fbpx

‘ಹಚಾ’ ಎಂದಿದ್ದರೂ ಸಾಕಿತ್ತು..

ರೊಟ್ಟಿ ಮತ್ತು ಮೌನ

ಎಲ್ಸಿ ನಾಗರಾಜ್

ನಾಲಕ್ಕು ಜನ ಹುಡುಗರು ಒಂದು ದಿನ ನಡೆಯುತ್ತ ಬೆಟ್ಟದ ತಪ್ಪಲಿಗೆ ಹೊರಟರು , ಅಲ್ಲಿ ಹರಿಯುವ ಹೊಳೆಯಲ್ಲಿ ಈಜಿದರು , ಮರಕ್ಕೆ ಹತ್ತಿ ಆಟವಾಡಿದರು , ಇದೆಲ್ಲ ಮುಗಿದ ನಂತರ ಅವರಿಗೆ ಭಯಂಕರ ಹಸಿವಾಗತೊಡಗಿತು ; ಆದರೆ ಅವರ ಹತ್ತಿರ‌ ಇದ್ದುದು ಒಂದೇ ರೊಟ್ಟಿ

ಒಂದು ಬಾವಿಯ ಹತ್ತಿರ ಕುಳಿತ ಅವರು ನಡುವೆ ಒಂದೇ ರೊಟ್ಟಿಯಲ್ಲಿ ನಾಲಕ್ಕು ಜನರ ಹಸಿವು ನೀಗಿಸುವುದು ಹ್ಯಾಗೆ ಎಂಬ ಸಮಸ್ಯೆ ತಲೆದೋರಿತು ; ಏತದಿಂದ ಎತ್ತಿದ ಬಾನಿಯ ನೀರಿನ ಬದಿಗೆ ಇರುವ ಒಂದೇ ರೊಟ್ಟಿಯ ಬುತ್ತಿಯನ್ನ ಬಿಚ್ಚಿಟ್ಟರು

ಅನೇಕ ಸುತ್ತಿನ ಮಾತುಕತೆಯ ನಂತರ ಒಂದು ಏಕಾಭಿಪ್ರಾಯಕ್ಕೆ ಬರಲು ಸಾಧ್ಯವಾಯಿತು

ಒಂದು ರೊಟ್ಟಿಯಿಂದ ಯಾರ ಹಸಿವೂ ನೀಗುವುದಿಲ್ಲ , ಆದ್ದರಿಂದ ರೊಟ್ಟಿ ಮತ್ತು ನೀರಬಾನಿಯ ಮುಂದೆ ನಾಲಕ್ಕೂ ಜನ ಗಪ್ಪು ಚಿಪ್ಪಾಗಿ , ಅಂದರೆ ಮೌನವಾಗಿರುವುದು ; ಯಾರು ಮೊದಲು ಮೌನ ಮುರಿಯುತ್ತಾನೊ ಅವನಿಗೆ ರೊಟ್ಟಯಲ್ಲಿ ಪಾಲಿಲ್ಲ

ಎರಡನೇ ಸುತ್ತಿನಲ್ಲಿ ಮೂವರ ನಡುವೆ ಯಾರು ಮೌನ ಮುರಿಯುತ್ರಾನೊ ಅವನಿಗೂ ರೊಟ್ಟಿಯಲ್ಲಿ ಪಾಲಿಲ್ಲ

ಹೀಗೆ , ಕೊನೆಯ ತನಕ ಯಾರು ಮೌನ ಮುರಿಯುವುದಿಲ್ಲವೋ ಅವನ ಪಾಲಿಗೆ ಪೂರ್ತಿ ರೊಟ್ಟಿ ; ಉಳಿದ ಮೂವರಿಗೆ ಬಾನಿಯ ನೀರು ಮಾತ್ರ

ಸರಿ ತೀರ್ಮಾನಕ್ಕೆ ಬಂದ ನಂತರ ಈ ನಾಲ್ವರ ಪೈಕಿ ನಾಲ್ವರಿಗೂ ಪೂರ್ತಿ ರೊಟ್ಟಿ ಸಿಕ್ಕಂತ ಭಾವ ಉಂಟಾಗಿ ಮಾತನಾಡಲೇಬಾರದೆಂದು , ಮೈ ಕೂಡ ಅಲುಗಾಡಿಸದೇ ಮೌನವಾಗಿ ಕುಳಿತರು.

ಕಾಶಿಯ ಕಡೆಗೆ ಹೊರಟಿದ್ದ ನಾಯಿಯೊಂದು ಅಡ್ಡಭೇಟೆಯಾಡಿಕೊಂಡು ಇದೇ ಮಾರ್ಗದಲ್ಲಿ ಬಂದಿತು , ನೋಡಿತು, ನಾಲಕ್ಕೂ ಜನ ಶಿಲಾಮೌನದಲ್ಲಿ ಕುಳಿತಿದ್ದಾರೆ

ನಡುವೆ ಇದ್ದ ಒಂದೇ ರೊಟ್ಟಿ ಬುತ್ತಿಯನ್ನ ಮೂಸಿತು , ನಾಲ್ವರ ಪೈಕಿ ಯಾವನೂ ಮಾತನಾಡಲಿಲ್ಲ , ನಾಯಿಯನ್ನ ‘ ಹಚಾ ‘ ಎಂದಿದ್ದರೂ ಸಾಕಿತ್ತು ; ಪೂರ್ತಿ ರೊಟ್ಟಿ ಬಾಯಿತಪ್ಪುವುದೆಂದು ಯಾವನೂ ‘ ಹಚಾ ‘ ಎನ್ನಲಿಲ್ಲ.

ರೊಟ್ಟಿ ಬುತ್ತಿಗೆ ಬಾಯಿ ಹಾಕಿದ ನಾಯಿ ಒಮ್ಮಕ್ಕೂ ರೊಟ್ಟಿ ಗಬಕಾಯಿಸಿತು ; ಯಾವನೂ , ಮೌನ ಮುರಿಯುವುದಿರಲೀ , ಕುಂತ ತಾಣ ಬಿಟ್ಟು ಅಲುಗಾಡಲಿಲ್ಲ.

ಪೂರ್ತಿ ರೊಟ್ಟಿ ತಿಂದು ಬಾನಿಯ ನೀರನ್ನ ಲೊಚ ಲೊಚ ನೆಕ್ಕಿದ ನಾಯಿಗೆ ಉಚ್ಚೆ ಹುಯ್ಯಲು ಒಂದು ಕಲ್ಲು ಬೇಕಿತ್ತು ; ಶಿಲಾಮೌನದಲ್ಲಿ ಕುಳಿತಿದ್ದ ನಾಲ್ವರನ್ನೂ ನೋಡಿತು

ಕಾಲನ್ನು ಎತ್ತಿ ಒಬ್ಬನ ಮೇಲೆ ಹುಚ್ಚೆ ಹೊಯ್ದು ಕಾಶಿಯ ಕಡೆಗೆ ಪಯಣ ಮುಂದುವರೆಸಿತು .

* * * * * *
ಈ ಕತೆಯಲ್ಲಿ ರಾಜಕೀಯ ಅಭಿಪ್ರಾಯವಿದ್ದರೆ ಮೌನವಾಗಿರಿ ; ಮಾತಾಡಿದಿರೋ ರೊಟ್ಟಿ ಧಕ್ಕಿಸಿಕೊಳ್ಳಲಾರಿರಿ !

1 Response

  1. Satish Nagathan says:

    ಕಥೆ ತುಂಬಾ ಚೆನ್ನಾಗಿದೆ. ರೊಟ್ಟಿ ಮತ್ತು ಮೌನ ಇವೆರಡರ ಸಮಾಗಮವಂತು ಓದಿ ನನಗೆ ನಗು ತಡೆದು ಕೊಳ್ಳಲು ಆಗ್ತಾ ಇಲ್ಲ.. ಅದ್ಭುತವಾದ ಕಥಾಹಂದರ ಸರ್. ಧನ್ಯವಾದಗಳು

Leave a Reply

%d bloggers like this: