fbpx

ಅಂದು ನಾನು ಹುಡುಕುತ್ತಾ ಹೋಗಿದ್ದು ಕತೆಗಳನ್ನು!

”ಕಾಡಗರ್ಭದಲ್ಲಿ ಕತೆ ಕತೆ ಕಾರಣ”

ಅಂದು ನಾನು ಹುಡುಕುತ್ತಾ ಹೋಗಿದ್ದು ಕತೆಗಳನ್ನು!

ಆದರೆ ನಮ್ಮ ಪಯಣದಲ್ಲಿ ನಾನೊಬ್ಬನೇ ಇರಲಿಲ್ಲ. ನನ್ನ ಜೊತೆ ಇನ್ನೂ ಮೂವರಿದ್ದರು. ಈ ಮೂವರಿಗೂ ಕೂಡ ಅವರದ್ದೇ ಆದ ತಲಾಶೆಗಳಿದ್ದವು. ನನ್ನನ್ನು ಹೊರತುಪಡಿಸಿ ನಮ್ಮ ತಂಡದ ಮತ್ತೊಬ್ಬ ಮುಖ್ಯ ಸದಸ್ಯರಲ್ಲೊಬ್ಬನಾದ ಪೋರ್ಚುಗೀಸ್ ಮೂಲದ ಜೇಮ್ಸ್ ತನ್ನ ತಾತನ ಕತೆಗಳ ತಲಾಶೆಯಲ್ಲಿ ಹೊರಟಿದ್ದ.

ನಮ್ಮ ಜೊತೆಯಲ್ಲಿದ್ದ ದುಭಾಷಿ ಮಿಗೆಲ್ ಎಂಬೋಸೋನ ಕೆಲಸವು ಭಾಷಾಂತರದ್ದಷ್ಟೇ ಆಗಿತ್ತು. ಅವನಿಗಿದ್ದಿದ್ದು ಒಂದೇ ತಲಾಶೆ. ಅದು ಯಾವಾಗಾದರೂ ಈ ನರಕದಿಂದ ಹೊರಬರುವೆನೋ ಎಂಬುದು. ಅವನ ವಾರಾಂತ್ಯದ ಮೋಜಿನ ಶನಿವಾರವನ್ನು ನಾವುಗಳು ವಿನಾಕಾರಣ ತಿಂದುಹಾಕಿದ್ದೆವು.

ನಮ್ಮ ಕಾರುಚಾಲಕನಾದ ಅಗುಸ್ಟೋನದ್ದೂ ಇದೇ ಅವಸ್ಥೆ. ನನ್ನ ತಿರುಗಾಟದ ಮತ್ತು ಜೇಮ್ಸ್ ನ ತನ್ನ ತಾತನ ಕತೆಯ ಬೆನ್ನಟ್ಟುವ ಗೀಳಿಗೆ ಇವರಿಬ್ಬರೂ ಕೂಡ ಸಿಕ್ಕಿಹಾಕಿಕೊಂಡಿದ್ದರು ಅನ್ನುವುದನ್ನು ಹೇಳಲೇಬೇಕು.

ಮಿಗೆಲ್ ನ ವ್ಯಥೆಗೆ ಕಾರಣಗಳೂ ಇದ್ದವು ಅನ್ನಿ. ಅಂಗೋಲಾದ ಕಿಪೆಡ್ರೊ ಹಳ್ಳಿಗೆ ಹೋಗುವುದೆಂದರೆ ಅಷ್ಟು ಸುಲಭದ ಮಾತೇನೂ ಆಗಿರಲಿಲ್ಲ. ಕಳೆದೆರಡು ವಾರಗಳ ಹಿಂದಷ್ಟೇ ಆಂಬೂಲಾ ಎಂಬ ಹಳ್ಳಿಗೆ ಹೋಗಿದ್ದ ನಾವುಗಳು ಕೊಂಚ ಹೆಚ್ಚೇ ಅನ್ನುವಷ್ಟು ಸುಸ್ತಾಗಿದ್ದೆವು. ಅದರಿಂದ ಸುಧಾರಿಸಿಕೊಳ್ಳುವುದಕ್ಕೇ ಸುಮಾರು ನಾಲ್ಕೈದು ದಿನಗಳು ಹಿಡಿದಿದ್ದವು. ಹೀಗಾಗಿ ಕಿಪೆಡ್ರೊ ಹಳ್ಳಿಯ ಈ ಪಯಣಕ್ಕೆ ಮಿಗೆಲ್ ಮತ್ತು ಅಗುಸ್ಟೋನನ್ನು ಒಪ್ಪಿಸಲು ನಾನು ಮತ್ತು ಜೇಮ್ಸ್ ಈ ಬಾರಿ ಸಾಕಷ್ಟು ಕಷ್ಟಪಟ್ಟಿದ್ದೆವು.

ಪೋರ್ಚುಗೀಸ್ ಭಾಷೆಯನ್ನು ಬಲ್ಲವನಾಗಿದ್ದ ಜೇಮ್ಸ್ ಒಬ್ಬನೇ ಹೋದರೂ ಹೋದಾನು ಆದರೆ ನನಗಂತೂ ದುಭಾಷಿಯಿಲ್ಲದೆ ಅಷ್ಟು ದೂರ ಹೋಗುವುದರಲ್ಲಿ ಅರ್ಥವೇ ಇರಲಿಲ್ಲ. ಏಕೆಂದರೆ ಜೇಮ್ಸ್ ತುಂಡು-ತುಂಡು ಇಂಗ್ಲಿಷ್ ಅಷ್ಟೇ ಮಾತಾಡುತ್ತಿದ್ದ. ನನ್ನ ಪೋರ್ಚುಗೀಸ್ ಜ್ಞಾನವೂ ಅಷ್ಟಕ್ಕಷ್ಟೇ ಎಂಬಂತಿತ್ತು. ಹೀಗಾಗಿ ಒಂದು ಹಂತದ ಬಳಿಕ ನಮ್ಮಿಬ್ಬರ ಬಳಿಯೂ ಮಾತನಾಡಲು ಶಬ್ದಗಳೇ ಖಾಲಿಯಾಗಬಹುದಾದ ಸಂಭವವಿತ್ತು.

ಈ ಹಿಂದಿನ ನಮ್ಮ ಆಂಬೂಲಾ ಪ್ರಯಾಣದ ಬಳಿಕ ನನಗೂ ಕೂಡ ಈ ಪ್ರಯಾಣದ ಬಗ್ಗೆ ಸಾಕಷ್ಟು ಹಿಂಜರಿಕೆಯಿದ್ದಿದ್ದು ಸತ್ಯ. ಹೋಗಲೋ ಬೇಡವೋ ಎಂಬ ಸಂದಿಗ್ಧದಲ್ಲೇ ಎರಡು ದಿನಗಳು ಉರುಳಿಹೋಗಿದ್ದವು. ಏಕೆಂದರೆ ಏಕಮುಖವಾಗಿ ನೋಡಿದರೂ ಸುಮಾರು ನೂರೈವತ್ತು ಕಿಲೋಮೀಟರುಗಳ ನಮ್ಮ ಹಾದಿಯಲ್ಲಿ ಎಪ್ಪತ್ತು ಪ್ರತಿಶತ ಕಾಡಿನದ್ದೇ ಆಗಿತ್ತು. ಐವತ್ತರಿಂದ ಅರವತ್ತು ಕಿಲೋಮೀಟರುಗಳವರೆಗೆ ಹಬ್ಬಿದ್ದ ಅಂಥಾ ದಟ್ಟಕಾಡನ್ನು ನಾನು ನೋಡಿದ್ದು ಅದೇ ಮೊದಲು. ಅಂದಹಾಗೆ ಈ ಐವತ್ತು-ಅರವತ್ತು ಕಿಲೋಮೀಟರುಗಳ ಕಾಡು ನಮ್ಮ ಹಾದಿಗೆ ದಕ್ಕಿದ ಪ್ರದೇಶವಷ್ಟೇ. ನಮ್ಮ ಹಾದಿಯ ಹಿಂದಕ್ಕೂ ಮುಂದಕ್ಕೂ ಎಡಬಲಗಳಲ್ಲೂ ಇನ್ನೂ ಅದೆಷ್ಟು ಕಾಡಿನ ವಿಸ್ತಾರವಿತ್ತೋ!

ಆದರೆ ವಿಶೇಷವೆಂದರೆ ಅಂಥಾ ದಟ್ಟ ಕಾಡುಗಳ ಮಧ್ಯದಲ್ಲೂ ಐದರಿಂದ ಹತ್ತು ಕಿಲೋಮೀಟರುಗಳ ಅಂತರದಲ್ಲಿ ಚಿಕ್ಕ ಸಮುದಾಯದಂತಿದ್ದ ಏಳೆಂಟು ಮನೆಗಳು ನಮಗೆ ಕಾಣಸಿಗುತ್ತಿದ್ದವು. ಹಾಗೆಂದು ಆದಿವಾಸಿಗಳೇನೂ ಅವರಾಗಿರಲಿಲ್ಲ. ಅವರು ನಮ್ಮಂತೆಯೇ ಅಂಗಿ ಪೈಜಾಮಗಳನ್ನು ಧರಿಸಿದ ಸಾಮಾನ್ಯ ಆಫ್ರಿಕನ್ನರಾಗಿದ್ದರು. ದಡಬಡ ಸದ್ದುಮಾಡುತ್ತಾ ಧೂಳೆಬ್ಬಿಸುತ್ತಾ ಸಾಗುತ್ತಿದ್ದ ನಮ್ಮ ಖಾಸಗಿ ವಾಹನವನ್ನು ನೋಡಲು ಅವರಿಗೂ ಬಹುಷಃ ಅಚ್ಚರಿ.

ನನಗೋ ವಿದ್ಯುಚ್ಛಕ್ತಿ, ಆಸ್ಪತ್ರೆ, ಮಾರುಕಟ್ಟೆಗಳ ಸೌಲಭ್ಯಗಳೇ ಇಲ್ಲದ, ನೋಡಲು ಬೆಂಕಿಪೊಟ್ಟಣಗಳಂತಿದ್ದ ಇಟ್ಟಿಗೆಯ ಮನೆಗಳಲ್ಲಿ ಇವರುಗಳು ಹೇಗಾದರೂ ವಾಸಿಸುತ್ತಿದ್ದಾರಪ್ಪಾ ಎನ್ನುವ ಅಚ್ಚರಿ. ಆಫ್ರಿಕಾದ ಗ್ರಾಮೀಣ ಪ್ರದೇಶಗಳಲ್ಲಿ ಇಂಥಾ ಇಟ್ಟಿಗೆಯ ಪುಟ್ಟ ಮನೆಗಳು, ತಗಡಿನ ಡಬ್ಬದಂತಿರುವ ಮನೆಗಳು ಕಾಣಸಿಗುವುದು ಸಾಮಾನ್ಯವಾದರೂ ಇಲ್ಲಿಯ ಸಂದರ್ಭವೇ ಬೇರೆಯೇ ಆಗಿತ್ತು ಅನ್ನುವುದೂ ಕೂಡ ಸತ್ಯ.

ದುರ್ಗಮವಾದ ಮಣ್ಣಿನ ರಸ್ತೆಯಲ್ಲಿ ಸಾಗುತ್ತಾ, ಕೂತಲ್ಲೇ ಕುಪ್ಪಳಿಸುತ್ತಾ, ಬೆನ್ನುಮೂಳೆಯು ಇನ್ನೇನು ಬಿದ್ದೇ ಬೀಳಲಿದೆ ಎನ್ನುವ ಮಟ್ಟಿಗೆ ನೋಯುತ್ತಿದ್ದರೆ ನಮ್ಮ ವಾಹನವಂತೂ ದಡದಡ ಸದ್ದುಮಾಡುತ್ತಾ ನಾನೇನಾದರೂ ನಿಂತುಹೋದರೆ ನಿಮ್ಮ ಹುಚ್ಚೇ ಇದಕ್ಕೆ ಕಾರಣ ಎನ್ನುವಂತೆ ಸಾಗುತ್ತಲಿತ್ತು. ಆ ಕಲ್ಪನೆಯೇ ನಮ್ಮಲ್ಲಿ ಭಯವನ್ನು ಹುಟ್ಟಿಸುತ್ತಿದ್ದುದಂತೂ ಸತ್ಯ. ಏಕೆಂದರೆ ಕಾಡನ್ನು ಸೀಳುತ್ತಾ ಮುಂದೆ ಹೋಗುತ್ತಿದ್ದ ನಮಗೆ ಆಗಾಗ ಬಯಲುಪ್ರದೇಶಗಳು ಸಿಗುತ್ತಿದ್ದರೂ ಒಂದೇ ಒಂದು ನರಪ್ರಾಣಿಯೂ ನಮಗೆ ಕಂಡಿರಲಿಲ್ಲ.

ಮೇಲೆ ನೋಡಿದರೆ ವಿಶಾಲವಾದ ಆಗಸ, ಕೆಳಗೆ ನಾವುಗಳು ನಿಂತಿದ್ದ ಭೂಮಿ ಮತ್ತು ಸುತ್ತಲೂ ನೋಡಿದರೆ ಹಸಿರೇ ಹಸಿರು ಅಥವಾ ವಿಶಾಲ ಬಯಲುಗಳು. ನಾವು ನಾಲ್ವರನ್ನು ಬಿಟ್ಟರೆ ಆ ಜಾಗಗಳಲ್ಲಿ ಒಬ್ಬ ನರಪಿಳ್ಳೆಯೂ ಇರಲಿಲ್ಲ. ನಾವೊಂದು ಹೊಸ ಗ್ರಹಕ್ಕೆ ಬಂದಿಳಿದ್ದೇವೆಯೇ ಎಂಬಂತೆ! ವಾಹನವನ್ನು ಇಳಿಸಿ ಸುಮ್ಮನೆ ದೂರಕ್ಕೆ ನಡೆದುಹೋದರೆ ವಿಚಿತ್ರವಾಗಿ ಕಾಡುವ ಅದೆಂಥದ್ದೋ ಆಳವಾದ ಮೌನ. ಹಕ್ಕಿಗಳ ಚಿಲಿಪಿಲಿ, ಗಾಳಿಯ ಚಲನೆ, ಕೀಟಗಳ ಗೊಣಗಾಟ… ಇವುಗಳನ್ನು ಬಿಟ್ಟರೆ ಬೇರ್ಯಾವ ಸದ್ದುಗಳೂ ಇಲ್ಲದಂತಹ ಪರಿಸರ. ಅದೊಂದು ಅಕ್ಷರಶಃ ‘ನೋ ಮ್ಯಾನ್ಸ್ ಲ್ಯಾಂಡ್’!

ಕಿಪೆಡ್ರೊ ಪ್ರದೇಶವು ಮಳೆಗಾಲದ ಸಮಯದಲ್ಲಿ ಅಕ್ಷರಶಃ ದ್ವೀಪದಂತಾಗುತ್ತದೆ ಎಂಬುದನ್ನು ತಿಳಿಯಲು ನಮಗೆ ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ. ದಾರಿ ಮಧ್ಯದಲ್ಲಿ ನಮ್ಮ ವಾಹನವನ್ನು ಹತ್ತಿದ್ದ ಹಳ್ಳಿಯ ಮುಖ್ಯಸ್ಥನೊಬ್ಬ ನಮ್ಮ ಈ ಎಣಿಕೆಯನ್ನು ಒಪ್ಪಿಕೊಂಡಿದ್ದ. ಆ ದಟ್ಟ ಕಾಡಿನಲ್ಲಿ ನಮಗೆ ದಾರಿ ತೋರಿಸುತ್ತಾ ಇದ್ದ ಪುಣ್ಯಾತ್ಮನೆಂದರೆ ಈತನೇ. ಆದರೆ ಆ ದಿನವು ನಿಜಕ್ಕೂ ಶುಭ್ರವಾಗಿತ್ತು. ಮಳೆಗಾಲದ ಕೊನೆಯ ಹಂತವಾದರೂ ಕೂಡ ಸೂರ್ಯ ಇನ್ನಿಲ್ಲದಂತೆ ಸುಡುತ್ತಿದ್ದ. ಕೆಂಪು ಮೆಣಸಿನಕಾಯಿಯಂತಿದ್ದ ಕಡುಗೆಂಪು ಬಣ್ಣದ ಪುಟ್ಟ ಹಕ್ಕಿಗಳು ಉಲ್ಲಾಸದಿಂದ ಹಾರಾಡುತ್ತಿದ್ದವು. ಆದರೆ ನಮ್ಮ ಉತ್ಸಾಹವು ಮಾತ್ರ ನಿಧಾನಕ್ಕೆ ಕರಗತೊಡಗಿತ್ತು.

ದಟ್ಟ ಕಾನನದ ಸೌಂದರ್ಯವು ನಮ್ಮನ್ನು ಆಕರ್ಷಿಸಿದ್ದರೂ ಕೂಡ ಸಾಗಿದಷ್ಟೂ ದೂರ ಎಂಬಂತಿದ್ದ ಆ ಮುಗಿಯದ ದುರ್ಗಮ ಹಾದಿಯು ಮೊದಲ ಎರಡು ಘಂಟೆಗಳಲ್ಲೇ ನಮ್ಮ ಶಕ್ತಿಯನ್ನೆಲ್ಲಾ ಹೀರಿಕೊಂಡು ಹಿಂಡಿಹಿಪ್ಪೆಮಾಡಿತ್ತು. ಆದಷ್ಟು ಬೇಗ ಕಾರಿನಿಂದಿಳಿದು ಕೈಕಾಲುಗಳನ್ನು ಉದ್ದಕ್ಕೆ ಚಾಚಿ ಯಾವುದಾದರೂ ಮರವೊಂದರ ನೆರಳಿನಲ್ಲಿ ಮಲಗುವ ಕನಸನ್ನೇ ನಾವು ಕಾಣುತ್ತಿದ್ದೆವು. ಆ ಕ್ಷಣದಲ್ಲಿ ಯಾರಾದರೂ ನಮ್ಮ ಮೈಕೈಗಳನ್ನು ಒತ್ತಿ ಮಾಲೀಷು ಮಾಡುವಂತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗುತ್ತಿತ್ತೋ ಏನೋ!

ಅಂಗೋಲಾದ ಹಳ್ಳಿಗಳಿಗೆ ನೀವು ಬೇಕೆಂದಾಗ ಹೋಗಿ ಅಡ್ಡಾಡುವಂತಿಲ್ಲ. ಹಳ್ಳಿಗಳಿಗೆ ಕಾಲಿರಿಸುವ ಮುನ್ನ ಹಳ್ಳಿಯ ಮುಖ್ಯಸ್ಥನ ಅನುಮತಿಯನ್ನು ಕೇಳಬೇಕು. ಹಳ್ಳಿಯ ಮುಖ್ಯಸ್ಥನನ್ನು ಇಲ್ಲಿ ‘ಸೋಬಾ’ ಎಂದು ಕರೆಯಲಾಗುತ್ತದೆ. ಇದರಲ್ಲೂ ಕಿರಿಯ ಸೋಬಾ, ಕಿರಿಯ ಸೋಬಾ ಇನ್ನುವ ವರ್ಗೀಕರಣಗಳೆಲ್ಲಾ ಇವೆಯಂತೆ. ನಮ್ಮೊಂದಿಗೆ ಜೊತೆಯಾಗಿದ್ದ ವಾಸ್ಕೋ ಹಿರಿಯ ಸೋಬಾ ಆಗಿದ್ದ. ಹೀಗಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಆತ ಪರಿಚಿತನಾಗಿದ್ದಲ್ಲದೆ ಆತನೆಂದರೆ ಎಲ್ಲರಿಗೂ ವಿಶೇಷವಾದ ಗೌರವವಿತ್ತು. ಹೀಗೆ ಕೊಂಚ ಅಕ್ಕಿ, ಅನ್ನ, ರೊಟ್ಟಿ, ಸಕ್ಕರೆ, ರಸಾಯನ, ವೈನ್ ಗಳನ್ನು ಕೊಂಡೊಯ್ದು ಅವರನ್ನು ಸಂಪ್ರೀತಗೊಳಿಸಿ ನಂತರ ಔಪಚಾರಿಕವಾಗಿ ಅನುಮತಿಯನ್ನು ಕೇಳಬೇಕು.

ಇವೆಲ್ಲದರ ಬಗ್ಗೆಯೂ ಅರಿತಿದ್ದ ಜೇಮ್ಸ್ ದೊಡ್ಡದೊಂದು ಡಬ್ಬಿಯನ್ನೇ ತನ್ನ ಜೊತೆ ತಂದಿದ್ದ. ಸೋಬಾ ಮತ್ತು ಆತನ ತಂಡಕ್ಕೆ ನೀಡಲಾಗುವ ಎಲ್ಲಾ ಆಹಾರವಸ್ತುಗಳೂ ಅದರಲ್ಲಿದ್ದವು. ಹೀಗೆ ಬರೋಬ್ಬರಿ ನಾಲ್ಕು ಗಂಟೆಗಳ ಪ್ರಯಾಣವನ್ನು ಮುಗಿಸಿದ ನಾವುಗಳು ಕಿಪೆಡ್ರೋವನ್ನು ತಲುಪಿದಾಗ ಸೂರ್ಯ ನೆತ್ತಿಗೆ ಬಂದಿದ್ದ. ಅಚ್ಚರಿಯೆಂಬಂತೆ ಕಿಪೆಡ್ರೋದ ದೊಡ್ಡದಾದ ಬಯಲುಪ್ರದೇಶವೊಂದರಲ್ಲಿ ಎರಡು ಮಹಡಿಗಳ ಸುಣ್ಣಬಣ್ಣ ಬಳಿದ ಪಕ್ಕಾ ಕಟ್ಟಡವೊಂದಿತ್ತು.

ಆ ಕಟ್ಟಡದ ಬಳಿ ನಿಂತಿದ್ದ ಏನಿಲ್ಲವೆಂದರೂ ಮೂವತ್ತು-ನಲವತ್ತು ಜನರು ನಮಗಾಗಿ ಕಾಯುತ್ತಿದ್ದರು. ಹಳ್ಳಿಯ ಮುಖ್ಯಸ್ಥ ಮತ್ತು ಊರ ಹಿರಿಯರು ಸಾಮಾನ್ಯವಾಗಿ ಈ ಜಾಗದಲ್ಲೇ ಸೇರುತ್ತಾರಂತೆ. ನಮ್ಮಲ್ಲಿ ಪಂಚಾಯತ್ ಕಟ್ಟೆ ಇದ್ದಂತೆ ಅವರಿಗೆ ಆ ಕಟ್ಟಡವೇ ಒಂದು ಕಾನ್ಫರೆನ್ಸ್ ಕೊಠಡಿ. ಇನ್ನು ಸರಕಾರಿ ಆಡಳಿತ ಸಂಬಂಧಿ ಚಟುವಟಿಕೆಗಳೂ ಅಲ್ಲಿ ನಡೆಯುತ್ತಿದ್ದ ಪರಿಣಾಮವಾಗಿ ಹಳ್ಳಿಯಲ್ಲಿ ಅದೊಂದು ಮುಖ್ಯ ಪ್ರದೇಶವಾಗಿತ್ತು.

ನೂರಕ್ಕೆ ನೂರು ಪ್ರತಿಶತ ಪುರುಷರೇ ಇದ್ದ ಆ ಗುಂಪಿನಲ್ಲಿ ನಮ್ಮನ್ನು ಸ್ವಾಗತಿಸಿ ವಿದ್ಯಾವಂತನಂತೆ ಕಾಣುತ್ತಿದ್ದ ಯುವಕನೊಬ್ಬ ಸಂಕ್ಷಿಪ್ತವಾಗಿ ಸ್ವಾಗತ ಭಾಷಣವನ್ನು ಮಾಡಿದ. ಮುಂದಿನ ಒಂದು ತಾಸು ನಾವುಗಳು ತಂದಿದ್ದ ತಿಂಡಿತಿನಿಸುಗಳನ್ನು ಗೌರವಧನದೊಂದಿಗೆ ಎಲ್ಲರ ಸಮ್ಮುಖದಲ್ಲಿ ಸೋಬಾನಿಗೆ ಔಪಚಾರಿಕವಾಗಿ ಹಸ್ತಾಂತರಿಸುವುದರ ಜೊತೆಗೇ ಹಳ್ಳಿಯನ್ನು ನೋಡಲು ಮೌಖಿಕವಾದ ಅಪ್ಪಣೆಯನ್ನು ಪಡೆಯುವ ಪ್ರಕ್ರಿಯೆಯೂ ಸಾಂಗವಾಗಿ ನೆರವೇರಿತು. ಕಿಪೆಡ್ರೊದಲ್ಲಿ ನಡೆದ ಈ ಸ್ವಾಗತವು ನನಗೆ ಅಚ್ಚರಿಯನ್ನು ತಂದಿದ್ದಂತೂ ನಿಜ. ಏಕೆಂದರೆ ಆಂಬೂಲಾದ ನಮ್ಮ ಪ್ರಯಾಣದಲ್ಲಿ ಅಪ್ಪಣೆಯನ್ನು ಪಡೆಯುವ ವಿಧಿವಿಧಾನಗಳು ಅದುವೇ ಆಗಿದ್ದರೂ ಇವುಗಳನ್ನು ಪುಟ್ಟ ಮರವೊಂದರ ನೆರಳಿನಲ್ಲಿ ಸಂಕ್ಷಿಪ್ತವಾಗಿ ನೆರವೇರಿಸಲಾಗಿತ್ತು. ನೆರೆದಿದ್ದ ಹತ್ತಿಪ್ಪತ್ತು ಊರಹಿರಿಯರೊಡನೆ ನಡೆಸಬೇಕಾಗಿದ್ದ ಸಂವಾದವೂ ಕೂಡ ಮರದ ನೆರಳಿನಲ್ಲೇ ಮುಗಿದುಹೋಗಿತ್ತು. ಹೀಗಾಗಿ ಮುಂದೇನು ಕಾದಿದೆಯೋ ಎಂಬ ನಿರೀಕ್ಷೆಯಲ್ಲೇ ನಾನು ಎಲ್ಲರನ್ನೂ ನೋಡುತ್ತಾ ಕುಳಿತಿದ್ದೆ.

ನನ್ನ ಆಂಬೂಲಾ ಮತ್ತು ಕಿಪೆಡ್ರೊ ಹಳ್ಳಿಗಳ ಭೇಟಿಯು ಕೇವಲ ತಿರುಗಾಟದ ಗೀಳಿನದ್ದಾದರೂ ಜೊತೆಗಿದ್ದ ಜೇಮಿ ಮಗ್ವಿಜೋನ ಉದ್ದೇಶವು ಬೇರೆಯದೇ ಆಗಿತ್ತು. ಜೇಮಿ ತನ್ನ ಬೇರುಗಳನ್ನು ಹುಡುಕುತ್ತಾ ಇಲ್ಲಿಯವರೆಗೆ ಬಂದಿದ್ದ. ಪೋರ್ಚುಗಲ್ ನಲ್ಲಿಯೇ ಹುಟ್ಟಿ ಬೆಳೆದವನು ಜೇಮಿ. ತನ್ನ ವಿದ್ಯಾಭ್ಯಾಸವನ್ನೂ ಅಲ್ಲೇ ಪೂರೈಸಿ ಸ್ಥಳೀಯ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿ ಸೇರಿದ್ದವನು. ನಂತರ ರಿಪಬ್ಲಿಕ್ ಆಫ್ ಅಂಗೋಲಾದಲ್ಲಿ ಹೊಸದೊಂದು ನೀರಾವರಿ ಯೋಜನೆಯ ಗುತ್ತಿಗೆಯು ತನ್ನ ಸಂಸ್ಥೆಗೆ ಸಿಕ್ಕಿದೆ ಎಂಬುದನ್ನರಿತ ಆತ ಕೂಡಲೇ ಈ ಪ್ರಾಜೆಕ್ಟಿನ ಹೆಸರಿನಲ್ಲಿ ಅಂಗೋಲಾದವರೆಗೆ ಬಂದಿಳಿದಿದ್ದ.

ಕನಿಷ್ಠ ಒಂದು ವರ್ಷವಾದರೂ ಅಂಗೋಲಾದಲ್ಲಿದ್ದು ತನ್ನ ಕರ್ತವ್ಯವನ್ನು ಆತ ನಿರ್ವಹಿಸಬೇಕಿತ್ತು. ಮೇಲಾಗಿ ಅಂಗೋಲಾದೆಡೆಗೆ, ಅದರಲ್ಲೂ ಸದ್ಯಕ್ಕೆ ನಾನಿರುವ ವೀಜ್ ಪ್ರದೇಶದೆಡೆಗೆ ಸಣ್ಣದೊಂದು ಸೆಳೆತವಂತೂ ಆತನಿಗಿತ್ತು. ಏಕೆಂದರೆ ಜೇಮಿಯ ತಾತ ಈ ಪ್ರದೇಶದಲ್ಲಿ ಹಲವು ವರ್ಷಗಳನ್ನು ಕಳೆದಿದ್ದರಂತೆ.

ಜೇಮಿಯ ತಾತ ಸುಮಾರು ನೂರು ವರ್ಷಗಳ ಹಿಂದೆ ಅಲ್ಲಿದ್ದರು ಎಂಬ ಸುದ್ದಿಯು ನನ್ನನ್ನು ತಲುಪುತ್ತಿದ್ದಂತೆಯೇ ನಾನೂ ಕೂಡ ಬ್ಯಾಗೊಂದನ್ನು ಹೆಗಲಿಗೇರಿಸಿ ‘ಲೆಟ್ಸ್ ಗೋ ಫ್ರೆಂಡ್’ ಎಂದಿದ್ದೆ. ಜೇಮಿಯ ತಾತನಾಗಿದ್ದ ಜೋಸ್ ಮಗ್ವಿಜೋ ರಿಪಬ್ಲಿಕ್ ಆಫ್ ಅಂಗೋಲಾದ ನೆಲದಲ್ಲಿ ಮೊಟ್ಟಮೊದಲಬಾರಿ ಕಾಲಿಟ್ಟಿದ್ದು 1923 ರಲ್ಲಿ. ಅಂಗೋಲಾದ ಆಂಬ್ರಿಷ್ ನಲ್ಲಿ ಕಾಲಿಟ್ಟಿದ್ದ ಆತ ಮುಂದಿನ ಹದಿನೈದು ವರ್ಷಗಳಲ್ಲೇ ದೊಡ್ಡದಾದ ಕಾಫಿ ಕಾರ್ಖಾನೆಯೊಂದನ್ನು ಅಲ್ಲಿ ಸ್ಥಾಪಿಸಿದ.

ನೋಡನೋಡುತ್ತಿದ್ದಂತೆಯೇ ಈ ಕಾಫಿ ಉದ್ಯಮವು ನಿರೀಕ್ಷೆಗಿಂತಲೂ ದೊಡ್ಡದಾಗಿ ಬೆಳೆದಿತ್ತು. ಇಪ್ಪತ್ತು ಸಾವಿರ ಹೆಕ್ಟೇರಿನಷ್ಟು ವಿಶಾಲವಾಗಿ ಹಬ್ಬಿದ್ದ ಆ ಪ್ರದೇಶವು ವಿಪುಲವಾಗಿ ಕಾಫಿಯ ಬೆಳೆಯನ್ನು ಉತ್ಪಾದಿಸುತ್ತಿತ್ತು. ಸುಮಾರು ಐದು ಸಾವಿರ ಕಾರ್ಮಿಕರನ್ನು ಹೊಂದಿದ್ದ ಆ ಕಾರ್ಖಾನೆಯು ಉತ್ತರ ಅಂಗೋಲಾದ ಎರಡನೇ ಅತೀ ದೊಡ್ಡ ಕಾಫಿ ಉದ್ಯಮವಾಗಿ ಬೆಳೆದಿತ್ತು. ಅಂಥಾ ಉದ್ಯಮವು ಜೋಸ್ ನ ಹಿಡಿತದಲ್ಲಿತ್ತೆಂದರೆ ಆತ ಅದೆಷ್ಟು ಆಯಕಟ್ಟಿನ ವ್ಯಕ್ತಿಯೆಂಬುದನ್ನು ನಾವು ಯೋಚಿಸಬಹುದು.

ಆ ದಿನಗಳಲ್ಲಿ ಪೋರ್ಚುಗೀಸರ ಹಿಡಿತದಲ್ಲಿದ್ದ ಅಂಗೋಲಾ ಆಗ ಏನಿಲ್ಲವೆಂದರೂ ತಕ್ಕಮಟ್ಟಿನ ಪರಿಸ್ಥಿತಿಯಲ್ಲೇ ಇತ್ತು. ಉದ್ಯಮಿಯಾಗಿ ಬೆಳೆದು ನಿಂತ ಜೋಸ್ ಸರಕಾರದ ಪ್ರತಿನಿಧಿಗಳೊಂದಿಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದರಲ್ಲದೆ ಸ್ಥಳೀಯರೊಂದಿಗೂ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದರು. ಗುಲಾಮಗಿರಿಯು ಉತ್ತುಂಗದಲ್ಲಿದ್ದ ಆ ದಿನಗಳಲ್ಲೂ ಬಿಳಿ ತೊಗಲಿನ ಈ ಮನುಷ್ಯ ಆಫ್ರಿಕನ್ನರನ್ನು ಕರಿ ಗುಲಾಮರಂತೆ ಕಾಣದೆ ಮಾನವನಾಗಿಯೇ ಕಂಡಿದ್ದ.

ವಾಹನಗಳ ಸೌಲಭ್ಯವಿಲ್ಲದ ಆ ದಿನಗಳಲ್ಲಿ ಈ ಕಾರ್ಮಿಕರು ಕಾಫಿಯ ಮೂಟೆಗಳನ್ನು ಮೈಲುಗಟ್ಟಲೆ ನಡೆದುಕೊಂಡೇ ಹೋಗಿ ತಲುಪಿಸಬೇಕಾಗಿದ್ದ ಜಾಗಗಳಿಗೆ ತಲುಪಿಸಬೇಕಿತ್ತು. ಇದರಲ್ಲಿ ಕೆಲವರು ಆಹಾರವಿಲ್ಲದೆಯೋ ನಿಶ್ಶಕ್ತಿಗೊಳಗಾಗಿಯೋ ಮಾರ್ಗಮಧ್ಯದಲ್ಲೇ ಅಸುನೀಗಿದರೆ ಇನ್ನು ಕೆಲವರು ದರೋಡೆಕೋರರಿಂದ ಕೊಲ್ಲಲ್ಪಡುತ್ತಿದ್ದರು. ಉದ್ಯಮ ಮತ್ತು ಕಾರ್ಮಿಕರ ಪರಿಸ್ಥಿತಿಗಳು ಹೀಗಿದ್ದಾಗ ಕೆಲ ಬದಲಿ ತಾತ್ಕಾಲಿಕ ರಸ್ತೆಗಳನ್ನೂ ಕೂಡ ಈತನ ನೆರವಿನಿಂದ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.

ತನ್ನ ತಾತನ ಕಪ್ಪುಬಿಳುಪು ಚಿತ್ರವೊಂದನ್ನು ಸ್ಮಾರ್ಟ್‍ಫೋನಿನಲ್ಲಿ ಹಿಡಿದುಕೊಂಡು ಹೋಗಿದ್ದ ಜೇಮಿಗೆ ಆಂಬೂಲಾ ಪ್ರದೇಶದಲ್ಲಿ ಆಪ್ತ ಸ್ವಾಗತವೇ ದೊರೆತಿತ್ತು. ಸೋಬಾನ ಜೊತೆಯಲ್ಲಿದ್ದ ಹಲವು ಹಿರಿಯರು ಆ ಚಿತ್ರವನ್ನು ನೋಡಿದೊಡನೆಯೇ ಆ ಮುಖವನ್ನು ತಕ್ಷಣ ಗುರುತಿಸಿದ್ದರು. ಕೆಲವರಂತೂ ಆನಂದಬಾಷ್ಪವನ್ನೇ ಸುರಿಸಿ ಭಾವುಕರಾದರು. ಆತನ ಒಂದು ಚಿತ್ರದಿಂದಾಗಿ ಜೇಮಿ ಕ್ಷಣಾರ್ಧದಲ್ಲಿ ಮನೆಮಗನಾಗಿ ಬದಲಾಗಿದ್ದ.

ಕಳೆದುಹೋಗಿದ್ದ ಮಗನೇ ಹಲವು ವರ್ಷಗಳ ನಂತರ ಮರಳಿಬಂದಂತೆ ಅವರು ಅಪ್ಪಿಕೊಂಡರು ಅವನನ್ನು. ಇನ್ನು ಕೆಲವರು ನೀನು ನಿಜಕ್ಕೂ ಇವರ ಮೊಮ್ಮಗನೇ? ಎಂದು ಅಚ್ಚರಿಯಿಂದ ಕಣ್ಣರಳಿಸಿದರು. ಕೆಲವರಂತೂ ”ನಿನ್ನ ತಂದೆ ಅಂಗೋಲಾದಲ್ಲಿ ನಿನ್ನ ತಾತನೊಂದಿಗಿದ್ದಾಗ ನಾನೇ ವಿಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದೆ, ಆತ ಚಿಕ್ಕವನಿದ್ದಾಗ  ನನ್ನ ತೊಡೆಯಲ್ಲೇ ಉಚ್ಚೆಹೊಯ್ದಿದ್ದ”, ಎಂದೆಲ್ಲಾ ಹೇಳುತ್ತಾ ಭಾವುಕತೆಯಲ್ಲೂ ನಗುವನ್ನು ಚೆಲ್ಲಿದ್ದರು.

ಸಾಮಾನ್ಯವಾಗಿ ಸಿನಿಮಾಗಳಲ್ಲಷ್ಟೇ ಕಾಣಸಿಗುವ ಅಂಥದ್ದೊಂದು ಭಾವುಕ ಕ್ಷಣಕ್ಕೆ ನಾನು ಸಾಕ್ಷಿಯಾಗಿದ್ದೆ. ಜೇಮಿಯ ಮುಖಾರವಿಂದವು ಖುಷಿಯಿಂದ ಸೂರ್ಯಕಾಂತಿ ಹೂವಿನಂತೆ ಅರಳಿತ್ತು. ನಾನು ಮೌನವಾಗಿಯೇ ಇವೆಲ್ಲವನ್ನೂ ನೋಡುತ್ತಾ ಕಣ್ತುಂಬಿಕೊಂಡೆ.

ಅದೇಕೋ ಏನೋ… ಅಮೆರಿಕನ್ ಕವಯತ್ರಿ, ಲೇಖಕಿ ಮಾಯಾ ಆಂಜೆಲೋ ತಕ್ಷಣ ನನಪಾಗಿದ್ದಳು. ”ನಿನ್ನ ಮಾತುಗಳನ್ನು ಜನರು ಮರೆತಿರಬಹುದು, ನಿನ್ನ ಕೆಲಸಗಳನ್ನು ಕಾಲಕ್ರಮೇಣ ಅವರುಗಳು ಮರೆಯಬಹುದು. ಆದರೆ ನೀನು ಅವರಲ್ಲಿ ಜಾಗೃತಗೊಳಿಸಿದ್ದ ಭಾವನೆಗಳನ್ನು ಅವರೆಂದೂ ಮರೆಯಲಾರರು” ಎಂದಿದ್ದಳು ಆಕೆ. ಆ ಮಾತುಗಳು ಅದೆಷ್ಟು ಸತ್ಯ ಎಂಬುದು ನನಗೀಗ ಮನದಟ್ಟಾಗಿತ್ತು.

ಜೋಸ್ ಇವರೆಲ್ಲರ ಮನದಲ್ಲೂ ಅಂಥಾ ನೆನಪುಗಳನ್ನು ಬಿಟ್ಟುಹೋಗಿದ್ದ. ಆತನೇನೂ ಮಹಾನ್ ಉದ್ಯಮಿಯೋ, ರಾಜಕಾರಣಿಯೋ ಆಗಿರಲಿಲ್ಲ. ಪೋರ್ಚುಗಲ್ ನಲ್ಲಾಗಲೀ, ಅಂಗೋಲಾದಲ್ಲಾಗಲೀ ಖ್ಯಾತನಾಮನೂ ಆಗಿರಲಿಲ್ಲ. ಆದರೆ ತನ್ನ ಪುಟ್ಟ ಜಗತ್ತಿನಲ್ಲೇ ಅರ್ಥಪೂರ್ಣವಾಗಿ ಜೀವಿಸಿ ಆತ ಈ ಲೋಕವನ್ನು ಬಿಟ್ಟುಹೋಗಿದ್ದ. ಅವನು ಸತ್ತರೂ ಅವನು ಬಿಟ್ಟು ಹೋದ ನೆನಪುಗಳು ಆ ಹವೆಯಲ್ಲಿ ಇನ್ನೂ ಉಳಿದಿದ್ದವು.  ಆತ ಅದೆಷ್ಟು ಧಾರಾಳಿಯಾಗಿದ್ದನೆಂದರೆ ಹಲವು ಬಾರಿ ತನ್ನದೇ ಮನೆಯ ಧಾನ್ಯಗಳನ್ನು, ಹಣ್ಣುಗಳನ್ನು ಕಾರ್ಮಿಕರಿಗೆ ಕೆಲವೊಮ್ಮೆ ನೀಡುತ್ತಿದ್ದನಂತೆ.

ಇನ್ನು ಅಡುಗೆಗಾಗಿ ತರಕಾರಿಗಳನ್ನು ತನ್ನಲ್ಲಿ ಕೇಳುತ್ತಿದ್ದ ಕಾರ್ಮಿಕರ ಕಾಲೆಳೆಯುತ್ತಾ ”ಇವುಗಳನ್ನು ಬೇಯಿಸಲು ನಿಮ್ಮಲ್ಲಿ ನೀರಿದೆಯೋ ಇಲ್ಲವೋ?” ಎಂದು ನಗೆಯುಕ್ಕಿಸುತ್ತಿದ್ದನಂತೆ. ಆತ ಅಂಗೋಲಾವನ್ನು ಬಿಟ್ಟುಹೋಗಿ ಇಂದಿಗೆ ಎಪ್ಪತ್ತಮೂರು ವರ್ಷಗಳೇ ಆಗಿದ್ದರೂ, ಸತ್ತು ಮೂವತ್ತೆಂಟು ವರ್ಷಗಳೇ ಆಗಿದ್ದರೂ ಇವೆಲ್ಲಾ ನಿನ್ನೆ-ಮೊನ್ನೆ ನಡೆದಂತೆ ಹೇಳುತ್ತಿದ್ದರು ಆ ಹಿರಿಯರು. ಜೋಸ್ ರ ಆ ಜೀವನಕ್ಕೆ, ನೆನಪುಗಳಿಗೆ, ಬಿಸುಪಿಗೆ ಏನನ್ನಬೇಕು?

ಆದರೆ ಇವೆಲ್ಲವುಗಳ ಆಚೆಗಿರುವ ಒಂದು ಅಂಶವೂ ಈತ್ತು. ಈ ಎಲ್ಲಾ ಘಟನೆಗಳಿಗೆ ನಾನು ಪ್ರತ್ಯಕ್ಷದರ್ಶಿಯಾಗಿದ್ದರೂ ಕೂಡ ಇವುಗಳು ಅಷ್ಟು ಸುಲಭವಾಗಿಯೇನೂ ನನಗೆ ದಕ್ಕಲಿಲ್ಲ. ವಿದೇಶೀ ಸಿನೆಮಾ ಒಂದನ್ನು ಸಬ್-ಟೈಟಲ್ಲುಗಳಿಲ್ಲದೆ ನೋಡುವವನಂತೆ ಇವೆಲ್ಲವನ್ನು ನಾನು ಸುಮ್ಮನೆ ನೋಡುತ್ತಲೇ ಇದ್ದೆ. ಒಂದು ವಾಕ್ಯವು ಅರ್ಥವಾದರೆ ನಾಲ್ಕು ವಾಕ್ಯಗಳು ಕೈಜಾರಿಹೋಗುತ್ತಿದ್ದವು.

ದುಭಾಷಿಯಾಗಿ ಮಿಗೆಲ್ ನನ್ನು ಕರೆದುಕೊಂಡು ಹೋಗಿದ್ದು ಅಷ್ಟೇನೂ ಲಾಭದಾಯಕವಾಗಿರಲಿಲ್ಲ. ಅಷ್ಟಕ್ಕೂ ಆಗಿದ್ದೇನೆಂದರೆ ಆಂಬೂಲಾದ ಹಳ್ಳಿಯಲ್ಲಿ ಎಲ್ಲರೂ ಕಿಕೋಂಗೋ ಭಾಷೆಯನ್ನು ಮಾತನಾಡುವವರಾಗಿದ್ದರು. ಈ ಕಿಕೊಂಗೋ ಭಾಷೆಯು ಸೋಬಾನಿಂದ ಪೋರ್ಚುಗೀಸ್ ಭಾಷೆಗೆ ಅನುವಾದಗೊಂಡು ಜೇಮಿಯನ್ನು ತಲುಪುತ್ತಿತ್ತು. ನಂತರ ಪೋರ್ಚುಗೀಸ್ ಭಾಷೆಯಲ್ಲಿದ್ದ ಈ ವಿವರಣೆಯು ಮಿಗೆಲ್ ನ ಮೂಲಕವಾಗಿ ನನ್ನನ್ನು ತಲುಪುತ್ತಿತ್ತು. ಒಟ್ಟಾರೆಯಾಗಿ ಮಾತುಗಳು ಈ ಮೂರು ಹಂತಗಳನ್ನು ದಾಟಿ ಬರುವಾಗ ಅಲ್ಲಲ್ಲಿ ಸೋರಿ ಹೋಗುವುದು ಆಶ್ಚರ್ಯದ ಸಂಗತಿಯೇನೂ ಆಗಿರಲಿಲ್ಲವೆನ್ನಿ.

ಇನ್ನು ನನಗಿಂತ ಕೊಂಚ ಭಿನ್ನವಾದ ಸಮಸ್ಯೆಯನ್ನು ಮಿತ್ರನಾದ ಜೇಮಿ ಅನುಭವಿಸುತ್ತಿದ್ದ. ಅವನೆದುರು ಬಿಚ್ಚಿಕೊಳ್ಳುತ್ತಿದ್ದ ಕಥೆಗಳು, ನೆನಪುಗಳು, ಘಟನೆಗಳು ಅವನಿಗೆ Jigsaw ಆಟದ ತುಣುಕುಗಳಂತೆ ಸಿಗುತ್ತಿದ್ದವೇ ಹೊರತು ಅವುಗಳನ್ನು ಕ್ರಮಬದ್ಧವಾಗಿ ಜೋಡಿಸುವ ಕೆಲಸವನ್ನು ಆತನೇ ಮಾಡಬೇಕಿತ್ತು. ಏಕೆಂದರೆ ಆತನ ತಾತನು ಆಂಬೂಲಾ ಮತ್ತು ಆಸುಪಾಸಿನ ಇತರ ಪ್ರದೇಶದಲ್ಲಿದ್ದಾಗ ನಡೆದ ಘಟನೆಗಳು ಸ್ಥಳೀಯರಿಂದ ಕೇವಲ ನೆನಪುಗಳಾಗಿಯೇ ಹೊರಬಂದಿದ್ದವು.

ಈ ನೆನಪುಗಳನ್ನು ಸುಳ್ಳೆಂದು ತಳ್ಳಿ ಹಾಕುವುದು ಮೂರ್ಖತನವಾದರೂ ಇವುಗಳನ್ನು ವ್ಯವಸ್ಥಿತವಾಗಿ ಕಾಲಾನುಕ್ರಮವಾಗಿ ಪ್ರಸ್ತುತಪಡಿಸುವುದು ಕಷ್ಟವೇ ಆಗಿತ್ತು. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಜೋಸ್ ರ ಬಗ್ಗೆ ಆಂಬೂಲಾದಲ್ಲಿ ಸಿಕ್ಕಷ್ಟು ಮಾಹಿತಿಗಳು ಎರಡು ವಾರಗಳ ನಂತರ ನಾವು ಹೆಜ್ಜೆಹಾಕಿದ್ದ ಕಿಪೆಡ್ರೋದಲ್ಲಿ ನಮಗೆ ದಕ್ಕಲಿಲ್ಲ. ಕಿಪೆಡ್ರೋದ ಸ್ಥಳೀಯರಿಂದ ಸಿಕ್ಕ ಕೆಲ ಮಾಹಿತಿಗಳನ್ನು ಆಂಬೂಲಾದಲ್ಲಿ ದೊರೆತ ಮಾಹಿತಿಗಳೊಂದಿಗೆ ಜೋಡಿಸಿ ನೋಡಿದರೂ ಅಷ್ಟಾಗಿ ತಾಳೆಯಾಗುತ್ತಿರಲಿಲ್ಲ.

ಈ ಪ್ರದೇಶದಲ್ಲಿ ನೆಲೆಸಿದ್ದ ಬಹಳಷ್ಟು ಜನರು ಅಲೆಮಾರಿಗಳಾಗಿದ್ದರು ಎಂಬುದು ಒಂದು ಕಾರಣವಾದರೆ ಆ ಪೀಳಿಗೆಯ ಬಹಳಷ್ಟು ಜನರು ಅಂಗೋಲಾದಲ್ಲಿ ಬರೋಬ್ಬರಿ ಎರಡೂವರೆ ದಶಕಗಳ ಕಾಲ ನಡೆದ ಆಂತರಿಕ ಯುದ್ಧದಲ್ಲಿ ಅಸುನೀಗಿದ್ದರು ಅನ್ನುವುದು ಮತ್ತೊಂದು ಕಾರಣವಾಗಿತ್ತು. ನಮ್ಮೆದುರಿಗಿದ್ದ ಬೆರಳೆಣಿಕೆಯಷ್ಟು ಹಿರಿಯರು ಹಿಂದಿನ ಪೀಳಿಗೆಯ ಕೊನೆಯ ಜೀವಗಳಾಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ.

ಏನಿಲ್ಲವೆಂದರೂ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸುದೀರ್ಘ ಮಾತುಕತೆಯ ನಂತರ ಸಿಕ್ಕಷ್ಟು ಸಮಯದಲ್ಲಿ ಹಳ್ಳಿಯ ಒಂದೆರಡು ಭಾಗಗಳನ್ನಾದರೂ ನೋಡುವ ಅವಕಾಶವನ್ನಂತೂ ನಾವುಗಳು ಬಿಡುವ ಹಾಗಿರಲಿಲ್ಲ. ಅತ್ತಿತ್ತ ನಮ್ಮ ಜೊತೆಯಲ್ಲಿ ಮಾತಾಡುತ್ತಿದ್ದ ಜೀವಗಳು ತೀರಾ ಹಣ್ಣುಹಣ್ಣು ವೃದ್ಧರಾಗಿದ್ದರೂ ಕೂಡ ಜೀವನಪ್ರೀತಿಯೇನೂ ಅವರಲ್ಲಿ ಬತ್ತಿರಲಿಲ್ಲ.

ಹಲ್ಲುಗಳು ಒಂದೂ ಬಿಡದಂತೆ ಬಿದ್ದುಹೋಗಿದ್ದ, ಬೆಳ್ಳಿಕೂದಲುಗಳನ್ನು ಹೊಂದಿದ್ದ ಒಬ್ಬ ವೃದ್ಧನಂತೂ ನನ್ನ ಹಿಂದೆಯೇ ಬಿದ್ದಿದ್ದ. ನಾನು ಭಾರತದವನೆಂದು ಕೇಳಿ ಅವನಿಗೆ ಸಂತಸವಾಗಿತ್ತಂತೆ. `ಇಂಡಿಯಾ’ ಪದವು ಅವನನ್ನು ಆಕರ್ಷಿಸಿತ್ತು. ಅವನನ್ನು ಪ್ರೀತಿಯಿಂದ ಮಾತನಾಡಿಸಹೊರಟರೆ ಉಳಿದವರೆಲ್ಲಾ ನನ್ನ ಬಳಿ ಬಂದು “ಆತ ಹುಚ್ಚ… ಏನೇನೋ ಬಡಬಡಿಸುತ್ತಿರುತ್ತಾನೆ… ನೀವು ಸುಮ್ಮನೆ ತಲೆಕೆಡಿಸಿಕೊಳ್ಳಬೇಡಿ” ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದ್ದರು.

ಆದರೆ ಹಾಗೆ ಏಕಾಏಕಿ ಎದ್ದುಹೋಗಲು ಮನಸ್ಸಾಗದೇ ಅವನ ಮಾತುಗಳೆಲ್ಲಾ ನನಗೆ ಅರ್ಥವಾಗುತ್ತಿವೆ ಎಂಬಂತೆ ನಿಷ್ಠೆಯಿಂದ ತಲೆಯಲ್ಲಾಡಿಸಿದೆ. ಕೆಲವೇ ನಿಮಿಷಗಳಲ್ಲಿ ಅಂತ್ಯವಾಗಲಿದ್ದ ಅವನ ಆ ಭೇಟಿಯನ್ನು, ಮಾತುಕತೆಯನ್ನು ಮೊಟಕುಗೊಳಿಸಿ ಅವರನ್ನು ನಿರಾಶನಾಗಿಸಲು ನನಗೆ ಇಷ್ಟವಿರಲಿಲ್ಲ.

ಈ ಮಧ್ಯದಲ್ಲೇ ಆತ ”ಆಪ್ ಕೈಸೇ ಹೇಂ” (ನೀವು ಹೇಗಿದ್ದೀರಿ?) ಎಂದು ಹಿಂದಿಯ ಸ್ಪಷ್ಟ ಉಚ್ಚಾರಣೆಯಲ್ಲಿ ನನ್ನನ್ನು ಕೇಳಿ ಬೆಚ್ಚಿಬೀಳಿಸಬೇಕೇ! ”ಏಯ್ ಸುಮ್ನಿರ್ರೋ… ಈತ ನಿಜವಾಗಿಯೂ ಭಾರತೀಯ ಭಾಷೆಯಲ್ಲಿ ಮಾತನಾಡಿದ… ಇದನ್ನು ‘ಹಿಂದಿ’ ಅನ್ನುತ್ತಾರೆ”, ಎಂದು ಅವರೆಲ್ಲರಿಗೂ ಕೇಳುವಂತೆ ಹೇಳಿದೆ.

ನಾನು ತಮಾಷೆ ಮಾಡಿದೆನೋ ಎಂಬಂತೆ ನನ್ನನ್ನೂ ಆ ಮುದುಕನನ್ನೂ ನೋಡುತ್ತಾ ಎಲ್ಲರೂ ಗೊಳ್ಳನೆ ನಕ್ಕರು. ಅವನು ಹೇಳುವ ಪ್ರಕಾರ ಹಲವು ವರ್ಷಗಳ ಹಿಂದೆ ಆತ ಭಾರತದಲ್ಲಿ ಕೆಲಸ ಮಾಡುತ್ತಿದ್ದನಂತೆ. ಆದರೆ ಅದು ಯಾವ ಇಸವಿಯಲ್ಲಿ ಎಂದು ನೆನಪಿಸಿಕೊಂಡು ಹೇಳುವಷ್ಟು ಆತ ಶಕ್ತನಾಗಿರಲಿಲ್ಲ. ಎಲ್ಲರೂ ನಗುತ್ತಾ ನಮ್ಮನ್ನೇ ನೋಡುತ್ತಿರುವಂತೆಯೇ ಆ ವೃದ್ಧರನ್ನು ಆಲಂಗಿಸಿ ನಾನು ಬೀಳ್ಕೊಟ್ಟೆ.

ಧೂಳೆಬ್ಬಿಸುತ್ತಾ ಮುಂದೆ ಸಾಗಿದ ನಮ್ಮ ಕಾರಿನ ಕನ್ನಡಿಯು ಹಿಂದೆ ಕೈಬೀಸುತ್ತಾ ನಮ್ಮನ್ನು ಬೀಳ್ಕೊಡುತ್ತಿದ್ದ ವೃದ್ಧರ ಚಿಕ್ಕ ಸಮೂಹವನ್ನು ಸ್ಪಷ್ಟವಾಗಿ ತೋರಿಸುತ್ತಿತ್ತು.

1 Response

  1. Lalitha siddabasavayya says:

    ಮನ ಕಲಕಿದ ಬರಹ ,,,

Leave a Reply

%d bloggers like this: