ಇವತ್ತು ಅಂಬೇಡ್ಕರ್ ಸಿಕ್ಕಿದ್ದರು..!

ಎನ್ ರವಿಕುಮಾರ್ / ಶಿವಮೊಗ್ಗ

ಕಣ್ಣುಗಳು ನೀರುಕ್ಕಿ
ಧುಮು ಧುಮುಗುಡುತ್ತಿದ್ದವು
ಕನ್ನಡಕ ಮಂಜು ಮುಸುಕಿದಂತೆ
ಮಬ್ಬುಗೊಂಡು ದಾರಿ ಹುಡುಕುತ್ತಿತ್ತು
ಕೊರಳು ಸೆರೆಯುಬ್ಬಿ ಬಿಕ್ಕಳಿಸುತ್ತಿದ್ದರು..
ಅವರ ಕೋಟು ನೆಂದು ನೀರು
ತೊಟ್ಟಿಕ್ಕುತ್ತಿತ್ತು.
ತೋಳತೆಕ್ಕೆಯಲ್ಲಿದ್ದ ಸಂವಿಧಾನ
ಭಯಭೀತಗೊಂಡು ಇನ್ನಷ್ಟು ಅವುಚಿಕೊಂಡು ಅವರೆದೆಗೆ ಬಿಗಿಗೊಳ್ಳುತ್ತಿತ್ತು.

‘ಯಾಕಿಷ್ಟು ದುಃಖ ದೊರೆಯೆ’? ಎಂದೆ.

‘ ಇದು ಬರೀ ದುಃಖವಲ್ಲ, ಕರುಳ ಕೋಣೆಯ ಮಹಾದುಃಖ.’

ಮಹಾಮನೆಯಲ್ಲಿ ರಜ ತುಂಬಿದೆ.
ಹುಳ,ಉಪಟೆಗಳು, ಕಾಡುಮೃಗಗಳು ಘೀಳಿಡುತ್ತಿವೆ.

ಕಲ್ಲು,ಮಣ್ಣು, ಕಂಚಿನ ನನ್ನ ಮೂರ್ತಿ ಒಡೆದು ಚೂರು ಚೂರು ಮಾಡಿದ್ದಕ್ಕೆ ದುಃಖವಿಲ್ಲ.
ಅಧಿಕಾರದ ಫಲ್ಲಂಗದ ಮೇಲೆ
ದೇವರ ಫಲಕ್ಕಿ ಯ ಮೇಲೆ ಹಾಲುಗಲ್ಲದ ಹಸುಗೂಸುಗಳ,
ಹೆಣ್ಣು ಮಕ್ಕಳ ಒಡಲ ಹುರಿದು ಕೊರಳ ಹಿಸುಕಿ ಕೇಕೆ ಹಾಕುವಾಗ ನನ್ನ
ಕರುಳಬಳ್ಳಿ ವಿಲವಿಲಗೊಳ್ಳುತ್ತಿದೆ..
ಎಂದರು.

ಇವತ್ತು ನನ್ನ‌ಜನ್ಮದಿನ.
ಪುಷ್ಪಾಲಂಕೃತ ತೇರಿನ ಮೇಲೆ
ವಿಜೃಂಭಣೆಯ ನನ್ನ ಮೆರವಣಿಗೆ.
ಸಂಸತ್ತಿನ ಮಹಾಸೌಧದಲ್ಲಿ
ನನ್ನ ಗುಣಗಾನ .
ಅಬ್ಬಬ್ಬಾ! ಕಿವಿಗಡಚಿಕ್ಕುವಂತೆ
ಭಾಷಣ
ಆಸೀಫಾಳ ಅವಳಂತಹ
ಅದೆಷ್ಟೋ ಕೂಸುಗಳ ಆರ್ತ ಆಕ್ರಂದನ ಯಾರಿಗೂ ಕೇಳಿಸದಿರಲೆಂದೆ ಇರಬೇಕು.
ಎಂದರು..
ನಾಲಿಗೆ ನಡುಗುತ್ತಿತ್ತು
ಅಂಬೇಡ್ಕರ್ ಅವರ‌ ಕಣ್ಣೀರು ಕಡಲಾಗಿ ಹರಿದಿತ್ತು.

5 comments

  1. ಅರ್ಥಪೂರ್ಣ ಹಾಗು ಸಕಾಲಿಕವಾದ ಚಿತ್ರಣ. ಮನಕಲಕುವ ಪದಗಳು.

  2. ಅಭಿನಂದನೆಗಳು ಸರ್… ಸಮಕಾಲೀನ ನೆಲೆಯಲ್ಲಿ ಸಮಾನತೆಗಾಗಿ ತುಡಿಯುವ ಸಕ್ರಿಯಶೀಲ ಬರಹದ ಆಶಯದ ಕವಿತೆ..

  3. ಸೂಪರ್ ಕವಿತೆ, ಪ್ರಸ್ತುತ ಸಮಕಾಲಿನ ಚಿಂತನೆಯ ಅಕ್ಷರ ರೂಪ….

Leave a Reply