ನಿನ್ನ ಪ್ರೀತಿಸತೊಡಗಿಹೆನೇ ನಾನು?

ಶೂನ್ಯ

ಜಯಶ್ರೀ ದೇಶಪಾಂಡೆ

ಅರೆರೇ ಶೂನ್ಯವೇ ನಿನ್ನ ಪ್ರೀತಿಸತೊಡಗಿಹೆನೇ ನಾನು?
ಕಳೆದು ಹೋದೀಯ ಇದೇನು ಮರಳು -ಅಂದವರ ದನಿಯೇನು..
ಹೊಗುವ ಮೊದಲೊಮ್ಮೆ ಹೊರಳಿಬಿಡು ಇಲ್ಲವಾದಲ್ಲಿ ನಮ್ಮ ಮುಖಕೆ ಕಾತರಿಸೀಯ ಅಂದವರ ಕನಲೇನು..

ಎಲ್ಲ ಬಿಟ್ಟು ಶೂನ್ಯವೇ ಯಾಕೆ ಪ್ರಿಯವಾಯ್ತು ನಿನಗಂದವರಿಗೇನುತ್ತರ ಕೊಡಲಿ ನಾನು?

ತಿಳಿನೀಲ ಆಗಸವೂ ಕಡುನೀಲಿ ಸಾಗರವೂ ಮತ್ತೆ ಕೊನೆಗೆ ಹಕ್ಕಿಪಿಕ್ಕಿ ತುಂಬಿ ಕಿಲಕಿಲಾಯಿಸಿದ
ಗಿರಿ ಕಾನನದ ಹಸಿರುಗಳೂ ಬಿದ್ದು ಬಿದ್ದು ನಕ್ಕವಲ್ಲ ನನ್ನೀ ಶೂನ್ಯಪ್ರಣಯದ ಕತೆ ಕೇಳಿ?!

ಗೆಳತಿ ಗೆಳೆಯರು ಶೂನ್ಯದೊಡಲಿನ ಬಗ್ಗೆ ಕಟ್ಟಿ ಹೇಳಿದರಲ್ಲ ಕತೆಗಳ…ಆ ಗುಂಭದ ಬಗ್ಗೆ ತಂತಮ್ಮದೇ ಸೊಲ್ಲಿನಲಿ ಹಾಡಿದರಲ್ಲ  ಕವನಗಳ!
‘ಒಳಹೊಕ್ಕು ಪ್ರೀತಿಸಿ ಬಂದಿರಾ ಯಾರಾದರೂ ಶೂನ್ಯವನು’ ಅಂದರೆ ಮಾತಿಲ್ಲದೆ ಅಂತರ್ಧನರಾಗಿ.. ಛೇ?!
ಮಾತಾಡುವ  ಮೊದಲೊಮ್ಮೆ
ಶೂನ್ಯವನ್ನು ಅಳೆದು ನೋಡಿ
ಮಹಾಜನಗಳೆ!
ಆಗ ಅರಿತೀರಿ ಶೂನ್ಯ ಪ್ರಣಯದ ಸೊಬಗ.

Leave a Reply