fbpx

ಅವಳಿಗೆ ನಾನೊಂದು ಕನ್ಫೆಷನ್ ಬಾಕ್ಸ್..

ವಿಜಯಕ್ಕ ‘ಅಜ್ಜಿಮನೆ’ 

ಮೊನ್ನೆ 2 ಗಂಟೆಯ ಶೋಗೆ ಒಂದೂವರೆಗೆ ಥಿಯೇಟರ್ ತಲುಪಿದೆ..

ನಂತರವೇ ಗೊತ್ತಾದದ್ದು.. ನಾನು ನೋಡಲು ಹೊರಟ ಸಿನಿಮಾ ಇದ್ದದ್ದು 4 ಗಂಟೆಗೆ..

ಅಷ್ಟು ದೂರ ಹೋಗಿ ವಾಪಸ್ ಬರೋದಕ್ಕಿಂತ ಥಿಯೇಟರ್ ಹತ್ತಿರವಿದ್ದ ಫ್ರೆಂಡ್ ಮನೆಗೆಹೋದೆ.. ಅಕಸ್ಮಾತ್ ಅವಳು ಇಲ್ಲದಿದ್ರೆ.. ಅನ್ನೋ ಡೌಟು ಸಹ ಇಲ್ಲ. SSLC ಎಕ್ಸಾಮ್ ನಡಿಯುತ್ತಿರೋದರಿಂದ ಅವಳು ಮಗನ ಓದು ಬಿಟ್ಟು ಎಲ್ಲೂ ಹೋಗೋದು ಸಾಧ್ಯವಿಲ್ಲದ ಮಾತು..

LKG exam ಟೈಮಲ್ಲೇ ಮಗನನ್ನು ೫ ಗಂಟೆಗೇ ಎಬ್ಬಿಸಿ ಓದಿಸುತ್ತಿದ್ದ ಮಹಾರಾಯಿತಿ ಅವಳು. ಇನ್ನು SSLC  ಎಕ್ಸಾಮ್ ಅದೇನ್ ಮಾಡ್ತಾಳೋ…

30 ವರ್ಷದ ನಮ್ಮಸ್ನೇಹದಲ್ಲಿ ಕಳೆದ 15 ವರ್ಷದಿಂದ ಆಕೆಯ ಮಾತು ಯಾವಾಗಲೂ 4 ಮುಖ್ಯ ವಿಷಯಗಳ ಸುತ್ತಾ ಮಾತ್ರ ಸುತ್ತುತ್ತಿತ್ತು.

ಮೊದಲನೆಯದು ಆಕೆಯನ್ನು ಕಾಡುತಿರುವ ಅನಾರೋಗ್ಯ.. ಒಮ್ಮೆ ಮಂಡಿ ನೋವು.. ಇನ್ನೊಮ್ಮೆ ಥೈರೊಯ್ದು,  ಹಿಮ್ಮಡಿ ನೋವು..

ಎರಡನೇದು ಮಗನ ಬಗ್ಗೆ.. ಸಣ್ಣ ಮಗುವಿನಿಂದಲೂ ಏನು ಮಾಡಿದರೂ ಮಗ ಸರಿಯಾಗಿ ಊಟ ತಿಂಡಿ ತಿನ್ನದಿರೋದು. ಗಂಟೆಗಟ್ಟಲೆ ತಟ್ಟೆ ಮುಂದೆ ಕೂರುವುದು…ಇವಳು ಎತ್ತರದ ದನಿಯಲ್ಲಿ ಕಿರುಚೋದು… ಎಲ್ಲರಿಗೂ ಅಭ್ಯಾಸವಾಗಿ ಹೋಗಿತ್ತು. ಎಲ್ಲರೂ ಹೊಗಳುವ ಇವಳ ಅದ್ಬುತ ಅಡಿಗೆ, ತಿಂಡಿಯನ್ನ ಇವಳ ಮಗ ಕ್ಯಾರೆ ಅನ್ನದಿರೋದು ಇವಳಿಗೆ ತುಂಬಾ ಕೋಪ ಹಾಗೂ ನೋವಿನ ವಿಷಯವಾಗಿತ್ತು.. ಇವಳ ಮತ್ತು ಇವಳ ಅತ್ತೆಯ ಜಗಳ. ಅದಕಂತೂ ನೂರಾರು ಬಿಡಿ ಬಿಡಿ.ಕಾರಣಗಳು.

ನಾಲ್ಕನೆಯ ಸಮಸ್ಯೆ ಅಜ್ಜಿ-ಮೊಮ್ಮಗನ ಜಗಳ. ಅಜ್ಜಿಯನ್ನು ಕಂಡರಾಗದ ಮೊಮ್ಮಗ. ಸದಾ ಮೊಮ್ಮಗನನ್ನು ಛೇಡಿಸುವ ಅಜ್ಜಿ. ಬಹಳ ವರ್ಷಗಳಿಂದ ಕೇಳಿ, ಕೇಳಿ ನನಗೂ ಅಭ್ಯಾಸವಾದರೂ ಬಹಳ ಸಲ ಇದು ಹೀಗೆನಾ ಅನಿಸಿದ್ದಿದೆ..

ಅವಳಿಗೆ ನಾನೊಂದು ಕನ್ಫೆಷನ್ ಬಾಕ್ಸ್..

ನನ್ನ ಬಗ್ಗೆ ಅವಳಿಗಿರೋ ಪ್ರೀತಿ, ಗೌರವದ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಸುಮಾರು ಒಂದು ಗಂಟೆಯ ನಮ್ಮ ಫೋನ್ ಸಂಭಾಷಣೆಯಲ್ಲಿ ನಾನು ‘ನೋಡು ದುಡ್ಡು ಇಲ್ಲದಿದ್ದಾಗ ಅದೊಂದೇ ಸಮಸ್ಯೆಇತ್ತು. ಈಗ ದುಡ್ಡಿದೆ. ಸುಮ್ನೆ ಕಲ್ಪನೆ ಮಾಡ್ಕೋ ಇದೆಲ್ಲಾ ಸಮಸ್ಯೆ ಹೋಗಿ ದುಡ್ಡು ಒಂದೇ ಸಮಸ್ಯೆ ಆದ್ರೆ ಓಕೆನಾ?’ ಅಂದ ತಕ್ಷಣ ‘ಅಯ್ಯೋ ಬೇಡಪ್ಪಾ ನೆನಪಿದೆ ಆ ಕಷ್ಟದ ದಿನಗಳು ಸರಿಮಾಡ್ಕೊತೀನಿ’ಯಲ್ಲಿಗೆ ಮುಕ್ತಾಯವಾಗುತಿತ್ತು…..

ವರ್ಷವಾಯಿತೇನೋ.. ನಾನು ಅಕೆಗೆ ಸಿಗದೆ. ಸರಿಯಾಗಿ ಮಾತಾಡದೆ.

ಮಗ SSLC ಗೆ ಬಂದ ಮೇಲೆ ಆಕೆ ಎಲ್ಲೂ ಹೋಗುತ್ತಿರಲಿಲ್ಲ. ಇತ್ತೀಚೆಗೆ ಫೋನ್ ಕಮ್ಮಿಯಾಗಿತ್ತು.. ನನ್ನ ಸರ್ಪ್ರೈಸ್ ವಿಸಿಟ್ ಆಕೆಯಷ್ಟೇ ನನಗೂ ಮನಸ್ಸಿಗೆ ಖುಷಿ ಕೊಟ್ಟದ್ದು ಸುಳ್ಳಲ್ಲ. ‘ಹೇಗಿದ್ದಾರೆ ಎಲ್ಲಾ’ಅಂದೆ.

ಆಕೆಯ 4 ಸಮಸ್ಯೆಗಳ ಬಗ್ಗೆ ಕೇಳದೇ ಅದೆಷ್ಟು ದಿನವಾಗಿತ್ತು??

‘ಆರಾಮ್’ ಅಂದ್ಲು. ‘ಹೆಲ್ತ್ ಹೇಗಿದೆ’ ಅಂದೆ.. ‘ಯೋಗ ಶುರು ಮಾಡಿದ್ಮೇಲೆ ನೋವೆಲ್ಲಾ ತುಂಬಾ ಕಮ್ಮಿಯಾಗಿದೆ..’ ಅಂದ್ಲು
‘ಮನು ಎಲ್ಲಿ? ಓದ್ತಾ ಇದ್ದಾನ?’ ಅಂದೆ. ‘ಹುಂ..’ ಅಂತ ಹೇಳಿ ಮಹಡಿ ಕಡೆ ತಿರುಗಿ ‘ಯಾರು ಬಂದಿದ್ದಾರೆ ನೋಡು’ ಅಂತ ಮಗನನ್ನು ಕರೆದಳು.. ‘ಇರ್ಲೀ ಬಿಡು. ಡಿಸ್ಟರ್ಬ್ ಮಾಡ್ಬೇಡ’ ಅಂದೆ..

‘ಅದೆಂತಾ ಡಿಸ್ಟರ್ಬ್ ಆಗೋದು’ ಅಂದಳು. ಅಮ್ಮನ ಒಂದೇ ಕೂಗಿಗೆ ಇಳಿದು ಬಂದ. ಸ್ವಲ್ಪ ಹೊತ್ತು ಮಾತು ಕಥೆ ನಡೀತು.. ಊಟಕ್ಕೆ ಬಾರೋ ಎಂದ ಕೂಡಲೇ ಟೇಬಲ್ ಮುಂದೆ ಕುಳಿತ. ‘ಏನ್ ಸಾರು’ ಅಂದ. ನಂಗೆ ಷಾಕ್..!… ಅವರೇಕಾಯಿ ಹೀತಕವ್ರೆ. ‘ವಾವ್’ ಅಂತ ಉದ್ಗಾರ ತೆಗೆದ. ‘ಅಜ್ಜಿ ಊಟ ಆಯ್ತಾ?’ ಅಂದ.. ‘ಇಲ್ಲ ಲೇಟಾಗಿ ತಿಂಡಿ ತಿಂದು ಮಲಗಿದ್ರು. ನೋಡ್ಕೊಂಡು ಬಾ’ ಅಂದ ಕೂಡಲೇ ಓಡಿದ. ಐದೇ ನಿಮಿಷದಲ್ಲಿ ಅಜ್ಜಿ ಮೊಮ್ಮಗ ನಗುತ್ತಾ ಕೆಳಗಿಳಿದು ಬಂದು ಊಟಕ್ಕೆ ಕೂತರು. ‘ಮೊಮ್..ಸಾರು ಯಮ್ಮಿ..’ ಅಂದ.

‘ನೀನೂ ಕೂತ್ಕೊಂಡ್ ಬಿಡು’ ಅಂದ್ರು ಅತ್ತೆ. ದ್ವನಿಯಲ್ಲಿ ಪ್ರೀತಿಯಿತ್ತು. ‘ನಾವಿಬ್ರೂ ಆಮೇಲೆ ಮಾಡ್ತಿವಿ. ತುಂಬಾ ಮಾತಾಡೋದಿದೆ’ ಅತ್ತೆಯೊಂದಿಗೆ ಅವಳ ಮಾತು ತೀರಾ ಸಹಜವಾಗಿತ್ತು. ನಮ್ಮಿಬ್ಬರ ಊಟ, ಮಾತುಕತೆ ನಂತರ ಹೊರಟು ನಿಂತೆ. ನಾನೂ ಬರ್ತೀನಿ ಕಣೆ ಫಿಲ್ಮ್ ಗೆ ಅಂದ್ಲು..

‘ನಾಳೆ exam ಇಲ್ವಾ..ಅಂದೆ..ಇದೆ..ಓದ್ಕೊತಾನೆ..’

‘ಜಾಜಿ.. ನಿನ್ ಮಗ ಮತ್ತು ಅತ್ತೆನ್ ನೋಡಿ ಖುಷಿ ಆಯ್ತು ಕಣೆ’ ಅಂದೆ.
‘ಗೊತ್ತಾಯ್ತು ನಿನ್ ಕಣ್ಣರಳಿಸಿ ನೋಡ್ತಾ ಇದ್ದದ್ದು’
‘ಬದಲಾವಣೆಗಳನ್ನ ಹೇಳೇ ಇಲ್ಲ.. ನೀನು..’.

‘ನಂಗೆ ಗೊತ್ತಾಗ್ಲಿಲ್ಲ…ಅತ್ತೆ ಹಾಗೆ ನನಗೂ ಒಬ್ನೇ ಮಗ.. ಅದೊಂದು ದಿನಾ ಮನು ಹತ್ರ ಜಗಳ ಆಡ್ತಿರೋ ಅತ್ತೆ.. ಪುಟ್ಟ ಮಗು ಅನ್ಸಿತು.. ತಾಯಾಗಿ ಬಿಟ್ಟೆ. ಈಗ ಯಾರಾದ್ರೂ ಮಕ್ಕಳೆಷ್ಟು ಅಂತ ಕೇಳಿದ್ರೆ.. ಒಂದು ಗಂಡು..ಒಂದು ಹೆಣ್ಣು ಅಂತೀನಿ..’

6 Responses

 1. nutana Doshetty says:

  very touching

  nutana Doshettty

  • Prasad m n says:

   ನಂಗೆ ಗೊತ್ತಾಗ್ಲಿಲ್ಲ…ಅತ್ತೆ ಹಾಗೆ ನನಗೂ ಒಬ್ನೇ ಮಗ.. ಅದೊಂದು ದಿನಾ ಮನು ಹತ್ರ ಜಗಳ ಆಡ್ತಿರೋ ಅತ್ತೆ.. ಪುಟ್ಟ ಮಗು ಅನ್ಸಿತು.. ತಾಯಾಗಿ ಬಿಟ್ಟೆ. ಈಗ ಯಾರಾದ್ರೂ ಮಕ್ಕಳೆಷ್ಟು ಅಂತ ಕೇಳಿದ್ರೆ.. ಒಂದು ಗಂಡು..ಒಂದು ಹೆಣ್ಣು ಅಂತೀನಿ..’
   …..ತಾಯಾಗಿ ….ಬಿಟ್ಟೆ….ಎನ್ನುವ.. ಅವಳ…. ಮಾತು….
   ಬದುಕು..ಎಷ್ಟು…. ಸರಳ….ಎಂಬುದನ್ನು… ತೋರಿಸಿ.. ಕೊಟ್ಟಿತು.

   Share this:

 2. Anasuya M R says:

  ಮನಸ್ಸಿಗೆ ಹತ್ತಿರವಾಗುವ ಲೇಖನ

 3. LAKSHMANA RAO says:

  ahaa tumbaa khushiyaytu !!

 4. Lalitha siddabasavayya says:

  ವಾಹ್ !! ಇಂತಹ ಬರಹಗಳೆ ಕಮ್ಮಿ ಅನ್ನುವುದು ಬೇಸರ.
  ಕಂಡವರ ಮನೆ ಕನ್ನಡಿಯ ಜಿಡ್ಡು ಕಂಡು ಅಳುವ ಹುಸಿ ಲೇಖಗಳ ನಡುವೆ ಇಂತಹುಗಳನ್ನು ಕಂಡಾಗ ನಮ್ಮ ಮನೆ ಕನ್ನಡಿಯನ್ನು ಮೊದಲು ಉಡುಸೆರಗಲ್ಲೆ ಆದರೂ ಒರೆಸುವ ಉತ್ಸಾಹ ಬರುತ್ತದೆ ನೋಡಿ,,,

 5. ಶ್ವೇತಾ says:

  ಚೆನ್ನಾ ಗಿ ದೆ

Leave a Reply

%d bloggers like this: