು ‘ಆನಂದಿಬಾಯಿ’ ನಡೆದಾಡಿದ ನೆಲದಲ್ಲಿ ಸಾಕ್ಷ್ಟು ಮಾಹಿತಿ ಸಂಗ್ರಹಿಸಿ ಬರೆದ ಪುಸ್ತಕ ಸಾಕ್ಷ್ಟು ಜನರ ಗಮನ ಸೆಳೆದಿದೆ. 

ಆ ಕೃತಿಗೆ ಹಿರಿಯ ವಿದ್ವಾಂಸರಾದ ಡಾ. ಬಿ. ಎ. ವಿವೇಕ ರೈ ಬರೆದ ಮುನ್ನುಡಿ ಇಲ್ಲಿದೆ

ಸಾಮಾನ್ಯವಾಗಿ ಒಂದು ಪುಸ್ತಕಕ್ಕೆ ಮುನ್ನುಡಿ ಬರೆಯುವ ಮೊದಲು ಪುಸ್ತಕವನ್ನು ಓದುವುದು ನನ್ನ ಪಾಲಿಗೆ ಸಂತಸದ ಸಂಭ್ರಮದ ಸಂಗತಿ . ಆದರೆ ಚಂದ್ರಶೇಖರ ಮಂಡೆಕೋಲು ಅವರು ಬರೆದ ‘ಆನಂದಿಬಾಯಿ ಜೋಶಿ ‘ ಅವರ ಜೀವನಚರಿತ್ರೆ ಓದಿದಾಗ ಮತ್ತು ಓದಿದ ಬಳಿಕ ನನಗಾದ ಸಂಕಟ ಮತ್ತು ನೋವು ವಿವರಿಸಲು ಅಸಾಧ್ಯ.

ಒಂದು ಹೆಣ್ಣಿನ ಬದುಕು ಇಷ್ಟೆಲ್ಲಾ ಯಾತನಾ ಪ್ರಪಂಚದ ಮೂಲಕ ಹಾದುಹೋದಬಹುದೇ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಕನ್ನಡ ಸಾಹಿತ್ಯದ ಜೀವನ ಚರಿತ್ರೆ ಗ್ರಂಥಗಳ ಇತಿಹಾಸದಲ್ಲಿ ಮತ್ತು ಹೆಣ್ಣಿನ ಸಾಹಸಗಾಥೆಯ ಚರಿತ್ರೆಯಲ್ಲಿ ‘ಆನಂದಿಬಾಯಿ ಜೋಶಿ ‘ ಒಂದು ಅಪೂರ್ವ ದಾಖಲೆಯಾಗಿ ಉಳಿಯುತ್ತದೆ .

೧೮೬೫ರ ಮಾರ್ಚ್ ೩೧ರಂದು ಪುಣೆಯ ಬಾಜೀರಾವ್ ರಸ್ತೆಯ ಪೇಶ್ವೆ ಮನೆತನದ ಚಿತ್ ಪಾವನ್ ಮನೆಯಲ್ಲಿ ಜನಿಸಿದ ಹುಡುಗಿ ಯಮುನೆ ಒಂಬತ್ತು ವರ್ಷದ ಬಾಲಕಿಯಾಗಿದ್ದಾಗ ಗೋಪಾಲ ಜೋಶಿಯನ್ನು ಮದುವೆಯಾಗಿ, ಆನಂದಿಬಾಯಿ ಆಗಿ ಮುಂದೆ ಕಲಿಕೆ, ಹಿಂಸೆ, ನಿಂದೆ ಎಲ್ಲವನ್ನೂ ಅನುಭವಿಸಿ, ಕಲಕತ್ತಾಕ್ಕೆ ಬಂದು ಅಲ್ಲಿಂದ ಹಡಗಿನಲ್ಲಿ ಒಬ್ಬಂಟಿಯಾಗಿ ಇಂಗ್ಲೆಂಡ್ ಗೆ ಬಂದು, ಮುಂದಕ್ಕೆ ಅಮೆರಿಕಕ್ಕೆ ಹೋಗಿ ಅಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದು ಬಂದು, ಮತ್ತೆ ಭಾರತಕ್ಕೆ ಹಿಂದಿರುಗಿ, ಕ್ಷಯ ರೋಗಕ್ಕೆ ತುತ್ತಾಗಿ ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ತಾನು ಹುಟ್ಟಿದ ಮನೆಯಲ್ಲೇ ಸಾವನ್ನು ಅಪ್ಪಿದ ದುರಂತ ಕಥನವನ್ನು ಚಂದ್ರಶೇಖರ ಮಂಡೆಕೋಲು ಅವರು ಬಹಳ ಪರಿಶ್ರಮದಿಂದ ಅಪೂರ್ವ ಮಾಹಿತಿಗಳನ್ನು ಕಲೆಹಾಕಿ ಇಲ್ಲಿ ಅನಾವರಣ ಮಾಡಿದ್ದಾರೆ. ಭಾರತದ ಮೊತ್ತಮೊದಲನೆಯ ಪದವೀಧರ ಮಹಿಳಾ ವೈದ್ಯೆಯ ಸಾಹಸಮಯ ದಾರುಣ ವ್ಯಕ್ತಿಚಿತ್ರವೊಂದು ಇಲ್ಲಿ ಅದ್ಭುತವಾಗಿ ಮಾರ್ಮಿಕವಾಗಿ ಕಟ್ಟಲ್ಪಟ್ಟಿದೆ .

ಚಂದ್ರಶೇಖರ ಮಂಡೆಕೋಲು ಅವರು ಬರೆದ ‘ಆನಂದಿಬಾಯಿ ಜೋಶಿ ‘ ಎಂಬ ಈ ಜೀವನಚರಿತ್ರೆ ಅನೇಕ ದೃಷ್ಟಿಗಳಿಂದ ವಿಶಿಷ್ಟವಾಗಿದೆ . ಭಾರತದ ಮೊತ್ತಮೊದಲನೆಯ ಪದವೀಧರ ಮಹಿಳಾ ವೈದ್ಯೆಯನ್ನು ಕುರಿತು ಕನ್ನಡದಲ್ಲಿ ಬರೆದಿರುವ ಮೊದಲನೆಯ ಗ್ರಂಥ ಇದು ಆಗಿದೆ. ಸಾಂಪ್ರದಾಯಿಕ ಮರಾಠಿ ಬ್ರಾಹ್ಮಣ ಹೆಣ್ಣೊಬ್ಬಳು ಸಂಪ್ರದಾಯದ ಎಲ್ಲ ಕಟ್ಟುಪಾಡುಗಳನ್ನು ಮೀರಿ ೧೫೦ ವರ್ಷಗಳ ಹಿಂದೆ ಏಕಾಂಗಿಯಾಗಿ ಹಡಗಿನಲ್ಲಿ ಅಮೆರಿಕಕ್ಕೆ ಪ್ರಯಾಣ ಮಾಡಿದ ಮತ್ತು ಅಲ್ಲಿ ಅಮೇರಿಕನ್ ಮೆಡಿಕಲ್ ಕಾಲೇಜಿನಲ್ಲಿ ತನ್ನ ಸ್ವಂತ ಪರಿಶ್ರಮದ ಓದಿನಿಂದ ಪ್ರವೇಶ ಪಡೆದ ಹಾಗೂ ಉನ್ನತ ಶ್ರೇಣಿಯ ಸಹಿತ ಪದವಿ ಪಡೆದ ಮತ್ತು ಸನ್ಮಾನದ ಅಪೂರ್ವ ಗೌರವ ಪಡೆದ ಸಮಗ್ರ ದಾಖಲೆಗಳ ವಿವರಣಾತ್ಮಕ ಸಂಕಥನವಾಗಿ ಇದು ಮಹತ್ವದ ಗ್ರಂಥವಾಗಿದೆ .

ಈ ಜೀವನಚರಿತ್ರೆ ಗ್ರಂಥದ ರಚನೆಗಾಗಿ ಚಂದ್ರಶೇಖರ ಅವರು ನಡೆಸಿದ ಶೋಧದ ಬಹುಬಗೆಗಳು ಒಂದು ಉತ್ತಮ ಸಂಶೋಧನಾ ಗ್ರಂಥ ರಚನೆಯ ಅಧ್ಯಯನದ ಮಾದರಿಯವು .. ಪುಣೆಯ ಬೀದಿಗಳಲ್ಲಿ ಅಲೆದಾಡುವ ಕ್ಷೇತ್ರಕಾರ್ಯದ ಮೂಲಕ ಪಡೆದ ಮಾಹಿತಿಗಳು ಮತ್ತು ಆ ಭೂಪ್ರದೇಶಗಳನ್ನು ಎಲ್ಲಾ ಆನಂದಿಬಾಯಿ ಬದುಕಿನ ಸಂಬಂಧದ ತೀವ್ರ ಭಾವದನಂಟಿನ ಮೂಲಕದ ಗ್ರಹಿಕೆ ಈ ಗ್ರಂಥಕ್ಕೆ ಭಾವಕೋಶದ ಆವರಣವನ್ನು ನಿರ್ಮಾಣಮಾಡಿದೆ .

ಹಳೆಯ ಪತ್ರಗಳು, ದಾಖಲೆಗಳು,ಅಪೂರ್ವ ಫೋಟೋಗಳು, ಇಮೈಲ್ ಸಂದೇಶಗಳು, ದೇಶ ವಿದೇಶಗಳ ಹಳೆಯ ಪತ್ರಿಕೆಗಳಲ್ಲಿನ ಉಲ್ಲೇಖಗಳು, ಸಂದರ್ಶನಗಳು- ಹೀಗೆ ಬಹುಮುಖೀ ವಿಧಾನಗಳಿಂದ ಚಂದ್ರಶೇಖರ ಅವರು ಸಂಗ್ರಹಿಸಿದ ಮಾಹಿತಿಶರೀರವೇ ಒಂದು ಅದ್ಭುತ ಕಥಾನಕದಂತೆ ಇದೆ. ಮುಕ್ತ ಆರ್ದ್ರ ಮನಸ್ಸು, ಅಧ್ಯಯನಶೀಲ ಪ್ರವೃತ್ತಿ, ವಿಭಿನ್ನ ಆಕರಗಳನ್ನು ಕಲೆಹಾಕಿ ಜೋಡಿಸುವ ಕಲೆಗಾರಿಕೆ, ಮಾನವಪ್ರೀತಿಯ ಕಾಳಜಿ – ಇವೆಲ್ಲ ಅಂಶಗಳು ಈ ಗ್ರಂಥದಲ್ಲಿ ಅಂತರ್ಗತವಾಗಿವೆ .

ಗ್ರಂಥದ ಆರಂಭವು ಹೆಣ್ಣು ಮತ್ತು ಆರೋಗ್ಯದ, ಹೆಣ್ಣು ಮತ್ತು ಪಾಲನೆಯ ಸಂಬಂಧಗಳನ್ನು ವಿವರಿಸುತ್ತಾ ಇಡೀ ಕೃತಿಯ ಆಶಯಕ್ಕೆ ಮುನ್ನುಡಿಯಯನ್ನು ಬರೆಯುತ್ತದೆ. ಹೆಣ್ಣೊಬ್ಬಳು ವೈದ್ಯವೃತ್ತಿಯನ್ನು ಕಲಿಯಬೇಕಾದ ಅಗತ್ಯದ ಆವರಣವನ್ನು ನಿರ್ಮಾಣಮಾಡುತ್ತದೆ .

೧೯ನೇ ಶತಮಾನದ ಬ್ರಿಟಿಷ್ ಆಡಳಿತದ ಒಳಗಿನ ಭಾರತೀಯರ ತುಮುಲಗಳನ್ನು ಚಿತ್ರಿಸುತ್ತಾ, ಸಾಂಪ್ರದಾಯಿಕ ಮರಾಠಿ ಬ್ರಾಹ್ಮಣ ಮನೆತನದ ಒಳಗಿನ ಹೆಣ್ಣುಗಳ ಸಾಂಸ್ಕೃತಿಕ ಬಂಧನದ ನೋವನ್ನು ಅನಾವರಣ ಮಾಡುತ್ತದೆ. ವಿದೇಶಿ ಮತ್ತು ದೇಶೀ ಸಂಸ್ಕೃತಿಗಳ ಮುಖಾಮುಖಿಯ ಚರ್ಚೆ ಈ ಗ್ರಂಥದ ಬೇರೆ ಬೇರೆ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹಿಂದೂಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವ ಒತ್ತಡಗಳು ಮತ್ತು ಪ್ರತಿರೋಧಗಳ ವಿವೇಚನೆ ಸಾಕಷ್ಟು ಬಾರಿ ಕಾಣಿಸಿಕೊಂಡಿದೆ. ಭಾರತೀಯ ಅನನ್ಯತೆಯನ್ನು ಅದರ ಆಚರಣೆ ಆಹಾರ ಉಡುಗೆತೊಡುಗೆಗಳಲ್ಲಿ ಉಳಿಸಿಕೊಂಡು ಬರುವ ಆನಂದಿಬಾಯಿ ಜೋಶಿ ವಿದೇಶಿ ಪ್ರಭಾವದ ಇಂಗ್ಲಿಷ್ ಶಿಕ್ಷಣವನ್ನು ಪಡೆಯುತ್ತಾಳೆ, ಅಮೆರಿಕಕ್ಕೆ ಪ್ರಯಾಣಮಾಡಿ ಅಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆಯುತ್ತಾಳೆ.

ಅಲ್ಲಿ ಉದ್ಯೋಗದ ಅವಕಾಶ ದೊರೆತರೂ ಅದನ್ನು ನಿರಾಕರಿಸಿ, ತನ್ನ ದೇಶದಲ್ಲೇ ಮಹಿಳೆಯರ ಸೇವೆ ಮಾಡಬೇಕೆಂದು ಭಾರತಕ್ಕೆ ಮರಳುತ್ತಾಳೆ. ಅವಳ ಬದುಕಿನ ನಿರ್ಧಾರಗಳಲ್ಲೇ ಪರಂಪರೆ ಮತ್ತು ಆಧುನಿಕತೆಗಳನ್ನು ಸಮನ್ವಯಗೊಳಿಸಿದ ಒಂದು ಅಪೂರ್ವ ಮಾದರಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ವ್ಯಕ್ತಿಚಿತ್ರವು ಮಹಿಳೆಯರಿಗೆ ಒಂದು ತಾತ್ವಿಕ ಪಠ್ಯವಾಗಿಯೂ ಅಧ್ಯಯನಕ್ಕೆ ಯೋಗ್ಯವಾಗಿದೆ.

ಚಂದ್ರಶೇಖರ ಮಂಡೆಕೋಲು ಅವರು ತಮ್ಮ ಈ ಗ್ರಂಥದಲ್ಲಿ ಸಣ್ಣ ಸಣ್ಣ ಶೀರ್ಷಿಕೆಗಳನ್ನು ಕೊಡುತ್ತಾ ಆನಂದಿಬಾಯಿಯ ಸಾಹಸಯಾನದ ಕೊಂಡಿಗಳನ್ನು ಜೋಡಿಸುತ್ತಾ ಹೋಗುತ್ತಾರೆ. ಅವರು ಈ ರೀತಿ ಕೊಡುವ ಉಪಶೀರ್ಷಿಕೆಗಳೇ ಅರ್ಥಪೂರ್ಣವಾಗಿವೆ ಮತ್ತು ಸಂಕಥನದ ಆಶಯಗಳನ್ನು ಸೂಚಿಸಲು ನೆರವಾಗುತ್ತವೆ.

ಕನಸಲ್ಲಿ ಅಲೌಕಿಕ ಅನುಭವ, ಅಪ್ಪನ ಪ್ರೀತಿ ಅಮ್ಮನ ಹಿಂಸೆ, ಮಿಷನರಿ ರಾಜಕಾರಣದೊಳಗೆ ಕಮರಿದ ಕನಸು, ಅಮೇರಿಕಾದ ಮಹಿಳೆಗೆ ಹಲ್ಲುನೋವು, ಅವಳ ಛಾತಿಗೆ ಬ್ರಿಟಿಷ್ ಸರಕಾರವೇ ಮೆಚ್ಚಿತ್ತು, ದೋಣಿ ಯಾವ ದಡ ತಲುಪುವುದೋ, ಬಲ್ಬ್ ಕಂಡುಹಿಡಿದ ಊರು ಅದು,ರೊಸೆಲ್ಲೆಯ ಜನರಿಗೆ ಆನಂದಿಯ ಕೈಯಡುಗೆ, ಸಂಘರ್ಷಗಳಿಂದಲೇ ತಲೆ ಎತ್ತಿದ ಕಾಲೇಜು, ಚರ್ಚ್ ನಲ್ಲೆ ಧರ್ಮದ ಚರ್ಚೆ, ಸಪ್ತ ಕಡಲುಗಳು ಸಾಕ್ಷಿಯಾದ ಸಂಬಂಧ, ಗೋಪಾಲನ ಮಹಾಯಾನ, ಸಾಕಾರಗೊಂಡ ಪರಮ ಕ್ಷಣ, ಆನಂದಿಗೆ ಉದ್ಯೋಗದ ಅವಕಾಶಗಳು, ಅಮೇರಿಕಾದಲ್ಲಿ ಭಾವಪೂರ್ಣ ವಿದಾಯ, ತವರು ನಾಡಲ್ಲಿ ಹೂಮಳೆಯ ಸ್ವಾಗತ, ಹುಟ್ಟಿದ ಮನೆಯಲ್ಲೇ ಕೊನೆಯ ದಿನಗಳು, ನಿಜದ ನಕ್ಷತ್ರವಾದಳು: ಇಂತಹ ಅನೇಕ ಅರ್ಥಪೂರ್ಣ ಉಪಶೀರ್ಷಿಕೆಗಳು ಆನಂದಿಬಾಯಿ ಬದುಕಿನ ಅನಿರೀಕ್ಷಿತ ತಿರುವಿನ ಮೆಟ್ಟಿಲುಗಳಾಗಿ ಇಲ್ಲಿ ಕಾಣಿಸಿಕೊಳ್ಳುತ್ತವೆ. ಆನಂದಿಬಾಯಿ ನಿಧನದ ಬಳಿಕ ಬಂದ ಜೀವನಚರಿತ್ರೆ ವಿವಾದಕ್ಕೆ ಒಳಗಾದ ಸನ್ನಿವೇಶ ಮತ್ತು ಬಳಿಕದ ಭಾರತದಲ್ಲಿ ಹೆಣ್ಣುಗಳಿಗೆ ವೈದ್ಯಕೀಯ ಕಾಲೇಜುಗಳ ಬಾಗಿಲುಗಳು ತೆರೆದುಕೊಂಡ ಇತಿಹಾಸದ ಅರುಣೋದಯದ ಚಿತ್ರಣದೊಂದಿಗೆ ಈ ಸಂಕಥನ ಕೊನೆಯಾಗುತ್ತದೆ .

ಆನಂದಿಬಾಯಿಯ ಜೀವನಗಾಥೆಯ ಈ ಗ್ರಂಥ ಇವತ್ತು ಸಾಂಸ್ಕೃತಿಕವಾಗಿ ಅನೇಕ ರೀತಿಯಲ್ಲಿ ಪ್ರಸ್ತುತವಾಗಿದೆ, ಮಹತ್ವದ್ದಾಗಿದೆ. ಹೆಣ್ಣು, ದೇಹ ಮತ್ತು ಆರೋಗ್ಯ ಎಂಬ ಮೂರು ಪರಿಕಲ್ಪನೆಗಳ ಮೇಲೆ ಆಚಾರ, ಧರ್ಮ, ಶಿಕ್ಷಣ, ಉದ್ಯೋಗ, ಸೇವೆ, ದೇಶ-ವಿದೇಶ, ವೈದ್ಯಕೀಯ ವೃತ್ತಿಯಂತಹ ಬಹುಮುಖಿ ಸಂಗತಿಗಳು ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ. ಸ್ತ್ರೀವಾದಿ ಅಧ್ಯಯನ ಎನ್ನುವ ಸರಳ ಸಮೀಕರಣವನ್ನು ಮೀರಿ, ಈ ಗ್ರಂಥ ಒಂದು ಸಾಂಸ್ಕೃತಿಕ ಪಠ್ಯವಾಗಿ ಮುಖ್ಯವಾಗುತ್ತದೆ. ಇಂತಹ ಸಾಂಸ್ಕೃತಿಕ ಸಾಹಸಕ್ಕಾಗಿ ಸಾಹಿತ್ಯ ಮಾಧ್ಯಮ ಹಾಗು ಸಂಸ್ಕೃತಿಯ ತರುಣ ಅನ್ವೇಷಕ ಚಂದ್ರಶೇಖರ ಮಂಡೆಕೋಲು ಅವರನ್ನು ಅಭಿನಂದಿಸಲು ಅಭಿಮಾನಪಡುತ್ತೇನೆ.

2 Responses

  1. P Bilimale says:

    Very good forward for an excellent book

  2. ಎಸ್.ಎಸ್ ಎಲ್.ಸಿಯಲ್ಲಿದ್ದಾಗ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲೋದಿ ಮೆಚ್ಚಿದ ಡಾ. ಆನಂದಿ ಬಾಯಿ ಜೋಶಿ ಬಗೆಗಿನ ಲೇಖನ ಹುಟ್ಟಿಸಿದ ಆಸಕ್ತಿ ಇದೀಗ ಚಂದ್ರಶೇಖರ ಮಂಡೆಕೋಲು ಅವರ ಪುಸ್ತಕ ಕೊಂಡು ಓದಲೆ ಬೇಕು ಎಂದನಿಸುವಂತೆ ಮಾಡಿದೆ. ದಾ.ವಿವೇಕ ರೈ ಅವರ ಈ ಮುನ್ನುದಿಯನ್ನೋದಿದ ಮೇಲೆ ಆ ಕಾತರ ಹೆಚ್ಚಿದೆ.

Leave a Reply

%d bloggers like this: